ಸಂಸ್ಕೃತಿ ಸಚಿವಾಲಯ
azadi ka amrit mahotsav

ಗ್ರಂಥಾಲಯಗಳು ದೇಶ ಅಥವಾ ಸಮಾಜದ ಸಾಮೂಹಿಕ ಪ್ರಜ್ಞೆ ಮತ್ತು ಬೌದ್ಧಿಕ ಶಕ್ತಿಯ ಪ್ರತೀಕ - ರಾಷ್ಟ್ರಪತಿ ದ್ರೌಪದಿ ಮುರ್ಮು


ರಾಷ್ಟ್ರಪತಿಗಳಿಂದ ಗ್ರಂಥಾಲಯ ಉತ್ಸವಕ್ಕೆ ಚಾಲನೆ; ಜ್ಞಾನದ ಶಕ್ತಿಯಾಗಿ ಭಾರತದ ಪಯಣದ ಪ್ರದರ್ಶನ

ವಿಶ್ವದ ಧೀಶಕ್ತಿಯಾಗಿಸುವ ಗುರಿಯೆಡಗೆ ಗ್ರಂಥಾಲಯ ಉತ್ಸವ ಮೊದಲ ಹೆಜ್ಜೆ - ಶ್ರೀ ಅರ್ಜುನ್ ರಾಮ್ ಮೇಘ್ವಾಲ್

ಗ್ರಂಥಾಲಯ ಅಭಿವೃದ್ಧಿ ಮತ್ತು ಓದುವ ಹವ್ಯಾಸ ಉತ್ತೇಜಿಸುವ ಪ್ರಧಾನಮಂತ್ರಿ ದೂರದೃಷ್ಟಿ ಬಲಪಡಿಸಲು ದೇಶದ ಮೂಲೆ ಮೂಲೆಗೂ ಗ್ರಂಥಾಲಯ ತಲುಪಿಸಲು ಸರ್ಕಾರದ ಪ್ರಯತ್ನ - ಮೀನಾಕ್ಷಿ ಲೇಖಿ

ಸಂಸ್ಕೃತಿ ಸಚಿವಾಲಯದಿಂದ ಬಿಬ್ಲಿಯೋಗ್ರಫಿ ಆನ್ ಡಿಮ್ಯಾಂಡ್ (ಬಿಒಡಿ) ಸೇವೆ ಅನಾವರಣ; ಭಾರತದ ಭೌಗೋಳಿಕ ನಕ್ಷೆಯ ಸಂಶೋಧನೆ ವೃದ್ಧಿ ಖಾತರಿಪಡಿಸುವ ಸಮಯೋಚಿತ ಮತ್ತು ಪರಿವರ್ತನಾತ್ಮಕ ಮಧ್ಯಸ್ಥಿಕೆ ಪ್ರಕ್ರಿಯೆ

Posted On: 05 AUG 2023 5:25PM by PIB Bengaluru

ವಿಶಿಷ್ಟ “ಗ್ರಂಥಾಲಯ ಉತ್ಸವ” ಕ್ಕೆ ನವದೆಹಲಿಯಲ್ಲಿಂದು ಭಾರತದ ರಾಷ್ಟ್ರಪತಿ ಶ್ರೀಮತಿ. ದ್ರೌಪದಿ ಮುರ್ಮು ಚಾಲನೆ ನೀಡಿದರು. ಗ್ರಂಥಾಲಯಗಳ ಅಭಿವೃದ್ಧಿ ಮತ್ತು ಡಿಜಿಟಲೀಕರಣ ಉತ್ತೇಜಿಸುವ ಜೊತೆಗೆ ಜನರು ಓದುವ ಹವ್ಯಾಸ ರೂಢಿಸಿಕೊಳ್ಳುವಂತಾಗಲು ಈ ಉತ್ಸವವನ್ನು ಸಂಸ್ಕೃತಿ ಸಚಿವಾಲಯ ಆಯೋಜಿಸಿದೆ. 

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿ, ಗ್ರಂಥಾಲಯಗಳ ಅಭಿವೃದ್ಧಿ ಸಮಾಜ ಮತ್ತು ಸಂಸ್ಕೃತಿ ಅಭಿವೃದ್ಧಿಯೊಂದಿಗೆ ಪರಸ್ಪರ ಸಂಬಂಧ ಹೊಂದಿದೆ. ಇದು ನಾಗರಿಕತೆಯ ಪ್ರಗತಿಯ ಮಾಪನ ಕೂಡ ಆಗಿದೆ ಎಂದರು. ಆಕ್ರಮಣಕಾರರು ಗ್ರಂಥಾಲಯಗಳನ್ನು ನಾಶ ಮಾಡುವುದು ಅತಿ ಮುಖ್ಯ ಎಂದು ಪರಿಗಣಿಸಿದ್ದರ ಬಗ್ಗೆ ಇತಿಹಾಸದಲ್ಲಿ ಅನೇಕ ಉಲ್ಲೇಖಗಳಿವೆ ಎಂದು ಹೇಳಿದ ಅವರು,  ದೇಶದ ಅಥವಾ ಸಮಾಜದ ಸಾಮೂಹಿಕ ಪ್ರಜ್ಞೆ ಮತ್ತು ಬೌದ್ಧಿಕತೆಯ ಪ್ರತೀಕವಾಗಿ ಗ್ರಂಥಾಲಯಗಳನ್ನು ಪರಿಗಣಿಸಲಾಗಿತ್ತು ಎಂಬುದನ್ನು ಇದು ಸೂಚಿಸುತ್ತದೆ ಎಂದು ವಿವರಿಸಿದರು. ಇಂತಹ ಘಟನೆಗಳು ನವಯುಗದಲ್ಲಿ ಸಂಭವಿಸುವುದಿಲ್ಲವಾದರೂ, ಅಪರೂಪದ ಹಸ್ತಪ್ರತಿಗಳು ಮತ್ತು ಪುಸ್ತಕಗಳು ನಾಪತ್ತೆಯಾಗುವ ಘಟನೆಗಳಿವೆ. ಅಪರೂಪದ ಪುಸ್ತಕಗಳು ಮತ್ತು ಹಸ್ತಪ್ರತಿಗಳನ್ನು ಮರಳಿ ತರಲು ಪ್ರಯತ್ನಗಳನ್ನು ಮಾಡಬೇಕಿದೆ ಎಂದು ಅವರು ತಿಳಿಸಿದರು.

ಗ್ರಂಥಾಲಯಗಳು ನಾಗರಿಕತೆಯ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ. ಪ್ರಾಚೀನ ಮತ್ತು ಮಧ್ಯಕಾಲೀನ ಯುಗದಲ್ಲಿ, ಹಲವಾರು ದೇಶಗಳ ಜನರು ಭಾರತದಿಂದ ಪುಸ್ತಕಗಳನ್ನು ತೆಗೆದುಕೊಂಡು ಹೋಗಿ, ಅವುಗಳನ್ನು ಅನುವಾದ ಮಾಡಿ ಜ್ಞಾನ ಅರ್ಜಿಸಿಕೊಂಡರು. ಪುಸ್ತಕಗಳು ಮತ್ತು ಗ್ರಂಥಾಲಯಗಳು ಮಾನವೀಯತೆಯ ಗರಿಮೆಯಾಗಿದೆ ಎಂಬುದೇ ಈ ಪ್ರಯತ್ನಗಳಿಗೆ ಮೂಲವಾಗಿದೆ. ವಿಶ್ವದ ಇತಿಹಾಸವನ್ನು ಬಲಿಸುವ ಸಾಮರ್ಥ್ಯ ಒಂದು ಚಿಕ್ಕ ಪುಸ್ತಕಕ್ಕಿದೆ ಎಂಬುದನ್ನು ಅವರು ಉದಾಹರಣೆ ಸಹಿತವಾಗಿ ವಿವರಿಸಿದರು. ಜಾನ್ ರಸ್ಕಿನ್ ಅವರ ಪುಸ್ತಕ ‘ಅನ್ ಟು ದಿಸ್ ಲಾಸ್ಟ್” ತಮ್ಮ ಜೀವನದ ಮೇಲೆ ಮಹತ್ವದ ಸಕಾರಾತ್ಮಕ ಪರಿಣಾಮ ಬೀರಿತ್ತು ಎಂಬ ಬಗ್ಗೆ ಮಹಾತ್ಮಾ ಗಾಂಧಿ ಅವರು ತಮ್ಮ ಆತ್ಮಕಥನದಲ್ಲಿ ತಿಳಿಸಿರುವುದನ್ನು ರಾಷ್ಟ್ರಪತಿ ಇಲ್ಲಿ ಉಲ್ಲೇಖಿಸಿದರು. ಭೂಮಿಯ ಘಮವನ್ನೂ ಆಕಾಶದ ವಿಸ್ತಾರವನ್ನೂ ಪುಸ್ತಕಗಳು ಹೊಂದಿರುತ್ತವೆ ಎಂದು ಅವರು ಹೇಳಿದರು. 

ಸಂಸ್ಕೃತಿ ಹಾಗೂ ಕಾನೂನು ಖಾತೆ ರಾಜ್ಯ ಸಚಿವ ಶ್ರೀ ಅರ್ಜುನ್ ರಾಮ್ ಮೇಘ್ವಾಲ್, ಸಂಸ್ಕೃತಿ ಮತ್ತು ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವೆ ಶ್ರೀಮತಿ ಮೀನಾಕ್ಷಿ ಲೇಖಿ ಮತ್ತು ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಶ್ರೀ.ಗೋವಿಂದ್ ಮೋಹನ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ.ಮೇಘ್ವಾಲ್, 21ನೇ ಶತಮಾನದಲ್ಲಿ ಭಾರತವನ್ನು ಜ್ಞಾನಶಕ್ತಿಯ ಅಪ್ರತಿಮ ತಾಣವನ್ನಾಗಿ ಮಾಡುವ ಗುರಿಯೆಡೆಗೆ ಗ್ರಂಥಾಲಯ ಉತ್ಸವ ಒಂದು ಹೆಜ್ಜೆಯಾಗಿದೆ ಎಂದು ಹೇಳಿದರು.

ಶ್ರೀಮತಿ ಮೀನಾಕ್ಷಿ ಲೇಖಿ, ಗ್ರಂಥಾಲಯಗಳ ಅಭಿವೃದ್ಧಿ ಮತ್ತು ಓದುವ ಹವ್ಯಾಸ ಉತ್ತೇಜಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಸಾಕಾರಕ್ಕಾಗಿ ದೇಶದ ಮೂಲೆ ಮೂಲೆಗೂ ಗ್ರಂಥಾಲಯಗಳನ್ನು ತಲುಪಿಸುವ ಸರ್ಕಾರದ ಬದ್ಧತೆಯ ಬಗ್ಗೆ ತಿಳಿಸಿದರು. 

ಎಲ್ಲಾ ನಾಗರಿಕರ ಒಳಗೊಳ್ಳುವಿಕೆ ಉತ್ತೇಜಿಸುತ್ತಾ, ಎಲ್ಲರಿಗೂ ಮಾಹಿತಿ ಸಿಗುವುದನ್ನು ಖಾತರಿಪಡಿಸುತ್ತಾ “ಗ್ರಂಥಾಲಯ ಉತ್ಸವ 2023” ಈ ಅಭಿಯಾನದಡಿ ನಿರ್ಣಾಯಕ ಪಾತ್ರ ವಹಿಸಿದೆ. ಜ್ಞಾನದ ವೈವಿಧ್ಯತೆಯ ಸಂಭ್ರಮಾಚರಣೆಯೊಂದಿಗೆ ಎಲ್ಲರಲ್ಲೂ ಓದುವ ಹವ್ಯಾಸಕ್ಕೆ ಸ್ಫೂರ್ತಿ ತುಂಬಲು, ಈ ಹಬ್ಬ ದಾರಿ ಮಾಡಿಕೊಡಲಿದೆ. ಇದು ಕಲಿಕೆಯ ದಾಹವನ್ನು ಪೋಷಿಸಿ ದೇಶಾದ್ಯಂತ ಪ್ರಗತಿಗೆ ಉತ್ತೇಜನ ನೀಡಲಿದ್ದು, ಸಬಲೀಕೃತ, ಹೆಚ್ಚು ತಿಳುವಳಿಕೆಯುಳ್ಳ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕೇಂದ್ರ ಸಂಸ್ಕೃತಿ ಖಾತೆ ಸಚಿವಾಲಯದ ಜಂಟಿ ಕಾರ್ಯದರ್ಶಿ ಕು.ಮುಗ್ಧಾ ಸಿನ್ಹಾ ಹೇಳುವ ಪ್ರಕಾರ, “ಈ ಹಬ್ಬ ಗ್ರಂಥಾಲಯಗಳ ಆಧುನೀಕರಣ ಮತ್ತು ಡಿಜಿಟಲೀಕರಣದ ಮಾತುಕತೆಗೆ ನಾಂದಿ ಹಾಕುವ ಗುರಿ ಹೊಂದಿದೆ. ಇದರ ಜೊತೆಗೆ ದೇಶದಲ್ಲಿ ಓದುವ ಪ್ರವೃತ್ತಿಯನ್ನು ಮತ್ತೆ ಮುನ್ನೆಲೆಗೆ ತರುವ ಬಯಕೆಯೂ ಇದೆ. ಕ್ರಿಯಾತ್ಮಕ ನೀತಿ ನಿರೂಪಣೆಗಳ ಅನುಷ್ಠಾನದ ಮೂಲಕ, ದೇಶದ ಮೂಲೆ ಮೂಲೆಗೂ ಜ್ಞಾನ ತಲುಪುವಂತಾಗಲು ಗ್ರಾಮ ಮತ್ತು ಸಮುದಾಯ ಮಟ್ಟಗಳಲ್ಲೂ ಮಾದರಿ ಗ್ರಂಥಾಲಯ ಸ್ಥಾಪನೆಯ ಅಗತ್ಯವನ್ನು ಈ ಉತ್ಸವ ಸಾರುತ್ತದೆ. 

ಭಾರತದ ಗ್ರಂಥಾಲಯ ಉತ್ಸವ 2023ರ ಮೊದಲ ದಿನ ಅನೇಕ ಮೈಲಿಗಲ್ಲುಗಳಿಗೆ ಸಾಕ್ಷಿಯಾಗಿದೆ. ಎಲ್ಲವೂ ದೇಶದಲ್ಲಿನ ಜ್ಞಾನ ಮತ್ತು ಗ್ರಂಥಾಲಯಗಳ ಮೇಲ್ದರ್ಜೆಗೇರಿಸುವ ಬಗ್ಗೆ ಕೇಂದ್ರೀಕೃತವಾಗಿದೆ. ರಾಮ್ ಪುರ್ ರಾಝಾ ಗ್ರಂಥಾಲಯದ 250ನೇ ವರ್ಷಾಚರಣೆಯ ವಿಶೇಷ ಸಂದರ್ಭ, ಗ್ರಂಥಾಲಯಗಳ ಬೆಲೆಕಟ್ಟಲಾಗದ ಕೊಡುಗೆಗಳು ಮತ್ತು ಪರಂಪರೆಯ ಪ್ರಭಾವದ ಬಗ್ಗೆ ಬೆಳಕು ಚೆಲ್ಲಿತು.

ಆರ್ ಆರ್ ಆರ್ ಎಲ್ ಆಧುನೀಕರಣದ ನವೀನ ವರ್ಚುಯಲ್ ಸಮಾರಂಭ ಮತ್ತು ರಾಮ್ ಪುರ್ ರಾಝಾ ಗ್ರಂಥಾಲಯದ ಮೂಲಸೌಕರ್ಯಗಳ ಆಧುನೀಕರಣದ ಪ್ರಯತ್ನಗಳು ಮತ್ತು ರೋಮಾಂಚಕಾರಿ ಸಾಹಿತ್ಯ ಕೃತಿಗಳ ಬಗ್ಗೆ ಬೆಳಕು ಚೆಲ್ಲುವ ರಾಮ್ ಪುರ್ ರಾಝಾ ಮಿಸ್ಟರಿ (ಸಾಸಿ ಲೈಬ್ರರಿ ಥ್ರಿಲ್ಲರ್ ಸೀರೀಸ್) ಗಳ ಪ್ರದರ್ಶನಕ್ಕೂ ಈ ಕಾರ್ಯಕ್ರಮ ಸಾಕ್ಷಿಯಾಯಿತು. ಇದರ ಜೊತೆಗೆ, ಜ್ಞಾನ ವಿನಿಮಯ ಮತ್ತು ಸಹಕಾರಕ್ಕಾಗಿ ರಾಮ್ ಪುರ್, ಪಾಟ್ನಾ ಮತ್ತು ಟಾಂಕ್ ಗಳ ಗ್ರಂಥಾಲಯಗಳನ್ನು ಸಂಯುಕ್ತಗೊಳಿಸುವ ತ್ರಿಪಕ್ಷೀಯ ಒಪ್ಪಂದ (ಗೋಲ್ಡನ್ ಟ್ರಯಾಂಗಲ್ ಆಫ್ ಲೈಬ್ರರೀಸ್) ಗೂ ಇದೇ ವೇಳೆ ಸಹಿ ಹಾಕಲಾಯಿತು. 

ಲಿಖಿತ ಜ್ಞಾನದ ಇತಿಹಾಸ ಮತ್ತು ವಿಕಾಸದ ಬಗ್ಗೆ ಬೆಳಕು ಚೆಲ್ಲುವ ಸಂವಹನಾತ್ಮಕ ಆನ್ ಲೈನ್ ವೇದಿಕೆ “ಮ್ಯೂಸಿಯಂ ಆಫ್ ದಿ ವರ್ಲ್ಡ್” ನ ಇ-ಉದ್ಘಾಟನೆ ಕೂಡ ಈ ದಿನ ನಡೆಯಿತು. 

ದೇಶಾದ್ಯಂತ ಇರುವ ಅಸಾಧಾರಣ ಗ್ರಂಥಾಲಯಗಳನ್ನು ಗುರುತಿಸಿ ಅವುಗಳ ಅನನ್ಯತೆಯನ್ನು ತಿಳಿಸಲು, ರಾಷ್ಟ್ರೀಯ ಗ್ರಂಥಾಲಯ ರ್ಯಾಂಕಿಂಗ್ ಫಾರ್ಮ್ಯಾಟ್ ಅನ್ನು ಪರಿಚಯಿಸಲಾಯಿತು. ಓದುಗರಿಗೆ ಸ್ಫೂರ್ತಿ ನೀಡುವ ಮತ್ತು ವಿವಿಧ ಗ್ರಂಥಾಲಯಗಳಿಗೆ ಭೇಟಿಯನ್ನು ಉತ್ತೇಜಿಸುವ ಗ್ರಂಥಾಲಯಗಳ ಡೈರೆಕ್ಟರಿ (ಸಂಪುಟ 1) ಅನ್ನು ಸಹ  ಮೊದಲ ದಿನವೇ ಬಿಡುಗಡೆ ಮಾಡಲಾಗಿದೆ. ಇದಲ್ಲದೇ ಓದುಗರ ಸೌಕರ್ಯ ಹೆಚ್ಚಿಸಲು, ಗ್ರಂಥಸೂಚಿ (ಬಿಬ್ಲಿಯೋ - ಆನ್ ಡಿಮ್ಯಾಂಡ್) ಸೇವೆಯನ್ನು ಸಹ ಅನಾವರಣ ಮಾಡಲಾಗಿದೆ. ಇದರಿಂದ ಬಯಕೆಯ ಪುಸ್ತಕ ಓದಲು ಸಾಧ್ಯವಾಗಲಿದೆ.

 

ಆಧುನೀಕರಣದೊಂದಿಗೆ ಬಳಕೆದಾರರ ಅನುಭವಗಳನ್ನು ಸುಧಾರಿಸುವ ಬದ್ಧತೆಯನ್ನು ಪ್ರದರ್ಶಿಸಿದ ದೆಹಲಿ ಸಾರ್ವಜನಿಕ ಗ್ರಂಥಾಲಯದ ಆಧುನೀಕರಣ ಸಮಾರಂಭದೊಂದಿಗೆ ಮೊದಲ ದಿನದ ವರ್ಚುಯಲ್ ಸಮಾರಂಭ ಮುಕ್ತಾಯವಾಯಿತು. ನಾಗರಿಕರನ್ನು ಜ್ಞಾನ ಮತ್ತು ಮಾಹಿತಿಯೊಂದಿಗೆ ಸಬಲರಾಗಿಸಲು ತಂತ್ರಜ್ಞಾನವನ್ನು ಅಪ್ಪಿಕೊಳ್ಳುವ ಜೊತೆಗೆ ಓದುವ ಹವ್ಯಾಸ ಉತ್ತೇಜಿಸುವ ಭಾರತದ ದೃಢ ಬದ್ಧತೆಗೆ ಈ ಅಭಿವೃದ್ಧಿಗಳು ಸಾಕ್ಷಿಯಾಗಿವೆ.

ಉತ್ಸವದ ಎರಡನೇ ದಿನದ ಸಮಾರೋಪ ಸಮಾರಂಭದಲ್ಲಿ ಉಪರಾಷ್ಟ್ರಪತಿ ಶ್ರೀ.ಜಗದೀಪ್ ಧನ್ ಕರ್ ಭಾಗಿಯಾಗಲಿದ್ದಾರೆ. ಜಗತ್ತಿನ ಮಾದರಿ ಗ್ರಂಥಾಲಯಗಳ ಬಗ್ಗೆ ಈ ಕಾರ್ಯಕ್ರಮದಲ್ಲಿ ಬೆಳಕು ಚೆಲ್ಲಲಾಗುವುದು. ಈ ಮೂಲಕ ದೇಶದ ಗ್ರಂಥಾಲಯಗಳ ಆಧುನೀಕರಣ ಮತ್ತು ಡಿಜಿಟಲೀಕರಣಕ್ಕೆ ಒತ್ತು ನೀಡಲಾಗುತ್ತಿದೆ. 

ಜ್ಞಾನ ಮತ್ತು ಜ್ಞಾನೋದಯದ ಆಧಾರವಾದ ಗ್ರಂಥಾಲಯಗಳ ಮಹತ್ವ ಸಾರುವ “ಗ್ರಂಥಾಲಯ ಉತ್ಸವ 2023” ಗಮನಾರ್ಹ ಪ್ರಯತ್ನವಾಗಿದೆ. ಓದುವ ಸಂಸ್ಕೃತಿಯನ್ನು ಉತ್ತೇಜಿಸುವ ಜೊತೆ ಜೊತೆಗೇ ಗ್ರಂಥಾಲಯ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸುವಲ್ಲಿ ದೇಶ ಮಹತ್ವದ ದಾಪುಗಾಲಿರಿಸಿದ್ದು, ಜ್ಞಾನ ಮತ್ತು ಬುದ್ಧಿವಂತಿಕೆಯ ವಲಯದಲ್ಲಿ ಭಾರತ ಮುಂಚೂಣಿ ನಾಯಕನಾಗಿರಲಿದೆ. 

***


(Release ID: 1946204) Visitor Counter : 159