ಕಲ್ಲಿದ್ದಲು ಸಚಿವಾಲಯ

ಸೌತ್ ಈಸ್ಟರ್ನ್ ಕೋಲ್ಫೀಲ್ಡ್ ಲಿಮಿಟೆಡ್ ವತಿಯಿಂದ ಮಧ್ಯಪ್ರದೇಶ ಮತ್ತು ಛತ್ತೀಸ್ಗಢದಲ್ಲಿ ಹಸರೀಕರಣಕ್ಕೆ 169 ಕೋಟಿ ರೂ ಹೂಡಿಕೆ


2023-24, 2027-28 ರ ನಡುವೆ ಹಸರೀಕರಣಕ್ಕಾಗಿ ರಾಜ್ಯಗಳ ರಾಜ್ಯ ವನ ವಿಕಾಸ್ ನಿಗಮಗಳೊಂದಿಗೆ ತಿಳಿವಳಿಕಾ ಒಪ್ಪಂದಕ್ಕೆ ಸಹಿ

Posted On: 26 JUL 2023 3:47PM by PIB Bengaluru

ಛತ್ತೀಸ್ಗಢ ಮೂಲದ ಕೋಲ್ ಇಂಡಿಯಾ ಅಂಗಸಂಸ್ಥೆ, ಸೌತ್ ಈಸ್ಟರ್ನ್ ಕೋಲ್ಫೀಲ್ಡ್ಸ್ (ಎಸ್ಇಸಿಎಲ್) ಮುಂದಿನ ಐದು ವರ್ಷಗಳಲ್ಲಿ ಛತ್ತೀಸ್ಗಢ ಮತ್ತು ಮಧ್ಯಪ್ರದೇಶದಲ್ಲಿ ಹಸರೀಕರಣಕ್ಕಾಗಿ (ಪ್ಲಾಂಟೇಷನ್) 169 ಕೋಟಿ ರೂ. ಹೂಡಿಕೆ ಮಾಡಲು ಮುಂದೆ ಬಂದಿದೆ. ಕಂಪನಿಯು ಇತ್ತೀಚೆಗೆ ಛತ್ತೀಸ್ಗಢ ರಾಜ್ಯ ವನ ವಿಕಾಸ್ ನಿಗಮ (CGRVVN) ಮತ್ತು ಮಧ್ಯಪ್ರದೇಶ ರಾಜ್ಯ ವನ ವಿಕಾಸ ನಿಗಮ (MPRVVN) ದೊಂದಿಗೆ ನೆಡುತೋಪು ಕಾರ್ಯವನ್ನು ಕೈಗೊಳ್ಳಲು ತಿಳಿವಳಿಕಾ ಪತ್ರಕ್ಕೆ ಸಹಿ ಹಾಕಿದೆ. 2023-24 ರಿಂದ 2027-28 ರವರೆಗೆ ಐದು ವರ್ಷಗಳ ಅವಧಿಗೆ ಈ ಕಾರ್ಯ ಕೈಗೊಳ್ಳಲಾಗುತ್ತದೆ ಮತ್ತು ಅದರ ನಂತರ ನಿರ್ವಹಣೆ ಮಾಡುವ ಒಪ್ಪಂದವಿದೆ. ಎಂಒಯು ಪ್ರಕಾರ, ಎಸ್ಇಸಿಎಲ್ ಛತ್ತೀಸ್ಗಢದಲ್ಲಿ 131.52 ಕೋಟಿ ರೂ., ಮಧ್ಯಪ್ರದೇಶದಲ್ಲಿ 38.11 ಕೋಟಿ ರೂ.ಹೂಡಿಕೆ ಮಾಡಲಿದೆ.

ಕಂಪನಿಯು ರಾಜ್ಯ ನಿಗಮಗಳ ಸಹಭಾಗಿತ್ವದಲ್ಲಿ ಛತ್ತೀಸ್ ಗಢದಲ್ಲಿ 26 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ಮತ್ತು ಮಧ್ಯಪ್ರದೇಶದಲ್ಲಿ ಸುಮಾರು 12 ಲಕ್ಷ ಸಸಿಗಳನ್ನು ನೆಡಲಿದೆ. ಇದು ಕಂಪನಿಯ ಮೂರನೇ ಎಂಒಯು ಆಗಿದೆ. ಹಿಂದಿನ ಎರಡು ಎಂಒಯುಗಳ ಮೂಲಕ ಕಂಪನಿಯು 2013-14 ಮತ್ತು 2022-23 ರ ನಡುವೆ ಛತ್ತೀಸ್ ಗಢದಲ್ಲಿ 46 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ಮತ್ತು ಮಧ್ಯಪ್ರದೇಶದಲ್ಲಿ 16 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದೆ, ಇದಕ್ಕೆ ಒಟ್ಟು ರೂ 168 ಕೋಟಿಗೂ ಹೆಚ್ಚು ವೆಚ್ಚವಾಗಿದೆ.

ಎಂಒಯು ನಿಯಮಗಳ ಪ್ರಕಾರ ರಾಜ್ಯದ ಆಯಾ ನಿಗಮವು ಕಂಪನಿಯ ಸ್ವಾಧೀನಪಡಿಸಿಕೊಂಡ / ಗುತ್ತಿಗೆ ಪಡೆದ / ಖರೀದಿಸಿದ / ವರ್ಗಾವಣೆಗೊಂಡ ಯಾವುದೇ ರೀತಿಯ ಜಮೀನಿನಲ್ಲಿ ಗೇಣಿ, ಸರ್ಕಾರ, ಕಂದಾಯ ಮತ್ತು ಅರಣ್ಯ ಭೂಮಿ, ಸರಿಯಾದ ಪರಿಣತಿ ಮತ್ತು ಮೇಲ್ವಿಚಾರಣೆಯೊಂದಿಗೆ ಪ್ಲಾಂಟೇಷನ್ ಕಾರ್ಯ ನಡೆಸುತ್ತದೆ.

ಆರರಿಂದ ಹನ್ನೆರಡು ತಿಂಗಳ ವಯಸ್ಸಿನ (ಪಾಲಿಪಾಟ್) ಗಿಡಗಳನ್ನು ಬಳಸಲಾಗುವುದು. ವಿವಿಧ ಜಾತಿಯ ನೇರಳೆ, ಹುಣಸೆ, ಬೆಲ್, ಮಾವು, ಸೀತಾಫಲ ಇತ್ಯಾದಿಗಳು ಮತ್ತು ಔಷಧೀಯ/ಮೂಲಿಕೆ ಸಸ್ಯಗಳಾದ ಬೇವು, ಬೆಟ್ಟದ ನೆಲ್ಲಿಕಾಯಿ, ಕರಂಜಾ (ಹೊಂಗೆ) ಇತ್ಯಾದಿಗಳು ಸೇರಿವೆ.

ಇವುಗಳ ಜೊತೆಗೆ ತೇಗ, ಸಾಲ್, ಬಿದಿರು, ಬಬೂಲ್, ಸಿಸ್ಸೂ, ಸಫೇಡ್ ಸಿರಸ್ ಮತ್ತು ಅಲಂಕಾರಿಕ ಸಸ್ಯಗಳಾದ ಗುಲ್ಮೊಹರ್, ಕಚ್ನಾರ್, ಅಮಲ್ಟಾಸ್, ಪೀಪಲ್, ಝರುಲ್ ಇತ್ಯಾದಿಗಳನ್ನು ನೆಡಲಾಗುತ್ತದೆ. ಸ್ಥಳೀಯ ಸಮುದಾಯಗಳ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು, ಸಸ್ಯಗಳ ಜಾತಿಗಳ ಆಯ್ಕೆಯನ್ನು ಸ್ಥಳೀಯ ಗ್ರಾಮಸ್ಥರ ಅಭಿಪ್ರಾಯದ ಮೂಲಕ ಮಾಡಬೇಕು ಎಂದು ಎಂಒಯುನಲ್ಲಿ ಪ್ರಸ್ತಾಪಿಸಲಾಗಿದೆ.
ಹಸಿರು ಹೊದಿಕೆಯನ್ನು ಹೆಚ್ಚಿಸಲು ಮತ್ತು ಜೀವವೈವಿಧ್ಯತೆಯನ್ನು ಸಂರಕ್ಷಿಸಲು SECL ಅದರ ಗಣಿಗಾರಿಕೆ ಪ್ರದೇಶಗಳಲ್ಲಿ ಮತ್ತು ಅದರ ಸುತ್ತಲೂ ವ್ಯಾಪಕವಾದ ನೆಡುತೋಪು ಕಾರ್ಯಾಚರಣೆ ಕೈಗೊಳ್ಳುತ್ತಿದೆ. 2022-23ರ ಆರ್ಥಿಕ ವರ್ಷದಲ್ಲಿ ಕಂಪನಿಯು 365 ಹೆಕ್ಟೇರ್ ಪ್ರದೇಶದಲ್ಲಿ 8 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ದಾಖಲೆ ಬರೆದಿತ್ತು. SECL ಪ್ಲಾಂಟೇಶನ್ ನಡೆಸಿದ ನಂತರ ಈ ಪ್ರದೇಶಗಳಲ್ಲಿ ಹಸಿರು ಹೊದಿಕೆಯಲ್ಲಿ ಗಣನೀಯ ಸುಧಾರಣೆಯಾಗಿರುವುದು ಉಪಗ್ರಹ ಚಿತ್ರಣಗಳಲ್ಲಿ ಕಂಡಬಂದಿದೆ.

ಕಂಪನಿಯು ಹಲವಾರು ಸುಸ್ಥಿರ ಅಭಿವೃದ್ಧಿ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ, ಅಲ್ಲಿ ಪರಿಸರ-ಉದ್ಯಾನಗಳು, ಆಮ್ಲಜನಕ ಉದ್ಯಾನವನಗಳು ಮತ್ತು ಗಣಿ ಪ್ರವಾಸೋದ್ಯಮ ತಾಣಗಳನ್ನು ಹಳೆಯ/ ಕೈಬಿಡಲಾದ ಗಣಿಗಾರಿಕೆ ತಾಣಗಳಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ವೈಜ್ಞಾನಿಕ ಸಂಸ್ಕರಣೆಯ ನಂತರ, ಗಣಿ ನೀರನ್ನು ಕೃಷಿ ಮತ್ತು ಗೃಹಬಳಕೆಗಾಗಿ ಸುತ್ತಮುತ್ತಲ ಪಟ್ಟಣ ಮತ್ತು ಹಳ್ಳಿಗಳಿಗೆ ಸರಬರಾಜು ಮಾಡಲಾಗುತ್ತಿದೆ. ನವೀಕರಿಸಬಹುದಾದ ಶಕ್ತಿಯ ಬಳಕೆಯನ್ನು ಉತ್ತೇಜಿಸಲು ಕಂಪನಿಯು ಸೌರ ವಿದ್ಯುತ್ ಯೋಜನೆಗಳನ್ನು ಅಭಿವೃದ್ಧಿಪಡಿಸುತ್ತಿದೆ.

****



(Release ID: 1942924) Visitor Counter : 84


Read this release in: English , Urdu , Hindi , Tamil , Telugu