ರಾಷ್ಟ್ರಪತಿಗಳ ಕಾರ್ಯಾಲಯ

ಅಲ್ಲೂರಿ ಸೀತಾರಾಮ ರಾಜು ಅವರ 125 ನೇ ಜನ್ಮ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರಪತಿಗಳ ಭಾಷಣ

Posted On: 04 JUL 2023 7:42PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಜುಲೈ 4, 2023) ಹೈದರಾಬಾದ್ನಲ್ಲಿ ಅಲ್ಲೂರಿ ಸೀತಾರಾಮ ರಾಜು ಅವರ 125 ನೇ ಜನ್ಮ ವಾರ್ಷಿಕೋತ್ಸವದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಅನ್ಯಾಯ, ಶೋಷಣೆ ವಿರುದ್ಧ ಅಲ್ಲೂರಿ ಸೀತಾರಾಮ ರಾಜು ಅವರ ತೆಗೆದುಕೊಂಡ ದಿಟ್ಟ ಹೆಜ್ಜೆ, ದೇಶದ ಸ್ವಾತಂತ್ರ್ಯ ಹೋರಾಟದ ಹೆಮ್ಮೆಯ ಅಧ್ಯಾಯ. ಅವರ ದೇಶಭಕ್ತಿ ಮತ್ತು ಧೈರ್ಯವನ್ನು ಎಲ್ಲಾ ಜನರು, ವಿಶೇಷವಾಗಿ ಯುವ ಪೀಳಿಗೆ ಅರಿತುಕೊಳ್ಳಬೇಕು ಎಂದು ರಾಷ್ಟ್ರಪತಿಗಳು ಹೇಳಿದರು.

ಜಾತಿ, ವರ್ಗದ ಭೇದವಿಲ್ಲದೇ ಸಮಾಜವನ್ನು ಒಗ್ಗೂಡಿಸುವುದಕ್ಕೆ ಅಲ್ಲೂರಿ ಸೀತಾರಾಮರಾಜು ಪಟ್ಟ ಪರಿಶ್ರಮ ಮತ್ತು ಅವರ ಜೀವನ ಎಲ್ಲರಿಗೂ ನಿದರ್ಶನವಾಗಿದೆ. ಅಲ್ಲೂರಿ ಸೀತಾರಾಮ ರಾಜು ಅವರನ್ನು ಬುಡಕಟ್ಟು ಸಮಾಜವು ಸಂಪೂರ್ಣವಾಗಿ ದತ್ತು ಪಡೆದಿದೆ ಮತ್ತು ಅವರು ಬುಡಕಟ್ಟು ಸಮುದಾಯದ ಸಮಾಜದ ಸುಖ-ದುಃಖಗಳನ್ನುಅರ್ಥ ಮಾಡಿಕೊಂಡು ಹಂಚಿಕೊಳ್ಳುತ್ತಿದ್ದರು ಎಂದು ಅವರು ಹೇಳಿದರು. 

ಅಲ್ಲೂರಿ ಸೀತಾರಾಮ ರಾಜು ಅವರನ್ನು ಬುಡಕಟ್ಟು ಯೋಧ ಎಂದು ನೆನಪಿಸಿಕೊಳ್ಳಲಾಗುತ್ತಿದೆ ಮತ್ತು ಅದು ಅವರ ನಿಜವಾದ ಗುರುತು. ಅವರು ಬುಡಕಟ್ಟು ಸಮಾಜದ ಹಕ್ಕುಗಳಿಗಾಗಿ ನಿರಂತರ ಹೋರಾಡುತ್ತಲೇ ಇದ್ದರು. ಅಂತಹ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಪರಂಪರೆಯನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಎಲ್ಲಾ ನಾಗರಿಕರಲ್ಲಿ, ವಿಶೇಷವಾಗಿ ಯುವ ಪೀಳಿಗೆಯಲ್ಲಿ ಅಲ್ಲೂರಿ ಸೀತಾರಾಮ ರಾಜು ಅವರಂತಹ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಯ ಬಗ್ಗೆ ಅರಿವು ಮೂಡಿಸಲು ಬುದ್ಧಿಜೀವಿಗಳು, ವಿಶೇಷವಾಗಿ ಸಮಾಜಶಾಸ್ತ್ರಜ್ಞರು ಮತ್ತು ಇತಿಹಾಸಕಾರರು ಪ್ರಯತ್ನಿಸಬೇಕು ಎಂದು ರಾಷ್ಟ್ರಪತಿಗಳು ಒತ್ತಾಯಿಸಿದರು.

ಸಮಾಜದ ವಂಚಿತ ವರ್ಗದವರ ಶ್ರೇಯೋಭಿವೃದ್ಧಿಗೆ ನಿಸ್ವಾರ್ಥ ಹಾಗೂ ನಿರ್ಭೀತಿಯಿಂದ ದುಡಿಯುವುದೇ ಅಲ್ಲೂರಿ ಸೀತಾರಾಮರಾಜು ಅವರ ಜೀವನದ ಸಂಕಲ್ಪವಾಗಿತ್ತು. ಅವರ ಆದರ್ಶಗಳನ್ನು ನಮ್ಮ ನಡವಳಿಕೆಯಲ್ಲಿ ಅಳವಡಿಸಿಕೊಳ್ಳುವ ಮೂಲಕ ನಾವು ಅವರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಬಹುದು. ಸಮಾಜ ಮತ್ತು ದೇಶದ ಹಿತದೃಷ್ಟಿಯಿಂದ ಅಲ್ಲೂರಿ ಸೀತಾರಾಮ ರಾಜು ಅವರ ಮೌಲ್ಯಗಳು ಮತ್ತು ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಕರೆ ನೀಡಿದರು.

http://ರಾಷ್ಟ್ರಪತಿಗಳ ಸಂಪೂರ್ಣ ಭಾಷಣವನ್ನು ಓದಲು  ಇಲ್ಲಿ ಕ್ಲಿಕ್ ಮಾಡಿ

***



(Release ID: 1937515) Visitor Counter : 98