ಹಣಕಾಸು ಸಚಿವಾಲಯ

​​​​​​​ʻಉದಾರೀಕೃತ ಹಣ ರವಾನೆ ಯೋಜನೆʼ(ಎಲ್‌ಆರ್‌ಎಸ್‌) ಮತ್ತು ಮೂಲದಲ್ಲಿ ಸಂಗ್ರಹಿಸಿದ ತೆರಿಗೆ (ಟಿಸಿಎಸ್) ವಿಚಾರದಲ್ಲಿ ಪ್ರಮುಖ ಬದಲಾವಣೆಗಳು


ʻಎಲ್‌ಆರ್‌ಎಸ್‌ʼ ಅಡಿಯಲ್ಲಿ ಎಲ್ಲಾ ಉದ್ದೇಶಗಳಿಗಾಗಿ ಮತ್ತು ಸಾಗರೋತ್ತರ ಪ್ರಯಾಣ ಪ್ರವಾಸ ಪ್ಯಾಕೇಜ್‌ಗಳಿಗೆ ವರ್ಷಕ್ಕೆ ಒಬ್ಬ ವ್ಯಕ್ತಿಗೆ 7 ಲಕ್ಷ ರೂ.ವರೆಗೆ ʻಟಿಸಿಎಸ್ʼ ದರದಲ್ಲಿ ಯಾವುದೇ ಬದಲಾವಣೆ ಇಲ್ಲ(ಯಾವುದೇ ಪಾವತಿ ವಿಧಾನದಲ್ಲಿ) 

ಪರಿಷ್ಕೃತ ಟಿಸಿಎಸ್ ದರಗಳನ್ನು ಜಾರಿಗೆ ತರಲು ಮತ್ತು ʻಎಲ್ಆರ್‌ಎಸ್‌ʼನಲ್ಲಿ ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಸೇರಿಸಲು ಸರ್ಕಾರ ಹೆಚ್ಚಿನ ಸಮಯವನ್ನು ನೀಡಿದೆ

ಹೆಚ್ಚಿದ ʻಟಿಸಿಎಸ್ʼ ದರಗಳು 2023ರ ಅಕ್ಟೋಬರ್ 1ರಿಂದ ಅನ್ವಯವಾಗುತ್ತವೆ

Posted On: 28 JUN 2023 9:09PM by PIB Bengaluru

ಈ ವರ್ಷದ ಆಯವ್ಯಯದಲ್ಲಿ ʻಉದಾರೀಕೃತ ಹಣ ರವಾನೆ ಯೋಜನೆʼ(ಎಲ್ಆರ್‌ಎಸ್‌) ಮತ್ತು ಸಾಗರೋತ್ತರ ಪ್ರವಾಸ ಯೋಜನೆ ಪ್ಯಾಕೇಜ್‌ಗಳ ಅಡಿಯಲ್ಲಿ ಪಾವತಿಗಳ ಮೇಲೆ ಮೂಲದಲ್ಲಿ ತೆರಿಗೆ ಸಂಗ್ರಹ (ಟಿಸಿಎಸ್) ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ಘೋಷಿಸಲಾಯಿತು. ಇವು ಜುಲೈ 1, 2023 ರಿಂದ ಜಾರಿಗೆ ಬರಬೇಕಾಗಿತ್ತು. ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ʻಎಲ್‌ಆರ್‌ಎಸ್‌ʼ ಅಡಿಯಲ್ಲಿ ತರಲಾಗುವುದು ಎಂದು ಮಾರ್ಚ್‌ನಲ್ಲಿ ಘೋಷಿಸಲಾಯಿತು. ಈ ಸಂಬಂಧ ಹಲವಾರು ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಸ್ವೀಕರಿಸಲಾಗಿದ್ದು, ಅವುಗಳನ್ನು ಎಚ್ಚರಿಕೆಯಿಂದ ಪರಿಗಣಿಸಲಾಗಿದೆ.

ಅಭಿಪ್ರಾಯಗಳು ಮತ್ತು ಸಲಹೆಗಳಿಗೆ ಪ್ರತಿಕ್ರಿಯೆಯಾಗಿ ಸೂಕ್ತ ಬದಲಾವಣೆಗಳನ್ನು ಮಾಡಲು ನಿರ್ಧರಿಸಲಾಗಿದೆ. ಮೊದಲನೆಯದಾಗಿ, ʻಎಲ್‌ಆರ್‌ಎಸ್‌ʼ ಅಡಿಯಲ್ಲಿ ಎಲ್ಲಾ ಉದ್ದೇಶಗಳಿಗಾಗಿ ಮತ್ತು ಸಾಗರೋತ್ತರ ಪ್ರಯಾಣ ಪ್ರವಾಸ ಪ್ಯಾಕೇಜ್ಳಿಗೆ ಟಿಸಿಎಸ್ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಲಾಗಿದೆ. ಪರಿಷ್ಕೃತ ʻಟಿಸಿಎಸ್ʼ ದರಗಳ ಅನುಷ್ಠಾನಕ್ಕೆ ಮತ್ತು ʻಎಲ್ಆರ್‌ಎಸ್‌ʼ ಅಡಿಯಲ್ಲಿ ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಸೇರಿಸಲು ಹೆಚ್ಚಿನ ಸಮಯವನ್ನು ನೀಡಲು ನಿರ್ಧರಿಸಲಾಗಿದೆ. ಬದಲಾವಣೆಗಳನ್ನು ಕೆಳಗೆ ವಿವರಿಸಲಾಗಿದೆ.

ʻಆದಾಯ ತೆರಿಗೆ ಕಾಯ್ದೆ-1961ʼರ ಸೆಕ್ಷನ್ ʻ206ಸಿʼಯ ಉಪ-ವಿಭಾಗ(1ಜಿ) ("ಕಾಯ್ದೆ") ಇವುಗಳ ಮೇಲೆ- ಅಂದರೆ (i) ವಿದೇಶಿ ರವಾನೆ ಮತ್ತು (ii) ಸಾಗರೋತ್ತರ ಪ್ರವಾಸ ಪ್ಯಾಕೇಜ್ ಮಾರಾಟದ ಮೇಲೆ ʻಉದಾರೀಕೃತ ಹಣ ರವಾನೆ ಯೋಜನೆʼ(ಎಲ್‌ಆರ್‌ಎಸ್‌) ಮೂಲಕ ಮೂಲದಲ್ಲೇ ತೆರಿಗೆ ಸಂಗ್ರಹಕ್ಕೆ(ಟಿಸಿಎಸ್) ಅವಕಾಶ ಒದಗಿಸುತ್ತದೆ.

ʻಹಣಕಾಸು ಕಾಯ್ದೆ-2023ʼರ ಮೂಲಕ, ಕಾಯ್ದೆಯ ಸೆಕ್ಷನ್ ʻ206ಸಿʼಯ ಉಪ-ವಿಭಾಗ(1ಜಿ)ನಲ್ಲಿ ತಿದ್ದುಪಡಿಗಳನ್ನು ಕೈಗೊಳ್ಳಲಾಗಿದೆ. ಈ ತಿದ್ದುಪಡಿ ಮೂಲಕ ʻಎಲ್‌ಆರ್‌ಎಸ್‌ʼ ಅಡಿಯಲ್ಲಿ ಹಣ ರವಾನೆ ಮತ್ತು ಸಾಗರೋತ್ತರ ಪ್ರವಾಸ ಪ್ಯಾಕೇಜ್ ಖರೀದಿಗೆ ʻಟಿಸಿಎಸ್ʼ ದರವನ್ನು 5% ರಿಂದ 20% ಕ್ಕೆ ಹಚ್ಚಿಸಲಾಯಿತು, ಜೊತೆಗೆ ʻಎಲ್‌ಆರ್‌ಎಸ್‌ʼನಲ್ಲಿ ಟಿಸಿಎಸ್ ಅನ್ನು ಅನ್ವಯಿಸಲು 7 ಲಕ್ಷ ರೂ.ಗಳ ಮಿತಿಯನ್ನು ತೊಡೆದುಹಾಕಲಾಯಿತು. ಹಣ ರವಾನೆಯು ಶಿಕ್ಷಣ ಅಥವಾ ವೈದ್ಯಕೀಯ ಉದ್ದೇಶಕ್ಕಾಗಿ ಇದ್ದಾಗ ಈ ಎರಡು ಬದಲಾವಣೆಗಳು ಅನ್ವಯಿಸುವುದಿಲ್ಲ. ಈ ತಿದ್ದುಪಡಿಗಳು ಜುಲೈ 1, 2023 ರಿಂದ ಜಾರಿಗೆ ಬರಬೇಕಾಗಿತ್ತು.

ʻಎಲ್‌ಆರ್‌ಎಸ್‌ʼ ಅಡಿಯಲ್ಲಿ ʻಕ್ರೆಡಿಟ್ ಕಾರ್ಡ್‌ʼಗಳ ವಿದೇಶಿ ವಿನಿಮಯವನ್ನು ಡ್ರಾ ಮಾಡುವುದನ್ನು ಇತರ ವಿಧಾನಗಳ ಮೂಲಕ ಡ್ರಾ ಮಾಡುವುದಕ್ಕಿಂತಲೂ ಪ್ರತ್ಯೇಕವಾಗಿ ಪರಿಗಣಿಸಲಾಗುತ್ತಿತ್ತು. ಈ ಭೇದವನ್ನು ತೊಡೆದುಹಾಕುವ ನಿಟ್ಟಿನಲ್ಲಿ ಸರ್ಕಾರವು ʻವಿದೇಶಿ ವಿನಿಮಯ ನಿರ್ವಹಣೆ (ಚಾಲ್ತಿ ಖಾತೆ ವಹಿವಾಟು) (ತಿದ್ದುಪಡಿ) ನಿಯಮಗಳು-2023ʼ ಅನ್ನು ರೂಪಿಸಿದ್ದು, 2023ರ ಮೇ 16ರ ʻಇ-ಗೆಜೆಟ್ʼನಲ್ಲಿ ಈ ಸಂಬಂಧ ಅಧಿಸೂಚನೆ ಹೊರಡಿಸಿದೆ.

ವಿವಿಧ ಮಧ್ಯಸ್ಥಗಾರರೊಂದಿಗೆ ಚರ್ಚಿಸಿದ ನಂತರ, ಮತ್ತು ಸ್ವೀಕರಿಸಿದ ಪ್ರತಿಕ್ರಿಯೆಗಳು ಮತ್ತು ಸಲಹೆಗಳನ್ನು ಪರಿಗಣಿಸಿ, ಈ ಕೆಳಗಿನ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ:

i) ಅಗತ್ಯ ಐಟಿ ಆಧಾರಿತ ಪರಿಹಾರಗಳನ್ನು ಜಾರಿಗೆ ತರಲು ಬ್ಯಾಂಕುಗಳು ಮತ್ತು ಕಾರ್ಡ್ ಜಾಲಗಳಿಗೆ ಸಾಕಷ್ಟು ಸಮಯಾವಕಾಶ ಒದಗಿಸುವ ನಿಟ್ಟಿನಲ್ಲಿ ಸರ್ಕಾರವು ತನ್ನ 16 ಮೇ 2023ರ ಇ-ಗೆಜೆಟ್ ಅಧಿಸೂಚನೆಯ ಅನುಷ್ಠಾನವನ್ನು ಮುಂದೂಡಲು ನಿರ್ಧರಿಸಿದೆ. ಇದರರ್ಥ ವಿದೇಶದಲ್ಲಿದ್ದಾಗ ಅಂತರರಾಷ್ಟ್ರೀಯ ಕ್ರೆಡಿಟ್ ಕಾರ್ಡ್ಗಳ ಮೂಲಕ ವಹಿವಾಟುಗಳನ್ನು ʻಲ್ರ್ಎಸ್ʼ ಎಂದು ಪರಿಗಣಿಸಲಾಗುವುದಿಲ್ಲ ಮತ್ತು ಆದ್ದರಿಂದ ಈ ವ್ಯವಹಾರಗಳು ʻಟಿಸಿಎಸ್ʼಗೆ ಒಳಪಡುವುದಿಲ್ಲ. 2023ರ ಮೇ  19ರ ಪತ್ರಿಕಾ ಪ್ರಕಟಣೆಯನ್ನು ರದ್ದುಪಡಿಸಲಾಗಿದೆ.

ii)  ಸೆಕ್ಷನ್ ʻ206 ಸಿʼಯ ಉಪ-ವಿಭಾಗ (1 ಜಿ) ಯ ಷರತ್ತು (1)ರಲ್ಲಿ ʻಟಿಸಿಎಸ್ʼ ಅನ್ವಯಿಸಲು ಯಾವುದೇ ಉದ್ದೇಶಕ್ಕಾಗಿ, ಯಾವುದೇ ಪಾವತಿ ವಿಧಾನಗಳ ಮೂಲಕ ಮಾಡಲಾದ ಎಲ್ಲಾ ವರ್ಗದ ʻಲ್ರ್ಎಸ್ʼ ಪಾವತಿಗಳ ಮೇಲೆ ಪ್ರತಿ ವ್ಯಕ್ತಿಗೆ ಪ್ರತಿ ಹಣಕಾಸು ವರ್ಷಕ್ಕೆ 7 ಲಕ್ಷ ರೂ.ಗಳ ಮಿತಿಯನ್ನು ಪುನಃಸ್ಥಾಪಿಸಲಾಗುವುದು: ಹೀಗಾಗಿ, ʻಎಲ್‌ಆರ್‌ಎಸ್ʼ ಅಡಿಯಲ್ಲಿ ಮೊದಲ 7 ಲಕ್ಷ ರೂ.ಗಳ ಹಣ ರವಾನೆಗೆ ʻಟಿಸಿಎಸ್ʼ ಇರುವುದಿಲ್ಲ. ಈ 7 ಲಕ್ಷ ರೂ.ಗಳ ಮಿತಿಯನ್ನು ಮೀರಿದರೆ, ʻಟಿಸಿಎಸ್‌ʼ ಹೀಗಿರುತ್ತದೆ:

ಎ) 0.5% (ಶಿಕ್ಷಣಕ್ಕಾಗಿ ಹಣ ರವಾನೆಗೆ ಶಿಕ್ಷಣ ಸಾಲದ ಮೂಲಕ ಹಣಕಾಸು ಒದಗಿಸಿದರೆ);

ಬಿ) 5% (ಶಿಕ್ಷಣ / ವೈದ್ಯಕೀಯ ಚಿಕಿತ್ಸೆಗಾಗಿ ಹಣ ರವಾನೆಯ ಸಂದರ್ಭದಲ್ಲಿ);

c) ಇತರೆ 20%

ಉಪ-ವಿಭಾಗ (1 ಜಿ)ನ ಷರತ್ತು (2) ರ ಅಡಿಯಲ್ಲಿ ಸಾಗರೋತ್ತರ ಪ್ರವಾಸ ಪ್ಯಾಕೇಜ್ ಖರೀದಿಗೆ, ವರ್ಷಕ್ಕೆ ಮೊದಲ 7 ಲಕ್ಷ ರೂ.ಗಳಿಗೆ 5% ದರದಲ್ಲಿ ʻಟಿಸಿಎಸ್ʼ ಅನ್ವಯ ಮುಂದುವರಿಸುತ್ತದೆ; ಈ ಮಿತಿಗಿಂತ ಹೆಚ್ಚಿನ ವೆಚ್ಚಕ್ಕೆ ಮಾತ್ರ 20% ದರವು ಅನ್ವಯಿಸುತ್ತದೆ.

iii) 2023ರ  ಅಕ್ಟೋಬರ್ 1ರಿಂದ ಅನ್ವಯವಾಗುವ ʻಟಿಸಿಎಸ್ʼ ದರಗಳ ಹೆಚ್ಚಳ: 2023ಜುಲೈ 1 ರಿಂದ ಜಾರಿಗೆ ಬರಬೇಕಿದ್ದ ʻಟಿಸಿಎಸ್ʼ ದರಗಳ ಹೆಚ್ಚಳವು ಈಗ ಮೇಲಿನ (ii) ಮಾರ್ಪಾಡುಗಳೊಂದಿಗೆ  2023 ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ. ಸೆಪ್ಟೆಂಬರ್ 30, 2023 ರವರೆಗೆ, ಹಿಂದಿನ ದರಗಳು (ಹಣಕಾಸು ಕಾಯ್ದೆ 2023ರ ತಿದ್ದುಪಡಿಯ ಮೊದಲು) ಅನ್ವಯವಾಗುತ್ತವೆ.

 

 

 

ಹಿಂದಿನ ಮತ್ತು ಹೊಸ ಟಿಸಿಎಸ್ ದರಗಳನ್ನು ಈ ಕೆಳಗಿನಂತೆ ಸಂಕ್ಷಿಪ್ತವಾಗಿ ವಿವರಿಸಲಾಗಿದೆ:

ಪಾವತಿಯ ಸ್ವರೂಪ

 

 

(1)

ಹಣಕಾಸು ಕಾಯ್ದೆ, 2023ರ ಮೊದಲು ಹಿಂದಿನ ದರ

 

(2)

ಅಕ್ಟೋಬರ್ 1, 2023 ರಿಂದ ಹೊಸ ದರ

 

(3)

ಶಿಕ್ಷಣಕ್ಕಾಗಿ ಸಾಲದ ರೂಪವಾಗಿ ಪಡೆದ ಹಣಕಾಸಿನ ʻಎಲ್‌ಆರ್‌ಎಸ್‌ʼ

7 ಲಕ್ಷ ರೂ.ವರೆಗೆ ಇಲ್ಲ

 

7 ಲಕ್ಷ ರೂ.ಗಿಂತ ಹೆಚ್ಚು ಮೊತ್ತಕ್ಕೆ 0.5%

7 ಲಕ್ಷ ರೂ.ವರೆಗೆ ಇಲ್ಲ

 

7 ಲಕ್ಷ ರೂ.ಗಿಂತ ಹೆಚ್ಚು ಮೊತ್ತಕ್ಕೆ 0.5%

ವೈದ್ಯಕೀಯ ಚಿಕಿತ್ಸೆ / ಶಿಕ್ಷಣಕ್ಕಾಗಿ ʻಎಲ್‌ಆರ್‌ಎಸ್‌ʼ (ಸಾಲದ ಮೂಲಕ ಹಣಕಾಸು ಹೊರತುಪಡಿಸಿ)

7 ಲಕ್ಷ ರೂ.ವರೆಗೆ ಇಲ್ಲ

 

7 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತಕ್ಕೆ 5% 

7 ಲಕ್ಷ ರೂ.ವರೆಗೆ ಇಲ್ಲ

 

7 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತಕ್ಕೆ 5%

ಇತರ ಉದ್ದೇಶಗಳಿಗಾಗಿ ʻಎಲ್‌ಆರ್‌ಎಸ್‌ʼ

7 ಲಕ್ಷ ರೂ.ವರೆಗೆ ಇಲ್ಲ

 

7 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತಕ್ಕೆ 5%

7 ಲಕ್ಷ ರೂ.ವರೆಗೆ ಇಲ್ಲ

 

7 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತಕ್ಕೆ 20%

ಸಾಗರೋತ್ತರ ಪ್ರವಾಸ ಕಾರ್ಯಕ್ರಮ ಪ್ಯಾಕೇಜ್ ಖರೀದಿ

5% (ಮಿತಿಯಿಲ್ಲದೆ)

7 ಲಕ್ಷ ರೂ.ವರೆಗೆ 5% ರಿಂದ, ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ 20%

ಸೂಚನೆ: (i) ಕಾಲಮ್ 2 ರಲ್ಲಿ ನೀಡಿದ ʻಟಿಸಿಎಸ್ʼ ದರವು 2023ರ ಸೆಪ್ಟೆಂಬರ್ 30ರವರೆಗೆ ಅನ್ವಯಿಸುತ್ತದೆ.

(ii) ಉಪ-ವಿಭಾಗ (1 ಜಿ) ನ ಕಲಂ (1) ರ ಅಡಿಯಲ್ಲಿ ಯಾವುದೇ ಉದ್ದೇಶದ ಹಣ ಸಂದಾಯಕ್ಕೆ ಮೊದಲ 7 ಲಕ್ಷ ರೂ.ಗಳಿಗೆ ʻಎಲ್‌ಆರ್‌ಎಸ್‌ʼ ಅಡಿಯಲ್ಲಿ ಯಾವುದೇ ಟಿಸಿಎಸ್ ಇರುವುದಿಲ್ಲ.

ನಿಯಮಗಳಿಗೆ ಅಗತ್ಯ ಬದಲಾವಣೆಗಳನ್ನು (ವಿದೇಶಿ ವಿನಿಮಯ ನಿರ್ವಹಣೆ (ಚಾಲ್ತಿ ಖಾತೆ ವಹಿವಾಟು ನಿಯಮಗಳು, 2000) ಪ್ರತ್ಯೇಕವಾಗಿ ನೀಡಲಾಗುತ್ತಿದೆ.

ಈ ನಿಟ್ಟಿನಲ್ಲಿ ಶಾಸನಾತ್ಮಕ ತಿದ್ದುಪಡಿಯನ್ನು ಸೂಕ್ತ ಸಮಯದಲ್ಲಿ ಪ್ರಸ್ತಾಪಿಸಲಾಗುವುದು. ಈ ನಿಬಂಧನೆಯನ್ನು ಅನುಷ್ಠಾನಗೊಳಿಸುವಲ್ಲಿ ವಿವಿಧ ಪ್ರಾಯೋಗಿಕ ಸಮಸ್ಯೆಗಳನ್ನು ಸ್ಪಷ್ಟಪಡಿಸಲು ಸುತ್ತೋಲೆ ಮತ್ತು ʻಆಗಾಗ್ಗೆ ಕೇಳಲಾಗುವ ಪ್ರಶ್ನೆʼಗಳನ್ನು (ಎಫ್ಎಕ್ಯೂ) ಹೊರಡಿಸಲಾಗುವುದು.

****



(Release ID: 1936270) Visitor Counter : 184