ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಂತರರಾಷ್ಟ್ರೀಯ ಯೋಗ ದಿನ 2023 - ಪ್ರಧಾನಮಂತ್ರಿಯವರ ಭಾಷಣ


“ಭಾರತದ ಕರೆಯ ಮೇರೆಗೆ ಹಿಂದೆಂದೂ ಕಂಡರಿಯದಂತೆ 180 ಕ್ಕೂ ಹೆಚ್ಚು ದೇಶಗಳು ಒಟ್ಟಿಗೆ ಸೇರಿರುವುದು ಐತಿಹಾಸಿಕ”  

“ನಮ್ಮನ್ನು ಯೋಗ ಒಂದುಗೂಡಿಸಲಿದೆ”

“ಯೋಗ ಆರೋಗ್ಯಪೂರ್ಣ ಮತ್ತು ಶಕ್ತಿಯುತ ಸಮಾಜ ನಿರ್ಮಿಸಲಿದ್ದು, ಅಲ್ಲಿ ಸಾಮೂಹಿಕ ಶಕ್ತಿ ಹೆಚ್ಚಾಗಿರುತ್ತದೆ”

“ಭಾರತೀಯ ಸಂಸ್ಕೃತಿ ಮತ್ತು ಸಾಮಾಜಿಕ ರಚನೆ, ಅದರ ಆಧ್ಯಾತ್ಮಿಕತೆ ಹಾಗೂ ಆದರ್ಶಗಳು, ಅದರ ತತ್ವಶಾಸ್ತ್ರ ಮತ್ತು ದೃಷ್ಟಿಕೋನ ಒಗ್ಗೂಡಿಸುವ, ಅಪ್ಪಿಕೊಳ್ಳುವ, ಅಳವಡಿಸಿಕೊಳ್ಳುವುದನ್ನು ಒಳಗೊಂಡಿದೆʼ

“ಯೋಗ ಜೀವಿಗಳ ಏಕತೆಯನ್ನು ಅನುಭವಿಸುವಂತೆ ಮಾಡುತ್ತದೆಯಲ್ಲದೇ ಇದೇ ಪ್ರಜ್ಞೆಯೊಂದಿಗೆ ನಮ್ಮನ್ನು ಸಂಪರ್ಕಿಸುತ್ತದೆ”

“ಯೋಗದ ಮೂಲಕ ನಿಸ್ವಾರ್ಥ ಕಾರ್ಯ ಸಾಧಿಸಲು, ತನ್ಮೂಲಕ ಕರ್ಮದಿಂದ ಕರ್ಮಯೋಗದತ್ತ ಪಯಣಿಸಲು ಸಾಧ್ಯ”

“ನಮ್ಮ ಭೌತಿಕ ಶಕ್ತಿ, ನಮ್ಮ ಮಾನಸಿಕ ವಿಸ್ತರಣೆಯಿಂದ ಭಾರತದ ಮೂಲ ನೆಲೆ ವಿಸ್ತರಣೆಯಾಗಲಿದೆ”

Posted On: 21 JUN 2023 7:05AM by PIB Bengaluru

ಅಂತರರಾಷ್ಟ್ರೀಯ ಯೋಗ ದಿನ 2023 ದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಸಂದೇಶದ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದರು. ಮಧ್ಯ ಪ್ರದೇಶದ ಜಬಲ್ಪುರ್‌ ನಲ್ಲಿ ಉಪ ರಾಷ್ಟ್ರಪತಿ ಶ್ರೀ ಜಗದೀಪ್‌ ಧನ್ಕರ್‌ ಅವರ ನೇತೃತ್ವದಲ್ಲಿ 9ನೇ ಅಂತರರಾಷ್ಟ್ರೀಯ ಯೋಗ ದಿನ 2023 ಆಚರಿಸಲಾಯಿತು.

ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಅಂತರರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ನಾಗರಿಕರಿಗೆ ಶುಭ ಹಾರೈಕೆಗಳನ್ನು ತಿಳಿಸಿದರು. ಯೋಗ ದಿನದ ಹಿಂದಿನ ಸಂದರ್ಭಗಳಿಗಿಂತ ಈ ಬಾರಿ ಭಿನ್ನವಾದ ಬದ್ಧತೆಗಳ ಕಾರಣದಿಂದ ಅಮೆರಿಕ ಪ್ರವಾಸ ಕೈಗೊಂಡಿದ್ದು, ವಿಡಿಯೋ ಸಂದೇಶದ ಮೂಲಕ ನಿಮ್ಮ ಮುಂದೆ ಹಾಜರಿದ್ದೇನೆ.

ಭಾರತೀಯ ಕಾಲಮಾನ ಬೆಳಿಗ್ಗೆ 5.30 ಕ್ಕೆ ವಿಶ್ವ ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೇನೆ. “ಭಾರತದ ಕರೆಯ ಮೇರೆಗೆ ಹಿಂದೆಂದೂ ಕಂಡರಿಯದಂತೆ 180 ಕ್ಕೂ ಹೆಚ್ಚು ದೇಶಗಳು ಒಟ್ಟಿಗೆ ಸೇರಿರುವುದು ಐತಿಹಾಸಿಕ” ಎಂದರು. ಯೋಗವನ್ನು ಜಾಗತಿಕ ಆಂದೋಲನ ಮಾಡಲು 2014 ರಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಪ್ರಸ್ತಾವನೆ ಮಂಡಿಸಿದಾಗ ದಾಖಲೆ ಪ್ರಮಾಣದಲ್ಲಿ ಬೆಂಬಲ ದೊರೆಯಿತು ಮತ್ತು ಅಂತರರಾಷ್ಟ್ರೀಯ ಯೋಗ ದಿನವನ್ನು ಇದೀಗ ಜಾಗತಿಕ ಸ್ಫೂರ್ತಿಯಿಂದ ಆಚರಿಸಲಾಗುತ್ತಿದೆ.

ಯೋಗ ದಿನದ ʼಸಮುದ್ರ ವರ್ತುಲ ಯೋಗʼ ಎಂಬ ಪರಿಕಲ್ಪನೆಯನ್ನು ಇನ್ನಷ್ಟು ವಿಶೇಷವಾಗಿ ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು, ಇದು ಯೋಗದ ಕಲ್ಪನೆ ಮತ್ತು ವಿಶಾಲ ಸಾಗರದ ನಡುವಿನ ಪರಸ್ಪರ ಬಾಂಧವ್ಯವನ್ನು ಆಧರಿಸಿದೆ. ನಮ್ಮ ಸೇನಾ ಸಿಬ್ಬಂದಿ ಜಲ ಮೂಲವನ್ನು ಬಳಸಿಕೊಂಡು “ಯೋಗ ಭಾರತಮಾಲ ಮತ್ತು ಯೋಗ ಸಾಗರಮಾಲ”ವನ್ನಾಗಿ ರೂಪಿಸಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಮುಂದುವರೆದು ಮಾತನಾಡಿ, ಆರ್ಕ್ಟಿಕ್‌ ನಿಂದ ಅಂಟಾರ್ಟಿಕ್‌ ವರೆಗಿನ ಭಾರತದ ಎರಡು ಸಂಶೋಧನಾ ನೆಲೆಗಳು ಅಂದರೆ ಭೂಮಿಯ ಎರಡು ಧ್ರುವಗಳು ಸಹ ಯೋಗದೊಂದಿಗೆ ಬೆಸೆದುಕೊಂಡಿವೆ.  ಈ ವಿಶಿಷ್ಟ ಆಚರಣೆಯಲ್ಲಿ ದೇಶ ಮತ್ತು ಪ್ರಪಂಚದಾದ್ಯಂತ ಕೋಟ್ಯಂತರ ಜನ ಸ್ವಯಂ ಪ್ರೇರಣೆಯಿಂದ ಭಾಗವಹಿಸಿರುವುದು ಯೋಗದ ವಿಶಾಲತೆ ಮತ್ತು ಖ್ಯಾತಿಯನ್ನು ತೋರಿಸುತ್ತದೆ.

“ಯೋಗ ನಮ್ಮನ್ನು ಒಗ್ಗೂಡಿಸುತ್ತದೆ” ಎಂಬ ಋಷಿಗಳ ಮಾತನ್ನು ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು. ಯೋಗದಿಂದ ಇಡೀ ಜಗತ್ತು ಒಂದೇ ಕುಟುಂಬವಾಗಿದೆ ಎಂಬ ಕಲ್ಪನೆಯ ವಿಸ್ತರಣೆಯಾಗಿದೆ. ಈ ವರ್ಷ ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ20 ಶೃಂಗ ಸಭೆಯಲ್ಲಿ ʼಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯʼ ಎಂಬ ಧ್ಯೇಯದ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು ʼಯೋಗದ ಪ್ರಚಾರ ʼವಸುಧೈವ ಕುಟುಂಬಕಂ ಎಂಬ ಮನೋಭಾವದ ಪ್ರಚಾರವಾಗಿದೆ ಎಂದು ಒತ್ತಿ ಹೇಳಿದರು. “ ಇಂದು ಕೋಟ್ಯಂತರ ಜನ ʼವಸುಧೈವ ಕುಟುಂಬಕಂಗಾಗಿ ಯೋಗʼ ಎಂಬ ಘೋಷವಾಕ್ಯದಡಿ ಜಗತ್ತಿನಾದ್ಯಂತ ಯೋಗಾಸನ ಮಾಡುತ್ತಿದ್ದಾರೆ ಎಂದು ಹೇಳಿದರು.

ಯೋಗದ ಮೂಲಕ ಒಬ್ಬರು ಆರೋಗ್ಯ, ಚೈತನ್ಯ ಮತ್ತು ಶಕ್ತಿಯನ್ನು ಪಡೆದುಕೊಳ್ಳುತ್ತಾರೆ ಮತ್ತು ವರ್ಷಗಳಿಂದ ಈ ಅಭ್ಯಾಸದಲ್ಲಿ ತೊಡಗಿಕೊಂಡವರು ಅದರ ಶಕ್ತಿಯನ್ನು ಅನುಭವಿಸುತ್ತಾರೆ ಎಂದು ಯೋಗ ಗ್ರಂಥಗಳನ್ನು ಉಲ್ಲೇಖಿಸಿ ಪ್ರಧಾನಮಂತ್ರಿಯವರು ಹೇಳಿದರು. ವ್ಯಕ್ತಿಗಳು ಮತ್ತು ಕುಟುಂಬಗಳ ಹಂತದ ಉತ್ತಮ ಆರೋಗ್ಯದ ಮಹತ್ವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, “ಯೋಗ ಆರೋಗ್ಯಪೂರ್ಣ ಮತ್ತು ಶಕ್ತಿಯುತ ಸಮಾಜ ನಿರ್ಮಿಸಲಿದ್ದು, ಅಲ್ಲಿ ಸಾಮೂಹಿಕ ಶಕ್ತಿ ಹೆಚ್ಚಾಗಿರುತ್ತದೆ” ಎಂದರು. ಸ್ವಚ್ಛ ಭಾರತ ಮತ್ತು ಭಾರತದ ನವೋದ್ಯಮ ಅಭಿಯಾನ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಇದರಿಂದ ಸ್ವಾವಲಂಬಿ ಭಾರತ ನಿರ್ಮಾಣ ಮಾಡಲು ಸಾಧ್ಯವಾಗಿದೆ ಮತ್ತು ದೇಶದ ಸಂಸ್ಕೃತಿಯ ಅಸ್ಮಿತೆಯನ್ನು ಪುನರ್‌ ಸ್ಥಾಪಿಸಲಾಗಿದೆ ಹಾಗೂ ಈ ವಲಯಕ್ಕೆ ದೇಶ ಮತ್ತು ಯುವ ಸಮೂಹ ಅನನ್ಯ ಕಸುವು ತುಂಬಿದೆ. “ಇಂದು ದೇಶದ ಜನರ ಮನಸ್ಥಿತಿ ಬದಲಾಗಿದ್ದು, ಜನ ಮತ್ತು ಅವರ ಬದುಕನ್ನು ಬದಲಾವಣೆಯತ್ತ ಕೊಂಡೊಯ್ಯಲು ಕೊಡುಗೆ ನೀಡಿದೆ” ಎಂದರು.

“ಭಾರತೀಯ ಸಂಸ್ಕೃತಿ ಮತ್ತು ಸಾಮಾಜಿಕ ರಚನೆ, ಅದರ ಆಧ್ಯಾತ್ಮಿಕತೆ ಹಾಗೂ ಆದರ್ಶಗಳು, ಅದರ ತತ್ವಶಾಸ್ತ್ರ ಮತ್ತು ದೃಷ್ಟಿಯು ಒಗ್ಗೂಡಿಸುವ, ಅಪ್ಪಿಕೊಳ್ಳುವ, ಅಳವಡಿಸಿಕೊಳ್ಳುವುದನ್ನು ಒಳಗೊಂಡಿದೆʼ ಎಂದು ಪ್ರಧಾನಮಂತ್ರಿ ಅವರು ಹೇಳಿದರು.  ಭಾರತೀಯರು ಹೊಸ ಆಲೋಚನೆಗಳನ್ನು ಸ್ವಾಗತಿಸುತ್ತಾರೆ ಮತ್ತು ಸಂರಕ್ಷಿಸುತ್ತಾರೆ, ಈ ಮೂಲಕ ದೇಶದ ತನ್ನ ವೈವಿಧ್ಯತೆಯನ್ನು ಸಂಭ್ರಮಿಸುತ್ತದೆ ಎಂದು ‍ಶ್ರೀ ನರೇಂದ್ರ ಮೋದಿ ಹೇಳಿದರು.  ಯೋಗ ಇಂತಹ ಭಾವನೆಯನ್ನು ಬಲಗೊಳಿಸುತ್ತದೆ, ತನ್ನ ಒಳನೋಟವನ್ನು ವಿಸ್ತರಿಸುತ್ತದೆ ಮತ್ತು ಇದೇ ಪ್ರಜ್ಞೆಯೊಂದಿಗೆ ನಮ್ಮನ್ನು ಸಂಪರ್ಕಿಸುತ್ತದೆ. ಅದು ಜೀವಿಗಳ ಏಕತೆಯನ್ನು ಅನುಭವಿಸುವಂತೆ, ಅದು ಜೀವಿಗಳಿಗೆ ಪ್ರೀತಿಯ ಆಧಾರವನ್ನು ನೀಡುತ್ತದೆ.  ಆದ್ದರಿಂದ ಯೋಗದ ಮೂಲಕ ನಮ್ಮ ವಿರೋಧಾಭಾಸಗಳು, ಅಡೆತಡೆ ಮತ್ತು ಪ್ರತಿರೋಧವನ್ನು ಹೊಡೆದೋಡಿಸಬೇಕು. “ನಾವು ʼಏಕ ಭಾರತ ‍ಶ್ರೇಷ್ಠ ಭಾರತʼದ ಸ್ಪೂರ್ತಿಯನ್ನು ಪ್ರಸ್ತುತಪಡಿಸಿ ಜಗತ್ತಿಗೆ ನಿದರ್ಶನವಾಗಬೇಕು” ಎಂದರು.

ತಮ್ಮ ಭಾಷಣದ ಕೊನೆಗೆ ಪ್ರಧಾನಮಂತ್ರಿಯವರು ಶ್ಲೋಕವನ್ನು ಉಲ್ಲೇಖಿಸಿದರು ಮತ್ತು ಯೋಗ ಕ್ರಿಯೆಯಲ್ಲಿನ ಕೌಶಲ್ಯದ ಬಗ್ಗೆ ವಿವರಿಸಿದರು. “ಯೋಗದ ಮೂಲಕ ನಿಸ್ವಾರ್ಥ ಕಾರ್ಯ ಸಾಧಿಸಲು, ತನ್ಮೂಲಕ ಕರ್ಮದಿಂದ ಕರ್ಮಯೋಗದತ್ತ ಪಯಣಿಸಲು ಸಾಧ್ಯ” ಈ ಮಂತ್ರ ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ಪ್ರತಿಯೊಬ್ಬರಿಗೂ ಅತ್ಯಂತ ಮಹತ್ವದ್ದಾಗಿದೆ ಮತ್ತು ಒಬ್ಬ ವ್ಯಕ್ತಿಯು ನಿಜವಾಗಿಯೂ ತನ್ನನ್ನು ತಮ್ಮ ಕರ್ತವ್ಯಗಳಿಗೆ ಸಮರ್ಪಿಸಿಕೊಂಡಾಗ ಯೋಗದ ಪರಿಪೂರ್ಣತೆಯನ್ನು ಸಾಧಿಸಿದಂತಾಗುತ್ತದೆ. ಯೋಗದಿಂದ ನಾವು ನಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳುತ್ತೇವೆ ಮತ್ತು ಸೂಕ್ತ ನಿರ್ಣಯಗಳನ್ನು ಕೈಗೊಳ್ಳುತ್ತೇವೆ. “ನಮ್ಮ ಭೌತಿಕ ಶಕ್ತಿ, ನಮ್ಮ ಮಾನಸಿಕ ವಿಸ್ತರಣೆಯಿಂದ ಭಾರತದ ಮೂಲ ನೆಲೆ ವಿಸ್ತರಣೆಯಾಗಲಿದೆ” ಎಂದು ತಮ್ಮ ಭಾಷಣವನ್ನು ಪೂರ್ಣಗೊಳಿಸಿದರು.

***


(Release ID: 1933887) Visitor Counter : 184