ಗಣಿ ಸಚಿವಾಲಯ
ಹೈದರಾಬಾದಿನ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಟ್ರೈನಿಂಗ್ ಇನ್ಸ್ ಟಿಟ್ಯೂಟ್ (ಜಿಎಸ್ಐಟಿಐ)ಗೆ "ಅತಿ ಉತ್ತಮ್" ಮಾನ್ಯತೆ
ಸಾಮರ್ಥ್ಯ ವರ್ಧನೆ ಆಯೋಗದಿಂದ ಲಭಿಸಿದ ಮಾನ್ಯತೆ
Posted On:
13 JUN 2023 5:23PM by PIB Bengaluru
ಗಣಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಭೂ-ವಿಜ್ಞಾನ ಸರ್ವೇಕ್ಷಣಾ ತರಬೇತಿ ಸಂಸ್ಥೆ (ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಟ್ರೈನಿಂಗ್ ಇನ್ಸ್ಟಿಟ್ಯೂಟ್ - ಜಿಎಸ್ಐಟಿಐ) ಗೆ ಶಿಕ್ಷಣ ಮತ್ತು ತರಬೇತಿಗಾಗಿರುವ ರಾಷ್ಟ್ರೀಯ ಮಾನ್ಯತಾ ಮಂಡಳಿಯು (ನ್ಯಾಷನಲ್ ಅಕ್ರೆಡಿಟೇಶನ್ ಬೋರ್ಡ್ ಆಫ್ ಎಜುಕೇಶನ್ ಅಂಡ್ ಟ್ರೈನಿಂಗ್ - ಎನ್ಎಬಿಇಟಿ) ಮಾನ್ಯತೆ ನೀಡಿದೆ. ಭೂ-ವಿಜ್ಞಾನ ತರಬೇತಿ ಕ್ಷೇತ್ರದಲ್ಲಿ ಅದು ಸಲ್ಲಿಸಿರುವ ಸೇವೆ ಮತ್ತು ಕಾಯ್ದುಕೊಂಡಿರುವ ಉನ್ನತ ಗುಣಮಟ್ಟವನ್ನು ಪರಿಗಣಿಸಿ ಈ ಮಾನ್ಯತೆ ನೀಡಲಾಗಿದೆ. ವಿವಿಧ ಹಂತಗಳಲ್ಲಿ ಸಂಸ್ಥೆ ಅನುಸರಿಸುವ ಎಲ್ಲಾ ಪ್ರಮಾಣಿತ ಕಾರ್ಯಾಚರಣಾ ಪ್ರಕ್ರಿಯೆಗಳು ಮತ್ತು ವಿಧಾನಗಳ ಪರಿಶೀಲನೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗಿದೆ. ಸಾಮರ್ಥ್ಯ ವರ್ಧನೆ ಆಯೋಗ (ಸಿಬಿಸಿ), ಎನ್ಎಬಿಇಟಿ ಮತ್ತು ಭಾರತೀಯ ಗುಣಮಟ್ಟ ನಿಯಂತ್ರಣ ಆಯೋಗ (ಕ್ವಾಲಿಟಿ ಕಂಟ್ರೋಲ್ ಆಫ್ ಇಂಡಿಯಾ)ದ ತಂಡವು ಸ್ಥಳ ಪರಿಶೀಲನೆ (ಆನ್-ಸೈಟ್ ) ಮೌಲ್ಯಮಾಪನವನ್ನು ನಡೆಸಿತು ಮತ್ತು ’ಅತಿ ಉತ್ತಮ್” ಗ್ರೇಡಿಂಗ್ ನೊಂದಿಗೆ ಮಾನ್ಯತೆಯ ಪ್ರಮಾಣಪತ್ರವನ್ನು ನೀಡಿತು.
1976 ರಲ್ಲಿ ಸ್ಥಾಪನೆಯಾದ ಜಿ.ಎಸ್.ಐ.ಟಿ.ಐ. ಹೈದರಾಬಾದಿನಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದ್ದು, ಹೈದರಾಬಾದ್, ನಾಗ್ಪುರ, ಜೈಪುರ, ಲಕ್ನೋ, ಕೋಲ್ಕತಾ ಮತ್ತು ಶಿಲ್ಲಾಂಗ್ ಗಳಲ್ಲಿ ಆರು ಪ್ರಾದೇಶಿಕ ತರಬೇತಿ ವಿಭಾಗಗಳನ್ನು (ಆರ್.ಟಿ.ಡಿ.) ಹೊಂದಿದೆ. ಚಿತ್ರದುರ್ಗ (ಕರ್ನಾಟಕ), ರಾಯ್ಪುರ (ಛತ್ತೀಸ್ ಗಢ), ಜಾವರ್ (ರಾಜಸ್ಥಾನ) ಮತ್ತು ಕುಜು (ಜಾರ್ಖಂಡ್) ಗಳಲ್ಲಿ ಒಟ್ಟು ನಾಲ್ಕು ಕ್ಷೇತ್ರ ತರಬೇತಿ ಕೇಂದ್ರಗಳನ್ನು (ಎಫ್.ಟಿ.ಸಿ.) ಸ್ಥಾಪಿಸಲಾಗಿದೆ. ಭೂವಿಜ್ಞಾನ ವೃತ್ತಿಪರರು, ಶಿಕ್ಷಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ ಭೂವಿಜ್ಞಾನದ ವಿವಿಧ ವಿಷಯಗಳಲ್ಲಿ ವಿವಿಧ ತರಬೇತಿಗಳನ್ನು ನೀಡಲು ಗಣಿ ಸಚಿವಾಲಯದ ಚಿಂತನೆಯ ಪ್ರಕಾರ ಈ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹೀಗಾಗಿ, ಜಿಎಸ್ಐಟಿಐ ಗಣಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ತರಬೇತಿ ಸೌಲಭ್ಯವಾಗಿದ್ದು, ಇದು ಕೇಂದ್ರ ಮತ್ತು ರಾಜ್ಯ ಇಲಾಖೆಗಳು, ಸಾರ್ವಜನಿಕ ರಂಗದ ಉದ್ಯಮಗಳು (ಎಂಇಸಿಎಲ್, ಒ.ಎನ್.ಜಿ.ಸಿ, ಒಐಎಲ್, ಎನ್ಎಂಡಿಸಿ), ರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆಗಳು (ಐಐಟಿಗಳು, ಕೇಂದ್ರೀಯ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು) ಮತ್ತು ಕಾಲೇಜುಗಳು ಸೇರಿದಂತೆ ಅನೇಕ ಭಾಗೀದಾರರಿಗೆ ತರಬೇತಿ ಮತ್ತು ಸಾಮರ್ಥ್ಯ ವರ್ಧನೆಯನ್ನು ಒದಗಿಸುತ್ತದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಾಯೋಜಿಸಿದ ಎನ್.ಎನ್.ಆರ್.ಎಂ.ಎಸ್ ಕಾರ್ಯಕ್ರಮದ ಅಡಿಯಲ್ಲಿ ಸಂಸ್ಥೆ ನಿಯಮಿತವಾಗಿ ರಿಮೋಟ್ ಸೆನ್ಸಿಂಗ್ (ದೂರ ಸಂವೇದಿ) ಕೋರ್ಸ್ ಗಳನ್ನು ನಡೆಸುತ್ತದೆ. ಇದು ಅಂತರರಾಷ್ಟ್ರೀಯ ಖ್ಯಾತಿಯ ಸಂಸ್ಥೆಯಾಗಿದೆ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಾಯೋಜಿತ ಐಟಿಇಸಿ ಕಾರ್ಯಕ್ರಮದ ಅಡಿಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರತಿನಿಧಿಗಳಿಗೆ, ಭಾಗವಹಿಸುವ ವೃತ್ತಿಪರರಿಗೆ ತರಬೇತಿ ನೀಡುತ್ತದೆ. 75 ದೇಶಗಳ ವೃತ್ತಿಪರರು ಈಗಾಗಲೇ ಸಂಸ್ಥೆಯಿಂದ ತರಬೇತಿ ಪಡೆದಿದ್ದಾರೆ.
ಜಿಎಸ್ಐಟಿಐ ಹೈದರಾಬಾದಿನಲ್ಲಿರುವ ತನ್ನ ಕೇಂದ್ರ ಮತ್ತು ದೇಶಾದ್ಯಂತ ಇರುವ ಅರ್.ಟಿ.ಡಿ.ಗಳು ಮತ್ತು ಎಫ್.ಟಿ.ಸಿ. ಗಳ ಮೂಲಕ ಡೊಮೇನ್ ನಿರ್ದಿಷ್ಟ ಮತ್ತು ಭೂಪ್ರದೇಶ ನಿರ್ದಿಷ್ಟ ತರಬೇತಿ ಕಾರ್ಯಕ್ರಮಗಳನ್ನು ಒದಗಿಸುತ್ತದೆ. ಹಿಮಾಲಯ ಸೇರಿದಂತೆ ವಿವಿಧ ಭೂಪ್ರದೇಶಗಳ ಮ್ಯಾಪಿಂಗ್ ತಂತ್ರಗಳು, ಖನಿಜೀಕೃತ ವಲಯಗಳನ್ನು (ಚಿನ್ನ, ವಜ್ರ, ತಾಮ್ರ, ಲಿಥಿಯಂ, ಆರ್.ಇ.ಇ., ಕಬ್ಬಿಣ, ಮ್ಯಾಂಗನೀಸ್ ಇತ್ಯಾದಿ) ಗುರಿಯಾಗಿಟ್ಟುಕೊಂಡು ಅನ್ವೇಷಣಾ ವಿಧಾನಗಳು, ಫೋಟೋ-ಭೂವಿಜ್ಞಾನ ಮತ್ತು ದೂರ ಸಂವೇದಿ, ಭೌಗೋಳಿಕ ಮಾಹಿತಿ ವ್ಯವಸ್ಥೆ, ಪೆಟ್ರಾಲಜಿ, ಜಿಯೋಕ್ರೋನಾಲಜಿ, ಭೂ- ಭೌತ ವಿಜ್ಞಾನ (ಜಿಯೋಫಿಸಿಕ್ಸ್), ರಸಾಯನಶಾಸ್ತ್ರದಲ್ಲಿ ವಿಶ್ಲೇಷಣಾತ್ಮಕ ವಿಧಾನಗಳು, ಪರಿಸರ ಮತ್ತು ನಗರ ಭೂವಿಜ್ಞಾನ ಮತ್ತು ನೈಸರ್ಗಿಕ ವಿಪತ್ತು ತಗ್ಗಿಸುವಿಕೆಯಲ್ಲಿ ಡೊಮೇನ್ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ತರಬೇತಿ ಕೋರ್ಸ್ ಗಳನ್ನು ನೀಡುತ್ತದೆ. ಉದ್ಯೋಗಿಗಳ ಕಾರ್ಯಾಚರಣಾ ಸಾಮರ್ಥ್ಯಗಳನ್ನು ಮೇಲ್ದರ್ಜೆಗೇರಿಸಲು ಸಂಸ್ಥೆ ಕೋರ್ಸ್ ಗಳನ್ನು ಒದಗಿಸುತ್ತದೆ. ಇದು ಅಧಿಕಾರಿಗಳಲ್ಲಿ ನಡವಳಿಕೆಯ/ವರ್ತನೆಯ ಸಾಮರ್ಥ್ಯಗಳನ್ನು ಬೆಳೆಸುವ ವಿಷಯಗಳನ್ನು ಸೇರಿಸುವಲ್ಲಿಯೂ ಕಾಳಜಿ ವಹಿಸುತ್ತದೆ.
****
(Release ID: 1932271)
Visitor Counter : 156