ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಸುರಿನಾಮ್ ನಲ್ಲಿ ನಡೆದ ಸಮುದಾಯ ಆತಿಥ್ಯ ಸಮಾರಂಭದಲ್ಲಿ ಭಾರತೀಯ ಸಮುದಾಯದ ಸದಸ್ಯರನ್ನುದ್ದೇಶಿಸಿ ಭಾರತದ ರಾಷ್ಟ್ರಪತಿ ಭಾಷಣ


​​​​​​​ಪ್ರಗತಿ ಮತ್ತು ಅಭಿವೃದ್ಧಿಯ ಅನ್ವೇಷಣೆಯಲ್ಲಿ ಸುರಿನಾಮ್ ಗೆ ಬೆಂಬಲ ನೀಡಲು  ಭಾರತ ಸಿದ್ಧ: ರಾಷ್ಟ್ರಪತಿ  ಮುರ್ಮು

ಸೆರ್ಬಿಯಾಕ್ಕೆ ತೆರಳಿದ ರಾಷ್ಟ್ರಪತಿ

Posted On: 07 JUN 2023 12:07PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಸುರಿನಾಮ್ ಗೆ ನೀಡಿರುವ  ತಮ್ಮ ಭೇಟಿಯ ಮುಕ್ತಾಯದ ದಿನವಾದ, ನಿನ್ನೆ ಸಂಜೆ (ಜೂನ್ 6, 2023) ಸುರಿನಾಮಿನಲ್ಲಿ  ಭಾರತದ ರಾಯಭಾರಿ ಡಾ.ಶಂಕರ್ ಬಾಲಚಂದ್ರನ್ ಆಯೋಜಿಸಿದ್ದ ಆತಿಥ್ಯ ಸಮಾರಂಭದಲ್ಲಿ ಭಾರತೀಯ ಸಮುದಾಯದ ಸದಸ್ಯರನ್ನುದ್ದೇಶಿಸಿ ಮಾತನಾಡಿದರು. ಪಾರಮಾರಿಬೋದಲ್ಲಿ ಆಯೋಜಿಸಿದ್ದ ಈ ಕೂಟದ ಮೊದಲಿಗೆ, ಒಡಿಶಾದ ಬಾಲಸೋರ್ ನಲ್ಲಿ ಸಂಭವಿಸಿದ  ರೈಲು ಅಪಘಾತದಲ್ಲಾದ  ಜೀವಹಾನಿಗೆ ಸಂತಾಪ ಸೂಚಿಸಲು ಎರಡು ನಿಮಿಷಗಳ ಮೌನವನ್ನು ಆಚರಿಸಲಾಯಿತು.

ಸಭಿಕರನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ಭಾರತ ಮತ್ತು ಸುರಿನಾಮ್ ಭೌಗೋಳಿಕತೆಯಿಂದ ಬೇರ್ಪಟ್ಟಿರಬಹುದು, ಆದರೆ ಎರಡೂ ದೇಶಗಳು ತಮ್ಮ ಪರಸ್ಪರ ಹಂಚಿಕೆಯ ಇತಿಹಾಸ ಮತ್ತು ಪರಂಪರೆಯಿಂದ ಒಂದಾಗಿವೆ ಎಂದು ಹೇಳಿದರು. ಸುರಿನಾಮ್ ಮತ್ತು ಸುರಿನಾಮೀಸ್ ಜನರು ಭಾರತೀಯರ ಹೃದಯದಲ್ಲಿ ಬಹಳ ವಿಶೇಷ ಸ್ಥಾನವನ್ನು ಹೊಂದಿದ್ದಾರೆ ಎಂದವರು ನುಡಿದರು.

ಸುರಿನಾಮ್ ನಲ್ಲಿರುವ ಭಾರತೀಯ ವಲಸಿಗರು ದೇಶದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ ಎಂಬುದನ್ನು ಗಮನಿಸಲು ಸಂತೋಷವಾಗುತ್ತದೆ ಎಂದು  ರಾಷ್ಟ್ರಪತಿಗಳು ಹೇಳಿದರು.  ಅವರು ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಭಾರತ-ಸುರಿನಾಮ್ (ಇಂಡೋ-ಸುರಿನಾಮೀಸ್) ನ ಸಾಧನೆಗಳು ಮತ್ತು ಸುರಿನಾಮ್ ಅಭಿವೃದ್ಧಿಯಲ್ಲಿ ಅವರ ಪಾತ್ರದ ಬಗ್ಗೆ ಭಾರತ ತುಂಬಾ ಹೆಮ್ಮೆಪಡುತ್ತದೆ ಎಂದೂ ಅವರು ನುಡಿದರು.

ಭಾರತೀಯ ಸಮುದಾಯವು ಉಭಯ ದೇಶಗಳ ನಡುವಿನ ಸ್ನೇಹ ಮತ್ತು ಸಹಕಾರದ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ರಾಷ್ಟ್ರಪತಿ ಹೇಳಿದರು. ಅವರು ತಮ್ಮ ಕ್ಷೇತ್ರಗಳಲ್ಲಿ ಕಠಿಣ ಶ್ರಮವನ್ನು ಮುಂದುವರಿಸುತ್ತಾರೆ ಮತ್ತು ಭಾರತ ಹಾಗು ಸುರಿನಾಮ್ ನಡುವಿನ ಅನನ್ಯ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತಾರೆ ಎಂಬ ವಿಶ್ವಾಸವನ್ನು ರಾಷ್ಟ್ರಪತಿ ವ್ಯಕ್ತಪಡಿಸಿದರು.

ಇಂದು, ಭಾರತವು ಪರಿವರ್ತನೆಯ ಹಾದಿಯಲ್ಲಿದೆ ಎಂದು ರಾಷ್ಟ್ರಪತಿ ಹೇಳಿದರು. ತ್ವರಿತ ಬೆಳವಣಿಗೆಗೆ ಅನುಗುಣವಾಗಿ ಭಾರತವು ಹೊಸ ಮೂಲಸೌಕರ್ಯಗಳನ್ನು ಸೃಷ್ಟಿಸುತ್ತಿದೆ. ನಾವು ಡಿಜಿಟಲ್ ಆರ್ಥಿಕತೆ, ಹೊಸ ತಂತ್ರಜ್ಞಾನಗಳು, ಹವಾಮಾನ ಬದಲಾವಣೆಯ ಕ್ರಮಗಳಲ್ಲಿ ಜಾಗತಿಕ ಮುನ್ನಡೆ ಸಾಧಿಸಲು ಪ್ರಯತ್ನಗಳನ್ನು ಮಾಡುತ್ತಿದ್ದೇವೆ; ಮತ್ತು ಜ್ಞಾನಾಧಾರಿತ ಸಮಾಜವಾಗಿ ಹೊರಹೊಮ್ಮುತ್ತಿದ್ದೇವೆ. ಭಾರತದ ಗಮನಾರ್ಹ ಆರ್ಥಿಕ ಪುನಶ್ಚೇತನ ಸ್ಥಿತಿಸ್ಥಾಪಕತ್ವವು ಅಂತರರಾಷ್ಟ್ರೀಯ ಮನ್ನಣೆಯನ್ನು ಗಳಿಸಿದೆ. ಪ್ರಗತಿ ಮತ್ತು ಅಭಿವೃದ್ಧಿಯ ಅನ್ವೇಷಣೆಯಲ್ಲಿ ಭಾರತವು ತನ್ನ ಅನುಭವಗಳನ್ನು ಹಂಚಿಕೊಳ್ಳಲು ಮತ್ತು ಸುರಿನಾಮ್ ಗೆ ಬೆಂಬಲ ನೀಡಲು  ಸಿದ್ಧವಾಗಿದೆ ಎಂದೂ  ಅವರು ಹೇಳಿದರು.

ಇದಕ್ಕೂ ಮುನ್ನ ರಾಷ್ಟ್ರಪತಿಗಳು ಲಲ್ಲಾ ರೂಖ್ ಮ್ಯೂಸಿಯಂ, ಆರ್ಯ ದೇವಕರ್ ಮಂದಿರ ಮತ್ತು ವಿಷ್ಣು ಮಂದಿರಕ್ಕೆ ಭೇಟಿ ನೀಡಿದರು.  ಅವರು ಮಹಾತ್ಮ ಗಾಂಧಿಯವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು ಮತ್ತು ಪಾರಮಾರಿಬೋದಲ್ಲಿ 'ಗೆವಾಲೆನ್ ಹೆಲ್ಡೆನ್ 1902' ಸ್ಮಾರಕದಲ್ಲಿ ತಮ್ಮ ಗೌರವ ಸಲ್ಲಿಸಿದರು.

ನಂತರ ಸಂಜೆ, ರಾಷ್ಟ್ರಪತಿ ಅವರು ಬೆಲ್ಗ್ರೇಡ್ ಗೆ  ತೆರಳಿದರು – ಇದು ಸುರಿನಾಮ್ ಮತ್ತು ಸೆರ್ಬಿಯಾಕ್ಕೆ ಅವರ ಅಧಿಕೃತ ಭೇಟಿಯ ಕೊನೆಯ ಹಂತ.

ರಾಷ್ಟ್ರಪತಿಯವರ ಭಾಷಣವನ್ನು ನೋಡಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ -

****


(Release ID: 1930527)