ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಸೇವಾ, ಸುಶಾಸನ್ ಮತ್ತು ಗರೀಬ್ ಕಲ್ಯಾಣ್ ಪದಗಳು ನರೇಂದ್ರ ಮೋದಿ ಸರ್ಕಾರದ ಒಂಬತ್ತು ವರ್ಷಗಳ ಹೆಗ್ಗುರುತುಗಳು ಎಂದು ಕೇಂದ್ರ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
65 ವರ್ಷಗಳಲ್ಲಿ ಸಾಧಿಸಲು ಸಾಧ್ಯವಾಗದುದನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಒಂಬತ್ತು ವರ್ಷಗಳಲ್ಲಿ ಸಾಧಿಸಿದೆ ಎಂದು ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ತ್ರಿಪುರಾದಲ್ಲಿ ಕೌಶಲ್ಯ ಉಪಕ್ರಮಗಳ ಪರಾಮರ್ಶೆ ನಡೆಸಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
Posted On:
05 JUN 2023 7:43PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಅವರ ಪೂರ್ವಭಾವಿ ನೀತಿಗಳಿಂದಾಗಿ ಕಳೆದ ಒಂಬತ್ತು ವರ್ಷಗಳಲ್ಲಿ ಭಾರತದ ಆರ್ಥಿಕತೆಯು ತಿರುವು ಪಡೆಯಲು ಸಾಧ್ಯವಾಗಿದೆ ಎಂದು ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಇಂದು ಹೇಳಿದರು.
"ಸೇವಾ, ಸುಶಾಸನ್ ಮತ್ತು ಗರೀಬ್ ಕಲ್ಯಾಣ್ ಎಂಬ ಮೂರು ಪದಗಳು ನರೇಂದ್ರ ಮೋದಿ ಸರ್ಕಾರದ ಒಂಬತ್ತು ವರ್ಷಗಳ ಪ್ರಯಾಣವನ್ನು ವ್ಯಾಖ್ಯಾನಿಸುತ್ತವೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2014 ರಲ್ಲಿ ಅಧಿಕಾರ ವಹಿಸಿಕೊಂಡಾಗ, ಆರ್ಥಿಕತೆಯು ಮಂದಗತಿಯಲ್ಲಿತ್ತು. ವ್ಯಾಪಕವಾದ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ ಮತ್ತು ಅಸಂಖ್ಯಾತ ಹಗರಣಗಳು ಇದ್ದವು. ಅವರು ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವುದು ಮಾತ್ರವಲ್ಲದೆ ನಾಗರಿಕರಲ್ಲಿ ಭರವಸೆ, ಹೆಮ್ಮೆ ಮತ್ತು ಸರ್ಕಾರದ ವಿಶ್ವಾಸವನ್ನು ತುಂಬುವ ಕಾರ್ಯವನ್ನು ಹೊಂದಿದ್ದರು. ಒಂಬತ್ತು ವರ್ಷಗಳ ನಂತರ, ಅವರು ಹೆಚ್ಚಿನ ಅವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸಾಧ್ಯವಾಗಿರುವುದು ಮಾತ್ರವಲ್ಲದೆ, ದೇಶವನ್ನು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಮುನ್ನಡೆಸಿದ್ದಾರೆ " ಎಂದು ತ್ರಿಪುರಾದ ಅಂಬಾಸ್ಸಾದಲ್ಲಿ ವ್ಯಾಪಾರಿ ಸಮ್ಮೇಳನವನ್ನುದ್ದೇಶಿಸಿ ಸಚಿವರು ಹೇಳಿದರು.
"65 ವರ್ಷಗಳಲ್ಲಿ ಸಾಧಿಸಲು ಸಾಧ್ಯವಾಗದ್ದನ್ನು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಅಡಿಯಲ್ಲಿ ಭಾರತವು ಒಂಬತ್ತು ವರ್ಷಗಳಲ್ಲಿ ಸಾಧಿಸಿದೆ. ಅಮೆರಿಕ ಮತ್ತು ಚೀನಾ ನಂತರ ಭಾರತವು ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ" ಎಂದು ಅವರು ಹೇಳಿದರು.
ನಂತರ ಲೋಕಸಭಾ ಸಂಸದೆ ರೆಬತಿ ತ್ರಿಪುರಾ ಅವರೊಂದಿಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶ್ರೀ ರಾಜೀವ್ ಚಂದ್ರಶೇಖರ್ ಅವರು, ನರೇಂದ್ರ ಮೋದಿ ಸರ್ಕಾರದ ಒಂಬತ್ತು ವರ್ಷಗಳ ಆಡಳಿತದ ಸಾಧನೆಗಳ ಬಗ್ಗೆ ಮಾತನಾಡಿದರು. ಯುಪಿಎ ಆಡಳಿತ ಮತ್ತು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಒಂಬತ್ತು ವರ್ಷಗಳ ಅಧಿಕಾರದ ನಡುವಿನ ಹೋಲಿಕೆಯನ್ನು ಪ್ರಸ್ತಾಪಿಸಿದ ಸಚಿವರು, " ಪ್ರಧಾನಿ ನರೇಂದ್ರ ಮೋದಿ ಜಿ ಭ್ರಷ್ಟಾಚಾರ, ಹಗರಣಗಳು, ದುರಾಡಳಿತ, ವಿರೋಧಾತ್ಮಕ ಒಕ್ಕೂಟ ಮತ್ತು ವಂಶಪಾರಂಪರ್ಯದ ರಾಜಕೀಯವನ್ನು 'ಸೇವಾ, ಸುಶಾಸನ್ ಮತ್ತು ಗರೀಬ್ ಕಲ್ಯಾಣ್ ' ರಾಜಕೀಯಕ್ಕೆ ಸ್ಥಳಾಂತರಿಸಿದ್ದಾರೆ,’’ ಎಂದರು.
ತ್ರಿಪುರಾಕ್ಕೆ ಮೂರು ದಿನಗಳ ಭೇಟಿಗಾಗಿ ಸಚಿವರು ಇಂದು ಬೆಳಗ್ಗೆ ಅಗರ್ತಲಾಗೆ ಆಗಮಿಸಿದರು, ಈ ಸಂದರ್ಭದಲ್ಲಿ ಅವರು ರಾಜ್ಯದಲ್ಲಿ ಕೈಗೊಳ್ಳಲಾಗುತ್ತಿರುವ ಕೌಶಲ್ಯ ಅವಕಾಶಗಳನ್ನು ಪರಿಶೀಲಿಸಲಿದ್ದಾರೆ.
ಇಂದು ವಿಶ್ವ ಪರಿಸರ ದಿನವಾದ್ದರಿಂದ, ಶ್ರೀ ರಾಜೀವ್ ಚಂದ್ರಶೇಖರ್ ಅವರು ಸಸಿಯನ್ನು ನೆಟ್ಟರು ಮತ್ತು ಪ್ರತಿ ದಿನವನ್ನು ವಿಶ್ವ ಪರಿಸರ ದಿನವಾಗಿ ಆಚರಿಸುವಂತೆ ಜನರಿಗೆ ಕರೆ ನೀಡಿದರು.
ಇದಕ್ಕೂ ಮುನ್ನ ಅವರು ಜಿಲ್ಲಾ ಮ್ಯಾಜಿಸ್ಟ್ರೇಟ್ ಧಲಾಯಿ ಡಾ.ಸಿದ್ಧಾರ್ಥ್ ಶಿವ ಜೈಸ್ವಾಲ್ ಅವರನ್ನು ಭೇಟಿ ಮಾಡಿ ಜಿಲ್ಲೆಯ ಸ್ವಸಹಾಯ ಗುಂಪುಗಳ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿದರು. ಸಾಮರ್ಥ್ಯ ವರ್ಧನೆ ಮತ್ತು ಮಾರುಕಟ್ಟೆ ಸಂಪರ್ಕಗಳಿಗೆ ಸಂಬಂಧಿಸಿದಂತೆ ಗುಂಪುಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಅವರು ಚರ್ಚಿಸಿದರು. ಯುವಕರಿಗೆ ಸ್ಥಳೀಯವಾಗಿ ಉದ್ಯೋಗ ಮತ್ತು ಉದ್ಯಮಶೀಲತೆಯನ್ನು ಸೃಷ್ಟಿಸಲು ಕೈಗೊಂಡ ಕೌಶಲ್ಯ ಉಪಕ್ರಮಗಳ ಬಗ್ಗೆ ಮತ್ತು ಅವರು ಎದುರಿಸುತ್ತಿರುವ ಸವಾಲುಗಳ ಬಗ್ಗೆಯೂ ಅವರು ಚರ್ಚಿಸಿದರು.
ಶ್ರೀ ರಾಜೀವ್ ಚಂದ್ರಶೇಖರ್ ಅವರು ಪಕ್ಷದ ನಾಯಕರಾದ ಶ್ರೀ ತಪಸ್ ಭಟ್ಟಾಚಾರ್ಯ ಮತ್ತು ಮಹಿಳಾ ಬಿಜೆಪಿ ಅಧ್ಯಕ್ಷೆ ಅಜಂತಾ ಭಟ್ಟಾಚಾರ್ಜಿ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತನಾಡಿದರು.
ಸಚಿವರು ನಾಳೆ ಕೃಷ್ಣಾಪುರಕ್ಕೆ ಭೇಟಿ ನೀಡಲಿದ್ದು, ಜನಜತಿ ಫಲಾನುಭವಿ ಸಮ್ಮೇಳದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ಸಚಿವರಾದ ನಂತರ ಶ್ರೀ ರಾಜೀವ್ ಚಂದ್ರಶೇಖರ್ ಅವರು ತ್ರಿಪುರಾಕ್ಕೆ ನೀಡುತ್ತಿರುವ ಎರಡನೇ ಅಧಿಕೃತ ಭೇಟಿ ಇದಾಗಿದೆ. ಅವರು ಕಳೆದ ಬಾರಿ ಆಗಸ್ಟ್ 2022 ರಲ್ಲಿ ಇಲ್ಲಿಗೆ ಬಂದಿದ್ದರು ಮತ್ತು ತಿರಂಗಾ ರ್ಯಲ್ಲಿ ಭಾಗವಹಿಸಿದ್ದರು.
****
(Release ID: 1930238)
Visitor Counter : 121