ಪ್ರಧಾನ ಮಂತ್ರಿಯವರ ಕಛೇರಿ

ಕಡ್ವಾ ಪಾಟೀದಾರ್ ಸಮಾಜದ 100ನೇ ವಾರ್ಷಿಕೋತ್ಸವ ಉದ್ದೇಶಿಸಿ ಪ್ರಧಾನಿ ಭಾಷಣ 

"ಸನಾತನ ಕೇವಲ ಒಂದು ಪದವಲ್ಲ, ಅದು ಸದಾ ಹೊಸದು, ಸದಾ ಬದಲಾಗುತ್ತದೆ. ಸನಾತನವು ಗತ ಕಾಲದಿಂದ ತನ್ನನ್ನು ತಾನು ಸುಧಾರಿಸಿಕೊಳ್ಳುವ ಅಂತರ್ಗತ ಬಯಕೆಯನ್ನು ಹೊಂದಿದೆ ಹಾಗಾಗಿ ಅದು ಶಾಶ್ವತ ಮತ್ತು ಅಮರವಾದದ್ದು"
"ಯಾವುದೇ ರಾಷ್ಟ್ರದ ಪ್ರಯಾಣವು ಅದರ ಸಮಾಜದ ಪ್ರಯಾಣದಲ್ಲಿ ಪ್ರತಿಫಲಿಸುತ್ತದೆ"

Posted On: 11 MAY 2023 1:00PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಸಂದೇಶದ ಮೂಲಕ ಕಡ್ವಾ ಪಾಟೀದಾರ್ ಸಮಾಜದ 100ನೇ ವಾರ್ಷಿಕೋತ್ಸವ ಉದ್ದೇಶಿಸಿ ಮಾತನಾಡಿದರು. 
ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ʻಸನಾತನಿ ಶತಾಬ್ದಿ ಮಹೋತ್ಸವʼದ ಅಂಗವಾಗಿ ಶುಭ ಕೋರಿದರು. ಜಗದ್ಗುರು ಶಂಕರಾಚಾರ್ಯ ಸ್ವಾಮಿ ಸದಾನಂದ ಸರಸ್ವತಿಗಳ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸುಯೋಗ ಸಿಕ್ಕಿದ್ದು ಇದೇ ಮೊದಲು ಎಂದು ಹೇಳಿದರು.  


ಕಡ್ವಾ ಪಾಟೀದಾರ್ ಸಮಾಜದ 100 ವರ್ಷಗಳ ಸಮಾಜ ಸೇವೆಯು, ಯುವ ಘಟಕದ 50ನೇ ವಾರ್ಷಿಕೋತ್ಸವ ಮತ್ತು ಮಹಿಳಾ ಘಟಕದ 25ನೇ ವರ್ಷದ ಸಂದರ್ಭದಲ್ಲೇ ಸಂಧಿಸಿರುವುದು ಕಾಕತಾಳೀಯ ಎಂದು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ಸಮಾಜದ ಯುವಕರು ಮತ್ತು ಮಹಿಳೆಯರು ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡಾಗ ಯಶಸ್ಸು ಮತ್ತು ಸಮೃದ್ಧಿ ಖಚಿತ ಎಂದರು. ‌ʻಶ್ರೀ ಅಖಿಲ ಭಾರತೀಯ ಕಛ್ ಕಡ್ವಾ ಪಾಟೀದಾರ್ ಸಮಾಜʼದ ಯುವ ಮತ್ತು ಮಹಿಳಾ ವಿಭಾಗದ ನಿಷ್ಠೆಯ ಬಗ್ಗೆ ಗಮನ ಸೆಳೆದ ಪ್ರಧಾನಮಂತ್ರಿಯವರು, ʻಸನಾತನಿ ಶತಾಬ್ದಿ ಮಹೋತ್ಸವʼದ ಕುಟುಂಬದ ಭಾಗವಾಗಿ ತಮ್ಮನ್ನು ಸೇರಿಸಿದ್ದಕ್ಕಾಗಿ ಕಡ್ವಾ ಪಾಟೀದಾರ್ ಸಮಾಜಕ್ಕೆ ಕೃತಜ್ಞತೆ ಸಲ್ಲಿಸಿದರು. "ಸನಾತನ ಎಂಬುದು ಕೇವಲ ಒಂದು ಪದವಲ್ಲ, ಅದು ಸದಾ ಹೊಸದು, ಸದಾ ಬದಲಾಗುತ್ತದೆ. ಸನಾತನವು ಗತಕಾಲದಿಂದ ತನ್ನನ್ನು ತಾನು ಉತ್ತಮಗೊಳಿಸಿಕೊಳ್ಳುವ ಅಂತರ್ಗತ ಬಯಕೆಯನ್ನು ಹೊಂದಿದೆ. ಆದ್ದರಿಂದ ಅದು ಶಾಶ್ವತ ಮತ್ತು ಅಮರವಾದದ್ದು,ʼʼ ಎಂದು ಪ್ರಧಾನಿ ಹೇಳಿದರು. 


"ಯಾವುದೇ ರಾಷ್ಟ್ರದ ಪ್ರಯಾಣವು ಅದರ ಸಮಾಜದ ಪ್ರಯಾಣದಲ್ಲಿ ಪ್ರತಿಫಲಿಸುತ್ತದೆ" ಎಂದು ಪ್ರಧಾನಮಂತ್ರಿಯವರು ಹೇಳಿದರು. ಪಾಟೀದಾರ್ ಸಮಾಜದ ನೂರು ವರ್ಷಗಳ ಇತಿಹಾಸ ಮತ್ತು ʻಶ್ರೀ ಅಖಿಲ ಭಾರತೀಯ ಕಛ್‌ ಕಡ್ವಾ ಸಮಾಜʼದ ನೂರು ವರ್ಷಗಳ ಪ್ರಯಾಣವು ಭವಿಷ್ಯದ ದೃಷ್ಟಿಕೋನದೊಂದಿಗೆ ಭಾರತ ಮತ್ತು ಗುಜರಾತ್ ಅನ್ನು ಅರ್ಥಮಾಡಿಕೊಳ್ಳುವ ಮಾಧ್ಯಮವಾಗಿದೆ ಎಂದು ಅವರು ಒತ್ತಿ ಹೇಳಿದರು. ನೂರಾರು ವರ್ಷಗಳಿಂದ ಭಾರತದ ಸಮಾಜದ ಮೇಲೆ ವಿದೇಶಿ ಆಕ್ರಮಣಕಾರರು ನಡೆಸಿದ ದೌರ್ಜನ್ಯಗಳ ಬಗ್ಗೆ ಗಮನಸೆಳೆದ ಪ್ರಧಾನಮಂತ್ರಿಯವರು, ಈ ನೆಲದ ಪೂರ್ವಜರು ತಮ್ಮ ಗುರುತನ್ನು ಅಳಿಸಿಹಾಕಲು ಮತ್ತು ಅವರ ನಂಬಿಕೆಯನ್ನು ಛಿದ್ರಗೊಳಿಸಲು ಬಿಡಲಿಲ್ಲ ಎಂದರು. "ಈ ಯಶಸ್ವಿ ಸಮಾಜದ ಇಂದಿನ ಪೀಳಿಗೆಯಲ್ಲಿ ಶತಮಾನಗಳ ಹಿಂದಿನ ತ್ಯಾಗದ ಪರಿಣಾಮವನ್ನು ನಾವು ನೋಡುತ್ತಿದ್ದೇವೆ," ಎಂದು ಹೇಳಿದ ಪ್ರಧಾನಮಂತ್ರಿಯವರು, ಕಛ್‌ ಕಡ್ವಾ ಪಾಟೀದಾರ್ ಸಮುದಾಯವು ಮರಮುಟ್ಟು, ಪ್ಲೈವುಡ್, ಹಾರ್ಡ್ ವೇರ್, ಅಮೃತಶಿಲೆ, ಕಟ್ಟಡ ಸಾಮಗ್ರಿಗಳಂತಹ ಕ್ಷೇತ್ರಗಳಲ್ಲಿ ತಮ್ಮ ಶ್ರಮ ಮತ್ತು ಸಾಮರ್ಥ್ಯದೊಂದಿಗೆ ಮುನ್ನಡೆಯುತ್ತಿದೆ ಎಂದು ಹೇಳಿದರು. ಸಂಪ್ರದಾಯಗಳ ಬಗ್ಗೆ ಗೌರವ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದ ಅವರು, ಕಡ್ವಾ ಸಮಾಜವು ತನ್ನ ವರ್ತಮಾನವನ್ನು ನಿರ್ಮಿಸಿದೆ ಮತ್ತು ಅದರ ಭವಿಷ್ಯಕ್ಕೆ ಅಡಿಪಾಯ ಹಾಕಿದೆ ಎಂದು ಹೇಳಿದರು. 


ಪ್ರಧಾನಮಂತ್ರಿಯವರು, ತಮ್ಮ ರಾಜಕೀಯ ಜೀವನ ಮತ್ತು ಸಮಾಜದೊಂದಿಗಿನ ಒಡನಾಟದ ಬಗ್ಗೆ ಉಲ್ಲೇಖಿಸಿದರು. ತಾವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಕಡ್ವಾ ಪಾಟೀದಾರ್ ಸಮಾಜದೊಂದಿಗೆ ಹಲವಾರು ವಿಷಯಗಳಲ್ಲಿ ಕೆಲಸ ಮಾಡಿದ್ದನ್ನು ಸ್ಮರಿಸಿದರು. ಕಛ್ ಭೂಕಂಪವನ್ನು ಉಲ್ಲೇಖಿಸಿದ ಅವರು, ಪರಿಹಾರ ಮತ್ತು ಪುನರ್ನಿರ್ಮಾಣ ಪ್ರಯತ್ನಗಳಲ್ಲಿ ತೊಡಗಿದ್ದಕ್ಕಾಗಿ ಸಮುದಾಯದ ಶಕ್ತಿಯನ್ನು ಶ್ಲಾಘಿಸಿದರು. ಇದು ಸದಾ ಆತ್ಮವಿಶ್ವಾಸವನ್ನು ನೀಡಿತು ಎಂದು ಹೇಳಿದರು. ನೀರಿನ ಕೊರತೆ, ಹಸಿವು, ಪ್ರಾಣಿಗಳ ಸಾವು, ವಲಸೆ ಮತ್ತು ಗೋಳಾಟಗಳೇ ಹೆಗ್ಗುರುತಾಗಿ ಹೊಂದಿದ್ದ ಕಛ್‌ ಅನ್ನು ದೇಶದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದೆಂದು ಪರಿಗಣಿಸಲಾಗಿತ್ತು ಎಂದು ಹೇಳಿದರು. 


"ಅನೇಕ ವರ್ಷಗಳಲ್ಲಿ, ನಾವು ಒಟ್ಟಾಗಿ ಕಛ್ ಅನ್ನು ಪುನರುಜ್ಜೀವಗೊಳಿಸಿದ್ದೇವೆ" ಎಂದು ಹೇಳಿದ ಪ್ರಧಾನಮಂತ್ರಿಯವರು, ಕಛ್‌ನ ನೀರಿನ ಬಿಕ್ಕಟ್ಟನ್ನು ಪರಿಹರಿಸಲು ಮತ್ತು ಅದನ್ನು ವಿಶ್ವದ ಬೃಹತ್ ಪ್ರವಾಸಿ ತಾಣವಾಗಿ ಪರಿವರ್ತಿಸಲು ಮಾಡಿದ ಕಾರ್ಯಗಳನ್ನು ಉಲ್ಲೇಖಿಸಿದರು. 'ಸಬ್ ಕಾ ಪ್ರಯಾಸ್'ಗೆ ಇದು ಉತ್ತಮ ಉದಾಹರಣೆಯಾಗಿದೆ ಎಂದರು. ಕಛ್ ಇಂದು ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜಿಲ್ಲೆಗಳಲ್ಲಿ ಒಂದಾಗಿದೆ ಎಂದು ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ಸುಧಾರಿತ ಸಂಪರ್ಕ, ಬೃಹತ್ ಕೈಗಾರಿಕೆಗಳು ಮತ್ತು ಈ ಪ್ರದೇಶದಿಂದ ಕೃಷಿ ರಫ್ತಿನ ಉದಾಹರಣೆಗಳನ್ನು ನೀಡಿದರು. 


ʻಶ್ರೀ ಅಖಿಲ ಭಾರತೀಯ ಕಛ್ ಕಡ್ವಾ ಪಾಟೀದಾರ್ ಸಮಾಜʼ ಹಾಗೂ ನಾರಾಯಣ್‌ ರಾಮ್‌ಜಿ ಲಿಂಬನಿ ಅವರಿಂದ ಸ್ಫೂರ್ತಿ ಪಡೆದು ಮುನ್ನಡೆಯುತ್ತಿರುವ ಜನರೊಂದಿಗಿನ ವೈಯಕ್ತಿಕ ಸಂಪರ್ಕಗಳ ಬಗ್ಗೆ ಪ್ರಧಾನಮಂತ್ರಿಯವರು ಬೆಳಕು ಚೆಲ್ಲಿದರು. ಕಛ್‌ ಕಡ್ವಾ ಸಮಾಜದ ಕಾರ್ಯಗಳು ಮತ್ತು ಅಭಿಯಾನಗಳ ಬಗ್ಗೆ ತಾವು ಸದಾ ತಿಳಿದುಕೊಳ್ಳುವುದಾಗಿ ಹೇಳಿದರು. ಕೊರೊನಾ ಅವಧಿಯಲ್ಲಿ ಮಾಡಿದ ಶ್ಲಾಘನೀಯ ಕಾರ್ಯಗಳಿಗಾಗಿ ಕಛ್‌ ಕಡ್ವಾ ಸಮಾಜವನ್ನು ಶ್ಲಾಘಿಸಿದರು. ಕಡ್ವಾ ಸಮಾಜವು ಮುಂದಿನ 25 ವರ್ಷಗಳ ಅವಧಿಯಲ್ಲಿ ಸಾಧಿಸಲು ದೂರದೃಷ್ಟಿ ಮತ್ತು ನಿರ್ಣಯಗಳನ್ನು ಮುಂದಿಟ್ಟಿದ್ದು, ದೇಶವು 100ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುವಾಗಲೇ ಇವು ಸಹ ಸಾಕಾರಗೊಳ್ಳಲಿವೆ ಎಂದು ಶ್ರೀ ಮೋದಿ ಸಂತೋಷ ವ್ಯಕ್ತಪಡಿಸಿದರು. ಅದು ಸಾಮಾಜಿಕ ಸಾಮರಸ್ಯವಾಗಿರಲಿ, ಪರಿಸರವಾಗಿರಲಿ ಮತ್ತು ನೈಸರ್ಗಿಕ ಕೃಷಿ ಆಗಿರಲಿ ಕಛ್‌ ಕಡ್ವಾ ಸಮಾಜವು ಕೈಗೊಂಡ ನಿರ್ಣಯಗಳೆಲ್ಲವೂ ದೇಶದ ಅಮೃತ ಸಂಕಲ್ಪಕ್ಕೆ ಸಂಬಂಧಿಸಿವೆ ಎಂದು ಪ್ರಧಾನಿ ಒತ್ತಿ ಹೇಳಿದರು. ʻಶ್ರೀ ಅಖಿಲ ಭಾರತೀಯ ಕಛ್‌ ಕಡ್ವಾ ಸಮಾಜʼದ ಪ್ರಯತ್ನಗಳು ಈ ದಿಕ್ಕಿನಲ್ಲಿ ದೇಶದ ನಿರ್ಣಯಗಳಿಗೆ ಬಲ ನೀಡುತ್ತವೆ ಮತ್ತು ಅವುಗಳನ್ನು ಯಶಸ್ಸಿನತ್ತ ಕೊಂಡೊಯ್ಯುತ್ತವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುವ ಮೂಲಕ ಪ್ರಧಾನಮಂತ್ರಿಯವರು ಭಾಷಣವನ್ನು ಮುಕ್ತಾಯಗೊಳಿಸಿದರು. 
 

Sharing my remarks at 100th anniversary of Kadwa Patidar Samaj in Gujarat. https://t.co/C1BJhzeR4P

— Narendra Modi (@narendramodi) May 11, 2023

********



(Release ID: 1923674) Visitor Counter : 82