ಪ್ರಧಾನ ಮಂತ್ರಿಯವರ ಕಛೇರಿ

ಅಸ್ಸಾಂನ ಗುವಾಹಟಿಯ ಶ್ರೀಮಂತ ಶಂಕರದೇವ್ ಕಲಾಕ್ಷೇತ್ರದಲ್ಲಿ ಗುವಾಹಟಿ ಹೈಕೋರ್ಟ್ ನ ಅಮೃತ ಮಹೋತ್ಸವ ಆಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿ 


ಅಸ್ಸಾಂ ಪೊಲೀಸರು ವಿನ್ಯಾಸಗೊಳಿಸಿದ 'ಅಸ್ಸಾಂ ಕಾಪ್' ಮೊಬೈಲ್ ಆಪ್ ಗೆ ಚಾಲನೆ

"ಗುವಾಹಟಿ ಹೈಕೋರ್ಟ್ ತನ್ನದೇ ಆದ ಪರಂಪರೆ ಮತ್ತು ಅಸ್ಮಿತೆಯನ್ನು ಹೊಂದಿದೆ"

"ಪ್ರಜಾಪ್ರಭುತ್ವದ ಆಧಾರಸ್ತಂಭವಾದ ನ್ಯಾಯಾಂಗವು 21 ನೇ ಶತಮಾನದಲ್ಲಿ ಭಾರತೀಯರ ಮಿತಿಯಿಲ್ಲದ ಆಕಾಂಕ್ಷೆಗಳನ್ನು ಪೂರೈಸುವಲ್ಲಿ ಬಲವಾದ ಮತ್ತು ಸೂಕ್ಷ್ಮ ಪಾತ್ರವನ್ನು ಹೊಂದಿದೆ".

"ನಾವು ಸಾವಿರಾರು ಪುರಾತನ ಕಾನೂನುಗಳನ್ನು ರದ್ದುಪಡಿಸಿದ್ದು, ಅನುಸರಣೆಗಳನ್ನು ತಗ್ಗಿಸಿದ್ದೇವೆ"

"ಅದು ಸರ್ಕಾರವಾಗಿರಲಿ ಅಥವಾ ನ್ಯಾಯಾಂಗವಾಗಿರಲಿ, ಪ್ರತಿಯೊಂದು ಸಂಸ್ಥೆಯ ಪಾತ್ರ ಮತ್ತು ಅದರ ಸಾಂವಿಧಾನಿಕ ಬಾಧ್ಯತೆಯು ಸಾಮಾನ್ಯ ನಾಗರಿಕರ ಸುಗಮ ಜೀವನಕ್ಕೆ ಸಂಬಂಧಿಸಿರುತ್ತದೆ"

"ದೇಶದಲ್ಲಿ ನ್ಯಾಯ ವಿತರಣಾ ವ್ಯವಸ್ಥೆಯನ್ನು ಆಧುನೀಕರಿಸಲು ತಂತ್ರಜ್ಞಾನಕ್ಕೆ ಅಪರಿಮಿತ ಅವಕಾಶವಿದೆ"

"ಎಐ ಮೂಲಕ ಸಾಮಾನ್ಯ ನಾಗರಿಕರಿಗೆ ಸುಗಮ ನ್ಯಾಯವನ್ನು ಸುಧಾರಿಸುವ ಪ್ರಯತ್ನಗಳನ್ನು ಹೆಚ್ಚಿಸಲು ನಾವು ಯತ್ನಿಸಬೇಕು"

Posted On: 14 APR 2023 4:09PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಸ್ಸಾಂನ ಗುವಾಹಟಿಯ ಶ್ರೀಮಂತ ಶಂಕರದೇವ್ ಕಲಾಕ್ಷೇತ್ರದಲ್ಲಿ ಗುವಾಹಟಿ ಹೈಕೋರ್ಟ್ ನ ಅಮೃತ ಮಹೋತ್ಸವ ಆಚರಣೆಯ ಕಾರ್ಯಕ್ರಮವನ್ನುದ್ದೇಶಿಸಿ ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಅಸ್ಸಾಂ ಪೊಲೀಸರು ವಿನ್ಯಾಸಗೊಳಿಸಿದ 'ಅಸ್ಸಾಂ ಕಾಪ್' ಮೊಬೈಲ್ ಅಪ್ಲಿಕೇಷನ್ ಗೆ ಚಾಲನೆ ನೀಡಿದರು. ಅಪರಾಧ ಮತ್ತು ಕ್ರಿಮಿನಲ್ ಜಾಲ ಪತ್ತೆ ವ್ಯವಸ್ಥೆ (ಸಿಸಿಟಿಎನ್ಎಸ್) ಮತ್ತು ವಾಹನ್ ರಾಷ್ಟ್ರೀಯ ನೋಂದಣಿ ದತ್ತಾಂಶದಿಂದ ಆರೋಪಿಗಳು ಮತ್ತು ವಾಹನ ಶೋಧಕ್ಕೆ ಈ ಆಪ್ ಅನುಕೂಲ ಮಾಡಿಕೊಡುತ್ತದೆ.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಗುವಾಹಟಿ ಹೈಕೋರ್ಟ್ ನ ಅಮೃತ ಮಹೋತ್ಸವ  ಆಚರಣೆಯ ಭಾಗವಾಗಲು ಅವಕಾಶ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ದೇಶವು ತನ್ನ 75 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವ ಸಮಯದಲ್ಲಿ ಗುವಾಹಟಿ ಹೈಕೋರ್ಟ್ ತನ್ನ ಅಸ್ತಿತ್ವದ 75 ವರ್ಷಗಳನ್ನು ಪೂರೈಸುತ್ತಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಇದು ಅನುಭವವನ್ನು ಉಳಿಸಿಕೊಳ್ಳುವ ಮತ್ತು ಹೊಸ ಗುರಿಗಳನ್ನು ಸಾಧಿಸಲು ಹೊಣೆಗಾರಿಕೆಯ ಮತ್ತು ಜವಾಬ್ದಾರಿಯುತ ಬದಲಾವಣೆಗಳನ್ನು ತರಲು ಮುಂದಿನ ಹೆಜ್ಜೆ ಇಡಬೇಕಾದ ಸಮಯವಾಗಿದೆ ಎಂದು ಹೇಳಿದರು. "ಗುವಾಹಟಿ ಉಚ್ಚ ನ್ಯಾಯಾಲಯವು ತನ್ನದೇ ಆದ ಪರಂಪರೆ ಮತ್ತು ಅಸ್ಮಿತೆಯನ್ನು ಹೊಂದಿದೆ" ಎಂದ ಪ್ರಧಾನಮಂತ್ರಿಯವರು, ನೆರೆಯ ರಾಜ್ಯಗಳಾದ ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ ಗಳನ್ನು ಒಳಗೊಂಡಿರುವ ಗುವಾಹಟಿ ಉಚ್ಚ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯು ದೊಡ್ಡದಾಗಿದೆ ಎಂದರು. 2013 ರವರೆಗೆ ಗುವಾಹಟಿ ಹೈಕೋರ್ಟ್ ವ್ಯಾಪ್ತಿಯಲ್ಲಿ ಏಳು ರಾಜ್ಯಗಳು ಇದ್ದವು, ಅದಕ್ಕೆ ಸಂಬಂಧಿಸಿದ ಇಡೀ ಈಶಾನ್ಯದ ಶ್ರೀಮಂತ ಇತಿಹಾಸ ಮತ್ತು ಪ್ರಜಾಪ್ರಭುತ್ವ ಪರಂಪರೆಯನ್ನು ಅದು ಒಳಗೊಂಡಿತ್ತು ಎಂದು ಅವರು ಒತ್ತಿ ಹೇಳಿದರು. ಈ ಮಹತ್ವದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಅಸ್ಸಾಂ ರಾಜ್ಯವನ್ನು ಮತ್ತು ಇಡೀ ಈಶಾನ್ಯ ರಾಜ್ಯಗಳನ್ನು, ವಿಶೇಷವಾಗಿ ಕಾನೂನು ಸಮುದಾಯವನ್ನು ಅಭಿನಂದಿಸಿದರು. ಇಂದು ಬಾಬಾ ಸಾಹೇಬ್ ಅವರ ಜಯಂತಿ ಎಂದು ಅದರ ಮಹತ್ವವನ್ನು ತಿಳಿಸಿದ ಪ್ರಧಾನಮಂತ್ರಿಯವರು, ಡಾ. ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸಿದರು. ಸಮಾನತೆ ಮತ್ತು ಒಗ್ಗಟ್ಟಿನ ಸಾಂವಿಧಾನಿಕ ಮೌಲ್ಯಗಳು ಆಧುನಿಕ ಭಾರತದ ಅಡಿಪಾಯವಾಗಿದೆ ಎಂದು ಅವರು ಹೇಳಿದರು.

ಕಳೆದ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲಿಂದ ಭಾರತದ ಮಹತ್ವಾಕಾಂಕ್ಷೆಯ ಸಮಾಜದ ಬಗ್ಗೆ ತಾವು ನೀಡಿದ ವಿಸ್ತೃತ ವಿವರಣೆಯನ್ನು ಪ್ರಧಾನಮಂತ್ರಿ ಸ್ಮರಿಸಿದರು. 21 ನೇ ಶತಮಾನದಲ್ಲಿ ಭಾರತೀಯ ನಾಗರಿಕರ ಆಕಾಂಕ್ಷೆಗಳು ಅಪರಿಮಿತವಾಗಿವೆ ಮತ್ತು ಪ್ರಜಾಪ್ರಭುತ್ವದ ಆಧಾರಸ್ತಂಭವಾದ ನ್ಯಾಯಾಂಗವು ಈ ಆಕಾಂಕ್ಷೆಗಳನ್ನು ಪೂರೈಸುವಲ್ಲಿ ಬಲವಾದ ಮತ್ತು ಸೂಕ್ಷ್ಮ ಪಾತ್ರವನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ಹೇಳಿದರು. ನಾವು ಬಲಿಷ್ಠ, ಚೈತನ್ಯದಾಯಕ ಮತ್ತು ಆಧುನಿಕ ಕಾನೂನು ವ್ಯವಸ್ಥೆಯನ್ನು ನಿರ್ಮಿಸಬೇಕೆಂದು ಸಂವಿಧಾನವು ನಿರೀಕ್ಷಿಸುತ್ತದೆ ಎಂದರು. ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗದ ಸಂಘಟಿತ ಜವಾಬ್ದಾರಿಯನ್ನು ಒತ್ತಿಹೇಳಿದ ಪ್ರಧಾನಮಂತ್ರಿಯವರು, ಹಳೆಯ ಕಾನೂನುಗಳ ರದ್ದತಿಯ ಉದಾಹರಣೆಯನ್ನು ನೀಡಿದರು. "ನಾವು ಸಾವಿರಾರು ಪುರಾತನ ಕಾನೂನುಗಳನ್ನು ರದ್ದುಪಡಿಸಿದ್ದೇವೆ, ಅನುಸರಣೆಯನ್ನು ತಗ್ಗಿಸಿದ್ದೇವೆ" ಎಂದು ಅವರು ಹೇಳಿದರು. ಅಂತಹ ಸುಮಾರು 2000 ಕಾನೂನುಗಳು ಮತ್ತು 40 ಸಾವಿರಕ್ಕೂ ಹೆಚ್ಚು ಅನುಸರಣೆಗಳನ್ನು ನಿಲ್ಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಇದರ ಜೊತೆಗೆ ವ್ಯಾವಹಾರಿಕವಾದ ಅನೇಕ ನಿಬಂಧನೆಗಳನ್ನು ಕ್ರಿಮಿನಲ್ ಮುಕ್ತಗೊಳಿಸುವುದರೊಂದಿಗೆ ನ್ಯಾಯಾಲಯಗಳಲ್ಲಿ ಪ್ರಕರಣಗಳ ಸಂಖ್ಯೆಯನ್ನು ತಗ್ಗಿಸಲಾಗಿದೆ ಎಂದರು.

"ಅದು ಸರ್ಕಾರವಾಗಿರಲಿ ಅಥವಾ ನ್ಯಾಯಾಂಗವಾಗಿರಲಿ, ಪ್ರತಿಯೊಂದು ಸಂಸ್ಥೆಯ ಪಾತ್ರ ಮತ್ತು ಅದರ ಸಾಂವಿಧಾನಿಕ ಬಾಧ್ಯತೆಯು ಸಾಮಾನ್ಯ ನಾಗರಿಕರ ಸುಗಮ ಜೀವನಕ್ಕೆ ಸಂಬಂಧಿಸಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಸುಗಮ ಜೀವನವನ್ನು ಸಾಧಿಸುವಲ್ಲಿ ತಂತ್ರಜ್ಞಾನವು ಪ್ರಬಲ ಸಾಧನವಾಗಿ ಹೊರಹೊಮ್ಮಿದೆ ಎಂಬುದನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಸಾಧ್ಯವಿರುವ ಪ್ರತಿಯೊಂದು ಕ್ಷೇತ್ರದಲ್ಲೂ ತಂತ್ರಜ್ಞಾನದ ಸಂಪೂರ್ಣ ಬಳಕೆಯನ್ನು ಸರ್ಕಾರ ಖಾತ್ರಿಪಡಿಸುತ್ತಿದೆ ಎಂದರು. ಡಿಬಿಟಿ, ಆಧಾರ್ ಮತ್ತು ಡಿಜಿಟಲ್ ಇಂಡಿಯಾ ಅಭಿಯಾನದ ಉದಾಹರಣೆಗಳನ್ನು ನೀಡಿದ ಪ್ರಧಾನಮಂತ್ರಿಯವರು, ಪ್ರತಿಯೊಂದು ಯೋಜನೆಯೂ ಬಡವರ ಹಕ್ಕುಗಳನ್ನು ಖಾತ್ರಿಪಡಿಸುವ ಮಾಧ್ಯಮವಾಗಿ ಮಾರ್ಪಟ್ಟಿದೆ ಎಂದರು. ಪಿ.ಎಂ. ಸ್ವಾಮಿತ್ವ ಯೋಜನೆಯ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಆಸ್ತಿ ಹಕ್ಕುಗಳ ಸಮಸ್ಯೆಯನ್ನು ನಿಭಾಯಿಸುವಲ್ಲಿ ಭಾರತ ಭಾರಿ ಮುನ್ನಡೆ ಸಾಧಿಸಿದೆ, ಇದು ದೇಶದ ಕಾನೂನು ವ್ಯವಸ್ಥೆಗೆ ಹೊರೆಯಾಗಿತ್ತು ಎಂದರು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಸಹ ಅಸ್ಪಷ್ಟ ಆಸ್ತಿ ಹಕ್ಕುಗಳ ಸಮಸ್ಯೆಯನ್ನು ಎದುರಿಸುತ್ತಿವೆ ಎಂದು ಅವರು ಗಮನಸೆಳೆದರು. ದೇಶದ 1 ಲಕ್ಷಕ್ಕೂ ಹೆಚ್ಚು ಹಳ್ಳಿಗಳ ಡ್ರೋನ್ ಮ್ಯಾಪಿಂಗ್ ಮತ್ತು ಲಕ್ಷಾಂತರ ನಾಗರಿಕರಿಗೆ ಆಸ್ತಿ ಕಾರ್ಡ್ ವಿತರಣೆಯನ್ನು ಈಗಾಗಲೇ ಮಾಡಲಾಗಿದೆ, ಇದು ಆಸ್ತಿ ಸಂಬಂಧಿತ ಪ್ರಕರಣಗಳ ಇಳಿಕೆಗೆ ಕಾರಣವಾಗುತ್ತದೆ ಮತ್ತು ನಾಗರಿಕರ ಜೀವನವನ್ನು ಸುಗಮಗೊಳಿಸುತ್ತದೆ ಎಂದು ಅವರು ಮಾಹಿತಿ ನೀಡಿದರು.

ದೇಶದಲ್ಲಿ ನ್ಯಾಯ ದಾನ ವ್ಯವಸ್ಥೆಯನ್ನು ಆಧುನೀಕರಿಸಲು ತಂತ್ರಜ್ಞಾನಕ್ಕೆ ಅಪರಿಮಿತ ಅವಕಾಶವಿದೆ ಎಂದು ಪ್ರಧಾನಮಂತ್ರಿ ಅಭಿಪ್ರಾಯಪಟ್ಟರು. ಸರ್ವೋಚ್ಚ ನ್ಯಾಯಾಲಯದ ಇ-ಸಮಿತಿಯ ಕಾರ್ಯವನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಈ ವರ್ಷದ ಬಜೆಟ್ ನಲ್ಲಿ ಘೋಷಿಸಿದಂತೆ ಇ-ಕೋರ್ಟ್ ಕಾರ್ಯಾಚರಣೆಯ 3ನೇ ಹಂತದ ಬಗ್ಗೆ ಸಭಿಕರಿಗೆ ತಿಳಿಸಿದರು. ದಕ್ಷತೆಯನ್ನು ತರಲು ನ್ಯಾಯಾಂಗ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸುವ ಜಾಗತಿಕ ಪ್ರಯತ್ನಗಳನ್ನು ಅವರು ಉಲ್ಲೇಖಿಸಿದರು. "ಕೃತಕ ಬುದ್ಧಿಮತ್ತೆ (ಎಐ) ಮೂಲಕ ಸಾಮಾನ್ಯ ನಾಗರಿಕರಿಗೆ ನ್ಯಾಯದ ಸುಲಭತೆಯನ್ನು ಸುಧಾರಿಸುವ ಪ್ರಯತ್ನಗಳನ್ನು ಹೆಚ್ಚಿಸಲು ನಾವು ಪ್ರಯತ್ನಿಸಬೇಕು" ಎಂದು ಪ್ರಧಾನಮಂತ್ರಿ ಹೇಳಿದರು.

ಪರ್ಯಾಯ ವಿವಾದ ಇತ್ಯರ್ಥ ವ್ಯವಸ್ಥೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಈಶಾನ್ಯದ ಶ್ರೀಮಂತ ಸ್ಥಳೀಯ ಸಾಂಪ್ರದಾಯಿಕ ಪರ್ಯಾಯ ವಿವಾದ ಇತ್ಯರ್ಥ ಕಾರ್ಯವಿಧಾನದ ಬಗ್ಗೆಯೂ ತಿಳಿಸಿದರು. ಸಾಂಪ್ರದಾಯಿಕ ಕಾನೂನುಗಳ ಬಗ್ಗೆ ಹೈಕೋರ್ಟ್ 6 ಪುಸ್ತಕಗಳನ್ನು ಪ್ರಕಟಿಸಿರುವುದನ್ನು ಅವರು ಶ್ಲಾಘಿಸಿದರು. ಈ ಸಂಪ್ರದಾಯಗಳನ್ನು ಕಾನೂನು ಶಾಲೆಗಳಲ್ಲಿ ಕಲಿಸಬೇಕು ಎಂದು ಅವರು ಮನವಿ ಮಾಡಿದರು.

ದೇಶದ ಕಾನೂನುಗಳ ಬಗ್ಗೆ ನಾಗರಿಕರಲ್ಲಿ ಸರಿಯಾದ ಜ್ಞಾನ ಮತ್ತು ತಿಳಿವಳಿಕೆ ಇರುವುದು ನ್ಯಾಯದ ಸುಲಭತೆಯಲ್ಲಿನ ನಿರ್ಣಾಯಕ ಭಾಗವಾಗಿದೆ, ಏಕೆಂದರೆ ಇದು ದೇಶ ಮತ್ತು ಅದರ ವ್ಯವಸ್ಥೆಗಳಲ್ಲಿ ನಾಗರಿಕರ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಎಲ್ಲ ಕಾನೂನುಗಳ ಸರಳ ಆವೃತ್ತಿಯನ್ನು ಇನ್ನಷ್ಟು ಸುಲಭವಾಗಿ ತಲುಪುವಂತೆ ಮಾಡುವ ಪ್ರಯತ್ನಗಳ ಬಗ್ಗೆ ಶ್ರೀ ಮೋದಿ ಮಾಹಿತಿ ನೀಡಿದರು. "ಸರಳ ಭಾಷೆಯಲ್ಲಿ ಕಾನೂನುಗಳನ್ನು ರಚಿಸುವ ಪ್ರಯತ್ನ ಮತ್ತು ಈ ವಿಧಾನವು ನಮ್ಮ ದೇಶದ ನ್ಯಾಯಾಲಯಗಳಿಗೆ ಬಹಳ ಸಹಾಯ ಮಾಡುತ್ತದೆ" ಎಂದು ಅವರು ಹೇಳಿದರು. ಪ್ರತಿಯೊಬ್ಬ ನಾಗರಿಕನೂ ತಮ್ಮದೇ ಆದ ಭಾಷೆಯಲ್ಲಿ ಅಂತರ್ಜಾಲವನ್ನು ಪ್ರವೇಶಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿರುವ ಭಾಷಿಣಿ ಪೋರ್ಟಲ್ ಬಗ್ಗೆಯೂ ಪ್ರಧಾನಮಂತ್ರಿ ಪ್ರಸ್ತಾಪಿಸಿದರು. ನ್ಯಾಯಾಲಯಗಳು ಸಹ ಇದರಿಂದ ಪ್ರಯೋಜನ ಪಡೆಯುತ್ತವೆ ಎಂದು ಅವರು ಹೇಳಿದರು. 

ಸಂಪನ್ಮೂಲಗಳು ಅಥವಾ ಹಣವಿಲ್ಲದವರು ಕ್ಷುಲ್ಲಕ ಅಪರಾಧಗಳಿಗಾಗಿ ವರ್ಷಗಳಿಂದ ಜೈಲಿನಲ್ಲಿರುವ ಬಗ್ಗೆ ಸರ್ಕಾರ ಮತ್ತು ನ್ಯಾಯಾಂಗವು ಸಂವೇದನಾಶೀಲವಾಗಿರಬೇಕಾದ ಅಗತ್ಯವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಅವರನ್ನು ಸ್ವೀಕರಿಸಲು ಸಿದ್ಧರಿಲ್ಲದ ಕುಟುಂಬಗಳ ಬಗ್ಗೆಯೂ ಅವರು ಮಾತನಾಡಿದರು. ಈ ವರ್ಷದ ಆಯವ್ಯಯದಲ್ಲಿ ಅಂತಹ ಕೈದಿಗಳಿಗೆ ಆರ್ಥಿಕ ನೆರವು ನೀಡಲು ಅವಕಾಶ ಕಲ್ಪಿಸಿದ್ದು, ಅವರ ಬಿಡುಗಡೆಗೆ ನೆರವಾಗಲು ಕೇಂದ್ರದಿಂದ ರಾಜ್ಯಕ್ಕೆ ಆರ್ಥಿಕ ನೆರವು ನೀಡಲಾಗುವುದು ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು.

"ಧರ್ಮವನ್ನು ರಕ್ಷಿಸುವವರನ್ನು ಧರ್ಮವು ರಕ್ಷಿಸುತ್ತದೆ" ಎಂಬ ಶ್ಲೋಕವನ್ನು ಉಲ್ಲೇಖಿಸಿ ಹೇಳಿದ ಪ್ರಧಾನಮಂತ್ರಿಯವರು,  ಒಂದು ಸಂಸ್ಥೆಯಾಗಿ ನಮ್ಮ ಜವಾಬ್ದಾರಿ, ನಮ್ಮ ಧರ್ಮ ರಾಷ್ಟ್ರಕ್ಕಾಗಿ ಕೆಲಸ ಮಾಡುವುದಾಗಿದ್ದು, ಅದು ಪರಮೋಚ್ಛವಾಗಿ ಉಳಿದಿದೆ ಎಂದು ಒತ್ತಿ ಹೇಳಿದರು. ಈ ನಂಬಿಕೆಯೇ ದೇಶವನ್ನು 'ವಿಕಸಿತ ಭಾರತ'ದ ಗುರಿಯತ್ತ ಕೊಂಡೊಯ್ಯುತ್ತದೆ ಎಂಬುದನ್ನು ಒತ್ತಿಹೇಳುವ ಮೂಲಕ ಪ್ರಧಾನಮಂತ್ರಿಯವರು ಮಾತು ಮುಗಿಸಿದರು.

ಅಸ್ಸಾಂ ರಾಜ್ಯಪಾಲ ಶ್ರೀ ಗುಲಾಬ್ ಚಂದ್ ಕಟಾರಿಯಾ, ಅಸ್ಸಾಂ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮಾ, ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಶ್ರೀ ಪ್ರೇಮ ಖಂಡು, ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಶ್ರೀ ಕಿರಣ್ ರಿಜಿಜು, ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಮತ್ತು ಗುವಾಹಟಿ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಗುವಾಹಟಿ ಹೈಕೋರ್ಟ್ ಅನ್ನು 1948 ರಲ್ಲಿ ಸ್ಥಾಪಿಸಲಾಯಿತು ಮತ್ತು ಅಸ್ಸಾಂ, ನಾಗಾಲ್ಯಾಂಡ್, ಮಣಿಪುರ, ಮೇಘಾಲಯ, ಮಿಜೋರಾಂ, ತ್ರಿಪುರಾ ಮತ್ತು ಅರುಣಾಚಲ ಪ್ರದೇಶ ಈ ಏಳು ಈಶಾನ್ಯ ರಾಜ್ಯಗಳಿಗೆ ಸಾಮಾನ್ಯ ನ್ಯಾಯಾಲಯವಾಗಿ ಕಾರ್ಯನಿರ್ವಹಿಸಿತು. 2013ರ ಮಾರ್ಚ್ ನಲ್ಲಿ ಮಣಿಪುರ, ಮೇಘಾಲಯ ಮತ್ತು ತ್ರಿಪುರಾ ರಾಜ್ಯಗಳಿಗೆ ಪ್ರತ್ಯೇಕ ಹೈಕೋರ್ಟ್ ಗಳನ್ನು ಸ್ಥಾಪಿಸಲಾಯಿತು. ಗುವಾಹಟಿ ಹೈಕೋರ್ಟ್ ಈಗ ಅಸ್ಸಾಂ, ನಾಗಾಲ್ಯಾಂಡ್, ಮಿಜೋರಾಂ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳ ಅಧಿಕಾರ ವ್ಯಾಪ್ತಿಯನ್ನು ಹೊಂದಿದೆ, ಗುವಾಹಟಿಯಲ್ಲಿ ಅದರ ಪ್ರಧಾನ ಪೀಠ ಮತ್ತು ಕೊಹಿಮಾ (ನಾಗಾಲ್ಯಾಂಡ್), ಐಜ್ವಾಲ್ (ಮಿಜೋರಾಂ) ಮತ್ತು ಇಟಾನಗರ (ಅರುಣಾಚಲ ಪ್ರದೇಶ) ನಲ್ಲಿ ಮೂರು ಶಾಶ್ವತ ಪೀಠಗಳಿವೆ.

 

***



(Release ID: 1921892) Visitor Counter : 112