ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

​​​​​​​ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವ ವರ್ಷದಲ್ಲಿ ಭಾರತದ ಒಟ್ಟಾರೆ ರಫ್ತು ಪ್ರಮಾಣ ಸಾರ್ವಕಾಲಿಕ ಗರಿಷ್ಠ 750 ದಶಕೋಟಿ ಡಾಲರ್‌ ದಾಟಿದೆ: ಶ್ರೀ ಪಿಯೂಷ್ ಗೋಯಲ್


ಜಾಗತಿಕ ಆರ್ಥಿಕ ಪರಿಸ್ಥಿತಿಯ ಸವಾಲಿನ ನಡುವೆಯೂ ರಫ್ತು ವಹಿವಾಟಿನಲ್ಲಿ ಭಾರತ ಮೈಲಿಗಲ್ಲು ಸಾಧಿಸಿದೆ: ಶ್ರೀ ಗೋಯಲ್

ಪ್ರಧಾನ ಮಂತ್ರಿಗಳು ಪ್ರಸ್ತಾಪಿಸಿರುವ ʼಪಂಚ ಪ್ರಾಣʼ ಅಂಶಗಳು 2047ರ ಹೊತ್ತಿಗೆ ಸ್ವಾತಂತ್ರ್ಯದ ಶತಮಾನೋತ್ಸವ ವರ್ಷಕ್ಕೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಲು ನಾಂದಿ ಹಾಡಲಿವೆ: ಶ್ರೀ ಗೋಯಲ್‌

ಅಡೆತಡೆಯಿಲ್ಲದ ಹಾಗೂ ಸುಸ್ಥಿರ ಆರ್ಥಿಕ ಪ್ರಗತಿಗಾಗಿ ಕಳೆದ 9 ವರ್ಷಗಳಿಂದ ವಿಶೇಷ ಆದ್ಯತೆ ನೀಡಿ ಅದಕ್ಕೆ ಅಡಿಪಾಯ ಹಾಕುವ ಕಾರ್ಯ ನಡೆದಿದೆ: ಶ್ರೀ ಗೋಯಲ್‌

ದ್ವಾರಗಳನ್ನು ಮುಚ್ಚುವ ಬದಲಿಗೆ ಮತ್ತಷ್ಟು ವಿಸ್ತಾರವಾಗಿ ತೆರೆಯುವ ಮೂಲಕ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ಪ್ರಯತ್ನ ನಡೆದಿದೆ: ಶ್ರೀ ಗೋಯಲ್‌

Posted On: 28 MAR 2023 8:05PM by PIB Bengaluru

ಸರಕು ಮತ್ತು ಸೇವೆಯ ರಫ್ತು ಸೇರಿದಂತೆ ಭಾರತದ ಒಟ್ಟಾರೆ ರಫ್ತು ಪ್ರಮಾಣ ಬರೋಬ್ಬರಿ 750 ದಶಕೋಟಿ ಡಾಲರ್‌ ಮೀರಿದ ಎಂದು ಘೋಷಿಸಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಜವಳಿ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಈ ಸಾಧನೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಗಂಭೀರ ಸವಾಲುಗಳ ನಡುವೆ 2020-2021ನೇ ಸಾಲಿನಲ್ಲಿ 500 ಶತಕೋಟಿ ಡಾಲರ್‌ ರಫ್ತು ವಹಿವಾಟಿನಿಂದ ದಾಖಲೆ ಪ್ರಮಾಣದ ರಫ್ತು ವ್ಯವಹಾರಕ್ಕೆ ವಿಸ್ತರಣೆಯಾದ ಬೆಳವಣಿಗೆ ಬಗ್ಗೆ ಶ್ರೀ ಪಿಯೂಷ್‌ ಗೋಯಲ್‌ ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.

ʼಭಾರತದ ಸ್ಪರ್ಧಾತ್ಮಕತೆಯನ್ನು ಬಲಪಡಿಸುವಿಕೆʼ ಧ್ಯೇಯವಾಕ್ಯದೊಂದಿಗೆ ನವದೆಹಲಿಯಲ್ಲಿ ನಡೆದ ʼಅಸೋಚಾಮ್‌ ವಾರ್ಷಿಕ ಸಭೆ- 2023ʼಯಲ್ಲಿ ಮುಖ್ಯ ಭಾಷಣ ಮಾಡಿದ ಅವರು, "ಸರಕು ಹಾಗೂ ಸೇವಾ ವಲಯಗಳಲ್ಲಿ ಆರೋಗ್ಯಕರ ಬೆಳವಣಿಗೆ ಕಂಡುಬಂದಿದೆ. ಇಡೀ ಜಗತ್ತು ಆರ್ಥಿಕ ಹಿಂಜರಿಕೆ ಎದುರಿಸುತ್ತಿರುವ ಸಂದರ್ಭದಲ್ಲಿ ಬಹುಪಾಲು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಹಣದುಬ್ಬರ ಪ್ರಮಾಣವೂ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಬಡ್ಡಿ ದರಗಳು ಏರಿಕೆಯಾಗಿ ಜಗತ್ತಿನ ನಾನಾ ಭಾಗಗಳನ್ನು ಆರ್ಥಿಕ ಹಿನ್ನಡೆಯ ಕಾರ್ಮೋಡ ಆವರಿಸಿರುವ ಹೊತ್ತಿನಲ್ಲಿ ಭಾರತದ ಆರ್ಥಿಕತೆ ನಿರ್ವಹಣೆಯು ಹೆಮ್ಮೆಯ ಭಾವ ಮೂಡಿಸಿದೆ ಎಂದು ಹೇಳಿದರು.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲೆ ಭಾಷಣ ಮಾಡುವಾಗ ವಸಾಹತುಶಾಹಿ ಮನಸ್ಥಿತಿಯಿಂದ ಹೊರಬಂದು ನಮ್ಮ ಬೇರುಗಳು ಮತ್ತು ನಮ್ಮ ಶಕ್ತಿಯನ್ನು ಗುರುತಿಸಬೇಕು ಎಂದು ನೀಡಿದ್ದ ಕರೆಯನ್ನು ಕೇಂದ್ರ ಸಚಿವರು ಮೆಲುಕು ಹಾಕಿದರು. "ಪ್ರಧಾನ ಮಂತ್ರಿಗಳು ಅಭಿವ್ಯಕ್ತಿಗೊಳಿಸಿದ ʼಪಂಚ ಪ್ರಾಣʼದ ಅಂಶಗಳು 2047ರ ವೇಳೆಗೆ ದೇಶದ ಸ್ವಾತಂತ್ರೋತ್ಸವದ ಶತಮಾನೋತ್ಸವದ ಹೊತ್ತಿಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ನಾಂದಿ ಹಾಡಲಿದೆ. ಹಾಗಾಗಿ ʼಪಂಚ ಪ್ರಾಣʼದ ಅಂಶಗಳನ್ನುಗಮನದಲ್ಲಿಟ್ಟುಕೊಂಡು ನಾವೆಲ್ಲರೂ ಕರ್ತವ್ಯ ಪ್ರಜ್ಞೆಯಿಂದ ಕಾರ್ಯ ನಿರ್ವಹಿಸಬೇಕಿದೆ,ʼʼ ಎಂದು ಹೇಳಿದರು.

"ಭಾರತ @100: ಸರ್ವರನ್ನು ಒಳಗೊಂಡ ಹಾಗೂ ಸುಸ್ಥಿರ ಜಾಗತಿಕ ಬೆಳವಣಿಗೆಗೆ ದಾರಿ ಮಾಡಿಕೊಡುವುದುʼ ಎಂದು ಧ್ಯೇಯದೊಂದಿಗೆ ನಡೆದಿರುವ ಕಾರ್ಯವು 
ದೇಶದ ಯುವಕರು ಮತ್ತು ಉದಯೋನ್ಮುಖ ಯುವಜನತೆಯ ಆಕಾಂಕ್ಷೆಗಳಿಗೆ ಪೂರಕವಾಗಿದೆ. ಭಾರತವು ಆರ್ಥಿಕ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮುವ ಮೂಲಕ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ವಿಶ್ವವನ್ನು ಮುನ್ನಡೆಸುವ ಮುಂದಾಳತ್ವವನ್ನು ವಹಿಸಬೇಕು ಎಂದು ಜನ ಬಯಸುತ್ತಾರೆ. ನಾನಾ ಕ್ಷೇತ್ರಗಳಲ್ಲಿ ಭಾರತದ ಮುಂದಾಳತ್ವವನ್ನು ಜಗತ್ತು ಕೂಡ ಬಯಸುತ್ತಿರುವುದು ಗಮನಾರ್ಹ,ʼʼ ಎಂದು ಹೇಳಿದರು.

"ಭಾರತ @ 100ʼ ಪಯಣದಲ್ಲಿ ಅಸೋಚಾಮ್ ಸಂಸ್ಥೆಯು ಮುಂಚೂಣಿಯಲ್ಲಿದ್ದುಕೊಂಡು ಕಾರ್ಯ ನಿರ್ವಹಿಸಬೇಕು. ಎಲ್ಲರಿಗೂ ಮೂಲ ಅಗತ್ಯಗಳನ್ನು ತಲುಪಿಸುವುದನ್ನು ಖಾತರಿಪಡಿಸಿಕೊಳ್ಳುವುದರಲ್ಲಿ ಸರ್ಕಾರ ಗಮನ ಹರಿಸುತ್ತದೆ. ನಾವು ಮುನ್ನಡೆದಂತೆ ಬೆಳವಣಿಗೆಯನ್ನು ಕೇವಲ ಆರ್ಥಿಕ ಪ್ರಗತಿಯ ದೃಷ್ಟಿಯಿಂದಷ್ಟೇ ನೋಡದೆ ಸಾಮಾಜಿಕ ಸುಧಾರಣೆ ಹಾಗೂ ಮಾನವ ಅಭಿವೃದ್ಧಿ ಸೂಚ್ಯಂಕ ಪ್ರಗತಿಯ ಅಳತೆಗೋಲನ್ನೂ ಗಮನಿಸಬೇಕಾಗುತ್ತದೆ. ಅಂತರ ಸಂಪರ್ಕ ಹೊಂದಿರುವ ಜಗತ್ತಿನಲ್ಲಿ ಇಂದು ದೇಶದಲ್ಲಿ 80 ಕೋಟಿಗಿಂತಲೂ ಹೆಚ್ಚು ಜನ ಅಂತರ್ಜಾಲ ಸೇವೆ ಬಳಸುತ್ತಿದ್ದು, ನಾವು ಸಂಪೂರ್ಣ ಹೊಸ ಮಹತ್ವಾಕಾಂಕ್ಷೆಯ ಭಾರತವನ್ನು ರೂಪಿಸುತ್ತಿದೆ. ದೇಶದ ಯುವಜನರು ಸಹ ಇಂದು ಹೆಚ್ಚಿನದನ್ನು ಬಯಸುತ್ತಿದ್ದಾರೆ. ಹಾಗಾಗಿ ನವ ಭಾರತದ ಜನರ ಆಕಾಂಕ್ಷೆಗಳಿಗೆ ಸ್ಪಂದಿಸಿ ಈಡೇರಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ,ʼʼ ಎಂದು ಕರೆ ನೀಡಿದರು.

"ದೇಶೀಯ ಮಾರುಕಟ್ಟೆಯ ಬೆಳೆವಣಿಗೆಯು ಸ್ಥಿರತೆಯನ್ನು ಕಾಯುದುಕೊಂಡಿದ್ದು, ಕಳೆದ 9 ವರ್ಷಗಳ ಅವಧಿಯಲ್ಲಿ ಹಲವು ವರ್ಷಗಳ ಕಾಲ ದೇಶದ ಆರ್ಥಿಕತೆ ನಿರಂತರ ಹಾಗೂ ಸುಸ್ಥಿರ ಬೆಳವಣಿಗೆಯನ್ನುಸಾಧಿಸಲು ಅಗತ್ಯವಾದ ಅಡಿಪಾಯ ಹಾಕುವ ಕಾರ್ಯಕ್ಕೆ ಒತ್ತು ನೀಡಲಾಗಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶವು ಅಭಿವೃದ್ಧಿ ಹೊಂದಿದ ದೇಶವಾಗುವ ನಿಟ್ಟಿನಲ್ಲಿನ ಮೊದಲ ದಶಕವು ದೇಶೀಯ ಮತ್ತು ಅಂತಾರಾಷ್ಟ್ರೀಯ ಬಂಡವಾಳವನ್ನು ಆಕರ್ಷಿಸಲು ಸದೃಢವಾದ ಮೂಲ ವ್ಯವಸ್ಥೆ, ಆರ್ಥಿಕ ಚೌಕಟ್ಟು ಮತ್ತು ಸ್ಥಿರವಾದ ನಿಯಂತ್ರಣ ಅಭ್ಯಾಸಗಳ ರಚನೆ ಮೇಲೆ ಗಮನ ಕೇಂದ್ರೀಕರಿಸಬೇಕಿದೆ. ಭಾರತವು ಅಂತಹ ಪಯಣಕ್ಕೆ ಅಣಿಯಾಗಿದ್ದು, ತನ್ನ ವಿಶಾಲ ದೊಡ್ಡ ದೇಶೀಯ ಮಾರುಕಟ್ಟೆಯನ್ನು ವಿಸ್ತರಿಸಲು ಹಾಗೂ ಇಡೀ ಪ್ರಪಂಚದ ಮಾರುಕಟ್ಟೆಗೆ ಸಂಪರ್ಕ ಬೆಳೆಸುವ ಅದೃಷ್ಟಶಾಲಿ ರಾಷ್ಟ್ರವಾಗಿದೆ,ʼʼ ಎಂದು ಹೇಳಿದರು.

"ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಸರಕಾರ ಎಲ್ಲ ಪ್ರಯತ್ನ ಕೈಗೊಂಡಿದ್ದು, ದ್ವಾರಗಳನ್ನು ಮುಚ್ಚುವ ಬದಲಿಗೆ ಸ್ಪರ್ಧಾತ್ಮಕ ಮತ್ತು ತುಲನಾತ್ಮಕ ಅನುಕೂಲಗಳನ್ನು ಪಡೆಯುವ ಜತೆಗೆ ಅಂತಾರಾಷ್ಟ್ರೀಯ ವ್ಯಾಪಾರವನ್ನು ನಿರ್ಧರಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ದ್ವಾರಗಳನ್ನು ಇನ್ನಷ್ಟು ವಿಶಾಲವಾಗಿ ತೆರೆಯುವುದಾಗಿದೆ. ಪ್ರತಿ ದೇಶವು ಜಾಗತಿಕ ವ್ಯಾಪಾರ ವಹಿವಾಟಿನಲ್ಲಿ ತನ್ನ ಸ್ಥಾನವನ್ನು ಕಂಡುಕೊಳ್ಳುವ ಜತೆಗೆ ಇಡೀ ಜಗತ್ತು ಸುಸ್ಥಿರ ಪ್ರಗತಿ ಸಾಧಿಸುತ್ತದೆ,ʼʼ ಎಂದು ಕೇಂದ್ರ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. ಹಾಗೆಯೇ ನೀತಿ ನಿರೂಪಕರು ಕೈಗಾರಿಕೆ ಅಥವಾ ವಲಯಗಳಿಗೆ ಸಂಬಂಧಪಟ್ಟಂತೆ ಭಾರತದ ಹೆಚ್ಚು ವೆಚ್ಚ ಸ್ಪರ್ಧಾತ್ಮಕತೆಯನ್ನು ಅವಲೋಕಿಸಿ ಮೌಲ್ಯ ಸರಪಳಿಯನ್ನು ಗಮನಿಸುವ ಮೂಲಕ ವಲಯ ವರ್ಗೀಕರಣದ ಜತೆಗೆ ಕೈಗಾರಿಕೆ ಇಲ್ಲವೇ ವಲಯಗಳನ್ನು ಬೆಳವಣಿಗೆಯ ಪಥಕ್ಕೆ ಕೊಂಡೊಯ್ಯಲು ಪ್ರಯತ್ನಿಸಬೇಕಾಗುತ್ತದೆ. ನವೀಕರಿಸಬಹುದಾದ ಇಂಧನ ವಲಯವು ಇಂತಹ ಮಹತ್ವದ ವಲಯಗಳಲ್ಲಿ ಮಹತ್ವದ್ದೆನಿಸಿದ್ದು, ಭಾರತವು ಈ ವಲಯದಲ್ಲಿ ಜಾಗತಿಕ ನಾಯಕತ್ವ ಪಡೆಯುವ ನಿಟ್ಟಿನಲ್ಲಿ ಸಾಗಿದೆ. ದೊಡ್ಡ ಪ್ರಮಾಣದಲ್ಲಿನ ರಫ್ತು ಅವಕಾಶ ಹಾಗೂ ಸರಕು ಮತ್ತು ಸೇವೆಯನ್ನು ಅತಿ ಕಡಿಮೆ ಇಂಗಾಲದ ಪರಿಣಾಮದೊಂದಿಗೆ ಪರಿಸರಸ್ನೇಹಿಯಾಗಿ ಉತ್ಪಾದಿಸುವ ಮೂಲಕ ಈ ಹಿರಿಮೆ ಗಳಿಸಲು ಸಾಧ್ಯವಾಗುತ್ತಿದೆ,ʼʼ ಎಂದು ಹೇಳಿದರು.

"ರಾಷ್ಟ್ರೀಯ ಮೂಲಸೌಕರ್ಯವೆನಿಸಿದ ಪೈಪ್‌ಲೈನ್‌, ಪಿಎಂ ಗತಿ ಶಕ್ತಿ, ʼಯೂನಿಫೈಯ್ಡ್‌ ಲಾಜಿಸ್ಟಿಕ್ಸ್‌ ಇಂಟರ್‌ಫೇಸ್‌ ಪ್ಲಾಟ್‌ಫಾರಂʼ ಇತರೆ ಕ್ಷೇತ್ರಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರವು ನಾನಾ ಪ್ರಯತ್ನಗಳನ್ನು ಕೈಗೊಂಡಿದೆ. ಇಂತಹ ಪ್ರಯತ್ನಗಳಿಗೆ ತಂತ್ರಜ್ಞಾನವನ್ನು ಬೆನ್ನಲುಬಾಗಿ ಬಳಸಲಾಗುತ್ತಿದೆ. ಯುಪಿಐ ವ್ಯವಸ್ಥೆಯು ಹಣಕಾಸು ಪಾವತಿ ಮೂಲಸೌಕರ್ಯವನ್ನು ಹೇಗೆ ಪ್ರಜಾಸತ್ತಾತ್ಮಕಗೊಳಿಸಿದೆ ಹಾಗೂ ಡಿಜಿಟಲ್ ವಾಣಿಜ್ಯ ವ್ಯವಹಾರಕ್ಕಾಗಿ ಮುಕ್ತ ನೆಟ್‌ವರ್ಕ್‌ ವ್ಯವಸ್ಥೆ ಮೂಲಕ ಇ- ವಾಣಿಜ್ಯ ವ್ಯವಹಾರಕ್ಕೆ ಉತ್ತೇಜಿಸುತ್ತಿದೆ ಎಂಬುದು ಗಮನಾರ್ಹ,ʼʼ ಎಂದು ತಿಳಿಸಿದರು.

"ಪ್ರಧಾನಮಂತ್ರಿಯವರ ನಾಯಕತ್ವದಲ್ಲಿ ಭಾರತ ಸದೃಢವಾದ ಸ್ಥೂಲ ಆರ್ಥಿಕತೆ, ಬೃಹತ್‌ ಪ್ರಮಾಣದಲ್ಲಿ ವಿದೇಶಿ ವಿನಿಮಯ, ತಗ್ಗಿದ ಹಣದುಬ್ಬರ ಮತ್ತು ಉದ್ಯಮಶೀಲತೆಯ ಮನೋಭಾವಕ್ಕೆ ಪೂರಕವಾದ ದೇಶೀಯ ವ್ಯವಸ್ಥೆ ರೂಪುಗೊಂಡಿದೆ. ಹಾಗೆಯೇ ಆಮದು ವಲಯದಿಂದ ಕೇವಲ ಸರಕುಗಳ ಬದಲಾವಣೆ ಮಾತ್ರವಲ್ಲದೆ, ಆರ್ಥಿಕ ಪ್ರಗತಿಯ ಗುರಿ ಸಾಧನೆಯನ್ನು ಒಂದುಗೂಡಿಸಿದೆ. ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿ, ವಿಚಾರ ಮನೋಭಾವ, ವ್ಯಾಪ್ತಿ ಮೀರಿ ವಿಭಿನ್ನ ಚಿಂತನೆಯ ಮೂಲಕ ಭಾರತವು ತನ್ನ ಸಾಮೃರ್ಥ್ಯವನ್ನು ಸಾಬೀತುಪಡಿಸಿರುವುದಕ್ಕೆ ಜಗತ್ತು ಇಂದು ಸಾಕ್ಷಿಯಾಗಿದೆ. ಇವೆಲ್ಲಾ ಭಾರತದ ಹೊಸ ಮನೋಭಾವದ ಧ್ಯೋತಕವಾಗಿವೆ,ʼʼ ಎಂದು ಬಣ್ಣಿಸಿದರು.

"ಆಸ್ಟ್ರೇಲಿಯಾ ಮತ್ತು ಯುಎಇಯೊಂದಿಗೆ ʼಮುಕ್ತ ವ್ಯಾಪಾರ ಒಪ್ಪಂದʼಗಳಿಗೆ (ಎಫ್‌ಟಿಎ) ಭಾರತವು ಸಹಿ ಮಾಡಿರುವುದಕ್ಕೆ ಮೂರು ದೇಶಗಳ ಕೈಗಾರಿಕೆ ಹಾಗೂ ಮಾಧ್ಯಮ ವಲಯದಿಂದ ಮೆಚ್ಚುಗೆ, ಸಕಾರಾತ್ಮಕ ಭಾವನೆ ವ್ಯಕ್ತವಾಗಿದೆ. ಸೂಕ್ತವಾದ ಸಮಾನ ಸಮತೋಲನ ಕಾಯ್ದುಕೊಳ್ಳುವಲ್ಲಿ ವೇಗ, ಗುಣಮಟ್ಟದ ಜತೆಗೆ ಪಾಲುದಾರರೊಂದಿಗಿನ ವ್ಯಾಪಕ ಸಮಾಲೋಚನೆಯ ಬಗ್ಗೆ ಎಲ್ಲ ವಲಯಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನಷ್ಟು ಮುಕ್ತ ವ್ಯಾಪಾರ ಒಡಂಬಡಿಕೆ ವಿಸ್ತರಣೆ ಸಂಬಂಧ ಹಲವು ಸುತ್ತಿನ ಚರ್ಚೆಗಳು ನಾನಾ ಹಂತದಲ್ಲಿದ್ದು, ಆರ್ಥಿಕತೆ ಪ್ರಗತಿಗೆ ಪೂರಕವದ ಹೊಸ ಅವಕಾಶಗಳ ಸೃಷ್ಟಿಗೆ ಪೂರಕ ವಾತಾವರಣ ಸೃಷ್ಟಿಸಲಿದೆ,ʼʼ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ʼಭಾರತ ಪ್ರಕಾಶಿಸಲು ಇದು ಸಕಾಲ, ಸೂಕ್ತ ಕಾಲವಾಗಿದೆʼ ಎಂಬ ಪ್ರಧಾನ ಮಂತ್ರಿಗಳ ದೂರದರ್ಶಿತ್ವದ ಮಾತುಗಳನ್ನು ಉಲ್ಲೇಖಿಸಿದ ಕೇಂದ್ರ ಸಚಿವರು, "ಜಿ- 20 ಶೃಂಗಸಭೆಯ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿರುವುದು ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನ ಹೆಚ್ಚಿಸಿಕೊಳ್ಳಲು ವಿಶಿಷ್ಟ ಅವಕಾಶಗಳನ್ನು ಕಲ್ಪಿಸಿದೆ ಹಾಗೂ ಜಗತ್ತಿನಾದ್ಯಂತ ಭಾರತದ ವ್ಯಾಪಾರ, ವಹಿವಾಟಿನ ವೈವಿಧ್ಯವನ್ನು ಪ್ರದರ್ಶಿಸಲು ದೇಶದ ಕೈಗಾರಿಕೋದ್ಯಮಿಗಳು ಹಾಗೂ ವ್ಯಾಪಾರಸ್ಥರಿಗೆ ಅವಕಾಶ ಒದಗಿಸಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ,ʼʼ ಎಂದು ಕರೆ ನೀಡಿದರು.

****



(Release ID: 1911801) Visitor Counter : 144


Read this release in: English , Urdu , Hindi