ಗೃಹ ವ್ಯವಹಾರಗಳ ಸಚಿವಾಲಯ

 ಕರ್ನಾಟಕದ ರಾಯಚೂರಿನಲ್ಲಿಂದು 4500 ಕೋಟಿ ರೂ.ಗಳ 236 ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಅವರ ಸರ್ಕಾರ ಮಾತ್ರವೇ ಕರ್ನಾಟಕವನ್ನು ಸಮೃದ್ಧಗೊಳಿಸಲು ಸಾಧ್ಯ, ಮೋದಿ ಸರ್ಕಾರವು ದೇಶದ ಕೋಟ್ಯಂತರ ಜನರ ಕಲ್ಯಾಣಕ್ಕಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ., ಕೃಷ್ಣಾ ಮೇಲ್ದಂಡೆ ಯೋಜನೆಗೆ 5,000 ಕೋಟಿ ರೂ. ನೀಡಿದ್ದು, ಮಹಾದಾಯಿ ಬಿಕ್ಕಟ್ಟನ್ನೂ ಪರಿಹರಿಸಿದ್ದಾರೆ

ರಾಯಚೂರು ಜಿಲ್ಲೆಯಲ್ಲಿ ಹಸಿರು ವಲಯ ವಿಮಾನ ನಿಲ್ದಾಣದ ನಿರ್ಮಾಣ ಪ್ರಾರಂಭವಾಗಿದ್ದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೀಗಡಿಗಳ ಮೇಲಿನ ರಫ್ತು ಸುಂಕವನ್ನು ಕಡಿಮೆ ಮಾಡುವ ಮೂಲಕ ಸೀಗಡಿ ಸಾಕಾಣಿಕೆಗೆ ಸಂಬಂಧಿಸಿದ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ

 ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ವಿಶ್ವದ 5 ನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿದ್ದು, ಶ್ರೀ ಮೋದಿ ಮಾತ್ರ ಭಾರತವನ್ನು ಸಮೃದ್ಧ ಮತ್ತು ಸುರಕ್ಷಿತವಾಗಿಸಬಲ್ಲರು

Posted On: 26 MAR 2023 7:46PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರಿಂದು ಕರ್ನಾಟಕದ ರಾಯಚೂರಿನಲ್ಲಿ ಜಲ ಜೀವನ್ ಅಭಿಯಾನ ಅಡಿಯಲ್ಲಿ 1400 ಗ್ರಾಮಗಳು ಮತ್ತು 7 ನಗರಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ, 105 ಪಿಡಬ್ಲ್ಯೂಡಿ ಕಾಮಗಾರಿಗಳು ಮತ್ತು ಕರ್ನಾಟಕ ರಸ್ತೆ ಅಭಿವೃದ್ಧಿ ಸಂಸ್ಥೆಯ 19 ಕಾಮಗಾರಿಗಳು ಸೇರಿದಂತೆ 4500 ಕೋಟಿ ರೂ.ಗಳ 236 ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.

https://static.pib.gov.in/WriteReadData/userfiles/image/image0012EPI.jpg

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಮ್ಮ ಸರ್ಕಾರ ಮಾತ್ರ ಕರ್ನಾಟಕವನ್ನು ಸಮೃದ್ಧಗೊಳಿಸಬಹುದು ಎಂದು ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ ತಿಳಿಸಿದರು. ಕರ್ನಾಟಕದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ., ಕೃಷ್ಣಾ ಮೇಲ್ದಂಡೆ ಯೋಜನೆಗೆ 5,000 ಕೋಟಿ ರೂ.ಗಳನ್ನು ಒದಗಿಸಿದ್ದಾರೆ ಮತ್ತು ಮಹಾದಾಯಿ ವಿವಾದವನ್ನು ಪರಿಹರಿಸಿದ್ದಾರೆ. ಇದಲ್ಲದೆ, ರಾಯಚೂರು ಜಿಲ್ಲೆಯಲ್ಲಿ ಹಸಿರು ವಲಯ ವಿಮಾನ ನಿಲ್ದಾಣದ ನಿರ್ಮಾಣ ಪ್ರಾರಂಭವಾಗಿದೆ. ಸೀಗಡಿಗಳ ರಫ್ತು ಸುಂಕವನ್ನು ಕಡಿಮೆ ಮಾಡುವ ಮೂಲಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೀಗಡಿ ಸಾಕಾಣಿಕೆಗೆ ಸಂಬಂಧಿಸಿದ ರೈತರಿಗೂ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು. 

https://static.pib.gov.in/WriteReadData/userfiles/image/image002SQ3Z.jpg

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು 11ನೇ ಸ್ಥಾನದಿಂದ ವಿಶ್ವದ 5ನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾಗಿ ದಾಪುಗಾಲಿಟ್ಟಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಉತ್ಪಾದಕ ರಾಷ್ಟ್ರವಾಗಿದ್ದು, ನವೋದ್ಯಮಗಳಲ್ಲಿ ಮೂರನೇ ಮತ್ತು ನವೀಕರಿಸಬಹುದಾದ ಇಂಧನದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈ ಎಲ್ಲ ಸಾಧನೆಗಳ ಆಧಾರದ ಮೇಲೆ, ಶ್ರೀ ಮೋದಿ ಅವರು ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ನಿಗದಿಪಡಿಸಿದ್ದಾರೆ. ಹಿಂದಿನ ಸರ್ಕಾರದ ಆಡಳಿತದ ಸಮಯದಲ್ಲಿ, ಗಡಿಯಾಚೆಯಿಂದ ಭಯೋತ್ಪಾದಕರು ಭಾರತ ಪ್ರವೇಶಿಸಿ ದಾಳಿ ಮಾಡುತ್ತಿದ್ದರು ಆದರೆ, ಸರ್ಕಾರ ಏನನ್ನೂ ಹೇಳುತ್ತಿರಲಿಲ್ಲ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉರಿ ಮತ್ತು ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಸರ್ಜಿಕಲ್ ಮತ್ತು ಏರ್ ಸ್ಟ್ರೈಕ್ ಮೂಲಕ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿದರು.  ಪ್ರಧಾನಮಂತ್ರಿ ಮೋದಿ ಮಾತ್ರ ಭಾರತವನ್ನು ಸಮೃದ್ಧ ಮತ್ತು ಸುಭದ್ರಗೊಳಿಸಬಲ್ಲರು ಎಂದು ಶ್ರೀ ಶಾ ಹೇಳಿದರು. 

https://static.pib.gov.in/WriteReadData/userfiles/image/image003C6J8.jpg

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ದೇಶದ ಕೋಟ್ಯಂತರ ಜನರ ಕಲ್ಯಾಣಕ್ಕಾಗಿ ಅನೇಕ ಕೆಲಸಗಳನ್ನು ಮಾಡಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 13 ಕೋಟಿ ಮನೆಗಳಿಗೆ ಗ್ಯಾಸ್ ಸಿಲಿಂಡರ್ ಒದಗಿಸಿದ್ದಾರೆ, 10 ಕೋಟಿ ಮನೆಗಳಿಗೆ ಶೌಚಾಲಯ ಕಲ್ಪಿಸಿದ್ದಾರೆ, ಪ್ರತಿ ಮನೆಗೆ ವಿದ್ಯುತ್ ನೀಡಿದ್ದಾರೆ ಮತ್ತು ಪ್ರತಿ ಬಡ ವ್ಯಕ್ತಿಗೆ 5 ಲಕ್ಷ ರೂ.ಗಳವರೆಗೆ ಪ್ರಧಾನಮಂತ್ರಿ ಆಯುಷ್ಮಾನ್ ಯೋಜನೆ ಮೂಲಕ ಆರೋಗ್ಯ ವಿಮೆ ಒದಗಿಸಿದ್ದಾರೆ ಎಂದು ಅವರು ಹೇಳಿದರು. ಶ್ರೀ ಮೋದಿ ಅವರು 130 ಕೋಟಿ ಜನರನ್ನು ಕೋವಿಡ್-19 ನಿಂದ ಸುರಕ್ಷಿತವಾಗಿಸುವ ಮೂಲಕ ಭಾರತವನ್ನು ಸುರಕ್ಷಿತಗೊಳಿಸಿದ್ದಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಕೋಟ್ಯಂತರ ಬಡ ಜನರಿಗೆ ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆಜಿಯಂತೆ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡುತ್ತಿದ್ದಾರೆ ಎಂದು ಶ್ರೀ ಶಾ ಹೇಳಿದರು.
 

**



(Release ID: 1910995) Visitor Counter : 147