ಸಹಕಾರ ಸಚಿವಾಲಯ
azadi ka amrit mahotsav g20-india-2023

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಬೆಂಗಳೂರಿನಲ್ಲಿ ಸಹಕಾರ ಸೌಧಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಕರ್ನಾಟಕ ಸರ್ಕಾರದ ಸಹಕಾರ ಇಲಾಖೆಯ ಸುಮಾರು 1400 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೂಡಾ ಅವರು ಉದ್ಘಾಟಿಸಿದರು


ಇಡೀ ರಾಷ್ಟ್ರವನ್ನು ಸಮೃದ್ಧಗೊಳಿಸಿ ಪ್ರತಿಯೊಂದು ರಾಜ್ಯವನ್ನು ಪ್ರಗತಿಪರಗೊಳಿಸುವುದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಧ್ಯೇಯವಾಗಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬೀಜಗಳು, ಸಾವಯವ ಉತ್ಪನ್ನಗಳು ಮತ್ತು ರಫ್ತಿಗಾಗಿ ಬಹು-ರಾಜ್ಯ ಸಹಕಾರಿ ಸಂಸ್ಥೆಗಳನ್ನು ರಚಿಸಲಾಗಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸಹಕಾರಿ ಕ್ಷೇತ್ರದಲ್ಲಿ ಹಲವಾರು ಉಪಕ್ರಮಗಳನ್ನು ಕೈಗೊಂಡಿದ್ದಾರೆ, ಕರ್ನಾಟಕ ಸರ್ಕಾರವು ಅದನ್ನು ಮುನ್ನಡೆಸುತ್ತಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರವು ಪಿಎಫ್ಐಅನ್ನು ನಿಷೇಧಿಸುವ ಮೂಲಕ ಇಡೀ ಭಾರತವನ್ನು ಸುರಕ್ಷಿತಗೊಳಿಸಿದೆ

Posted On: 24 MAR 2023 6:42PM by PIB Bengaluru

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಕರ್ನಾಟಕದ ಬೆಂಗಳೂರಿನಲ್ಲಿ 'ಸಹಕಾರ ಸಮೃದ್ಧಿ ಸೌಧ'ಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಕರ್ನಾಟಕ ಸರ್ಕಾರದ ಸಹಕಾರ ಇಲಾಖೆಯ ಸುಮಾರು 1400 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೂಡಾ ಅವರು ಉದ್ಘಾಟಿಸಿದರು. ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ್ ಎಸ್. ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಮತ್ತು ಕರ್ನಾಟಕದ ಸಹಕಾರ ಸಚಿವ ಶ್ರೀ ಎಸ್ ಟಿ ಸೋಮಶೇಖರ್ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ, ಕೃಷಿ ಮಾರುಕಟ್ಟೆಗಾಗಿ 67 ಎಕರೆ ವಿಸ್ತಾರದ ಮಾರುಕಟ್ಟೆ ಪ್ರಾಂಗಣ, ಬಿನ್ನಿಪೇಟೆ ಎಪಿಎಂಸಿಯಲ್ಲಿ 11 ಕೋಟಿ ರೂ.ಗಳ ವೆಚ್ಚದಲ್ಲಿ ಹೂವು ಬೆಳೆಗಾರರಿಗೆ ಮಾರುಕಟ್ಟೆ, ಯಶವಂತಪುರ ಎಪಿಎಂಸಿಯಲ್ಲಿ 8 ಕೋಟಿ ರೂ.ಗಳ ವೆಚ್ಚದಲ್ಲಿ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು. ಕರ್ನಾಟಕ ಹಾಲು ಮಹಾಮಂಡಳಿಯ ವಿವಿಧ ಕಟ್ಟಡಗಳನ್ನು ಇಂದು ಉದ್ಘಾಟಿಸಲಾಗಿದೆ ಎಂದು ಅವರು ತಿಳಿಸಿದರು. 430 ಕೋಟಿ ರೂ.ಗಳ ವೆಚ್ಚದಲ್ಲಿ 100 ಮೆಗಾವ್ಯಾಟ್ ಸಮೂಹ ಕ್ಯಾಪ್ಟಿವ್ ಸೌರ ವಿದ್ಯುತ್ ಸ್ಥಾವರ, ಚಿಕ್ಕಬಳ್ಳಾಪುರ ಮತ್ತು ಪಿರಿಯಾಪಟ್ಟಣದಲ್ಲಿ ಕ್ರಮವಾಗಿ 140 ಕೋಟಿ ಮತ್ತು ಸುಮಾರು 50 ಕೋಟಿ ರೂ.ಗಳ ವೆಚ್ಚದಲ್ಲಿ ಪಶು ಆಹಾರ ಘಟಕ, 95 ಕೋಟಿ ರೂ.ಗಳ ವೆಚ್ಚದಲ್ಲಿ ಪ್ಯಾಕೇಜಿಂಗ್ ಘಟಕ ಮತ್ತು ಬೆಳಗಾವಿಯಲ್ಲಿ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ಗಳನ್ನು ನಿರ್ಮಿಸಲಾಗುತ್ತಿದೆ ಎಂಬ ವಿವರ ನೀಡಿದರು. ಇದರೊಂದಿಗೆ ಹೊಸ ಆಮ್ಲಜನಕ ಘಟಕ, 238 ಕೋಟಿ ರೂ.ಗಳ ವೆಚ್ಚದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಡಿಯಲ್ಲಿ ಒಳಚರಂಡಿ ಸೌಲಭ್ಯ, ಬೆಂಗಳೂರಿನ ಬನಶಂಕರಿ ಬ್ಲಾಕ್ ನಲ್ಲಿ 31 ಕೋಟಿ ರೂ.ಗಳ ವೆಚ್ಚದಲ್ಲಿ ರಸ್ತೆಗಳ ನಿರ್ಮಾಣ ಮತ್ತು 128 ಕೋಟಿ ರೂ.ಗಳ ಇತರ ಅಭಿವೃದ್ಧಿ ಕಾರ್ಯಗಳನ್ನು ಯಶವಂತಪುರದಲ್ಲಿ ಮಾಡಲಾಗುತ್ತಿದೆ. ಜಲ ಜೀವನ್ ಮಿಷನ್ ಅಡಿಯಲ್ಲಿ ಕುಂಬಳಗೋಡು, ರಾಮೋಹಳ್ಳಿ, ಜಾಲಹಳ್ಳಿ, ಚಿಕ್ಕನಹಳ್ಳಿ, ಚುಂಚನಕುಪ್ಪೆ ಮತ್ತು ಕಾಗಲಹಳ್ಳಿ ಮುಂತಾದ ಪಂಚಾಯತ್ ಕ್ಷೇತ್ರಗಳಲ್ಲಿ 182 ಕೋಟಿ ರೂ.ಗಳ ವೆಚ್ಚದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು, ಇಡೀ ರಾಷ್ಟ್ರವನ್ನು ಸಮೃದ್ಧಗೊಳಿಸುವುದು ಮತ್ತು ಪ್ರತಿಯೊಂದು ರಾಜ್ಯವನ್ನು ಪ್ರಗತಿಪರಗೊಳಿಸುವುದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಧ್ಯೇಯವಾಗಿದೆ ಎಂದು ಹೇಳಿದರು. ಸ್ವಾತಂತ್ರ್ಯದ 75 ವರ್ಷಗಳ ನಂತರ ಮೊದಲ ಬಾರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸಹಕಾರ ಸಚಿವಾಲಯವನ್ನು ರಚಿಸಿ, ಅದರ ಮೂಲಕ ದೇಶಾದ್ಯಂತ ರೈತರು, ಪ್ರಾಣಿ ಸಾಕಾಣಿಕೆದಾರರು ಮತ್ತು ಮಹಿಳೆಯರ ಕಲ್ಯಾಣಕ್ಕಾಗಿ ಮಾರ್ಗವನ್ನು ತೆರೆದಿದ್ದಾರೆ ಎಂದು ಅವರು ಹೇಳಿದರು. ಸಹಕಾರ ಸಚಿವಾಲಯದ ಅಡಿಯಲ್ಲಿ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳನ್ನು (ಪಿಎಸಿಎಸ್) ಗಣಕೀಕೃತಗೊಳಿಸಿ, ಅವುಗಳನ್ನು ವಿವಿಧೋದ್ದೇಶಗಳಿಗಾಗಿ ಬಳಸಲಾಗುತ್ತಿದೆ ಎಂದು ತಿಳಿಸಿದರು. ಪಿಎಸಿಎಸ್ ಗಳನ್ನು ಸಾಮಾನ್ಯ ಸೇವಾ ಕೇಂದ್ರಗಳಾಗಿ (ಸಿಎಸ್ ಸಿ) ಮಾಡಲಾಗುತ್ತಿದೆ. ಈಗ ಪಿಎಸಿಎಸ್ ಗಳು ಅನಿಲ ವಿತರಣಾ ಏಜೆನ್ಸಿ, ನೀರಿನ ವಿತರಣೆ ಮತ್ತು ಪೆಟ್ರೋಲ್ ಪಂಪ್ ಗಳನ್ನು ನಡೆಸುವಂತಹ ಸೇವೆಗಳನ್ನು ಒದಗಿಸಲು ಸಾಧ್ಯವಾಗುತ್ತವೆ ಎಂದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಎಲ್ಲ ಸಹಕಾರಿ ಸಂಸ್ಥೆಗಳಿಗೂ ಜಿಇಎಂ ಪೋರ್ಟಲ್ ಗಳನ್ನು ತೆರೆಯಲಾಗಿದೆ. ಇದರೊಂದಿಗೆ, ಸಹಕಾರಿ ಸಂಸ್ಥೆಗಳಿಗೆ ಭಾರಿ ತೆರಿಗೆ ಪ್ರಯೋಜನಗಳನ್ನು ಸಹ ಒದಗಿಸಲಾಗಿದೆ ಎಂದು ಶ್ರೀ ಶಾ ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಬೀಜಗಳು, ಸಾವಯವ ಉತ್ಪನ್ನಗಳು ಮತ್ತು ರಫ್ತಿಗಾಗಿ ಬಹು-ರಾಜ್ಯ ಸಹಕಾರ ಸಂಘಗಳನ್ನು ರಚಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಇದರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸಹಕಾರ ಕ್ಷೇತ್ರದಲ್ಲಿ ಹಲವು ಉಪಕ್ರಮಗಳನ್ನು ಕೈಗೊಂಡಿದ್ದಾರೆ. ಕರ್ನಾಟಕ ಸರ್ಕಾರವು ಅದನ್ನು ಮುಂದಕ್ಕೆ ಕೊಂಡೊಯ್ಯುತ್ತಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರವು ಪಿಎಫ್ ಐಅನ್ನು ನಿಷೇಧಿಸುವ ಮೂಲಕ ಇಡೀ ಭಾರತವನ್ನು ಸುಭದ್ರಪಡಿಸಿದೆ ಎಂದು ಶ್ರೀ ಶಾ ಹೇಳಿದರು. ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣದ ನಿರ್ಮಾಣ ಕಾರ್ಯವು ಕಳೆದ 77 ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಶೀ ರಾಮ ಮಂದಿರಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಶೀಘ್ರದಲ್ಲಿಯೇ ಅಯೋಧ್ಯೆಯಲ್ಲಿ ಭವ್ಯವಾದ ದೇವಾಲಯ ಸಿದ್ಧವಾಗಲಿದೆ ಎಂದು ಅವರು ಹೇಳಿದರು. ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಪಡಿಸುವ ಮೂಲಕ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ನಮ್ಮ ಇಡೀ ದೇಶದಲ್ಲಿ ಭಯೋತ್ಪಾದನೆಯನ್ನು ಹತ್ತಿಕ್ಕಿದ್ದಾರೆ ಎಂದು ಅವರು ಹೇಳಿದರು.

*****



(Release ID: 1910500) Visitor Counter : 211


Read this release in: English , Urdu , Marathi , Hindi