ಆಯುಷ್

ಆಯುಷ್ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿದ 2023ರ ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಆಯುಷ್ ಸಚಿವಾಲಯದಿಂದ ಗೌರವ


ಪದ್ಮ ಪ್ರಶಸ್ತಿಗಳು ಶ್ರೇಷ್ಠತೆಯ ಸಂಕೇತವಾಗಿವೆ; ನಮ್ಮ ಸಮಾಜಕ್ಕೆ ಗಣನೀಯ ಕೊಡುಗೆ ನೀಡಿದ ವ್ಯಕ್ತಿಗಳನ್ನು ಗೌರವಿಸುವುದು ಅಪಾರ ಹೆಮ್ಮೆಯ ವಿಷಯ - ಶ್ರೀ ಸರ್ಬಾನಂದ ಸೋನೋವಾಲ್

Posted On: 22 MAR 2023 2:47PM by PIB Bengaluru

ಆಯುಷ್ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿದ 2023ರ ಪದ್ಮ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಲು ಆಯುಷ್ ಸಚಿವಾಲಯ ಮಂಗಳವಾರ ಸಂಜೆ ಸನ್ಮಾನ ಸಮಾರಂಭ ಆಯೋಜಿಸಿತ್ತು. ಆಯುಷ್ ವ್ಯವಸ್ಥೆ ಜನಪ್ರಿಯಗೊಳಿಸಲು ಅಪಾರ ಕೊಡುಗೆ ನೀಡಿರುವ ಹೈದರಾಬಾದ್‌ನ ಶ್ರೀ ರಾಮಚಂದ್ರ ಮಿಷನ್ ಅಧ್ಯಕ್ಷ ಶ್ರೀ ಕಮಲೇಶ್ ಪಟೇಲ್ (ಪದ್ಮಭೂಷಣ), ಖ್ಯಾತ ಆಯುರ್ವೇದ ವೈದ್ಯ ಮತ್ತು ಶಸ್ತ್ರಚಿಕಿತ್ಸಕ ಡಾ. ಮನೋರಂಜನ್ ಸಾಹು (ಪದ್ಮಶ್ರೀ) ಮತ್ತು ಅನುಭವಿ ಸಿದ್ಧ ವೈದ್ಯ ಡಾ. ಗೋಪಾಲಸಾಮಿ ವೇಲುಚಾಮಿ (ಪದ್ಮಶ್ರೀ) ಅವರನ್ನು ಕೇಂದ್ರ ಆಯುಷ್ ಸಚಿವ ಶ್ರೀ ಸರ್ಬಾನಂದ ಸೋನೋವಾಲ್ ಅವರು ಸನ್ಮಾನಿಸಿದರು.

ಮೂವರೂ ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಆಯುಷ್ ಸಚಿವ ಶ್ರೀ ಸರ್ಬಾನಂದ ಸೋನೋವಾಲ್ ಅವರು ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಿದರು. ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೇಚಾ, ಆಯುಷ್ ಸಚಿವಾಲಯದ ವಿಶೇಷ ಕಾರ್ಯದರ್ಶಿ ಶ್ರೀ ಪಿ.ಕೆ. ಪಾಠಕ್, ಆಯುಷ್ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ರಾಹುಲ್ ಶರ್ಮಾ, ಆಯುಷ್ ವೈದ್ಯ ಸಚಿವಾಲಯದ ಸಲಹೆಗಾರ ಮನೋಜ್ ನೇಸರಿ ಮತ್ತು ಇತರೆ ಅಧಿಕಾರಿಗಳು ಮತ್ತು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Image


ಪದ್ಮ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿ, ಮಾತನಾಡಿದ ಶ್ರೀ ಸರ್ಬಾನಂದ ಸೋನೋವಾಲ್, ಪದ್ಮ ಪ್ರಶಸ್ತಿ ಪುರಸ್ಕೃತರ ಸಾಧನೆಗಳು ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ, ಶ್ರೇಷ್ಠತೆಯ ಅಚಲ ಬದ್ಧತೆಯು ಇಡೀ ರಾಷ್ಟ್ರಕ್ಕೆ ಉಜ್ವಲ ಉದಾಹರಣೆಯಾಗಿದೆ ಎಂದರು. ಈ ಪ್ರಶಸ್ತಿಗಳು ಶ್ರೇಷ್ಠತೆಯ ಸಂಕೇತವಾಗಿದ್ದು, ತಮ್ಮ ಅವಿರತ ಶ್ರಮ ಮತ್ತು ಸಮರ್ಪಣಾ ಮನೋಭಾವದ ಮೂಲಕ ನಮ್ಮ ಸಮಾಜಕ್ಕೆ ಕೊಡುಗೆ ನೀಡಿದ ವ್ಯಕ್ತಿಗಳನ್ನು ಗೌರವಿಸುವುದು ರಾಷ್ಟ್ರಕ್ಕೆ ಅಪಾರ ಹೆಮ್ಮೆಯ ವಿಷಯವಾಗಿದೆ. ಶ್ರೀ ಕಮಲೇಶ್ ಪಟೇಲ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ. ಅವರು ಹೆಸರಾಂತ ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ ಮತ್ತು 4 ದಶಕಗಳಿಂದ, ಅವರು ಭಾರತದ  ಅಂಚಿನಲ್ಲಿರುವ ಸಮುದಾಯಗಳಿಗೆ ಶಿಕ್ಷಣ, ಆರೋಗ್ಯ ಮತ್ತು ಜೀವನೋಪಾಯದ ಅವಕಾಶಗಳನ್ನು ಒದಗಿಸಲು ಅವರು ಹೃದಯವಂತಿಕೆಯ ಆಂದೋಲನದ ಮೂಲಕ, ಸಂಪೂರ್ಣ ತೊಡಗಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಅವರು 160ಕ್ಕೂ ಹೆಚ್ಚು ದೇಶಗಳಲ್ಲಿ ಉಚಿತವಾಗಿ ಧ್ಯಾನ ತರಗತಿಗಳನ್ನು ನಡೆಸಿದ್ದಾರೆ. 5,000ಕ್ಕೂ ಹೆಚ್ಚಿನ ಶಾಲೆಗಳು, ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಮೌಲ್ಯಾಧಾರಿತ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ ಎಂದು ಶ್ಲಾಘಿಸಿದರು.

Image

Image

ಡಾ. ಮನೋರಂಜನ್ ಸಾಹು ಅವರಿಗೆ ಆಯುಷ್ ಔಷಧಕ್ಕಾಗಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ಅವರು ಸುಮಾರು 40 ವರ್ಷಗಳ ಅನುಭವ ಹೊಂದಿರುವ ಆಯುರ್ವೇದ ಶಸ್ತ್ರಚಿಕಿತ್ಸೆಯಲ್ಲಿ ಪರಿಣತರಾಗಿದ್ದಾರೆ. ಮಾಜಿ ಡೀನ್, ವಾರಾಣಸಿಯ ಐಎಂಎಸ್ ನ ಆಯುರ್ವೇದ ಉಪನ್ಯಾಸಕ, ಮತ್ತು ನವದೆಹಲಿಯ ಎಐಐಎ ಮಾಜಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಶಲ್ಯ ತಂತ್ರ (ಆಯುರ್ವೇದ) ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಂದ ಜನಪ್ರಿಯರಾಗಿದ್ದಾರೆ. ಸಮಾಜದ ಬಡ ಮತ್ತು ದುರ್ಬಲ ವರ್ಗದವರಿಗೆ ಕೈಗೆಟುಕುವ ವೆಚ್ಚದಲ್ಲಿ ಅವರು ನಿಸ್ವಾರ್ಥವಾಗಿ ಚಿಕಿತ್ಸೆ ನೀಡುತ್ತಿದ್ದಾರೆ.

ಪದ್ಮಶ್ರೀ ಗೌರವಕ್ಕೆ ಪಾತ್ರರಾದ ಡಾ. ಗೋಪಾಲಸಾಮಿ ವೇಲುಚಾಮಿ ಅವರು 2018ರಿಂದ 2021ರ ವರೆಗೆ ಆಯುಷ್ ಸಚಿವಾಲಯದ ಸಿದ್ಧ ಸಂಶೋಧನೆಯ ಉನ್ನತ ಸಂಸ್ಥೆಯಾದ ಸಿದ್ಧ ಸಂಶೋಧನಾ ಕೇಂದ್ರದ ವೈಜ್ಞಾನಿಕ ಸಲಹಾ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಚೆನ್ನೈನಲ್ಲಿ ಸಿದ್ಧ ಫಾರ್ಮಾಕೊಪೊಯಿಯಾ ಸಮಿತಿಯು ಕೋವಿಡ್-19 ನಿರ್ವಹಣೆಗೆ 'ಕಬಸುರಕುಡಿನೀರ್' ಸಂಭಾವ್ಯ ಔಷಧ ಸೂಚಿಸಿದವರಲ್ಲಿ ಡಾ.ವೇಲುಚಾಮಿ ಮೊದಲಿಗರು.
ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೇಚಾ ಅವರು ಪದ್ಮ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ, ಉತ್ತಮ ಆರೋಗ್ಯ ಮತ್ತು ಭವಿಷ್ಯಕ್ಕಾಗಿ ಹಾರೈಸಿದರು. 

ರಾಷ್ಟ್ರಪತಿ ಭವನದಲ್ಲಿಂದು ನಡೆಯಲಿರುವ ನಾಗರಿಕ ಸೇವಾ ಪ್ರಸ್ತಿಗಳ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2023ರ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.

****



(Release ID: 1909642) Visitor Counter : 106