ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ಬೆಂಗಳೂರು-ಮೈಸೂರು ವೇಗಗತಿ ದಶಪಥ ಹೆದ್ದಾರಿಯಲ್ಲಿನ ಪ್ರಯಾಣಿಕರ ಸಮಸ್ಯೆಗಳನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌.ಎಚ್‌.ಎ.ಐ.) ಪರಿಹರಿಸುತ್ತದೆ.

Posted On: 20 MAR 2023 10:02PM by PIB Bengaluru

ಬೆಂಗಳೂರು-ಮೈಸೂರು ವೇಗಗತಿ ದಶಪಥ ಹೆದ್ದಾರಿಯ ಬಳಕೆದಾರರು ಸೂಚಿಸಿರುವ ಕೆಲವು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌.ಎಚ್‌.ಎ.ಐ.) ಕೆಲಸ ಮಾಡುತ್ತಿದೆ ಮತ್ತು ಸಂಧಿಗಳ ವಿಸ್ತರಣೆ ನಿಟ್ಟಿನಲ್ಲಿ ದುರಸ್ತಿ ಕಾರ್ಯ ಮತ್ತು ಪ್ರಾಣಿಗಳ ಮೇಲ್ಸೇತುವೆಗಳ ಕ್ಯಾರೇಜ್‌ ವೇ ಮುಳುಗುವಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ವಿವಿಧ ಕ್ರಮಗಳನ್ನು ಈಗಾಗಲೇ ತೆಗೆದುಕೊಂಡಿದೆ.

ಪ್ರಮುಖ ಸೇತುವೆ ಹಾಗೂ ಆರ್.ಒ.ಬಿ. ಒಂದರ ವಿಸ್ತರಣೆ ಹಾಗೂ ಕೀಲುಗಳ ಸರಿಪಡಿಸುವಿಕೆಯು ವೇಗಗತಿ ದಶಪಥ ಹೆದ್ದಾರಿಯ ಕಾರ್ಯಾಚರಣೆ ಮತ್ತು ನಿರ್ವಹಣೆಯ ಒಂದು ಭಾಗವಾಗಿದೆ. ಸೇತುವೆಯ ಮೇಲಿನ ಜರ್ಕ್‌ ಗಳನ್ನು ತೆಗೆದುಹಾಕಲು ಮತ್ತು ಸವಾರಿಯ ಗುಣಮಟ್ಟವನ್ನು ಸುಧಾರಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಸಂಚಾರಕ್ಕೆ ಮುಕ್ತವಾಗಿದೆ.

ಸಾಗಬಸವನದೊಡ್ಡಿ ಗ್ರಾಮದ ಬಳಿ ಚರಂಡಿ ಸಮಸ್ಯೆಯನ್ನೂ ಕೂಡಾ ಎನ್‌.ಎಚ್‌.ಎ.ಐ. ಪರಿಹರಿಸಲಿದೆ. ಮಾರ್ಚ್17, 2023 ರಂದು ಸಂಭವಿಸಿದ ಅಭೂತಪೂರ್ವ ಧಾರಾಕಾರ ಮಳೆಯಿಂದಾಗಿ 117 ಕಿಮೀ ಉದ್ದದ ವೇಗಗತಿ ಹೆದ್ದಾರಿಯಲ್ಲಿ ಪ್ರಾಣಿಗಳ ಮೇಲ್ಸೇತುವೆಯ ಬಳಿ ಕ್ಯಾರೇಜ್‌ ವೇ ಮೇಲೆ ನೀರು ತುಂಬಿ ಸಂಪೂರ್ಣವಾಗಿ ಮುಳುಗಿತು.  ಈ ಸ್ಥಳದಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸುವುದನ್ನು ಗ್ರಾಮಸ್ಥರು ಚರಂಡಿ ಮೇಲೆ ಮಣ್ಣು ಸುರಿದು ತಡೆದ ಕಾರಣ ಮುಖ್ಯರಸ್ತೆಯಲ್ಲಿ ನೀರು ನಿಂತಿದೆ. ಇದನ್ನು ಪರಿಹರಿಸಲು, ಮಳೆನೀರು ಸುಲಭವಾಗಿ ಹರಿಯಲು ಅನುಕೂಲವಾಗುವಂತೆ ಎನ್‌.ಎಚ್‌.ಎ.ಐ. ಎರಡು ಸಾಲುಗಳ ಕೊಳವೆ (ಪೈಪ್‌)ಗಳೊಂದಿಗೆ ನೂತನ ಕೊಳವೆ ಚರಂಡಿಯನ್ನು ಅಳವಡಿಸಿದೆ. ಮಾರ್ಚ್19, 2023 ರಂದು ಕಾಮಗಾರಿ ಪೂರ್ಣಗೊಂಡಿದ್ದು, ಈಗ ಸಂಚಾರ ಸುಗಮವಾಗಿ ಸಾಗುತ್ತಿದೆ.
 
ವೇಗಗತಿ ಹೆದ್ದಾರಿಯ ಉದ್ದಕ್ಕೂ ಪಕ್ಕದಲ್ಲಿ ಸೇವಾ (ಸರ್ವಿಸ್) ರಸ್ತೆ ಲಭ್ಯವಿಲ್ಲದಿರುವುದು ಸ್ಥಳೀಯ ನಿವಾಸಿಗಳಿಂದ ಗುರುತಿಸಲಾದ ಇನ್ನೊಂದು ಸಮಸ್ಯೆಯಾಗಿದೆ.  ಇದು ಸಂಪೂರ್ಣ ಪ್ರವೇಶ ನಿಯಂತ್ರಿತ ವೇಗಗತಿ ಹೆದ್ದಾರಿಯಾಗಿದ್ದು, ಎರಡೂ ಬದಿಯಲ್ಲಿ 112 ಕಿಮೀ ದ್ವಿಪಥ ಸೇವಾ ರಸ್ತೆಯನ್ನು ಒದಗಿಸಲಾಗಿದೆ. ವೇಗಗತಿ ಹೆದ್ದಾರಿಯಲ್ಲಿ ಪ್ರಯಾಣಿಕರಿಗೆ ಮತ್ತಷ್ಟು ಸಹಾಯ ಮಾಡಲು, ತುರ್ತು ಪರಿಸ್ಥಿತಿ ಸಂದರ್ಭಗಳ ಸಹಾಯ ವ್ಯವಸ್ಥೆಗಳು, ವಾಹನ ಸ್ಥಗಿತವನ್ನು ಪರಿಹರಿಸಲು ಆಂಬ್ಯುಲೆನ್ಸ್‌ಗಳು, ಗಸ್ತು ವಾಹನಗಳು ಮತ್ತು ಕ್ರೇನ್‌ ಗಳ ನಿಯೋಜನೆಯನ್ನು ಒಳಗೊಂಡಿರುವ ದೃಢವಾದ ಆಕಸ್ಮಿಕ ಘಟನೆಗಳ ನಿರ್ವಹಣಾ ವ್ಯವಸ್ಥೆಗಳನ್ನು ಎನ್‌.ಎಚ್‌.ಎ.ಐ. ರೂಪಿಸಿ ಅಳವಡಿಸಿದೆ. ಈಗ, ಸೇವಾ (ಸಹಾಯಕ) ರಸ್ತೆ ನಿರ್ಮಾಣ ಕಾರ್ಯ ತುರ್ತಾಗಿ ಪೂರ್ತಿಯಾಗಲಿದೆ ಮತ್ತು ಸ್ಥಳೀಯ ಜನರ ಸಂಚಾರಕ್ಕೆ ಮಾರ್ಗವನ್ನು ಸುಗಮಗೊಳಿಸಲು ಈ  ಸೇವಾ ರಸ್ತೆಗಳ ಕಾಮಗಾರಿಯನ್ನು ಪೂರ್ಣಗೊಳಿಸುವುದನ್ನು ಆದಷ್ಟು ಬೇಗನೆ ಖಚಿತಪಡಿಸಿಕೊಳ್ಳಲಾಗುವುದು.  ಆರ್‌.ಸಿ.ಸಿ. ಒಳಚರಂಡಿ (ಡ್ರೈನ್‌) ನಿರ್ಮಾಣ ಸೇರಿದಂತೆ ಸೇವಾ ರಸ್ತೆಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆಗಳಿಗಾಗಿ ಎನ್‌.ಎಚ್‌.ಎ.ಐ. ಸಾಕಷ್ಟು ಉಪಕ್ರಮಗಳನ್ನು ಕೈಗೊಂಡಿದೆ. ಸೇವಾ ರಸ್ತೆಗೆ ಬೇಕಾದ ಸರಿಯಾದ ಪ್ರವೇಶವನ್ನು ಹಾಗೂ ನಿರ್ಗಮನ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲಾಗುವುದು. ಸರಿಸುಮಾರು 55,000 ಪ್ರಯಾಣಿಕ ವಾಹನಗಳು ಈ ರಸ್ತೆಯಲ್ಲಿ ದಿನಂಪ್ರತಿ ಚಲಿಸುತ್ತಿವೆ. ಪ್ರಯಾಣದ ಸಮಯವು 4 ಗಂಟೆಯಿಂದ ಈಗ 1.5 ಗಂಟೆಗೆ ಇಳಿದಿದೆ.

ಸುಮಾರು 117 ಕಿಮೀ ಉದ್ದದ ಬೆಂಗಳೂರು-ಮೈಸೂರು ವೇಗಗತಿ ಹೆದ್ದಾರಿಯ ಅನುಷ್ಠಾನವನ್ನು ಎನ್‌.ಎಚ್‌.ಎ.ಐ. ಈಗಾಗಲೇ ಪೂರ್ಣಗೊಳಿಸಿದೆ ಮತ್ತು ಅದನ್ನು ಸಂಚಾರಕ್ಕೆ ತೆರೆಯಲಾಗಿದೆ.  ದೇಶದಾದ್ಯಂತ ಅನ್ವಯವಾಗುವ ರಾಷ್ಟ್ರೀಯ ಹೆದ್ದಾರಿ ಕಾಯಿದೆ ಮತ್ತು ಶುಲ್ಕ ನಿಯಮಗಳ ಪ್ರಕಾರ ಶುಲ್ಕ (ಟೋಲ್) ವಿಧಿಸಲಾಗುತ್ತಿದೆ. ಹೆದ್ದಾರಿ ನಿರ್ಮಾಣ ಕ್ರಮ ಪ್ರಕಾರ, ಯೋಜನೆಯು ಪೂರ್ಣಗೊಂಡ ನಂತರವೂ ಪ್ರಯಾಣಿಕರಿಗೆ ಸುಗಮ ಸವಾರಿ ಅನುಭವವನ್ನು ಖಚಿತಪಡಿಸಿಕೊಳ್ಳಲು ಯಾವುದೇ ಸಣ್ಣ ಸಮಸ್ಯೆಗಳು ಕಂಡುಬಂದರೆ ಅವುಗಳನ್ನು ಸರಿಪಡಿಸಲು ಮತ್ತು ಅಸಮರ್ಪಕ ವ್ಯವಸ್ಥೆಯನ್ನು ಸರಿಪಡಿಸಿ ಪೂರ್ಣಗೊಳಿಸಲು 90-ದಿನಗಳನ್ನು ಅವಧಿಯನ್ನು ನೀಡಲಾಗುತ್ತದೆ.

ದೇಶದಾದ್ಯಂತ ಹೆದ್ದಾರಿ ಬಳಕೆದಾರರಿಗೆ ಸುಗಮ, ಸುರಕ್ಷಿತ ಮತ್ತು ತಡೆರಹಿತ ಅನುಭವವನ್ನು ಒದಗಿಸಲು ಎನ್‌.ಎಚ್‌.ಎ.ಐ. ಸದಾ ಕಟಿಬದ್ಧವಾಗಿದೆ.

 **



(Release ID: 1909142) Visitor Counter : 85


Read this release in: English , Urdu , Hindi , Punjabi