ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಭಾರತೀಯ ಆಹಾರ ಸುರಕ್ಷತೆ ಮತ್ತು  ಮಾನಕ ಪ್ರಾಧಿಕಾರ (ಎಫ್ಎಸ್ಎಸ್ಎಐ) ಎರಡು ದಿನಗಳ ಜಾಗತಿಕ ಸಿರಿಧಾನ್ಯಗಳ (ಶ್ರೀ ಅನ್ನ) ಸಮ್ಮೇಳನದ ವೇಳೆ ಚಿಂತನ-ಮಂಥನ ಅಧಿವೇಶನಗಳನ್ನು ನಡೆಸಿತು


ಎಫ್.ಎಸ್.ಎಸ್.ಎ.ಐ. ಸಿದ್ಧಪಡಿಸಿದ "ಶ್ರೀ ಅನ್ನ: ಒಂದು ಸಮಗ್ರ ಅವಲೋಕನ" ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಮ್ಮೇಳನದ ಮೊದಲ ದಿನದಂದು ವಿಶ್ವದಾದ್ಯಂತದ ಹಲವಾರು ತಜ್ಞರು ಶ್ರೀ ಅನ್ನ (ಸಿರಿಧಾನ್ಯಗಳು) ಕುರಿತು ಮೂರು ವಿಭಿನ್ನ ಅಧಿವೇಶನಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು

Posted On: 19 MAR 2023 12:32PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಜಾಗತಿಕ ಸಿರಿಧಾನ್ಯಗಳ (ಶ್ರೀ ಅನ್ನ) ಸಮಾವೇಶದ ವೇಳೆ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನಕ ಪ್ರಾಧಿಕಾರ (ಎಫ್.ಎಸ್.ಎಸ್.ಎ.ಐ.) ಸಿರಿಧಾನ್ಯಗಳ ಪ್ರಚಾರ ಮತ್ತು ಜಾಗೃತಿ ಕುರಿತು ತಾಂತ್ರಿಕ ಅಧಿವೇಶನಗಳೊಂದಿಗೆ ವಿಚಾರ ಸಂಕಿರಣವನ್ನೂ ಆಯೋಜಿಸಿತ್ತು. ಈ ಎರಡು ದಿನಗಳ ಜಾಗತಿಕ ಸಿರಿಧಾನ್ಯಗಳ (ಶ್ರೀ ಅನ್ನ) ನವದೆಹಲಿಯ ಪೂಸಾದ ಎನ್ಎಎಸ್.ಸಿ. ಸಮುಚ್ಛಯದಲ್ಲಿ ಶನಿವಾರ ಸಮ್ಮೇಳನ ಪ್ರಾರಂಭವಾಯಿತು. ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನಕ ಪ್ರಾಧಿಕಾರ (ಎಫ್ಎಸ್ಎಸ್ಎಐ) ಸಿದ್ಧಪಡಿಸಿದ ಸಿರಿಧಾನ್ಯಗಳ ಮಾನದಂಡಗಳನ್ನು ಆಧರಿಸಿದ "ಶ್ರೀ ಅನ್ನ: ಒಂದು ಸಮಗ್ರ ಅವಲೋಕನ" ಎಂಬ ಪುಸ್ತಕವನ್ನು ಡಿಜಿಟಲ್ ರೂಪದಲ್ಲಿ ಬಿಡುಗಡೆ ಮಾಡಿದರು.

"ವಿಶ್ವದ ಅತ್ಯಂತ ಪ್ರಾಚೀನ ಬೆಳೆ ಪ್ರಸಕ್ತ ಮತ್ತು ಭವಿಷ್ಯದ ಬೆಳೆಯಾಗುವುದರೊಂದಿಗೆ ನಾವು ಕೃಷಿ ಪುನಶ್ಚೇತನಕ್ಕೆ ಸಾಕ್ಷಿಯಾಗುತ್ತಿದ್ದೇವೆ" ಎಂದು ಎಫ್ಎಸ್ಎಸ್ಎಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಜಿ ಕಮಲಾ ವರ್ಧನ ರಾವ್ ತಮ್ಮ ಸ್ವಾಗತ ಭಾಷಣದಲ್ಲಿ ಹೇಳಿದರು.

ಗೋಷ್ಠಿಯ ಮುಖ್ಯ ಅತಿಥಿ, ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪಾಲ್ ತಮ್ಮ ಭಾಷಣದಲ್ಲಿ ಸಿರಿಧಾನ್ಯಗಳು ಗ್ರಾಹಕರಿಗೆ, ಕೃಷಿಕರಿಗೆ ಮತ್ತು ಹವಾಮಾನಕ್ಕೆ ಒಳ್ಳೆಯದು ಎಂದು ಹೇಳಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್ ತಮ್ಮ ವಿಷಯಾಧಾರಿತ ಭಾಷಣದಲ್ಲಿ ಸಿರಿಧಾನ್ಯಗಳನ್ನು ಐತಿಹಾಸಿಕವಾಗಿ ಬೆಳೆಯಲಾಗಿದ್ದರೂ, ಸಿರಿಧಾನ್ಯಗಳ ಕೃಷಿಯ ಒಟ್ಟು ಪ್ರದೇಶವು ಗಮನಾರ್ಹವಾಗಿ ಕಡಿಮೆಯಾಗಿತ್ತು ಎಂದು ಒತ್ತಿ ಹೇಳಿದರು. ಈ ಮಹಾನ್ ಅಭಿಯಾನದಲ್ಲಿ ನಾವು ಸಾಗುತ್ತಿರುವಾಗ, ಈ ಇಳಿಕೆಯ ಮೂಲ ಕಾರಣವನ್ನು ಗುರುತಿಸಲು ಮತ್ತು ಅದನ್ನು ಪರಿಹರಿಸಲು ಇದು ಸೂಕ್ತ ಸಮಯವಾಗಿದೆ ಎಂದು ಅವರು ಹೇಳಿದರು.

 

 ಮುಖ್ಯ ಕಾರ್ಯಕ್ರಮದ ನಂತರ, ಸಿರಿಧಾನ್ಯಗಳಿಂದ ಆರೋಗ್ಯ ಮತ್ತು ಪೌಷ್ಟಿಕಾಂಶದ ಪ್ರಯೋಜನ ಕುರಿತಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (ಎಂ.ಒ.ಎಚ್.ಎಫ್.ಡಬ್ಲ್ಯೂ) ಆಯೋಜಿಸಿದ್ದ ಸಮ್ಮೇಳನವು ದಿನದ ಉತ್ತರಾರ್ಧದಲ್ಲಿ ಎನ್ಎಎಸ್ಸಿ ಸಂಕೀರ್ಣ, ಎಪಿ ಶಿಂಧೆ ಸಿಂಪೋಸಿಯಂ ಸಭಾಂಗಣದಲ್ಲಿ ನಡೆಯಿತು. ಪ್ರಪಂಚದಾದ್ಯಂತದ ಹಲವಾರು ಪ್ರಖ್ಯಾತ ತಜ್ಞರು ತಮ್ಮ ಅಭಿಪ್ರಾಯಗಳನ್ನು ಪ್ರಸ್ತುತಪಡಿಸಿದರು ಮತ್ತು ಮೊದಲ ದಿನದಂದು ಮೂರು ವಿಭಿನ್ನ ಅಧಿವೇಶನಗಳಲ್ಲಿ ಶ್ರೀ ಅನ್ನದ (ಸಿರಿಧಾನ್ಯಗಳು) ಮಹತ್ವವನ್ನು ಎತ್ತಿ ತೋರಿಸಿದರು.

ಅಧಿವೇಶನದಲ್ಲಿ ವಿಶೇಷ ಭಾಷಣಕಾರರಾಗಿ ಮಾತನಾಡಿದ, ಆಹಾರ ಮತ್ತು ಕೃಷಿ ಸಂಸ್ಥೆಯ (ಎಫ್ಎಒ) ಏಷ್ಯಾ-ಪೆಸಿಫಿಕ್ ನ ಸಹಾಯಕ ಮಹಾನಿರ್ದೇಶಕ ಮತ್ತು ಪ್ರಾದೇಶಿಕ ಪ್ರತಿನಿಧಿ ಶ್ರೀ ಜಾಂಗ್-ಜಿನ್ ಕಿಮ್, ಭಾರತದಲ್ಲಿ ಮತ್ತು ಜಾಗತಿಕವಾಗಿ ಉತ್ತಮ ಇಳುವರಿ, ಉತ್ತಮ ಪೌಷ್ಟಿಕಾಂಶ ಮತ್ತು ಉತ್ತಮ ಪರಿಸರಕ್ಕಾಗಿ ರೂಢಿಗಳನ್ನು ಸಕ್ರಿಯಗೊಳಿಸುವ ಮತ್ತು ಬೆಂಬಲಿಸುವ ಜವಾಬ್ದಾರಿಗೆ ಎಫ್ಎಒ ಬದ್ಧವಾಗಿದೆ ಎಂದು ಒತ್ತಿ ಹೇಳಿದರು. ಮಕ್ಕಳು ಮತ್ತು ಹದಿಹರೆಯದವರಿಗೆ ಸಿರಿಧಾನ್ಯಗಳನ್ನು ಪೌಷ್ಟಿಕಾಂಶದ ಭಂಡಾರ ಎಂದು ಬಣ್ಣಿಸಿದ ಯುನಿಸೆಫ್ ಇಂಡಿಯಾದ ಮುಖ್ಯ ಪೌಷ್ಟಿಕಾಂಶ ತಜ್ಞ ಶ್ರೀ ಅರ್ಜನ್ ಡಿ ವಾಗ್ಟ್, ಸಿರಿಧಾನ್ಯಗಳಲ್ಲಿನ ಅನೇಕ ಸ್ಥೂಲ ಮತ್ತು ಸೂಕ್ಷ್ಮ ಪೋಷಕಾಂಶಗಳು ಅದನ್ನು 'ಪೌಷ್ಟಿಕ ಶಕ್ತಿ' ಯನ್ನಾಗಿ ಮಾಡುತ್ತವೆ ಮತ್ತು ಆಹಾರ ಬುಟ್ಟಿಯಲ್ಲಿ ಸಿರಿಧಾನ್ಯಗಳನ್ನು ಸೇರಿಸುವುದರಿಂದ ಅದನ್ನು 'ಕಾಮನಬಿಲ್ಲು ಆಹಾರ' ಎಂದು ಕರೆಯಲಾಗುತ್ತದೆ ಎಂದು ಹೇಳಿದರು. ಪೌಷ್ಟಿಕ ಮತ್ತು ಸಮತೋಲಿತ ಆಹಾರದ ಬಗ್ಗೆ ಜನರಿಗೆ ಅರಿವು ಮೂಡಿಸಲು 'ಆಹಾರ ಸಾಕ್ಷರತೆ'ಯ ಮಹತ್ವವನ್ನು ಅವರು ಒತ್ತಿ ಹೇಳಿದರು.

ಸಮಾವೇಶದ ಎರಡನೇ ಅಧಿವೇಶನವು ಸಿರಿಧಾನ್ಯವನ್ನು ಮಹಾನ್ ಆಹಾರವಾಗಿ ಪರಿಗಣಿಸುವ ಮಹತ್ವವನ್ನು ಚರ್ಚಿಸಿತು. ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪಾಲ್ ಅವರು ಅಧಿವೇಶನ ನಿರ್ವಹಿಸಿದರು. ಎಫ್ಎಒನ ಭಾರತೀಯ ಪ್ರತಿನಿಧಿ ಡಾ. ಅಜೀಜ್ ಎಲ್ಬೆಹ್ರಿ, ಭಾರತದಲ್ಲಿನ ಬ್ರೆಜಿಲ್ ರಾಯಭಾರ ಕಚೇರಿಯ ಕೃಷಿ ಪ್ರತಿನಿಧಿ ಶ್ರೀ ಏಂಜೆಲೊ ಡಿ ಕ್ವಿರೋಜ್ ಮೌರಿಸಿಯೊ, ಜರ್ಮನಿಯ ರಾಯಭಾರ ಕಚೇರಿಯ ಸಲಹೆಗಾರ ಇಂಗೆಬೋರ್ಗ್ ಬೇಯರ್, ಅರ್ಜೆಂಟೀನಾದ ರಾಯಭಾರ ಕಚೇರಿಯ ಶ್ರೀ ಮರಿಯಾನೊ ಬೆಹೆರಾನ್, ಮತ್ತು ಭಾರತದಲ್ಲಿನ ಕೆನಡಾ ಹೈಕಮಿಷನ್ ನ ಕೃಷಿ ಸಲಹೆಗಾರ ಶ್ರೀ ನಿತಿನ್ ವರ್ಮಾ ಅವರು ನೀತಿ ಮಾಪನಾಂಕ ನಿರ್ಣಯದ ಅಗತ್ಯತೆಯ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ನೀಡಿ, ಪ್ರಸ್ತುತ ಮಾರುಕಟ್ಟೆ ಸ್ಥಿತಿ ಮತ್ತು ಸಿರಿಧಾನ್ಯಗಳಿಗೆ ಮಾರುಕಟ್ಟೆ ಬೇಡಿಕೆಯನ್ನು ಸೃಷ್ಟಿಸುವ ಬಗ್ಗೆ ಒತ್ತಿ ಹೇಳಿದರು.

ಸಮ್ಮೇಳನದ ಮೂರನೇ ಅಧಿವೇಶನವನ್ನು ಹಿರಿಯ ಕ್ರೀಡಾ ಪತ್ರಕರ್ತ ಶ್ರೀ ಅಯಾಜ್ ಮೆಮನ್ ನಿರ್ವಹಿಸಿದರು ಮತ್ತು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಶ್ರೀ ಕಪಿಲ್ ದೇವ್, ಕಾಮನ್ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ಕುಸ್ತಿಪಟು ಶ್ರೀಮತಿ ಗೀತಾ ಫೋಗಟ್, ಅಥ್ಲೆಟಿಕ್ಸ್ ಚಾಂಪಿಯನ್ ಶ್ರೀಮತಿ ಅಂಜು ಬಾಬಿ ಜಾರ್ಜ್, ಭಾರತೀಯ ಬ್ಯಾಡ್ಮಿಂಟನ್ ತಂಡದ ಮುಖ್ಯ ರಾಷ್ಟ್ರೀಯ ತರಬೇತುದಾರ ಶ್ರೀ ಪುಲ್ಲೇಲ ಗೋಪಿಚಂದ್ ಮತ್ತು ಭಾರತೀಯ ಕ್ರಿಕೆಟ್ ತಂಡದ ಮಾಜಿ ಮುಖ್ಯ ಆಯ್ಕೆದಾರ ಶ್ರೀ ಎಂಎಸ್.ಕೆ. ಪ್ರಸಾದ್ ಸೇರಿದಂತೆ ಪ್ರಸಿದ್ಧ ಕ್ರೀಡಾಪಟುಗಳು 'ಸಿರಿಧಾನ್ಯಗಳ ಪ್ರಯೋಜನಗಳನ್ನು ಪಡೆಯುವುದು ಮತ್ತು ಯೋಗಕ್ಷೇಮ' ಎಂಬ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.  ಗುಂಪು ಚರ್ಚೆಯು ಆಟದ ಸ್ವರೂಪ ಮತ್ತು ಪ್ರಕಾರವನ್ನು ಆಧರಿಸಿ ನಿರ್ದಿಷ್ಟ ಮತ್ತು ಅದಕ್ಕಾಗಿಯೇ ರೂಪಿಸಲಾದ ಆಹಾರದ ಅಗತ್ಯವನ್ನು ಒತ್ತಿ ಹೇಳಿತು.
ಎಲ್ಲಾ ಮೂರು ಅಧಿವೇಶನಗಳಲ್ಲಿ, ಸಿರಿಧಾನ್ಯಗಳು ಮತ್ತು ಅವುಗಳ ಆರೋಗ್ಯ ಪ್ರಯೋಜನಗಳ ಬಗ್ಗೆ ಅನೇಕ ಆಸಕ್ತಿದಾಯಕ ಪ್ರಶ್ನೆಗಳನ್ನು ಸಭಾಂಗಣದಲ್ಲಿ ಕುಳಿತ ಜನರು ಕೇಳಿದರು.

ಸರ್ಕಾರದ ವಿವಿಧ ಉಪಕ್ರಮಗಳನ್ನು ಮುಂದುವರಿಸಲು ಪೌಷ್ಟಿಕ ತಜ್ಞರು, ಆರೋಗ್ಯ ತಜ್ಞರು, ನೀತಿ ನಿರೂಪಕರು, ಉದ್ಯಮದ ಮುಖಂಡರು, ಅಂತಾರಾಷ್ಟ್ರೀಯ ಭಾಷಣಕಾರರು ಮತ್ತು ಪ್ರಮುಖ ಬಾಧ್ಯಸ್ಥರನ್ನು ತೊಡಗಿಸಿಕೊಳ್ಳುವುದು ಮತ್ತು ಸಿರಿಧಾನ್ಯಗಳ ಬಳಕೆ, ಆರೋಗ್ಯ ಪ್ರಯೋಜನಗಳು, ಸಂಶೋಧನೆ, ಆವಿಷ್ಕಾರಗಳು, ಸುಸ್ಥಿರತೆ ಮತ್ತು ಆಹಾರ ವ್ಯವಸ್ಥೆಯ ರೂಪಾಂತರದ ಬಗ್ಗೆ ಚರ್ಚಿಸುವುದು ಸಮ್ಮೇಳನದ ಉದ್ದೇಶವಾಗಿತ್ತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್, ಡಿಎ ಮತ್ತು ಎಫ್ ಡಬ್ಲ್ಯೂ ಕಾರ್ಯದರ್ಶಿ ಶ್ರೀ ಮನೋಜ್ ಅಹುಜಾ, ಡಿಎಆರ್.ಇ ಮತ್ತು ಡಿಜಿ (ಐಸಿಎಆರ್) ಕಾರ್ಯದರ್ಶಿ ಡಾ.ಹಿಮಾಂಶು ಪಾಠಕ್, ಎಫ್ಎಸ್ಎಸ್ಎಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಜಿ ಕಮಲಾ ವರ್ಧನ ರಾವ್ ಉಪಸ್ಥಿತರಿದ್ದರು, ವರ್ಚುವಲ್ ಮೂಲಕ ಇಥಿಯೋಪಿಯಾದ ಅಧ್ಯಕ್ಷೆ ಶ್ರೀಮತಿ ಸಹ್ಲೆ-ವರ್ಕ್ ಜೆವ್ಡೆ ಮತ್ತು ಗಯಾನಾ ಸಹಕಾರಿ ಗಣರಾಜ್ಯದ ಅಧ್ಯಕ್ಷ ಡಾ. ಮೊಹಮ್ಮದ್ ಇರ್ಫಾನ್ ಅಲಿ ಮತ್ತು  ಸಿರಿಧಾನ್ಯ ಬೆಳೆಯುವ ಮತ್ತು ಆಮದು ಮಾಡಿಕೊಳ್ಳುವ ರಾಷ್ಟ್ರಗಳಾದ ಗಯಾನಾ, ನೈಜರ್, ಶ್ರೀಲಂಕಾ, ಸುಡಾನ್, ಸುರಿನಾಮ್, ಮಾಲ್ಡೀವ್ಸ್, ಮಾರಿಷಸ್ ನ ಕೃಷಿ ಸಚಿವರು ಹಾಗೂ  ಶಿಕ್ಷಣ, ಕೈಗಾರಿಕೆ, ಯುನಿಸೆಫ್ ಇಂಡಿಯಾ, ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಒ), ವಿಜ್ಞಾನಿಗಳು, ತಜ್ಞರು, ರೈತ ಉತ್ಪಾದಕ ಸಂಸ್ಥೆಗಳ  (ಎಫ್.ಪಿ.ಒಗಳು) ಪ್ರತಿನಿಧಿಗಳು, ಕೃಷಿ ವಿಜ್ಞಾನ ಕೇಂದ್ರಗಳು, ವಿದೇಶದಲ್ಲಿರುವ ಭಾರತೀಯ ಸಮುದಾಯ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.

***

 

MV
18 ನೇ ಮಾರ್ಚ್ 2023ರಂದು ಎಚ್ಎಫ್.ಡಬ್ಲ್ಯೂ- ಎಫ್ಎಸ್ಎಸ್ಎಐ- ರಿಂದ ಸಿರಿಧಾನ್ಯಗಳ ಪ್ರಚಾರದ ತಾಂತ್ರಿಕ ಅಧಿವೇಶನಗಳು-1

 


(Release ID: 1908557) Visitor Counter : 147