ಕೃಷಿ ಸಚಿವಾಲಯ
ಸಿರಿಧಾನ್ಯಗಳನ್ನು ಶ್ರೀ ಅನ್ನ ಎಂದು ಕರೆಯುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪವಾಡಸದೃಶ ಆಹಾರಕ್ಕೆ ಹೊಸ ಅರ್ಥ ಮತ್ತು ಆಯಾಮವನ್ನು ನೀಡಿದ್ದಾರೆ: ಶ್ರೀ ನರೇಂದ್ರ ಸಿಂಗ್ ತೋಮರ್
ಜಾಗತಿಕ ಸಿರಿಧಾನ್ಯಗಳ (ಶ್ರೀ ಅನ್ನ) ಸಮ್ಮೇಳನ ಉದ್ದೇಶಿಸಿ ಕೇಂದ್ರ ಕೃಷಿ ಸಚಿವರ ಭಾಷಣ
Posted On:
18 MAR 2023 1:42PM by PIB Bengaluru
ಕೇಂದ್ರ ಕೃಷಿ ಸಚಿವರು ನವದೆಹಲಿಯಲ್ಲಿಂದು ನಡೆದ ಜಾಗತಿಕ ಸಿರಿಧಾನ್ಯಗಳ (ಶ್ರೀ ಅನ್ನ) ಸಮ್ಮೇಳನವನ್ನುದ್ದೇಶಿಸಿ ಭಾಷಣ ಮಾಡಿದರು, ಉದ್ಘಾಟನಾ ಅಧಿವೇಶನದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುಖ್ಯ ಅತಿಥಿಯಾಗಿದ್ದರು.
ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ತಮ್ಮ ಭಾಷಣದಲ್ಲಿ, ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ (ಐವೈಎಂ) – 2023, ಜಾಗತಿಕ ಉತ್ಪಾದನೆಯನ್ನು ಹೆಚ್ಚಿಸಲು, ಪರಿಣಾಮಕಾರಿ ಸಂಸ್ಕರಣೆ ಮತ್ತು ಬೆಳೆ ಬದಲಾವಣೆಯ ಉತ್ತಮ ಬಳಕೆಗೆ ಅವಕಾಶವನ್ನು ಒದಗಿಸುತ್ತದೆ ಮತ್ತು ಸಿರಿಧಾನ್ಯಗಳನ್ನು ಆಹಾರ ಬುಟ್ಟಿಯ ಪ್ರಮುಖ ಅಂಶವಾಗಿ ಉತ್ತೇಜಿಸುತ್ತದೆ ಎಂದು ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಉಪಕ್ರಮದ ಮೇರೆಗೆ ವಿಶ್ವಸಂಸ್ಥೆಯು 2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ (ಐವೈಎಂ) ಎಂದು ಘೋಷಿಸಿದೆ ಎಂದು ಶ್ರೀ ತೋಮರ್ ಹೇಳಿದರು. ಇತರ ಕೇಂದ್ರ ಸಚಿವಾಲಯಗಳು, ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಇತರ ಬಾಧ್ಯಸ್ಥರ ಸಹಯೋಗದೊಂದಿಗೆ ಸಿರಿಧಾನ್ಯಗಳ ಉತ್ಪಾದನೆ ಮತ್ತು ಬಳಕೆಯನ್ನು ಹೆಚ್ಚಿಸಲು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಅಭಿಯಾನದೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.
ಸಸ್ಯಾಹಾರಿ ಖಾದ್ಯಗಳಿಗೆ ಹೆಚ್ಚುತ್ತಿರುವ ಬೇಡಿಕೆಯ ಸಮಯದಲ್ಲಿ ಸಿರಿಧಾನ್ಯಗಳು ಪರ್ಯಾಯ ಆಹಾರ ವ್ಯವಸ್ಥೆಯನ್ನು ಒದಗಿಸುತ್ತವೆ ಏಕೆಂದರೆ ಇದು ಸಮತೋಲಿತ ಆಹಾರ ಮತ್ತು ಸುರಕ್ಷಿತ ವಾತಾವರಣಕ್ಕೆ ಕೊಡುಗೆ ನೀಡುತ್ತದೆ ಮತ್ತು ಅವುಗಳನ್ನು ಮಾನವಕುಲಕ್ಕೆ ಪ್ರಕೃತಿಯ ಕೊಡುಗೆಗಳು ಎಂದು ಶ್ರೀ ತೋಮರ್ ಬಣ್ಣಿಸಿದರು. ಏಷ್ಯಾ ಮತ್ತು ಆಫ್ರಿಕಾ ಸಿರಿಧಾನ್ಯಗಳ ಪ್ರಮುಖ ಉತ್ಪಾದನೆ ಮತ್ತು ಬಳಕೆಯ ಕೇಂದ್ರಗಳಾಗಿವೆ, ವಿಶೇಷವಾಗಿ ಭಾರತ, ನಿಗರ್, ಸುಡಾನ್ ಮತ್ತು ನೈಜೀರಿಯಾ ಸಿರಿಧಾನ್ಯಗಳ ಪ್ರಮುಖ ಉತ್ಪಾದಕ ರಾಷ್ಟ್ರಗಳಾಗಿದ್ದು, ವಿಶ್ವದ ಪ್ರತಿಯೊಂದು ಕಡೆಯೂ ಆಹಾರದ ತಟ್ಟೆಯಲ್ಲಿ ಸಿರಿಧಾನ್ಯಗಳು ಹೆಮ್ಮೆಯ ಸ್ಥಾನವನ್ನು ಪಡೆಯಬೇಕು ಎಂಬುದು ತಮ್ಮ ಪ್ರಾಮಾಣಿಕ ಬಯಕೆಯಾಗಿದೆ ಎಂದು ಅವರು ಹೇಳಿದರು.
ಸಿರಿಧಾನ್ಯಗಳು ಏಷ್ಯಾ ಮತ್ತು ಆಫ್ರಿಕಾದಲ್ಲಿ ಬೆಳೆದ ಮೊದಲ ಬೆಳೆಗಳಾಗಿದ್ದವು, ನಂತರ ಪ್ರಪಂಚದಾದ್ಯಂತದ ಮುಂದುವರಿದ ನಾಗರಿಕತೆಗಳಿಗೆ ಪ್ರಮುಖ ಆಹಾರ ಮೂಲವಾಗಿ ಹರಡಿತು ಎಂದರು.
ಇದಕ್ಕೂ ಮುನ್ನ ಮಾತನಾಡಿದ ಶ್ರೀ ತೋಮರ್ ಅವರು, 2023ರ ಹೊಸ ವರ್ಷದ ಆರಂಭದಲ್ಲಿ ಗಯಾನದ ಅಧ್ಯಕ್ಷ ಡಾ. ಮೊಹಮ್ಮದ್ ಇರ್ಫಾನ್ ಅಲಿ ಅವರನ್ನು ಭೇಟಿ ಮಾಡಿದ್ದು ಮತ್ತು ಗಯಾನಾ ಜನರ ಯೋಗಕ್ಷೇಮಕ್ಕಾಗಿ ಹಾರೈಸಿ, ಪ್ರಾರ್ಥಿಸಿದ್ದು ತಮಗೆ ಬಹಳ ಸಂತೋಷದ ವಿಷಯವಾಗಿದೆ ಎಂದರು. 2023ರ ಜನವರಿ 8-10 ರಂದು ಇಂದೋರ್ ನಲ್ಲಿ ನಡೆದ 17 ನೇ ಪ್ರವಾಸಿ ಭಾರತೀಯ ದಿವಸ್ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿದ್ದಕ್ಕಾಗಿ ಡಾ.ಅಲಿ ಅವರಿಗೆ ಶ್ರೀ ತೋಮರ್ ಧನ್ಯವಾದ ಅರ್ಪಿಸಿದರು ಮತ್ತು ಪ್ರತಿಷ್ಠಿತ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿಯನ್ನು ಸ್ವೀಕರಿಸಿದ್ದಕ್ಕಾಗಿ ರಾಷ್ಟ್ರಪತಿಗಳಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು.
****
(Release ID: 1908410)
Visitor Counter : 168