ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
5ನೇ ಆಸಿಯಾನ್- ಭಾರತ ವ್ಯಾಪಾರ ಶೃಂಗಸಭೆಯಲ್ಲಿ ಶ್ರೀ ರಾಜೀವ್ ಚಂದ್ರಶೇಖರ್ ಭಾಷಣ
ಆಸಿಯಾನ್- ಭಾರತದ ನಡುವಿನ ಸಹಕಾರ ವೃದ್ಧಿಯಲ್ಲಿ ಡಿಜಿಟಲ್ ತಂತ್ರಜ್ಞಾನ ಕ್ಷೇತ್ರದ ಪಾತ್ರ ಮಹತ್ವದ್ದಾಗಿದೆ: ಶ್ರೀ ರಾಜೀವ್ ಚಂದ್ರಶೇಖರ್
ಆಸಿಯಾನ್ ರಾಷ್ಟ್ರಗಳ ಡಿಜಿಟಲ್ ಪರಿವರ್ತನೆಯ ಪಯಣದಲ್ಲಿ ಭಾರತೀಯ ಐಟಿ ಕಂಪೆನಿಗಳು ಮಹತ್ವದ ಪಾತ್ರ ವಹಿಸಿವೆ: ಶ್ರೀ ರಾಜೀವ್ ಚಂದ್ರಶೇಖರ್
ಭಾರತ ಮತ್ತು ಇತರೆ ಆಸಿಯಾನ್ ರಾಷ್ಟ್ರಗಳ ನಡುವೆ ರಿಯಲ್ ಟೈಮ್ ಪಾವತಿಯ ಸಂಪರ್ಕ ವ್ಯವಸ್ಥೆಗಳನ್ನು ಕಾರ್ಯಗತಗೊಳಿಸಲಾಗುವುದು: ಶ್ರೀ ರಾಜೀವ್ ಚಂದ್ರಶೇಖರ್
Posted On:
06 MAR 2023 6:30PM by PIB Bengaluru
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಭಾರತದಲ್ಲಿ ಎಲ್ಲ ಕ್ಷೇತ್ರಗಳಲ್ಲಿನ ವ್ಯಾಪಕ ಡಿಜಿಟಲೀಕರಣ ಕಾರ್ಯವು ಆಸಿಯಾನ್ ರಾಷ್ಟ್ರಗಳೊಂದಿಗಿನ ಪಾಲುದಾರಿಕೆ ಅವಕಾಶವನ್ನು ಸಾಕಷ್ಟು ಹೆಚ್ಚಿಸಿದೆ ಎಂದು ಹೇಳಿದರು.
"ಆಸಿಯಾನ್-ಭಾರತ ವ್ಯಾಪಾರ ಶೃಂಗಸಭೆ 2023ʼಅನ್ನು ಉದ್ದೇಶಿಸಿ ಮಾತನಾಡಿದ ಶ್ರೀ ರಾಜೀವ್ ಚಂದ್ರಶೇಖರ್ ಅವರು, "ಆಸಿಯಾನ್ ಪ್ರದೇಶಗಳಲ್ಲಿನ ಆರ್ಥಿಕ ಅಭಿವೃದ್ಧಿಗೆ ಡಿಜಿಟಲ್ ತಂತ್ರಜ್ಞಾನಗಳು ಚಾಲಕ ಶಕ್ತಿಗಳೆನಿಸಿವೆ. ಅದರಲ್ಲೂ ವಿಶೇಷವಾಗಿ ಇ- ಕಾಮರ್ಸ್, ಆನ್‌ಲೈನ್ ಮಾಧ್ಯಮ ಹಾಗೂ ಆರ್ಥಿಕ ಸೇವೆಗಳಂತಹ ವಲಯದಲ್ಲಿ ಡಿಜಿಟಲ್ ತಂತ್ರಜ್ಞಾನಗಳು ಪ್ರಮುಖ ಪಾತ್ರ ವಹಿಸಿವೆ. ಹಾಗೆಯೇ ಭಾರತೀಯ ಐಟಿ ಕಂಪೆನಿಗಳು ಮಲೇಷಿಯಾ ಹಾಗೂ ಇತರೆ ಆಸಿಯಾನ್ ರಾಷ್ಟ್ರಗಳಲ್ಲಿ ಡಿಜಿಟಲ್ ತಂತ್ರಜ್ಞಾನ ಪರಿವರ್ತನೆಯ ಪ್ರಯಾಣದಲ್ಲಿ ಅವಿಭಾಜ್ಯ ಅಂಗದ ರೀತಿಯಲ್ಲಿ ಮಹತ್ವದ ಪಾತ್ರ ವಹಿಸಿವೆ,ʼʼ ಎಂದು ಶ್ಲಾಘಿಸಿದರು.
ಭಾರತ ಮತ್ತು ಪ್ರಾದೇಶಿಕ ಬಣದ ನಡುವೆ ಸಹಕಾರ ವೃದ್ಧಿಗಿರುವ ಅವಕಾಶಗಳನ್ನು ಒತ್ತಿ ಹೇಳಿದ ಅವರು, "ಭಾರತ ಹಾಗೂ ಸಿಂಗಾಪುರ ನಡುವಿನ ನೈಜ ಸಮಯದಲ್ಲಿ ಪಾವತಿ ಸಂಪರ್ಕ ವ್ಯವಸ್ಥೆ ಸಂಬಂಧ ಇತ್ತೀಚಿನ ಘೋಷಣೆ ಬಳಿಕ ಭಾರತವು ಮಲೇಷಿಯಾ ಮತ್ತು ಇತರೆ ಆಸಿಯಾನ್ ರಾಷ್ಟ್ರಗಳ ಪೈಕಿ ಹೆಚ್ಚಿನ ದೇಶಗಳೊಂದಿಗೆ ಇದೇ ವ್ಯವಸ್ಥೆಯ ಅಳವಡಿಕೆ ಹಾಗೂ ನಿರ್ವಹಣೆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ,ʼʼ ಎಂದು ಹೇಳಿದರು.
"ವ್ಯಾಪಾರ ಪಾಲುದಾರಿಕೆಯ ಕಾರ್ಯತಂತ್ರದ ಭಾಗವಾಗಿ ಆಸಿಯಾನ್- ಭಾರತದ ಆರ್ಥಿಕ ಸಂಬಂಧಗಳ ಬಲವರ್ಧನೆ ಹಾಗೂ ಆ ನಿಟ್ಟಿನಲ್ಲಿ ಹೆಜ್ಜೆ ಮುಂದಿಡುವಿಕೆʼʼ ಎಂಬ ಧ್ಯೇಯವಾಕ್ಯದೊಂದಿಗೆ ನಡೆದಿರುವ ಶೃಂಗಸಭೆಯಲ್ಲಿ ಶ್ರೀ ರಾಜೀವ್ ಚಂದ್ರಶೇಖರ್ ಅವರು ವರ್ಚುವಲ್ ಆಗಿ ಮಾತನಾಡಿದರು.
ಕೌಲಾಲಂಪುರ್‌ನಲ್ಲಿ ಭಾರತ ಮತ್ತು 10-ಸದಸ್ಯರ ಬಣದ ನಡುವಿನ ಮೂರು ದಶಕಕ್ಕೂ ಹೆಚ್ಚಿನ ಸುದೀರ್ಘ ಅವಧಿಯ ಒಡನಾಟದ ಸ್ಮರಣಾರ್ಥ ಆಸಿಯಾನ್- ಭಾರತ ಸ್ನೇಹ ವರ್ಷಾಚರಣೆ ಭಾಗವಾಗಿ ಶೃಂಗಸಭೆ ಆಯೋಜನೆಯಾಗಿದೆ.
ಡಿಜಿಟಲೀಕರಣ ಕ್ಷೇತ್ರದಲ್ಲಿ ಭಾರತವು ವ್ಯಾಪಕವಾಗಿ ಅತ್ಯಾಧುನಿಕ ನಾವೀನ್ಯತೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಬೆಳಕು ಚೆಲ್ಲಿದ ಕೇಂದ್ರ ಸಚಿವರು, "ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಕೇಂದ್ರ ಸರಕಾರ ಕೈಗೊಂಡ ಕ್ರಮಗಳ ಕಾರಣಕ್ಕೆ ಗಮನಾರ್ಹ ಬದಲಾವಣೆಗಳಾಗಿವೆ. ಮುಖ್ಯವಾಗಿ ಡಿಜಿಟಲ್ ಮೂಲಸೌಕರ್ಯದ ವಿಸ್ತರಣೆ, ತಾಂತ್ರಿಕ ನಾವೀನ್ಯತೆ, ವ್ಯಾಪಕವಾಗಿ ಬೆಳೆಯುತ್ತಿರುವ ಸ್ಟಾರ್ಟ್‌ಅಪ್ ಪೂರಕ ವಾತಾವರಣ ಹಾಗೂ ಮುಕ್ತ ತಂತ್ರಜ್ಞಾನಗಳಿಗೆ ವಿಶೇಷ ಒತ್ತು ನೀಡಿರುವ ಪರಿಣಾಮ ಗಮನಾರ್ಹ ಸುಧಾರಣೆ ಕಾಣುತ್ತಿದೆ,ʼʼ ಎಂದು ಹೇಳಿದರು.
ವಿವಿಧ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿಗೆ ಭಾರತ ಸರ್ಕಾರ ಮಾಡಿರುವ ಹೂಡಿಕೆಗಳ ಬಗ್ಗೆಯೂ ಪ್ರಸ್ತಾಪಿಸಿದ ಶ್ರೀ ರಾಜೀವ್ ಚಂದ್ರಶೇಖರ್ ಅವರು, "ಈ ಪ್ರಯತ್ನಗಳ ಪರಿಣಾಮವಾಗಿ ಭಾರತದ ಆರ್ಥಿಕತೆ ಮತ್ತು ಸಮಾಜದ ನಾನಾ ಸ್ತರಗಳಲ್ಲಿ ಪರಿವರ್ತನೆಗೆ ನಾಂದಿ ಹಾಡಿದೆ,ʼʼ ಎಂದು ಪ್ರತಿಪಾದಿಸಿದರು.
ಭಾರತದ ಫಿನ್‌ಟೆಕ್ ಪೂರಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಯುಪಿಐನ ಪರಿಣಾಮಕಾರಿ ಪ್ರಭಾವದ ಬಗ್ಗೆಯೂ ಮಾತನಾಡಿದ ಕೇಂದ್ರ ಸಚಿವರು, “ಭಾರತದ ಏಕೀಕೃತ ಪಾವತಿ ಇಂಟರ್‌ಫೇಸ್ ವ್ಯವಸ್ಥೆಯು 350ಕ್ಕೂ ಹೆಚ್ಚು ಬ್ಯಾಂಕ್‌ಗಳು ಮತ್ತು 260 ಮಿಲಿಯನ್ ಬಳಕೆದಾರರನ್ನು ಹೊಂದುವ ಮೂಲಕ ದೇಶದಲ್ಲಿ ಪಾವತಿ ವಿಧಾನದ ಸ್ವರೂಪವನ್ನೇ ಬದಲಾಯಿಸಿದೆ. ಈ ವೇದಿಕೆ ಮೂಲಕ ಮಾಸಿಕ 8 ಮಿಲಿಯನ್ ವಹಿವಾಟುಗಳು ನಡೆಯುತ್ತಿರುವುದು ಗಮನಾರ್ಹ,ʼʼ ಎಂದು ಹೇಳಿದರು.
ಯುಪಿಐ ಜತೆಗೆ ಭಾರತ ಸರ್ಕಾರವು ರೂಪಿಸಿರುವ ಇತರೆ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಗಳಾದ ಆಧಾರ್, ಕೋವಿನ್, ಜಿಇಎಂ (ಗವರ್ನಮೆಂಟ್ ಇ- ಮಾರ್ಕೆಟ್‌ಪ್ಲೇಸ್) ಬಗ್ಗೆಯೂ ಉಲ್ಲೇಖಿಸಿದ ಕೇಂದ್ರ ಸಚಿವರು, "ಇದು ಒಟ್ಟಾರೆ ಸರ್ಕಾರ, ಆಡಳಿತವನ್ನು ಸುವ್ಯವಸ್ಥಿತ ಹಾಗೂ ಸುಧಾರಿತಗೊಳಿಸುವ ಜತೆಗೆ ಆರ್ಥಿಕ ಒಳಗೊಳ್ಳುವಿಕೆಗೆ ಉತ್ತೇಜನಕಾರಿಕಾರಿಯಾಗಿದೆ,ʼʼ ಎಂದು ಹೆಮ್ಮೆಯಿಂದ ನುಡಿದರು.
****
(Release ID: 1904864)
Visitor Counter : 139