ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷದ ಕುರಿತ ಸಿಬಿಸಿ ಗೋವಾದ ಮಲ್ಟಿಮೀಡಿಯಾ ಪ್ರದರ್ಶನ ಸಮಾರೋಪ
ಪ್ರದರ್ಶನದಲ್ಲಿ ಸಿರಿಧಾನ್ಯ ಪಾಕವಿಧಾನಗಳೊಂದಿಗೆ ವಿದ್ಯಾರ್ಥಿಗಳು ಸಂದರ್ಶಕರನ್ನು ಬೆರಗುಗೊಳಿಸಿದರು.
Posted On:
03 MAR 2023 6:09PM by PIB Bengaluru
ಪಣಜಿ | 3 ಮಾರ್ಚ್ 3, 2023
ಗೋವಾದ ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್ನಿನ ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷದ ಮಲ್ಟಿಮೀಡಿಯಾ ಪ್ರದರ್ಶನ ಇಂದು ಸಮಾರೋಪಗೊಂಡಿತು. 4 ದಿನಗಳ ಪ್ರದರ್ಶನಕ್ಕೆ ಪ್ರೋತ್ಸಾಹದಾಯಕ ಪ್ರತಿಕ್ರಿಯೆ ಲಭಿಸಿತು, ನೂರಾರು ಸಂದರ್ಶಕರು ಇಲ್ಲಿಗೆ ಭೇಟಿ ನೀಡಿದರು. ಸಿರಿಧಾನ್ಯಗಳ ಬಗ್ಗೆ ಮಾಹಿತಿಯುಕ್ತ ವೀಡಿಯೊಗಳು ಮತ್ತು ಚಿತ್ರಗಳು, ಐಸಿಎಆರ್-ಕೇಂದ್ರೀಯ ಕರಾವಳಿ ಕೃಷಿ ಸಂಶೋಧನಾ ಸಂಸ್ಥೆಯ ಮಳಿಗೆ ಮತ್ತು ಸಿರಿಧಾನ್ಯ ಪಾಕವಿಧಾನ ಸ್ಪರ್ಧೆಗಳು ಇಲ್ಲಿಯ ವಿಶೇಷ ಆಕರ್ಷಣೆಗಳಾಗಿದ್ದವು.
.
ಗೋವಾ ಕೃಷಿ ಕಾಲೇಜಿನ 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದ ಪಾಕವಿಧಾನ ಸ್ಪರ್ಧೆಯು ಪ್ರಮುಖ ಆಕರ್ಷಣೆಯಾಗಿತ್ತು. ಪ್ರೀತಿ ನಾಯಕ್ ತನ್ನ ಗ್ಲುಟೆನ್ ಮುಕ್ತ ಜೋಳದ ಕೇಕ್ ತಯಾರಿಸಿ ಪ್ರಥಮ ಬಹುಮಾನವನ್ನು ಪಡೆದರೆ, ರಿಯಾ ವಾಜ್ ಅವರು ರಾಗಿ ಸಿರಿಧಾನ್ಯದಿಂದ ತಯಾರಿಸಿದ ಗೋವಾದ ಉಪಾಹಾರ ಗಂಜಿಯಾದ ಟಿಜಾನ್ ಪಾಕವಿಧಾನಕ್ಕಾಗಿ ಎರಡನೇ ಬಹುಮಾನವನ್ನು ಪಡೆದರು. ಸಿರಿಧಾನ್ಯಗಳೊಂದಿಗೆ ಪಾಕವಿಧಾನಗಳ ಶ್ರೇಣಿಯು ಭಾಗವಹಿಸಿದವರಿಗೆ ಮತ್ತು ಸಂದರ್ಶಕರಿಗೆ ರೋಮಾಂಚಕಾರಿ ಅನುಭವವನ್ನು ಒದಗಿಸಿತು.
ಗೋವಾ ಸರ್ಕಾರದ ಕೃಷಿ ನಿರ್ದೇಶನಾಲಯದ ನಿರ್ದೇಶಕ ನೆವಿಲ್ ಅಲ್ಫೋನ್ಸೊ ಅವರು ವಸ್ತುಪ್ರದರ್ಶನದಲ್ಲಿ ಪಾಲ್ಗೊಂಡು, ಸಿರಿಧಾನ್ಯಗಳನ್ನು ದೈನಂದಿನ ಆಹಾರದ ಭಾಗವಾಗಿ ಸೇರಿಸಿಕೊಳ್ಳುವ ಪ್ರಾಮುಖ್ಯತೆಯ ಬಗ್ಗೆ ಸುದೀರ್ಘವಾಗಿ ಮಾತನಾಡಿದರು, ಗೋವಾದಲ್ಲಿ ಸಿರಿಧಾನ್ಯ ಕೃಷಿಯನ್ನು ವಿಸ್ತರಿಸಲು ಕೃಷಿ ಇಲಾಖೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು. ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವನ್ನು ಅದ್ದೂರಿಯಾಗಿ ಆಚರಿಸಲು ರಾಜ್ಯ ಸರ್ಕಾರ ಯೋಜಿಸಿರುವುದರಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಇಲಾಖೆಗೆ ಆದ್ಯತೆಯ ಕಾರ್ಯವಾಗಿದೆ ಎಂದು ಅವರು ಹೇಳಿದರು.
.
ಪ್ರದರ್ಶನವನ್ನು ಉತ್ತರ ಗೋವಾದ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಟ್ರಯಥ್ಲಾನ್ ಕ್ರೀಡಾಪಟು ಮತ್ತು ಕ್ಯಾನ್ಸರ್ ನಿಂದ ಬದುಕುಳಿದ ನಿಧಿನ್ ವಲ್ಸನ್ ಉದ್ಘಾಟಿಸಿದರು. ಎಸ್ ಪಿ ನಿಧಿನ್ ವಲ್ಸನ್ ಅವರು ಆರೋಗ್ಯಕರ ನಾಳೆಗಾಗಿ ಪ್ರತಿಯೊಬ್ಬರೂ ತಮ್ಮ ಆಹಾರದಲ್ಲಿ ಸಿರಿಧಾನ್ಯಗಳನ್ನು ಅಳವಡಿಸಿಕೊಳ್ಳುವಂತೆ ಮನವಿ ಮಾಡಿದರು. , ತಮ್ಮ ದೈನಂದಿನ ರಾಗಿ ಮಾಲ್ಟ್ ಊಟವು ಆರೋಗ್ಯದ ಬದಲಾವಣೆಗೆ ಹೇಗೆ ಸಹಾಯ ಮಾಡಿತು ಎಂಬುದನ್ನು ಅವರು ಹಂಚಿಕೊಂಡರು. ಐಸಿಎಆರ್-ಕೇಂದ್ರ ಕರಾವಳಿ ಕೃಷಿ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಪ್ರವೀಣ್ ಕುಮಾರ್ ಅವರು ಸಿರಿಧಾನ್ಯಗಳು ಎಷ್ಟೊಂದು ಪುನಶ್ಚೇತನ ಶಕ್ತಿಯನ್ನು ಹೊಂದಿವೆ ಮತ್ತು ಬೆಳೆಯಲು ಹೇಗೆ ಸುಲಭ ಎಂಬುದನ್ನು ವಿವರಿಸಲು ಈ ಅವಕಾಶವನ್ನು ಬಳಸಿಕೊಂಡರು.
ಭಾರತ ಸರ್ಕಾರದ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷದ ಆಚರಣೆಯ ಭಾಗವಾಗಿ ನಾಲ್ಕು ದಿನಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
ಪ್ರದರ್ಶನದ ಫೋಟೋಗಳನ್ನು ಇಲ್ಲಿ ಕಾಣಬಹುದು
ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷದ ಬಗ್ಗೆ
ಸಿರಿಧಾನ್ಯಗಳು ಭಾರತೀಯ ಉಪಖಂಡದಲ್ಲಿ ಬೆಳೆಯುವ ಮತ್ತು ಸೇವಿಸುವ ಸಾಂಪ್ರದಾಯಿಕ ಧಾನ್ಯಗಳಾಗಿವೆ. ಸಿರಿಧಾನ್ಯಗಳು ಹುಲ್ಲಿನ ಕುಟುಂಬಕ್ಕೆ ಸೇರಿದ ಸಣ್ಣ ಧಾನ್ಯಗಳಾಗಿವೆ, ವಾರ್ಷಿಕ, ಬೆಚ್ಚಗಿನ ಹವಾಮಾನದ ಏಕದಳ ಧಾನ್ಯಗಳಾಗಿವೆ. ಅವು ಮಳೆಯಾಶ್ರಿತ, ಗಟ್ಟಿ ಧಾನ್ಯಗಳಾಗಿದ್ದು, ಇತರ ಜನಪ್ರಿಯ ಧಾನ್ಯಗಳಿಗೆ ಹೋಲಿಸಿದರೆ ಇವುಗಳಿಗೆ ಕಡಿಮೆ ನೀರು ಸಾಕಾಗುತ್ತದೆ ಹಾಗು ಫಲವತ್ತತೆಯ ಅವಶ್ಯಕತೆಗಳು ಕೂಡಾ ಕಡಿಮೆ. ಪ್ರಸ್ತುತ 130 ಕ್ಕೂ ಹೆಚ್ಚು ದೇಶಗಳಲ್ಲಿ ಬೆಳೆಯಲಾಗುತ್ತಿರುವ ಸಿರಿಧಾನ್ಯಗಳನ್ನು ಏಷ್ಯಾ ಮತ್ತು ಆಫ್ರಿಕಾದಾದ್ಯಂತ ಅರ್ಧ ಶತಕೋಟಿಗೂ ಹೆಚ್ಚು ಜನರ ಸಾಂಪ್ರದಾಯಿಕ ಆಹಾರವೆಂದು ಪರಿಗಣಿಸಲಾಗಿದೆ. ಭಾರತದ ಪ್ರಸ್ತಾವನೆಯ ಮೇರೆಗೆ ವಿಶ್ವಸಂಸ್ಥೆಯು 2023ನ್ನು ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸಿದೆ. ನಿರಂತರವಾಗಿ ಬೆಳೆಯುತ್ತಿರುವ ಜಾಗತಿಕ ಜನಸಂಖ್ಯೆಗೆ ಆಹಾರವನ್ನು ಒದಗಿಸಲು ಜಾಗತಿಕ ಕೃಷಿ ಆಹಾರ ವ್ಯವಸ್ಥೆಗಳು ಸವಾಲುಗಳನ್ನು ಎದುರಿಸುತ್ತಿರುವುದರಿಂದ, ಸಿರಿಧಾನ್ಯಗಳಂತಹ ಪುನಶ್ಚೇತಕ ಧಾನ್ಯಗಳು ಕೈಗೆಟುಕುವ ದರದಲ್ಲಿ ಮತ್ತು ಪೌಷ್ಟಿಕ ಆಯ್ಕೆಯನ್ನು ಒದಗಿಸುತ್ತವೆ ಹಾಗು ಅವುಗಳ ಕೃಷಿಯನ್ನು ಉತ್ತೇಜಿಸಲು ಪ್ರಯತ್ನಗಳನ್ನು ಹೆಚ್ಚಿಸಬೇಕಾಗಿದೆ. 2018 ರ ಏಪ್ರಿಲ್ ನಲ್ಲಿ, ಸಿರಿಧಾನ್ಯಗಳನ್ನು "ನ್ಯೂಟ್ರಿ ಸಿರಿಧಾನ್ಯಗಳು" ಎಂದು ಮರುನಾಮಕರಣ ಮಾಡಲಾಯಿತು, ನಂತರ 2018ನ್ನು ರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸಲಾಯಿತು, ಇದರ ಹಿಂದೆ ಹೆಚ್ಚಿನ ಉತ್ತೇಜನ ನೀಡುವ ಮತ್ತು ಬೇಡಿಕೆ ಸೃಷ್ಟಿಸುವ ಗುರಿಯನ್ನು ಹೊಂದಲಾಗಿತ್ತು. ಜಾಗತಿಕ ಸಿರಿಧಾನ್ಯಗಳ ಮಾರುಕಟ್ಟೆಯು 2021-2026 ರ ನಡುವಿನ ಮುಂಗಾಣ್ಕೆಯ ಅವಧಿಯಲ್ಲಿ 4.5% ಸಿಎಜಿಆರ್ ದಾಖಲಿಸುವ ನಿರೀಕ್ಷೆಯಿದೆ.
****
(Release ID: 1904214)
Visitor Counter : 134