ಪ್ರಧಾನ ಮಂತ್ರಿಯವರ ಕಛೇರಿ
'ಅಭಿಯಾನದೋಪಾದಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ' ಕುರಿತ ಬಜೆಟೋತ್ತರ ವೆಬಿನಾರ್ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
"ಈ ವೆಬಿನಾರ್ ಗಳು ಬಜೆಟ್ ನಲ್ಲಿ ನಿಗದಿಪಡಿಸಿದ ಗುರಿಗಳನ್ನು ಸಾಧಿಸುವಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತವೆ"
"ನಾವು ರಚನಾತ್ಮಕವಾಗಿ ಯೋಚಿಸಬೇಕು ಮತ್ತು ಪ್ರವಾಸೋದ್ಯಮದಲ್ಲಿ ಹೊಸ ಔನ್ನತ್ಯ ಸಾಧಿಸಲು ಮುಂದೆ ಯೋಜಿಸಬೇಕು"
"ಪ್ರವಾಸೋದ್ಯಮ ಶ್ರೀಮಂತರನ್ನು ಪ್ರತಿನಿಧಿಸುವ ಉನ್ನತ ಅಲಂಕಾರಿಕ ಪದವಲ್ಲ
"ಈ ವರ್ಷದ ಬಜೆಟ್ ತಾಣಗಳ ಸಮಗ್ರ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದೆ"
"ಸೌಲಭ್ಯಗಳ ಹೆಚ್ಚಳವು ಕಾಶಿ ವಿಶ್ವನಾಥ, ಕೇದಾರ ಧಾಮ, ಪಾವಗಡಕ್ಕೆ ಭಕ್ತರ ಆಗಮನದಲ್ಲಿ ಅನೇಕ ಪಟ್ಟು ಹೆಚ್ಚಳಕ್ಕೆ ಕಾರಣವಾಗಿದೆ"
"ಪ್ರತಿಯೊಂದು ಪ್ರವಾಸಿ ತಾಣವೂ ತನ್ನದೇ ಆದ ಆದಾಯ ಮಾದರಿಯನ್ನು ಅಭಿವೃದ್ಧಿಪಡಿಸಬಹುದು"
"ನಮ್ಮ ಹಳ್ಳಿಗಳು ಮೂಲಸೌಕರ್ಯಗಳ ಸುಧಾರಣೆಯಿಂದಾಗಿ ಪ್ರವಾಸೋದ್ಯಮ ಕೇಂದ್ರಗಳಾಗಿ ಮಾರ್ಪಡುತ್ತಿವೆ"
ಕಳೆದ ವರ್ಷ ಜನವರಿಯಲ್ಲಿ ಕೇವಲ 2 ಲಕ್ಷ ವಿದೇಶಿ ಪ್ರವಾಸಿಗರು ಭಾರತಕ್ಕೆ ಬಂದಿದ್ದರೆ, ಈ ವರ್ಷದ ಜನವರಿಯಲ್ಲಿ 8 ಲಕ್ಷ ವಿದೇಶಿ ಪ್ರವಾಸಿಗರು ಭಾರತಕ್ಕೆ ಬಂದಿದ್ದಾರೆ
"ಹೆಚ್ಚಿನ ವೆಚ್ಚ ಮಾಡಬಲ್ಲ ಪ್ರವಾಸಿಗರಿಗೆ ಭಾರತವು ಸಾಕಷ್ಟು ಕೊಡುಗೆಗಳನ್ನೂ ನೀಡಬಲ್ಲುದಾಗಿದೆ"
" ಪ್ರವಾಸೋದ್ಯಮವು ದೇಶದಲ್ಲಿ ಕೃಷಿ, ರಿಯಲ್ ಎಸ್ಟೇಟ್ ಅಭಿವೃದ್ಧಿ, ಮೂಲಸೌಕರ್ಯ ಮತ್ತು ಜವಳಿಗಳಷ್ಟೇ ಸಾಮರ್ಥ್ಯವನ್ನು ಹೊಂದಿದೆ"
Posted On:
03 MAR 2023 11:52AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಜೆಟೋತ್ತರ ವೆಬಿನಾರ್ ಉದ್ದೇಶಿಸಿ 'ಅಭಿಯಾನದೋಪಾದಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ' ಎಂಬ ವಿಷಯದ ಕುರಿತು ಭಾಷಣ ಮಾಡಿದರು. ಕೇಂದ್ರ ಬಜೆಟ್ 2023ರಲ್ಲಿ ಘೋಷಿಸಲಾದ ಉಪಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನನಕ್ಕೆ ತರಲು ಕಲ್ಪನೆಗಳು ಮತ್ತು ಸಲಹೆಗಳನ್ನು ಪಡೆಯಲು ಸರ್ಕಾರ ಆಯೋಜಿಸುತ್ತಿರುವ 12 ಬಜೆಟೋತ್ತರ ವೆಬಿನಾರ್ ಗಳ ಸರಣಿಯಲ್ಲಿ ಇದು ಏಳನೆಯದಾಗಿದೆ.
ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದಿನ ನವ ಭಾರತವು ಹೊಸ ಕಾರ್ಯ ಸಂಸ್ಕೃತಿಯೊಂದಿಗೆ ಮುನ್ನಡೆಯುತ್ತಿದೆ ಎಂದರು. ಭಾರತದ ಜನತೆ ಈ ವರ್ಷದ ಬಜೆಟ್ ಬಗ್ಗೆ ತೋರಿದ ಮೆಚ್ಚುಗೆಗೆ ಅವರು ಸಂತಸ ವ್ಯಕ್ತಪಡಿಸಿದರು. ಹಿಂದಿನ ಕಾರ್ಯ ಸಂಸ್ಕೃತಿಯನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಬಜೆಟ್ ಗೆ ಮೊದಲು ಮತ್ತು ನಂತರ ಎಲ್ಲ ಬಾಧ್ಯಸ್ಥರೊಂದಿಗೆ ಪ್ರಸ್ತುತ ಸರ್ಕಾರದಲ್ಲಿರುವಂತೆ ಚರ್ಚೆಯ ಮನೋಭಾವವಿಲ್ಲದಿದ್ದರೆ ಬಜೆಟ್ ನಂತರದ ವೆಬಿನಾರ್ ಗಳಂತಹ ನಾವೀನ್ಯತೆ ಅಸ್ತಿತ್ವದಲ್ಲಿರುತ್ತಿರಲಿಲ್ಲ ಎಂದು ಹೇಳಿದರು. ಈ ವೆಬಿನಾರ್ ಗಳ ಮುಖ್ಯ ಉದ್ದೇಶ ಬಜೆಟ್ ನ ಫಲಪ್ರದತೆಯನ್ನು ಹೆಚ್ಚಿಸುವುದು ಮತ್ತು ಅದರ ಸಮಯೋಚಿತ ಅನುಷ್ಠಾನ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. "ಈ ವೆಬಿನಾರ್ ಗಳು ಬಜೆಟ್ ನಲ್ಲಿ ನಿಗದಿಪಡಿಸಿದ ಗುರಿಗಳನ್ನು ಸಾಧಿಸುವಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತವೆ" ಎಂದು ಶ್ರೀ ಮೋದಿ ಹೇಳಿದರು. 20 ವರ್ಷಗಳಿಗೂ ಹೆಚ್ಚು ಕಾಲ ಸರ್ಕಾರದ ಮುಖ್ಯಸ್ಥರಾಗಿ ಕೆಲಸ ಮಾಡಿದ ಅನುಭವದಿಂದ ಮಾತನಾಡಿದ ಪ್ರಧಾನಮಂತ್ರಿಯವರು, ಸರ್ಕಾರ ತೆಗೆದುಕೊಳ್ಳುವ ಯಾವುದೇ ಕಾರ್ಯತಂತ್ರದ ನಿರ್ಧಾರಗಳಿಗೆ ಎಲ್ಲ ಬಾಧ್ಯಸ್ಥರು ತಮ್ಮನ್ನು ತಾವು ಹೊಂದಿಸಿಕೊಂಡಾಗ ಅಪೇಕ್ಷಿತ ಫಲಿತಾಂಶಗಳನ್ನು ನಿಗದಿತ ಸಮಯದೊಳಗೆ ಸಾಧಿಸಬಹುದು ಎಂದು ಒತ್ತಿ ಹೇಳಿದರು. ಇಲ್ಲಿಯವರೆಗೆ ನಡೆಸಲಾದ ಬಜೆಟ್ ನಂತರದ ವೆಬಿನಾರ್ ಗಳ ಮೂಲಕ ಪಡೆದ ಸಲಹೆಗಳ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು.
ಭಾರತದಲ್ಲಿ ಪ್ರವಾಸೋದ್ಯಮವನ್ನು ಹೊಸ ಔನ್ನತ್ಯಕ್ಕೆ ಕೊಂಡೊಯ್ಯಲು ರಚನಾತ್ಮಕವಾಗಿ ಆಲೋಚಿಸುವ ಮತ್ತು ಮುಂದೆ ಯೋಜಿಸುವ ಅಗತ್ಯವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. ಪ್ರವಾಸಿ ತಾಣವನ್ನು ಅಭಿವೃದ್ಧಿಪಡಿಸುವ ಮುನ್ನ ಮಾನದಂಡಗಳ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಸ್ಥಳದ ಸಾಮರ್ಥ್ಯ, ಗಮ್ಯಸ್ಥಾನಕ್ಕೆ ಪ್ರಯಾಣಿಸುವಲ್ಲಿನ ಸುಗಮ ಸಂಚಾರ ಮತ್ತು ಗಮ್ಯಸ್ಥಾನವನ್ನು ಉತ್ತೇಜಿಸುವ ಹೊಸ ಮಾರ್ಗೋಪಾಯಗಳನ್ನು ಪಟ್ಟಿ ಮಾಡಿದರು. ಈ ಮಾನದಂಡಗಳನ್ನು ಒತ್ತಿಹೇಳುವುದು ಭವಿಷ್ಯಕ್ಕಾಗಿ ಮಾರ್ಗಸೂಚಿಯನ್ನು ತಯಾರಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ದೇಶದಲ್ಲಿನ ಪ್ರವಾಸೋದ್ಯಮದ ಅಪಾರ ಅವಕಾಶಗಳ ಬಗ್ಗೆ ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಕರಾವಳಿ ಪ್ರವಾಸೋದ್ಯಮ, ಬೀಚ್ ಪ್ರವಾಸೋದ್ಯಮ, ಮ್ಯಾಂಗ್ರೋವ್ ಪ್ರವಾಸೋದ್ಯಮ, ಹಿಮಾಲಯ ಪ್ರವಾಸೋದ್ಯಮ, ಸಾಹಸ ಪ್ರವಾಸೋದ್ಯಮ, ವನ್ಯಜೀವಿ ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮ, ಪಾರಂಪರಿಕ ಪ್ರವಾಸೋದ್ಯಮ, ಆಧ್ಯಾತ್ಮಿಕ ಪ್ರವಾಸೋದ್ಯಮ, ವಿವಾಹ ತಾಣಗಳು, ಸಮ್ಮೇಳನಗಳ ಮೂಲಕ ಪ್ರವಾಸೋದ್ಯಮ ಮತ್ತು ಕ್ರೀಡಾ ಪ್ರವಾಸೋದ್ಯಮಗಳ ಪಟ್ಟಿ ಮಾಡಿದರು. ರಾಮಾಯಣ ಸರ್ಕ್ಯೂಟ್, ಬುದ್ಧ ಸರ್ಕ್ಯೂಟ್, ಕೃಷ್ಣ ಸರ್ಕ್ಯೂಟ್, ಈಶಾನ್ಯ ಸರ್ಕ್ಯೂಟ್, ಗಾಂಧಿ ಸರ್ಕ್ಯೂಟ್ ಮತ್ತು ಎಲ್ಲಾ ಸಂತರ ತೀರ್ಥಕ್ಷೇತ್ರಗಳ ಉದಾಹರಣೆಯನ್ನು ನೀಡಿದ ಅವರು, ಈ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡುವ ಅಗತ್ಯವನ್ನು ಒತ್ತಿ ಹೇಳಿದರು. ಈ ವರ್ಷದ ಆಯವ್ಯಯದಲ್ಲಿ ಸ್ಪರ್ಧಾತ್ಮಕ ಮನೋಭಾವ ಮತ್ತು ಸವಾಲಿನ ಮಾರ್ಗದ ಮೂಲಕ ಭಾರತದ ಹಲವಾರು ಸ್ಥಳಗಳನ್ನು ಗುರುತಿಸಲಾಗಿದೆ ಮತ್ತು ತಾಣಗಳ ಸಮಗ್ರ ಅಭಿವೃದ್ಧಿಯ ಬಗ್ಗೆಯೂ ಗಮನ ಹರಿಸಲಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ವಿವಿಧ ಬಾಧ್ಯಸ್ಥರನ್ನು ಹೇಗೆ ತೊಡಗಿಸಿಕೊಳ್ಳಬಹುದು ಎಂಬ ಬಗ್ಗೆ ವಿಸ್ತೃತ ಚರ್ಚೆ ನಡೆಸುವಂತೆ ಶ್ರೀ ಮೋದಿ ಸೂಚಿಸಿದರು.
ಪ್ರವಾಸೋದ್ಯಮವು ದೇಶದ ಹೆಚ್ಚಿನ ಆದಾಯದ ಗುಂಪುಗಳಿಗೆ ಮಾತ್ರ ಸಂಬಂಧಿಸಿದ ಅಲಂಕಾರಿಕ ಪದವಾಗಿದೆ ಎಂಬ ಮಿಥ್ಯೆಯನ್ನು ಪ್ರಧಾನಮಂತ್ರಿ ಅಲ್ಲಗಳೆದರು. ಯಾತ್ರೆಗಳು ಶತಮಾನಗಳಿಂದ ಭಾರತದ ಸಾಂಸ್ಕೃತಿಕ ಮತ್ತು ಸಾಮಾಜಿಕ ಜೀವನದ ಒಂದು ಭಾಗವಾಗಿದೆ ಮತ್ತು ಜನರು ಯಾವುದೇ ಸಂಪನ್ಮೂಲಗಳು ಲಭ್ಯವಿಲ್ಲದಿದ್ದರೂ ತೀರ್ಥಯಾತ್ರೆಗಳಿಗೆ ಹೋಗುತ್ತಿದ್ದರು ಎಂದು ಉಲ್ಲೇಖಿಸಿದರು. ಚಾರ್ ಧಾಮ್ ಯಾತ್ರೆ, ದ್ವಾದಶ ಜ್ಯೋತಿರ್ಲಿಂಗ ಯಾತ್ರೆ, 51 ಶಕ್ತಿಪೀಠ ಯಾತ್ರೆಯ ಉದಾಹರಣೆ ನೀಡಿದ ಅವರು, ಇದನ್ನು ನಮ್ಮ ಶ್ರದ್ಧಾಕೇಂದ್ರಗಳನ್ನು ಸಂಪರ್ಕಿಸಲು ಮತ್ತು ದೇಶದ ಏಕತೆಯನ್ನು ಬಲಪಡಿಸಲು ಬಳಸಲಾಗುತ್ತಿತ್ತು ಎಂದರು. ದೇಶದ ಅನೇಕ ದೊಡ್ಡ ನಗರಗಳ ಸಂಪೂರ್ಣ ಆರ್ಥಿಕತೆಯು ಈ ಯಾತ್ರೆಗಳ ಮೇಲೆ ಅವಲಂಬಿತವಾಗಿದೆ ಎಂದು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಯಾತ್ರೆಗಳ ಹಳೆಯ ಸಂಪ್ರದಾಯದ ಹೊರತಾಗಿಯೂ ಯುಗಮಾನಕ್ಕೆ ಅನುಗುಣವಾಗಿ ಸೌಲಭ್ಯಗಳನ್ನು ಹೆಚ್ಚಿಸುವಲ್ಲಿ ಅಭಿವೃದ್ಧಿಯ ಕೊರತೆಯಿದೆ ಎಂದು ವಿಷಾದಿಸಿದರು. ನೂರಾರು ವರ್ಷಗಳ ಗುಲಾಮಗಿರಿ ಮತ್ತು ಸ್ವಾತಂತ್ರ್ಯಾನಂತರದ ದಶಕಗಳಲ್ಲಿ ಈ ಸ್ಥಳಗಳ ಬಗ್ಗೆ ರಾಜಕೀಯ ನಿರ್ಲಕ್ಷ್ಯವು ದೇಶಕ್ಕೆ ಹಾನಿಯನ್ನುಂಟುಮಾಡಲು ಮೂಲ ಕಾರಣವಾಗಿದೆ ಎಂದು ಅವರು ಹೇಳಿದರು. "ಇಂದಿನ ಭಾರತವು ಈ ಪರಿಸ್ಥಿತಿಯನ್ನು ಬದಲಿಸುತ್ತಿದೆ" ಎಂದು ಮಧ್ಯಪ್ರವೇಶಿಸಿದ ಪ್ರಧಾನಮಂತ್ರಿಯವರು, ಸೌಲಭ್ಯಗಳ ಹೆಚ್ಚಳವು ಪ್ರವಾಸಿಗರ ಆಕರ್ಷಣೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದರು. ವಾರಣಾಸಿಯ ಕಾಶಿ ವಿಶ್ವನಾಥ ಧಾಮದ ಉದಾಹರಣೆಯನ್ನು ನೀಡಿದ ಅವರು, ದೇವಾಲಯವನ್ನು ಪುನರ್ನಿರ್ಮಿಸುವ ಮುನ್ನ ಒಂದು ವರ್ಷದಲ್ಲಿ ಸುಮಾರು 80 ಲಕ್ಷ ಜನರು ಭೇಟಿ ನೀಡುತ್ತಿದ್ದರು, ಆದರೆ ನವೀಕರಣದ ನಂತರ ಕಳೆದ ವರ್ಷ ಪ್ರವಾಸಿಗರ ಸಂಖ್ಯೆ 7 ಕೋಟಿ ದಾಟಿದೆ ಎಂದು ಮಾಹಿತಿ ನೀಡಿದರು. ಕೇದಾರಘಾಟಿಯಲ್ಲಿ ಪುನರ್ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಮೊದಲು ಕೇವಲ 4-5 ಲಕ್ಷ ಭಕ್ತರು ಬಾಬಾ ಕೇದಾರವನ್ನು ನೋಡಲು ಹೋಗುತ್ತಿದ್ದರು, ಈಗ 15 ಲಕ್ಷ ಭಕ್ತರು ಬಾಬಾ ಕೇದಾರನಾಥನ ದರ್ಶನಕ್ಕೆ ಹೋಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಅದೇ ರೀತಿ ಗುಜರಾತಿನ ಪಾವಗಡದಲ್ಲಿ, ನವೀಕರಣಕ್ಕೆ ಮೊದಲು ಕೇವಲ 4 ರಿಂದ 5 ಸಾವಿರ ಜನರು ಮಾತ್ರ ಕಾಳಿಕಾ ದೇವಿಯ ದರ್ಶನಕ್ಕೆ ಹೋಗುತ್ತಿದ್ದರು, ಈಗ 80 ಸಾವಿರ ಯಾತ್ರಾರ್ಥಿಗಳು ಕಾಳಿಕಾ ದೇವಿಯ ದರ್ಶನಕ್ಕೆ ಹೋಗುತ್ತಾರೆ ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು. ಸೌಲಭ್ಯಗಳ ಹೆಚ್ಚಳವು ಪ್ರವಾಸಿಗರ ಸಂಖ್ಯೆಯ ಮೇಲೆ ನೇರ ಪರಿಣಾಮ ಬೀರುತ್ತದೆ ಮತ್ತು ಹೆಚ್ಚುತ್ತಿರುವ ಸಂಖ್ಯೆಯು ಉದ್ಯೋಗ ಮತ್ತು ಸ್ವಯಂ ಉದ್ಯೋಗಕ್ಕೆ ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ವಿಶ್ವದ ಅತಿ ಎತ್ತರದ ಪ್ರತಿಮೆಯಾದ ಏಕತಾ ಪ್ರತಿಮೆಯ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಇದು ಪೂರ್ಣಗೊಂಡ ಒಂದು ವರ್ಷದೊಳಗೆ 27 ಲಕ್ಷ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಮಾಹಿತಿ ನೀಡಿದರು. ಬೆಳೆಯುತ್ತಿರುವ ನಾಗರಿಕ ಸೌಲಭ್ಯಗಳು, ಉತ್ತಮ ಡಿಜಿಟಲ್ ಸಂಪರ್ಕ, ಉತ್ತಮ ಹೋಟೆಲ್ ಗಳು ಮತ್ತು ಆಸ್ಪತ್ರೆಗಳು, ಕೊಳಕಿನ ಕುರುಹುಗಳಿಲ್ಲದ ಮತ್ತು ಅತ್ಯುತ್ತಮ ಮೂಲಸೌಕರ್ಯಗಳೊಂದಿಗೆ ಭಾರತದ ಪ್ರವಾಸೋದ್ಯಮ ಕ್ಷೇತ್ರವು ಅನೇಕ ಪಟ್ಟು ಹೆಚ್ಚಾಗಬಹುದು ಎಂದು ಅವರು ಒತ್ತಿಹೇಳಿದರು.
ಗುಜರಾತ್ ನ ಅಹ್ಮದಾಬಾದ್ ನಲ್ಲಿರುವ ಕಂಕರಿಯಾ ಸರೋವರ ಯೋಜನೆಯನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಸರೋವರದ ಪುನರಾಭಿವೃದ್ಧಿಯ ಹೊರತಾಗಿ ಆಹಾರ ಮಳಿಗೆಗಳಲ್ಲಿ ಕೆಲಸ ಮಾಡುವವರಿಗೆ ಕೌಶಲ್ಯ ವರ್ಧನೆ ಮಾಡಲಾಗಿದೆ ಎಂದು ತಿಳಿಸಿದರು. ಆಧುನಿಕ ಮೂಲಸೌಕರ್ಯಗಳ ಜೊತೆಗೆ ಸ್ವಚ್ಛತೆಗೆ ಒತ್ತು ನೀಡಿದ್ದರಿಂದ, ಪ್ರವೇಶ ಶುಲ್ಕದ ಹೊರತಾಗಿಯೂ ಪ್ರತಿದಿನ ಸುಮಾರು 10,000 ಜನರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ ಎಂದು ಮಾಹಿತಿ ನೀಡಿದರು. "ಪ್ರತಿಯೊಂದು ಪ್ರವಾಸಿ ತಾಣವೂ ತನ್ನದೇ ಆದ ಆದಾಯ ಮಾದರಿಯನ್ನು ಅಭಿವೃದ್ಧಿಪಡಿಸಬಹುದು" ಎಂದು ಪ್ರಧಾನಮಂತ್ರಿ ಹೇಳಿದರು.
"ನಮ್ಮ ಗ್ರಾಮಗಳು ಪ್ರವಾಸೋದ್ಯಮದ ಕೇಂದ್ರಗಳಾಗುತ್ತಿವೆ" ಎಂದು ಹೇಳಿದ ಪ್ರಧಾನಮಂತ್ರಿಯವರು, ಮೂಲಸೌಕರ್ಯಗಳ ಸುಧಾರಣೆಯಿಂದಾಗಿ ದೂರದ ಹಳ್ಳಿಗಳು ಈಗ ಪ್ರವಾಸೋದ್ಯಮ ನಕ್ಷೆಯಲ್ಲಿ ಬರುತ್ತಿವೆ ಎಂದು ಒತ್ತಿ ಹೇಳಿದರು. ಕೇಂದ್ರ ಸರ್ಕಾರವು ಗಡಿಯಲ್ಲಿರುವ ಹಳ್ಳಿಗಳಿಗೆ ರೋಮಾಂಚಕ ಗ್ರಾಮ ಯೋಜನೆಯನ್ನು ಪ್ರಾರಂಭಿಸಿದೆ ಮತ್ತು ಹೋಂಸ್ಟೇಗಳು, ಸಣ್ಣ ಹೋಟೆಲ್ ಗಳು ಮತ್ತು ರೆಸ್ಟೋರೆಂಟ್ ಗಳಂತಹ ವ್ಯವಹಾರಗಳನ್ನು ಬೆಂಬಲಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಭಾರತದಲ್ಲಿ ಹೆಚ್ಚುತ್ತಿರುವ ವಿದೇಶಿ ಪ್ರವಾಸಿಗರ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಭಾರತದತ್ತ ಹೆಚ್ಚುತ್ತಿರುವ ಆಕರ್ಷಣೆಯ ಬಗ್ಗೆ ಗಮನ ಸೆಳೆದರು ಮತ್ತು ಕಳೆದ ವರ್ಷದ ಜನವರಿಯಲ್ಲಿ ಕೇವಲ 2 ಲಕ್ಷ ವಿದೇಶಿ ಪ್ರವಾಸಿಗರು ಭಾರತಕ್ಕೆ ಬಂದಿದ್ದರೆ ಈ ವರ್ಷದ ಜನವರಿಯಲ್ಲಿ 8 ಲಕ್ಷ ವಿದೇಶಿ ಪ್ರವಾಸಿಗರು ಭಾರತಕ್ಕೆ ಬಂದಿದ್ದಾರೆ ಎಂದು ಮಾಹಿತಿ ನೀಡಿದರು. ಅಂತಹ ಪ್ರವಾಸಿಗರನ್ನು ಪ್ರೊಫೈಲ್ ಮಾಡುವ ಅಗತ್ಯವನ್ನು ಪ್ರಧಾನಮಂತ್ರಿ ಒತ್ತಿಹೇಳಿದರು ಮತ್ತು ಗರಿಷ್ಠ ಖರ್ಚು ಮಾಡುವ ಸಾಮರ್ಥ್ಯವನ್ನು ಹೊಂದಿರುವ ಪ್ರವಾಸಿಗರನ್ನು ದೇಶಕ್ಕೆ ಆಕರ್ಷಿಸಲು ವಿಶೇಷ ಕಾರ್ಯತಂತ್ರವನ್ನು ರಚಿಸಬೇಕೆಂದರು. ಭಾರತಕ್ಕೆ ಬರುವ ವಿದೇಶಿ ಪ್ರವಾಸಿಗರು ಸರಾಸರಿ 1700 ಡಾಲರ್ ಖರ್ಚು ಮಾಡಿದರೆ, ಅಂತಾರಾಷ್ಟ್ರೀಯ ಪ್ರಯಾಣಿಕರು ಅಮೆರಿಕದಲ್ಲಿ ಸರಾಸರಿ 2500 ಡಾಲರ್ ಮತ್ತು ಆಸ್ಟ್ರೇಲಿಯಾದಲ್ಲಿ ಸುಮಾರು 5000 ಡಾಲರ್ ಖರ್ಚು ಮಾಡುತ್ತಾರೆ ಎಂದು ಮಾಹಿತಿ ನೀಡಿದರು. "ಹೆಚ್ಚಿನ ವೆಚ್ಚ ಮಾಡುವ ಪ್ರವಾಸಿಗರಿಗೆ ಭಾರತವು ಸಾಕಷ್ಟು ಕೊಡುಗೆಗಳನ್ನು ನೀಡಬಲ್ಲುದಾಗಿದೆ" ಎಂದು ಅವರು ಹೇಳಿದರು. ಈ ಚಿಂತನೆಗೆ ಅನುಗುಣವಾಗಿ ಪ್ರತಿಯೊಂದು ರಾಜ್ಯವೂ ತನ್ನ ಪ್ರವಾಸೋದ್ಯಮ ನೀತಿಯನ್ನು ಬದಲಾಯಿಸುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ದೇಶದಲ್ಲಿ ತಿಂಗಳುಗಟ್ಟಲೆ ಕ್ಯಾಂಪ್ ಮಾಡುವ ಪಕ್ಷಿ ವೀಕ್ಷಕರ ಉದಾಹರಣೆಯನ್ನು ನೀಡಿದ ಅವರು, ಅಂತಹ ಸಂಭಾವ್ಯ ಪ್ರವಾಸಿಗರನ್ನು ಗುರಿಯಾಗಿಸಲು ನೀತಿಗಳನ್ನು ರೂಪಿಸಬೇಕು ಎಂದು ಒತ್ತಿಹೇಳಿದರು.
ಪ್ರವಾಸೋದ್ಯಮ ಕ್ಷೇತ್ರದ ಮೂಲಭೂತ ಸವಾಲನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಇಲ್ಲಿ ವೃತ್ತಿಪರ ಪ್ರವಾಸಿ ಮಾರ್ಗದರ್ಶಕರ ಕೊರತೆಯ ಬಗ್ಗೆ ಗಮನಸೆಳೆದರು ಮತ್ತು ಮಾರ್ಗದರ್ಶಕರಿಗಾಗಿ ಸ್ಥಳೀಯ ಕಾಲೇಜುಗಳಲ್ಲಿ ಸರ್ಟಿಫಿಕೇಟ್ ಕೋರ್ಸ್ ಗಳನ್ನು ರೂಪಿಸುವ ಅಗತ್ಯವನ್ನು ಒತ್ತಿ ಹೇಳಿದರು. ನಿರ್ದಿಷ್ಟ ಪ್ರವಾಸಿ ತಾಣದಲ್ಲಿ ಕೆಲಸ ಮಾಡುವ ಮಾರ್ಗದರ್ಶಕರು ನಿರ್ದಿಷ್ಟ ಉಡುಗೆ ಅಥವಾ ಸಮವಸ್ತ್ರವನ್ನು ಹೊಂದಿರಬೇಕು ಎಂದು ಅವರು ಸಲಹೆ ನೀಡಿದರು, ಇದರಿಂದ ಪ್ರವಾಸಿಗರು ಮೊದಲ ನೋಟದಲ್ಲಿ ಮಾರ್ಗದರ್ಶಕರ ಬಗ್ಗೆ ತಿಳಿದುಕೊಳ್ಳುತ್ತಾರೆ ಎಂದರು. ಪ್ರವಾಸಿಗರ ಮನಸ್ಸು ಪ್ರಶ್ನೆಗಳಿಂದ ತುಂಬಿರುತ್ತದೆ ಮತ್ತು ಮಾರ್ಗದರ್ಶಿಗಳು ಆ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಸಹಾಯ ಮಾಡಬಹುದು ಎಂದು ಪ್ರಧಾನಮಂತ್ರಿ ಹೇಳಿದರು.
ಈಶಾನ್ಯಕ್ಕೆ ಶಾಲಾ ಮತ್ತು ಕಾಲೇಜುಗಳು ಪ್ರವಾಸಗಳನ್ನು ಆಯೋಜಿಸಲು ಪ್ರಧಾನಮಂತ್ರಿ ಒತ್ತಿ ಹೇಳಿದರು, ಇದರಿಂದ ಹೆಚ್ಚಿನ ಜನರು ಜಾಗೃತರಾಗುತ್ತಾರೆ ಮತ್ತು ಪ್ರವಾಸಿಗರಿಗೆ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸುತ್ತಾರೆ. ವಿವಾಹ ತಾಣಗಳು ಮತ್ತು ಕ್ರೀಡಾ ತಾಣಗಳನ್ನು ಉತ್ತೇಜಿಸಲು ಅವರು ಒತ್ತು ನೀಡಿದರು. ಜಗತ್ತಿನಾದ್ಯಂತದ ಪ್ರತಿಯೊಬ್ಬ ಪ್ರವಾಸಿಗರು ತಮ್ಮ ಭಾರತ ಪ್ರವಾಸದಲ್ಲಿ ಭೇಟಿ ನೀಡಲೇಬೇಕಾದ ಅಂತಹ 50 ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವಂತೆ ಪ್ರಧಾನಮಂತ್ರಿಯವರು ಆಗ್ರಹಿಸಿದರು. ವಿಶ್ವಸಂಸ್ಥೆಯಲ್ಲಿ ಪಟ್ಟಿ ಮಾಡಲಾದ ಎಲ್ಲಾ ಭಾಷೆಗಳಲ್ಲಿ ಪ್ರವಾಸಿ ತಾಣಗಳಿಗೆ ಆಪ್ ಗಳನ್ನು ಅಭಿವೃದ್ಧಿಪಡಿಸುವುದನ್ನು ಅವರು ಪ್ರಸ್ತಾಪಿಸಿದರು.
ಈ ವೆಬಿನಾರ್ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಪ್ರತಿಯೊಂದು ಅಂಶವನ್ನು ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಉತ್ತಮ ಪರಿಹಾರಗಳೊಂದಿಗೆ ಹೊರಬರುತ್ತದೆ ಎಂಬ ವಿಶ್ವಾಸವನ್ನು ಪ್ರಧಾನಮಂತ್ರಿ ವ್ಯಕ್ತಪಡಿಸಿದರು. "ದೇಶದಲ್ಲಿ ಕೃಷಿ, ರಿಯಲ್ ಎಸ್ಟೇಟ್ ಅಭಿವೃದ್ಧಿ, ಮೂಲಸೌಕರ್ಯ ಮತ್ತು ಜವಳಿ ಕ್ಷೇತ್ರಗಳಷ್ಟೇ ಸಾಮರ್ಥ್ಯವನ್ನು ಪ್ರವಾಸೋದ್ಯಮ ಹೊಂದಿದೆ" ಎಂದು ಪ್ರಧಾನಮಂತ್ರಿ ಮಾತು ಮುಕ್ತಾಯಗೊಳಿಸಿದರು.
***
(Release ID: 1903932)
Visitor Counter : 198
Read this release in:
Odia
,
Marathi
,
Bengali
,
Bengali
,
Telugu
,
Malayalam
,
English
,
Urdu
,
Hindi
,
Manipuri
,
Assamese
,
Punjabi
,
Gujarati
,
Tamil