ನಾಗರೀಕ ವಿಮಾನಯಾನ ಸಚಿವಾಲಯ

ಕರ್ನಾಟಕದ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ ಪ್ರಧಾನಮಂತ್ರಿ


ಕಮಲ ಆಕಾರದ ನೂತನ ವಿಮಾನ ನಿಲ್ದಾಣವನ್ನು 450 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ: ಕೇಂದ್ರ ಸಚಿವ ಶ್ರೀ ಸಿಂಧಿಯಾ
 
ವಿಮಾನ ನಿಲ್ದಾಣದ ಪ್ರಯಾಣಿಕರ ಟರ್ಮಿನಲ್ ಕಟ್ಟಡವು ಗಂಟೆಗೆ 300 ಪ್ರಯಾಣಿಕರನ್ನು ನಿಭಾಯಿಸಬಲ್ಲದು
 
ಈ ನಿಲ್ದಾಣದಲ್ಲಿ ರಾತ್ರಿ ವೇಳೆ ವಿಮಾನಗಳನ್ನು ಇಳಿಸುವ ಸೌಲಭ್ಯವೂ ಲಭ್ಯವಿದ್ದು, ಶೀಘ್ರದಲ್ಲೇ ಕಾರ್ಯಾಚರಣೆ ಆರಂಭಿಸಲಿದೆ

Posted On: 27 FEB 2023 6:01PM by PIB Bengaluru

 ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕರ್ನಾಟಕದ ಶಿವಮೊಗ್ಗದಲ್ಲಿ 3,600 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳ ಜೊತೆಗೆ ಹೊಸದಾಗಿ ನಿರ್ಮಿಸಲಾದ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು.

ನೂತನ ವಿಮಾನ ನಿಲ್ದಾಣವನ್ನು ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ವಿಮಾನ ನಿಲ್ದಾಣದ ಪ್ರಯಾಣಿಕರ ಟರ್ಮಿನಲ್ ಕಟ್ಟಡವು 4340 ಚದರ ಮೀಟರ್‌ಗಳಷ್ಟು ವಿಸ್ತಾರವಾಗಿದೆ ಮತ್ತು ಗಂಟೆಗೆ 300 ಪ್ರಯಾಣಿಕರನ್ನು ನಿಭಾಯಿಸಬಲ್ಲದು. ದೇಶಾದ್ಯಂತ ವಾಯು ಸಾರಿಗೆಯನ್ನು ಹೆಚ್ಚಿಸುವತ್ತ ಪ್ರಧಾನಿಯವರು ನೀಡುತ್ತಿರುವ ಗಮನವು ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನೆಯೊಂದಿಗೆ ಮತ್ತಷ್ಟು ಬಲವರ್ಧನೆಗೊಂಡಿದೆ.

ಹೊಸ ವಿಮಾನ ನಿಲ್ದಾಣವು ನಿಸರ್ಗ, ಸಂಸ್ಕೃತಿ ಮತ್ತು ಕೃಷಿಯ ನಾಡು ಶಿವಮೊಗ್ಗಕ್ಕೆ ಅಭಿವೃದ್ಧಿಯ ಬಾಗಿಲು ತೆರೆಯಲಿದೆ ಎಂದು ಪ್ರಧಾನಮಂತ್ರಿ ಹೇಳಿದರು. ವಿಮಾನಯಾನ ಕ್ಷೇತ್ರದ ಅಭೂತಪೂರ್ವ ವಿಸ್ತರಣೆಗೆ ಕಾರಣವಾದ ಸರ್ಕಾರದ ನೀತಿಗಳನ್ನು ಪ್ರಧಾನಮಂತ್ರಿ ವಿವರಿಸಿದರು. ಹವಾಯಿ ಚಪ್ಪಲಿ ಧರಿಸಿದ ಸಾಮಾನ್ಯ ನಾಗರಿಕರು ಹವಾಯಿ ಜಹಾಜ್‌ನಲ್ಲಿ ಪ್ರಯಾಣಿಸಲು ಸಾಧ್ಯವಾಗಬೇಕು ಎಂಬ ತಮ್ಮ ದೃಷ್ಟಿಯನ್ನು ಸಾಕಾರಗೊಳಿಸಲು ಕೈಗೆಟುಕುವ ವಿಮಾನ ಪ್ರಯಾಣಕ್ಕಾಗಿ ಉಡಾನ್ ಯೋಜನೆಯನ್ನು ಆರಂಭಿಸಿದ್ದನ್ನು ಪ್ರಧಾನಿ ಪ್ರಸ್ತಾಪಿಸಿದರು.

ನಾಗರಿಕ ವಿಮಾನಯಾನ ಸಚಿವ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು ಸರಣಿ ಟ್ವೀಟ್‌ಗಳನ್ನು ಮಾಡಿ, “ಇಂದು, ಶ್ರೀ ನರೇಂದ್ರ ಮೋದಿ ಅವರು ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದಾರೆ ಮತ್ತು ದೇಶದಲ್ಲಿ ನಾಗರಿಕ ವಿಮಾನಯಾನಕ್ಕೆ ಹೊಸ ಎತ್ತರವನ್ನು ನೀಡಿದ್ದಾರೆ ಮತ್ತು ಕರ್ನಾಟಕದಲ್ಲಿ ಸಮೃದ್ಧಿಯ ಹೊಸ ಬಾಗಿಲುಗಳನ್ನು ತೆರೆದಿದ್ದಾರೆ” ಎಂದು ಹೇಳಿದ್ದಾರೆ. ಇದು ರಾಜ್ಯದ ಮಾಜಿ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರ ಜನ್ಮದಿನದಂದು ಶಿವಮೊಗ್ಗ ಮತ್ತು ಇಡೀ ಕ್ಷೇತ್ರಕ್ಕೆ ನೀಡಿದ ಒಂದು ಅನನ್ಯ ಕೊಡುಗೆಯಾಗಿದೆ. 2014ರವರೆಗೆ ದೇಶದಲ್ಲಿ ಕೇವಲ 74 ವಿಮಾನ ನಿಲ್ದಾಣಗಳಿದ್ದವು, ಇಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೊಂಡ ಬಳಿಕ ವಿಮಾನ ನಿಲ್ದಾಣಗಳ ಸಂಖ್ಯೆ ದುಪ್ಪಟ್ಟಾಗಿರುವುದು ಇಡೀ ದೇಶಕ್ಕೆ ಹೆಮ್ಮೆಯ ಸಂಗತಿ. ಈಗ ಒಟ್ಟು ಸಂಖ್ಯೆ 148 ಆಗಿದೆ, ಅಂದರೆ ಕಳೆದ 9 ವರ್ಷಗಳಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆಯಲ್ಲಿ ಶೇ.100 ರಷ್ಟು ಹೆಚ್ಚಳವಾಗಿದೆ ಎಂದು ಅವರು ಹೇಳಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣವನ್ನು ಕಮಲದ ಹೂವಿನಂತೆ ವಿನ್ಯಾಸಗೊಳಿಸಲಾಗಿದ್ದು, 450 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು A-320 ಮಾದರಿಯ ವಿಮಾನಗಳಿಗೆ ಸೂಕ್ತವಾಗಿದೆ. ಈ ವಿಮಾನ ನಿಲ್ದಾಣವು 758 ಎಕರೆ ಪ್ರದೇಶದಲ್ಲಿದೆ. ಸ್ವಲ್ಪ ಸಮಯದ ನಂತರ ಪ್ರಾರಂಭವಾಗುವ ಈ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆ ವಿಮಾನಗಳನ್ನು ಇಳಿಸುವ ಸೌಲಭ್ಯವೂ ಲಭ್ಯವಿದೆ ಎಂದು ಸಚಿವರು ಹೇಳಿದ್ದಾರೆ.
ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲು ಮಾರ್ಗ ಮತ್ತು ಕೋಟೆಗಂಗೂರು ರೈಲು ಕೋಚಿಂಗ್ ಡಿಪೋ ಎಂಬ ಎರಡು ರೈಲು ಯೋಜನೆಗಳಿಗೆ ಮತ್ತು ಒಟ್ಟು 215 ಕೋಟಿ ರೂ.ಗಳ ಹಲವಾರು ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿಯವರು ಅಡಿಪಾಯ ಹಾಕಿದರು. ಪ್ರಧಾನಮಂತ್ರಿ ಅವರು ಜಲ ಜೀವನ್ ಮಿಷನ್ ಅಡಿಯಲ್ಲಿ 950 ಕೋಟಿ ರೂ.ಗಳ ಬಹುಗ್ರಾಮ ಯೋಜನೆಗಳನ್ನು ಅನಾವರಣಗೊಳಿಸಿದರು ಮತ್ತು ಶಿವಮೊಗ್ಗ ನಗರದಲ್ಲಿ 895 ಕೋಟಿ ರೂ.ಗಳ 44 ಸ್ಮಾರ್ಟ್ ಸಿಟಿ ಯೋಜನೆಗಳನ್ನು ಉದ್ಘಾಟಿಸಿದರು.

*****



(Release ID: 1902893) Visitor Counter : 117