ಹಣಕಾಸು ಸಚಿವಾಲಯ
azadi ka amrit mahotsav

ಬೆಂಗಳೂರಿನಲ್ಲಿ ಜಿ-20 ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್‌ಗಳ ಮೊದಲ ಸಭೆಗೆ ಮುಂಚಿತವಾಗಿ ನವೀನ, ಸ್ಥಿತಿಸ್ಥಾಪಕ, ಸೇರ್ಪಡೆಯ ಬೆಳವಣಿಗೆ ಮತ್ತು ದಕ್ಷ ಆಡಳಿತಕ್ಕಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಕುರಿತು ಉನ್ನತ ಮಟ್ಟದ ವಿಚಾರಗೋಷ್ಠಿ

Posted On: 24 FEB 2023 11:43AM by PIB Bengaluru

ಭಾರತದ ಜಿ-20 ಅಧ್ಯಕ್ಷತೆಯ ಅಡಿಯಲ್ಲಿ ಬೆಂಗಳೂರಿನಲ್ಲಿ ಆರಂಭವಾಗಿರುವ ಜಿ-20 ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್‌ಗಳ ಮೊದಲ ಸಭೆಗೆ ಮುಂಚಿತವಾಗಿ ನಿನ್ನೆ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ಕುರಿತು ಉನ್ನತ ಮಟ್ಟದ ವಿಚಾರಗೋಷ್ಠಿ ನಡೆಯಿತು.

ಈ ವಿಚಾರ ಸಂಕಿರಣವು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್, ಇಂಡೋನೇಷ್ಯಾ ಹಣಕಾಸು ಸಚಿವ ಡಾ. ಶ್ರೀ ಮೂಲ್ಯಾನಿ ಇಂದ್ರಾವತಿ, ಬ್ರೆಜಿಲ್‌ ಸೆಂಟ್ರಲ್ ಬ್ಯಾಂಕ್ ಗವರ್ನರ್ ಶ್ರೀ ರಾಬರ್ಟೊ ಡಿ ಒಲಿವೇರಾ ಕ್ಯಾಂಪೋಸ್ ನೆಟೊ, ಐಎಂಎಫ್‌ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಕ್ರಿಸ್ಟಲಿನಾ ಜಾರ್ಜಿವಾ ಮತ್ತು ಬ್ಯಾಂಕ್ ಫಾರ್ ಇಂಟರ್ನ್ಯಾಷನಲ್ ಸೆಟ್ಲ್ಮೆಂಟ್ಸ್  ಜನರಲ್ ಮ್ಯಾನೇಜರ್ ಶ್ರೀ ಆಗಸ್ಟಿನ್ ಕಾರ್ಸ್ಟೆನ್ಸ್ ಅವರ ಭಾಗವಹಿಸುವಿಕೆಯೊಂದಿಗೆ ನವೀನ,ಪುಟ್ಟಿದೆಳುವ , ಎಲ್ಲರನ್ನು ಒಳಗೊಳ್ಳುವ  ಬೆಳವಣಿಗೆ ಮತ್ತು ದಕ್ಷ ಆಡಳಿತಕ್ಕಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಕುರಿತು ಚರ್ಚೆಯನ್ನು ನಡೆಸಿತು. 
 

ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಮತ್ತು ಭಾರತದ ಜಿ-20 ಹಣಕಾಸು ಡೆಪ್ಯೂಟಿ ಶ್ರೀ ಅಜಯ್ ಸೇಠ್ ಅವರು ಚರ್ಚೆಯಯಲ್ಲಿ ಭಾಗವಹಿಸುವವರನ್ನು ಸ್ವಾಗತಿಸಿದರು. ಆರ್ಥಿಕ ಪರಿವರ್ತನೆ, ಹಣಕಾಸು ಸೇರ್ಪಡೆ ಮತ್ತು ಅಭಿವೃದ್ಧಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಕುರಿತು ಭಾರತದ ಜಿ-20 ಕಾರ್ಯಪಡೆಯ ಸಹ-ಅಧ್ಯಕ್ಷ ಮತ್ತು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (ಯುಐಡಿಎಐ) ಮಾಜಿ ಅಧ್ಯಕ್ಷ ಶ್ರೀ ನಂದನ್ ನೀಲೇಕಣಿ  ಚರ್ಚೆಗಳನ್ನು ನಡೆಸಿಕೊಟ್ಟರು.

ವಿಚಾರಗೋಷ್ಠಿಯ ಆರಂಭದಲ್ಲಿ ಮಾತನಾಡಿದ ಶ್ರೀ ಅಜಯ್‌ ಸೇಠ್, ಡಿಜಿಟಲ್ ಆವಿಷ್ಕಾರಗಳು ಹೇಗೆ ಸಮಾನತೆಯ ಮತ್ತು ಬೆಳವಣಿಗೆಯ ಅವಕಾಶಗಳಾಗಿ ಹೊರಹೊಮ್ಮಿವೆ ಮತ್ತು ಭಾರತ ಸೇರಿದಂತೆ ಹಲವು ದೇಶಗಳ ಅನುಭವಗಳ ಮೂಲಕ, ಡಿಪಿಐ ಅತ್ಯಂತ ಪರಿವರ್ತನೆಯ ಡಿಜಿಟಲ್ ಆವಿಷ್ಕಾರಗಳಲ್ಲಿ ಒಂದಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು.

ಶ್ರೀ ನೀಲೇಕಣಿಯವರು ಡಿಪಿಐನ ಪಾತ್ರಗಳು ಮತ್ತು ಮಾದರಿಗಳನ್ನು ವಿವರಿಸಿದರು ಮತ್ತು ಡಿಪಿಐ ಅನ್ನು ಬಳಸಿಕೊಂಡು ಸಾಮಾಜಿಕ ಮತ್ತು ಸೇವಾ ವಿತರಣಾ ಸಮಸ್ಯೆಗಳನ್ನು ಪರಿಹರಿಸಲು ಹೊಸ ವಿಧಾನವನ್ನು ಅಭಿವೃದ್ಧಿಪಡಿಸಿದ ಭಾರತದ ಯಶೋಗಾಥೆಯನ್ನು ವಿವರಿಸಿದರು. ಇದು ಸರ್ಕಾರಗಳಿಗೆ ವೆಚ್ಚ ಉಳಿತಾಯಕ್ಕೆ ಕಾರಣವಾಯಿತು, ಹಣಕಾಸು ಮತ್ತು ನಾವೀನ್ಯತೆಗಳಿಗೆ ಪ್ರವೇಶವನ್ನು ಪ್ರೋತ್ಸಾಹಿಸುವಾಗ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಿತು ಎಂದು ಅವರು ಹೇಳಿದರು.
 

ವಿಚಾರಗೋಷ್ಠಿಯಲ್ಲಿ ಭಾಗವಹಿಸಿದವರು ತಮ್ಮ ಅನುಭವಗಳ ಬಗ್ಗೆ ಚರ್ಚಿಸಿದರು ಮತ್ತು ಹೆಚ್ಚಿದ ಲಭ್ಯತೆ, ಸೇರ್ಪಡೆ, ಹೊಣೆಗಾರಿಕೆ ಮತ್ತು ಉತ್ಪಾದಕತೆಯ ಲಾಭಗಳ ಮೂಲಕ ಜನರ ಬೆಳವಣಿಗೆ ಮತ್ತು ಸಬಲೀಕರಣಕ್ಕೆ ಕಾರಣವಾಗುವ ಡಿಪಿಐನ ಸಾಮರ್ಥ್ಯವನ್ನು ವಿವರಿಸಿದರು. ನಿರ್ದಿಷ್ಟವಾಗಿ ಸಾಂಕ್ರಾಮಿಕ ಸಮಯದಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯದ ವ್ಯಾಪ್ತಿಯನ್ನು ಕೊನೆಯ ಮೈಲಿಯವರೆಗೆ ವಿಸ್ತರಿಸಲು ಡಿಪಿಐ ನೀಡಿದ ಕೊಡುಗೆಯನ್ನು ಅವರು ಒತ್ತಿಹೇಳಿದರು.

ಸೇರ್ಪಡೆಯ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಡಿಪಿಐ ಅನ್ನು ಬಳಸಿಕೊಳ್ಳುವುದು ಭಾರತದ ಜಿ-20 ಅಧ್ಯಕ್ಷತೆಯ ಪ್ರಮುಖ ಆದ್ಯತೆಯಾಗಿದೆ. ವಿಚಾರಗೋಷ್ಠಿಯಲ್ಲಿನ ಚರ್ಚೆಗಳು ಸಮರ್ಥ ಆಡಳಿತಕ್ಕಾಗಿ ನವೀನ, ಸ್ಥಿತಿಸ್ಥಾಪಕ ಮತ್ತು ಸೇರ್ಪಡೆಯ ಬೆಳವಣಿಗೆಗೆ ಕಾರಣವಾಗುವ ಡಿಪಿಐ ಸಾಮರ್ಥ್ಯಗಳ ಮೇಲೆ ಬೆಳಕು ಚೆಲ್ಲಿದವು.

ಈ ಆದ್ಯತೆಯ ಅಡಿಯಲ್ಲಿ ಕೆಲಸವನ್ನು ನಿರ್ವಹಿಸಲು, ಭಾರತದ ಜಿ-20 ಅಧ್ಯಕ್ಷತೆಯು ಆರ್ಥಿಕ ಪರಿವರ್ತನೆ, ಆರ್ಥಿಕ ಸೇರ್ಪಡೆ ಮತ್ತು ಅಭಿವೃದ್ಧಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಗಳ ಕಾರ್ಯಪಡೆಯನ್ನು ಸಹ ರಚಿಸಿದೆ. ಈ ಕಾರ್ಯಪಡೆಗೆ ಭಾರತದ ಜಿ-20 ಶೆರ್ಪಾ ಶ್ರೀ ಅಮಿತಾಭ್ ಕಾಂತ್ ಮತ್ತು ಶ್ರೀ ನಿಲೇಕಣಿ ಅವರು ಸಹ-ಅಧ್ಯಕ್ಷರಾಗಿದ್ದಾರೆ ಮತ್ತು ಭಾರತದ ಜಿ-20 ಅಧ್ಯಕ್ಷತೆಯ ಸಮಯದಲ್ಲಿ ಮಾರ್ಗದರ್ಶನ ನೀಡಲು ಇದನ್ನು ರಚಿಸಲಾಗಿದೆ.

*****
 


(Release ID: 1901968) Visitor Counter : 203