ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಮತ್ತು 'ಲೋಕಮತ್' ಸಂಸ್ಥಾಪಕ ಶ್ರೀ ಜವಾಹರಲಾಲ್ ಜಿ ದರ್ದಾ ಅವರ ಜನ್ಮ ಶತಮಾನೋತ್ಸವ ಆಚರಣೆ ಕಾರ್ಯಕ್ರಮ  ಮತ್ತು 'ಲೋಕಮತ್ ನಾಗ್ಪುರ ಆವೃತ್ತಿ'ಯು 50 ವರ್ಷಗಳನ್ನು ಪೂರೈಸಿದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.


ಮಹಾರಾಷ್ಟ್ರವು ಪತ್ರಿಕೋದ್ಯಮ ಕ್ಷೇತ್ರದಲ್ಲಿ ದೊಡ್ಡ ಇತಿಹಾಸವನ್ನು ಹೊಂದಿದೆ, ಲೋಕಮಾನ್ಯ ಬಾಲ ಗಂಗಾಧರ ತಿಲಕ್ 1881 ರಲ್ಲಿ 'ಕೇಸರಿ' ಪತ್ರಿಕೆಯನ್ನು ಪ್ರಾರಂಭಿಸಿದರು, ಇದು ಮಹಾರಾಷ್ಟ್ರದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ಸ್ವಾತಂತ್ರ್ಯದ ಪ್ರಜ್ಞೆಯನ್ನು ಜಾಗೃತಗೊಳಿಸಿತು.

ಸತ್ಯ, ಧೈರ್ಯ ಮತ್ತು ನಿರಂತರತೆಯ ಗುಣಗಳನ್ನು ಒಳಗೊಂಡ ಕಾರ್ಯ ವಿಧಾನವನ್ನು ರೂಪಿಸುವುದು ಪತ್ರಿಕೆಗೆ ಬಹಳ ಮುಖ್ಯ

ಪತ್ರಿಕೋದ್ಯಮವನ್ನು ನಿರ್ವಹಿಸುವಾಗ ನಿಯತಕಾಲಿಕವನ್ನು ಜನಪ್ರಿಯ ಮತ್ತು ಲಾಭದಾಯಕವಾಗಿಡುವುದು ಬಹಳ ಕಷ್ಟದ ಕೆಲಸ, ಲೋಕಮತ್ ಗ್ರೂಪ್ (ಗುಂಪು)  ಅದನ್ನು ಉತ್ತಮ ರೀತಿಯಲ್ಲಿ ಮಾಡಿದೆ, ಇದಕ್ಕಾಗಿ ಲೋಕಮತ್ ಗುಂಪಿಗೆ ಅಭಿನಂದನೆಗಳು

ಜೀವನದಲ್ಲಿ, ಮೌಲ್ಯಗಳು ಮತ್ತು ತತ್ವಗಳಿಗೆ ಬದ್ಧರಾಗಿ ತೆಗೆದುಕೊಳ್ಳುವ ನಿರ್ಧಾರಗಳು ಒಬ್ಬ ವ್ಯಕ್ತಿಯನ್ನು ಶ್ರೇಷ್ಠನನ್ನಾಗಿ ಮಾಡುತ್ತವೆ, ಶ್ರೀ ಜವಾಹರಲಾಲ್ ದರ್ದಾ ಅವರು ತುರ್ತು ಪರಿಸ್ಥಿತಿಯಲ್ಲಿ ದೃಢವಾಗಿ ನಿಲ್ಲುವ ಮೂಲಕ ತಮ್ಮ ಬಲವಾದ ದೃಢನಿಶ್ಚಯವನ್ನು ತೋರಿಸಿದ್ದಾರೆ.

ಒಂದು ಸಂಸ್ಥೆಯ ನಿರಂತರ ನಿರ್ವಹಣೆಗೆ ಕೆಲವು ತತ್ವಗಳನ್ನು ನಿಗದಿಪಡಿಸಬೇಕಾಗುತ್ತದೆ, ಆದರೆ ಶ್ರೀ ಜವಾಹರಲಾಲ್ ದರ್ದಾ ಅವರು ತಮ್ಮ ಸ್ವಂತ ಬದುಕಿನ ಕಾರ್ಯಗಳಿಂದ 'ಲೋಕಮತ್' ಗೆ ಉನ್ನತ ಮಾನದಂಡಗಳನ್ನು ರೂಪಿಸಿದರು

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಕಳೆದ ಸುಮಾರು 9 ವರ್ಷಗಳಲ್ಲಿ ದೇಶವು ಬಹಳಷ್ಟು ಸಾಧಿಸಿದೆ, ಭಾರತವು ಶೇಕಡಾ 70 ರಷ್ಟು ಸ್ವಾವಲಂಬನೆಯೊಂದಿಗೆ ವಿಶ್ವದ ಮುಂದೆ ದೃಢವಾಗಿ ನಿಂತಿದೆ ಮತ್ತು ಮೇಕ್ ಇನ್ ಇಂಡಿಯಾದ ಕನಸನ್ನು ಸಾಕಾರಗೊಳಿಸುವ ಮೂಲಕ ಉತ್ಪಾದನಾ ತಾಣವಾಗಿ ಮಾರ್ಪಟ್ಟಿದೆ.

ಕಳೆದ 75 ವರ್ಷಗಳಲ್ಲಿ ಭಾರತವು ಯಾವುದೇ ದುರಹಂಕಾರ ತೋರದೆ ವಿಶ್ವದ ಮುಂದೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ, ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದೆ

ಸರ್ಕಾರವು ದೇಶ ಮತ್ತು ಜನರ ಬಗ್ಗೆ ಯೋಚಿಸಿದಾಗ, ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಒಂದು ಕ್ಷಣವೂ ವಿಳಂಬ ಮಾಡುವುದಿಲ್ಲ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಭಾರತ ಸರ್ಕಾರವು ಎಂದಿಗೂ ಜನರಿಗೆ ಇಷ್ಟವಾಗುವ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ, ಬದಲಿಗೆ ಜನರಿಗೆ ಒಳ್ಳೆಯದನ್ನು ಮಾಡುವ ನಿರ್ಧಾರಗಳನ್ನು ತೆಗೆದುಕೊಂಡಿದೆ.

ಇಂದು ನಮ್ಮ ಯುವಕರು ರೂಪಿಸಿದ ನವೋದ್ಯಮಗಳು ಜಗತ್ತಿನಲ್ಲಿ ವಿಶಿಷ್ಟ ಗುರುತನ್ನು ಸ್ಥಾಪಿಸಿವೆ ಮತ್ತು ನಮ್ಮ ಅನೇಕ ಯುವಕರು ಬಹು-ಮಿಲಿಯನೇರ್ ಗಳಾಗಿದ್ದಾರೆ.

ಶ್ರೀ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮೊದಲು, ಕಾಶ್ಮೀರ, ಈಶಾನ್ಯ ಮತ್ತು ಎಡಪಂಥೀಯ ಉಗ್ರವಾದ ಪೀಡಿತ ಪ್ರದೇಶಗಳು ಆಂತರಿಕ ಭದ್ರತೆಯ ದೃಷ್ಟಿಯಿಂದ ಮೂರು ದೊಡ್ಡ ಹಾಟ್ ಸ್ಪಾಟ್ ಗಳಾಗಿದ್ದವು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಈ ಮೂರು ಪ್ರದೇಶಗಳಲ್ಲಿ ಹಿಂಸಾಚಾರವನ್ನು ಶೇಕಡಾ 80 ರಷ್ಟು ಕಡಿಮೆ ಮಾಡಿದೆ.

2047 ರ ವೇಳೆಗೆ ಭಾರತವನ್ನು ವಿಶ್ವದಲ್ಲಿ ಮುಂಚೂಣಿ ಸ್ಥಾನಕ್ಕೆ ಕೊಂಡೊಯ್ಯಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ನಮ್ಮ ಮುಂದೆ ಇಟ್ಟಿರುವ ನಿರ್ಣಯಕ್ಕೆ ಅಡಿಪಾಯ ಹಾಕುವ ಕಾರ್ಯ ಪೂರ್ಣಗೊಂಡಿದೆ, ಈಗ ಈ ನಿರ್ಣಯವನ್ನು ಸಾಕಾರಗೊಳಿಸಲು ಇದು ಸರಿಯಾದ ಸಮಯ.

ಶ್ರೀ ಅಮಿತ್ ಶಾ ಅವರು ಬಾಬಾ ಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರಿಗೆ ಅವರ ದೀಕ್ಷಾ ಭೂಮಿಯಲ್ಲಿ ಗೌರವ ನಮನ ಸಲ್ಲಿಸಿದರು

ನಾಗ್ಪುರದ ರೇಶಿಮ್ ಬಾಗ್ ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪಕ ಸರಸಂಘಚಾಲಕ ಡಾ. ಹೆಡ್ಗೆವಾರ್ ಜೀ ಮತ್ತು ಎರಡನೇ ಸರಸಂಘಚಾಲಕ ಶ್ರೀ ಗುರೂಜಿ ಅವರಿಗೆ ಕೇಂದ್ರ ಗೃಹ ಸಚಿವರು ಪುಷ್ಪ ನಮನ ಸಲ್ಲಿಸಿದರು.

ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಮಹಾಶಿವರಾತ್ರಿಯ ಸಂದರ್ಭದಲ್ಲಿ ಎಲ್ಲಾ ದೇಶವಾಸಿಗಳಿಗೆ ಶುಭಾಶಯ ಕೋರಿದ್ದಾರೆ

Posted On: 18 FEB 2023 8:34PM by PIB Bengaluru

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಾರ ಮತ್ತು 'ಲೋಕಮತ್' ಸಂಸ್ಥಾಪಕ ಜವಾಹರಲಾಲ್ ದರ್ದಾ ಅವರ ಜನ್ಮ ಶತಮಾನೋತ್ಸವ ಆಚರಣೆ ಹಾಗು 'ಲೋಕಮತ್ ನಾಗ್ಪುರ ಆವೃತ್ತಿ'ಯ 50 ವರ್ಷಗಳನ್ನು ಪೂರೈಸಿದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶ್ರೀ ಅಮಿತ್ ಶಾ ಅವರು ಬಾಬಾ ಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರ ದೀಕ್ಷಾ ಭೂಮಿಗೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು. ಕೇಂದ್ರ ಗೃಹ ಸಚಿವರು ನಾಗ್ಪುರದ ರೇಶಿಮ್ ಬಾಗ್ ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪಕ ಸರಸಂಘಚಾಲಕ ಡಾ.ಹೆಡ್ಗೆವಾರ್ ಜಿ ಮತ್ತು ಎರಡನೇ ಸರಸಂಘಚಾಲಕ ಶ್ರೀ ಗುರೂಜಿ ಅವರಿಗೆ ಪುಷ್ಪ ನಮನ ಸಲ್ಲಿಸಿದರು. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್ ಮತ್ತು ಲೋಕಮತ್ ಮೀಡಿಯಾ ಗ್ರೂಪ್ ನ ಅಧ್ಯಕ್ಷ ಮತ್ತು ಮಾಜಿ ಸಂಸದ ಶ್ರೀ ವಿಜಯ್ ದರ್ದಾ ಅವರು ಲೋಕಮತ್ ಗ್ರೂಪ್ ನ 50 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಉಪಸ್ಥಿತರಿದ್ದರು.

 ಶ್ರೀ ಅಮಿತ್ ಶಾ ಅವರು ಇಂದು ಮಹಾಶಿವರಾತ್ರಿಯ ಶುಭ ಸಂದರ್ಭದಲ್ಲಿ ಎಲ್ಲಾ ದೇಶವಾಸಿಗಳಿಗೆ ಶುಭಾಶಯ ಕೋರಿದರು. ಗೃಹ ಸಚಿವರು ತಮ್ಮ ಭಾಷಣದಲ್ಲಿ, ಯಾವುದೇ ಸಂಸ್ಥೆ ತನ್ನ ಸಂಘಟಕರ ಸತ್ಯ, ಧೈರ್ಯ ಮತ್ತು ನಿರಂತರತೆಯಿಂದಾಗಿ ಮಾತ್ರವೇ ಐವತ್ತು ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡುವುದರಿಂದ ಸುವರ್ಣ ಮಹೋತ್ಸವವನ್ನು ಆಚರಿಸಲು ಸಾಧ್ಯ ಎಂದು ಹೇಳಿದರು. ಲೋಕಮತ್ ಗ್ರೂಪಿನ  ಸ್ಥಾಪಕರು ಪತ್ರಿಕೆಗೆ ಮುಖ್ಯವಾದ ಈ ಮೂರು ಗುಣಗಳನ್ನು ಅಳವಡಿಸಿಕೊಂಡರು ಮತ್ತು ಅವುಗಳಿಗೆ ಕಾರ್ಯ ವಿಧಾನವನ್ನು ರೂಪಿಸಿದರು. ಲೋಕಮತ್ ಮಾಸಿಕದಿಂದ ಪಾಕ್ಷಿಕವಾಗಿ, ಬಳಿಕ ಸಾಪ್ತಾಹಿಕ ಮತ್ತು ದೈನಂದಿನ ಆವೃತ್ತಿಗಳಿಗೆ ತನ್ನ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಮತ್ತು ಪ್ರಸ್ತುತ ಟಿವಿ ಮತ್ತು ಆನ್ಲೈನ್ ಆವೃತ್ತಿಗಳೊಂದಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಮಾಹಿತಿಯನ್ನು ಜನಪ್ರಿಯವಾಗಿಸುತ್ತಿದೆ ಮತ್ತು ಉಪಯುಕ್ತವಾಗಿಸುತ್ತಿದೆ ಎಂದು ಅವರು ಹೇಳಿದರು. ಪತ್ರಿಕೋದ್ಯಮವನ್ನು ನಿರ್ವಹಿಸುವಾಗ ನಿಯತಕಾಲಿಕವನ್ನು ಜನಪ್ರಿಯ ಮತ್ತು ಲಾಭದಾಯಕವಾಗಿಡುವುದು ಬಹಳ ಕಷ್ಟದ ಕೆಲಸ ಎಂದೂ  ಶ್ರೀ ಶಾ ಹೇಳಿದರು. ಲೋಕಮತ್ ಗ್ರೂಪ್ ಇದನ್ನು ಉತ್ತಮ ರೀತಿಯಲ್ಲಿ ಮಾಡಿದೆ, ಇದಕ್ಕಾಗಿ ಲೋಕಮತ್ ಗುಂಪಿಗೆ ಅಭಿನಂದನೆಗಳು ಎಂದವರು ನುಡಿದರು. 

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಹಾರಾಷ್ಟ್ರವು ಬಹಳ ಪ್ರಕಾಶಮಾನವಾದ ಇತಿಹಾಸವನ್ನು ಹೊಂದಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಮರಾಠಿ ಪತ್ರಿಕೋದ್ಯಮದ ಪಿತಾಮಹ ಬಾಲಶಾಸ್ತ್ರಿ ಜಂಭೇಕರ್ ಅವರು 1832 ರಲ್ಲಿ ಮೊದಲ ಬಾರಿಗೆ 'ದರ್ಪಣ' ಎಂಬ ನಿಯತಕಾಲಿಕವನ್ನು ಪ್ರಕಟಿಸಲು ಪ್ರಾರಂಭಿಸಿದರು ಮತ್ತು ಲೋಕಮಾನ್ಯ ಬಾಲ ಗಂಗಾಧರ ತಿಲಕ್ ಅವರು 1881 ರಲ್ಲಿ 'ಕೇಸರಿ' ಎಂಬ ನಿಯತಕಾಲಿಕವನ್ನು ಪ್ರಾರಂಭಿಸಿದರು, ಇದು ಮಹಾರಾಷ್ಟ್ರದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ಸ್ವಾತಂತ್ರ್ಯದ ಪ್ರಜ್ಞೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಿತು ಎಂದು ಅವರು ಹೇಳಿದರು. ಇದರ ಮೂಲಕ ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್ ಅವರ ಚಿಂತನೆಗಳು ಮಹಾರಾಷ್ಟ್ರ ಮತ್ತು ದೇಶದಾದ್ಯಂತದ ಯುವಕರನ್ನು ತಲುಪಿದವು. ಲೋಕಮಾನ್ಯ ತಿಲಕರು ಲೋಕಮತ್ ಎಂದು ಹೆಸರಿಸಿರುವುದರಿಂದ ಲೋಕಮತ್ ಕೂಡ ಈ ಸಂಪ್ರದಾಯದೊಂದಿಗೆ ಸಂಬಂಧ ಹೊಂದಿದೆ ಎಂದು ಶ್ರೀ ಶಾ ಹೇಳಿದರು.

ತತ್ವಗಳಿಗಾಗಿ ನಿರ್ಧಾರ ತೆಗೆದುಕೊಳ್ಳುವ ಸಮಯವು ವ್ಯಕ್ತಿಯ ಜೀವನದಲ್ಲಿ ಎರಡು ಅಥವಾ ಮೂರು ಬಾರಿ ಮಾತ್ರ ಬರುತ್ತದೆ, ಇದು ಕ್ಷಣಿಕವಾಗಿರುತ್ತದೆ ಹಾಗು ಈ ಕ್ಷಣವು ವ್ಯಕ್ತಿಯನ್ನು ಶ್ರೇಷ್ಠನನ್ನಾಗಿ ಮಾಡುತ್ತದೆ ಮತ್ತು ಅಮರತ್ವವನ್ನು ನೀಡುತ್ತದೆ ಎಂದೂ ಶ್ರೀ ಅಮಿತ್ ಶಾ ಹೇಳಿದರು. ಈ ನಿಲುವು ಉದ್ದೇಶಪೂರ್ವಕ ಚಿಂತನೆಯ ಬಳಿಕ  ತೆಗೆದುಕೊಳ್ಳುವಂತಹದಲ್ಲ ಆದರೆ ವ್ಯಕ್ತಿಯ ಮೌಲ್ಯಗಳು, ನಂಬಿಕೆಗಳು ಮತ್ತು ತತ್ವಗಳನ್ನು ಅವಲಂಬಿಸಿರುವ ಮನಸ್ಸಿನಿಂದ ತೆಗೆದುಕೊಳ್ಳಲಾಗಿರುತ್ತದೆ. ಜವಾಹರಲಾಲ್ ದರ್ದಾ ಅವರು ತುರ್ತು ಪರಿಸ್ಥಿತಿಯ ಸಮಯದಲ್ಲಿ ಸರಿಯಾದ ನಿಲುವನ್ನು ತೆಗೆದುಕೊಳ್ಳುವ ಮೂಲಕ ಈ ಸಂಸ್ಥೆಯನ್ನು ಸಮರ್ಥಿಸಿಕೊಂಡರು, ಇದೇ ಒಂದು  ದೊಡ್ಡ ವಿಷಯವಾಗಿದೆ. ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ  ಸ್ತಂಭವೆಂದು ಪರಿಗಣಿಸಲಾಗಿದೆ ಎಂದು ಅವರು ಹೇಳಿದರು. ಸಾಮಾಜಿಕ ಜೀವನದಲ್ಲಿ ಅವನತಿ ಉಂಟಾದಾಗಲೆಲ್ಲಾ, ಪ್ರತಿಯೊಂದು ಕ್ಷೇತ್ರದಲ್ಲೂ ಕುಸಿತ ಉಂಟಾಗುತ್ತದೆ, ಆದರೆ ಲೋಕಮತ್ ಅಂತಹ ಸಮಯದಲ್ಲೂ ತನ್ನ ತತ್ವಗಳ ಆಧಾರದ ಮೇಲೆ ತನ್ನ ಪ್ರಯಾಣವನ್ನು ಮುಂದುವರಿಸಿತು ಮತ್ತು ಈ ಸ್ಥಾನವನ್ನು ತಲುಪಿತು. ದಿವಂಗತ ಶ್ರೀ ಜವಾಹರ್ ಲಾಲ್ ದರ್ದಾ ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು ಮತ್ತು ಸುಮಾರು ಎರಡೂವರೆ ವರ್ಷಗಳ ಕಾಲ ಜೈಲಿನಲ್ಲಿದ್ದರು ಎಂದೂ ಶ್ರೀ ಶಾ ಹೇಳಿದರು. ಇದರೊಂದಿಗೆ, ಸ್ವಾತಂತ್ರ್ಯದ ನಂತರ ರಾಜಕೀಯದಲ್ಲಿದ್ದಾಗ, ಅವರು ಸಮಾಜಕ್ಕೆ ಉತ್ತಮ ನಿಯತಕಾಲಿಕವನ್ನು ಒದಗಿಸಲು ಉನ್ನತ ಮಾನದಂಡಗಳನ್ನು ರೂಪಿಸಿದರು. ಒಂದು ಸಂಸ್ಥೆಯನ್ನು ನಿರಂತರವಾಗಿ ನಡೆಸಲು ಕೆಲವು ತತ್ವಗಳನ್ನು ನಿಗದಿಪಡಿಸಬೇಕಾಗುತ್ತದೆ, ಆದರೆ ಶ್ರೀ ಜವಾಹರಲಾಲ್ ದರ್ದಾ ಅವರು ತಮ್ಮ ಸ್ವಂತ ಬದುಕಿನ ಕಾರ್ಯಗಳ  ಮೂಲಕ 'ಲೋಕಮತ್' ಗೆ ಉನ್ನತ ಮಾನದಂಡಗಳನ್ನು ರೂಪಿಸಿದರು ಎಂದೂ ಸಚಿವರು ನುಡಿದರು. 

ಪತ್ರಿಕೆಯನ್ನು ನಡೆಸುವುದು ಸಂಸ್ಥಾಪಕರಿಗೆ ಸಾಕಷ್ಟು ಖ್ಯಾತಿಯನ್ನು ತರುತ್ತದೆ, ಆದರೆ ಯಾವುದೇ ಪತ್ರಿಕೆಯನ್ನು ನಡೆಸುವುದಕ್ಕೆ ಸಾಕಷ್ಟು ಪ್ರಯತ್ನದ ಅಗತ್ಯವಿದೆ ಎಂದು ಹೇಳಿದರು. ಇಂದು, ಲೋಕಮತ್ ನ ಸ್ಥಾಪಕರು ಈ ಸಂಸ್ಥೆಯ ಪ್ರತಿಯೊಂದು ಕ್ಷೇತ್ರದಲ್ಲೂ ಕೆಲಸ ಮಾಡುವ ಹಿರಿಯ ಉದ್ಯೋಗಿಗಳನ್ನು ಗೌರವಿಸುವ ಮೂಲಕ ಉತ್ತಮ ಸಂಪ್ರದಾಯವನ್ನು ಸ್ಥಾಪಿಸಿದ್ದಾರೆ ಎಂದೂ ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು.ಇಡೀ ತಂಡದ ನಾಯಕನು ಸಹಾನುಭೂತಿಯಿಂದ ತನ್ನ ತಂಡದ ವಿಶ್ವಾಸವನ್ನು ಗಳಿಸುತ್ತಾನೆ ಮತ್ತು ಇಡೀ ತಂಡದ ಬಗ್ಗೆ ಗೌರವವನ್ನು ಹೊಂದಿರುತ್ತಾನೆ ಮತ್ತು ಅಂತಹ ತಂಡದ ನಾಯಕ ಮಾತ್ರ ಜನರ ವಿಶ್ವಾಸವನ್ನು ಗೆಲ್ಲಬಹುದು ಎಂದೂ ಅವರು ಹೇಳಿದರು. ಐವತ್ತು ವರ್ಷಗಳ ಕಾಲ ತಾವು ಮಾಡಿದ ಕೆಲಸಕ್ಕಾಗಿ ಹಾಗು ನೀಡಿದ ಕೊಡುಗೆಗಾಗಿ ಗೌರವಿಸಲ್ಪಟ್ಟ ಎಲ್ಲಾ ಹಿರಿಯ ಸಿಬ್ಬಂದಿಗೆ ಶ್ರೀ ಶಾ ಅವರು ನಮನ ಸಲ್ಲಿಸಿದರು. ಶ್ರೀ ಜವಹರಲಾಲ್ ಜೀ ಅವರು ಬಿತ್ತಿದ ಈ ಸಾರ್ವಜನಿಕ ಅಭಿಪ್ರಾಯದ ಬೀಜವು ಇಂದು ಬೃಹತ್ ಆಲದ ಮರವಾಗಿ ಬೆಳೆದಿದೆ, ಇದು ಭಾರತದ ಆರನೇ ಅತಿದೊಡ್ಡ ಪತ್ರಿಕೆಯಾಗಿ ಮಾರ್ಪಟ್ಟಿದೆ ಮತ್ತು ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಪ್ರಥಮ ಸ್ಥಾನದಲ್ಲಿದೆ, ಪ್ರತಿದಿನ 2.25 ಕೋಟಿ ಓದುಗರನ್ನು ತಲುಪುತ್ತಿದೆ ಎಂದರು. ಮಹಾರಾಷ್ಟ್ರ, ಗೋವಾ ಮತ್ತು ದೆಹಲಿಯ ಆರು ಕೋಟಿಗೂ ಹೆಚ್ಚು ವೀಕ್ಷಕರು ಲೋಕಮತ್ ಟಿವಿ ಚಾನೆಲ್ ವೀಕ್ಷಿಸುತ್ತಾರೆ ಮತ್ತು ಈಗ ಲೋಕಮತ್ ಡಿಜಿಟಲ್ ಮಾಧ್ಯಮಕ್ಕೆ ಪಾದಾರ್ಪಣೆ ಮಾಡಿದೆ ಎಂದು ಶ್ರೀ ಶಾ ಹೇಳಿದರು. 'ಆಜಾದಿ ಕಾ ಅಮೃತ ಮಹೋತ್ಸವ'ವನ್ನು ಸರ್ಕಾರದ ಕಾರ್ಯಕ್ರಮವನ್ನಾಗಿ ಮಾಡುವ ಬದಲು, ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇದನ್ನು 130 ಕೋಟಿ ಜನರ ಕಾರ್ಯಕ್ರಮವನ್ನಾಗಿ ಮಾಡಿದ್ದಾರೆ ಎಂದೂ ಶ್ರೀ ಅಮಿತ್ ಶಾ ಹೇಳಿದರು. ಕಳೆದ ಒಂದು ವರ್ಷದೊಳಗೆ, ದೇಶದ ಪ್ರತಿಯೊಂದು ಶಾಲೆ, ಕಾಲೇಜುಗಳಲ್ಲಿ ರೂಪುಗೊಳ್ಳುತ್ತಿರುವ ಹೊಸ ಪೀಳಿಗೆಯ ಮನಸ್ಸಿನಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಅಳಿಸಲಾಗದ ಛಾಪು ಮೂಡಿದೆ ಮತ್ತು ಇದು ಇಂದಿಗೂ ಮುಂದುವರೆದಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಜಾದಿ ಕಾ ಅಮೃತ ಮಹೋತ್ಸವದಲ್ಲಿ ದೇಶದ ಜನರ ಮುಂದೆ ಮೂರು ಗುರಿಗಳನ್ನು ಇಟ್ಟಿದ್ದಾರೆ ಎಂದೂ ಶ್ರೀ ಶಾ ನುಡಿದರು.

ಮೊದಲನೆಯದಾಗಿ- ನಮ್ಮ ದೇಶದ ಮಕ್ಕಳು, ಯುವಕರು ಮತ್ತು ಹದಿಹರೆಯದವರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ದೇಶದ ಸಂಸ್ಕೃತಿ ಮತ್ತು ಮೌಲ್ಯಗಳಲ್ಲಿನ ತ್ಯಾಗದ ಬಗ್ಗೆ ಹೆಮ್ಮೆ ಪಡಬೇಕು, ಹಾಗು ಅದನ್ನು ಅವರ ಜೀವನದಲ್ಲಿ ರೂಢಿಸಿಕೊಳ್ಳಬೇಕು. ಎರಡನೆಯದು- ಭಾರತದ 75 ವರ್ಷಗಳ ಸಾಧನೆಗಳನ್ನು ಜನರ ಮುಂದೆ ಇಡುವುದು ಮತ್ತು ಆತ್ಮವಿಶ್ವಾಸದಿಂದ ಕೂಡಿದ ಭಾರತವನ್ನು ನಿರ್ಮಿಸುವುದು. ಕಳೆದ 75 ವರ್ಷಗಳಲ್ಲಿ ದೇಶವು ಪ್ರಜಾಪ್ರಭುತ್ವವನ್ನು ಮೈಗೂಡಿಸಿಕೊಂಡಿದೆ. ಇಂದು, ಭಾರತವು ವಿಶ್ವದ ಅತಿದೊಡ್ಡ ಆರ್ಥಿಕತೆಗಳ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಗಳಿಸಿದೆ, ನಮ್ಮ ದೇಶವನ್ನು 150 ವರ್ಷಗಳಿಗಿಂತ ಹೆಚ್ಚು ಕಾಲ ಆಳಿದ ಇಂಗ್ಲೆಂಡ್ ಅನ್ನು ಹಿಂದಿಕ್ಕಿದೆ. ಇದೊಂದು ದೊಡ್ಡ ಸಾಧನೆ. ಕಳೆದ 75 ವರ್ಷಗಳಲ್ಲಿ, ಯಾವುದೇ ಅಹಂ ಇಲ್ಲದೆ ಭಾರತವು ತನ್ನ ಪ್ರಯತ್ನಗಳಿಂದ ವಿಶ್ವದ ಮುಂದೆ ತನ್ನನ್ನು ಸಾಬೀತುಪಡಿಸಿದೆ ಎಂದು ಅವರು ಹೇಳಿದರು. ಶಿಕ್ಷಣ, ಬಾಹ್ಯಾಕಾಶಗಳಿಂದ ಹಿಡಿದು, ಉತ್ಪಾದನಾ ಕೇಂದ್ರವಾಗಿ ಮತ್ತು ಪ್ರಪಂಚದಾದ್ಯಂತದ ರಕ್ಷಣಾ ಕೈಗಾರಿಕೆಗಳನ್ನು ಭಾರತಕ್ಕೆ ತರುವುದು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುವುದು, ತಂತ್ರಜ್ಞಾನದೊಂದಿಗೆ ಹಳ್ಳಿಗಳನ್ನು ಪರಿವರ್ತಿಸುವುದು, ಆಡಳಿತದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಜನರಿಗೆ ಸೌಲಭ್ಯಗಳನ್ನು ಹೆಚ್ಚಿಸುವುದು ಮತ್ತು 'ವಸುದೈವ ಕುಟುಂಬಕಂ' ಸದ್ಗುಣದೊಂದಿಗೆ ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ಗಮನಾರ್ಹ ಸಾಧನೆ ಮಾಡಿದೆ. ಕಳೆದ 75 ವರ್ಷಗಳಲ್ಲಿ ಇಡೀ ಜಗತ್ತಿಗೆ ಸಹಾಯ ಮಾಡುವ ಮೂಲಕ ಮತ್ತು 60 ಕೋಟಿ ಬಡ ಜನರ ಜೀವನ ಮಟ್ಟವನ್ನು ಹೆಚ್ಚಿಸುವ ಮೂಲಕ ನಾವು ಸಾಕಷ್ಟು ಸಾಧಿಸಿದ್ದೇವೆ ಎಂಬುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದೆ. ಮೂರನೆಯದು - 'ಆಜಾದಿ ಕಾ ಅಮೃತ್ ಕಾಲ್'ನಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುಂದಿನ 25 ವರ್ಷಗಳಲ್ಲಿ ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ಮುಂಚೂಣಿ ಸ್ಥಾನ ಪಡೆಯುವ ಗುರಿಯನ್ನು ದೇಶದ ಮುಂದೆ ಇಟ್ಟಿದ್ದಾರೆ. ಸಂಕಲ್ಪ್ ಸೇ ಸಿದ್ಧಿಯ 25 ವರ್ಷಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಸಂಕಲ್ಪವನ್ನು ತೆಗೆದುಕೊಳ್ಳುವ ಮೂಲಕ ವಿಶ್ವದ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತವನ್ನು ಪ್ರಥಮ ಸ್ಥಾನದಲ್ಲಿರಿಸಬೇಕು ಎಂದು ಅವರು ಹೇಳಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರ ಕನಸಿನ ಭಾರತವನ್ನು ನಿರ್ಮಿಸಲು ನಾವೆಲ್ಲರೂ ಒಂದೇ ಮನಸ್ಸು, ಒಂದು ದಿಕ್ಕು ಮತ್ತು ಒಂದೇ ಗುರಿಯೊಂದಿಗೆ ಮುಂದುವರಿಯಬೇಕು ಎಂದೂ ಶ್ರೀ ಶಾ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕಳೆದ ಒಂಬತ್ತು ವರ್ಷಗಳಲ್ಲಿ ದೇಶವು ಬಹಳಷ್ಟು ಸಾಧಿಸಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಇತರ ದೇಶಗಳು ನಮಗೆ ಶಸ್ತ್ರಾಸ್ತ್ರಗಳನ್ನು ನೀಡದಿದ್ದರೆ, ನಾವು ನಮ್ಮ ದೇಶವನ್ನು ರಕ್ಷಿಸಲು ಸಾಧ್ಯವಾಗುವುದಿಲ್ಲ ಎಂದು ನಮ್ಮ ದೇಶಕ್ಕೆ ಈ ಹಿಂದೆ ಹೇಳಲಾಗಿತ್ತು, ಇಂದು ಅದೇ ಭಾರತವು ಶೇಕಡಾ 70 ರಷ್ಟು ಸ್ವಾವಲಂಬನೆಯೊಂದಿಗೆ ವಿಶ್ವದ ಮುಂದೆ ದೃಢವಾಗಿ ನಿಂತಿದೆ ಎಂದು ಅವರು ಹೇಳಿದರು. ಮೇಕ್ ಇನ್ ಇಂಡಿಯಾದ ಕನಸನ್ನು ನನಸಾಗಿಸಿಕೊಂಡು, ಇಂದು ಭಾರತವು ವಿಶ್ವದ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ ಎಂದವರು ನುಡಿದರು. 

ಕೊರೋನಾ ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧದ ಯಶಸ್ವಿ ಹೋರಾಟವನ್ನು ಉಲ್ಲೇಖಿಸಿದ ಶ್ರೀ ಅಮಿತ್ ಶಾ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ದೇಶದ 130 ಕೋಟಿ ಜನರ ಹೋರಾಟವನ್ನು ಕೊರೊನಾ ವಿರುದ್ಧದ ಏಕೀಕೃತ ಯುದ್ಧವನ್ನಾಗಿ ಮಾಡುವ ಮೂಲಕ ಕೊರೋನಾ ಸಾಂಕ್ರಾಮಿಕ ರೋಗವನ್ನು ಯಶಸ್ವಿಯಾಗಿ ಜಯಿಸಿದ್ದಾರೆ ಎಂದು ಹೇಳಿದರು. ಆರ್ಥಿಕ ಜಗತ್ತಿನ ಅನೇಕ ವಿದ್ವಾಂಸರು ಭಾರತದಲ್ಲಿ ದೊಡ್ಡ ಆರ್ಥಿಕ ಹಿಂಜರಿತ ಉಂಟಾಗುತ್ತದೆ ಎಂದು ಚರ್ಚಿಸುತ್ತಿದ್ದರು, ಆರ್ಥಿಕ ಹಿಂಜರಿತ ಸಂಭವಿಸಿದೆ ಆದರೆ ನಮ್ಮ ದೇಶವು ಸರಿಯಾದ ಆರ್ಥಿಕ ನೀತಿಯನ್ನು ಅಳವಡಿಸಿಕೊಂಡಿದ್ದರಿಂದ ಅದರಿಂದ ಹೊರಗುಳಿದಿದೆ ಎಂದೂ ಅವರು ಹೇಳಿದರು. ಕೊರೊನಾ ಅವಧಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 80 ಕೋಟಿ ಜನರಿಗೆ ಎರಡು ವರ್ಷಗಳ ಕಾಲ ಉಚಿತ ಆಹಾರ ಧಾನ್ಯಗಳನ್ನು ಒದಗಿಸಿದ್ದಾರೆ ಎಂದು ಶ್ರೀ ಶಾ ಹೇಳಿದರು. ಅನೇಕ ಅಭಿವೃದ್ಧಿ ಹೊಂದಿದ ದೇಶಗಳು ಸಹ 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡುವ ಧೈರ್ಯ ಮಾಡಲು ಸಾಧ್ಯವಾಗದು, ಆದರೆ ದೇಶದ ನಾಗರಿಕರ ಬಗ್ಗೆ ಸಂವೇದನಾಶೀಲತೆ ಇದ್ದಾಗ, ನಿರ್ಧಾರಗಳನ್ನು ಕಡತಗಳನ್ನು ಅವಲಂಬಿಸಿ ತೆಗೆದುಕೊಳ್ಳಲಾಗದು, ಅದಕ್ಕೆ ಬದಲು ಹೃದಯ ಮತ್ತು ಮನಸ್ಸಿನಿಂದ ತೆಗೆದುಕೊಳ್ಳಬೇಕಾತ್ತದೆ ಎಂದೂ ಅವರು ಹೇಳಿದರು.

ಕೊರೋನಾ ಅವಧಿಯಲ್ಲಿ, ದೇಶವು ಮೂಲಸೌಕರ್ಯಗಳನ್ನು ನಿರ್ಮಿಸಲು ಕಲಿತಿದೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ 60,000 ಕೋಟಿ ರೂ.ಗಳ ಮೂಲಸೌಕರ್ಯವನ್ನು ನಿರ್ಮಿಸಲಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಸರ್ಕಾರವು ದೇಶ ಮತ್ತು ಜನರ ಬಗ್ಗೆ ಚಿಂತಿಸುವಾಗ, ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಒಂದು ಕ್ಷಣವೂ ವಿಳಂಬ ಮಾಡುವುದಿಲ್ಲ ಎಂದು ಅವರು ಹೇಳಿದರು. ಪ್ರಸ್ತುತ ಸರ್ಕಾರವು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ, ಅದನ್ನು ತೆಗೆದುಕೊಳ್ಳುವಂತಹ ಧೈರ್ಯವನ್ನು ಬೇರೆ ಯಾವುದೇ ನಾಯಕ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಭಾರತ ಸರ್ಕಾರವು ಎಂದೂ ಜನರಿಗೆ ಇಷ್ಟವಾಗುವ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ, ಬದಲಾಗಿ ಜನರಿಗೆ ಒಳ್ಳೆಯದನ್ನು ಮಾಡುವ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ಅವರು ಹೇಳಿದರು. ಜನರು ಇಷ್ಟಪಡುವ ನಿರ್ಧಾರಗಳನ್ನು ತೆಗೆದುಕೊಳ್ಳುವುದು ತುಂಬಾ ಸುಲಭ ಆದರೆ ಜನರಿಗೆ ಒಳ್ಳೆಯದಾಗುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವುದು ತುಂಬಾ ಕಷ್ಟ ಎಂದು ಶ್ರೀ ಶಾ ಹೇಳಿದರು. ದೇಶದ ಜನರು ಸದಾ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಈ ನಿರ್ಧಾರಗಳ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಮತ್ತು ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಪಕ್ಷವು ಪ್ರತಿಯೊಂದು ಚುನಾವಣೆಯನ್ನು ಒಂದರ ನಂತರ ಒಂದರಂತೆ ಗೆದ್ದಿದೆ ಎಂದವರು ನುಡಿದರು. .

ಹೊಸ ಜಲಜನಕ ನೀತಿಯೊಂದಿಗೆ, ಮುಂದಿನ 2-3 ವರ್ಷಗಳಲ್ಲಿ ಭಾರತವು ಜಲಜನಕ ಕ್ಷೇತ್ರದಲ್ಲಿ ಜಗತ್ತನ್ನು ಮುನ್ನಡೆಸಲಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಗುರುಗ್ರಾಮದಲ್ಲಿ ಸೌರಶಕ್ತಿಯ ಪ್ರಧಾನ ಕಚೇರಿಯಾಗಿ ಅಸಾಂಪ್ರದಾಯಿಕ ಇಂಧನ ಕ್ಷೇತ್ರದಲ್ಲಿ ವಿಶ್ವದ ನಾಯಕನಾಗುವುದರ ಜೊತೆಗೆ, ಹೊಸ ಬಾಹ್ಯಾಕಾಶ ನೀತಿಯೊಂದಿಗೆ ಭಾರತವು 4-5 ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಮುಂದೆ ಬರಲಿದೆ ಎಂದು ಅವರು ಹೇಳಿದರು. ಇಂದು ನಮ್ಮ ಯುವಜನರ ನವೋದ್ಯಮಗಳು ವಿಶ್ವದಲ್ಲಿ ವಿಶಿಷ್ಟ ಗುರುತನ್ನು ಮೂಡಿಸಿವೆ ಮತ್ತು ನಮ್ಮ ಅನೇಕ ಯುವಕರು ಬಹು ಕೋಟ್ಯಾಧಿಪತಿಗಳಾಗಿದ್ದಾರೆ ಎಂದೂ ಶ್ರೀ ಶಾ ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎಂದಿಗೂ ವೋಟ್ ಬ್ಯಾಂಕ್ ರಾಜಕೀಯ ಮಾಡಿಲ್ಲ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಶ್ರೀ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮೊದಲು, ಕಾಶ್ಮೀರ, ಈಶಾನ್ಯ ಮತ್ತು ಎಡಪಂಥೀಯ ಉಗ್ರವಾದ ಪೀಡಿತ ಪ್ರದೇಶಗಳು ಆಂತರಿಕ ಭದ್ರತೆಯ ದೃಷ್ಟಿಯಿಂದ ಮೂರು ದೊಡ್ಡ ಹಾಟ್ ಸ್ಪಾಟ್ ಗಳಾಗಿದ್ದವು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಈ ಮೂರು ಪ್ರದೇಶಗಳಲ್ಲಿ ಈಗ ಹಿಂಸಾಚಾರ ಶೇ.80ರಷ್ಟು ಕಡಿಮೆಯಾಗಿದೆ. 370 ನೇ ವಿಧಿಯನ್ನು ರದ್ದುಪಡಿಸಿದ ನಂತರ, ಕಾಶ್ಮೀರದಲ್ಲಿ ರಕ್ತದ ನದಿಗಳು ಹರಿಯುತ್ತವೆ ಎಂದು ಕೆಲವರು ಸಂಸತ್ತಿನಲ್ಲಿ ಹೇಳುತ್ತಿದ್ದರು, ಆದರೆ ಯಾರೂ ಅಲ್ಲಿ ಕಲ್ಲು ಎಸೆಯಲು ಸಹ ಧೈರ್ಯ ಮಾಡಲಿಲ್ಲ ಎಂದೂ ಶ್ರೀ ಶಾ ಹೇಳಿದರು.  ಈ ಹಿಂದೆ ಕಾಶ್ಮೀರದಲ್ಲಿ ಕಲ್ಲು ತೂರಾಟ ಮತ್ತು ಮೆರವಣಿಗೆಗಳು ನಡೆಯುತ್ತಿದ್ದವು, ಇಂದು ಇವೆಲ್ಲವೂ ಕಣ್ಮರೆಯಾಗಿವೆ ಮತ್ತು ಸಿನೆಮಾ ಹಾಲ್ ಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ ಮತ್ತು ರಾತ್ರಿ ಪ್ರದರ್ಶನಗಳನ್ನು ಸಹ ನಡೆಸಲಾಗುತ್ತಿದೆ. ಒಂದು ವರ್ಷದಲ್ಲಿ, 18 ಮಿಲಿಯನ್ ಜನರು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ, ಇದು ದೊಡ್ಡ ಸಾಧನೆಯಾಗಿದೆ. ಮೊದಲ 70 ವರ್ಷಗಳಲ್ಲಿ 12,000 ಕೋಟಿ ರೂ.ಗಳ ಹೂಡಿಕೆ ಬಂದಿದ್ದು, ಈಗ ಕಳೆದ ಮೂರು ವರ್ಷಗಳಲ್ಲಿ 12,000 ಕೋಟಿ ರೂ. ಹೂಡಿಕೆ ಬಂದಿದೆ ಎಂದ ಅವರು ವಿದ್ಯುತ್ ಮತ್ತು ನೀರು ಕಾಶ್ಮೀರದ ಪ್ರತಿಯೊಂದು ಮನೆಗೂ ತಲುಪಿದೆ ಎಂದೂ ನುಡಿದರು.

ಎಡಪಂಥೀಯ ಉಗ್ರವಾದದಲ್ಲಿ ಸಾಕಷ್ಟು ಇಳಿಕೆಯಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಈ ಮೊದಲು 160 ಜಿಲ್ಲೆಗಳು ಎಡಪಂಥೀಯ ಉಗ್ರವಾದದಿಂದ ಬಾಧಿತವಾಗಿದ್ದವು, ಆದರೆ ಇಂದು ಅವುಗಳ ಸಂಖ್ಯೆ ಕೇವಲ 46 ಕ್ಕೆ ಇಳಿದಿದೆ. ಎಡಪಂಥೀಯ ಉಗ್ರವಾದಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಹಿಂಸಾಚಾರಗಳಲ್ಲಿ ಸರಾಸರಿ ಶೇಕಡಾ 80 ರಷ್ಟು ಇಳಿಕೆಯಾಗಿದೆ ಎಂದು ಅವರು ಹೇಳಿದರು. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಂತೆ, ಬಿಹಾರ ಮತ್ತು ಜಾರ್ಖಂಡ್ ಕೂಡ ಎಡಪಂಥೀಯ ಉಗ್ರವಾದದಿಂದ ಬಹುತೇಕ ಮುಕ್ತವಾಗಿವೆ. ನಮ್ಮ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿ ಎಡಪಂಥೀಯ ಉಗ್ರವಾದದ ವಿರುದ್ಧ ಹೋರಾಡುತ್ತಿರುವ ಒಂದು ಸಣ್ಣ ಪ್ರದೇಶ ಉಳಿದಿದೆ. ಭಾರತ ಸರ್ಕಾರವು ಶೀಘ್ರದಲ್ಲೇ ಇಲ್ಲಿಯೂ ಗೆಲ್ಲುತ್ತದೆ ಎಂದು ಗೃಹ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ಮೂರು ವರ್ಷಗಳಲ್ಲಿ ಈಶಾನ್ಯ ಭಾಗದ  ಹಿಂಸಾಚಾರದಲ್ಲಿ ಶೇ.90ರಷ್ಟು ಇಳಿಕೆಯಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಇಂದು ಈಶಾನ್ಯದಲ್ಲಿ ಶಾಂತಿಯನ್ನು ಸ್ಥಾಪಿಸಲಾಗಿದೆ ಮತ್ತು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (ಎಎಫ್ಎಸ್ಪಿಎ) ಯನ್ನು ಶೇಕಡಾ 60 ರಷ್ಟು ಪ್ರದೇಶಗಳಿಂದ ತೆಗೆದುಹಾಕಲಾಗಿದೆ ಎಂದು ಅವರು ಹೇಳಿದರು. ಈಶಾನ್ಯದ 8000 ಕ್ಕೂ ಹೆಚ್ಚು ಯುವಕರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಸೇರಿದ್ದಾರೆ ಎಂದು ಅವರು ಹೇಳಿದರು. 2047 ರ ವೇಳೆಗೆ ಭಾರತವನ್ನು ವಿಶ್ವದ ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ನಮ್ಮೆಲ್ಲರ ಮುಂದೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಟ್ಟಿರುವ ನಿರ್ಣಯಕ್ಕೆ ಅಡಿಪಾಯ ಹಾಕುವ ಕಾರ್ಯ ಪೂರ್ಣಗೊಂಡಿದೆ, ಈಗ ಈ ನಿರ್ಣಯವನ್ನು ಸಾಕಾರಗೊಳಿಸಲು ಇದು ಸರಿಯಾದ ಸಮಯ ಎಂದೂ ಶ್ರೀ ಶಾ ನುಡಿದರು.

*****



(Release ID: 1900587) Visitor Counter : 157


Read this release in: English , Urdu , Marathi , Hindi