ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ
azadi ka amrit mahotsav

ಅಮೃತ್ ಕಾಲ್‌ ನಲ್ಲಿ ಆರ್ಥಿಕ ಸಾಕ್ಷರತೆಯ ಸಮಾವೇಶ - ಮಿಜೋರಾಂನ ಅಯಿಝೋಲ್ ವನಪಾ ಸಭಾಂಗಣದಲ್ಲಿ ಹೂಡಿಕೆದಾರರನ್ನು ಸಬಲೀಕರಣಗೊಳಿಸುವ ಕಾರ್ಯಕ್ರಮ ನಡೆಯಲಿದೆ

Posted On: 15 FEB 2023 4:38PM by PIB Bengaluru

ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿರುವ ಹೂಡಿಕೆದಾರರ ಶಿಕ್ಷಣ ಮತ್ತು ಸಂರಕ್ಷಣಾ ನಿಧಿ ಪ್ರಾಧಿಕಾರ (ಐ.ಇ.ಪಿ.ಎಫ್.ಎ.) ಸಂಸ್ಥೆಯು, ಹೂಡಿಕೆದಾರರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಮಿಜೋರಾಂನ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ನಾಳೆ ಮಿಜೋರಾಂನ ಅಯಿಝೋಲ್ ನಲ್ಲಿರುವ ವನಪಾ ಸಭಾಂಗಣದಲ್ಲಿ  “ಅಮೃತ್ ಕಾಲ್‌ ನಲ್ಲಿ ಆರ್ಥಿಕ(ಹಣಕಾಸು) ಸಾಕ್ಷರತೆ” ಕುರಿತು ರಾಜ್ಯ ಮಟ್ಟದ ಸಮ್ಮೇಳನವನ್ನು ಆಯೋಜಿಸುತ್ತಿದೆ.

ಮಿಜೋರಾಂನ ಪ್ರವಾಸೋದ್ಯಮ, ಕ್ರೀಡೆ ಮತ್ತು ಯುವಜನ ಸೇವೆಗಳ ಸಚಿವರಾದ ಶ್ರೀ ರಾಬರ್ಟ್ ರೊಮಾವಿಯಾ ರಾಯ್ಟ್ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಮಿಜೋರಾಂ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ರೇಣು ಶರ್ಮಾ, ಮಿಜೋರಾಂನ ಡಿಜಿಪಿ ಶ್ರೀ ದೇವೇಶ್ ಚಂದ್ರ ಶ್ರೀವಾಸ್ತವ, ಐ.ಇ.ಪಿ.ಎಫ್.ಎ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಎಂ.ಸಿ.ಎ. ಜಂಟಿ ಕಾರ್ಯದರ್ಶಿ ಶ್ರೀಮತಿ ಅನಿತಾ ಶಾ ಅಕೆಲ್ಲಾ, ಮಿಜೋರಾಂ ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಮನಿಶಾ ಸಕ್ಸೇನಾ, ಐ.ಇ.ಪಿ.ಇ. ಪ್ರಾಧಿಕಾರದ  ಸದಸ್ಯ  ಶ್ರೀ ಗೋಪಾಲ್ ವಿ. ಕುಮಾರ್ ಮತ್ತು ಇತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿರುವರು.  

ಸಮ್ಮೇಳನದಲ್ಲಿ ಹೂಡಿಕೆದಾರರ ಶಿಕ್ಷಣ ಮತ್ತು ಸಂರಕ್ಷಣಾ ನಿಧಿ ಪ್ರಾಧಿಕಾರ (ಐ.ಇ.ಪಿ.ಎಫ್.ಎ.) ಸಂಸ್ಥೆಯು ಭಾರತೀಯ ಅಂಚೆ ಪಾವತಿ ಬ್ಯಾಂಕ್ (ಐ.ಪಿಪಿ.ಬಿ) ಸಹಯೋಗದೊಂದಿಗೆ ಪ್ರಾರಂಭಿಸುವ “ನಿವೇಶಕ್ ದೀದಿ” , ಹಾಗೂ ಸಾಮಾನ್ಯ ಸೇವಾ ಕೇಂದ್ರಗಳ (ಸಿ.ಎಸ್.ಸಿ. ಇ-ಗೌ) ಸಹಯೋಗದೊಂದಿಗೆ ಪ್ರಾರಂಭಿಸುವ ಹೂಡಿಕೆದಾರರ ಜಾಗೃತಿ ವ್ಯಾನ್ “ನಿವೇಶಕ್ ಸಾರಥಿ” ಎಂಬ ಎರಡು ನೂತನ ಉಪಕ್ರಮಗಳನ್ನು ಉದ್ಘಾಟಿಸಲಾಗುವುದು. ಇದರ ಜೊತೆಗೆ ಮಿಜೋರಾಂ ರಾಜ್ಯದಾದ್ಯಂತ ವಿವಿಧಡೆ 75 ಹೂಡಿಕೆದಾರರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸಮ್ಮೇಳನದಲ್ಲಿ ಆರ್ಥಿಕ(ಹಣಕಾಸು) ಸಾಕ್ಷರತೆ ಮತ್ತು ಹೂಡಿಕೆದಾರರ ಜಾಗೃತಿ ಕುರಿತು ವಿವಿಧ ತಾಂತ್ರಿಕ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿವೆ. ಆರ್ಥಿಕ ಯೋಗಕ್ಷೇಮದ ಪ್ರಮುಖ ಸಂದೇಶಗಳನ್ನು ಪ್ರದರ್ಶಿಸುವ ವಿಶೇಷ ಬೈಕ್ ಯಾತ್ರೆಯನ್ನು ಸಹ ಈ ಸಂದರ್ಭದಲ್ಲಿ ಚಾಲನೆ ಮಾಡಲಾಗುತ್ತದೆ.

ಮಿಜೋರಾಂ ರಾಜ್ಯದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಪ್ರಾದ್ಯಾಪಕರು, ವೃತ್ತಿಪರರು, ತಜ್ಞರು, ಸ್ವ-ಸಹಾಯ ಗುಂಪುಗಳು, ಕುಶಲಕರ್ಮಿಗಳು, ಪ್ರವಾಸಿ ನಿರ್ವಾಹಕರು ಮತ್ತು ನಾಗರಿಕರು ಸೇರಿದಂತೆ ಸಮಾಜದ ವಿವಿಧ ವಿಭಾಗಗಳಿಂದ ಸುಮಾರು 800 ರಿಂದ 1,000 ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಹೂಡಿಕೆದಾರರ ಶಿಕ್ಷಣ ಮತ್ತು ಸಂರಕ್ಷಣಾ ನಿಧಿ ಪ್ರಾಧಿಕಾರ (ಐ.ಇ.ಪಿ.ಎಫ್.ಎ.) - ಇದರ ಬಗ್ಗೆ

ಹೂಡಿಕೆದಾರರ ಶಿಕ್ಷಣ, ಜಾಗೃತಿ ಮತ್ತು ರಕ್ಷಣೆಯನ್ನು ಉತ್ತೇಜಿಸುವ ಮತ್ತು ಪ್ರೋತ್ಸಾಹಿಸುವ ಉದ್ದೇಶದಿಂದ ಹಾಗೂ ಐ.ಇ.ಪಿ.ಎಫ್. ನಿಧಿಯ ನಿರ್ವಹಣೆಗಾಗಿ ಕಂಪನಿಗಳ ಕಾಯಿದೆ, 2013 ರ ವಿಭಾಗ 125 ರ ಉಪ-ವಿಭಾಗ (5) ಅಡಿಯಲ್ಲಿ ಐ.ಇ.ಪಿ.ಎಫ್. ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ. ಜನಸಾಮಾನ್ಯರಿಗೆ ಹೂಡಿಕೆದಾರರ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ಐ.ಇ.ಪಿ.ಎಫ್. ಪ್ರಾಧಿಕಾರವು ದೇಶದಾದ್ಯಂತ ವ್ಯಾಪಕವಾದ ಚಟುವಟಿಕೆಗಳನ್ನು ಕೈಗೊಳ್ಳುತ್ತಿದೆ.

*****
 


(Release ID: 1899554) Visitor Counter : 164