ಗೃಹ ವ್ಯವಹಾರಗಳ ಸಚಿವಾಲಯ

​​​​​​​ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಕರ್ನಾಲ್ನಲ್ಲಿ ಹರಿಯಾಣ ಪೊಲೀಸರಿಗೆ ' ಪ್ರೆಸಿಡೆಂಟ್ ಕಲರ್ ಅವಾರ್ಡ್ʼ (ಸೇನಾಪಡೆಗಳು/ಪೋಲೀಸ್ ಪಡೆಗಳಿಗೆ ನೀಡುವ ರಾಷ್ಟ್ರಪತಿಯವರ ಅತ್ಯುನ್ನತ ಪುರಸ್ಕಾರ) ಪ್ರದಾನ ಮಾಡಿದರು


ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸಲು, ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿಪಡಿಸಲು ಮತ್ತು ನಾಗರಿಕರ ಜೀವನವನ್ನು ಸುಲಭಗೊಳಿಸಲು ಹರಿಯಾಣ ಪೊಲೀಸರು ಶೌರ್ಯ, ತಾಳ್ಮೆ ಮತ್ತು ಧೈರ್ಯವನ್ನು ಪ್ರದರ್ಶಿಸಿದ್ದಾರೆ.

ಹರಿಯಾಣ ಪೊಲೀಸರಿಗೆ ಸಂದಿರುವ ' ಪ್ರೆಸಿಡೆಂಟ್ ಕಲರ್ ಅವಾರ್ಡ್ʼ ಅವರ ವೃತ್ತಿಪರತೆ ಮತ್ತು ಅಸಾಧಾರಣವಾದ ಉನ್ನತ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ

' ಪ್ರೆಸಿಡೆಂಟ್ ಕಲರ್ ಅವಾರ್ಡ್ʼ ಪ್ರದಾನವು  ಸಂಘಟನೆ ಮತ್ತು ಸಂಸ್ಥೆಯ ಬಗೆಗಿನ ವಿಶ್ವಾಸಾರ್ಹತೆಯ ಸಂಕೇತವಾಗಿದೆ, ಈ ಗೌರವವನ್ನು ಪಡೆದ ದೇಶದ 10 ರಾಜ್ಯ ಪೊಲೀಸ್ ಪಡೆಗಳಲ್ಲಿ ಹರಿಯಾಣ ಪೊಲೀಸ್ ಒಂದಾಗಿದೆ

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ 40 ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಕೇಂದ್ರ ಗೃಹ ಸಚಿವರು, ಭಾರತೀಯ ಇತಿಹಾಸದಲ್ಲಿ ಈ 40 ಸೈನಿಕರ ಹೆಸರುಗಳು ಸುವರ್ಣಾಕ್ಷರಗಳಲ್ಲಿ ಶಾಶ್ವತವಾಗಿ ಅಚ್ಚೊತ್ತಿವೆ, ಹುತಾತ್ಮರ ತ್ಯಾಗವು ರಾಷ್ಟ್ರದ ಪ್ರಸ್ತುತ ಪ್ರಗತಿಯನ್ನು ನಿರ್ಧರಿಸುವಲ್ಲಿ ಬಹು ದೊಡ್ಡ ಪಾತ್ರವನ್ನು ಹೊಂದಿದೆ ಎಂದು ಹೇಳಿದರು.

“ಅಂತರ್ ಕಾರ್ಯಾಚರಣೆಯ ಅಪರಾಧ ನ್ಯಾಯ ವ್ಯವಸ್ಥೆ (ಐಸಿಜೆಎಸ್) ಮತ್ತು ಅಪರಾಧ ಮತ್ತು ಅಪರಾಧಿ ಪತ್ತೆ ಹಚ್ಚುವ ಜಾಲ (ಸಿಸಿಟಿಎನ್) ಯೋಜನೆಯ ಅನುಷ್ಠಾನದಲ್ಲಿ ಹರಿಯಾಣವು ಉನ್ನತ ಶ್ರೇಣಿಯನ್ನು ನೀಡಿದೆ, ನಾನು ಹರಿಯಾಣ ಮುಖ್ಯಮಂತ್ರಿ, ಗೃಹ ಸಚಿವರು ಮತ್ತು ಪೊಲೀಸ್ ಪಡೆಗಳನ್ನು ಅಭಿನಂದಿಸುತ್ತೇನೆ”

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಭಾರತ ಸರ್ಕಾರವು ಮಾದಕ ವಸ್ತುಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸುತ್ತಿದೆ ಮತ್ತು ಎಲ್ಲಾ ರಾಜ್ಯಗಳ ಪೊಲೀಸರೊಂದಿಗೆ ಸಮನ್ವಯ ಸಾಧಿಸುವ ಮೂಲಕ ದೇಶವನ್ನು ಮಾದಕ ದ್ರವ್ಯ ಮುಕ್ತಗೊಳಿಸಲು ಸಂಕಲ್ಪ ಮಾಡಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭವಿಷ್ಯದ ಸವಾಲುಗಳನ್ನು ಎದುರಿಸಲು 'ಪೊಲೀಸ್ ಟೆಕ್ನಾಲಜಿ ಮಿಷನ್' ಅನ್ನು ಸ್ಥಾಪಿಸಿದ್ದಾರೆ, ಇದು ಕಾನ್ಸ್ಟೆಬಲ್ನಿಂದ ಡಿಜಿಪಿವರೆಗೆ ಇಡೀ ಪೊಲೀಸ್ ವ್ಯವಸ್ಥೆಗೆ ತಂತ್ರಜ್ಞಾನ ಶಿಕ್ಷಣವನ್ನು ನೀಡುತ್ತದೆ.

Posted On: 14 FEB 2023 6:19PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಹರಿಯಾಣದ ಕರ್ನಾಲ್ನಲ್ಲಿ ಹರಿಯಾಣ ಪೊಲೀಸರಿಗೆ 'ಪ್ರೆಸಿಡೆಂಟ್ ಕಲರ್ ಅವಾರ್ಡ್ʼ (ಸೇನಾಪಡೆಗಳು/ಪೋಲೀಸ್ ಪಡೆಗಳಿಗೆ ನೀಡುವ ರಾಷ್ಟ್ರಪತಿಯವರ ಅತ್ಯುನ್ನತ ಪುರಸ್ಕಾರ) ಪ್ರದಾನ ನೀಡಿದರು. ಈ ಸಂದರ್ಭದಲ್ಲಿ ಹರಿಯಾಣ ಮುಖ್ಯಮಂತ್ರಿ ಶ್ರೀ ಮನೋಹರ್ ಲಾಲ್ ಖಟ್ಟರ್, ಹರಿಯಾಣ ವಿಧಾನಸಭೆಯ ಸ್ಪೀಕರ್ ಶ್ರೀ ಗ್ಯಾನ್ ಚಂದ್ ಗುಪ್ತಾ, ರಾಜ್ಯ ಗೃಹ ಸಚಿವ ಶ್ರೀ ಅನಿಲ್ ವಿಜ್ ಮತ್ತು ಹರಿಯಾಣ ಪೊಲೀಸ್ ಮಹಾನಿರ್ದೇಶಕ ಶ್ರೀ ಪಿ.ಕೆ. ಅಗರವಾಲ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರು, 25 ವರ್ಷಗಳ ನಿರಂತರ ಸೇವೆಯಲ್ಲಿನ ಧೈರ್ಯ, ಶೌರ್ಯ ಮತ್ತು ಸಮರ್ಪಣಾ ಮನೋಭಾವವನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ರಾಷ್ಟ್ರಪತಿಯವರ ಈ ಪುರಸ್ಕಾರವನ್ನು ನೀಡಲಾಗುತ್ತದೆ ಎಂದು ಹೇಳಿದರು. ಹರಿಯಾಣ ಪೊಲೀಸರಂತಹ ಸದೃಢ ಪೊಲೀಸ್ ಪಡೆಗೆ ಈ ಪ್ರತಿಷ್ಠಿತ ಗೌರವ ಲಭಿಸಿರುವುದು ರಾಜ್ಯದ ಜನತೆಗೆ ಹಾಗೂ ಇಡೀ ದೇಶಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಹರಿಯಾಣ ಪೊಲೀಸರು ಜಾಗರೂಕತೆಗೆ ಹೆಸರುವಾಸಿಯಾಗಿದ್ದಾರೆ ಎಂದು ಅವರು ಹೇಳಿದರು. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ, ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿಪಡಿಸುವ ಮತ್ತು ನಾಗರಿಕರಿಗೆ ಜೀವನವನ್ನು ಸುಲಭಗೊಳಿಸುವ ಮೂಲಕ ಪೊಲೀಸ್ ಪಡೆ ಪ್ರತಿಯೊಂದು ಕ್ಷೇತ್ರದಲ್ಲೂ ಶೌರ್ಯ, ತಾಳ್ಮೆ ಮತ್ತು ಧೈರ್ಯವನ್ನು ಪ್ರದರ್ಶಿಸಿದೆ. ಇದು ರಾಷ್ಟ್ರ ರಾಜಧಾನಿಯ ಸಮೀಪದಲ್ಲಿರುವುದರಿಂದ ವಿವಿಧ ಚಳುವಳಿಗಳನ್ನು ನಿರ್ವಹಿಸುವಾಗ ದಕ್ಷತೆ ಮತ್ತು ಮಾನವೀಯತೆಯನ್ನು ಪ್ರದರ್ಶಿಸಿದೆ. ಹರಿಯಾಣ ಪೊಲೀಸ್ ಪಡೆಗೆ ಪ್ರಾರಂಭದಿಂದಲೂ ತಮ್ಮ ಕೊಡುಗೆಗಳನ್ನು ನೀಡಿದ ಎಲ್ಲಾ ಪೊಲೀಸರು ಮತ್ತು ಅಧಿಕಾರಿಗಳನ್ನು ಶ್ರೀ ಶಾ ಅಭಿನಂದಿಸಿದರು. ಹರಿಯಾಣ ಪೊಲೀಸರಿಗೆ ಪ್ರೆಸಿಡೆಂಟ್ ಕಲರ್ ಗೌರವ ದೊರೆತಿರುವುದು ಅವರ ವೃತ್ತಿಪರತೆ ಮತ್ತು ಅಸಾಧಾರಣ ಉನ್ನತ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ ಎಂದು ಗೃಹ ಸಚಿವರು ಹೇಳಿದರು. ಕೊರೊನಾ ಸಾಂಕ್ರಾಮಿಕದ ಕಷ್ಟದ ಸಮಯದಲ್ಲಿ, ಹರಿಯಾಣ ಪೊಲೀಸರು ತಮ್ಮ ಸ್ವಂತ ಜೀವನದ ಬಗ್ಗೆ ಕಾಳಜಿ ವಹಿಸದೆ ನೈಜ ಮನೋಭಾವದಿಂದ ನಿಸ್ವಾರ್ಥವಾಗಿ ಜನರಿಗೆ ಸೇವೆ ಸಲ್ಲಿಸಿದರು ಎಂದು ಅವರು ಹೇಳಿದರು. ಇಂತಹ ಪ್ರತಿಕೂಲ ಪರಿಸ್ಥಿತಿಗಳಲ್ಲಿ ವೃದ್ಧರು, ದುರ್ಬಲರು ಮತ್ತು ರೋಗಿಗಳಿಗೆ ನೆರವಾಗುವ ಮೂಲಕ ಹರಿಯಾಣ ಪೊಲೀಸರು ರಾಜ್ಯದ ಜನರಷ್ಟೇ ಅಲ್ಲ, ಇಡೀ ರಾಷ್ಟ್ರದ ವಿಶ್ವಾಸವನ್ನು ಗಳಿಸಿದ್ದಾರೆ ಎಂದು ಅವರು ಹೇಳಿದರು.

2019 ರ ಈ ದಿನದಂದು ಪುಲ್ವಾಮಾದಲ್ಲಿ ನಡೆದ ಭೀಕರ ದಾಳಿಯಲ್ಲಿ 40 ಕೇಂದ್ರೀಯ ಮೀಸಲು ಪಡೆ (ಸಿ ಆರ್ ಪಿ ಎಫ್) ಸಿಬ್ಬಂದಿ ಹುತಾತ್ಮರಾದರು ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ. ಈ 40 ಯೋಧರ ಹೆಸರುಗಳು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಅಚ್ಚೊತ್ತಿವೆ ಎಂದು ಅವರು ಹೇಳಿದರು. ಪುಲ್ವಾಮಾ ದಾಳಿಯ 40 ಹುತಾತ್ಮರಿಗೆ ರಾಷ್ಟ್ರದ ಪರವಾಗಿ ಶ್ರದ್ಧಾಂಜಲಿ ಸಲ್ಲಿಸಿದ ಗೃಹ ಸಚಿವರು, ಹುತಾತ್ಮರ ತ್ಯಾಗವು ರಾಷ್ಟ್ರದ ಪ್ರಸ್ತುತ ಪ್ರಗತಿಯನ್ನು ನಿರ್ಧರಿಸುವಲ್ಲಿ ದೊಡ್ಡ ಪಾತ್ರವನ್ನು ಹೊಂದಿದೆ ಎಂದು ಹೇಳಿದರು. ಮಾಜಿ ವಿದೇಶಾಂಗ ಸಚಿವೆ ದಿವಂಗತ ಶ್ರೀಮತಿ ಸುಷ್ಮಾ ಸ್ವರಾಜ್ ಅವರ ಜನ್ಮದಿನದಂದು ಶ್ರೀ ಶಾ ಅವರಿಗೆ ಗೌರವ ನಮನ ಸಹ ಸಲ್ಲಿಸಿದರು.

ಪ್ರೆಸಿಡೆಂಟ್ ಕಲರ್ ಪುರಸ್ಕಾರ ಪ್ರದಾನವು ಸಂಘಟನೆ ಮತ್ತು ಸಂಸ್ಥೆಗೆ ಹೆಚ್ಚಿನ ವಿಶ್ವಾಸಾರ್ಹತೆಯ ಸಂಕೇತವಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ರಾಷ್ಟ್ರಪತಿಯವರ ಈ ಅತ್ಯುನ್ನತ ಗೌರವವನ್ನು ಸ್ವೀಕರಿಸಿದ ದೇಶದ 10 ರಾಜ್ಯ ಪೊಲೀಸ್ ಪಡೆಗಳಲ್ಲಿ ಹರಿಯಾಣ ಪೊಲೀಸ್ ಪಡೆಯು ಒಂದಾಗಿದೆ ಎಂದು ಅವರು ಹೇಳಿದರು. ಮಧ್ಯಪ್ರದೇಶ, ಉತ್ತರ ಪ್ರದೇಶ, ದೆಹಲಿ, ಜಮ್ಮು ಮತ್ತು ಕಾಶ್ಮೀರ, ತಮಿಳುನಾಡು, ತ್ರಿಪುರಾ, ಗುಜರಾತ್, ಹಿಮಾಚಲ ಪ್ರದೇಶ ಮತ್ತು ಅಸ್ಸಾಂ ನಂತರ ಇದೀಗ ಹರಿಯಾಣ ಪೊಲೀಸ್ ಪಡೆ ಸಹ ಈ ಅತ್ಯುನ್ನತ ಗೌರವಕ್ಕೆ ಪಾತ್ರವಾಗಿದೆ. ಇದು ಪೊಲೀಸ್ ಪಡೆಗೆ ಸಂದ ಗೌರವ ಮಾತ್ರವಲ್ಲ, ಹರಿಯಾಣದ ಜನರ ಸೇವೆಯಲ್ಲಿ ರಾಜ್ಯ ಪೊಲೀಸರು ಪ್ರದರ್ಶಿಸಿದ ಶೌರ್ಯ, ಧೈರ್ಯ ಮತ್ತು ಸಮರ್ಪಣೆಯ ಐತಿಹಾಸಿಕ ಸಾಹಸಗಾಥೆಯಾಗಿದೆ ಎಂದು ಗೃಹ ಸಚಿವರು ಹೇಳಿದರು. 1951 ರಲ್ಲಿ ಭಾರತೀಯ ನೌಕಾಪಡೆಯು ಈ ಗೌರವವನ್ನು ಮೊದಲು ಪಡೆಯಿತು ಎಂದು ಅವರು ಹೇಳಿದರು ಮತ್ತು ಅಂದಿನಿಂದ 10 ರಾಜ್ಯ ಪೊಲೀಸ್ ಪಡೆಗಳು ಮತ್ತು ಹಲವಾರು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (ಸಿಎಪಿಎಫ್) ರಾಷ್ಟ್ರಪತಿಗಳ ಈ ಪುರಸ್ಕಾರವನ್ನು ಪಡೆದಿವೆ.

ನವೆಂಬರ್ 1, 1966 ರಂದು ಪ್ರಾರಂಭವಾದ ಹರಿಯಾಣ ಪೊಲೀಸರ ಸೇವೆಯು ಮಾದರಿಯಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಆರಂಭದಲ್ಲಿ 1966 ರಲ್ಲಿ ಕೇವಲ 12,000 ಪೊಲೀಸ್ ಸಿಬ್ಬಂದಿಯೊಂದಿಗೆ ಇದು ಪ್ರಾರಂಭವಾಯಿತು, ಹರಿಯಾಣ ಪೊಲೀಸರ ಬಲವು ಈಗ 75,000 ಸಿಬ್ಬಂದಿಯನ್ನು ಮುಟ್ಟಿದೆ. ಹೆಚ್ಚುವರಿಯಾಗಿ, ಅವರ ಕೆಲಸವನ್ನು 19 ಜಿಲ್ಲೆಗಳಲ್ಲಿ ಐದು ಪೊಲೀಸ್ ವಲಯಗಳು, ನಾಲ್ಕು ಪೊಲೀಸ್ ಕಮಿಷನರೇಟ್ಗಳು ಮತ್ತು ರೈಲ್ವೇ ಪೊಲೀಸರಿಗೆ ವಿಸ್ತರಿಸಲಾಗಿದೆ, ಇದು ಹರಿಯಾಣದ ಜನರಿಗೆ ಮತ್ತು ಇಡೀ ದೇಶಕ್ಕೆ ಬಹಳ ಹೆಮ್ಮೆಯ ವಿಷಯವಾಗಿದೆ. ಉತ್ತಮ ಕಾನೂನು ಮತ್ತು ಸುವ್ಯವಸ್ಥೆ ಹೊಂದಿರುವ ರಾಜ್ಯಗಳಲ್ಲಿ ಹರಿಯಾಣ ಮೊದಲ ಸ್ಥಾನದಲ್ಲಿದೆ ಎಂದು ಶ್ರೀ ಶಾ ಹೇಳಿದರು. ಕಳೆದ ಒಂದು ವರ್ಷದಲ್ಲಿ, ಹರಿಯಾಣ ಪೊಲೀಸರು, ಕೇಂದ್ರ ಏಜೆನ್ಸಿಗಳು ಮತ್ತು ಪಂಜಾಬ್, ದೆಹಲಿ ಮತ್ತು ರಾಜಸ್ಥಾನ ಪೊಲೀಸರೊಂದಿಗೆ ಅನೇಕ ಅಂತರ-ರಾಜ್ಯ ದುಷ್ಟಕೂಟಗಳನ್ನು ನಿರ್ಮೂಲನೆ ಮಾಡುವಲ್ಲಿ ಉತ್ತಮ ಯಶಸ್ಸನ್ನು ಸಾಧಿಸಿದ್ದಾರೆ ಎಂದು ಅವರು ಹೇಳಿದರು. ಈ ಸಾಧನೆಗಾಗಿ 2018ರಲ್ಲಿ ಸ್ಥಾಪನೆಯಾದ ವಿಶೇಷ ಕಾರ್ಯಪಡೆಯನ್ನು ಅವರು ಅಭಿನಂದಿಸಿದರು. ಹರ್ಯಾಣ ಪೊಲೀಸ್ ಪಡೆ ಆರಂಭವಾದಾಗಿನಿಂದ ಹುತಾತ್ಮರಾದ 83 ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಗೃಹ ಸಚಿವರು ಗೌರವ ನಮನ ಸಲ್ಲಿಸಿದರು. 1984 ರಿಂದ 1994 ರವರೆಗೆ 10 ವರ್ಷಗಳ ಕಾಲ ಹರಿಯಾಣವು ಪಂಜಾಬ್ ಭಯೋತ್ಪಾದನೆಯ ಯಾತನೆಯನ್ನು ಎದುರಿಸಿತು ಮತ್ತು ಅದನ್ನು ಸದೆಬಡಿಯಿತು ಎಂದು ಶ್ರೀ ಶಾ ಹೇಳಿದರು. ಈ ಅವಧಿಯಲ್ಲಿ ಹುತಾತ್ಮರಾದ ಪೊಲೀಸರು ಹಾಗೂ ಅಧಿಕಾರಿಗಳಿಗೆ ಅವರು ಶ್ರದ್ಧಾಂಜಲಿ ಸಲ್ಲಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಿರ್ದೇಶನದ ಮೇರೆಗೆ ಪೊಲೀಸ್ ವ್ಯವಸ್ಥೆಯಲ್ಲಿ ಹಲವಾರು ಸುಧಾರಣೆಗಳನ್ನು ಆರಂಭಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ಸುಧಾರಣೆಗಳು ಪೊಲೀಸರನ್ನು ಸ್ನೇಹಪರವನ್ನಾಗಿಸಲು ಮತ್ತು ಜನಪರವಾಗಿ ಕೆಲಸ ಮಾಡಲು ಬದ್ಧವಾಗಿವೆ ಮತ್ತು ಆಧುನಿಕ ತಂತ್ರಜ್ಞಾನದ ಅಳವಡಿಕೆಯ ಮೂಲಕ ಜನರ ತೊಂದರೆಗಳನ್ನು ಕಡಿಮೆ ಮಾಡುವುದನ್ನು ಖಚಿತಪಡಿಸುತ್ತವೆ ಎಂದರು. ಭವಿಷ್ಯದ ಸವಾಲುಗಳನ್ನು ಎದುರಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೃಹ ಸಚಿವಾಲಯದ ಅಡಿಯಲ್ಲಿ 'ಪೊಲೀಸ್ ಟೆಕ್ನಾಲಜಿ ಮಿಷನ್' ಅನ್ನು ಸ್ಥಾಪಿಸಿದ್ದಾರೆ ಎಂದು ಶ್ರೀ ಶಾ ಹೇಳಿದರು, ಇದು ದೇಶದ ಪೊಲೀಸ್ ಪಡೆಗೆ ತಾಂತ್ರಿಕವಾಗಿ ಶಕ್ತಿ ತುಂಬುತ್ತದೆ. ಈ ಮಿಷನ್ ಕಾನ್ಸ್ಟೆಬಲ್ನಿಂದ ಡಿಜಿಪಿವರೆಗೆ ಇಡೀ ಪೊಲೀಸ್ ವ್ಯವಸ್ಥೆಗೆ ತಂತ್ರಜ್ಞಾನ ಶಿಕ್ಷಣವನ್ನು ನೀಡುತ್ತದೆ ಮತ್ತು ಅಪರಾಧಗಳ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಮುಂದಿನ ದಿನಗಳಲ್ಲಿ ಹರಿಯಾಣ ಪೊಲೀಸರು ಐಸಿಜೆಎಸ್ ಮತ್ತು ಸಿಸಿಟಿಎನ್ನಂತೆ ಈ ತಂತ್ರಜ್ಞಾನ ಮಿಷನ್ ಅನ್ನು ಅಳವಡಿಸಿಕೊಳ್ಳುತ್ತಾರೆ ಎಂದು ಶ್ರೀ ಶಾ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ವರ್ಷದಲ್ಲಿ ಮಾದಕ ದ್ರವ್ಯ ಮುಕ್ತ ಭಾರತದ ಸಂಕಲ್ಪವನ್ನು ಮಾಡಿದ್ದಾರೆ ಮತ್ತು ಅದರ ಯಶಸ್ಸಿಗಾಗಿ ಭಾರತ ಸರ್ಕಾರವು ಎಲ್ಲಾ ರಾಜ್ಯಗಳ ಪೊಲೀಸ್ ಪಡೆಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಭಾರತ ಸರ್ಕಾರವು ಡ್ರಗ್ಸ್ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅಳವಡಿಸಿಕೊಳ್ಳುತ್ತಿದೆ ಮತ್ತು ಮಾದಕ ದ್ರವ್ಯ ಮುಕ್ತ ಭಾರತ ಅಭಿಯಾನವು ತನ್ನ ಗುರಿಯನ್ನು ಸಾಧಿಸಿದ ನಂತರವೇ ಕೊನೆಗೊಳ್ಳಲಿದೆ ಎಂದು ಶ್ರೀ ಶಾ ಹೇಳಿದರು. ಮಾದಕ ದ್ರವ್ಯಗಳ ಹಾವಳಿಯನ್ನು ತೊಡೆದುಹಾಕಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು, ಈ ಕಾರಣದಿಂದಾಗಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಅನೇಕ ರೀತಿಯ ವಶಪಡಿಸಿಕೊಳ್ಳುವಿಕೆಗಳು ಸಂಭವಿಸಿವೆ. ಮಾದಕ ವಸ್ತುಗಳ ವಿರುದ್ಧದ ಅಭಿಯಾನವು ಮುಂದಿನ ದಿನಗಳಲ್ಲಿ ತೀವ್ರಗೊಳ್ಳಲಿದೆ ಎಂಬುದನ್ನು ಇದು ತೋರಿಸುತ್ತದೆ. ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾನಿಲಯದಲ್ಲಿ ವಿಧಿ ವಿಜ್ಞಾನ ತಜ್ಞರಿಗೆ ತರಬೇತಿ ನೀಡಲಾಗುತ್ತಿದ್ದು, ಜೊತೆಗೆ ಸಿಆರ್ಪಿಸಿ, ಐಪಿಸಿ ಮತ್ತು ಸಾಕ್ಷ್ಯ ಕಾಯ್ದೆಯಲ್ಲಿ ತಿದ್ದುಪಡಿಗಳನ್ನು ತರಲಾಗುತ್ತಿದೆ ಎಂದು ಗೃಹ ಸಚಿವರು ಹೇಳಿದರು. 6 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆಯಾಗುವ ಎಲ್ಲಾ ಅಪರಾಧಗಳಲ್ಲಿ ವಿಧಿ ವಿಜ್ಞಾನವನ್ನು ಕಡ್ಡಾಯವಾಗಿ ಸೇರಿಸಲು ಸರ್ಕಾರ ಮುಂದಾಗಿದೆ ಎಂದು ಅವರು ಹೇಳಿದರು. ಈ ಕ್ರಮವು ಅಪರಾಧದ ಪ್ರಮಾಣವನ್ನು ಸುಧಾರಿಸುತ್ತದೆ ಮತ್ತು ದೇಶದಲ್ಲಿ ಅಪರಾಧಗಳ ಸಂಖ್ಯೆಯನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ 2014 ರಿಂದ ಗೃಹ ವ್ಯವಹಾರಗಳ ಸಚಿವಾಲಯವು ಅನೇಕ ಆಂತರಿಕ ಭದ್ರತಾ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ, ಈಶಾನ್ಯದಲ್ಲಿ ದಂಗೆ ಮತ್ತು ಎಡಪಂಥೀಯ ಉಗ್ರಗಾಮಿ ಪ್ರದೇಶಗಳಲ್ಲಿನ ಹಿಂಸಾಚಾರವು ಹಲವಾರು ದಶಕಗಳಿಂದ ದೇಶವನ್ನು ಪೀಡಿಸಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ, ಭಯೋತ್ಪಾದಕ ಘಟನೆಗಳು ತೀವ್ರವಾಗಿ ಕಡಿಮೆಯಾಗಿವೆ ಮತ್ತು ದೇಶಾದ್ಯಂತದ ದಾಖಲೆ ಸಂಖ್ಯೆಯ ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಅವರು ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿ ಭಾರತ ಸರ್ಕಾರವು ಮಹತ್ತರವಾದ ಯಶಸ್ಸನ್ನು ಸಾಧಿಸಿದೆ. ಅದೇ ರೀತಿ, ಈಶಾನ್ಯದಲ್ಲಿ, 8000 ಕ್ಕೂ ಹೆಚ್ಚು ಶಸ್ತ್ರಸಜ್ಜಿತ ಯುವಕರು ಶರಣಾಗಿದ್ದಾರೆ ಮತ್ತು ಹಲವಾರು ಗುಂಪುಗಳೊಂದಿಗೆ ಶಾಂತಿ ಒಪ್ಪಂದಗಳಿಗೆ ಸಹಿ ಹಾಕುವ ಮೂಲಕ ಅವರನ್ನು ಮತ್ತೆ ಮುಖ್ಯವಾಹಿನಿಗೆ ತರಲಾಗಿದೆ. ಈಶಾನ್ಯದಲ್ಲಿ ಶಾಂತಿ, ಅಭಿವೃದ್ಧಿ ಮತ್ತು ಆತ್ಮವಿಶ್ವಾಸದ ಹೊಸ ವಾತಾವರಣವನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಈಶಾನ್ಯದಲ್ಲಿ ಅಶಾಂತಿಯ ಸಂಕೇತವಾದ ಅಫ್ಸಾ (AFSPA) ಹೇರಿಕೆಯು 60 ಪ್ರತಿಶತದಷ್ಟು ಕಡಿಮೆಯಾಗಿದೆ ಮತ್ತು ಇದೊಂದು ದೊಡ್ಡ ಸಾಧನೆಯಾಗಿದೆ ಎಂದು ಶ್ರೀ ಶಾ ಹೇಳಿದರು. 2010 ರಲ್ಲಿ, 96 ಜಿಲ್ಲೆಗಳು ಎಡಪಂಥೀಯ ಉಗ್ರಗಾಮಿ ಪ್ರದೇಶಗಳ ಅಡಿಯಲ್ಲಿ ಬಂದರೆ, 2021 ರಲ್ಲಿ ಆ ಸಂಖ್ಯೆ 46 ಕ್ಕೆ ಇಳಿದಿದೆ. ಎಡಪಂಥೀಯ ಉಗ್ರವಾದಕ್ಕೆ ಸಂಬಂಧಿಸಿದ ಹಿಂಸಾಚಾರ ಪ್ರಕರಣಗಳು ಸಹ ಶೇಕಡಾ 70 ರಷ್ಟು ಕಡಿಮೆಯಾಗಿವೆ. ದೇಶವು ಶೀಘ್ರದಲ್ಲೇ ಎಡಪಂಥೀಯ ಉಗ್ರವಾದದಿಂದ ಸಂಪೂರ್ಣವಾಗಿ ಮುಕ್ತವಾಗಲಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಅವರು ಹೇಳಿದರು.

ಹರಿಯಾಣದಲ್ಲಿ ಸೈಬರ್ ವಂಚನೆ ಪ್ರಕರಣಗಳನ್ನು ನಿಭಾಯಿಸಲು 29 ಸೈಬರ್ ಪೊಲೀಸ್ ಠಾಣೆಗಳು ಮತ್ತು 309 ಸೈಬರ್ ಡೆಸ್ಕ್ಗಳು ಸಹಾಯ ಮಾಡುತ್ತಿವೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಅಂತರ್ ಕಾರ್ಯಾಚರಣೆಯ ಅಪರಾಧ ನ್ಯಾಯ ವ್ಯವಸ್ಥೆ (ಇಂಟರ್-ಆಪರೇಬಲ್ ಕ್ರಿಮಿನಲ್ ಜಸ್ಟಿಸ್ ಸಿಸ್ಟಮ್) ಮತ್ತು ಅಪರಾಧ ಮತ್ತು ಅಪರಾಧಿಗಳ ಪತ್ತೆಹಚ್ಚುವಿಕೆ ಜಾಲ (ಕ್ರೈಮ್ ಅಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ವರ್ಕ್) ಯೋಜನೆಯ ಅನುಷ್ಠಾನದಲ್ಲಿ ಹರಿಯಾಣ ರಾಜ್ಯವು ಉನ್ನತ ಶ್ರೇಣಿಯನ್ನು ಪಡೆದಿದೆ. ಹರಿಯಾಣ ಪೊಲೀಸರು ಕಾರ್ಯಗತಗೊಳಿಸಿದ ಈ ಎರಡು ಆಧುನೀಕರಣ ಯೋಜನೆಗಳು ರಾಜ್ಯದಲ್ಲಿ ಅಪರಾಧ ಪ್ರಮಾಣವನ್ನು ದೃಢವಾಗಿ ನಿಯಂತ್ರಿಸಲು ಮತ್ತು ನಾಗರಿಕರ ಜೀವನವನ್ನು ಹೆಚ್ಚು ಸುಗಮವಾಗಿಸಲು ಸಹಾಯ ಮಾಡುತ್ತವೆ ಎಂದು ಅವರು ಹೇಳಿದರು. ಶ್ರೀ ಅಮಿತ್ ಶಾ ಅವರು ಜುಲೈ 2021 ರಲ್ಲಿ ಪ್ರಾರಂಭಿಸಲಾದ ತುರ್ತು ಸಂಖ್ಯೆ 112 ರ ಸೇವೆಯನ್ನು ಶ್ಲಾಘಿಸಿದರು, ಇದು ಬಹಳ ಕಡಿಮೆ ಅವಧಿಯಲ್ಲಿ 86 ಲಕ್ಷಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಿದೆ ಮತ್ತು ಪ್ರತಿಕ್ರಿಯಿಸಿದೆ. ತುರ್ತು ಸಂಖ್ಯೆಗೆ ಕರೆಗಳ ಸರಾಸರಿ ಪ್ರತಿಕ್ರಿಯೆ ಸಮಯವನ್ನು 11 ನಿಮಿಷ 36 ಸೆಕೆಂಡ್ಗಳಿಂದ 8 ನಿಮಿಷ 2 ಸೆಕೆಂಡ್ಗಳಿಗೆ ಕಡಿಮೆ ಮಾಡಿರುವ ಹರಿಯಾಣ, ಈ ಸಾಧನೆಯಲ್ಲಿ ರಾಷ್ಟ್ರೀಯವಾಗಿ ಎರಡನೇ ಸ್ಥಾನದಲ್ಲಿದೆ ಎಂದು ಅವರು ಹೇಳಿದರು. ಮುಖ್ಯಮಂತ್ರಿಯವರ ಫ್ಲೈಯಿಂಗ್ ಸ್ಕ್ವಾಡ್ ಅನ್ನು ಪ್ರಾರಂಭಿಸುವ ಮೂಲಕ ಮತ್ತು ಭ್ರಷ್ಟಾಚಾರ ವಿರೋಧಿ ಕಾರ್ಯಸೂಚಿ ಅಡಿಯಲ್ಲಿ 1,303 ಕ್ಕೂ ಹೆಚ್ಚು ದಾಳಿಗಳನ್ನು ನಡೆಸುವ ಮೂಲಕ ಹರಿಯಾಣವನ್ನು ಭ್ರಷ್ಟಾಚಾರ ಮುಕ್ತ ರಾಜ್ಯವನ್ನಾಗಿ ಮಾಡಲು ರಾಜ್ಯ ಸರ್ಕಾರವು ಕೆಲಸ ಮಾಡಿದೆ ಎಂದು ಶ್ರೀ ಶಾ ಹೇಳಿದರು. ಹರಿಯಾಣ ಪೊಲೀಸ್ ಇಡೀ ರಾಜ್ಯದಲ್ಲಿ 600 ಕ್ಕೂ ಹೆಚ್ಚು ತುರ್ತು ಪ್ರತಿಕ್ರಿಯೆ ವಾಹನಗಳನ್ನು ಮೀಸಲಿಟ್ಟಿದೆ. ಹೆಚ್ಚುವರಿಯಾಗಿ, ಎಲ್ಲಾ ಪರವಾನಗಿ-ಸಂಬಂಧಿತ ಸೇವೆಗಳನ್ನು ಆನ್ಲೈನ್ ಮಾಡುವ ಮೂಲಕ, ಮಾದಕದ್ರವ್ಯ ನಿಗ್ರಹ ಬ್ಯೂರೋವನ್ನು ಸ್ಥಾಪಿಸುವ ಮೂಲಕ ಮತ್ತು ಪ್ರತಿ ಜಿಲ್ಲೆಯಲ್ಲಿ ಎನ್ ಸಿ ಒ ಆರ್ ಡಿ ಸಭೆಗಳನ್ನು ನಡೆಸುವ ಮೂಲಕ ಹರಿಯಾಣವು ಮಾದಕ ದ್ರವ್ಯದ ವಿರುದ್ಧ ಸಕ್ರಿಯವಾಗಿ ಹೋರಾಡುತ್ತಿದೆ ಎಂದು ಅವರು ಹೇಳಿದರು.

*****



(Release ID: 1899353) Visitor Counter : 157