ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ

ಹಸಿರು ಇಂಧನ ವಲಯದಲ್ಲಿ ಪ್ರಮುಖ ಉಪಕ್ರಮಗಳಿಗೆ ಪ್ರಧಾನಮಂತ್ರಿ ಚಾಲನೆ ನೀಡುವುದರೊಂದಿಗೆ 2023ರ ಭಾರತ ಇಂಧನ ಸಪ್ತಾಹ ಆರಂಭ


ಐಇಡಬ್ಲ್ಯೂ ಭಾರತದ 'ಅಮೃತ ಕಾಲ'ದ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಒಳಗೊಂಡಿದ್ದು, 21 ನೇ ಶತಮಾನದ ಜಾಗತಿಕ ಆರ್ಥಿಕತೆಯಲ್ಲಿ 'ವಿಶ್ವಗುರು' ವಾಗಿ ತನ್ನ ಪಾತ್ರವನ್ನು ಪ್ರತಿಪಾದಿಸುತ್ತದೆ: ಶ್ರೀ ಹರ್ದೀಪ್ ಎಸ್. ಪುರಿ

ಇಂಧನ ಲಭ್ಯತೆ, ಕೈಗೆಟುಕುವ ಮತ್ತು ಲಭ್ಯತೆಯ ಜಾಗತಿಕ ಇಂಧನ ಚತುಷ್ಪಥ ಸಮಸ್ಯೆ ಪರಿಹರಿಸಲು ಐಇಡಬ್ಲ್ಯೂ ಪರಿಹಾರಗಳನ್ನು ರೂಪಿಸುತ್ತದೆ: ಶ್ರೀ ಹರ್ದೀಪ್ ಎಸ್. ಪುರಿ.

 ನಾವು ಇಂಧನ ದಕ್ಷತೆ, ಜೈವಿಕ ಇಂಧನಗಳು ಮತ್ತು ಜಲಜನಕ ಸೇರಿದಂತೆ ಭವಿಷ್ಯದ ಇಂಧನಗಳಿಗೆ ಉತ್ತೇಜನ ನೀಡುತ್ತಿದ್ದು, ನವೀಕರಿಸಬಹುದಾದ ಇಂಧನಗಳ ಬಳಕೆಯನ್ನು ಹೆಚ್ಚಿಸುತ್ತೇವೆ ":  ಶ್ರೀ ಹರ್ದೀಪ್ ಎಸ್ ಪುರಿ 

Posted On: 06 FEB 2023 6:54PM by PIB Bengaluru

"ತನ್ನ ನಾಗರಿಕರಿಗೆ ಇಂಧನ ಭದ್ರತೆ, ಕೈಗೆಟುಕುವ ಮತ್ತು ಪ್ರವೇಶವನ್ನು ಖಾತ್ರಿಪಡಿಸುವಾಗ ಜಾಗತಿಕ ಇಂಧನ ಪರಿವರ್ತನೆಯಲ್ಲಿ ಭಾರತದ ಪಾತ್ರದ ಬಗ್ಗೆ ಪ್ರಧಾನಮಂತ್ರಿ ಮೋದಿಯವರ ದೂರದರ್ಶಿತ್ವದ ಫಲವಾಗಿ ಭಾರತ ಇಂಧನ ಸಪ್ತಾಹವನ್ನು ರೂಪಿಸಲಾಗಿದೆ" ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ವಸತಿ ಸಚಿವ ಶ್ರೀ ಹರ್ದೀಪ್ ಎಸ್ ಪುರಿ ಹೇಳಿದರು. 2023 ರ ಫೆಬ್ರವರಿ 6 ರಿಂದ  8ರವರೆಗೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಭಾರತ ಇಂಧನ ಸಪ್ತಾಹ (ಐಇಡಬ್ಲ್ಯೂ) 2023ರ ಉದ್ಘಾಟನಾ ಸಮಾರಂಭದಲ್ಲಿ  ಮಾತನಾಡಿದ ಅವರು, ಇದು 'ಅಮೃತ ಕಾಲ'ದ ಭಾರತದ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಒಳಗೊಂಡಿದೆ, ಜೊತೆಗೆ 'ವಸುಧೈವ ಕುಟುಂಬಕಂ' ಆದರ್ಶಗಳನ್ನು ಅನುಸರಿಸಿ  21 ನೇ ಶತಮಾನದ ಜಾಗತಿಕ ಆರ್ಥಿಕತೆಯಲ್ಲಿ 'ವಿಶ್ವಗುರು' ಪಾತ್ರವನ್ನು ನಿರ್ವಹಿಸುವುದನ್ನು ಪ್ರತಿಪಾದಿಸುತ್ತದೆ ಎಂದು ಹೇಳಿದರು.

PM inaugurates India Energy Week 2023 at Bengaluru, in Karnataka on February 06, 2023.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಬೆಂಗಳೂರಿನಲ್ಲಿ ಭಾರತ ಇಂಧನ ಸಪ್ತಾಹ (ಐಇಡಬ್ಲ್ಯೂ) 2023 ಅನ್ನು ಉದ್ಘಾಟಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಂಗಳೂರಿನಲ್ಲಿ ಭಾರತ ಇಂಧನ ಸಪ್ತಾಹ (ಐಇಡಬ್ಲ್ಯೂ) 2023 ಅನ್ನು ಉದ್ಘಾಟಿಸಿದರು. ಇಂಡಿಯನ್ ಆಯಿಲ್ ನ 'ಅನ್ ಬಾಟಲ್ಡ್' ಉಪಕ್ರಮದ ಅಡಿಯಲ್ಲಿ ಪ್ರಧಾನಮಂತ್ರಿಯವರು ಸಮವಸ್ತ್ರಗಳನ್ನು ಬಿಡುಗಡೆ ಮಾಡಿದರು. ಈ ಸಮವಸ್ತ್ರಗಳನ್ನು ಮರುಬಳಕೆ ಮಾಡಿದ ಪಿಇಟಿ ಬಾಟಲಿಗಳಿಂದ ತಯಾರಿಸಲಾಗುತ್ತದೆ. ಇಂಡಿಯನ್ ಆಯಿಲ್ ನ ಒಳಾಂಗಣ ಸೌರ ಅಡುಗೆ ವ್ಯವಸ್ಥೆಯ ಟ್ವಿನ್-ಕುಕ್ ಟಾಪ್ ಮಾದರಿಯನ್ನು ಅವರು ದೇಶಕ್ಕೆ ಸಮರ್ಪಿಸಿದರು ಮತ್ತು ಅದರ ವಾಣಿಜ್ಯ ಬಳಕೆಗೆ ಹಸಿರು ನಿಶಾನೆ ತೋರಿದರು.

ನಂತರ, ಎಥೆನಾಲ್ ಮಿಶ್ರಣ ಮಾರ್ಗಸೂಚಿಯ ನಿಟ್ಟಿನಲ್ಲಿ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ತೈಲ ಮಾರುಕಟ್ಟೆ ಕಂಪನಿಗಳ 84 ಚಿಲ್ಲರೆ ಮಳಿಗೆಗಳಲ್ಲಿ ಇ 20 ಇಂಧನ ಮಾರಾಟಕ್ಕೆ ಪ್ರಧಾನಮಂತ್ರಿಯವರು ಚಾಲನೆ ನೀಡಿದರು. ಹಸಿರು ಇಂಧನ ಮೂಲಗಳಿಂದ ಚಲಿಸುವ ವಾಹನಗಳು ಭಾಗವಹಿಸುವ ಮತ್ತು ಹಸಿರು ಇಂಧನಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನೆರವಾಗುವ ಹಸಿರು ಸಾರಿಗೆ ರ‍್ಯಾಲಿಗೂ ಅವರು ಹಸಿರು ನಿಶಾನೆ ತೋರಿದರು.

ಪೆಟ್ರೋಲಿಯಂ ಸಚಿವ ಶ್ರೀ ಹರ್ದೀಪ್ ಎಸ್. ಪುರಿ ಅವರ ಜೊತೆಗೆ ಕರ್ನಾಟಕದ ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್, ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಶ್ರೀ ರಾಮೇಶ್ವರ್ ತೇಲಿ ಸೇರಿದಂತೆ ಇತರ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.


 ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಶ್ರೀ ಹರ್ದೀಪ್ ಎಸ್. ಪುರಿ ಅವರು, ಭಾರತ ಇಂಧನ ಸಪ್ತಾಹ 2023 ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಪ್ರಸ್ತುತ ಜಾಗತಿಕ ಇಂಧನ ಸನ್ನಿವೇಶದಲ್ಲಿ ಈ ಕಾರ್ಯಕ್ರಮದ ಮಹತ್ವವನ್ನು ಒಪ್ಪಿಕೊಂಡ ಶ್ರೀ ಹರ್ದೀಪ್ ಎಸ್ ಪುರಿ, "ಐಇಡಬ್ಲ್ಯೂ 2023 ಜಾಗತಿಕ ಇಂಧನ ಭೂದೃಶ್ಯದಲ್ಲಿ ಒಂದು ಪರ್ವಕಾಲದಲ್ಲಿ ಬರುತ್ತಿದೆ ಮತ್ತು ಇದು ಇಂಧನ ಲಭ್ಯತೆ, ಕೈಗೆಟುಕುವ ಮತ್ತು ಲಭ್ಯತೆಯ ಜಾಗತಿಕ ಇಂಧನ ಚತುಷ್ಪಥ ಸಮಸ್ಯೆ ಪರಿಹರಿಸಲು ಪರಿಹಾರಗಳನ್ನು ರೂಪಿಸುತ್ತದೆ ಮತ್ತು ಭವಿಷ್ಯದ ಜಾಗತಿಕ ಇಂಧನ ಪರಿವರ್ತನೆಗೆ ಪರಿಹಾರಗಳನ್ನು ರೂಪಿಸುತ್ತದೆ" ಎಂದು ಹೇಳಿದರು. ಈ ವರ್ಷದ ಧ್ಯೇಯವಾಕ್ಯ 'ಬೆಳವಣಿಗೆ ಸಹಯೋಗ ಪರಿವರ್ತನೆ' ಬಹಳ ಸೂಕ್ತವಾಗಿದೆ, ಏಕೆಂದರೆ ಇದು ನಾವು ಸಹಕರಿಸುವ ಮತ್ತು ಒಟ್ಟಿಗೆ ಬೆಳೆಯುವ ಅಗತ್ಯವನ್ನು ಒತ್ತಿಹೇಳುತ್ತದೆ ಎಂದು ಅವರು ಹೇಳಿದರು.

ಭಾರತವು ತೈಲ ಮತ್ತು ಅನಿಲದ ಮಹತ್ವವನ್ನು ಒತ್ತಿಹೇಳುತ್ತಲೇ ಇದೆ ಆದರೆ ಹವಾಮಾನ ಬದಲಾವಣೆ ತಗ್ಗಿಸುವ ಗುರಿಗಳಿಗೆ ನಮ್ಮ ಬದ್ಧತೆ ಅಡೆತಡೆಯಿಲ್ಲದೆ ಉಳಿದಿದೆ ಎಂದು ಪೆಟ್ರೋಲಿಯಂ ಸಚಿವರು ಹೇಳಿದರು. ದೇಶವು ಸಮಗ್ರ, ಮಾರುಕಟ್ಟೆ ಆಧಾರಿತ ಮತ್ತು ಹವಾಮಾನ ಸೂಕ್ಷ್ಮವಾದ ಇಂಧನ ಕಾರ್ಯಸೂಚಿಯನ್ನು ರೂಪಿಸಿದೆ. 2070ರ ವೇಳೆಗೆ ಹೊರಸೂಸುವಿಕೆಯಲ್ಲಿ ನಿವ್ವಳ ಶೂನ್ಯ ಸಾಧಿಸಲು ಮತ್ತು 2030 ರ ಅಂತ್ಯದ ವೇಳೆಗೆ ಹೊರಸೂಸುವಿಕೆಯನ್ನು 1 ಶತಕೋಟಿ ಟನ್ ಗಳಷ್ಟು ತಗ್ಗಿಸಲು ಭಾರತ ಈಗಾಗಲೇ ಪ್ರತಿಜ್ಞೆ ಮಾಡಿದೆ ಎಂದು ಅವರು ಉಲ್ಲೇಖಿಸಿದರು.  ಜಾಗತಿಕ ಹೊರಸೂಸುವಿಕೆಗೆ ಭಾರತದ ಐತಿಹಾಸಿಕ ಕೊಡುಗೆ (1890 ರಿಂದ) ಸುಮಾರು ಶೇ.4 ರಷ್ಟಿದ್ದರೂ, 5 ನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿದ್ದರೂ ಮತ್ತು ವಿಶ್ವದ ಜನಸಂಖ್ಯೆಯ ಶೇ.17 ರಷ್ಟಿದ್ದರೂ, ಬದ್ಧತೆಯ ಭಾರತ ಜಿ 20 ದೇಶಗಳಲ್ಲಿ ತಲಾ ಹೊರಸೂಸುವಿಕೆಯಲ್ಲಿ ಅತ್ಯಂತ ಕಡಿಮೆ ಮತ್ತು ಜಾಗತಿಕ ಸರಾಸರಿಯ ಅರ್ಧದಷ್ಟು ಹೊಂದಿದೆ ಎಂದರು.

"ನಾವು ಇಂಧನ ದಕ್ಷತೆ, ಜೈವಿಕ ಇಂಧನಗಳು ಮತ್ತು ಜಲಜನಕ ಸೇರಿದಂತೆ ಭವಿಷ್ಯದ ಇಂಧನಗಳಿಗೆ ಪ್ರಚೋದನೆ ನೀಡುತ್ತೇವೆ ಮತ್ತು ನವೀಕರಿಸಬಹುದಾದ ಇಂಧನ ಬಳಕೆಯನ್ನು ಹೆಚ್ಚಿಸುತ್ತೇವೆ. ಅದೇ ವೇಳೆ, ಸಾಂಪ್ರದಾಯಿಕ ಹೈಡ್ರೋಕಾರ್ಬನ್ ಗಳ ದೇಶೀಯ ಪರಿಶೋಧನೆ ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ನಾವು ಪರಿವರ್ತನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ", ಎಂದು ಶ್ರೀ ಹರ್ದೀಪ್ ಎಸ್ ಪುರಿ ಹೇಳಿದರು.

ಇಂಡಿಯನ್ ಆಯಿಲ್ ನ 'ಅನ್ ಬಾಟಲ್ಡ್' ಉಪಕ್ರಮದ ಬಗ್ಗೆ ಮಾತನಾಡಿದ ಸಚಿವರು, "ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಹಂತ ಹಂತವಾಗಿ ನಿರ್ಮೂಲನೆ ಮಾಡಲು ಮಾನ್ಯ ಪ್ರಧಾನಮಂತ್ರಿ ನೀಡಿದ ಕರೆಗೆ ಅನುಗುಣವಾಗಿ, ವರ್ಷಕ್ಕೆ 100 ದಶಲಕ್ಷ ಪಿಇಟಿ ಬಾಟಲಿಗಳನ್ನು ಮರುಬಳಕೆ ಮಾಡಲು ಮತ್ತು ಪುನರ್ ಬಳಕೆ ಮಾಡಲು ನಾವು ವಿಶ್ವದ ಅತಿದೊಡ್ಡ ಉಪಕ್ರಮವನ್ನು ಪ್ರಾರಂಭಿಸುತ್ತಿದ್ದೇವೆ" ಎಂದು ಹೇಳಿದರು. ಇದು ಪ್ರಧಾನಮಂತ್ರಿಯವರು ಪ್ರಾರಂಭಿಸಿರುವ 'ಲೈಫ್ – ಪರಿಸರಕ್ಕಾಗಿ ಜೀವನ ಶೈಲಿ (ಎಲ್ಐಎಫ್ಇ) ಆಂದೋಲನದೊಂದಿಗೆ ಪ್ರತಿಧ್ವನಿಸುತ್ತದೆ. ಪಿಇಟಿ-(ಪೆಟ್) ಬಾಟಲಿಗಳನ್ನು ಬಟ್ಟೆಯಾಗಿ ಪರಿವರ್ತಿಸಿ ತೈಲ ಮಾರುಕಟ್ಟೆ ಕಂಪನಿಗಳ (ಒಎಂಸಿ) ಮುಂಚೂಣಿ ಕಾರ್ಮಿಕರಿಗೆ, ಸಶಸ್ತ್ರ ಪಡೆಗಳಿಗೆ ಯುದ್ಧೇತರ ಸಮವಸ್ತ್ರವಾಗಿ ಮತ್ತು ಇತರ ಸಂಸ್ಥೆಗಳಿಗೆ ಹಾಗೂ ಚಿಲ್ಲರೆ ಮಾರಾಟಕ್ಕೂ ನೀಡುವುದಾಗಿ ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2023 ಇಂಧನ ಪರಿವರ್ತನೆ ಮತ್ತು ನಿವ್ವಳ ಶೂನ್ಯ ಉದ್ದೇಶಗಳು ಮತ್ತು ಇಂಧನ ಭದ್ರತೆಗಾಗಿ ಆದ್ಯತೆಯ ಬಂಡವಾಳ ಹೂಡಿಕೆಗಾಗಿ 35,000 ಕೋಟಿ ರೂ.ಗಳ ಹಂಚಿಕೆಯೊಂದಿಗೆ "ಹಸಿರು ಬೆಳವಣಿಗೆ" ಯನ್ನು ಪ್ರಮುಖ ಅಂಶಗಳಲ್ಲಿ ಒಂದಾಗಿಸಿದೆ ಮತ್ತು ಫಲಿತಾಂಶಗಳನ್ನು ವೇಗಗೊಳಿಸಲು ಗಮನಾರ್ಹ ನೀತಿ ಬದಲಾವಣೆಗಳನ್ನು ಮಾಡಿದೆ ಎಂದು ಶ್ರೀ ಹರ್ದೀಪ್ ಎಸ್ ಪುರಿ ಹೇಳಿದರು.

ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು ತಮ್ಮ ಸಮಾರೋಪ ಭಾಷಣದಲ್ಲಿ, ಐಇಡಬ್ಲ್ಯೂ ಎಲ್ಲರಿಗೂ ಸರಿಸಾಟಿಯಿಲ್ಲದ ಜಾಗತಿಕ ಜಾಲ ವೇದಿಕೆಯನ್ನು ಒದಗಿಸುತ್ತದೆ, ಅಲ್ಲಿ ಪ್ರಮುಖ ಆದ್ಯತೆಗಳನ್ನು ನಿಗದಿಪಡಿಸಲಾಗುವುದು ಮತ್ತು ಇಂಧನ ಕ್ಷೇತ್ರದಲ್ಲಿ ಹೊಸ ಪಾಲುದಾರಿಕೆಗಳನ್ನು ರೂಪಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

"ಭಾರತ ಇಂಧನ ಸಪ್ತಾಹ 2023 ರ ಉದ್ಘಾಟನಾ ಕಾರ್ಯಕ್ರಮ" ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ- ”- https://www.youtube.com/live/Ir2nYBuuVnQ?feature=share

***
 



(Release ID: 1896797) Visitor Counter : 142


Read this release in: English , Hindi , Assamese , Gujarati