ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ 30 ಲಕ್ಷ ಮೆಟ್ರಿಕ್ ಟನ್ ಗೋಧಿ ಮಾರಾಟ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರದ  ಅನುಮೋದನೆ


ದೇಶೀಯ ಗೋಧಿ ಮತ್ತು ಹಿಟ್ಟಿನ ಬೆಲೆಗಳನ್ನು ಸರಾಗಗೊಳಿಸಲು ವ್ಯಾಪಾರಿಗಳು, ರಾಜ್ಯ ಸರ್ಕಾರಗಳು ಮತ್ತು ಸಹಕಾರಿಗಳು / ಒಕ್ಕೂಟಗಳು / ಸಾರ್ವಜನಿಕ ರಂಗದ ಉದ್ಯಮಗಳ  ಮೂಲಕ ಮಾರಾಟ

Posted On: 25 JAN 2023 7:36PM by PIB Bengaluru

ಭಾರತೀಯ ಆಹಾರ ನಿಗಮ (ಎಫ್ ಸಿಐ)ವು  ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ದೇಶೀಯ) ಅಡಿಯಲ್ಲಿ ವಿವಿಧ ಮಾರ್ಗಗಳ ಮೂಲಕ ಕೇಂದ್ರ ದಾಸ್ತಾನಿನಿಂದ (ಪೂಲ್ ಸ್ಟಾಕ್) ಮಾರುಕಟ್ಟೆಗೆ 30 ಎಲ್ ಎಂಟಿ ಗೋಧಿಯನ್ನು ಬಿಡುಗಡೆ ಮಾಡಲಿದೆ.

ಒಎಂಎಸ್ಎಸ್ (ಡಿ) ಯೋಜನೆಯ ಮೂಲಕ ಎರಡು ತಿಂಗಳ ಅವಧಿಯಲ್ಲಿ 30 ಎಲ್ಎಂಟಿ ಗೋಧಿಯನ್ನು ಬಹು ಮಾರ್ಗಗಳ ಮೂಲಕ ಮಾರುಕಟ್ಟೆಗೆ ಬಿಡುಗಡೆ ಮಾಡುವುದರಿಂದ  ಗೋಧಿ ಮತ್ತು ಹಿಟ್ಟಿನ ಬೆಲೆಗಳ ಮೇಲೆ ವ್ಯಾಪಕ ಪರಿಣಾಮ ಉಂಟಾಗಲಿದೆ  ಮತ್ತು ಅದು ಏರುತ್ತಿರುವ ಬೆಲೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಹಾಗು ಸಾಮಾನ್ಯ ಜನರಿಗೆ ಹೆಚ್ಚಿನ ಪರಿಹಾರವನ್ನು ತರುತ್ತದೆ.

ದೇಶದಲ್ಲಿ ಹೆಚ್ಚುತ್ತಿರುವ ಗೋಧಿ ಮತ್ತು ಹಿಟ್ಟಿನ  ಬೆಲೆಯನ್ನು ತಹಬಂದಿಗೆ ತರಲು, ಗೃಹ ಸಚಿವ ಶ್ರೀ ಅಮಿತ್ ಶಾ ನೇತೃತ್ವದ ಸಚಿವರ ಗುಂಪು ಇಂದು ಸಭೆ ಸೇರಿ ದೇಶದ ಕಾಪು ದಾಸ್ತಾನು (ಬಫರ್ ಸ್ಟಾಕ್ ) ಸ್ಥಿತಿಯ ಬಗ್ಗೆ ಚರ್ಚಿಸಿತು.

ಏರುತ್ತಿರುವ ಬೆಲೆಗಳ ಮೇಲೆ ತ್ವರಿತ ಪರಿಣಾಮ ಬೀರುವ ಸಲುವಾಗಿ, ಗೋಧಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು  ಈ ಕೆಳಗಿನ ಕ್ರಮಗಳನ್ನು ಸಚಿವರ  ಸಮಿತಿ (ಸಿಒಎಂ) ಅನುಮೋದಿಸಿದೆ:

1. ಇ-ಹರಾಜಿನ ಅಡಿಯಲ್ಲಿ ಎಫ್.ಸಿ.ಐ. ವಲಯದಿಂದ ಪ್ರತಿ ಖರೀದಿದಾರನಿಗೆ ಗರಿಷ್ಠ 3000 ಮೆಟ್ರಿಕ್ ಟನ್ ನಷ್ಟನ್ನು  ಇ-ಹರಾಜಿನ ಮೂಲಕ ಹಿಟ್ಟು ಗಿರಣಿದಾರರು, ಬೃಹತ್ ಖರೀದಿದಾರರು ಮತ್ತಿತರರಿಗೆ ಗೋಧಿಯನ್ನು ಒದಗಿಸಲಾಗುವುದು.

2. ಇ-ಹರಾಜು ಇಲ್ಲದೆಯೇ  ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಅವುಗಳ  ಯೋಜನೆಗಳಿಗಾಗಿ ಗೋಧಿಯನ್ನು ಒದಗಿಸಲಾಗುವುದು.

3. ಮೇಲಿನ ಮಾರ್ಗಗಳಲ್ಲದೆ, ಇ-ಹರಾಜು ಇಲ್ಲದೆಯೇ  ಸರ್ಕಾರಿ ಸಾರ್ವಜನಿಕ ರಂಗದ ಉದ್ಯಮಗಳು / ಸಹಕಾರಿಗಳು / ಒಕ್ಕೂಟಗಳು, ಕೇಂದ್ರೀಯ ಭಂಡಾರ್ / ಎನ್ ಸಿ.ಸಿಎಫ್ / ನಾಫೆಡ್ ಇತ್ಯಾದಿಗಳಿಗೆ ಗೋಧಿಯನ್ನು ಕ್ವಿಂಟಾಲಿಗೆ 2350ರೂ. ರಿಯಾಯಿತಿ ದರದಲ್ಲಿ ನೀಡಲಾಗುವುದು. ಈ ವಿಶೇಷ ಯೋಜನೆಯಡಿ ಮಾರಾಟವು ಖರೀದಿದಾರರು ಗೋಧಿಯನ್ನು ಹಿಟ್ಟು (ಹುಡಿ) ಆಗಿ ಪರಿವರ್ತಿಸುವ  ಮತ್ತು ಅದನ್ನು ಪ್ರತಿ ಕೆ.ಜಿ.ಗೆ ಗರಿಷ್ಠ ಚಿಲ್ಲರೆ ಬೆಲೆ ರೂ.29.50 ಕ್ಕೆ ಸಾರ್ವಜನಿಕರಿಗೆ ಮಾರಾಟ ಮಾಡಬೇಕು ಎಂಬ ಷರತ್ತಿಗೆ ಒಳಪಟ್ಟಿರುತ್ತದೆ.

ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಗೋಧಿ ಮತ್ತು ಹಿಟ್ಟಿನ ಬೆಲೆಗಳ ಮೇಲೆ ತಕ್ಷಣದ ನಿಯಂತ್ರಣ ಪರಿಣಾಮಕ್ಕಾಗಿ ಮುಂದಿನ ಎರಡು ತಿಂಗಳಲ್ಲಿ ಭಾರತೀಯ ಆಹಾರ ನಿಗಮವು ಗೋಧಿಯನ್ನು ಮಾರುಕಟ್ಟೆಗೆ ಬಿಡುಗಡೆ  ಮಾಡಲು ನಿರ್ಧರಿಸಿದೆ.

ಎಫ್ ಸಿಐಯು  2023 ರ ಜನವರಿಯಿಂದ ಆರಂಭಿಸಿ ಮಾರ್ಚ್ ವರೆಗೆ ದೇಶಾದ್ಯಂತ ದಾಸ್ತಾನಿನ  ಇ-ಹರಾಜು ಪ್ರಕ್ರಿಯೆಯನ್ನು ತಕ್ಷಣವೇ ಪ್ರಾರಂಭಿಸುತ್ತದೆ.

*****



(Release ID: 1893816) Visitor Counter : 107