ಕೃಷಿ ಸಚಿವಾಲಯ

ಕೇಂದ್ರ ಕೃಷಿ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ಬೆಂಗಳೂರಿನಲ್ಲಿ ಸಿರಿಧಾನ್ಯಗಳು ಮತ್ತು ಸಾವಯವ ಉತ್ಪನ್ನಗಳ ಅಂತಾರಾಷ್ಟ್ರೀಯ ವ್ಯಾಪಾರ ಮೇಳಕ್ಕೆ ಭೇಟಿ ನೀಡಿದರು


ಸಣ್ಣ ರೈತರ ಬಗ್ಗೆ ಪ್ರಧಾನಿ ಬಹಳ ಸಂವೇದನಾಶೀಲರಾಗಿದ್ದಾರೆ - ಶ್ರೀ ತೋಮರ್

ಹೆಚ್ಚಿನ ಸಿರಿಧಾನ್ಯಗಳ ಉತ್ಪಾದನೆ, ಬಳಕೆ ಮತ್ತು ರಫ್ತಿನಿಂದ ರೈತರಿಗೆ ಲಾಭವಾಗಲಿದೆ

Posted On: 22 JAN 2023 7:52PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ದೇಶದ ಸಣ್ಣ ರೈತರ ಬಗ್ಗೆ ಬಹಳ ಸಂವೇದನಾಶೀಲರಾಗಿದ್ದಾರೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ಶ್ರೀ ಮೋದಿಯವರು ದೂರದೃಷ್ಟಿಯಿಂದ ವಿಶ್ವಸಂಸ್ಥೆಯಲ್ಲಿ ಸಿರಿಧಾನ್ಯಗಳ ವಿಷಯವನ್ನು ಎತ್ತಿದ್ದಾರೆ. ಭಾರತ ಸರ್ಕಾರದ ನಿರ್ಣಯವನ್ನು 72 ರಾಷ್ಟ್ರಗಳ ಬೆಂಬಲದೊಂದಿಗೆ ಅಂಗೀಕರಿಸಲಾಯಿತು ಮತ್ತು ವಿಶ್ವಸಂಸ್ಥೆಯ ಘೋಷಣೆಯ ಪ್ರಕಾರ, 2023ನ್ನು ಈಗ ಭಾರತದ ನಾಯಕತ್ವದಲ್ಲಿ ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷವಾಗಿ ಆಚರಿಸಲಾಗುತ್ತಿದೆ. ಇದರ ಹಿಂದೆ, ಸಿರಿಧಾನ್ಯಗಳ ಉತ್ಪಾದನೆ ಮತ್ತು ಉತ್ಪಾದಕತೆ, ಸಂಸ್ಕರಣೆ ಮತ್ತು ರಫ್ತನ್ನು ಹೆಚ್ಚಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ, ಇದು ಅಂತಿಮವಾಗಿ ದೇಶದ ರೈತರಿಗೆ ಸಹಾಯ ಮಾಡಲಿದೆ.

ಕೇಂದ್ರ ಸಚಿವ ಶ್ರೀ ತೋಮರ್ ಅವರು ಇಂದು ಬೆಂಗಳೂರಿನಲ್ಲಿ ಸಿರಿಧಾನ್ಯಗಳು ಮತ್ತು ಸಾವಯವ ಉತ್ಪನ್ನಗಳ ಅಂತಾರಾಷ್ಟ್ರೀಯ ವ್ಯಾಪಾರ ಮೇಳದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಈ ವಿಷಯ ತಿಳಿಸಿದರು. ಶ್ರೀ ತೋಮರ್ ಅವರು ಸಿರಿಧಾನ್ಯಗಳ ಬೆಳೆಗಳನ್ನು ಕಡಿಮೆ ನೀರಿನಲ್ಲಿ ಬೆಳೆಯಬಹುದು ಎಂದು ತಿಳಿಸಿದರು. ಸಿರಿಧಾನ್ಯಗಳು ರೈತರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದೇಶದಲ್ಲಿ ಸಿರಿಧಾನ್ಯಗಳ ಉತ್ಪಾದನೆ ಮತ್ತು ಬಳಕೆಯ ಹೆಚ್ಚಳದೊಂದಿಗೆ, ಅದರ ರಫ್ತು ಸಹ ಹೆಚ್ಚಾಗುತ್ತದೆ, ಇದರಿಂದ ಹೆಚ್ಚಿನ ಸಂಖ್ಯೆಯ ರೈತರಿಗೆ ಪ್ರಯೋಜನವಾಗಲಿದೆ. ಸಿರಿಧಾನ್ಯಗಳ ಉತ್ಪಾದನೆ ಮತ್ತು ಬಳಕೆಯನ್ನು ಹೆಚ್ಚಿಸುವ ಕರ್ನಾಟಕ ಸರ್ಕಾರದ ಪ್ರಯತ್ನಗಳನ್ನು ಅವರು ಶ್ಲಾಘಿಸಿ, 201 ಕೋಟಿ ರೂಪಾಯಿಗಳ ತಿಳುವಳಿಕಾ ಒಡಂಬಡಿಕೆಗಳಿಗೆ ಸಹಿ ಹಾಕಿರುವುದು ಒಂದು ಪ್ರಮುಖ ಮೈಲಿಗಲ್ಲು ಎಂದು ಬಣ್ಣಿಸಿದರು. ರಾಜ್ಯದ ರೈತರಿಗೆ ನೀಡಲಾದ ಪ್ರೋತ್ಸಾಹಧನವನ್ನು ಅವರು ಶ್ಲಾಘಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಕಲ್ಯಾಣಕ್ಕಾಗಿ ಅವರ ಆದಾಯವನ್ನು ಹೆಚ್ಚಿಸುವುದು ಸೇರಿದಂತೆ ಅನೇಕ ಪ್ರಮುಖ ಯೋಜನೆಗಳನ್ನು ನಡೆಸುತ್ತಿವೆ ಎಂದು ಶ್ರೀ ತೋಮರ್ ಹೇಳಿದರು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ ಮೂಲಕ ರೈತರಿಗೆ 6,000 ರೂ. ವಾರ್ಷಿಕ ವಾರ್ಷಿಕ ಆದಾಯ ನೆರವನ್ನು ನೀಡಲಾಗುತ್ತಿದೆ. ಇದಲ್ಲದೆ, ಕರ್ನಾಟಕದ ರೈತರಿಗೆ ತಲಾ 4,000 ರೂ.ಗಳ ಹೆಚ್ಚುವರಿ ವಾರ್ಷಿಕ ಆದಾಯ ಬೆಂಬಲವನ್ನು ನೀಡಲಾಗುತ್ತಿದೆ. ಬಹುಪಾಲು ಸಣ್ಣ ರೈತರ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ, ಪ್ರಧಾನಮಂತ್ರಿ ಶ್ರೀ ಮೋದಿಯವರು ದೇಶದಲ್ಲಿ 10,000 ಹೊಸ ರೈತ ಉತ್ಪಾದಕ ಸಂಸ್ಥೆಗಳ (ಎಫ್.ಪಿ.ಒ) ಸ್ಥಾಪನೆಗೆ ಚಾಲನೆ ನೀಡಿದ್ದು, ಇದಕ್ಕಾಗಿ ಭಾರತ ಸರ್ಕಾರ 6,865 ಕೋಟಿ ರೂ. ಖರ್ಚು ಮಾಡುತ್ತಿದೆ. ದೇಶಾದ್ಯಂತ ಮತ್ತು ನಿರ್ದಿಷ್ಟವಾಗಿ ಕರ್ನಾಟಕದಲ್ಲಿ ಹೊಸ ರೈತ ಉತ್ಪಾದಕ ಸಂಸ್ಥೆಗಳ ರಚನೆಯಲ್ಲಿ ಉತ್ಸಾಹಭರಿತ ಕೊಡುಗೆಯನ್ನು ಅವರು ಶ್ಲಾಘಿಸಿದರು. ಕೃಷಿಯನ್ನು ಮುನ್ನಡೆಸಿ ರೈತರನ್ನು ಸಮೃದ್ಧಗೊಳಿಸಲು ಕೇಂದ್ರ ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ ಎಂದು ಶ್ರೀ ತೋಮರ್ ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ತೋಮರ್ ಅವರು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪ್ರಧಾನ ಮಾಡಿದರು. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಶ್ರೀ ಭಗವಂತ ಖೂಬಾ, ಉತ್ತರ ಪ್ರದೇಶದ ಕೃಷಿ ಸಚಿವ ಶ್ರೀ ಸೂರ್ಯ ಪ್ರತಾಪ್ ಸಿಂಗ್ ಶಾಹಿ ಮತ್ತು ರಾಜ್ಯ ತೋಟಗಾರಿಕಾ ಸಚಿವ ಶ್ರೀ ದಿನೇಶ್ ಪ್ರತಾಪ್ ಸಿಂಗ್, ಕರ್ನಾಟಕದ ಕೃಷಿ ಸಚಿವ ಶ್ರೀ ಬಿ.ಸಿ. ಪಾಟೀಲ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

*****



(Release ID: 1892891) Visitor Counter : 144


Read this release in: English , Urdu , Hindi , Telugu