ಪರಿಸರ ಮತ್ತು ಅರಣ್ಯ ಸಚಿವಾಲಯ

ಜಿ 20 ಯ ಮೊದಲ ಪರಿಸರ ಮತ್ತು ಹವಾಮಾನ ಸುಸ್ಥಿರತೆ ಕಾರ್ಯ ಗುಂಪು (ಇಸಿಎಸ್ ಡಬ್ಲ್ಯೂಜಿ) ಸಭೆ 2023ರ ಫೆಬ್ರವರಿ 09-11ರವರೆಗೆ  ಬೆಂಗಳೂರಿನಲ್ಲಿ ನಡೆಯಲಿದೆ.


ಕರಾವಳಿ ಸುಸ್ಥಿರತೆ, ಹದಗೆಟ್ಟ ಭೂಮಿ ಮತ್ತು ಪರಿಸರ ವ್ಯವಸ್ಥೆಗಳ ಪುನಃಸ್ಥಾಪನೆ, ಜೀವವೈವಿಧ್ಯತೆಯ ವರ್ಧನೆ ಮತ್ತು ವೃತ್ತಾಕಾರದ ಆರ್ಥಿಕತೆಯನ್ನು ಬಲಪಡಿಸುವ ಜೊತೆಗೆ ನೀಲಿ ಆರ್ಥಿಕತೆಯನ್ನು ಉತ್ತೇಜಿಸುವತ್ತ ಇಸಿಎಸ್ ಡಬ್ಲ್ಯೂಜಿ ಗಮನ ಹರಿಸಲಿದೆ

ಬರಲಿರುವ  ಇಸಿಎಸ್ ಡಬ್ಲ್ಯೂಜಿ ಸಭೆಗೆ ಬ್ರ್ಯಾಂಡಿಂಗ್, ಭದ್ರತೆ, ಸ್ಥಳ ನಿರ್ವಹಣೆಗೆ ಸಂಬಂಧಿಸಿದ ಅಂಶಗಳನ್ನು ಎಂ.ಒ.ಇ.ಎಫ್. ಸಚಿವಾಲಯದ ಕಾರ್ಯದರ್ಶಿ ಮತ್ತು ಸಿಸಿ ಮತ್ತು ಕರ್ನಾಟಕದ ಮುಖ್ಯ ಕಾರ್ಯದರ್ಶಿ ಪರಾಮರ್ಶಿಸಿದರು.
 
ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ರೂಪಿಸಿದ ಇ-ಪರಿಹಾರ ಮತ್ತು ಇ-ಗಸ್ತುವಿನಂತಹ ಐಟಿ ಪರಿಹಾರಗಳನ್ನು ಶ್ಲಾಘಿಸಲಾಯಿತು

ಜಿ 20 ಪ್ರತಿನಿಧಿಗಳು ಕರ್ನಾಟಕದ ಕಲಾತ್ಮಕ, ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯ ಸಮಗ್ರ ಅನುಭವವನ್ನು ಪಡೆಯಲಿದ್ದಾರೆ

ಬನ್ನೇರುಘಟ್ಟ ಜೈವಿಕ ಉದ್ಯಾನವು ಅತ್ಯಾಧುನಿಕ ಚಿಟ್ಟೆ ಉದ್ಯಾನ ಮತ್ತು ಪ್ರಾಣಿ ಸಫಾರಿಗಳನ್ನು ಪ್ರತಿನಿಧಿಗಳಿಗೆ ಪ್ರದರ್ಶಿಸಲಿದೆ

ಕರ್ನಾಟಕ ಅರಣ್ಯ ಇಲಾಖೆಯು ಪ್ರಮುಖ ಪರಿಸರ ಪ್ರವಾಸೋದ್ಯಮ ಮಾದರಿ ಮತ್ತು ಪ್ರಾಣಿ ಜೀವವೈವಿಧ್ಯತೆಯ ಯಶಸ್ವಿ ಪುನರುಜ್ಜೀವನಕ್ಕಾಗಿ ಅಳವಡಿಸಿಕೊಂಡ ಅರಣ್ಯ ಪುನಃಸ್ಥಾಪನಾ ಮಾದರಿಗಳನ್ನು ಪ್ರದರ್ಶಿಸಲಿದೆ

Posted On: 21 JAN 2023 2:12PM by PIB Bengaluru

ಭಾರತವು 2023 ರ ನವೆಂಬರ್ 30 ರವರೆಗೆ ಒಂದು ವರ್ಷದ ಅವಧಿಯ ಜಿ 20 ಅಧ್ಯಕ್ಷತೆಯನ್ನು ಹೊಂದಿರುತ್ತದೆ. ಈ ವೇದಿಕೆಯು ಜಿ 20 ಸದಸ್ಯ ರಾಷ್ಟ್ರಗಳು, ಅತಿಥಿ ರಾಷ್ಟ್ರಗಳು ಮತ್ತು ಭಾರತ ಆಹ್ವಾನಿಸಿರುವ ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಒಟ್ಟುಗೂಡಿಸುತ್ತದೆ. ಶೆರ್ಪಾ ಟ್ರ್ಯಾಕ್ ಮೂಲಕ, 13 ಕಾರ್ಯ ಗುಂಪುಗಳು ಮತ್ತು 2 ಉಪಕ್ರಮಗಳು ಭಾರತದ ಅಧ್ಯಕ್ಷತೆಯ  ಅಡಿಯಲ್ಲಿ ಸಭೆ ಸೇರಿ ಆದ್ಯತೆಗಳ ಬಗ್ಗೆ ಚರ್ಚಿಸಲಿವೆ ಮತ್ತು ಶಿಫಾರಸುಗಳನ್ನು ಮಾಡಲಿವೆ. ಪರಿಸರ, ಹವಾಮಾನ ಮತ್ತು ಸುಸ್ಥಿರತೆಯು ಶೆರ್ಪಾ ಟ್ರ್ಯಾಕ್ ಅಡಿಯಲ್ಲಿರುವ  ಕಾರ್ಯ ಗುಂಪುಗಳಲ್ಲಿ ಒಂದಾಗಿದೆ.

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (ಎಂಒಇಎಫ್ ಮತ್ತು ಸಿಸಿ) ಆತಿಥ್ಯದಲ್ಲಿ  ಪರಿಸರ ಮತ್ತು ಹವಾಮಾನ ಸುಸ್ಥಿರ ಕಾರ್ಯ ಗುಂಪಿನ (ಇಸಿಎಸ್ ಡಬ್ಲ್ಯೂಜಿ) ನಾಲ್ಕು ಸಭೆಗಳನ್ನು ಆಯೋಜಿಸಲಾಗಿದೆ. ಇಸಿಎಸ್ ಡಬ್ಲ್ಯೂಜಿಯಲ್ಲಿನ ಚರ್ಚೆಗಳು 'ಕರಾವಳಿ ಸುಸ್ಥಿರತೆಯೊಂದಿಗೆ ನೀಲಿ ಆರ್ಥಿಕತೆಗೆ ಉತ್ತೇಜನ', 'ಹದಗೆಟ್ಟ ಭೂಮಿ ಮತ್ತು ಪರಿಸರ ವ್ಯವಸ್ಥೆಗಳ ಪುನಃಸ್ಥಾಪನೆ' ಮತ್ತು 'ಜೀವವೈವಿಧ್ಯತೆಯ ವರ್ಧನೆ' ಹಾಗು 'ವೃತ್ತಾಕಾರದ ಆರ್ಥಿಕತೆಯನ್ನು ಬಲಪಡಿಸುವುದು' ಎಂಬ ಕಾರ್ಯಸೂಚಿಯ ಮೇಲೆ ಕೇಂದ್ರೀಕರಣಗೊಂಡಿರುತ್ತವೆ.

ಭಾರತದ ಅಧ್ಯಕ್ಷತೆಯಡಿ ನಡೆಯುವ ಜಿ 20 ಯ ಮೊದಲ ಜಿ 20 ಪರಿಸರ ಸಭೆ ಫೆಬ್ರವರಿ 09 ರಿಂದ 11 ರವರೆಗೆ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ನಲ್ಲಿ ನಡೆಯಲಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರದ ಸಹಯೋಗದೊಂದಿಗೆ ಮೈಸೂರು ಮೃಗಾಲಯವು 2023 ರ ಜನವರಿ 18 ಮತ್ತು 19 ರಂದು ಭಾರತದ ಮೃಗಾಲಯ ನಿರ್ದೇಶಕರಿಗಾಗಿ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿತ್ತು. ಭಾರತದ ಅತ್ಯುತ್ತಮ ಮೃಗಾಲಯಗಳಲ್ಲಿ ಒಂದಾದ ಮೈಸೂರು ಮೃಗಾಲಯವನ್ನು ಮೃಗಾಲಯ ನಿರ್ವಹಣೆಯಲ್ಲಿ ಉತ್ತಮ ಪದ್ಧತಿಗಳ ಅನುಷ್ಠಾನದ ಮೇಲೆ ಗಮನ ಕೇಂದ್ರೀಕರಿಸುವ ಸ್ಥಳವೆಂದು ಆಯ್ಕೆ ಮಾಡಲಾಗಿತ್ತು. ಮೃಗಾಲಯದ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ವಿಶಿಷ್ಟ ಪರಿಕಲ್ಪನೆಯೊಂದಿಗೆ ಇದು ಭಾರತದ ಎರಡು ಸ್ವಾವಲಂಬಿ ಮೃಗಾಲಯಗಳಲ್ಲಿ ಒಂದಾಗಿದೆ, ದತ್ತು ತೆಗೆದುಕೊಳ್ಳುವ ಪದ್ಧತಿ ಈ ಮೃಗಾಲಯದಲ್ಲಿ ಪ್ರಾರಂಭವಾಯಿತು.  ಸಮ್ಮೇಳನವು ಮುಖ್ಯವಾಗಿ "ಮಹಾ ಯೋಜನೆ  ಮತ್ತು ಪ್ರಭೇದಗಳ ನಿರ್ವಹಣೆ ಮತ್ತು ಸಂರಕ್ಷಣಾ ಸಂತಾನೋತ್ಪತ್ತಿಗಾಗಿ ರಾಷ್ಟ್ರೀಯ ಸಾಮರ್ಥ್ಯವನ್ನು ನಿರ್ಮಾಣ ಮಾಡುವುದರ " ಮೇಲೆ ಗಮನ ಕೇಂದ್ರೀಕರಿಸಿತ್ತು. ಈ ಸಮ್ಮೇಳನದಲ್ಲಿ 25 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಿಂದ 59 ಪ್ರತಿನಿಧಿಗಳು  ಭಾಗವಹಿಸಿದ್ದರು. ಮೈಸೂರು ಮೇಯರ್ ಉದ್ಘಾಟಿಸಿದ್ದರು ಮತ್ತು ಸಂರಕ್ಷಣಾ ಪದ್ಧತಿಗಳ ಬಗ್ಗೆ ಗಮನ ಸೆಳೆಯುವಲ್ಲಿ ಸಮ್ಮೇಳನ ಯಶಸ್ವಿಯಾಯಿತು. 

ಸನ್ನದ್ಧತೆ ಮತ್ತು ಉತ್ತಮ ಸಮನ್ವಯಕ್ಕಾಗಿ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಕಾರ್ಯದರ್ಶಿ ಶ್ರೀಮತಿ ಲೀನಾ ನಂದನ್ ಮತ್ತು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀಮತಿ ವಂದಿತಾ ಶರ್ಮಾ ಅವರ ನಡುವೆ 2023 ರ ಜನವರಿ 21 ರಂದು ಬೆಂಗಳೂರಿನಲ್ಲಿ ಸಭೆ ನಡೆಯಿತು. ಬ್ರ್ಯಾಂಡಿಂಗ್, ಭದ್ರತೆ, ಸ್ಥಳ ನಿರ್ವಹಣೆ, ಕರ್ನಾಟಕದ ಸಂಪ್ರದಾಯಗಳನ್ನು ಪ್ರದರ್ಶಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಇತರ ಸಾರಿಗೆ ವ್ಯವಸ್ಥೆಗಳು ಇತ್ಯಾದಿಗಳಿಗೆ ಸಂಬಂಧಿಸಿದ ಅಂಶಗಳನ್ನು ಚರ್ಚಿಸಲಾಯಿತು. ಸಭೆಯನ್ನು ಹೈಲೈಟ್ ಮಾಡಲು ಪ್ರಮುಖ ಸ್ಥಳಗಳಲ್ಲಿ ಬ್ರ್ಯಾಂಡಿಂಗ್ ಸ್ಥಳಗಳನ್ನು ಒದಗಿಸುವಂತೆ ಶ್ರೀಮತಿ ನಂದನ್ ರಾಜ್ಯ ಸರ್ಕಾರವನ್ನು ವಿನಂತಿಸಿದರು. ಬೆಂಗಳೂರಿನ ವಾತಾವರಣ ಮತ್ತು ಅದರ ಹಸಿರು ಪರಿಸರವನ್ನು ಶ್ಲಾಘಿಸಿದ ಕೇಂದ್ರ ಕಾರ್ಯದರ್ಶಿ, ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಜಿ 20 ಪ್ರತಿನಿಧಿಗಳ ವಿಹಾರ ಪ್ರವಾಸಕ್ಕೆ ಅವಕಾಶ ನೀಡುವಂತೆ ಮುಖ್ಯ ಕಾರ್ಯದರ್ಶಿಗೆ ವಿನಂತಿಸಿದರು. ಬೆಂಗಳೂರಿನಲ್ಲಿ ನಡೆಯಲಿರುವ ಪರಿಸರ ಕುರಿತ ಮೊದಲ ಜಿ 20 ಸಭೆಯನ್ನು ಯಶಸ್ವಿಗೊಳಿಸಲು ಸಂಪೂರ್ಣ ಬೆಂಬಲ ನೀಡುವುದಾಗಿ ಮುಖ್ಯ ಕಾರ್ಯದರ್ಶಿ ಭರವಸೆ ನೀಡಿದರು.

ಕೇಂದ್ರ ಕಾರ್ಯದರ್ಶಿ ಮತ್ತು ಮುಖ್ಯ ಕಾರ್ಯದರ್ಶಿಯವರೊಂದಿಗಿನ ಚರ್ಚೆಯ ಸಂದರ್ಭದಲ್ಲಿ, ಕೇಂದ್ರ ಕಾರ್ಯದರ್ಶಿ ಅವರು ಸಾರ್ವಜನಿಕ ಸೇವೆಗಳನ್ನು ತ್ವರಿತವಾಗಿ ತಲುಪಿಸಲು ಮತ್ತು ನೈಸರ್ಗಿಕ ಸಂಪನ್ಮೂಲಗಳ ಮೇಲೆ ನೈಜ ಸಮಯದ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ರೂಪಿಸಿರುವ ನವೀನ ಮಾಹಿತಿ ತಂತ್ರಜ್ಞಾನ ಪರಿಹಾರಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು   ಮತ್ತು ಅದನ್ನು ಶ್ಲಾಘಿಸಿದರು. ಒಂದು ಪ್ರಮುಖ ಉಪಕ್ರಮವೆಂದರೆ ಇ-ಪರಿಹಾರ, ಇದು ಮಾನವ-ಪ್ರಾಣಿ ಸಂಘರ್ಷದ ಸಂದರ್ಭಗಳಲ್ಲಿ ಎಕ್ಸ್-ಗ್ರೇಷಿಯಾ ಪರಿಹಾರಗಳ ಪ್ರಕ್ರಿಯೆಯನ್ನು ಕೈಗೊಳ್ಳಲು  ಮತ್ತು ಮಂಜೂರು ಮಾಡಲು ಸಹಾಯ ಮಾಡುವ ಆನ್ಲೈನ್ ಅಪ್ಲಿಕೇಶನ್; ಇದು ಕ್ಲೈಮ್ ಗಳ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ತರುತ್ತದೆ. ಅಂತೆಯೇ, ಆಂಡ್ರಾಯ್ಡ್ ಆಧಾರಿತ ವೇದಿಕೆಯಾದ ಇ-ಗಸ್ತು ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿ ಕೈಗೊಂಡ ಅರಣ್ಯ ಗಸ್ತು / ಕ್ಷೇತ್ರ ಚಟುವಟಿಕೆಗಳನ್ನು ದಾಖಲಿಸುತ್ತದೆ, ಇದನ್ನು ಮೇಲ್ವಿಚಾರಣಾ ಅಧಿಕಾರಿಗಳು ಉಪಗ್ರಹ ಚಿತ್ರಗಳ ಮೂಲಕ ನಿಯಮಿತವಾಗಿ ದೃಶ್ಯೀಕರಿಸಬಹುದು. ಅದೇ ರೀತಿ  ಇ-ಟಿಂಬರ್ ಸೌಲಭ್ಯವು ಸರ್ಕಾರಿ ಮರಮಟ್ಟು  ಡಿಪೋಗಳಲ್ಲಿ ಲಭ್ಯವಿರುವ ನೈಜ ಸಮಯದ ಮರದ ಸಂಗ್ರಹದ ಮಾಹಿತಿಯನ್ನು ಒದಗಿಸುತ್ತದೆ ಮತ್ತು ಸರ್ಕಾರಿ ಟಿಂಬರ್ ಡಿಪೋಗಳಲ್ಲಿ ಮರ / ಇತರ ಅರಣ್ಯ ಉತ್ಪನ್ನಗಳಿಗೆ ಇ-ಹರಾಜು ಸೌಲಭ್ಯಗಳನ್ನು ಒದಗಿಸುತ್ತದೆ. ಕರ್ನಾಟಕ ಅರಣ್ಯ ಇಲಾಖೆ ಅಭಿವೃದ್ಧಿಪಡಿಸಿದ ಭೌಗೋಳಿಕ-ಪ್ರಾದೇಶಿಕ ಅರಣ್ಯ ಮಾಹಿತಿ ವ್ಯವಸ್ಥೆಯು ದೂರ ಸಂವೇದಿ (ರಿಮೋಟ್ ಸೆನ್ಸಿಂಗ್) ಮತ್ತು ಜಿಐಎಸ್ ತಂತ್ರಜ್ಞಾನವನ್ನು ಬಳಸಿ ರಾಜ್ಯದ ಎಲ್ಲಾ ಅಧಿಸೂಚಿತ ಅರಣ್ಯ ಭೂಮಿಗಳ ಪ್ರಾದೇಶಿಕ ದತ್ತಾಂಶವನ್ನು ಒದಗಿಸುವ ವಿಶಿಷ್ಟ ವೇದಿಕೆಯಾಗಿದ್ದು, ಅದು ಅರಣ್ಯ ಭೂ ಅಧಿಸೂಚನೆಗಳು, ಗ್ರಾಮ ನಕ್ಷೆಗಳು, ಅರಣ್ಯ ನಕ್ಷೆಗಳು ಮತ್ತು ಅಧಿಸೂಚಿತ ಅರಣ್ಯಗಳ ಡಿಜಿಟಲೀಕೃತ  ಮಾಹಿತಿಗಳನ್ನು  ಒದಗಿಸುತ್ತದೆ. ಕಾಡ್ಗಿಚ್ಚು ನಿರ್ವಹಣಾ ವ್ಯವಸ್ಥೆಯು ಕಾಡ್ಗಿಚ್ಚು ತಗ್ಗಿಸುವಿಕೆ ಮತ್ತು ವಿಶ್ಲೇಷಣೆ ಹಾಗು ಆ ಸಂಬಂಧಿತ ಯೋಜನೆಗೆ  ಸಮಗ್ರ ಪರಿಹಾರವಾಗಿದೆ. ಇದು ಕಾಡ್ಗಿಚ್ಚು ಅಪಾಯದ ವಲಯ ನಕ್ಷೆ, ಬೆಂಕಿ ಹಬ್ಬುವ ಸಾಧ್ಯತೆಯ ಸಂಭಾವ್ಯ ಅಪಾಯದ ನಕ್ಷೆ, ಸುಟ್ಟು ಹೋದ  ಪ್ರದೇಶ ಮೌಲ್ಯಮಾಪನವನ್ನು ಒದಗಿಸುತ್ತದೆ ಮತ್ತು ಎಲ್ಲಾ ಕಾಡ್ಗಿಚ್ಚುಗಳನ್ನು  ಕಾಲಮಿತಿಯೊಳಗೆ ನಿಭಾಯಿಸುವ ಹಾಗು  ತಹಬಂದಿಗೆ ತರುವುದನ್ನು ಖಚಿತಪಡಿಸಿಕೊಳ್ಳಲು ಸಕ್ರಿಯ ಕಾಡ್ಗಿಚ್ಚು  ಎಚ್ಚರಿಕೆಗಳನ್ನು ಪ್ರಸಾರ ಮಾಡಲು ಬಲವಾದ  ವ್ಯವಸ್ಥೆಯನ್ನು ಒದಗಿಸುತ್ತದೆ.

ಜಿ-20 ಪ್ರತಿನಿಧಿಗಳು ಬೆಂಗಳೂರಿನ ಕಲ್ಕೆರೆ ಅರ್ಬೋರೇಟಂ ಮತ್ತು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡಲಿದ್ದಾರೆ. ಕಲ್ಕೆರೆಯಲ್ಲಿ, ಪ್ರತಿನಿಧಿಗಳಿಗೆ ಕರ್ನಾಟಕ ರಾಜ್ಯದ ನಾಲ್ಕು ಪ್ರಮುಖ ಅರಣ್ಯ ಪರಿಸರ ವ್ಯವಸ್ಥೆಗಳನ್ನು ದರ್ಶಿಸಲು  ಮತ್ತು ಅನುಭವಿಸಲು ಅವಕಾಶವಿದೆ. ರಾಜ್ಯ ಅರಣ್ಯ ಇಲಾಖೆಯು ಈ ಪರಿಸರ ವ್ಯವಸ್ಥೆಗಳಲ್ಲಿ ಅಳವಡಿಸಿಕೊಂಡ ಅರಣ್ಯ ಪುನಃಸ್ಥಾಪನಾ ಮಾದರಿಗಳನ್ನು ಮತ್ತು ಈ ಪ್ರದೇಶಗಳಲ್ಲಿ ಪ್ರಾಣಿ ಜೀವವೈವಿಧ್ಯತೆಯ ಯಶಸ್ವಿ ಪುನರುಜ್ಜೀವನವನ್ನು ಪ್ರದರ್ಶಿಸುತ್ತದೆ. ಬನ್ನೇರುಘಟ್ಟ ಜೈವಿಕ ಉದ್ಯಾನವು ಅತ್ಯಾಧುನಿಕ ಚಿಟ್ಟೆ ಉದ್ಯಾನ ಮತ್ತು ಪ್ರಾಣಿ ಸಫಾರಿಗಳನ್ನು ಪ್ರತಿನಿಧಿಗಳಿಗೆ ಪ್ರದರ್ಶಿಸಲಿದೆ. ಕರ್ನಾಟಕ ಅರಣ್ಯ ಇಲಾಖೆಯು ಜಾಗತಿಕವಾಗಿ ಪ್ರಕೃತಿ ಪ್ರಿಯರಿಂದ  ಅತ್ಯಂತ ಜನಪ್ರಿಯಗೊಂಡ  ಪ್ರಮುಖ ಪರಿಸರ ಪ್ರವಾಸೋದ್ಯಮ ಮಾದರಿಯಾದ ಜಂಗಲ್ ಲಾಡ್ಜಸ್ ರೆಸಾರ್ಟ್ ನ್ನು   ಪ್ರಮುಖವಾಗಿ ಪ್ರದರ್ಶಿಸಲಿದೆ. 

ಕರ್ನಾಟಕ ಕರಕುಶಲ ವಸ್ತುಗಳು ಮತ್ತು ಜವಳಿಯ ಶ್ರೀಮಂತ ಪರಂಪರೆಯನ್ನು ಸ್ಥಳದಲ್ಲಿ ಪೆವಿಲಿಯನ್ ಗಳ ಮೂಲಕ ಪ್ರದರ್ಶಿಸಲಾಗುವುದು ಎಂದು ಪ್ರವಾಸೋದ್ಯಮ ಆಯುಕ್ತರು ತಿಳಿಸಿದ್ದಾರೆ. ನಾದೇಶ್ವರಂ ಮೂಲಕ ಕರ್ನಾಟಕದ ಕಲಾತ್ಮಕ ಚಿತ್ರಣ, ಅಯನಾ ನೃತ್ಯ ಕಂಪನಿಯಿಂದ ಪ್ರದರ್ಶನ ಮತ್ತು ಸುಮುಖ ರಾವ್ ಅವರಿಂದ ಕೊಳಲು ವಾದನವನ್ನು ಯೋಜಿಸಲಾಗಿದೆ ಎಂದು ಸಂಸ್ಕೃತಿ ಕಾರ್ಯದರ್ಶಿ ಹೇಳಿದ್ದಾರೆ. ಈ ಕಾರ್ಯಕ್ರಮಗಳು ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಮತ್ತು ಕಲಾತ್ಮಕ ಪರಂಪರೆಯನ್ನು ಪ್ರದರ್ಶಿಸುತ್ತವೆ, ಪ್ರತಿನಿಧಿಗಳು ತಮ್ಮೊಂದಿಗೆ ಕರ್ನಾಟಕದ ಸುಗಂಧವನ್ನು  ಕೊಂಡೊಯ್ಯುತ್ತಾರೆ ಎಂಬುದನ್ನೂ ಖಚಿತಪಡಿಸುತ್ತದೆ. ಎಂಒಇಎಫ್ ಮತ್ತು ಸಿಸಿ ಕಾರ್ಯದರ್ಶಿ ಅವರು ಈ ಉಪಕ್ರಮಗಳನ್ನು ಶ್ಲಾಘಿಸಿದರು ಮತ್ತು ಅವುಗಳನ್ನು ಅಳವಡಿಸಿಕೊಳ್ಳಲು ಹಾಗು  ಪುನರಾವರ್ತಿಸಲು ಎಲ್ಲಾ ಜಿ 20 ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಹೇಳಿದರು.

*****



(Release ID: 1892730) Visitor Counter : 216