ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಸೈಬರ್ ಭದ್ರತೆ, ಕ್ವಾಂಟಮ್, ಸೆಮಿಕಂಡಕ್ಟರ್, ಶುದ್ಧ ಇಂಧನ, ಸುಧಾರಿತ ವೈರ್ ಲೆಸ್, ಜೈವಿಕ ತಂತ್ರಜ್ಞಾನ, ಭೂವಿಜ್ಞಾನ, ಖಗೋಳ ಭೌತಶಾಸ್ತ್ರ ಮತ್ತು ರಕ್ಷಣಾ ವ್ಯವಸ್ಥೆಯಂತಹ ಕ್ಷೇತ್ರಗಳಲ್ಲಿ ಭಾರತದ ಜೊತೆಗೆ ಆಳವಾದ ಸಹಕಾರ ಬಗ್ಗೆ ಅಮೆರಿಕ ರಾಷ್ಟ್ರೀಯ ವಿಜ್ಞಾನ ಫೌಂಡೇಶನ್(NSF) ನಿಯೋಗ ಪ್ರಸ್ತಾಪಿಸಿ ಚರ್ಚೆ ನಡೆಸಿತು.


ಪ್ರಧಾನ ಎನ್‌ಎಸ್‌ಎಫ್‌ನ ಯುಎಸ್ ನಿಯೋಗವು ಇಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ ಜಿತೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿ ಮಾಹಿತಿ ಮತ್ತು ತಂತ್ರಜ್ಞಾನ ದ್ವಿಪಕ್ಷೀಯ ಸಹಕಾರವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಭರವಸೆ ನೀಡಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವೈಜ್ಞಾನಿಕ ಪ್ರಯತ್ನಗಳ ಎಲ್ಲಾ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು ಮತ್ತು ಸಾಧ್ಯತೆಗಳನ್ನು ತೋರಿಸಿಕೊಟ್ಟಿದ್ದಾರೆ. ಅದರಲ್ಲೂ ಬಾಹ್ಯಾಕಾಶ, ಜೈವಿಕ ತಂತ್ರಜ್ಞಾನ, ಭೌಗೋಳಿಕ ತಂತ್ರಜ್ಞಾನ ಮತ್ತು ಸುಸ್ಥಿರ ಸ್ಟಾರ್ಟ್ -ಅಪ್ ಕ್ಷೇತ್ರಗಳಲ್ಲಿ ಅವರ ಪ್ರಯತ್ನ ಹೆಚ್ಚು: ಡಾ ಜಿತೇಂದ್ರ ಸಿಂಗ್

ಕ್ರಿಟಿಕಲ್ ಮಿನರಲ್ಸ್, ಸ್ಮಾರ್ಟ್ ಕೃಷಿ, ಜೈವಿಕ-ಆರ್ಥಿಕತೆ ಮತ್ತು 6G ತಂತ್ರಜ್ಞಾನಗಳಂತಹ ಕ್ಷೇತ್ರಗಳಲ್ಲಿ ಸಹಕಾರದ ಹೊಸ ಮಾರ್ಗಗಳನ್ನು ತೆರೆಯಲು ಎನ್ ಎಸ್ ಎಫ್ NSF ಭರವಸೆ ನೀಡಿದೆ.

Posted On: 13 JAN 2023 5:00PM by PIB Bengaluru

ಅಮೆರಿಕದ ಪ್ರಧಾನ ರಾಷ್ಟ್ರೀಯ ವಿಜ್ಞಾನ ಫೌಂಡೇಶನ್ ನ (NSF) ಉನ್ನತ ಮಟ್ಟದ ನಿಯೋಗವು ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ), ಭೂ ವಿಜ್ಞಾನ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ), ಪ್ರಧಾನ ಮಂತ್ರಿ ಕಚೇರಿಯ ರಾಜ್ಯ ಸಚಿವರು; ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳು; ಪರಮಾಣು ಶಕ್ತಿ ಇಲಾಖೆ ಮತ್ತು ಬಾಹ್ಯಾಕಾಶ ಇಲಾಖೆಯ ರಾಜ್ಯ ಸಚಿವರಾದ ಡಾ ಜಿತೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿತು. ಭಾರತದೊಂದಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI), ಸೈಬರ್ ಭದ್ರತೆ, ಕ್ವಾಂಟಮ್, ಸೆಮಿಕಂಡಕ್ಟರ್, ಶುದ್ಧ ಇಂಧನ, ಸುಧಾರಿತ ವೈರ್ ಲೆಸ್, ಜೈವಿಕ ತಂತ್ರಜ್ಞಾನ, ಭೂವಿಜ್ಞಾನ, ಖಗೋಳ ಭೌತಶಾಸ್ತ್ರ ಮತ್ತು ರಕ್ಷಣೆ ಮುಂತಾದ ಕ್ಷೇತ್ರಗಳಲ್ಲಿ ಆಳವಾದ ಸಹಕಾರವನ್ನು ಪ್ರಸ್ತಾಪಿಸಿ ಚರ್ಚೆ ನಡೆಸಿತು. 

ಅಮೆರಿಕದ ರಾಷ್ಟ್ರೀಯ ವಿಜ್ಞಾನ ಫೌಂಡೇಶನ್ ನ ನಿರ್ದೇಶಕರಾದ ಯುಎಸ್ ನಿಯೋಗದ ಮುಖ್ಯಸ್ಥ ಡಾ. ಸೇತುರಾಮನ್ ಪಂಚನಾಥನ್, ಈ ಸಹಯೋಗವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದಾಗಿ ಸಚಿವರಿಗೆ ಭರವಸೆ ನೀಡಿದರು. ಕಳೆದ ಆರು ತಿಂಗಳಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರೊಂದಿಗೆ ಇದು ಅವರ ಮೂರನೇ ಸಭೆಯಾಗಿದೆ. ಈ ವಿಷಯವನ್ನು ನಿಯೋಗ ಎಷ್ಟು ಗಂಭೀರವಾಗಿ ಮತ್ತು ಪ್ರಾಮುಖ್ಯತೆಯಿಂದ ತೆಗೆದುಕೊಂಡಿದೆ ಎಂಬುದನ್ನು ಇದು ಸೂಚಿಸುತ್ತದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಕಳೆದ ಎಂಟೂವರೆ ವರ್ಷಗಳ ಆಡಳಿತದಲ್ಲಿ ದೇಶದ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರದಲ್ಲಿ ವೈಯಕ್ತಿಕ ಆಸಕ್ತಿಯನ್ನು ಹೊಂದಿದ್ದಾರೆ. ವಿಜ್ಞಾನ ಆಧಾರಿತ ಪರಿಹಾರಗಳ ಮೂಲಕ ಸಾಮಾಜಿಕ ಕ್ಷೇತ್ರದ ಯೋಜನೆಗಳನ್ನು ಜಾರಿಗೊಳಿಸಲು ಸಕ್ರಿಯವಾಗಿ ಪ್ರಯತ್ನಿಸಿ ಸಾಮಾನ್ಯ ಜನರ ಬದುಕನ್ನು ಸರಳಗೊಳಿಸಲು ನೋಡಿದ್ದಾರೆ ಎಂದು ಡಾ ಜಿತೇಂದ್ರ ಸಿಂಗ್ ಅವರು ನಿಯೋಗಕ್ಕೆ ತಿಳಿಸಿದರು. ಪ್ರಧಾನಿ ಮೋದಿಯವರಿಂದ ಸಿಕ್ಕಿದ ಪ್ರೋತ್ಸಾಹವು ವೈಜ್ಞಾನಿಕ ಪ್ರಯತ್ನಗಳ ಎಲ್ಲಾ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು ಮತ್ತು ಸಾಧ್ಯತೆಗಳನ್ನು ತೆರೆದಿದೆ, ಆದರೆ ಬಾಹ್ಯಾಕಾಶ, ಜೈವಿಕ ತಂತ್ರಜ್ಞಾನ, ಭೌಗೋಳಿಕ ಅಂಕಿಸಂಖ್ಯೆ ಮಾಹಿತಿಗಳು-ಜಿಯೋಸ್ಪೇಷಿಯಲ್ ಮತ್ತು ಸುಸ್ಥಿರ ಸ್ಟಾರ್ಟ್-ಅಪ್‌ಗಳ ಕ್ಷೇತ್ರಗಳಲ್ಲಿ ಹೆಚ್ಚಾಗಿದೆ. 2014 ರಿಂದ, ಪ್ರತಿ ಸ್ವಾತಂತ್ರ್ಯ ದಿನದ ಭಾಷಣದಲ್ಲಿ, ಪ್ರಧಾನಿ ಮೋದಿಯವರು ಪ್ರಮುಖ ವೈಜ್ಞಾನಿಕ ಸವಾಲುಗಳು, ಸ್ವಚ್ಛತೆ, ಹೈಡ್ರೋಜನ್ ಮಿಷನ್, ಡಿಜಿಟಲ್ ಹೆಲ್ತ್ ಕೇರ್ ಸಿಸ್ಟಮ್, ಡೀಪ್ ಓಷಿಯನ್ ಮಿಷನ್, ಶುದ್ಧ ಇಂಧನ ಮತ್ತು ಸ್ಟಾರ್ಟ್-ಅಪ್‌ಗಳಂತಹ ಯೋಜನೆಗಳಿಗೆ ಅನುವು ಮಾಡಿಕೊಟ್ಟಿದ್ದಾರೆ.

ಜಾಗತಿಕ ಸವಾಲುಗಳ ವಿರುದ್ಧ ಹೋರಾಡುವಲ್ಲಿ ಜಾಗತಿಕ ನಾಯಕತ್ವಕ್ಕಾಗಿ ದೀರ್ಘಾವಧಿಗೆ ಮತ್ತು ಬಲವಾದ ಬಾಂಧವ್ಯವನ್ನು ರೂಪಿಸಲು ಭಾರತ ಮತ್ತು ಅಮೆರಿಕ ಎರಡೂ ದೇಶಗಳಿಗೆ ಇದು ಅತ್ಯುತ್ತಮ ಸಮಯ ಎಂದು ಡಾ ಜಿತೇಂದ್ರ ಸಿಂಗ್ ಹೇಳಿದರು. ಎರಡೂ ದೇಶಗಳು ಬಯಸುವ ಗುರಿಗಳನ್ನು ಸಾಧಿಸಲು ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ಆಶಾವಾದದ ಸ್ಪಷ್ಟ ಸಂಕೇತವಾಗಿದೆ. ನಿರ್ಣಾಯಕ ಕ್ಷೇತ್ರಗಳಲ್ಲಿ ತಂತ್ರಜ್ಞಾನ ವರ್ಗಾವಣೆ ವಿಷಯ ಬಂದಾಗ ತನ್ನ ಸಹಜ ಮಿತ್ರ ದೇಶ(ಜಗತ್ತಿನ ಅತ್ಯಂತ ಹಳೆಯ ಮತ್ತು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ) ನೆರವಿಗೆ ಬರುತ್ತದೆ. ಏಕೆಂದರೆ ಸಹಯೋಗವನ್ನು ಹೊರತುಪಡಿಸಿ ಬೇರೆ ಆಯ್ಕೆಗಳಿಲ್ಲ ಎಂದು ಸಚಿವರು ಹೇಳಿದರು. 

ನಿಯೋಗ ಮಟ್ಟದ ಮಾತುಕತೆಯ ಸಂದರ್ಭದಲ್ಲಿ, ಎರಡೂ ದೇಶಗಳು ಈಗಾಗಲೇ ವಲಯಗಳನ್ನು ಗುರುತಿಸಿ ಆರೋಗ್ಯ, ತಂತ್ರಜ್ಞಾನ, ಬಾಹ್ಯಾಕಾಶ, ಭೂಮಿ, ಸಾಗರ ವಿಜ್ಞಾನ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಂತಹ ಕ್ಷೇತ್ರಗಳಲ್ಲಿ ಸಹಯೋಗವನ್ನು ಹೊಂದಿವೆ. ವೈಜ್ಞಾನಿಕ ಮತ್ತು ತಾಂತ್ರಿಕ ಆವಿಷ್ಕಾರಗಳಿಗೆ ಬಂದಾಗ ಭಾರತ ಮತ್ತು ಅಮೆರಿಕ ದೀರ್ಘಕಾಲದ ಸಂಪರ್ಕವನ್ನು ಹೊಂದಿದ್ದು ಸಮಾನ ಆಸಕ್ತಿಯನ್ನು ಹೊಂದಿವೆ. ಜಾಗತಿಕ ಒಳಿತಿಗಾಗಿ ಈ ಸಂಪರ್ಕಗಳನ್ನು ಬಲಪಡಿಸಲು ಮತ್ತು ಹತೋಟಿಗೆ ತರುವ ಸಮಯ ಬಂದಿದೆ ಎಂದು ಸಚಿವರು ಒತ್ತಿ ಹೇಳಿದರು.

ಡಾ.ಸೇತುರಾಮನ್ ಪಂಚನಾಥನ್ ಅವರು ಡಾ.ಜಿತೇಂದ್ರ ಸಿಂಗ್ ಅವರಿಗೆ ಈ ಹಿಂದೆ ಗುರುತಿಸಿದ ಹಾಗೂ ಇಂದಿನ ಸಭೆಯಲ್ಲಿ ಮುಂಚೂಣಿಗೆ ತಂದ ವಿಷಯಗಳನ್ನು ತಾರ್ಕಿಕ ತೀರ್ಮಾನಕ್ಕೆ ಕೊಂಡೊಯ್ಯಲಾಗುವುದು ಎಂದು ಭರವಸೆ ನೀಡಿದರು. ಕ್ರಿಟಿಕಲ್ ಮಿನರಲ್ಸ್, ಸ್ಮಾರ್ಟ್ ಕೃಷಿ, ಜೈವಿಕ ಆರ್ಥಿಕತೆ ಮತ್ತು 6G ತಂತ್ರಜ್ಞಾನಗಳಂತಹ ಕ್ಷೇತ್ರಗಳಲ್ಲಿ ಸಹಕಾರದ ಹೊಸ ಮಾರ್ಗಗಳನ್ನು ತೆರೆಯುವುದಾಗಿ ಅವರು ಭರವಸೆ ನೀಡಿದರು. ಗುರುತಿಸಲಾದ ಯೋಜನೆಗಳ ಕುರಿತು ಇದೇ ವರ್ಷದ ಮಾರ್ಚ್‌ನಿಂದ ಜಂಟಿಯಾಗಿ ಕೆಲಸ ಮಾಡಲಾಗುವುದು ಎಂದು ಅವರು ಸಚಿವರಿಗೆ ತಿಳಿಸಿದರು.

ಭಾರತ ಮೂಲದ ವಿಜ್ಞಾನಿಗಳು ಜಗತ್ತಿನಲ್ಲಿ ಅತಿದೊಡ್ಡ ಮತ್ತು ಶಕ್ತಿಶಾಲಿ ಅನಿವಾಸಿ ಭಾರತೀಯ ಸಮುದಾಯವಾಗಿದ್ದು, ಜಾಗತಿಕ ಸಂವಾದವನ್ನು ರೂಪಿಸುವಲ್ಲಿ, ವಿಶೇಷವಾಗಿ ತಾಂತ್ರಿಕ ನಾವೀನ್ಯತೆ ಕ್ಷೇತ್ರದಲ್ಲಿ ವಿಶ್ವದ ಅತಿದೊಡ್ಡ ಮತ್ತು ಶಕ್ತಿಯುತ ಅನಿವಾಸಿ ಭಾರತೀಯ ಸಮುದಾಯಗಳಲ್ಲಿ ಒಂದಾಗಿದೆ. ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ಆಳವಾದ ತಾಂತ್ರಿಕ ಸ್ಟಾರ್ಟ್-ಅಪ್‌ಗಳನ್ನು ಜಂಟಿಯಾಗಿ ಗುರುತಿಸಲು, ಪೋಷಿಸಲು ಮತ್ತು ಉತ್ತೇಜಿಸಲು ಅಮೆರಿಕ ಮತ್ತು ಭಾರತಕ್ಕೆ ಎರಡೂ ದೇಶಗಳು ಮಾರ್ಗಗಳನ್ನು ಅನ್ವೇಷಿಸಬೇಕು ಎಂದು ಡಾ ಜಿತೇಂದ್ರ ಸಿಂಗ್ ಎನ್ ಎಸ್ ಎಫ್ ನಿಯೋಗಕ್ಕೆ ಹೇಳಿದರು. 

ಡಾ ಜಿತೇಂದ್ರ ಸಿಂಗ್ ಅವರು ಉದ್ದೇಶಿತ ಆಂತರಿಕ ಅಂಕಿಅಂಶ ವ್ಯವಸ್ಥೆಗೆ ಎನ್‌ಎಸ್‌ಎಫ್‌ನ ಬೆಂಬಲವನ್ನು ಕೋರಿದರು. ಪ್ರಸ್ತುತ ವಿವಿಧ ಸಂಸ್ಥೆಗಳಿಂದ ಅಂಕಿಅಂಶ ಸಂಗ್ರಹಣೆಯನ್ನು ವಿವಿಧ ರೀತಿಯಲ್ಲಿ ಮಾಡಲಾಗುತ್ತಿದೆ, ಆದರೆ ಆಂತರಿಕ ದತ್ತಾಂಶ ವ್ಯವಸ್ಥೆ ಅಂಕಿಅಂಶಗಳ ವಿಶ್ಲೇಷಣೆ ಮತ್ತು ಸಂಬಂಧಿತ ಪ್ರಯೋಜನಗಳಲ್ಲಿ ಬಹಳ ದೂರ ಸಾಗುತ್ತದೆ ಎಂದು ಅವರು ಹೇಳಿದರು. ಎನ್‌ಎಸ್‌ಎಫ್-ರಾಷ್ಟ್ರೀಯ ವಿಜ್ಞಾನ ಮತ್ತು ಇಂಜಿನಿಯರಿಂಗ್ ಅಂಕಿಅಂಶಗಳೊಂದಿಗಿನ ಜ್ಞಾನದ ಸಹಭಾಗಿತ್ವವು ಈ ಪ್ರದೇಶದಲ್ಲಿ ದೀರ್ಘಾವಧಿಯ ಸಾಮರ್ಥ್ಯದ ಅಭಿವೃದ್ಧಿಯ ದೃಷ್ಟಿಯಿಂದ ಉತ್ತಮ ಮೌಲ್ಯವರ್ಧನೆಯಾಗಲಿದೆ ಎಂದು ಸಚಿವರು ಹೇಳಿದರು.

ಡಾ ಜಿತೇಂದ್ರ ಸಿಂಗ್ ಅವರು ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತು ಮುಖ್ಯವಾಗಿ ಬಾಹ್ಯಾಕಾಶ ಅವಶೇಷಗಳ ನಿರ್ವಹಣೆಯಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಕರೆ ನೀಡಿದರು. NASA-ISRO Synthetic Aperture Radar satellite 2023 ರಲ್ಲಿ ಉಡಾವಣೆ ಮಾಡುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.  ಅಮೆರಿಕ ಮತ್ತು ಭಾರತೀಯ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳ ನಡುವೆ ಸಂಪರ್ಕವನ್ನು ಸ್ಥಾಪಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣ ಪಾಲುದಾರಿಕೆಯು ಮತ್ತೊಂದು ಆಯಾಮವಾಗಿದೆ. ಹಲವಾರು STEM-ಕೇಂದ್ರಿತ ವಿಶ್ವವಿದ್ಯಾಲಯಗಳ ಭಾಗವಹಿಸುವಿಕೆಯೊಂದಿಗೆ ಕಳೆದ ವರ್ಷ ನಡೆದ ಶಿಕ್ಷಣ ದುಂಡುಮೇಜಿನ ಸಭೆ ಅಂತವುಗಳಲ್ಲಿ ಒಂದು. 
ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ (PSA) ಪ್ರೊ. ಅಜಯ್ ಕುಮಾರ್ ಸೂದ್, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಡಾ. ಎಸ್. ಚಂದ್ರಶೇಖರ್, ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಸತ್ಯಜಿತ್ ಮೊಹಂತಿ ಮತ್ತು ಎಲ್ಲಾ ಆರು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳ ಎಲ್ಲಾ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

*****



(Release ID: 1891064) Visitor Counter : 131


Read this release in: English , Urdu , Hindi , Telugu