ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಕರ್ನಾಟಕದ ಹುಬ್ಬಳ್ಳಿಯಲ್ಲಿ 26ನೇ ರಾಷ್ಟ್ರೀಯ ಯುವಜನೋತ್ಸವವನ್ನು ಉದ್ಘಾಟಿಸಿದ ಪ್ರಧಾನಮಂತ್ರಿ
"ನಮ್ಮ ಯುವ ಶಕ್ತಿಯ 'ಮಾಡಬಹುದು' ಎಂಬ ಮನೋಭಾವ ಎಲ್ಲರಿಗೂ ಸ್ಫೂರ್ತಿ ನೀಡುತ್ತದೆ": ಪ್ರಧಾನಮಂತ್ರಿ
ಅಮೃತ ಕಾಲದಲ್ಲಿ ನಮ್ಮ ದೇಶವನ್ನು ಮುನ್ನಡೆಸಲು ನಾವು ನಮ್ಮ ಕರ್ತವ್ಯಗಳಿಗೆ ಒತ್ತುನೀಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು:ಪ್ರಧಾನಮಂತ್ರಿ
ಪ್ರಧಾನಮಂತ್ರಿಯವರು ನೀಡಿರುವ "ಪಂಚ ಪ್ರಾಣ" ಕರೆಯನ್ನು ಯುವಕರು ಅಳವಡಿಸಿಕೊಳ್ಳಬೇಕು: ಶ್ರೀ ಅನುರಾಗ್ ಸಿಂಗ್ ಠಾಕೂರ್
Posted On:
12 JAN 2023 8:21PM by PIB Bengaluru
ಮುಖ್ಯಾಂಶಗಳು:
• ಐದು ದಿನಗಳ ಉತ್ಸವವು ಯುವ ಶೃಂಗಸಭೆಗೆ ಸಾಕ್ಷಿಯಾಗಲಿದ್ದು, ಇದು ಜಿ 20 ಮತ್ತು ವೈ 20 ಕಾರ್ಯಕ್ರಮಗಳಾದ ಕೆಲಸದ ಭವಿಷ್ಯ, ಕೈಗಾರಿಕೆ, ನಾವೀನ್ಯತೆ ಮತ್ತು 21 ನೇ ಶತಮಾನದ ಕೌಶಲ್ಯ; ಹವಾಮಾನ ಬದಲಾವಣೆ ಮತ್ತು ವಿಪತ್ತಿನ ಅಪಾಯವನ್ನು ತಗ್ಗಿಸುವಂತಹ ಐದು ವಿಷಯಗಳ ಬಗ್ಗೆ ಸಂಪೂರ್ಣ ಚರ್ಚೆಗಳನ್ನು ನಡೆಸುತ್ತದೆ
• ಉತ್ಸವದ ಎಲ್ಲಾ ಸ್ಥಳಗಳಲ್ಲಿ ಏಕ-ಬಳಕೆಯ ಬಳಸಿ ಬಿಸಾಡುವ ವಸ್ತುಗಳ ಮೇಲೆ ಸಂಪೂರ್ಣ ನಿರ್ಬಂಧವಿದೆ. ತಾಣದಾದ್ಯಂತ ಸಂದೇಶ ರವಾನಿಸುವ ಮೂಲಕ ಹಸಿರು ಉಪಕ್ರಮಗಳನ್ನು ಬಲಪಡಿಸಲಾಗುತ್ತಿದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಕರ್ನಾಟಕದ ಹುಬ್ಬಳ್ಳಿಯಲ್ಲಿ 26ನೇ ರಾಷ್ಟ್ರೀಯ ಯುವಜನೋತ್ಸವವನ್ನು ಉದ್ಘಾಟಿಸಿದರು. ಸ್ವಾಮಿ ವಿವೇಕಾನಂದರ ಜನ್ಮ ದಿನದಂದು ಅವರ ಆದರ್ಶಗಳು, ಬೋಧನೆಗಳು ಮತ್ತು ಕೊಡುಗೆಗಳನ್ನು ಸ್ಮರಿಸಲು ಮತ್ತು ಗೌರವಿಸಲು ರಾಷ್ಟ್ರೀಯ ಯುವ ದಿನದಂದು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಉತ್ಸವದ ಧ್ಯೇಯವಾಕ್ಯ 'ವಿಕಸಿತ ಯುವ – ವಿಕಸಿತ ಭಾರತ' ಎಂಬುದಾಗಿದ್ದು, ಇದು ದೇಶದ ಎಲ್ಲಾ ಭಾಗಗಳ ವೈವಿಧ್ಯಮಯ ಸಂಸ್ಕೃತಿಗಳನ್ನು ಒಂದೇ ವೇದಿಕೆಯಲ್ಲಿ ತರುತ್ತದೆ ಮತ್ತು ಏಕ ಭಾರತ, ಶ್ರೇಷ್ಠ ಭಾರತ ಎಂಬ ಸ್ಫೂರ್ತಿಯಲ್ಲಿ ಭಾಗವಹಿಸುವವರನ್ನು ಒಗ್ಗೂಡಿಸುತ್ತದೆ. ಕರ್ನಾಟಕ ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್, ಕರ್ನಾಟಕ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್; ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ, ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವ ಶ್ರೀ ಎಸ್. ನಿಸಿತ್ ಪ್ರಾಮಾಣಿಕ್ ಸೇರಿದಂತೆ ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, 2023 ರ ಸಾಲಿನ ರಾಷ್ಟ್ರೀಯ ಯುವ ದಿನದ ಮಹತ್ವವನ್ನು ಒತ್ತಿ ಹೇಳಿ, ಇಂದು ಒಂದು ಕಡೆ, ನಾವು ಉತ್ಸಾಹಭರಿತ ರಾಷ್ಟ್ರೀಯ ಯುವಜನೋತ್ಸವವನ್ನು ಆಚರಿಸುತ್ತಿದ್ದರೆ, ಮತ್ತೊಂದೆಡೆ ಆಜಾದಿ ಕಾ ಅಮೃತ ಮಹೋತ್ಸವವೂ ನಡೆಯುತ್ತಿದೆ ಎಂದು ಹೇಳಿದರು. "ಏಳಿ, ಎದ್ದೇಳಿ, ಎಚ್ಚರಗೊಳ್ಳಿ ಗುರಿ ಮುಟ್ಟುವತನಕ ನಿಲ್ಲದಿರಿ" ಎಂಬ ಸ್ವಾಮಿ ವಿವೇಕಾನಂದರ ಸಂದೇಶ ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಇದು ಭಾರತದ ಯುವಜನರ ಜೀವನ ಮಂತ್ರವಾಗಿದ್ದು, ಅಮೃತ ಕಾಲದಲ್ಲಿ ದೇಶವನ್ನು ಮುನ್ನಡೆಸಲು ನಾವು ನಮ್ಮ ಕರ್ತವ್ಯಗಳಿಗೆ ಒತ್ತುನೀಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು. ಈ ಪ್ರಯತ್ನದಲ್ಲಿ ಭಾರತದ ಯುವಜನರು ಪಡೆದ ಸ್ಫೂರ್ತಿ ಸ್ವಾಮಿ ವಿವೇಕಾನಂದರಿಂದ ಬಂದಿದ್ದಾಗಿದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. "ಈ ವಿಶೇಷ ಸಂದರ್ಭದಲ್ಲಿ ನಾನು ಸ್ವಾಮಿ ವಿವೇಕಾನಂದರ ಪಾದಗಳಿಗೆ ತಲೆಬಾಗಿ ನಮಸ್ಕರಿಸುತ್ತೇನೆ", ಎಂದು ಪ್ರಧಾನಮಂತ್ರಿ ಹೇಳಿದರು.
ಬದಲಾಗುತ್ತಿರುವ ಕಾಲಘಟ್ಟದ ನಿಟ್ಟಿನಲ್ಲಿ ರಾಷ್ಟ್ರೀಯ ಗುರಿಗಳ ಬದಲಾಗುತ್ತಿರುವ ಸ್ವರೂಪವನ್ನು ಪ್ರಧಾನಮಂತ್ರಿಯವರು ನೆನಪಿಸಿದರು ಮತ್ತು 21 ನೇ ಶತಮಾನದ ಈ ಸಮಯವು ಬಹಳ ಮುಖ್ಯವಾಗಿದೆ ಏಕೆಂದರೆ ಇಂದು ಭಾರತವು ದೊಡ್ಡ ಯುವ ಜನಸಂಖ್ಯೆಯನ್ನು ಹೊಂದಿರುವ ಯುವ ರಾಷ್ಟ್ರವಾಗಿದೆ ಎಂದು ಹೇಳಿದರು. "ಯುವ ಶಕ್ತಿಯು ಭಾರತದ ಪ್ರಯಾಣದ ಪ್ರೇರಕ ಶಕ್ತಿಯಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಮುಂದಿನ 25 ವರ್ಷಗಳಲ್ಲಿ ರಾಷ್ಟ್ರವನ್ನು ನಿರ್ಮಿಸುವುದು ಮುಖ್ಯ. ಯುವ ಶಕ್ತಿಯ ಕನಸುಗಳು ಮತ್ತು ಆಕಾಂಕ್ಷೆಗಳು ಭಾರತದ ದಿಕ್ಕು ಮತ್ತು ಗುರಿಯನ್ನು ನಿರ್ಧರಿಸುತ್ತವೆ ಮತ್ತು ಯುವ ಶಕ್ತಿಯ ಉತ್ಸಾಹವು ಭಾರತದ ಮಾರ್ಗವನ್ನು ನಿರ್ಧರಿಸುತ್ತದೆ ಎಂದರು.
ಭಾರತ ಇಂದು 5ನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿದೆ ಮತ್ತು ಅದನ್ನು ಅಗ್ರ 3ರಲ್ಲಿ ಒಂದರ ಸ್ಥಾನಕ್ಕೆ ಕೊಂಡೊಯ್ಯುವುದು ನಮ್ಮ ಗುರಿಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಕೃಷಿ ಮತ್ತು ಕ್ರೀಡಾ ವಲಯದಲ್ಲಿ ಹೊರಹೊಮ್ಮುತ್ತಿರುವ ಅವಕಾಶಗಳ ಬಗ್ಗೆ ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, ಈ ಕ್ರಾಂತಿಗೆ ಯುವಜನರ ಶಕ್ತಿ ಕಾರಣ ಎಂದು ಶ್ಲಾಘಿಸಿದರು. ದೇಶದ ಶಕ್ತಿಯನ್ನು ಜೀವಂತವಾಗಿರಿಸುವಲ್ಲಿ ಮಹಿಳಾ ಶಕ್ತಿಯ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಸಶಸ್ತ್ರ ಪಡೆಗಳು, ಬಾಹ್ಯಾಕಾಶ ತಂತ್ರಜ್ಞಾನ, ಬಾಹ್ಯಾಕಾಶ ಮತ್ತು ಕ್ರೀಡೆಗಳಲ್ಲಿ ಮಹಿಳೆಯರು ಮಿಂಚುತ್ತಿರುವ ಉದಾಹರಣೆಗಳನ್ನು ನೀಡಿದರು.
ಪೂರ್ಣ ಮಾಧ್ಯಮ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ ಮಾಡಿ
ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ತಮ್ಮ ಭಾಷಣದಲ್ಲಿ, "ರಾಷ್ಟ್ರೀಯ ಯುವ ಜನೋತ್ಸವವು ನಮ್ಮ ರಾಷ್ಟ್ರದ ಸಂಸ್ಕೃತಿ ಮತ್ತು ಜಿಜ್ಞಾಸೆ, ಅದರ ಸಮುದಾಯಗಳ ಮತ್ತು ಅದರ ಭೌಗೋಳಿಕತೆ ಜಿಜ್ಞಾಸೆಯನ್ನು ಬಹಿರಂಗಗೊಳಿಸುತ್ತದೆ" ಎಂದು ಹೇಳಿದರು. ಸ್ವಾಮಿ ವಿವೇಕಾನಂದರು ಒತ್ತಿಹೇಳಿದ ಕ್ರೀಡೆ ಮತ್ತು ದೈಹಿಕ ಸಾಮರ್ಥ್ಯದ ಮಹತ್ವವನ್ನು ಪ್ರತಿಪಾದಿಸಿದ ಕೇಂದ್ರ ಕ್ರೀಡಾ ಸಚಿವರು, ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸ್ಸು ನೆಲೆಸುತ್ತದೆ ಎಂದು ಸ್ವಾಮಿ ವಿವೇಕಾನಂದರು ಸದಾ ನಂಬಿದ್ದರು ಎಂದು ಹೇಳಿದರು.
ಪ್ರಧಾನಮಂತ್ರಿಯವರು ಸ್ವಾಮಿ ವಿವೇಕಾನಂದರ ದೂರದೃಷ್ಟಿಯನ್ನು ವಾಸ್ತವಗೊಳಿಸುತ್ತಿದ್ದಾರೆ. ಫಿಟ್ ಇಂಡಿಯಾ, ಖೇಲೋ ಇಂಡಿಯಾ, ಖೇಲ್ ಮಹಾಕುಂಭ್ ಮುಂತಾದ ಅನೇಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಯುವಜನರನ್ನು ಆರೋಗ್ಯವಂತರನ್ನಾಗಿ ಮಾಡಲು ಶ್ರಮಿಸಿದ್ದಾರೆ ಎಂದು ಸಚಿವರು ಶ್ಲಾಘಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮಾತ್ರ ಭಾರತವು ವಿಶ್ವದ ಅತ್ಯುತ್ತಮ ಯುಪಿಐ ಆಪ್ ಅಭಿವೃದ್ಧಿಪಡಿಸಲು ಸಾಧ್ಯವಾಗಿದೆ ಎಂದು ಅವರು ಹೇಳಿದರು. ನವೋದ್ಯಮ ಭಾರತ ಮತ್ತು ಸ್ಟ್ಯಾಂಡ್-ಅಪ್ ಇಂಡಿಯಾದಂತಹ ಗಮನಾರ್ಹ ಉಪಕ್ರಮಗಳಿಂದ ಇಂದಿನ ಯುವಜನರು ಸ್ವಾವಲಂಬಿಗಳಾಗುತ್ತಿರುವುದು ಪ್ರಧಾನಮಂತ್ರಿಗಳ ದೂರದೃಷ್ಟಿಯಿಂದಾಗಿಯೇ ಎಂದು ಕೇಂದ್ರ ಸಚಿವರು ಹೇಳಿದರು.
ಅಮೃತ ಕಾಲ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪಂಚ ಪ್ರಾಣದ ಬಗ್ಗೆ ಮಾತನಾಡಿದ ಶ್ರೀ ಅನುರಾಗ್ ಠಾಕೂರ್, "ಸಹೋದರ ಸಹೋದರಿಯರೇ, ಈ ವರ್ಷವು ನಮಗೆ ಮುಖ್ಯವಾಗಿದೆ. ನಾವು ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ ಮತ್ತು ಭಾರತವನ್ನು ನಿರ್ಮಿಸುವ ಪ್ರಮುಖ ಜವಾಬ್ದಾರಿ ಯುವಜನರ ಮೇಲಿದೆ. ಕೆಂಪು ಕೋಟೆಯ ಮೇಲಿನಿಂದ, ಪ್ರಧಾನಮಂತ್ರಿಯವರು ನಮಗೆ 'ಪಂಚ ಪ್ರಾಣ' ನೀಡಿದ್ದಾರೆ, ಇದರಲ್ಲಿ ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಶ್ರಮಿಸುವುದೂ ಸೇರಿದೆ; ಅದರ ಭವ್ಯ ಇತಿಹಾಸದ ಬಗ್ಗೆ ಹೆಮ್ಮೆಪಡುವುದು; ಗುಲಾಮಗಿರಿಯ ಮನಃಸ್ಥಿತಿಯನ್ನು ನಿರ್ಮೂಲನೆ ಮಾಡುವುದು; ಒಗ್ಗಟ್ಟಿಗೆ ಬದ್ಧರಾಗಿರುವುದು; ಮತ್ತು ನಮ್ಮ ಹಕ್ಕುಗಳನ್ನು ಮೀರಿ ನಮ್ಮನ್ನು ನಾವು ಕರ್ತವ್ಯಗಳಿಗೆ ಬದ್ಧರಾಗಿರಬೇಕೆಂದು ಯೋಚಿಸುವುದು" ಸೇರಿದೆ ಎಂದರು.
ಸುವರ್ಣಯುಗದತ್ತ ಸಾಗಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀಡಿದ "ಪಂಚ ಪ್ರಾಣ" ಕರೆಯನ್ನು ಅಳವಡಿಸಿಕೊಳ್ಳುವಂತೆ ಶ್ರೀ ಅನುರಾಗ್ ಠಾಕೂರ್ ಅವರು ಯುವಕರಿಗೆ ಮನವಿ ಮಾಡಿದರು.
ಜಿ-20 ಕುರಿತು ಮಾತನಾಡಿದ ಶ್ರೀ ಠಾಕೂರ್, "ಈಗ ಭಾರತಕ್ಕೆ ಜಿ-20 ಅಧ್ಯಕ್ಷ ಸ್ಥಾನ ದೊರೆತಿದೆ. ಜಿ-20ರೊಳಗೆ, ವೈ -20 ಮೂಲಕ ನಾವು ದೇಶಾದ್ಯಂತ 'ವೈ ಟಾಕ್ಸ್' ಮತ್ತು 'ವೈ ವಾಕ್ಸ್' ಅನ್ನು ಪ್ರಾರಂಭಿಸುವ ಮೂಲಕ ಪ್ರತಿ ಜಿಲ್ಲೆ, ಪ್ರತಿ ನಗರ, ಪ್ರತಿ ರಾಜ್ಯಕ್ಕೆ ಹೋಗಲು ಯೋಜಿಸುತ್ತಿದ್ದೇವೆ" ಎಂದರು.
ತಮ್ಮ ಭಾಷಣದ ಕೊನೆಯಲ್ಲಿ, ಕೇಂದ್ರ ಸಚಿವರು ಯುವಜನರಿಗೆ ಮನವಿ ಮಾಡಿ "ಅಂತಿಮವಾಗಿ, ಇಂದಿನ ನರೇಂದ್ರರು ನರೇಂದ್ರ (ಸ್ವಾಮಿ ವಿವೇಕಾನಂದರ)ರು ಕಂಡಿದ್ದ ಕನಸಿನ ಭಾರತವನ್ನು ನನಸಾಗಿಸುತ್ತಿದ್ದಾರೆ ಎಂದು ನಾನು ಹೇಳಲು ಬಯಸುತ್ತೇನೆ ಎಂದರು. ಉಕ್ರೇನ್ ಯುದ್ಧದ ಸಮಯದಲ್ಲಿ, ಆಪರೇಷನ್ ಗಂಗಾ ನಡೆಸುವ ಮೂಲಕ ನಾವು 27000 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಯಿತು. ಇಂದು ಭಾರತವು ಬ್ರಿಟನ್ ಅನ್ನು ಹಿಂದಿಕ್ಕಿ ವಿಶ್ವದ ಐದನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಿದೆ. ನವ ಭಾರತದ ಕನಸನ್ನು ನನಸು ಮಾಡೋಣ ಮತ್ತು ಹೊಸ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ಮಾದಕವಸ್ತುಗಳು, ಭಯ ಮತ್ತು ಕಸದಿಂದ ಮುಕ್ತಗೊಳಿಸಲು ಶ್ರಮಿಸೋಣ" ಎಂದರು.
ಇದಕ್ಕೂ ಮುನ್ನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹುಬ್ಬಳ್ಳಿಯ ರೈಲ್ವೆ ಕ್ರೀಡಾ ಮೈದಾನದಲ್ಲಿ ಯುವಜನೋತ್ಸವವನ್ನು ಉದ್ಘಾಟಿಸಿದರು. ಸ್ವಾಮಿ ವಿವೇಕಾನಂದರ ಆದರ್ಶಗಳು, ಬೋಧನೆಗಳು ಮತ್ತು ಕೊಡುಗೆಗಳನ್ನು ಸ್ಮರಿಸಲು ಮತ್ತು ಗೌರವಿಸಲು ಜನವರಿ 12 ರಂದು ರಾಷ್ಟ್ರೀಯ ಯುವಜನೋತ್ಸವವನ್ನು ಆಚರಿಸಲಾಗುತ್ತದೆ.
ಯುವಜನೋತ್ಸವ ರಾಷ್ಟ್ರಮಟ್ಟದಲ್ಲಿ ಪ್ರತಿಭಾವಂತ ಯುವಜನರಿಗೆ ಗುರುತಿಸಿಕೊಳ್ಳುವ ಅವಕಾಶ ಒದಗಿಸುತ್ತದೆ, ಜೊತೆಗೆ ಅವರನ್ನು ರಾಷ್ಟ್ರ ನಿರ್ಮಾಣದ ಕಡೆಗೆ ಪ್ರೇರೇಪಿಸುತ್ತದೆ. ಇದು ದೇಶದ ಎಲ್ಲಾ ಭಾಗಗಳಿಂದ ವೈವಿಧ್ಯಮಯ ಸಂಸ್ಕೃತಿಗಳನ್ನು ಒಂದೇ ವೇದಿಕೆಯಲ್ಲಿ ತರುತ್ತದೆ ಮತ್ತು ಭಾಗವಹಿಸುವವರನ್ನು ಏಕ ಭಾರತ, ಶ್ರೇಷ್ಠ ಭಾರತದ ಸ್ಫೂರ್ತಿಯಲ್ಲಿ ಒಗ್ಗೂಡಿಸುತ್ತದೆ. ಜನವರಿ 12 ರಿಂದ 16 ರವರೆಗೆ ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯಲಿರುವ ಐದು ದಿನಗಳ ಉತ್ಸವದ ಧ್ಯೇಯವಾಕ್ಯ "ವಿಕಸಿತ ಯುವ- ವಿಕಸಿತ ಭಾರತ" ಎಂಬುದಾಗಿದೆ.
ಈ ಸಂದರ್ಭದಲ್ಲಿ ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಪ್ರದರ್ಶಿಸುವ ವಿವಿಧ ರಾಜ್ಯಗಳ ಯುವ ತಂಡಗಳ ಪಥಸಂಚಲನ ನಡೆಯಿತು. ಈ ಸಂದರ್ಭದಲ್ಲಿ, ದೇಶೀಯ ಕ್ರೀಡೆಗಳು ಮತ್ತು ಆತ್ಮರಕ್ಷಣೆ ಕಲೆಗಳನ್ನು ರಾಷ್ಟ್ರಮಟ್ಟದ ಪ್ರದರ್ಶಕರು ಪ್ರಸ್ತುತಪಡಿಸಿದರು.
ಐದು ದಿನಗಳ ಉತ್ಸವವು ಯುವ ಶೃಂಗಸಭೆಗೆ ಸಾಕ್ಷಿಯಾಗಲಿದೆ, ಇದು ಜಿ 20 ಮತ್ತು ವೈ 20 ಕಾರ್ಯಕ್ರಮಗಳಾದ ಕೆಲಸದ ಭವಿಷ್ಯ, ಕೈಗಾರಿಕೆ, ನಾವೀನ್ಯತೆ ಮತ್ತು 21 ನೇ ಶತಮಾನದ ಕೌಶಲ್ಯಗಳಂತಹ ಐದು ವಿಷಯಗಳ ಬಗ್ಗೆ ಸಂಪೂರ್ಣ ಚರ್ಚೆಗಳನ್ನು ನಡೆಸುತ್ತದೆ; ಹವಾಮಾನ ಬದಲಾವಣೆ ಮತ್ತು ವಿಪತ್ತಿನ ಅಪಾಯ ತಗ್ಗಿಸುವ; ಶಾಂತಿ ನಿರ್ಮಾಣ ಮತ್ತು ಸಾಮರಸ್ಯ; ಪ್ರಜಾಪ್ರಭುತ್ವ ಮತ್ತು ಆಡಳಿತದಲ್ಲಿ ಹಂಚಿಕೆಯ ಭವಿಷ್ಯದ-ಯುವಜನತೆ; ಮತ್ತು ಆರೋಗ್ಯ ಮತ್ತು ಯೋಗಕ್ಷೇಮದ ಚರ್ಚೆ ನಡೆಯಲಿದೆ. ಅರವತ್ತಕ್ಕೂ ಹೆಚ್ಚು ಪ್ರಸಿದ್ಧ ತಜ್ಞರು ಭಾಗವಹಿಸುವ ನಿರೀಕ್ಷೆಯಿದೆ.
ಉತ್ಸವದಲ್ಲಿ, ಹಲವಾರು ಸ್ಪರ್ಧಾತ್ಮಕ ಮತ್ತು ಸ್ಪರ್ಧಾತ್ಮಕವಲ್ಲದ ಕಾರ್ಯಕ್ರಮಗಳು ಸಹ ನಡೆಯಲಿವೆ. ಸ್ಪರ್ಧಾತ್ಮಕ ಕಾರ್ಯಕ್ರಮಗಳಲ್ಲಿ ಜಾನಪದ ನೃತ್ಯಗಳು ಮತ್ತು ಗೀತೆಗಳು ಸೇರಿವೆ, ಸ್ಥಳೀಯ ಸಾಂಪ್ರದಾಯಿಕ ಸಂಸ್ಕೃತಿಗಳಿಗೆ ಪ್ರಚೋದನೆ ನೀಡಲು ಇದನ್ನು ನಡೆಸಲಾಗುತ್ತಿದೆ. ಯೋಗ ಮಾಡಲು ಸುಮಾರು 10 ಲಕ್ಷ ಜನರನ್ನು ಸಜ್ಜುಗೊಳಿಸುವ ಗುರಿಯನ್ನು ಹೊಂದಿರುವ ಯೋಗಥಾನ್ ಪ್ರಮುಖ ಸ್ಪರ್ಧಾತ್ಮಕವಲ್ಲದ ವಿಷಯಗಳಲ್ಲಿ ಒಂದಾಗಿದೆ.
ಆಹಾರ ಉತ್ಸವ, ಯುವ ಕಲಾವಿದರ ಶಿಬಿರ, ಸಾಹಸ ಕ್ರೀಡಾ ಚಟುವಟಿಕೆಗಳು, ನಿಮ್ಮ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳ ಬಗ್ಗೆ ವಿಶೇಷವಾಗಿ ತಿಳಿಯಿರಿ ಶಿಬಿರಗಳು ಇತರ ಆಕರ್ಷಣೆಗಳಲ್ಲಿ ಸೇರಿವೆ.
ಜನವರಿ 16 ರವರೆಗೆ ಧಾರವಾಡದ ಕೆಸಿಡಿ ಮೈದಾನದಲ್ಲಿ ಉತ್ಸವದ ಎಲ್ಲಾ ಕಾರ್ಯಕ್ರಮಗಳು ನಡೆಯಲಿವೆ. ಎಲ್ಲಾ ಸ್ಥಳಗಳಲ್ಲಿ ಏಕ-ಬಳಕೆಯ ಬಳಸಿ ಬಿಸಾಡುವ ವಸ್ತುಗಳ ಮೇಲೆ ಸಂಪೂರ್ಣ ನಿರ್ಬಂಧವಿದೆ. ತಾಣದಾದ್ಯಂತ ಸಂದೇಶ ಕಳುಹಿಸುವ ಮೂಲಕ ಹಸಿರು ಉಪಕ್ರಮಗಳನ್ನು ಬಲಪಡಿಸಲಾಗುತ್ತಿದೆ.
ಇಂದು ಬೆಳಗ್ಗೆ ಧಾರವಾಡಕ್ಕೆ ಒಂದು ದಿನದ ಭೇಟಿಗಾಗಿ ಆಗಮಿಸಿದ ಶ್ರೀ ಅನುರಾಗ್ ಠಾಕೂರ್ ಅವರು ಕೇಂದ್ರ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಮತ್ತು ಕರ್ನಾಟಕ ಯುವ ವ್ಯವಹಾರಗಳ ಸಚಿವ ಡಾ. ಕೆ. ನಾರಾಯಣಗೌಡ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳೊಂದಿಗೆ ಉತ್ಸವಕ್ಕೆ ಸಜ್ಜಾಗಿದ್ದ ಹುಬ್ಬಳ್ಳಿ ಸ್ಥಳವನ್ನು ಪರಿಶೀಲಿಸಿದರು.
***
(Release ID: 1890860)
Visitor Counter : 325