ಸಂಪುಟ

ರುಪೇ ಡೆಬಿಟ್ ಕಾರ್ಡ್‌ಗಳು ಮತ್ತು ಕಡಿಮೆ ಮೌಲ್ಯದ ಭೀಮ್-ಯುಪಿಐ ವಹಿವಾಟುಗಳ  (ಪಿ2ಎಂ) ಪ್ರಚಾರಕ್ಕಾಗಿ ಪ್ರೋತ್ಸಾಹಕ ಯೋಜನೆಯನ್ನು ಸಚಿವ ಸಂಪುಟವು ಅನುಮೋದಿಸಿದೆ

Posted On: 11 JAN 2023 3:30PM by PIB Bengaluru

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು 2022 ಏಪ್ರಿಲ್‌ನಿಂದ ಒಂದು ವರ್ಷದ ಅವಧಿಗೆ ರುಪೇ ಡೆಬಿಟ್ ಕಾರ್ಡ್‌ಗಳು ಮತ್ತು ಕಡಿಮೆ ಮೌಲ್ಯದ ಭೀಮ್-ಯುಪಿಐ ವಹಿವಾಟುಗಳಿಗೆ (ವ್ಯಕ್ತಿಯಿಂದ ವ್ಯಾಪಾರಿಗೆ) ಪ್ರೋತ್ಸಾಹಕ ಯೋಜನೆಗೆ ಅನುಮೋದನೆ ನೀಡಿದೆ. 

1. ಹಣಕಾಸು ವರ್ಷ 2022-23 ರಲ್ಲಿ ರುಪೇ ಡೆಬಿಟ್ ಕಾರ್ಡ್‌ಗಳ ಮತ್ತು ಕಡಿಮೆ ಮೌಲ್ಯದ ಭೀಮ್-ಯುಪಿಐ (ಭಾರತ್ ಇಂಟರ್ಫೇಸ್ ಫಾರ್ ಮನಿ) ವಹಿವಾಟುಗಳ (ಪಿ2ಎಂ) ಪ್ರಚಾರಕ್ಕಾಗಿ ಅನುಮೋದಿತ ಪ್ರೋತ್ಸಾಹ ಯೋಜನೆಯು ₹ 2,600 ಕೋಟಿಗಳಷ್ಟು ಹಣಕಾಸಿನ ವೆಚ್ಚವನ್ನು ಹೊಂದಿದೆ. ಈ ಯೋಜನೆಯಡಿಯಲ್ಲಿ, 2022-23ರ ಪ್ರಸಕ್ತ ಹಣಕಾಸು ವರ್ಷದಲ್ಲಿ ರುಪೇ ಡೆಬಿಟ್ ಕಾರ್ಡ್‌ಗಳು ಮತ್ತು ಕಡಿಮೆ ಮೌಲ್ಯದ ಭೀಮ್-ಯುಪಿಐ ವಹಿವಾಟುಗಳನ್ನು (ಪಿ2ಎಂ) ಬಳಸಿಕೊಂಡು ಪಾಯಿಂಟ್-ಆಫ್-ಸೇಲ್ (PoS) ಮತ್ತು ಇ-ಕಾಮರ್ಸ್ ವಹಿವಾಟುಗಳನ್ನು ಉತ್ತೇಜಿಸಲು ಬ್ಯಾಂಕುಗಳಿಗೆ ಆರ್ಥಿಕ ಪ್ರೋತ್ಸಾಹವನ್ನು ನೀಡಲಾಗುತ್ತದೆ.  

2. ಹಣಕಾಸು ಸಚಿವರು, 2022-23ರ ಹಣಕಾಸು ವರ್ಷದ ಬಜೆಟ್‌ನ  ತಮ್ಮ ಭಾಷಣದಲ್ಲಿ, ಆರ್ಥಿಕ ಮತ್ತು ಬಳಕೆದಾರ ಸ್ನೇಹಿ ಪಾವತಿ ವೇದಿಕೆಗಳ ಬಳಕೆಯನ್ನು ಉತ್ತೇಜಿಸಲು ಹಿಂದಿನ ಬಜೆಟ್‌ನಲ್ಲಿ ಘೋಷಿಸಲಾದ ಡಿಜಿಟಲ್ ಪಾವತಿಗಳಿಗೆ ಆರ್ಥಿಕ ಬೆಂಬಲವನ್ನು ಮುಂದುವರಿಸುವ ಸರ್ಕಾರದ ಉದ್ದೇಶವನ್ನು ಘೋಷಿಸಿದ್ದರು. ಮೇಲಿನ ಬಜೆಟ್ ಘೋಷಣೆಗೆ ಅನುಗುಣವಾಗಿ ಈ ಯೋಜನೆಯನ್ನು ರೂಪಿಸಲಾಗಿದೆ. 

3. 2021-22ರ ಹಣಕಾಸು ವರ್ಷದಲ್ಲಿ, ಡಿಜಿಟಲ್ ವಹಿವಾಟುಗಳಿಗೆ ಮತ್ತಷ್ಟು ಉತ್ತೇಜನ ನೀಡಲು 2021-22ರ ಹಣಕಾಸು ವರ್ಷದ ಬಜೆಟ್ ಘೋಷಣೆಗೆ ಅನುಗುಣವಾಗಿ ಸರ್ಕಾರವು ಪ್ರೋತ್ಸಾಹಕ ಯೋಜನೆಯನ್ನು ಅನುಮೋದಿಸಿತ್ತು. ಇದರ ಪರಿಣಾಮವಾಗಿ, ಒಟ್ಟು ಡಿಜಿಟಲ್ ಪಾವತಿ ವಹಿವಾಟುಗಳು ವರ್ಷದಿಂದ ವರ್ಷಕ್ಕೆ 59% ರಷ್ಟು ಬೆಳವಣಿಗೆಯನ್ನು ದಾಖಲಿಸಿವೆ,  ಹಣಕಾಸು ವರ್ಷ 2020-21 ರಲ್ಲಿ 5,554 ಕೋಟಿಗಳಿಂದ ಹಣಕಾಸು ವರ್ಷ 2021-22 ರಲ್ಲಿ ₹8,840 ಕೋಟಿಗಳಿಗೆ ಏರಿಕೆಯಾಗಿದೆ. ಭೀಮ್-ಯುಪಿಐ ವಹಿವಾಟುಗಳು ವರ್ಷದಿಂದ ವರ್ಷಕ್ಕೆ 106% ಬೆಳವಣಿಗೆಯನ್ನು ದಾಖಲಿಸಿವೆ, ಹಣಕಾಸು ವರ್ಷ2020-21ರಲ್ಲಿ ₹2,233 ಕೋಟಿಗಳಿಂದ ಹಣಕಾಸು ವರ್ಷ 2021-22ರಲ್ಲಿ ₹4,597 ಕೋಟಿಗಳಿಗೆ ಏರಿಕೆಯಾಗಿದೆ. 

4. ಡಿಜಿಟಲ್ ಪಾವತಿ ವ್ಯವಸ್ಥೆಗಳಲ್ಲಿನ ವಿವಿಧ ಭಾಗಿದಾರರು ಮತ್ತು ಭಾರತೀಯ ರಿಸರ್ವ್ ಬ್ಯಾಂಕ್  ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯ ಬೆಳವಣಿಗೆಯ ಮೇಲೆ ಶೂನ್ಯ ಎಂಡಿಆರ್‌  ಆಡಳಿತದ ಸಂಭಾವ್ಯ ಪ್ರತಿಕೂಲ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇದಲ್ಲದೆ, ಪರಿಸರ ವ್ಯವಸ್ಥೆಯ ಭಾಗಿದಾರರಿಗೆ ವೆಚ್ಚಕ್ಕೆ ತಕ್ಕದಾದ ಮೌಲ್ಯದ ಪ್ರತಿಪಾದನೆಯನ್ನು ರಚಿಸಲು, ವ್ಯಾಪಾರಿಗಳ ಅಂಗೀಕಾರವನ್ನು ಹೆಚ್ಚಿಸಲು ಮತ್ತು ನಗದು ಪಾವತಿಗಳನ್ನು ತೀವ್ರವಾಗಿ  ಕಡಿತಗೊಳಿಸಿ ಡಿಜಿಟಲ್ ಪಾವತಿಗಳಾದ ಭೀಮ್-ಯುಪಿಐ ಮತ್ತು ರುಪೇ ಡೆಬಿಟ್ ಕಾರ್ಡ್ ವಹಿವಾಟುಗಳನ್ನು ಉತ್ತೇಜಿಸಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ  (ಎನ್‌ಪಿಸಿಐ) ಇತರ ವಿಷಯಗಳ ಜೊತೆಗೆ ವಿನಂತಿಸಿದೆ.. 
 
5. ದೇಶಾದ್ಯಂತ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ಭಾರತ ಸರ್ಕಾರವು ವಿವಿಧ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕಳೆದ ವರ್ಷಗಳಲ್ಲಿ, ಡಿಜಿಟಲ್ ಪಾವತಿ ವಹಿವಾಟುಗಳು ಪ್ರಚಂಡ ಬೆಳವಣಿಗೆಯನ್ನು ಕಂಡಿವೆ. ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ, ಡಿಜಿಟಲ್ ಪಾವತಿಗಳು ಸಣ್ಣ ವ್ಯಾಪಾರಿಗಳು ಸೇರಿದಂತೆ ವ್ಯವಹಾರಗಳ ಕಾರ್ಯನಿರ್ವಹಣೆಯನ್ನು ಸುಗಮಗೊಳಿಸಿದವು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿತು.  ಯುಪಿಐ ಡಿಸೆಂಬರ್ 2022 ರಲ್ಲಿ ₹12.82 ಲಕ್ಷ ಕೋಟಿ ಮೌಲ್ಯದೊಂದಿಗೆ 782.9 ಕೋಟಿ ಡಿಜಿಟಲ್ ಪಾವತಿ ವಹಿವಾಟುಗಳ ದಾಖಲೆಯನ್ನು ಸಾಧಿಸಿದೆ.

ಈ ಪ್ರೋತ್ಸಾಹಕ ಯೋಜನೆಯು ದೃಢವಾದ ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಮತ್ತು ರುಪೇ ಡೆಬಿಟ್ ಕಾರ್ಡ್ ಮತ್ತು ಭೀಮ್-ಯುಪಿಐ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು ಅನುಕೂಲವಾಗುತ್ತದೆ. 'ಸಬ್ಕಾ ಸಾಥ್, ಸಬ್ಕಾ ವಿಕಾಸ್ (ಎಲ್ಲರ ಜೊತೆ, ಎಲ್ಲರ ವಿಕಾಸ)' ಉದ್ದೇಶಕ್ಕೆ ಅನುಗುಣವಾಗಿ, ಈ ಯೋಜನೆಯು ಯುಪಿಐ ಲೈಟ್ ಮತ್ತು ಯುಪಿಐ 123 ಪೇ ಅನ್ನು ಆರ್ಥಿಕ ಮತ್ತು ಬಳಕೆದಾರ ಸ್ನೇಹಿ ಡಿಜಿಟಲ್ ಪಾವತಿ ಪರಿಹಾರಗಳಾಗಿ ಉತ್ತೇಜಿಸುತ್ತದೆ ಮತ್ತು ಎಲ್ಲಾ ವಲಯಗಳು ಮತ್ತು ಎಲ್ಲಾ ಮಟ್ಟದ ಜನರೊಡನೆ ಡಿಜಿಟಲ್ ಪಾವತಿ ವ್ಯವಸ್ಥೆಗಳನ್ನು ಮತ್ತಷ್ಟು ವಿಸ್ತರಿಸಲು ಅನುವು ಮಾಡಿಕೊಡುತ್ತದೆ. 

*****



(Release ID: 1890384) Visitor Counter : 141