ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಭಾರತ ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದ: ಭಾರತ ಮತ್ತು ಆಸ್ಟ್ರೇಲಿಯಾಕ್ಕೆ ಸಮಾನ ಅವಕಾಶ
Posted On:
08 JAN 2023 11:57AM by PIB Bengaluru
ಭಾರತ ಮತ್ತು ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡಿವೆ ಎಂಬುದು ನಿಮಗೆ ತಿಳಿದಿದೆಯೇ? ಹೌದು, #IndAusECTA ಗೆ ಕಳೆದ ವರ್ಷ, 2ನೇ ಏಪ್ರಿಲ್, 2022 ರಂದು ಸಹಿ ಹಾಕಲಾಯಿತು; ಲಿಖಿತ ದಾಖಲೆಗಳ ಅನುಮೋದನೆ ಮತ್ತು ವಿನಿಮಯದ ನಂತರ, ಒಪ್ಪಂದವು ಡಿಸೆಂಬರ್ 29, 2022 ರಿಂದ ಜಾರಿಗೆ ಬಂದಿದೆ.
ಭಾರತ ಮತ್ತು ಆಸ್ಟ್ರೇಲಿಯಾ ಎರಡಕ್ಕೂ ಸಮಾನ ಅವಕಾಶ
ಆಸ್ಟ್ರೇಲಿಯಾವು ಭಾರತಕ್ಕೆ ಹೆಚ್ಚಾಗಿ ಕಚ್ಚಾ ವಸ್ತುಗಳನ್ನು ರಫ್ತು ಮಾಡುತ್ತದೆ, ಹಾಗೆಯೇ ಭಾರತವು ಸಿದ್ಧಪಡಿಸಿದ ವಸ್ತುಗಳನ್ನು ಆಸ್ಟ್ರೇಲಿಯಾಕ್ಕೆ ರಫ್ತು ಮಾಡುತ್ತದೆ. ಇಸಿಟಿಎ ಈ ಪೂರಕ ವ್ಯವಸ್ಥೆಯ ಮೇಲೆ ರೂಪಿತವಾಗಿದೆ. ಇದು ಎರಡು ದೇಶಗಳಿಗೆ ಸಮಾನ ಅವಕಾಶಗಳನ್ನು ಸೃಷ್ಟಿಸುತ್ತದೆ. “ಈ ವರ್ಷ ಎರಡು ವ್ಯಾಪಾರ ಒಪ್ಪಂದಗಳನ್ನು - India UAE FTA ಮತ್ತು Ind – Aus ECTA- ಕಾರ್ಯಗತಗೊಳಿಸುವ ವಿಶಿಷ್ಟವಾದ ಅವಕಾಶವನ್ನು ವಾಣಿಜ್ಯ ಇಲಾಖೆ ಸಾಧಿಸಿದೆ” ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ರಾಜೇಶ್ ಅಗರವಾಲ್ ಹೇಳುತ್ತಾರೆ. ಇಸಿಟಿಎ ಜಾರಿಯು ವಿಶ್ವದ ಎರಡು ಪ್ರಮುಖ ಆರ್ಥಿಕತೆಗಳನ್ನು ಒಟ್ಟುಗೂಡಿಸುತ್ತದೆ. ಭಾರತವು 5 ನೇ ಅತಿದೊಡ್ಡ ಆರ್ಥಿಕತೆ ಮತ್ತು ಆಸ್ಟ್ರೇಲಿಯಾ 14 ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಎರಡು ದೇಶಗಳ ನಡುವಿನ ವ್ಯಾಪಾರವು ಹೆಚ್ಚು ಪೂರಕವಾಗಿರುವುದರಿಂದ, ಇದು ಎರಡೂ ಕಡೆಗಳಲ್ಲಿ ಅವಕಾಶಗಳನ್ನು ಒದಗಿಸುತ್ತದೆ ಮತ್ತು ಭಾರತ ಮತ್ತು ಆಸ್ಟ್ರೇಲಿಯಾ ಎರಡಕ್ಕೂ ಸಮಾನ ಅವಕಾಶಗಳಿಗೆ ದಾರಿ ಮಾಡಿಕೊಡುತ್ತದೆ.
ಹಾಗಾದರೆ, ಈ ಪೂರಕಗಳು ಯಾವುವು? ನಾವು ಅದನ್ನು ಅನ್ವೇಷಿಸುವ ಮೊದಲು, ಒಪ್ಪಂದದ ಹಿನ್ನೆಲೆಯಲ್ಲಿ ಚಿತ್ರಣವು ಹೇಗೆ ಬದಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಎರಡು ದೇಶಗಳ ನಡುವಿನ ವ್ಯಾಪಾರದ ಪ್ರಸ್ತುತ ಸನ್ನಿವೇಶವನ್ನು ನೋಡೋಣ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರಸ್ತುತ ವ್ಯಾಪಾರ ಸನ್ನಿವೇಶಗಳು
ಆಸ್ಟ್ರೇಲಿಯಾದಿಂದ ಭಾರತದ ಆಮದುಗಳು 17 ಬಿಲಿಯನ್ ಡಾಲರ್ ಆಗಿದ್ದರೆ, ಆಸ್ಟ್ರೇಲಿಯಾಕ್ಕೆ ಭಾರತದ ರಫ್ತು 10.5ಬಿಲಿಯನ್ ಡಾಲರ್ ಆಗಿದೆ. ಆದಾಗ್ಯೂ, ಆಸ್ಟ್ರೇಲಿಯಾದಿಂದ ಭಾರತದ ಆಮದುಗಳು ಪ್ರಾಥಮಿಕವಾಗಿ (ಶೇ.96) ಕಚ್ಚಾ ವಸ್ತುಗಳು ಮತ್ತು ಮಧ್ಯಂತರ ಸರಕು (ಸಂಪೂರ್ಣ ಸಿದ್ಧವಾಗದ) ಗಳಾಗಿವೆ ಎಂಬುದನ್ನು ನಾವು ಅರಿತುಕೊಳ್ಳಬೇಕಾಗಿದೆ. ಅವುಗಳು ಕಲ್ಲಿದ್ದಲಿಗೆ (ಆಸ್ಟ್ರೇಲಿಯಾವು ಭಾರತಕ್ಕೆ ರಫ್ತು ಮಾಡುವ ಶೇ.74) ಹೆಚ್ಚು ಸಂಬಂಧಿಸಿವೆ. ಅದರಲ್ಲಿ ಶೇ.71.4 ಕೋಕಿಂಗ್ ಕಲ್ಲಿದ್ದಲು ಆಗಿದೆ. ಮತ್ತೊಂದೆಡೆ, ಆಸ್ಟ್ರೇಲಿಯಾಕ್ಕೆ ಭಾರತದ ರಫ್ತುಗಳು ವಿಶಾಲ-ಆಧಾರಿತವಾದ ಮತ್ತು ಸಿದ್ಧಪಡಿಸಿದ ಉತ್ಪನ್ನಗಳು (ಗ್ರಾಹಕ ಸರಕುಗಳು) ಆಗಿವೆ. ಭಾರತವು ಆಸ್ಟ್ರೇಲಿಯಾದಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಪ್ರತಿ ವರ್ಷ ಸುಮಾರು 4 ಬಿಲಿಯನ್ ಡಾಲರ್ ಖರ್ಚು ಮಾಡುತ್ತದೆ.
ಒಪ್ಪಂದವು ಜಾರಿಗೆ ಬಂದ ದಿನವಾದ ಡಿಸೆಂಬರ್ 29, 2022 ರಂದು ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ನೀಡಿದ ಹೇಳಿಕೆಗಳಲ್ಲಿ ನಮ್ಮ ದ್ವಿಪಕ್ಷೀಯ ವ್ಯಾಪಾರದ ಮೇಲಿನ ಸಮೀಕರಣವು ಚೆನ್ನಾಗಿ ಪ್ರತಿಫಲಿಸುತ್ತದೆ.
"ಆಸ್ಟ್ರೇಲಿಯಾಕ್ಕೆ ಸಿದ್ಧಪಡಿಸಿದ ಸರಕುಗಳನ್ನು ರಫ್ತು ಮಾಡಲು ಸಾಕಷ್ಟು ಅವಕಾಶವಿದೆ, ಏಕೆಂದರೆ ಅವರು ಏನನ್ನೂ ತಯಾರಿಸುವುದಿಲ್ಲ, ಅದು ಹೆಚ್ಚಾಗಿ ಕಚ್ಚಾ ವಸ್ತು ಮತ್ತು ಮಧ್ಯಂತರ ಸರಕು ಉತ್ಪಾದಿಸುವ ದೇಶವಾಗಿದೆ, ನಾವು ಅಗ್ಗದ ಕಚ್ಚಾ ವಸ್ತುಗಳನ್ನು ಪಡೆಯುತ್ತೇವೆ, ಅದು ನಮ್ಮನ್ನು ಜಾಗತಿಕವಾಗಿ ಹೆಚ್ಚು ಸ್ಪರ್ಧಾತ್ಮಕವಾಗಿಸುವುದು ಮಾತ್ರವಲ್ಲ, ಭಾರತೀಯ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ನಮಗೆ ಸಾಧ್ಯವಾಗುತ್ತದೆ. ಹೆಚ್ಚು ಗುಣಮಟ್ಟದ ಸರಕುಗಳನ್ನು ಕೈಗೆಟುಕುವ ಬೆಲೆಯಲ್ಲಿ ಒದಗಿಸಲು ನಮಗೆ ಅನುವು ಮಾಡಿಕೊಡುತ್ತದೆ.”
"ಹೆಚ್ಚಾಗಿ ಆಮದುಗಳ ಮೇಲೆ ಅವಲಂಬಿತವಾಗಿರುವ ಆಸ್ಟ್ರೇಲಿಯಾವು ಹೆಚ್ಚಿನ ಲಾಭವನ್ನು ಪಡೆಯುತ್ತದೆ, ಅವರು ಶೀಘ್ರದಲ್ಲೇ ಭಾರತದಿಂದ ಬರುವ ಸಿದ್ಧಪಡಿಸಿದ ಸರಕುಗಳನ್ನು ಪಡೆಯುತ್ತಾರೆ. ಭಾರತೀಯ ಪ್ರತಿಭೆಗಳಿಂದ ಒದಗಿಸಲಾದ ಸರಕು ಮತ್ತು ಸೇವೆಗಳೆರಡರಲ್ಲೂ ದೊಡ್ಡ ಪ್ರಮಾಣದ ಕೆಲಸ ಮತ್ತು ಉದ್ಯೋಗಾವಕಾಶಗಳನ್ನು ಪಡೆಯುತ್ತಾರೆ."
#IndAusECTA ಕೆಳಗಿನ ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿದೆ:
1. ಸರಕುಗಳ ವ್ಯಾಪಾರ
2. ಸೇವೆಗಳ ವ್ಯಾಪಾರ
3. ಮೂಲದ ನಿಯಮಗಳು
4. ವ್ಯಾಪಾರಕ್ಕೆ ತಾಂತ್ರಿಕ ಅಡೆತಡೆಗಳು (ಟಿಬಿಟಿ) ಮತ್ತು ನೈರ್ಮಲ್ಯ ಮತ್ತು ಫೈಟೊಸಾನಿಟರಿ (ಎಸ್ ಪಿ ಎಸ್) ಕ್ರಮಗಳು
5. ಕಸ್ಟಮ್ಸ್ ಕಾರ್ಯವಿಧಾನಗಳು ಮತ್ತು ವ್ಯಾಪಾರ ಅನುಕೂಲ
6. ವ್ಯಾಪಾರ ಪರಿಹಾರಗಳು
7. ಕಾನೂನು ಮತ್ತು ಸಾಂಸ್ಥಿಕ ಸಮಸ್ಯೆಗಳು
8. ಸಹಜ ವ್ಯಕ್ತಿಗಳ ಚಲನೆ
ಆದ್ದರಿಂದ, ಈ ಒಪ್ಪಂದವು ಭಾರತ ಮತ್ತು ಆಸ್ಟ್ರೇಲಿಯಾ ಹಾಗೂ ಜಗತ್ತಿಗೆ ಹೇಗೆ ಪ್ರಯೋಜನವನ್ನು ನೀಡುತ್ತದೆ ಎಂಬುದನ್ನು ನೋಡೋಣ.
ಸರಕುಗಳ ವ್ಯಾಪಾರದಲ್ಲಿ ಪ್ರಯೋಜನಗಳು
ಎಲ್ಲಾ ಸುಂಕ ದರಗಳ ಭಾರತೀಯ ಸರಕುಗಳು ಶೂನ್ಯ ಕಸ್ಟಮ್ಸ್ ಸುಂಕದೊಂದಿಗೆ ಆಸ್ಟ್ರೇಲಿಯಾದ ಮಾರುಕಟ್ಟೆಗೆ ಪ್ರವೇಶವನ್ನು ಪಡೆಯುತ್ತವೆ
ಈ ಒಪ್ಪಂದವು ಪ್ರಸ್ತುತ ಆಸ್ಟ್ರೇಲಿಯಾದಿಂದ ಶೇ.5 ರಷ್ಟು ಆಮದು ಸುಂಕಕ್ಕೆ ಒಳಪಟ್ಟಿರುವ ವಿವಿಧ ಕಾರ್ಮಿಕ-ತೀವ್ರತೆಯ ಭಾರತೀಯ ವಲಯಗಳಿಗೆ ಪ್ರಯೋಜನವನ್ನು ನೀಡುತ್ತದೆ. ಒಪ್ಪಂದವು ಶೇ.98.3 ರಷ್ಟು ತೆರಿಗೆ ದರಗಳ ಸರಕುಗಳಿಗೆ ಶೂನ್ಯ ಸುಂಕದಲ್ಲಿ ತಕ್ಷಣದ ಮಾರುಕಟ್ಟೆ ಪ್ರವೇಶವನ್ನು ಒದಗಿಸುತ್ತದೆ. ಮೌಲ್ಯದ ಪರಿಭಾಷೆಯಲ್ಲಿ ಹೇಳುವುದಾದರೆ, ಭಾರತವು ಆಸ್ಟ್ರೇಲಿಯಾಕ್ಕೆ ಮಾಡುವ ರಫ್ತಿನ ಶೇ. 96.4 ರಷ್ಟು. ಉಳಿದ ಶೇ.1.7 ತೆರಿಗೆ ದರಗಳನ್ನು 5 ವರ್ಷಗಳಲ್ಲಿ ಶೂನ್ಯ ಸುಂಕವಾಗಿ ಮಾಡಲಾಗುತ್ತದೆ. ಒಟ್ಟಾರೆಯಾಗಿ, ಆಸ್ಟ್ರೇಲಿಯಾ ತನ್ನ ತೆರಿಗೆ ದರಗಳ ಶೇ.100 ರಷ್ಟು ಸುಂಕ ನಿರ್ಮೂಲನೆಯನ್ನು ಒದಗಿಸುತ್ತಿದೆ.
ಅಗ್ಗದ ಕಚ್ಚಾ ವಸ್ತುಗಳು, ಔಷಧಿಗಳಿಗೆ ತ್ವರಿತ ಅನುಮೋದನೆ
ತಕ್ಷಣದ ಸುಂಕ-ಮುಕ್ತ ಪ್ರವೇಶವು ಜವಳಿ ಮತ್ತು ಉಡುಪುಗಳು, ಕೃಷಿ ಮತ್ತು ಮೀನು ಉತ್ಪನ್ನಗಳು, ಚರ್ಮ, ಪಾದರಕ್ಷೆಗಳು, ಪೀಠೋಪಕರಣಗಳು, ಅನೇಕ ಎಂಜಿನಿಯರಿಂಗ್ ಉತ್ಪನ್ನಗಳು, ಆಭರಣಗಳು ಮತ್ತು ಆಯ್ದ ಫಾರ್ಮಾಸ್ಯುಟಿಕಲ್‌ಗಳಂತಹ ಎಲ್ಲಾ ಕಾರ್ಮಿಕ-ತೀವ್ರತೆಯ ವಲಯಗಳನ್ನು ಒಳಗೊಂಡಿದೆ. ಇದರ ಪರಿಣಾಮವಾಗಿ, ಉಕ್ಕು, ಅಲ್ಯೂಮಿನಿಯಂ, ಉಡುಪು ಮತ್ತು ಇತರ ಅನೇಕ ಕೈಗಾರಿಕೆಗಳು ಅಗ್ಗದ ಕಚ್ಚಾ ವಸ್ತುಗಳನ್ನು ಪಡೆಯುತ್ತವೆ ಮತ್ತು ಅವುಗಳು ಹೆಚ್ಚು ಸ್ಪರ್ಧಾತ್ಮಕವಾಗಲು ಅನುವು ಮಾಡಿಕೊಡುತ್ತದೆ. ಈ ಒಪ್ಪಂದದ ಅಡಿಯಲ್ಲಿ ಔಷಧೀಯ ಉತ್ಪನ್ನಗಳ ಪ್ರತ್ಯೇಕ ಅನುಬಂಧಕ್ಕೆ ಎರಡೂ ಕಡೆಯವರು ಸಹ ಒಪ್ಪಿಕೊಂಡಿದ್ದಾರೆ, ಇದು ಪೇಟೆಂಟ್, ಜೆನೆರಿಕ್ ಮತ್ತು ಬಯೋಸಿಮಿಲರ್ ಔಷಧಿಗಳಿಗೆ ತ್ವರಿತ ಅನುಮೋದನೆಯನ್ನು ಸಕ್ರಿಯಗೊಳಿಸುತ್ತದೆ.
ಶೇ.90 ರಷ್ಟು ಮೌಲ್ಯದ ಆಸ್ಟ್ರೇಲಿಯನ್ ರಫ್ತುಗಳು ಭಾರತೀಯ ಮಾರುಕಟ್ಟೆಗೆ ಶೂನ್ಯ ಸುಂಕದ ಪ್ರವೇಶವನ್ನು ಪಡೆಯುತ್ತವೆ
ಭಾರತವು ಆಸ್ಟ್ರೇಲಿಯಾದಿಂದ (ಕಲ್ಲಿದ್ದಲು ಸೇರಿದಂತೆ) ಶೇ.90 ರಷ್ಟು ಮೌಲ್ಯದ ಉತ್ಪನ್ನಗಳಿಗೆ ಶೂನ್ಯ ಸುಂಕ ಪ್ರವೇಶವನ್ನು ನೀಡುತ್ತದೆ. ಶೇ.85.3 ರಷ್ಟು ಮೌಲ್ಯದ ಉತ್ಪನ್ನಗಳ ಮೇಲೆ ಶೂನ್ಯ ಸುಂಕವನ್ನು ತಕ್ಷಣವೇ ನೀಡಲಾಗುವುದು ಮತ್ತು ಶೇ.3.67 ರಷ್ಟು ಮೌಲ್ಯದ ಉತ್ಪನ್ನಗಳ ಮೇಲೆ ಶೂನ್ಯ ಸುಂಕವನ್ನು 3, 5, 7 ಮತ್ತು 10 ವರ್ಷಗಳಲ್ಲಿ ಹಂತಹಂತವಾಗಿ ನೀಡಲಾಗುವುದು. ಕೋಕಿಂಗ್ ಕಲ್ಲಿದ್ದಲು ಮತ್ತು ಥರ್ಮಲ್ ಕಲ್ಲಿದ್ದಲು, ವೈನ್, ಕೃಷಿ ಉತ್ಪನ್ನಗಳು - ಅವುಗಳಲ್ಲಿ 7 ಟಿ ಆರ್ ಕ್ಯೂ (ಹತ್ತಿ, ತೊಗಟೆ ಸಹಿತ ಬಾದಾಮಿ, ಮ್ಯಾಂಡರಿನ್, ಕಿತ್ತಳೆ, ಮಸೂರ, ಪೇರಳೆ), ಲೋಹಗಳು (ಅಲ್ಯೂಮಿನಿಯಂ), ತಾಮ್ರ, ನಿಕಲ್, ಕಬ್ಬಿಣ ಮತ್ತು ಉಕ್ಕು) ಮತ್ತು ಖನಿಜಗಳು (ಮ್ಯಾಂಗನೀಸ್ ಅದಿರು, ಕ್ಯಾಲ್ಸಿನ್ಡ್ ಅಲ್ಯುಮಿನಾ) ದಂತಹ ರಫ್ತು ಸರಕುಗಳ ತೆರಿಗೆ ದರಗಳ ಮೇಲೆ ಭಾರತವು ರಿಯಾಯಿತಿಗಳನ್ನು ನೀಡಿದೆ. ಹಾಲು ಮತ್ತು ಇತರ ಡೈರಿ ಉತ್ಪನ್ನಗಳು, ಗೋಧಿ, ಸಕ್ಕರೆ, ಕಬ್ಬಿಣದ ಅದಿರು, ಸೇಬು, ವಾಲ್ನಟ್ಸ್ ಮತ್ತು ಇತರ ಅನೇಕ ಸೂಕ್ಷ್ಮ ಉತ್ಪನ್ನಗಳನ್ನು ಭಾರತದ ಹೊರಗಿಡುವ ಪಟ್ಟಿಯಲ್ಲಿ ಇರಿಸಲಾಗಿದೆ.
10 ಲಕ್ಷ ಹೆಚ್ಚು ಉದ್ಯೋಗಗಳು, ಐದು ವರ್ಷಗಳಲ್ಲಿ 10 ಬಿಲಿಯನ್ ಡಾಲರ್ ಹೆಚ್ಚು ರಫ್ತು
ತಕ್ಷಣದ ಸುಂಕ-ಮುಕ್ತ ಪ್ರವೇಶವು ಭಾರತದಲ್ಲಿ 10 ಲಕ್ಷ ಉದ್ಯೋಗಗಳನ್ನು ಮತ್ತು ಮುಂದಿನ ಐದು ವರ್ಷಗಳಲ್ಲಿ ಭಾರತದಿಂದ ಆಸ್ಟ್ರೇಲಿಯಾಕ್ಕೆ 10 ಬಿಲಿಯನ್ ಡಾಲರ್ ಹೆಚ್ಚುವರಿ ರಫ್ತುಗಳನ್ನು ಸೃಷ್ಟಿಸುತ್ತದೆ ಎಂದು ಯೋಜಿಸಲಾಗಿದೆ.
ಸೇವೆಗಳ ವ್ಯಾಪಾರದಲ್ಲಿ ಪ್ರಯೋಜನಗಳು
ಆಸ್ಟ್ರೇಲಿಯಾದಲ್ಲಿ 1 ಲಕ್ಷಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಅಧ್ಯಯನ ನಂತರದ ಕೆಲಸದ ವೀಸಾದಿಂದ ಪ್ರಯೋಜನ ಪಡೆಯುತ್ತಿದ್ದಾರೆ
ಸೇವೆಗಳ ವ್ಯಾಪಾರದ ಅಡಿಯಲ್ಲಿ ಆಸ್ಟ್ರೇಲಿಯಾ ನೀಡಿರುವ ಬದ್ಧತೆಗಳು ಇದುವರೆಗಿನ ವ್ಯಾಪಾರ ಒಪ್ಪಂದಗಳಲ್ಲಿ ಉತ್ತಮವಾಗಿದೆ ಮತ್ತು ಯುಕೆಯೊಂದಿಗೆ ಅದರ ಇತ್ತೀಚಿನ ಎಫ್ ಟಿ ಎ ಗೆ ಹೊಂದಾಣಿಕೆಯಾಗಿದೆ. ಆಸ್ಟ್ರೇಲಿಯಾ ತನ್ನ ವೇಳಾಪಟ್ಟಿಯನ್ನು ಋಣಾತ್ಮಕ ಪಟ್ಟಿಯಲ್ಲಿ (ಸೇವಾ ತೆರಿಗೆಯಿಂದ ವಿನಾಯ್ತಿ) ಇಡಲು ಒಪ್ಪಿದೆ ಮತ್ತು ಸುಮಾರು 120 ಉಪ-ವಲಯಗಳಲ್ಲಿ ಹೆಚ್ಚು ವಿಶ್ವಾಸಾರ್ಹ ದೇಶದ (ಎಂ ಎಫ್ ಎನ್) ಸ್ಥಾನಮಾನದೊಂದಿಗೆ ಸುಮಾರು 135 ಉಪ ವಲಯಗಳಲ್ಲಿ ವ್ಯಾಪಕವಾದ ಬದ್ಧತೆಗಳನ್ನು ಮಾಡಿದೆ. ಯೋಗ ಶಿಕ್ಷಕರು ಮತ್ತು ಭಾರತೀಯ ಬಾಣಸಿಗರಿಗೆ 1,800 ವಾರ್ಷಿಕ ಕೋಟಾವನ್ನು ಒಪ್ಪಂದವು ಒದಗಿಸುತ್ತದೆ. ಅಧ್ಯಯನ ನಂತರದ ಕೆಲಸದ ವೀಸಾ (ಪೋಸ್ಟ್ ಸ್ಟಡಿ ವರ್ಕ್ ವೀಸಾ) (18 ತಿಂಗಳುಗಳು-4 ವರ್ಷಗಳು) ಭಾರತೀಯ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ. ಇದರಿಂದ ಆಸ್ಟ್ರೇಲಿಯಾದಲ್ಲಿರುವ 1,00,000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಇದರೊಂದಿಗೆ, #IndAusECTA ಯುವ ವೃತ್ತಿಪರರಿಗೆ ಕೆಲಸ ಮತ್ತು ರಜಾದಿನಗಳ ವೀಸಾದ ವ್ಯವಸ್ಥೆಯನ್ನು ಮಾಡುತ್ತದೆ.
5 ವರ್ಷಗಳ ನಂತರ ಋಣಾತ್ಮಕ ಪಟ್ಟಿ (ಸೇವಾ ತೆರಿಗೆ ವಿನಾಯ್ತಿ ) ಪಡೆಯಲಿರುವ ಆಸ್ಟ್ರೇಲಿಯನ್ ಸೇವೆಗಳು
ಒಪ್ಪಂದವು ಜಾರಿಗೆ ಬಂದ 5 ವರ್ಷಗಳ ನಂತರ ಭಾರತವು ಮೊದಲ ಬಾರಿಗೆ ಋಣಾತ್ಮಕ ಪಟ್ಟಿಗೆ ಒಪ್ಪಿಗೆ ನೀಡಿದೆ. (ಋಣಾತ್ಮಕ ಪಟ್ಟಿ ಎಂದರೇನು? ಋಣಾತ್ಮಕ ಪಟ್ಟಿಯ ಅಡಿಯಲ್ಲಿ, ದೇಶವು ಆಮದು ಮಾಡಿಕೊಂಡ ಮತ್ತು ಸ್ಥಳೀಯವಾಗಿ ಉತ್ಪಾದಿಸಿದ ಸರಕುಗಳು / ಸೇವೆಗಳನ್ನು ಎಲ್ಲಾ ಪ್ರದೇಶಗಳಲ್ಲಿ ಸಮಾನವಾಗಿ ಪರಿಗಣಿಸುತ್ತದೆ ಮತ್ತು ಇದನ್ನು ವಿನಾಯ್ತಿ ಪಟ್ಟಿಯಲ್ಲಿ ಮಾಡದಿರುವ ಪ್ರದೇಶಗಳನ್ನು ಋಣಾತ್ಮಕ ಪಟ್ಟಿಯಲ್ಲಿ ವಿನಾಯ್ತಿಗಳಾಗಿ ಪಟ್ಟಿ ಮಾಡಲಾಗಿದೆ. ಆದ್ದರಿಂದ, ಇಂತಹ ಸಂದರ್ಭದಲ್ಲಿ, ಭಾರತವು 5 ವರ್ಷಗಳ ಅವಧಿಯ ನಂತರ ಆಸ್ಟ್ರೇಲಿಯಾದಿಂದ ರಫ್ತು ಮಾಡುವ ಸೇವೆಗಳಿಗೆ ಈ ಅವಕಾಶವನ್ನು ಒದಗಿಸುತ್ತದೆ)
ಭಾರತವು ಮೊದಲ ಬಾರಿಗೆ ಸುಮಾರು 103 ಸೇವಾ ಉಪ-ವಲಯಗಳಲ್ಲಿ, ಸುಮಾರು 31 ಸೇವಾ ಉಪ-ವಲಯಗಳ ಬಗ್ಗೆ ಹೆಚ್ಚು ವಿಶ್ವಾಸಾರ್ಹ ರಾಷ್ಟ್ರದ ಸ್ಥಾನಮಾನದೊಂದಿಗೆ ಆಸ್ಟ್ರೇಲಿಯಾಕ್ಕೆ ಬದ್ಧತೆಯನ್ನು ನೀಡುತ್ತಿದೆ. ಆಸ್ಟ್ರೇಲಿಯಾ ಬ್ಯಾಂಕಿಂಗ್, ವಿಮೆ, ಇತರ ಹಣಕಾಸು ಸೇವೆಗಳು, ವ್ಯಾಪಾರ ಸೇವೆಗಳಲ್ಲಿ ಬಾಧ್ಯತೆಗಳನ್ನು ಪಡೆಯುತ್ತದೆ. ಒಪ್ಪಂದವು ಕಂಪ್ಯೂಟರ್ ಸಂಬಂಧಿತ ಸೇವೆಗಳು, ಟೆಲಿಕಾಂ, ನಿರ್ಮಾಣ, ಆರೋಗ್ಯ ಮತ್ತು ಪರಿಸರ ಸೇವೆಗಳಲ್ಲಿ ಹೂಡಿಕೆಗೆ ಮಾರ್ಗಗಳನ್ನು ತೆರೆಯುತ್ತದೆ. ಇವೆಲ್ಲವೂ ಭಾರತ ಸಹಿ ಮಾಡಿದ ಹಿಂದಿನ ಎಫ್‌ಟಿಎಗಳನ್ನು ಹೋಲುತ್ತವೆ.
12 ತಿಂಗಳುಗಳಲ್ಲಿ ವೃತ್ತಿಪರ ಸೇವೆಗಳಲ್ಲಿ ಪರಸ್ಪರ ಗುರುತಿಸುವಿಕೆ ಒಪ್ಪಂದಗಳನ್ನು (ಎಂ ಆರ್ ಎ) ಮುಂದುವರಿಸಲು ಸಹ ತೀರ್ಮಾನ ಮಾಡಲಾಗಿದೆ.
ಅನಪೇಕ್ಷಿತ ಪರಿಣಾಮಗಳ ವಿರುದ್ಧ ರಕ್ಷಣೆಗೆ ರಕ್ಷಣಾತ್ಮಕ ವೈಶಿಷ್ಟ್ಯಗಳು
ವ್ಯಾಪಾರದ ಮೇಲೆ ಅನಪೇಕ್ಷಿತ ಪರಿಣಾಮಗಳ ವಿರುದ್ಧ ಎರಡೂ ದೇಶಗಳನ್ನು ರಕ್ಷಿಸುವ ಗುರಿಯನ್ನು ಹೊಂದಿರುವ #IndAusECTA ಕೆಲವು 'ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು' ಹೊಂದಿದೆ; ಅವು ಏನೆಂದು ನಾವು ನೋಡೋಣ.
1. ಆಸ್ಟ್ರೇಲಿಯಾದ ಮೂಲಕ ಭಾರತಕ್ಕೆ ಬರುವ ಮೂರನೇ ದೇಶದಲ್ಲಿ ತಯಾರಿಸಿದ ಉತ್ಪನ್ನಗಳ ಸೋರಿಕೆ / ಬದಲಾವಣೆಗಳ ಬಗ್ಗೆ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಈ ಕೆಳಗಿನ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಇರಿಸಲಾಗಿದೆ.
ಎ. ಮೂಲದ ಕಟ್ಟುನಿಟ್ಟಾದ ನಿಯಮಗಳು – ಶೇ.35 ರ ಮೌಲ್ಯ ಸೇರ್ಪಡೆ + ಸುಂಕದ ಉಪಶೀರ್ಷಿಕೆಯಲ್ಲಿ ಬದಲಾವಣೆ (CTSH)
ಬಿ. ಮೌಲ್ಯವರ್ಧನೆಯ ಲೆಕ್ಕಾಚಾರದಲ್ಲಿ, ಲೆಕ್ಕಾಚಾರದ ವಿಧಾನವನ್ನು ಅವಲಂಬಿಸಿ (ಶೇ.35 ಅಥವಾ ಶೇ.45) 2 ವಿಭಿನ್ನ ಮೌಲ್ಯಗಳಿಗೆ ಒಪ್ಪಲಾಗಿದೆ (ಲಾಭವನ್ನು ಹೊರತುಪಡಿಸಲಾಗಿದೆಯೇ ಅಥವಾ ಸೇರಿಸಲಾಗಿದೆಯೇ ಎಂಬುದನ್ನು ಆಧರಿಸಿ)
ಸಿ. 807 ಉತ್ಪನ್ನಗಳಿಗೆ ಉತ್ಪನ್ನ ನಿರ್ದಿಷ್ಟ ನಿಯಮಗಳ ಬಗ್ಗೆ ಮಾತುಕತೆ ನಡೆಸಿವೆ
ಡಿ. 'ಕರಗಿಸಿ ಮತ್ತು ಸುರಿಯುವ' ಅವಶ್ಯಕತೆಯ ಕಬ್ಬಿಣ ಮತ್ತು ಉಕ್ಕಿನ ಉತ್ಪನ್ನಗಳನ್ನು ಉತ್ಪನ್ನದ ನಿರ್ದಿಷ್ಟ ನಿಯಮಗಳಲ್ಲಿ ಸೇರಿಸಲಾಗಿದೆ.
ಇ. ಕಟ್ಟುನಿಟ್ಟಾದ ಕಾರ್ಯಾಚರಣೆಯ ಕಸ್ಟಮ್ಸ್ ಕಾರ್ಯವಿಧಾನಗಳು
ಎಫ್. ಮೌಲ್ಯವರ್ಧನೆಗಾಗಿ ಬೇರೆ ಯಾವುದೇ ದೇಶದ ಉತ್ಪನ್ನಗಳಲ್ಲದೆ, ಆಸ್ಟ್ರೇಲಿಯದಲ್ಲಿ ತಯಾರಿಸಿದ ವಸ್ತುಗಳನ್ನು ಮಾತ್ರ ಪರಿಗಣಿಸುವುದನ್ನು ಖಚಿತಪಡಿಸಿಕೊಳ್ಳಲು ಒಂದು ನಿರ್ದಿಷ್ಟ ಷರತ್ತು ಒಳಗೊಂಡಿದೆ.
2. ಆಮದು ಹೆಚ್ಚಾದಲ್ಲಿ ದ್ವಿಪಕ್ಷೀಯ ರಕ್ಷಣಾ ಕಾರ್ಯವಿಧಾನವು 14 ವರ್ಷಗಳವರೆಗೆ ಲಭ್ಯವಿರುತ್ತದೆ.
3. 15 ವರ್ಷಗಳ ನಂತರ ಕಳವಳಕ್ಕೆ ಕಾರಣವಾಗಬಹುದಾದ ಒಪ್ಪಂದದ ಭಾಗಗಳಿಗೆ ಪರಿಶೀಲನೆ ಮಾಡಲು ವಿನಂತಿಸಲು ಎರಡೂ ದೇಶಗಳನ್ನು ಸಕ್ರಿಯಗೊಳಿಸಲು ಪರಿಶೀಲನೆಯ ವಿಶೇಷ ಷರತ್ತಿಗೆ ಒಪ್ಪಿಗೆ ನೀಡಲಾಗಿದೆ
ಎ. ವಿನಂತಿಸಿದರೆ ಕಡ್ಡಾಯವಾಗಿ ಪರಿಶೀಲನೆ (ಅದು ಸಂಭವಿಸಬೇಕು)
ಬಿ. 6 ತಿಂಗಳಲ್ಲಿ ಪೂರ್ಣಗೊಳಿಸಬೇಕು.
ಡಬಲ್ ತೆರಿಗೆಗೆ ಅಂತ್ಯ
ಒಪ್ಪಂದವು ಭಾರತೀಯ ಸಂಸ್ಥೆಯ ರಾಯಧನ, ಶುಲ್ಕಗಳು ಮತ್ತು ಶುಲ್ಕಗಳ ತೆರಿಗೆಗೆ ಡಬಲ್ ತೆರಿಗೆ ತಪ್ಪಿಸುವ ಒಪ್ಪಂದದ ಬಳಕೆಗೆ ಸಂಬಂಧಿಸಿದ ವ್ಯತ್ಯಾಸಗಳನ್ನು ತೆಗೆದುಹಾಕಿದೆ.
ರಾಯಧನಗಳು, ಶುಲ್ಕಗಳು ಮತ್ತು ಸಂಸ್ಥೆಗಳು ಇವುಗಳನ್ನು ಪೋಷಕ ಕಂಪನಿಗಳಿಗೆ ಕಳುಹಿಸುವ ಶುಲ್ಕಗಳ ಮೇಲೆ ತೆರಿಗೆ ವಿಧಿಸಲು ಆಸ್ಟ್ರೇಲಿಯಾ ಯಾವುದೇ ದೇಶೀಯ ಅವಕಾಶವನ್ನು ಹೊಂದಿಲ್ಲ.
ಈ ರವಾನೆಗೆ ತೆರಿಗೆ ವಿಧಿಸಲು ಡಬಲ್ ತೆರಿಗೆ ತಪ್ಪಿಸುವ ಒಪ್ಪಂದದಲ್ಲಿ (ಡಿಟಿಎಎ) ಒಂದು ನಿಬಂಧನೆಯನ್ನು ಬಳಸಲಾಗಿದೆ. ಆದಾಗ್ಯೂ, Ind-Aus ECTA ಯ ಫಲಿತಾಂಶವಾಗಿ, ಆಸ್ಟ್ರೇಲಿಯಾ ತನ್ನ ತೆರಿಗೆ ಕಾನೂನುಗಳಲ್ಲಿ ಬದಲಾವಣೆಗಳನ್ನು ಮಾಡಿದೆ, ಈ ವ್ಯತ್ಯಾಸವನ್ನು ತೆಗೆದುಹಾಕಿದೆ. ಇದು 1ನೇ ಏಪ್ರಿಲ್ 2023 ರಿಂದ ಡಬಲ್ ತೆರಿಗೆಯನ್ನು ತೆಗೆದುಹಾಕುತ್ತದೆ. ಇದರ ಪರಿಣಾಮವಾಗಿ, ಐಟಿ ವಲಯವು ಹೆಚ್ಚಿನ ಲಾಭವನ್ನು ಗಳಿಸಬಹುದು ಮತ್ತು ಸ್ಪರ್ಧಾತ್ಮಕವಾಗಬಹುದು.
ಈ ಕುರಿತು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದು ಹೀಗೆ: “ಒಪ್ಪಂದವು ನಮ್ಮನ್ನು ಕಡಿಮೆ ಸ್ಪರ್ಧಾತ್ಮಕವಾಗಿಸುವ ಮತ್ತು ಐಟಿ ವಲಯದಲ್ಲಿ ಕಡಿಮೆ ಲಾಭದಾಯಕವಾಗಿಸುವ ಐಟಿ ಸೇವೆಗಳ ಮೇಲಿನ ಡಬಲ್ ತೆರಿಗೆಯನ್ನು ಸಹ ತೆಗೆದುಹಾಕುತ್ತದೆ, ಈಗ ಡಬಲ್ ತೆರಿಗೆಯನ್ನು ಕಾನೂನಿಗೆ ತಿದ್ದುಪಡಿ ಮಾಡುವ ಮೂಲಕ ಏಪ್ರಿಲ್ 1 ರಿಂದ, ತೆಗೆದುಹಾಕಲಾಗಿದೆ. ಐಟಿ ಕ್ಷೇತ್ರಕ್ಕೆ ವಿಧಿಸುತ್ತಿದ್ದ ಡಬಲ್ ತೆರಿಗೆ ಅಂತ್ಯವಾಗಿದೆ. ನಾವು ಇದೀಗ ಲಕ್ಷಾಂತರ ಡಾಲರ್‌ಗಳನ್ನು ಉಳಿಸುತ್ತಿದ್ದೇವೆ ಮತ್ತು ಮುಂದಿನ ದಿನಗಳಲ್ಲಿ ಬಿಲಿಯನ್ ಡಾಲರ್‌ಗಳನ್ನು ಉಳಿಸಬಹುದು. ಬಹುಶಃ 5 - 7 ವರ್ಷಗಳಲ್ಲಿ ನಮ್ಮ ಸ್ಪರ್ಧಾತ್ಮಕತೆ ಹೆಚ್ಚುತ್ತದೆ ಮತ್ತು ಬಹಳಷ್ಟು ಉದ್ಯೋಗಗಳನ್ನು ಸೃಷ್ಟಿಸುತ್ತದೆ.”
ಭಾರತೀಯ ಆರ್ಥಿಕತೆಯ ನಿರ್ದಿಷ್ಟ ಅವಶ್ಯಕತೆಗಳಿಗೆ ಸರಿಹೊಂದುವ ಒಪ್ಪಂದ
ಭಾರತದ ಆರ್ಥಿಕತೆಯ ವಿಶಿಷ್ಟತೆಗಳಿಗೆ ಅನುಗುಣವಾಗಿ ಒಪ್ಪಂದದ ಮಾತುಕತೆಯಲ್ಲಿ ಹೆಚ್ಚಿನ ಕಾಳಜಿ ವಹಿಸಲಾಗಿದೆ. ಅದರ ಕೆಲವು ಪ್ರಯೋಜನಕಾರಿ ವೈಶಿಷ್ಟ್ಯಗಳು ಇಲ್ಲಿವೆ:
1. ಭಾರತವು ಹಾಲು ಮತ್ತು ಇತರ ಡೈರಿ ಉತ್ಪನ್ನಗಳು, ಗೋಧಿ, ಸಕ್ಕರೆ, ಕಬ್ಬಿಣದ ಅದಿರು, ಸೇಬು ಮತ್ತು ವಾಲ್‌ನಟ್‌ಗಳಿಗೆ ಪ್ರವೇಶವನ್ನು ಒದಗಿಸಿಲ್ಲ ಮತ್ತು ಆಸ್ಟ್ರೇಲಿಯಾಕ್ಕೆ ತನ್ನ ಕೊಡುಗೆಗಳಿಂದ ಹೊರಗಿಟ್ಟಿದೆ. ಇವು ಆಸ್ಟ್ರೇಲಿಯಾದ ಪ್ರಮುಖ ರಫ್ತುಗಳಾಗಿರುವುದರಿಂದ ಇದು ಸಾಮಾನ್ಯವಾಗಿ ಅಸಾಧ್ಯವಾದುದು.
2. ಆಸ್ಟ್ರೇಲಿಯಾ ತನ್ನ ಉತ್ಪನ್ನಗಳಾದ ಕಲ್ಲಿದ್ದಲು ಮತ್ತು ವೈನ್ಸ್ ಜೊತೆಗೆ ಈಗಾಗಲೇ ಆಮದು ಮಾಡಿಕೊಳ್ಳುತ್ತಿರುವ ಕೃಷಿ/ತೋಟಗಾರಿಕೆ ಉತ್ಪನ್ನಗಳಲ್ಲಿ (ಬಾದಾಮಿ, ಹತ್ತಿ, ಮಸೂರ, ಪೇರಳೆ, ಕಿತ್ತಳೆ, ಇತ್ಯಾದಿ) ಕೆಲವು ಕೋಟಾಗಳ ಲಾಭವನ್ನು ನಿರೀಕ್ಷಿಸುತ್ತದೆ.
3. ಆಸ್ಟ್ರೇಲಿಯಾವು ತನ್ನ ಶೇ.100 ತೆರಿಗೆ ದರಗಳು ಮತ್ತು ವ್ಯಾಪಾರಕ್ಕೆ ಶೂನ್ಯ ಸುಂಕ ಪ್ರವೇಶವನ್ನು ನೀಡಿದೆ. ಆದರೆ ಭಾರತವು ಇದುವರೆಗೆ ತನ್ನ ಶೇ.70 ರಷ್ಟು ತೆರಿಎಗ ದರಗಳನ್ನು ಸುಂಕ ಮುಕ್ತ / ಕಡಿಮೆ ಸುಂಕ ಪ್ರವೇಶಕ್ಕಾಗಿ ಆಸ್ಟ್ರೇಲಿಯಾಕ್ಕೆ ನೀಡಿದೆ.
4. ಭಾರತವು ಔಷಧೀಯ ವಲಯದಲ್ಲಿ ಭಾರಿ ಲಾಭ ಪಡೆಯಬಹುದು. ಒಪ್ಪಂದದ ಮೂಲಕ, ಇತರ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಅನುಮೋದಿಸಲಾದ ಔಷಧಗಳು ಆಸ್ಟ್ರೇಲಿಯಾದಲ್ಲಿ ತ್ವರಿತ ಅನುಮೋದನೆಯನ್ನು ಪಡೆಯುತ್ತವೆ. ಇದು ಆಸ್ಟ್ರೇಲಿಯನ್ ವೈದ್ಯಕೀಯ ಮಾರುಕಟ್ಟೆಯನ್ನು (ಭಾರತವು ಕೇವಲ ಶೇ.3) ಸುಲಭವಾಗಿ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.
5. ಜವಳಿ/ಉಡುಪು, ಚರ್ಮ/ ಪಾದರಕ್ಷೆ, ರತ್ನಗಳು ಮತ್ತು ಆಭರಣಗಳು, ಮೀನು ಉತ್ಪನ್ನಗಳು, ಯಂತ್ರೋಪಕರಣಗಳು ಮತ್ತು ವಿದ್ಯುತ್ ಸರಕುಗಳಂತಹ ಭಾರತದ ಕಾರ್ಮಿಕ-ತೀವ್ರತೆಯ ವಲಯಗಳಿಗೆ ಪ್ರಮುಖ ಲಾಭಗಳನ್ನು ನಿರೀಕ್ಷಿಸಲಾಗಿದೆ. ೀ ವಲಯಗಳು ವಿಯೆಟ್ನಾಂ ಮತ್ತು ಇತರ ದೇಶಗಳಿಗೆ ಸಮಾನವಾಗಿ ಸುಂಕ ಮುಕ್ತ ಪ್ರವೇಶವನ್ನು ಪಡೆಯುತ್ತಾರೆ, ಅವುಗಳನ್ನು ಸ್ಪರ್ಧಾತ್ಮಕವಾಗಿಸುತ್ತಾರೆ.
6. ವಿದ್ಯಾರ್ಥಿಗಳು, ಉದ್ಯೋಗಿ/ಕಾರ್ಮಿಕ ವೀಸಾಗಳು, ಕೃಷಿ ಕಾರ್ಮಿಕರ ವೀಸಾಗಳಿಗೆ ಉದ್ಯೋಗ ವೀಸಾಗಳ ಉದಾರತೆ.
7. ಈ ಒಪ್ಪಂದವು ಇತರ ಅಭಿವೃದ್ಧಿ ಹೊಂದಿದ ದೇಶಗಳಾದ ಯುಕೆ, ಕೆನಡಾ, ಯುರೋಪ್ ಭಾರತದೊಂದಿಗೆ ಇದೇ ರೀತಿಯ ಒಪ್ಪಂದಗಳಿಗೆ ಸಹಿ ಹಾಕಲು ಪ್ರೋತ್ಸಾಹಿಸುತ್ತದೆ.
8. ಚೀನಾದೊಂದಿಗೆ ವಾಸ್ತವಿಕವಾಗಿ ಎಫ್ ಟಿ ಎ ಆಗಿರುವ ಆರ್ ಸಿ ಇ ಪಿ ಯಿಂದ ಹೊರನಡೆದ ಪರಿಣಾಮವಾಗಿ ಭಾರತಕ್ಕೆ ಉಂಟಾದ ಯಾವುದೇ ನಷ್ಟವನ್ನು ತಂಬಲು ಒಪ್ಪಂದವು ಅವಕಾಶ ನೀಡುತ್ತದೆ.
ಭಾರತ - ಆಸ್ಟ್ರೇಲಿಯಾ ವ್ಯಾಪಾರವು 2035 ರ ವೇಳೆಗೆ 45-50 ಶತಕೋಟಿ ಡಾಲರ್ ದಾಟುವ ನಿರೀಕ್ಷೆಯಿದೆ
ಮೇಲೆ ತಿಳಿಸಲಾದ ನಿಬಂಧನೆಗಳ ಪರಿಣಾಮವಾಗಿ, ಭಾರತೀಯ ಆರ್ಥಿಕತೆಗೆ ಹಲವಾರು ದೀರ್ಘಾವಧಿಯ ಲಾಭಗಳನ್ನು ಅಂದಾಜಿಸಲಾಗಿದೆ.
ಭಾರತ ಆಸ್ಟ್ರೇಲಿಯಾ ಇಸಿಟಿಎ ಜಾರಿಗೆ ಬರುವುದರಿಂದ ಭಾರತೀಯ ಉತ್ಪನ್ನಗಳು ಮತ್ತು ಸೇವೆಗಳ ಮಾರುಕಟ್ಟೆ ಪಾಲನ್ನು ಕ್ರೋಢೀಕರಿಸುವ ಮತ್ತು ಬೆಳವಣಿಗೆಗೆ ಸಹಾಯ ಮಾಡುವ ನಿರೀಕ್ಷೆಯಿದೆ. ಆಸ್ಟ್ರೇಲಿಯಾದಲ್ಲಿ ಭಾರತೀಯ ಸರಕುಗಳಿಗೆ ಹೊಸ ಮಾರುಕಟ್ಟೆಗಳು ಸಹ ಹೊರಹೊಮ್ಮುವ ಸಾಧ್ಯತೆಯಿದೆ. ಆಸ್ಟ್ರೇಲಿಯಾದ ನಿಯಂತ್ರಕ ಪ್ರಕ್ರಿಯೆಗಳ ಸರಾಗಗೊಳಿಸುವಿಕೆಯೊಂದಿಗೆ ಔಷಧೀಯ ಉತ್ಪನ್ನಗಳಲ್ಲಿ ನಿರೀಕ್ಷಿತ ಬೆಳವಣಿಗೆ ಇದೆ. ಸುಧಾರಿತ ತಂತ್ರಜ್ಞಾನದ ಹೆಚ್ಚಿನ ಮೌಲ್ಯದ ಉತ್ಪನ್ನಗಳ ಉಪಸ್ಥಿತಿಯೊಂದಿಗೆ ಮೌಲ್ಯ ಸರಪಳಿಗಳಲ್ಲಿ ಏರಿಕೆಯನ್ನು ನಿರೀಕ್ಷಿಸಲಾಗಿದೆ. 2026-27 ರ ವೇಳೆಗೆ ಸುಮಾರು 10 ಲಕ್ಷ ಉದ್ಯೋಗಗಳ ಸೃಷ್ಟಿಯೊಂದಿಗೆ ರಫ್ತುಗಳು 10 ಶತಕೋಟಿಗಳಷ್ಟು ಡಾಲರ್ ಹೆಚ್ಚಾಗುವ ನಿರೀಕ್ಷೆಯಿದೆ. ಒಟ್ಟು ದ್ವಿಪಕ್ಷೀಯ ವ್ಯಾಪಾರವು 2035 ರ ವೇಳೆಗೆ 45-50 ಡಾಲರ್ ಶತಕೋಟಿ ದಾಟುವ ನಿರೀಕ್ಷೆಯಿದೆ. ಆಸ್ಟ್ರೇಲಿಯಾದಲ್ಲಿ ಭಾರತೀಯರಿಗೆ ವರ್ಧಿತ ಉದ್ಯೋಗಾವಕಾಶಗಳು ಮತ್ತು ಆಸ್ಟ್ರೇಲಿಯಾದಿಂದ ಭಾರತಕ್ಕೆ ಹಣ ರವಾನೆ ಮತ್ತು ಹೂಡಿಕೆಯ ಹರಿವು ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
ಭಾರತ ಮತ್ತು ಆಸ್ಟ್ರೇಲಿಯಾದ ಎರಡೂ ಸರ್ಕಾರಗಳು ಈ ಮೈಲಿಗಲ್ಲನ್ನು ಸಾಧಿಸಲು ಒಟ್ಟಾಗಿ ಕೆಲಸ ಮಾಡಿವೆ ಮತ್ತು ಎರಡು ದೇಶಗಳ ನಡುವಿನ ವ್ಯಾಪಾರಕ್ಕೆ ಮಾತ್ರವಲ್ಲದೆ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಆಶಾವಾದ ಹೊಂದಿವೆ.
ಈ ಒಪ್ಪಂದವು ಆಸ್ಟ್ರೇಲಿಯಾದ ವ್ಯವಹಾರಗಳಿಗೆ ಹೊಸ ಅವಕಾಶಗಳನ್ನು ನೀಡುತ್ತದೆ ಎಂದು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಹೇಳುತ್ತಾರೆ. ಭಾರತದ ಪ್ರಧಾನಿಯವರ ಆಹ್ವಾನವನ್ನು ಸ್ವೀಕರಿಸಿ, ಉಭಯ ದೇಶಗಳ ನಡುವಿನ ವ್ಯಾಪಾರವನ್ನು ಸುಧಾರಿಸಲು ಬದ್ಧವಾಗಿರುವ ವ್ಯಾಪಾರ ನಿಯೋಗದೊಂದಿಗೆ ಮಾರ್ಚ್‌ನಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದೇನೆ ಎಂದು ಅವರು ಹೇಳುತ್ತಾರೆ.
ತಮ್ಮ ಆಸ್ಟ್ರೇಲಿಯಾ ಸಹವರ್ತಿಗೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಇಸಿಟಿಎ ಜಾರಿಗೆ ಬರುತ್ತಿರುವುದು ಒಂದು ಅಪರೂಪದ ಕ್ಷಣವಾಗಿದೆ, ಇದು ನಮ್ಮ ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳ ಅಗಾಧ ಸಾಮರ್ಥ್ಯವನ್ನು ಬಳಸಿಕೊಳ್ಳುತ್ತದೆ ಮತ್ತು ಎರಡೂ ಕಡೆಗಳಲ್ಲಿ ವ್ಯವಹಾರಗಳನ್ನು ಹೆಚ್ಚಿಸುತ್ತದೆ ಎಂದರು.
#IndAusECTA ಜಾರಿಯ ಅಂಗವಾಗಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಬ್ರೆಟ್ ಲೀ ಅವರ ವೇಗ ಮತ್ತು ಸಚಿನ್ ತೆಂಡೂಲ್ಕರ್ ಅವರ ಪರಿಪೂರ್ಣತೆಯೊಂದಿಗೆ ಇಸಿಟಿಎ ಮಾತುಕತೆ ನಡೆಸಲಾಗಿದೆ ಮತ್ತು ಇದು ಎರಡು ದೇಶಗಳ ನಡುವಿನ ಪ್ರೀತಿಯ ಶ್ರಮವಾಗಿದೆ ಎಂದು ಹೇಳಿದರು.. ದೇಶದ ಜನರ ಉಜ್ವಲ ಭವಿಷ್ಯಕ್ಕಾಗಿ, ನಾವೀನ್ಯತೆ, ಶಿಕ್ಷಣ, ಆರೋಗ್ಯ ಮತ್ತು ತಂತ್ರಜ್ಞಾನಕ್ಕಾಗಿ ಭಾರತ ಸರ್ಕಾರವು ಪ್ರಯತ್ನವನ್ನು ಮುಂದುವರಿಸುತ್ತದೆ ಎಂದು ಸಚಿವರು ಭರವಸೆ ನೀಡಿದರು.
ಆಸ್ಟ್ರೇಲಿಯಾ ಸರ್ಕಾರದ ವ್ಯಾಪಾರ ಮತ್ತು ಪ್ರವಾಸೋದ್ಯಮ ಸಚಿವ ಸೆನೆಟರ್ ಹೊನ್ ಡಾನ್ ಫಾರೆಲ್ ಅವರು ಒಪ್ಪಂದದ ಬಗ್ಗೆ ಬರೆಯುತ್ತಾ, ಭಾರತದ ಯುವ ಜನಸಂಖ್ಯೆ, ವೈವಿಧ್ಯಮಯ ಆರ್ಥಿಕತೆ ಮತ್ತು ಬೆಳವಣಿಗೆಯ ಪಥವು ಆಸ್ಟ್ರೇಲಿಯಾದ ವ್ಯವಹಾರಗಳಿಗೆ ಶಿಕ್ಷಣ, ಕೃಷಿ, ಇಂಧನ, ಸಂಪನ್ಮೂಲಗಳು, ಪ್ರವಾಸೋದ್ಯಮ, ಆರೋಗ್ಯ, ಹಣಕಾಸು ಸೇವೆಗಳು, ಮೂಲಸೌಕರ್ಯ, ವಿಜ್ಞಾನ ಮತ್ತು ನಾವೀನ್ಯತೆ ಮತ್ತು ಕ್ರೀಡೆ ಸೇರಿದಂತೆ ಗಮನಾರ್ಹ ಅವಕಾಶಗಳನ್ನು ಒದಗಿಸುತ್ತದೆ ಎಂದು ಹೇಳಿದ್ದಾರೆ.
29.12.2022 ರಂದು Ind-Aus ECTA ಜಾರಿಗೆ ಬರಲು ಅಗತ್ಯವಿರುವ ಎಲ್ಲಾ ಅಗತ್ಯ ಅಧಿಸೂಚನೆಗಳನ್ನು ಕಂದಾಯ ಇಲಾಖೆ ಮತ್ತು ವಾಣಿಜ್ಯ ಇಲಾಖೆಯ ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯವು ಹೊರಡಿಸಿದೆ.
ಭಾರತ- ಆಸ್ಟ್ರೇಲಿಯಾ ಇಸಿಟಿಎಗೆ ಸಂಬಂಧಿಸಿದ ಕಾರ್ಯವಿಧಾನದ ಸಮಸ್ಯೆಗಳು ಮತ್ತು ಪ್ರಶ್ನೆಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಕೆಳಗೆ ಪಡೆಯಬಹುದು:
1. ಕಸ್ಟಮ್ಸ್ ಅಧಿಸೂಚನೆಗಳು:
- ಸುಂಕದ ರಿಯಾಯಿತಿಗಳ ಮೇಲೆ (ಕಸ್ಟಮ್ಸ್ ಸುಂಕದ ಅಧಿಸೂಚನೆ)
- ಮೂಲದ ನಿಯಮಗಳ ಮೇಲೆ (ಸಂಖ್ಯೆ 112/2022-ಕಸ್ಟಮ್ಸ್ (N.T.)
2. DGFT ಅಧಿಸೂಚನೆಗಳು ಮತ್ತು ಸಾರ್ವಜನಿಕ ಪ್ರಕಟಣೆಗಳು:
- ಮೂಲದ ಪ್ರಮಾಣಪತ್ರಕ್ಕಾಗಿ ಏಜೆನ್ಸಿಗಳ ಪಟ್ಟಿ (ಸಾರ್ವಜನಿಕ ಸೂಚನೆ ಸಂಖ್ಯೆ: 44/2015-20; ದಿನಾಂಕ 22.12.2022)
- ಎಲೆಕ್ಟ್ರಾನಿಕ್ ಫೈಲಿಂಗ್ ಮತ್ತು ಮೂಲದ ಪ್ರಾಶಸ್ತ್ಯದ ಪ್ರಮಾಣಪತ್ರದ ಮೇಲಿನ ವ್ಯಾಪಾರ ಸೂಚನೆ (ವ್ಯಾಪಾರ ಸೂಚನೆ ಸಂಖ್ಯೆ. 23/2022-23; 22.12.2022)
- TRQ ಹಂಚಿಕೆ (ಸಾರ್ವಜನಿಕ ಪ್ರಕಟಣೆ)
3. ಮೂಲದ ಪ್ರಮಾಣಪತ್ರವನ್ನು ನೀಡಲು ಸಾಮಾನ್ಯ ಡಿಜಿಟಲ್ ವೇದಿಕೆಗಾಗಿ ಡಿ ಜಿ ಎಫ್ ಟಿ ಸಹಾಯವಾಣಿ:
- ದೂರವಾಣಿ ಸಂಖ್ಯೆ:1800-111-550
- ಇಮೇಲ್: coo-dgft[at]gov[dot]in.
- ಆನ್‌ಲೈನ್ CoO ಗಾಗಿ ವೆಬ್‌ಲಿಂಕ್: coo.dgft.gov.in
ಮತ್ತು ಈ ಒಪ್ಪಂದ ಯಾಕೆ? ಏನು? ಅದನ್ನು ಇಲ್ಲಿ ನೋಡಿ: https://commerce.gov.in/international-trade/trade-agreements/ind-aus-ecta/
Further information on the #IndAusECTA:
- FAQs
- https://www.dfat.gov.au/trade/agreements/in-force/australia-india-ecta/australia-india-ecta-official-text
- https://www.trademinister.gov.au/minister/don-farrell/media-release/trade-deal-unlocks-access-india
- International Trade Glossary by WTO
******
(Release ID: 1889592)
Visitor Counter : 640