ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

2023 ರ ಜನವರಿ 6 ರಿಂದ ಸಿಎಸ್‌ಐಆರ್‌ನ "ಒಂದು ವಾರ, ಒಂದು ಪ್ರಯೋಗಾಲಯ” ಅಭಿಯಾನವನ್ನು  ದೇಶಾದ್ಯಂತ ಪ್ರಾರಂಭಿಸುವುದಾಗಿ ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್ ಹೇಳಿದ್ದಾರೆ.

 
ದೇಶದಾದ್ಯಂತ ಇರುವ  ಸಿ ಎಸ್‌ ಐ ಆರ್‌  ನ 37 ಪ್ರಧಾನ ಪ್ರಯೋಗಾಲಯಗಳು/ಸಂಸ್ಥೆಗಳು ಪ್ರತಿ ವಾರ ಒಂದರ ನಂತರ ಒಂದರಂತೆ ತಮ್ಮ ವಿಶೇಷ ಆವಿಷ್ಕಾರಗಳನ್ನು ಮತ್ತು ತಾಂತ್ರಿಕ ಪ್ರಗತಿಯನ್ನು ಭಾರತದ ಜನರಿಗೆ ಪ್ರದರ್ಶಿಸುತ್ತವೆ.

Posted On: 17 DEC 2022 5:01PM by PIB Bengaluru

* "ಒಂದು ವಾರ ಒಂದು ಪ್ರಯೋಗಾಲಯ" ಎಂಬ ವಿಷಯಾಧಾರಿತ ಅಭಿಯಾನವು ಯುವ ನವೋದ್ಯಮಿಗಳು, ವಿದ್ಯಾರ್ಥಿಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಉದ್ಯಮಗಳು ಟೆಕ್ ಸ್ಟಾರ್ಟ್-ಅಪ್ ಉದ್ಯಮಗಳ ಮೂಲಕ ಅವಕಾಶಗಳನ್ನು ಹುಡುಕಲು ಅವರನ್ನು ಉತ್ತೇಜಿಸುವ ನಿರೀಕ್ಷೆಯಿದೆ"

* ಸಚಿವರು ನವದೆಹಲಿಯಲ್ಲಿ ಸಿಎಸ್‌ಐಆರ್‌ನ 200 ನೇ ಆಡಳಿತ ಮಂಡಳಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು; ಮಹಿಳಾ ವಿಜ್ಞಾನಿಗಳಿಗೆ ಸಂಶೋಧನಾ ಅನುದಾನದ ಪ್ರಸ್ತಾಪಗಳಿಗಾಗಿ ವಿಶೇಷ ಒತ್ತು ನೀಡುವುದಾಗಿ ಪ್ರಕಟಿಸಿದರು.

* ಸಿಎಸ್‌ಐಆರ್‌ ತಾಂತ್ರಿಕ ಪ್ರಗತಿಗಳು ಮತ್ತು ಶಾಲೆಗಳಲ್ಲಿ ನಾವೀನ್ಯತೆಗಳ ವ್ಯಾಪಕ ಹಂಚಿಕೆಗಾಗಿ ಕಾರ್ಯವಿಧಾನವನ್ನು ರೂಪಿಸುವಂತೆ ಕೇಂದ್ರ ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಶೀಘ್ರದಲ್ಲೇ ಪತ್ರ ಬರೆಯುವುದಾಗಿ ಡಾ. ಜಿತೇಂದ್ರ ಸಿಂಗ್ ಹೇಳಿದರು.

*  "ಸಿಎಸ್‌ಐಆರ್‌ – ಭಾರತದ ನಾವೀನ್ಯತೆಯ ಎಂಜಿನ್"  ಎಂಬ ಸಂಸ್ಥೆಯ ಹೊಸ ಅಡಿಬರಹವನ್ನು ಸಚಿವರು ಬಿಡುಗಡೆ ಮಾಡಿದರು.

 

ಸಿಎಸ್‌ಐಆರ್‌ (ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ) ಉಪಾಧ್ಯಕ್ಷರೂ ಆಗಿರುವ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಅವರು, 2023 ರ ಜನವರಿ 6 ರಿಂದ ದೇಶಾದ್ಯಂತ "ಒಂದು ವಾರ, ಒಂದು ಪ್ರಯೋಗಾಲಯ" ಅಭಿಯಾನವನ್ನು ಪ್ರಾರಂಭಿಸುವುದಾಗಿ ಇಂದು ಘೋಷಿಸಿದ್ದಾರೆ. ದೇಶದಾದ್ಯಂತ ಇರುವ ಸಿಎಸ್‌ಐಆರ್‌ನ 37 ಪ್ರಧಾನ ಪ್ರಯೋಗಾಲಯಗಳು/ಸಂಸ್ಥೆಗಳು, ಪ್ರತಿ ವಾರ ಒಂದರ ನಂತರ ಒಂದರಂತೆ, ಭಾರತದ ಜನರಿಗೆ ತಮ್ಮ ವಿಶೇಷ ಆವಿಷ್ಕಾರಗಳು ಮತ್ತು ತಾಂತ್ರಿಕ ಪ್ರಗತಿಯನ್ನು ಪ್ರದರ್ಶಿಸುತ್ತವೆ.

ನವದೆಹಲಿಯ ವಿಜ್ಞಾನ ಕೇಂದ್ರದಲ್ಲಿ ಸಿಎಸ್‌ಐಆರ್‌ನ 200 ನೇ ಆಡಳಿತ ಮಂಡಳಿ ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ ಜಿತೇಂದ್ರ ಸಿಂಗ್, “ಒಂದು ವಾರ ಒಂದು ಪ್ರಯೋಗಾಲಯ”ಎಂಬ ವಿಷಯಾಧಾರಿತ ಅಭಿಯಾನವು ಯುವ ನವೋದ್ಯಮಿಗಳು, ವಿದ್ಯಾರ್ಥಿಗಳು, ಸ್ಟಾರ್ಟ್‌ಅಪ್‌ಗಳು, ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಮಗಳು ಆಳವಾದ ತಂತ್ರಜ್ಞಾನದ ಮೂಲಕ ಅವಕಾಶಗಳನ್ನು ಹುಡುಕಲು ಉತ್ತೇಜನ ನೀಡುವ ನಿರೀಕ್ಷೆಯಿದೆ ಎಂದು ಹೇಳಿದರು.

ಸಿಎಸ್‌ಐಆರ್‌ನ ಅಧ್ಯಕ್ಷರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು 2022 ರ ಅಕ್ಟೋಬರ್ 15 ರಂದು ಸಿಎಸ್‌ಐಆರ್‌ ಸೊಸೈಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು ಮತ್ತು ಕಳೆದ 80 ವರ್ಷಗಳಲ್ಲಿ ಸಿಎಸ್‌ಐಆರ್‌ ಮಾಡಿರುವ  ಪ್ರಯತ್ನಗಳನ್ನು ಶ್ಲಾಘಿಸಿದರು ಎಂದು ಡಾ ಜಿತೇಂದ್ರ ಸಿಂಗ್ ಸ್ಮರಿಸಿಕೊಂಡರು.

2042ರಲ್ಲಿ 100 ವರ್ಷ ಪೂರೈಸಲಿರುವ ಸಿಎಸ್‌ಐಆರ್‌ ಬಗ್ಗೆ ದೃಷ್ಟಿಕೋನವನ್ನು ಅಭಿವೃದ್ಧಿಪಡಿಸುವಂತೆ ಸೊಸೈಟಿ ಸಭೆಯಲ್ಲಿ ಪ್ರಧಾನಮಂತ್ರಿ ಅವರು ಸಿಎಸ್‌ಐಆರ್‌ಗೆ ಒತ್ತಾಯಿಸಿದರು ಮತ್ತು ಕಳೆದ 80 ವರ್ಷಗಳ ಪ್ರಯಾಣವನ್ನು ದಾಖಲಿಸಬೇಕಾದ ಮಹತ್ವವನ್ನು ಒತ್ತಿ ಹೇಳಿದರು. ಇದು ಸಾಧಿಸಿದ ಪ್ರಗತಿಯನ್ನು ಪರಿಶೀಲಿಸಲು ಮತ್ತು ಪರಿಹರಿಸಬಹುದಾದ ಕೊರತೆಯ ಕ್ಷೇತ್ರಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಎಲ್ಲ ಲ್ಯಾಬ್‌ಗಳ ವರ್ಚುವಲ್ ಶೃಂಗಸಭೆಯನ್ನು ನಿಯಮಿತವಾಗಿ ನಡೆಸಬಹುದು, ಇದರಲ್ಲಿ ಅವರು ಪರಸ್ಪರರ ಅನುಭವದಿಂದ ಹೊಸ ವಿಷಯಗಳನ್ನು ಕಲಿಯಬಹುದು ಎಂದು ಪ್ರಧಾನಿಯವರು ಸಲಹೆ ನೀಡಿದ್ದಾಗಿ ಸಚಿವರು ಹೇಳಿದರು.

ಇಂದು ನಡೆದ ಸಿಎಸ್‌ಐಆರ್‌ನ 200 ನೇ ಆಡಳಿತ ಮಂಡಳಿ ಸಭೆಯಲ್ಲಿ ಡಾ ಜಿತೇಂದ್ರ ಸಿಂಗ್ ಅವರು, ಮಹಿಳಾ ವಿಜ್ಞಾನಿಗಳಿಗೆ ಸಂಶೋಧನಾ ಅನುದಾನದ ಪ್ರಸ್ತಾಪಗಳಿಗಾಗಿ ವಿಶೇಷ ಒತ್ತು ನೀಡುವುದಾಗಿ ಘೋಷಿಸಿದರು. ಸಂಶೋಧನಾ ಅನುದಾನದ ಪ್ರಸ್ತಾವನೆಯು ಮಹಿಳಾ ವಿಜ್ಞಾನಿಗಳು ಸೇರಿದಂತೆ ವೃತ್ತಿ ವಿರಾಮವನ್ನು ತೆಗೆದುಕೊಂಡವರು ಮತ್ತು ಸಂಶೋಧನೆಗೆ ಮರಳಲು ಮತ್ತು ತಮ್ಮ ವೃತ್ತಿಜೀವನವನ್ನು ಮರುಸ್ಥಾಪಿಸಲು ಆಸಕ್ತಿ ಹೊಂದಿರುವವರನ್ನು ಒಳಗೊಂಡಿದೆ. ಸಿಎಸ್‌ಐಆರ್‌ನಲ್ಲಿ ಆಗುತ್ತಿರುವ ಪರಿವರ್ತನೆಗಳಿಗೆ ಅನುಗುಣವಾಗಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು "ಸಿಎಸ್‌ಐಆರ್‌-ದಿ ಇನ್ನೋವೇಶನ್ ಎಂಜಿನ್ ಆಫ್ ಇಂಡಿಯಾ" (ಸಿಎಸ್‌ಐಆರ್‌ – ಭಾರತದ ನಾವೀನ್ಯತೆಯ ಎಂಜಿನ್) ಎಂಬ ಹೊಸ ಅಡಿಬರಹವನ್ನು ಸಹ ಬಿಡುಗಡೆ ಮಾಡಿದರು.

01 ಏಪ್ರಿಲ್ 2023 ರಿಂದ ಜಾರಿಗೆ ಬರುವಂತೆ ಎಲ್ಲ ಪ್ರಯೋಗಾಲಯಗಳಲ್ಲಿ ಕಾಗದರಹಿತ ಇ-ಕಚೇರಿಯ ಅನುಷ್ಠಾನ ಮತ್ತು 2022-2023 ರ ವರದಿ ವರ್ಷಕ್ಕೆ ನಿರ್ವಾಹಕ ಕೇಡರ್ ಸಿಬ್ಬಂದಿಗೆ ಇ-ಕಾರ್ಯಕ್ಷಮತೆಯ ಮೌಲ್ಯಮಾಪನ ವ್ಯವಸ್ಥೆಯನ್ನು ಸಹ ಅನುಮೋದಿಸಲಾಗಿದೆ.

ವಿದ್ಯಾರ್ಥಿಗಳು ಮತ್ತು ಮೂಲಭೂತ ವಿಜ್ಞಾನ ಮತ್ತು ಸಂಶೋಧನೆಯನ್ನು ಬಲವಾದ ವೃತ್ತಿ ಆಯ್ಕೆಯಾಗಿ ಮುಂದುವರಿಸಲು ಬಯಸುವವರಿಗಾಗಿ ಶಾಲೆಗಳಲ್ಲಿ ಸಿಎಸ್‌ಐಆರ್ ತಾಂತ್ರಿಕ ಪ್ರಗತಿ ಮತ್ತು ನಾವೀನ್ಯಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲು ಕಾರ್ಯವಿಧಾನವನ್ನು ರೂಪಿಸುವಂತೆ ಕೇಂದ್ರ ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಶೀಘ್ರದಲ್ಲೇ ಪತ್ರ ಬರೆಯುವುದಾಗಿ ಡಾ ಜಿತೇಂದ್ರ ಸಿಂಗ್ ಆಡಳಿತ ಮಂಡಳಿಯ ಸದಸ್ಯರಿಗೆ ತಿಳಿಸಿದರು. 

****



(Release ID: 1884492) Visitor Counter : 165