ಪ್ರವಾಸೋದ್ಯಮ ಸಚಿವಾಲಯ
azadi ka amrit mahotsav

ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು 10 ಅಂತಾರಾಷ್ಟ್ರೀಯ ಭಾಷೆಗಳನ್ನು ಒಳಗೊಂಡಂತೆ 12 ಭಾಷೆಗಳಲ್ಲಿ 24x7 ಬಹುಭಾಷಾ ಪ್ರವಾಸಿಗರ ಮಾಹಿತಿ-ಸಹಾಯವಾಣಿಯನ್ನು ಪ್ರಾರಂಭಿಸಿದೆ: ಶ್ರೀ ಜಿ. ಕಿಶನ್ ರೆಡ್ಡಿ

Posted On: 12 DEC 2022 4:07PM by PIB Bengaluru

ಪ್ರವಾಸಿಗರ ಸುರಕ್ಷತೆ ಮತ್ತು ಭದ್ರತೆಯು ಪ್ರಧಾನವಾಗಿ ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದ ವಿಷಯವಾಗಿದೆ. ಆದಾಗ್ಯೂ, ಪ್ರವಾಸಿಗರ ಭದ್ರತಾ ಕಾಳಜಿಯ ಕುರಿತು ಚೆನ್ನಾಗಿ ಅರಿತಿರುವ ಕಾರಣದಿಂದ, ಪ್ರವಾಸಿಗರಿಗೆ ಸುರಕ್ಷಿತ ಮತ್ತು ಭದ್ರತೆಯು ವಾತಾವರಣವನ್ನು ಒದಗಿಸಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದೆ.

ಎಲ್ಲಾ ರಾಜ್ಯ ಸರ್ಕಾರಗಳು/ ಕೇಂದ್ರಾಡಳಿತ ಪ್ರದೇಶಗಳ ಉನ್ನತ ಆಡಳಿತಾಧಿಕಾರಿಗಳೊಂದಿಗೆ ಪ್ರವಾಸಿಗರಿಗೆ ಸುರಕ್ಷಿತ ಮತ್ತು ಭದ್ರತೆಯು ವಾತಾವರಣವನ್ನು ಒದಗಿಸುವ ಕುರಿತು ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಚರ್ಚಿಸಿದೆ. ಪ್ರವಾಸಿಗರ ವಿರುದ್ಧ ಯಾವುದೇ ಅಹಿತಕರ ಘಟನೆ ಸಂಭವಿಸಿದಲ್ಲಿ, ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಸಂತ್ರಸ್ತ ಪ್ರವಾಸಿಗರಿಗೆ ತೃಪ್ತಿದಾಯಕ ಪರಿಹಾರವನ್ನು ಒದಗಿಸಲು ಕಾನೂನು ಮತ್ತು ಸುವ್ಯವಸ್ಥೆಯ ಸದೃಢವಾದ ಹಾಗೂ ಸಮರ್ಪಕ ಸುರಕ್ಷಾ ವ್ಯವಸ್ಥೆ ಇರಲೇಬೇಕು ಎಂದು ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಸೂಚಿಸಿದೆ.

ಆಂಧ್ರ ಪ್ರದೇಶ, ದೆಹಲಿ, ಗೋವಾ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಧ್ಯಪ್ರದೇಶ, ಒಡಿಶಾ, ಪಂಜಾಬ್, ರಾಜಸ್ಥಾನ, ಸಿಕ್ಕಿಂ ಮತ್ತು ಉತ್ತರ ಪ್ರದೇಶ ಹಾಗೂ ಇತರ ರಾಜ್ಯ ಸರ್ಕಾರಗಳು/ ಕೇಂದ್ರಾಡಳಿತ ಪ್ರದೇಶಗಳು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಪ್ರಯತ್ನದಿಂದಾಗಿ ಪ್ರವಾಸಿಗರಿಗೆ ಸುರಕ್ಷಿತ ಮತ್ತು ಭದ್ರತೆಯ ನಿಟ್ಟಿನಲ್ಲಿ ಒಂದಲ್ಲ ಒಂದು ರೂಪದಲ್ಲಿ ವಿಶೇಷ ಪ್ರವಾಸಿಗರ ಸುರಕ್ಷಾ ಪೊಲೀಸರನ್ನು ನಿಯೋಜಿಸಿವೆ.

ಪ್ರವಾಸಿಗರ ಸುರಕ್ಷಾ ಪೊಲೀಸರ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪ್ರವಾಸಿಗರ ಅಗತ್ಯಗಳಿಗಾಗಿ ರಚಿಸಲಾದ ಪ್ರವಾಸಿಗರ ಸುರಕ್ಷಾ ಪೊಲೀಸರನ್ನು ಸಂವೇದನಾಶೀಲಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ತನ್ನ ನಿಯಂತ್ರಣದಲ್ಲಿರುವ ಸ್ವಾಯತ್ತ ಸಂಸ್ಥೆಯಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೂರಿಸಂ & ಟ್ರಾವೆಲ್ ಮ್ಯಾನೇಜ್ಮೆಂಟ್ (ಐ.ಐ.ಟಿ.ಟಿ.ಎಂ.) ನಡೆಸಿದ ಅಧ್ಯಯನವನ್ನು ಪಡೆದುಕೊಂಡಿದೆ. ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಈ ಅಧ್ಯಯನ ವರದಿಯ ಪ್ರತಿಯನ್ನು "ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರವಾಸಿಗರ ಸುರಕ್ಷಾ ಪೊಲೀಸರ ಕಾರ್ಯನಿರ್ವಹಣೆ ಮತ್ತು ಅತ್ಯುತ್ತಮ ಅಭ್ಯಾಸಗಳ ದಾಖಲೀಕರಣ" ಎಂಬ ಶೀರ್ಷಿಕೆಯಡಿ, ಆಯಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರತ್ಯೇಕ ಪೊಲೀಸ್ ಘಟಕವನ್ನು ರಚಿಸಲು ಮತ್ತು ಪ್ರವಾಸಿಗರ ಅಗತ್ಯತೆಗಳ ಬಗ್ಗೆ ಅವರಿಗೆ ಅರಿವು ಮೂಡಿಸಲು ವಿನಂತಿಯೊಂದಿಗೆ, ಎಲ್ಲಾ ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳ ಉನ್ನತ ಆಡಳಿತ ಅಧಿಕಾರಿಗಳಿಗೆ ರವಾನಿಸಿದೆ.

ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ರಾಜ್ಯ ಸರ್ಕಾರಗಳೊಂದಿಗೆ ಪ್ರವಾಸಿಗರ ಸುರಕ್ಷಾ ವಿಷಯವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಕೇಂದ್ರ ಗೃಹ ಸಚಿವಾಲಯದ ಬೆಂಬಲವನ್ನು ಕೋರಿದೆ.

ಈ ಪ್ರವಾಸಿಗರ ಸುರಕ್ಷಾ ಚೌಕಟ್ಟನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು, ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಸಂಸ್ಥೆಯು ಪ್ರವಾಸಿಗರ ಸುರಕ್ಷಾ ಪೊಲೀಸ್ ಯೋಜನೆಯ ಅಧ್ಯಯನವನ್ನು ಪ್ರಾರಂಭಿಸಿದೆ. ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಅಖಿಲ ಭಾರತ ಮಟ್ಟದಲ್ಲಿ ಏಕರೂಪದ ಪ್ರವಾಸಿಗರ ಸುರಕ್ಷಾ ಪೊಲೀಸ್ ಯೋಜನೆಯನ್ನು ಜಾರಿಗೆ ತರಲು 19ನೇ ಅಕ್ಟೋಬರ್, 2022 ರಂದು ಹೊಸದಿಲ್ಲಿಯಲ್ಲಿ ರಾಜ್ಯಗಳ/ ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಇಲಾಖೆಯ ಡಿಜಿ/ಐಜಿಗಳ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿತ್ತು.

ಈ ನಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ, ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ನಿಶುಲ್ಕ (ಟೋಲ್ ಫ್ರೀ)  ಸಂಖ್ಯೆ 1800111363  ಅಥವಾ ಕಿರು ಸಂಖ್ಯೆ 1363 ಯಲ್ಲಿ  24x7 ಅವಧಿಯ ಬಹುಭಾಷಾ ಪ್ರವಾಸಿಗರ ಮಾಹಿತಿ-ಸಹಾಯವಾಣಿ ಸೇವೆಯನ್ನು ಪ್ರಾರಂಭಿಸಿದೆ. ಇದು ಭಾರತದ ವಿವಿಧ ಪ್ರದೇಶಗಳಲ್ಲಿ ಪ್ರಯಾಣಿಸುವಾಗ ತೊಂದರೆಯಲ್ಲಿರುವ ಪ್ರವಾಸಿಗರಿಗೆ ಸೂಕ್ತ ಮಾರ್ಗದರ್ಶನ ನೀಡಲು, ದೇಶೀಯ ಮತ್ತು ವಿದೇಶಿ ಪ್ರವಾಸಿಗರಿಗೆ ಹಿಂದಿ ಮತ್ತು ಇಂಗ್ಲಿಷ್  ಹಾಗೂ 10 ಅಂತರರಾಷ್ಟ್ರೀಯ (ಜರ್ಮನ್, ಫ್ರೆಂಚ್, ಸ್ಪ್ಯಾನಿಷ್, ಇಟಾಲಿಯನ್, ಪೋರ್ಚುಗೀಸ್, ರಷ್ಯನ್, ಚೈನೀಸ್, ಜಪಾನೀಸ್, ಕೊರಿಯನ್, ಅರೇಬಿಕ್) ಭಾಷೆಗಳನ್ನು ಒಳಗೊಂಡಂತೆ,  ಭಾರತದಲ್ಲಿ ಪ್ರಯಾಣಕ್ಕೆ ಸಂಬಂಧಿಸಿದ ಮಾಹಿತಿಯ ವಿಷಯದಲ್ಲಿ ಒಟ್ಟು 12 ಭಾಷೆಗಳಲ್ಲಿ ಮಾಹಿತಿ ಮತ್ತು ಬೆಂಬಲದ ಸೇವೆಯನ್ನು ಒದಗಿಸುತ್ತದೆ.

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರವಾಸೋದ್ಯಮ ಇಲಾಖೆಗಳನ್ನು ಒಳಗೊಂಡಂತೆ ಎಲ್ಲಾ ಪಾಲುದಾರರೊಂದಿಗೆ ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು 'ಸುರಕ್ಷಿತ ಮತ್ತು ಗೌರವಾನ್ವಿತ ಪ್ರವಾಸೋದ್ಯಮಕ್ಕಾಗಿ ನೀತಿ ಸಂಹಿತೆ' ಅನ್ನು ಅಳವಡಿಸಿಕೊಂಡಿದೆ. ಇದು ಘನತೆ, ಸುರಕ್ಷತೆ ಮತ್ತು ಪ್ರವಾಸಿಗರು ಮತ್ತು ನಿರ್ದಿಷ್ಟವಾಗಿ ಸ್ಥಳೀಯ ನಿವಾಸಿಗಳು, ಮಹಿಳೆಯರು ಮತ್ತು ಮಕ್ಕಳ ಶೋಷಣೆ, ಸ್ವಾತಂತ್ರ್ಯ ಹಾಗೂ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಚಟುವಟಿಕೆಗಳ ವಿವಿಧ ವಿಷಯಗಳನ್ನು ಸಮರ್ಪಕವಾಗಿ ಕೈಗೊಳ್ಳಲು ಪ್ರೋತ್ಸಾಹಿಸಲು ಮಾರ್ಗಸೂಚಿಗಳ ಕೈಪಿಡಿಯಾಗಿದೆ.

ಈ ಮಾಹಿತಿಯನ್ನು ಕೇಂದ್ರ ಪ್ರವಾಸೋದ್ಯಮ ಸಚಿವ ಶ್ರೀ ಜಿ. ಕಿಶನ್ ರೆಡ್ಡಿ ಅವರು ಇಂದು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

*****


(Release ID: 1882933) Visitor Counter : 142