ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಒಡಿಯಾ ಚಿತ್ರ ಪ್ರತೀಕ್ಷಾದ ಹಿಂದಿ ರೀಮೇಕ್ ತರುವುದಾಗಿ  ಐ.ಎಫ್.ಎಫ್.ಐ.53ರ  ವೇದಿಕೆಯಲ್ಲಿ ಘೋಷಿಸಿದ ಅನುಪಮ್ ಖೇರ್.  ಈ ಚಿತ್ರ  ತಂದೆ-ಮಗನ ಸಂಬಂಧದ ಚಲನಶೀಲತೆಯನ್ನು  ಪ್ರಮುಖವಾಗಿ  ಪ್ರದರ್ಶಿಸುತ್ತದೆ


"ಈ ಕ್ಷಣವು ನಮಗೆ ಬಹಳ ಮುಖ್ಯವಾದುದಾಗಿದೆ, ಒಡಿಶಾದ ಜನರಿಗೆ ಅದು ಇನ್ನೂ ಬಹಳ ದೊಡ್ಡ ಸಂಗತಿಯಾಗಿದೆ" - ಅನುಪಮ್ ಪಟ್ನಾಯಕ್

Posted On: 23 NOV 2022 3:04PM by PIB Bengaluru

 

                                                                            #IFFIWood, 23 ನವೆಂಬರ್ 2022

ಪ್ರತೀಕ್ಷಾ ಚಿತ್ರದ ನಿರ್ಮಾಣ ಅದರೊಳಗೇ  ಒಂದು ಚಲನಚಿತ್ರವಾಗಬಹುದಾದಂತಹ ಸಂಗತಿಯನ್ನು ಒಳಗೊಂಡಿದೆ. ತಂದೆ-ಮಗನ ಕಥೆಯ ಬಗ್ಗೆ ಬರೆಯುವುದರಿಂದ ಹಿಡಿದು, ಈ ಚಿತ್ರದ ಆರಂಭಿಕ ಹಂತಗಳಲ್ಲಿ ತನ್ನ ಸ್ವಂತ ತಂದೆಯನ್ನು ಕಳೆದುಕೊಳ್ಳುವುದು, ನಂತರ ಚಲನಚಿತ್ರವನ್ನು ತಯಾರಿಸದಿರಲು ನಿರ್ಧರಿಸುವುದು, ಅಂತಿಮವಾಗಿ ಅದನ್ನು ಮಾಡಲು ಅವರ ಕುಟುಂಬದಿಂದಲೇ ಮನವೊಲಿಸಲ್ಪಡುವುದು, ಮತ್ತು ಈಗ ಐಎಫ್ಎಫ್ಐ, 2022 ರಲ್ಲಿ ಪ್ರದರ್ಶನಗೊಳ್ಳುವುದು, ಹೀಗೆ ಅನುಪಮ್ ಪಟ್ನಾಯಕ್ ಅವರ ಪ್ರತೀಕ್ಷಾ ತನ್ನದೇ ಆದ ಪ್ರಯಾಣ ಪಥವನ್ನು ದಾಖಲಿಸಿದೆ.

ಲೇಖಕ ಗೌರಹರಿ ದಾಸ್ ಅವರ ಸಣ್ಣ ಕಥೆಯಿಂದ ಸ್ಫೂರ್ತಿ ಪಡೆದ ಇದು, ಮಧ್ಯಮ ವರ್ಗದ ಕುಟುಂಬದ ಹುಡುಗ ಸಂಜಯ್ ಎಂಭಾತನ ಕಥೆಯಾಗಿದ್ದು, ಅವರು ತಮ್ಮ ತಂದೆ ನಿವೃತ್ತರಾಗುವುದಕ್ಕೆ  ಕೆಲವು ತಿಂಗಳುಗಳ ಮೊದಲು ಸರ್ಕಾರಿ ಉದ್ಯೋಗವನ್ನು ಅರಸುತ್ತಿರುತ್ತಾರೆ. ಅವರ ತಂದೆ ಬಿಪಿನ್, ತಮ್ಮ ಕುಟುಂಬವು ಸಾಲ ಹೊಂದಿರುವುದರಿಂದ ಮತ್ತು ತಾವು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವುದರಿಂದ ಅವರು ಕೆಲಸವನ್ನು ಹುಡುಕಬೇಕೆಂದು ಒತ್ತಾಯಿಸುತ್ತಿರುತ್ತಾರೆ. ಕುಟುಂಬದ ಸದಸ್ಯರೊಬ್ಬರು ಮೃತ ಸರ್ಕಾರಿ ಉದ್ಯೋಗಿಯ ಕೆಲಸವನ್ನು ಪಡೆಯುವ ಸರ್ಕಾರದ ಅನುಕಂಪದ ನೇಮಕಾತಿಯ ಯೋಜನೆಯ ಬಗ್ಗೆ ಸಂಜಯ್ ತಿಳಿದುಕೊಳ್ಳುತ್ತಾರೆ. ಇಂತಹ ಸ್ಥಿತಿಯಲ್ಲಿ ಹತಾಶರಾಗಿದ್ದ  ಸಂಜಯ್ ತಮ್ಮ ಗೊಂದಲದ ಮನಸ್ಥಿತಿಯನ್ನು ತಿಳಿಗೊಳಿಸಿಕೊಳ್ಳಲು ತನ್ನ ತಂದೆಯ ಸಾವಿಗಾಗಿ ಕಾಯುತ್ತಿರುತ್ತಾರೆ. ಇದು ಕುಟುಂಬದ ಬಗ್ಗೆ, ಅದರಲ್ಲೂ ವಿಶೇಷವಾಗಿ ತಂದೆ ಮತ್ತು ಮಕ್ಕಳು ಹೊಂದಿರುವ ಸಂಕೀರ್ಣ ಸಂಬಂಧಗಳನ್ನು ಕುರಿತ ಚಿತ್ರವಾಗಿದೆ.

ಸಂಜಯ್ ಪಾತ್ರದಲ್ಲಿ ನಟಿಸಿರುವ ದೀಪನ್ವಿತ್ ದಶಮೋಹಪಾತ್ರ ಅವರು ತಮ್ಮ ಚಿತ್ರವನ್ನು ಐಎಫ್ಎಫ್ಐನಲ್ಲಿ ಪ್ರದರ್ಶಿಸುವ ಗೌರವ ಲಭಿಸಿದ  ಬಗ್ಗೆ ಮಾತನಾಡುತ್ತಾ, "ಇದು ಪ್ರಮುಖ ನಟನಾಗಿ ನನ್ನ ಮೊದಲ ಚಿತ್ರವಾಗಿರುವುದರಿಂದ ಇದು ನನಗೆ ಅತ್ಯಂತ ದೊಡ್ಡ ಸಂತೋಷದ ಕ್ಷಣವಾಗಿದೆ, ಆದರೆ ಒಡಿಶಾದ ಜನರಿಗೆ ಇದು ಇನ್ನೂ ದೊಡ್ಡ ಸಂಗತಿಯಾಗಿದೆ, ಏಕೆಂದರೆ ಒಡಿಯಾ ಚಲನಚಿತ್ರೋದ್ಯಮವು ಕೆಲವು ಸಮಯದಿಂದ ಸಂಕಷ್ಟದಲ್ಲಿ ಹೆಣಗಾಡುತ್ತಿದೆ" ಎಂದು ಹೇಳಿದರು. ನಿರ್ದೇಶಕ ಅನುಪಮ್ ಪಟ್ನಾಯಕ್ ಅವರು ಒಡಿಯಾ ಚಲನಚಿತ್ರೋದ್ಯಮದ ಬಗ್ಗೆ ಮಾತನಾಡುತ್ತಾ, "1999 ರ ಚಂಡಮಾರುತಕ್ಕೆ ಮೊದಲು, ಒಡಿಶಾದಲ್ಲಿ 160 ಚಿತ್ರಮಂದಿರಗಳಿದ್ದವು, ಚಂಡಮಾರುತದ ನಂತರ 100 ಚಿತ್ರಮಂದಿರಗಳು ಇದ್ದವು, ಮತ್ತು ಕೋವಿಡ್ ನಂತರ, ಕೇವಲ 60 ಚಿತ್ರಮಂದಿರಗಳು ಮಾತ್ರ ಉಳಿದಿವೆ, 60 ಚಿತ್ರಮಂದಿರಗಳಲ್ಲಿ ಉದ್ಯಮವು ಹೇಗೆ ಕಾರ್ಯನಿರ್ವಹಿಸಲು ಸಾಧ್ಯ?" ಎಂದು ಪ್ರಶ್ನಿಸಿದರು.

ಅನುಪಮ್ ಪಟ್ನಾಯಕ್ ಅವರು ತಮ್ಮ ತಂದೆಯ ಮೊದಲ ಚಿತ್ರ ರಾಷ್ಟ್ರಪ್ರಶಸ್ತಿಯನ್ನು ಗೆದ್ದ ಬಗ್ಗೆ ಮಾತನಾಡಿದರು, ಮತ್ತು ನಿರ್ದೇಶಕರಾಗಿ ಅವರ ಮೊದಲ ಚಲನಚಿತ್ರವನ್ನು ಐಎಫ್ಎಫ್ಐನಲ್ಲಿ ಪ್ರದರ್ಶಿಸಲಾಗುತ್ತಿದೆ. ಇದು ಅವರಿಗೆ ಒಂದು ವಿಶೇಷ ಸಂದರ್ಭವಾಗಿತ್ತು  ಮತ್ತು ದಿವಂಗತ ತಂದೆಯನ್ನು ಗೌರವಿಸುವ ಒಂದು ಅಪೂರ್ವ ಘಳಿಗೆಯಾಗಿತ್ತು. ಅನುಪಮ್ ಖೇರ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾಗ , ಖೇರ್ ಅವರು  ಹಿಂದಿಯಲ್ಲಿ ಪ್ರತೀಕ್ಷಾ ನಿರ್ಮಾಣ ಮಾಡುವುದಾಗಿ  ಸ್ವಯಂಪ್ರೇರಿತವಾಗಿ ಘೋಷಿಸಿದಾಗ ಅದು ನಿರ್ದೇಶಕ ಮತ್ತು ನಟ ಇಬ್ಬರಿಗೂ ಅತ್ಯಂತ ಸಂತಸದ ಕ್ಷಣವಾಯಿತು. ಅಲ್ಲಿ ಅವರು ತಂದೆಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ಅವರು ಚಿತ್ರದ ಹಕ್ಕುಗಳಿಗಾಗಿ ಪಟ್ನಾಯಕ್ ಅವರಿಗೆ ಸಾಂಕೇತಿಕ ಮೊತ್ತಕ್ಕೆ ಸಹಿ ಹಾಕಿ  ನೀಡಿದರು. ಚಲನಚಿತ್ರಗಳ ಇಂದ್ರಜಾಲವನ್ನು ಸಂಭ್ರಮಿಸುವ ವೇದಿಕೆಯಾದ ಐಎಫ್ಎಫ್ಐನಲ್ಲಿ ಈ ಘಟನೆ ಸಂಭವಿಸಿತು ಮತ್ತು ಇದು ಚಲನಚಿತ್ರಕ್ಕೆ ಹೊರತಾದ ಒಂದು ಘಟನೆ ಎಂಬಂತೆ ಸಂಭವಿಸಿತು.

*****



(Release ID: 1878376) Visitor Counter : 136