ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಭಾರತದ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಗೋವಾದಲ್ಲಿ ಅದ್ದೂರಿ ಚಾಲನೆ


ಭಾರತವನ್ನು ಸಿನಿಮಾ ಚಿತ್ರೀಕರಣ ಮತ್ತು ಚಿತ್ರೀಕರಣ ನಂತರದ ಕೆಲಸಗಳಿಗಾಗಿ ಹೆಚ್ಚು ಬೇಡಿಕೆಯಿರುವ ತಾಣವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ: ಕೇಂದ್ರ ಸಚಿವ ಅನುರಾಗ್ ಠಾಕೂರ್
ವರ್ಷದ ಭಾರತೀಯ ಚಲನಚಿತ್ರ ವ್ಯಕ್ತಿ ಪ್ರಶಸ್ತಿಯನ್ನು ನಟ ಚಿರಂಜೀವಿ ಅವರಿಗೆ ನೀಡಲಾಗುವುದು

ಕಲೆ ಮತ್ತು ಸಿನಿಮಾ  ಜಗತ್ತಿನ ಗಡಿಗಳನ್ನು ಐ ಎಫ್‌ ಎಫ್‌ ಐ ಅಳಿಸಿಹಾಕಿದೆ: ವಾರ್ತಾ ಮತ್ತು ಪ್ರಸಾರ ಸಹಾಯಕ ಸಚಿವ ಡಾ. ಎಲ್. ಮುರುಗನ್

ಗೋವಾದಲ್ಲಿ ಶೀಘ್ರದಲ್ಲೇ ಹೊಸ ವಿಶ್ವ ದರ್ಜೆಯ ಮಲ್ಟಿಪ್ಲೆಕ್ಸ್ ಮತ್ತು ಸಮಾವೇಶ ಕೇಂದ್ರ: ಮುಖ್ಯಮಂತ್ರಿ ಪ್ರಮೋದ ಸಾವಂತ್

Posted On: 20 NOV 2022 8:08PM by PIB Bengaluru

ವಿಶ್ವದ ಅತ್ಯುತ್ತಮ ಚಲನಚಿತ್ರಗಳು ಮತ್ತು ಅವುಗಳ ನಿರ್ಮಾತೃಗಳನ್ನು ಒಂದೇ ಸೂರಿನಡಿಯಲ್ಲಿ ಮತ್ತೊಮ್ಮೆ ಒಗ್ಗೂಡಿಸಿರುವ 53 ನೇ ಆವೃತ್ತಿಯ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ಇಂದು ನವೆಂಬರ್ 20 ರಂದು ಗೋವಾದ ಪಣಜಿಯಲ್ಲಿರುವ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಅದ್ದೂರಿ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಯಿತು. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ ಮತ್ತು ಗೋವಾದ ಎಂಟರ್‌ಟೈನ್‌ಮೆಂಟ್ ಸೊಸೈಟಿ ಜಂಟಿಯಾಗಿ ಆಯೋಜಿಸಿರುವ ಈ ಸಿನಿಮಾ ಉತ್ಸವದಲ್ಲಿ 79 ದೇಶಗಳ 280 ಚಲನಚಿತ್ರಗಳು ಪ್ರದರ್ಶನವಾಗುತ್ತಿವೆ. 25 ಫೀಚರ್‌ ಮತ್ತು 20 ನಾನ್‌ ಫೀಚರ್‌  ಚಲನಚಿತ್ರಗಳನ್ನು ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶಿಸಲಾಗುತ್ತದೆ.

ಒಂಬತ್ತು ದಿನಗಳ ಶ್ರೇಷ್ಠ ಸಿನಿಮಾ ಯಾನವನ್ನು ದೀಪವನ್ನು ಬೆಳಗಿಸಿ ಉದ್ಘಾಟಿಸಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್, ಭಾರತವನ್ನು ಚಲನಚಿತ್ರ ಚಿತ್ರೀಕರಣ ಮತ್ತು ಚಿತ್ರೀಕರಣ ನಂತರದ ಕೆಲಸಗಳಿಗೆ ನಮ್ಮ ಜನರ ಪ್ರತಿಭೆ ಮತ್ತು ನಮ್ಮ ಉದ್ಯಮದ ನಾಯಕರ ನಾವೀನ್ಯತೆಯ ಬೆಂಬಲದೊಂದಿಗೆ ಹೆಚ್ಚು ಬೇಡಿಕೆಯಿರುವ ತಾಣವನ್ನಾಗಿ ಮಾಡುವುದು ತಮ್ಮ ಗುರಿಯಾಗಿದೆ ಎಂದು ಹೇಳಿದರು. “ಐಎಫ್‌ಎಫ್‌ಐ ಗೆ ನನ್ನ ದೃಷ್ಟಿ ಒಂದು ಕಾರ್ಯಕ್ರಮಕ್ಕೆ ಸೀಮಿತವಾಗಿಲ್ಲ, ಬದಲಿಗೆ ಭಾರತವು ತನ್ನ ಸ್ವಾತಂತ್ರ್ಯದ 100 ನೇ ವರ್ಷವನ್ನು ಆಚರಿಸುವಾಗ ಅಮೃತ ಮಹೋತ್ಸವದಿಂದ ಅಮೃತಕಾಲಕ್ಕೆ ಪರಿವರ್ತನೆಯಾದಾಗ ಐಎಫ್‌ಎಫ್‌ಐ ಹೇಗಿರಬೇಕು ಎಂಬ ಬಗ್ಗೆ,  ಹೆಚ್ಚು ಪ್ರಾದೇಶಿಕ ಉತ್ಸವಗಳ ಮೂಲಕ ಭಾರತವನ್ನು ಕಂಟೆಂಟ್ ರಚನೆಯ ಶಕ್ತಿ ಕೇಂದ್ರವನ್ನಾಗಿ ಮಾಡುವ ಬಗ್ಗೆ ಗುರಿಯನ್ನು ಹೊಂದಿದ್ದೇವೆ ಎಂದು ಅವರು ವಿವರಿಸಿದರು.

53ನೇ ಐಎಫ್‌ಎಫ್‌ಐ ಅಸಂಖ್ಯಾತ ರೋಮಾಂಚಕ ಸಂಸ್ಕೃತಿಗಳ ಸಮ್ಮಿಳನ ಮತ್ತು ಸಿನಿಮೀಯ ಶ್ರೇಷ್ಠತೆಯ ಕೈಗನ್ನಡಿಯಾಗಲಿದೆ ಎಂದು ಶ್ರೀ ಠಾಕೂರ್ ಹೇಳಿದರು. ಐಎಫ್‌ಎಫ್‌ಐ ಯುವ ಮತ್ತು ಸ್ಥಾಪಿತ ಚಲನಚಿತ್ರ ನಿರ್ಮಾಪಕರಿಗೆ ನೆಟ್‌ವರ್ಕ್, ಸಹಯೋಗ ಮತ್ತು ಸಿನಿಮಾ ಪ್ರಪಂಚದ ಅತ್ಯುತ್ತಮವಾದ ಅನುಭವ, ಅನನ್ಯ ಅವಕಾಶಗಳು ಮತ್ತು ಸಾಧ್ಯತೆಗಳನ್ನು ಒದಗಿಸುತ್ತದೆ. ಸಿನಿಮಾ ದೇಶದ ಶ್ರೀಮಂತ ಸಂಸ್ಕೃತಿ, ಪರಂಪರೆ, ಸಂಪ್ರದಾಯ, ಭರವಸೆಗಳು ಮತ್ತು ಕನಸುಗಳು, ಆಕಾಂಕ್ಷೆಗಳು, ಮಹತ್ವಾಕಾಂಕ್ಷೆಗಳು ಮತ್ತು ಮುಖ್ಯವಾಗಿ ಇತಿಹಾಸದ ಯಾವುದೇ ಸಮಯದ ಜನರ ಸಾಮೂಹಿಕ ಪ್ರಜ್ಞೆಯ ಸಂಗಮವನ್ನು ಸೆರೆಹಿಡಿಯುತ್ತದೆ ಎಂದು ಅವರು ಹೇಳಿದರು.

 ಏಷ್ಯಾದ ಅತ್ಯಂತ ಹಳೆಯ ಚಲನಚಿತ್ರೋತ್ಸವದ ಹಾದಿಯನ್ನು ನೆನಪಿಸಿಕೊಂಡ ಅನುರಾಗ್ ಠಾಕೂರ್, ಐಎಫ್‌ಎಫ್‌ಐ ಪರಿಕಲ್ಪನೆಯು ಅದರ 'ವಸುಧೈವ ಕುಟುಂಬಕಂ' ಎಂಬ ಧ್ಯೇಯದಲ್ಲಿಯೇ ಬೇರೂರಿದೆ, ಇದು ಜಗತ್ತು ಒಂದೇ ಕುಟುಂಬವಾಗಿರುವ ಶಾಂತಿಯುತ ಸಹಬಾಳ್ವೆಯ ಸಾರವನ್ನು ಒಳಗೊಂಡಿದೆ ಎಂದು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ಹೆಚ್ಚುತ್ತಿರುವ ಭಾರತದ ಜಾಗತಿಕ ಪಾತ್ರ ಮತ್ತು ಜಿ-20 ಅಧ್ಯಕ್ಷ ಸ್ಥಾನವು 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ಧ್ಯೇಯಕ್ಕೆ ಪ್ರತೀಕವಾಗಿದೆ ಎಂದು ಅವರು ಹೇಳಿದರು.

ಮೊದಲ ಬಾರಿಗೆ ಭಾರತೀಯ, ಜಾಗತಿಕ ಸಿನಿಮಾ ಮತ್ತು ಒಟಿಟಿ ಪ್ರೀಮಿಯರ್‌ಗಳು ಐಎಫ್‌ಎಫ್‌ಐನಲ್ಲಿ ನಡೆಯಲಿವೆ, ಇದರಲ್ಲಿ ಜಾಗತಿಕವಾಗಿ ಮೆಚ್ಚುಗೆ ಪಡೆದ ʼಫೌಡಾʼ ಸರಣಿಯ ನಾಲ್ಕನೇ ಸೀಸನ್‌ನ ಮೊದಲ ಪ್ರದರ್ಶನವೂ ಸೇರಿದೆ, ಇದು ವಿಶ್ವದ ಕೆಲವು ದೊಡ್ಡ ಇಸ್ರೇಲಿ ತಾರೆಗಳನ್ನು ಒಳಗೊಂಡಿದೆ. ಈ ಸರಣಿಯ ಮುಂದಿನ ಸೀಸನ್ ಅನ್ನು ಐಎಫ್‌ಎಫ್‌ಐನಲ್ಲಿಯೇ ಮೊದಲು ಪ್ರದರ್ಶಿಸಲಾಗುವುದು ಎಂಬ ವಿಷಯವನ್ನು ಹಂಚಿಕೊಳ್ಳಲು ಬಯಸುತ್ತೇನೆ ಎಂದು ಸಚಿವರು ಹೇಳಿದರು.

ಫ್ರಾನ್ಸ್ನೊಂದಿಗಿನ ನಮ್ಮ ದೃಢವಾದ ಸಂಬಂಧವನ್ನು ಗೌರವಿಸಲುಕಂಟ್ರಿ ಆಫ್‌ ಫೋಕಸ್ʼ

ಐಎಫ್‌ಎಫ್‌ಐನಲ್ಲಿ ಕಂಟ್ರಿ ಆಫ್ ಫೋಕಸ್ ಅಧಿವೇಶನದ ಬಗ್ಗೆ ಮಾತನಾಡಿದ ಸಚಿವರು, ಈ ವರ್ಷ ಭಾರತ-ಫ್ರಾನ್ಸ್ ಬಾಂಧವ್ಯಕ್ಕೆ 75 ವರ್ಷಗಳಾಗಿದ್ದು, ಎರಡು ರಾಷ್ಟ್ರಗಳ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ನಡುವಿನ ಸಭೆಯಿಂದ ಗುರುತಿಸಲ್ಪಟ್ಟಿದೆ ಮತ್ತು ಈ ವರ್ಷ ಕಾನ್‌ ಚಚಲನಚಿತ್ರೋತ್ಸವದಲ್ಲಿ ಭಾರತವು ʼಕಂಟ್ರಿ ಆಫ್‌ ಆನರ್‌ʼ ಗೌರವಕ್ಕೆ ಪಾತ್ರವಾಯಿತು ಎಂದು ಹೇಳಿದರು. 75 ನೇ ಕಾನ್‌ ಚಲನಚಿತ್ರೋತ್ಸವದಲ್ಲಿ ಭಾರತದ 'ಕಂಟ್ರಿ ಆಫ್ ಆನರ್' ನ ಉತ್ಸಾಹವನ್ನು ಮುಂದುವರೆಸುತ್ತಾ, ಐಎಫ್‌ಎಫ್‌ಐನ 53 ನೇ ಆವೃತ್ತಿಯಲ್ಲಿ 'ಕಂಟ್ರಿ ಆಫ್ ಫೋಕಸ್' ಆಗಿ ಫ್ರಾನ್ಸ್ ಅನ್ನು ಸ್ವಾಗತಿಸಲು ನಾನು ಸಂತೋಷಪಡುತ್ತೇನೆ  ಎಂದು ಠಾಕೂರ್ ಹೇಳಿದರು.

ಭವಿಷ್ಯದ 75 ಸೃಜನಶೀಲ ಮನಸ್ಸುಗಳುʼಎರಡನೇ ಆವೃತ್ತಿ

ಎರಡನೇ ಆವೃತ್ತಿಯ 'ಭವಿಷ್ಯದ 75 ಸೃಜನಶೀಲ ಮನಸ್ಸುಗಳುʼ ಕಠಿಣ ಪ್ರಕ್ರಿಯೆಯ ನಂತರ ಆಯ್ಕೆ ಮಾಡಲಾಗಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವರು ಹೇಳಿದರು. ಜೀವಮಾನ ಪ್ರಶಸ್ತಿ ಪುರಸ್ಕೃತರು, ಎನ್‌ಎಫ್‌ಎ, ಗ್ರ್ಯಾಮಿ ಮತ್ತು ಆಸ್ಕರ್ ವಿಜೇತರನ್ನು ಒಳಗೊಂಡ ಪ್ರಖ್ಯಾತ ತೀರ್ಪುಗಾರರ ತಂಡವು ಸುಮಾರು 1000 ಪ್ರವೇಶಗಳಿಂದ ನಿರ್ದೇಶನ, ಸಂಪಾದನೆ, ಹಿನ್ನೆಲೆ ಗಾಯನ, ಕಥೆ, ಅನಿಮೇಷನ್ ಮತ್ತು ನಟನೆ ಮುಂತಾದ 10 ವಿಭಾಗಗಳಲ್ಲಿ ಆಯ್ಕೆ ಮಾಡಿದೆ. ಇವರು 19 ರಾಜ್ಯಗಳನ್ನು ಪ್ರತಿನಿಧಿಸುತ್ತಿದ್ದು, ಜೈನ್ತಿಯಾ ಹಿಲ್ಸ್ (ಮೇಘಾಲಯ), ಲಖಿಂಪುರ (ಅಸ್ಸಾಂ), ಖೋರ್ದಾ (ಒಡಿಸ್ಸಾ) ದಂತಹ ಸ್ಥಳಗಳಿಂದ ಬಂದಿದ್ದಾರೆ ಮತ್ತು ಇವರ ಪೈಕಿ 18 ವರ್ಷದ ಅತ್ಯಂತ ಕಿರಿಯರು ಇದ್ದಾರೆ ಎಂದು  ಸಚಿವರು ಹೇಳಿದರು.

ಈ ವರ್ಷ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ಗೆದ್ದಿರುವ ಸ್ಪ್ಯಾನಿಷ್ ಚಲನಚಿತ್ರ ನಿರ್ದೇಶಕ ಕಾರ್ಲೋಸ್ ಸೌರಾ ಅವರನ್ನು ಸಚಿವರು ಅಭಿನಂದಿಸಿದರು. ದಕ್ಷಿಣ ಭಾರತದ ನಟ ಚಿರಂಜೀವಿ ಅವರಿಗೆ ವರ್ಷದ ಭಾರತೀಯ ಚಲನಚಿತ್ರ ವ್ಯಕ್ತಿ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಸಚಿವರು ಘೋಷಿಸಿದರು. ಐಎಫ್‌ಎಫ್‌ಐನ ಈ ಆವೃತ್ತಿಯು 50 ವರ್ಷಗಳ ಮಣಿಪುರಿ ಸಿನೆಮಾವನ್ನು ಸ್ಮರಿಸುತ್ತದೆ. ವಿಶೇಷವಾಗಿ ಕ್ಯುರೇಟೆಡ್ ಪ್ಯಾಕೇಜ್‌ನಲ್ಲಿ ಗಮನಾರ್ಹವಾದ ಫೀಚರ್‌ ಮತ್ತು ನಾನ್‌ ಫೀಚರ್‌ ಮಣಿಪುರಿ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ಅವರು ಹೇಳಿದರು.

ಐಎಫ್‌ಎಫ್‌ಐ ಸಂದರ್ಭದಲ್ಲಿ ಏರ್ಪಡಿಸಲಾಗುತ್ತಿರುವ ಫಿಲ್ಮ್ ಬಜಾರ್‌ನ ಪ್ರಾಮುಖ್ಯತೆಯ ಬಗ್ಗೆಯೂ ಶ್ರೀ ಅನುರಾಗ್ ಠಾಕೂರ್ ಗಮನಸೆಳೆದರು. ಮೊದಲ ಬಾರಿಗೆ, ಐಎಫ್‌ಎಫ್‌ಐ ಕಂಟ್ರಿ ಪೆವಿಲಿಯನ್‌ಗಳನ್ನು ಪರಿಚಯಿಸುವ ಮೂಲಕ ಫಿಲ್ಮ್ ಬಜಾರ್‌ನ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ. ಫಿಲ್ಮ್ ಬಜಾರ್‌ನ 15 ನೇ ಆವೃತ್ತಿಯಲ್ಲಿ ಪ್ರದರ್ಶಿಸಲಾಗುವ 40 ಕ್ಕೂ ಹೆಚ್ಚು ಪೆವಿಲಿಯನ್‌ಗಳಿಗೆ ಭೇಟಿ ನೀಡುವಂತೆ ನಾನು ನಿಮ್ಮನ್ನು ಆಹ್ವಾನಿಸುತ್ತೇನೆ. ಸಿನಿಮಾ ಜಗತ್ತಿನ ಇತ್ತೀಚಿನ ಆವಿಷ್ಕಾರಗಳನ್ನು ಪ್ರದರ್ಶಿಸಲು ಮೊದಲ ಬಾರಿಗೆ ಐಎಫ್‌ಎಫ್‌ಐ ತಂತ್ರಜ್ಞಾನ ಕೇಂದ್ರವನ್ನು ಹೊಂದಿದೆ ಎಂದು ಸಚಿವರು ಹೇಳಿದರು.

ಸೇರ್ಪಡೆಯ ಐಎಫ್ಎಫ್ 

ಚಲನಚಿತ್ರೋತ್ಸವವನ್ನು ಹೆಚ್ಚು ಒಳಗೊಳ್ಳುವ ಮತ್ತು ಎಲ್ಲರಿಗೂ ಪ್ರವೇಶಿಸುವಂತೆ ಮಾಡಲು, ದಿವ್ಯಾಂಗರಿಗೆ (ವಿಶೇಷ ಚೇತನರಿಗೆ) ವಿಶೇಷ ಅವಕಾಶಗಳನ್ನು ಮಾಡಲಾಗಿದೆ ಎಂದು ಠಾಕೂರ್ ಹೇಳಿದರು. ಅವರ ಪ್ರವೇಶಕ್ಕೆ ಬೇಕಾದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಈ ವಿಭಾಗದಲ್ಲಿನ ಚಲನಚಿತ್ರಗಳು ಆಡಿಯೋ-ದೃಶ್ಯ-ಸಜ್ಜಿತವಾಗಿದ್ದು, ಎಂಬೆಡೆಡ್ ಆಡಿಯೋ ವಿವರಣೆಗಳು ಮತ್ತು ಉಪಶೀರ್ಷಿಕೆಗಳೊಂದಿಗೆ ಇರುತ್ತವೆ. ಭಾರತೀಯ ಸಿನಿಮಾ ಮತ್ತು ಟೆಲಿವಿಷನ್ ಸಂಸ್ಥೆ (FTII) ವಿಶೇಷ ಚೇತನರಿಗೆ ಎರಡು ವಿಶೇಷ ಕೋರ್ಸ್‌ಗಳನ್ನು ಏರ್ಪಡಿಸಿದೆ. ಆಟಿಸಂ ವ್ಯಕ್ತಿಗಳಿಗಾಗಿ 'ಸ್ಮಾರ್ಟ್‌ಫೋನ್ ಫಿಲ್ಮ್ ಮೇಕಿಂಗ್' ಮತ್ತು ಗಾಲಿಕುರ್ಚಿ ಬಳಸುವವರಿಗಾಗಿ 'ಸ್ಕ್ರೀನ್ ಆಕ್ಟಿಂಗ್' ನ ಮೂಲಭೂತ ಕೋರ್ಸ್ ಅನ್ನು ಆಯೋಜಿಸಲಾಗಿದೆ  ಎಂದು ಅವರು ಮಾಹಿತಿ ನೀಡಿದರು.

ಕಲೆ ಮತ್ತು ಸಿನಿಮಾ ಜಗತ್ತಿನ ಗಡಿಗಳನ್ನು ಅಳಿಸಿಹಾಕುವ ಐಎಫ್ಎಫ್

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಸಹಾಯಕ ಸಚಿವ ಡಾ. ಎಲ್ ಮುರುಗನ್ ಅವರು ಮಾತನಾಡಿ, ಕೋವಿಡ್ ನಂತರ ಐಎಫ್‌ಎಫ್‌ಐನ ಈ 53 ನೇ ಆವೃತ್ತಿಯು ತನ್ನ ರೋಮಾಂಚಕ ಹಬ್ಬದ ಅವತಾರಕ್ಕೆ ಮರಳಲಿದೆ ಎಂದು ಹೇಳಿದರು. ಐಎಫ್‌ಎಫ್‌ಐ ಕಲೆ ಮತ್ತು ಸಿನಿಮಾ ಪ್ರಪಂಚದಲ್ಲಿನ ಗಡಿಗಳನ್ನು ಅಳಿಸಿಹಾಕುತ್ತಿದೆ ಮತ್ತು ವಿಭಿನ್ನ ಚಲನಚಿತ್ರ ಸಂಸ್ಕೃತಿಗಳು ಪರಸ್ಪರ ತೊಡಗಿಸಿಕೊಳ್ಳಲು ಮತ್ತು ಸಹಯೋಗದ ಸಾಧ್ಯತೆಗಳನ್ನು ಅನ್ವೇಷಿಸಲು ಅನುವು ಮಾಡಿಕೊಡುತ್ತದೆ. ನಮ್ಮ ಪ್ರಧಾನ ಮಂತ್ರಿಯವರು ಐಎಫ್‌ಎಫ್‌ಐ ಅನ್ನು ವಿವಿಧ ರಾಷ್ಟ್ರಗಳು ಮತ್ತು ಸಮಾಜಗಳ ಪ್ರತಿನಿಧಿಗಳ ನಡುವೆ ಸಮನ್ವಯವನ್ನು ಉತ್ತೇಜಿಸುವ ಚಲನಚಿತ್ರೋತ್ಸವ ಎಂದು ಬಣ್ಣಿಸಿದ್ದಾರೆ. ಐಎಫ್‌ಎಫ್‌ಐನ ಈ ಆವೃತ್ತಿಯು ಚಲನಚಿತ್ರ ಪ್ರೇಮಿಗಳು ಬಯಸುವ ಎಲ್ಲವನ್ನೂ ಹೊಂದಿದೆ. 75 ಕ್ರಿಯೇಟಿವ್ ಯಂಗ್ ಮೈಂಡ್ಸ್, ಮಾಸ್ಟರ್‌ಕ್ಲಾಸ್‌ಗಳು, ಬಾಕ್ಸ್ ಆಫೀಸ್ ಫ್ಲೇವರ್, ಫಿಲ್ಮ್ ಬಜಾರ್ ಮತ್ತು ಗ್ಲೋಬಲ್ ಸಿನಿಮಾ ಇದರಲ್ಲಿವೆ ಎಂದು ಅವರು ಹೇಳಿದರು.

ಸಹ-ನಿರ್ಮಾಣ ಒಪ್ಪಂದಗಳಿಗೆ ಪ್ರೋತ್ಸಾಹ, ಏಕ ಗವಾಕ್ಷಿ ಅನುಕೂಲ, ಬೃಹತ್ ಎವಿಜಿಸಿ (ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್) ಸಾಮರ್ಥ್ಯ ಬಳಕೆ ಮುಂತಾದ ವಿವಿಧ ಉಪಕ್ರಮಗಳ ಮೂಲಕ ಭಾರತವನ್ನು ವಿಶ್ವದ ಕಂಟೆಂಟ್‌ ಉತ್ಪಾದನಾ ಕೇಂದ್ರವನ್ನಾಗಿ ವಾರ್ತಾ ಮತ್ತು ಪ್ರಸಾರ ಸಚಿವರು ಮುಂದಾಳತ್ವ ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು. ಮತ್ತು ಕಾಮಿಕ್) ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಯಾಗಿರುವ ಸ್ಪ್ಯಾನಿಷ್ ನಿರ್ದೇಶಕ ಕಾರ್ಲೋಸ್ ಸೌರಾ ಅವರನ್ನು ಸಚಿವರು ಅಭಿನಂದಿಸಿದರು. ದಿವಂಗತ ಮನೋಹರ್ ಪರಿಕ್ಕರ್ ಅವರ ನಾಯಕತ್ವದಲ್ಲಿ ಮತ್ತು ಈಗ ಮುಖಯಮಂತ್ರಿ ಪ್ರಮೋದ್‌ ಸಾವಂತ್ ಅವರ ನೇತೃತ್ವದಲ್ಲಿ ಐಎಫ್‌ಎಫ್‌ಐನ ಯಶಸ್ಸಿಗೆ ಗೋವಾ ರಾಜ್ಯ ನೀಡಿದ ಮಹತ್ತರ ಕೊಡುಗೆಯನ್ನು ಸಚಿವರು ಶ್ಲಾಘಿಸಿದರು.

ಗೋವಾದಲ್ಲಿ ಶೀಘ್ರದಲ್ಲೇ ಹೊಸ ವಿಶ್ವ ದರ್ಜೆಯ ಮಲ್ಟಿಪ್ಲೆಕ್ಸ್ ಮತ್ತು ಸಮಾವೇಶ ಕೇಂದ್ರ

ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ನೆರೆದಿದ್ದ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಗೋವಾ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್, ಗೋವಾದಲ್ಲಿ ವಿಶ್ವ ದರ್ಜೆಯ ಮಲ್ಟಿಪ್ಲೆಕ್ಸ್ ಮತ್ತು ಸಮಾವೇಶ ಕೇಂದ್ರ ಸ್ಥಾಪನೆ ಅಂತಿಮ ಹಂತದಲ್ಲಿದೆ ಮತ್ತು 2025 ರ ವೇಳೆಗೆ ನಾವು ಹೊಸ ಸ್ಥಳದಲ್ಲಿ ಐಎಫ್‌ಎಫ್‌ಐ ಅನ್ನು ಆಚರಿಸಬಹುದು ಎಂದು ಭರವಸೆ ನೀಡಿದರು. ಚಿತ್ರೋತ್ಸವಕ್ಕೆ ಸ್ಥಳೀಯ ಸ್ವಾದವನ್ನು ಸೇರಿಸುವ ಪ್ರಯತ್ನಗಳನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿಯವರು, ಈ ವರ್ಷ ಐಎಫ್‌ಎಫ್‌ಐನಲ್ಲಿ, ರಾಜ್ಯ ಸರ್ಕಾರವು ಗೋವಾದ ಚಲನಚಿತ್ರ ಸಮುದಾಯಕ್ಕಾಗಿ ವಿಶೇಷ ಮಾಸ್ಟರ್‌ಕ್ಲಾಸ್‌ಗಳನ್ನು ನಡೆಸುವ ಉಪಕ್ರಮವನ್ನು ತೆಗೆದುಕೊಂಡಿದೆ, ಇದರಲ್ಲಿ ಹಿಂದಿ ಮತ್ತು ಮರಾಠಿ ಚಲನಚಿತ್ರಗಳ ಹೆಸರಾಂತರು ಭಾಗವಹಿಸಲಿದ್ದಾರೆ ಎಂದರು. ಗೋವಾದ ವಿಭಾಗವನ್ನು ಈ ವರ್ಷ ವಿಶೇಷವಾಗಿ ಆಯೋಜಿಸಲಾಗಿದೆ. ಭಾರತೀಯ ಪನೋರಮಾದಿಂದ ಮೂವರು ತೀರ್ಪುಗಾರರನ್ನು ಒಳಗೊಂಡ ವಿಶೇಷ ತಂಡವು ಆರು ಕಿರುಚಿತ್ರಗಳು ಮತ್ತು ಒಂದು ಸಾಕ್ಷ್ಯಚಿತ್ರವನ್ನು ಆಯ್ಕೆ ಮಾಡಿದ್ದಾರೆ. ಫೆಸ್ಟಿವಲ್ ಮೈಲ್, ಮನರಂಜನಾ ವಲಯ ಮತ್ತು ಪಾರಂಪರಿಕ ಮೆರವಣಿಗೆಯಂತಹ ವಿವಿಧ ಬಾಹ್ಯ ಚಟುವಟಿಕೆಗಳ ಮೂಲಕ ಪ್ರವಾಸಿಗರು ಮತ್ತು ಗೋವಾದ ಸಾರ್ವಜನಿಕರ ಗಮನ ಸೆಳೆಯಲು ನಮಗೆ ಸಾಧ್ಯವಾಗಿದೆ ಎಂದು ಅವರು ಹೇಳಿದರು. ಗೋವಾದಾದ್ಯಂತ ಕಾರವಾನ್‌ಗಳನ್ನು ನಿಯೋಜಿಸಲಾಗುವುದು ಮತ್ತು ಸಾರ್ವಜನಿಕರಿಗೆ ಪ್ರದರ್ಶನಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದರು. ಕಾರ್ಯಕ್ರಮವನ್ನು ಇನ್ನಷ್ಟು ಒಳಗೊಳ್ಳುವ ಉದ್ದೇಶದಿಂದ ದಿವ್ಯಾಂಗರಿಗಾಗಿ ವಿಶೇಷ ಚಲನಚಿತ್ರ ಪ್ರದರ್ಶನವನ್ನು ಸಹ ಆಯೋಜಿಸಲಾಗಿದೆ ಎಂದು ಅವರು ಹೇಳಿದರು. ಮಾಜಿ ಮುಖ್ಯಮಂತ್ರಿ ದಿವಂಗತ ಮನೋಹರ್ ಪರಿಕ್ಕರ್ ಅವರ ಪ್ರಯತ್ನಗಳು ಗೋವಾವನ್ನು ಐಎಫ್‌ಎಫ್‌ಐಗೆ ಶಾಶ್ವತ ಸ್ಥಳವನ್ನಾಗಿ ಮಾಡಿದವು ಎಂದು ಶ್ರೀ ಪ್ರಮೋದ್ ಸಾವಂತ್ ನೆನಪಿಸಿಕೊಂಡರು.

ಅತಿಥಿಗಳನ್ನು ಸ್ವಾಗತಿಸಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ ಅವರು, ಐಎಫ್‌ಎಫ್‌ಐ ಭಾರತೀಯ ಚಲನಚಿತ್ರೋದ್ಯಮವು ಪ್ರಪಂಚದ ಮುಂದೆ ತನ್ನ ಅತ್ಯುತ್ತಮ ಸಿನಿಮಾಗಳನ್ನು ಪ್ರದರ್ಶಿಸಲು ಮತ್ತು ವಿಶ್ವದ ಇತರ ಭಾಗಗಳ ಸಿನಿಮಾದಲ್ಲಿನ ಉತ್ತಮ ಅಭ್ಯಾಸಗಳನ್ನು ಬರಮಾಡಿಕೊಳ್ಳಲು ಒಂದು ವೇದಿಕೆಯಾಗಿದೆ ಎಂದು ಹೇಳಿದರು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ವಿಶೇಷ ಸಂದೇಶವನ್ನೂ ಕಾರ್ಯದರ್ಶಿಯವರು ಓದಿದರು. “ಭಾರತದ ಅತಿದೊಡ್ಡ ಚಲನಚಿತ್ರೋತ್ಸವವಾಗಿ, ಸಿನಿಮಾದಿಂದ ಒಂದಾಗಿರುವ ವಿವಿಧ ರಾಷ್ಟ್ರಗಳು ಮತ್ತು ಸಮಾಜಗಳ ಪ್ರತಿನಿಧಿಗಳ ನಡುವೆ ಐಎಫ್‌ಎಫ್‌ಐ ಒಂದು ಪ್ರೋತ್ಸಾಹದಾಯಕ ಸಮನ್ವಯವನ್ನು ಉತ್ತೇಜಿಸುತ್ತದೆ " ಎಂದು ಪ್ರಧಾನಿಯವರು ಸಂದೇಶ ನೀಡಿದ್ದಾರೆ.

ಗೋವಾ ಸರ್ಕಾರದ ಮುಖ್ಯ ಕಾರ್ಯದರ್ಶಿ ಪುನೀತ್ ಕುಮಾರ್ ಗೋಯೆಲ್, ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರವೀಂದರ್ ಭಾಕರ್ ಮತ್ತು ಇತರ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಮೃಣಾಲ್ ಠಾಕೂರ್, ವರುಣ್ ಧವನ್, ಕ್ಯಾಥರೀನ್ ತೆರೇಸಾ, ಸಾರಾ ಅಲಿ ಖಾನ್, ಕಾರ್ತಿಕ್ ಆರ್ಯನ್ ಮತ್ತು ಅಮೃತಾ‌ ಖಾನ್ವಿಲ್ಕರ್ ಮುಂತಾದ ಸಿನಿ ತಾರೆಯರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

*****

 (Release ID: 1877601) Visitor Counter : 33