ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಇಂದು ನವದೆಹಲಿಯಲ್ಲಿ ನಡೆದ 3ನೇ “ನೋ ಮನಿ ಫಾರ್ ಟೆರರ್”  (ಭಯೋತ್ಪಾದನೆಗೆ ಹಣಪೂರೈಕೆ ಇಲ್ಲ)  ಸಮ್ಮೇಳನದ (ಭಯೋತ್ಪಾದನೆಗಾಗಿ  ಹಣಪೋರೈಕೆಯ ನಿಗ್ರಹ) ಸಮಾರೋಪ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಸಮಾರೋಪ ಭಾಷಣ

Posted On: 19 NOV 2022 4:42PM by PIB Bengaluru

ಸ್ನೇಹಿತರೇ,

ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ, ನವದೆಹಲಿಯಲ್ಲಿ ನಡೆಯುತ್ತಿರುವ “ನೋ ಮನಿ ಫಾರ್ ಟೆರರ್”  ಎಂಬ 3 ನೇ ಸಚಿವರ ಸಮ್ಮೇಳನದ ಸಮಾರೋಪ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲು ನನಗೆ ಅಪಾರ ಸಂತೋಷವಾಗುತ್ತಿದೆ.

ಮೊದಲನೆಯದಾಗಿ, ವಿವಿಧ ದೇಶಗಳ ನಿಯೋಗಗಳು ಮತ್ತು ಪ್ರಪಂಚದಾದ್ಯಂತದ ಬಹುಪಕ್ಷೀಯ ಸಂಸ್ಥೆಗಳು ಭಾಗವಹಿಸಿದ್ದಕ್ಕಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ.

ಈ ಎರಡು ದಿನಗಳಲ್ಲಿ, ಪ್ರತಿನಿಧಿಗಳು ಭಯೋತ್ಪಾದನೆಗೆ ಹಣಕಾಸು ಒದಗಿಸುವಲ್ಲಿ ಕಾಣಿಸಿಕೊಳ್ಳುತ್ತಿರುವ ಪ್ರವೃತ್ತಿಗಳು, ಹೊಸ   ಹಣಕಾಸು ತಂತ್ರಜ್ಞಾನಗಳ ದುರುಪಯೋಗ ಮತ್ತು ಭಯೋತ್ಪಾದಕತೆಗೆ ಹಣಕಾಸು ಕ್ಷೇತ್ರದಲ್ಲಿನ ಅಂತರಾಷ್ಟ್ರೀಯ ಸಹಕಾರವನ್ನು ಪರಿಣಾಮಕಾರಿಯಾಗಿ ' ಭಯೋತ್ಪಾದನೆಗೆ ಹಣಪೂರೈಕೆ ಇಲ್ಲ’ ಎಂಬ ನಮ್ಮ ಉದ್ದೇಶವನ್ನು ಸಾಧಿಸಲು ಚರ್ಚಿಸಿದರು.  ಮುಂದಿನ ದಿನಗಳಲ್ಲಿ ಈ ಚರ್ಚೆಯನ್ನು ಕಾರ್ಯತಂತ್ರದ ಚಿಂತನೆಗೆ ರೂಪಿಸಲು ಇದು ಸಹಾಯ ಮಾಡುತ್ತದೆ.

ಭಯೋತ್ಪಾದನೆಯ ಹಣಕಾಸು ವಿರುದ್ಧದ ಹೋರಾಟದ ಪ್ರಸ್ತುತ ಅಂತರರಾಷ್ಟ್ರೀಯ ಆಡಳಿತದ ಪರಿಣಾಮಕಾರಿತ್ವವನ್ನು ಚರ್ಚಿಸಲು ಮತ್ತು ಭವಿಷ್ಯದ ಸವಾಲುಗಳಿಗೆ ಪರಿಹಾರಗಳನ್ನು ಚರ್ಚಿಸಲು ಭಾಗವಹಿಸುವ ದೇಶಗಳು ಮತ್ತು ಸಂಸ್ಥೆಗಳಿಗೆ ಇದು ಒಂದು ಅನನ್ಯ ವೇದಿಕೆಯಾಗಿದೆ.

ಭಯೋತ್ಪಾದನೆಯು ಇಂದು ಅಸಾಧಾರಣ ರೂಪವನ್ನು ಪಡೆದುಕೊಂಡಿದೆ, ಅದರ ಪರಿಣಾಮಗಳು ಪ್ರತಿ ಹಂತದಲ್ಲೂ ಗೋಚರಿಸುತ್ತವೆ.

ನಾನು ಬಲವಾಗಿ ನಂಬುತ್ತೇನೆ,

"ಭಯೋತ್ಪಾದನೆಯು ಪ್ರಜಾಪ್ರಭುತ್ವ, ಮಾನವ ಹಕ್ಕುಗಳು, ಆರ್ಥಿಕ ಪ್ರಗತಿ ಮತ್ತು ವಿಶ್ವ ಶಾಂತಿಯ ದೊಡ್ಡ ಶತ್ರುವಾಗಿದೆ, ಅದನ್ನು ನಾವು ಯಶಸ್ವಿಯಾಗಲು ಬಿಡುವುದಿಲ್ಲ"

ಯಾವುದೇ ದೇಶ ಅಥವಾ ಸಂಘಟನೆಯು ಏಕಾಂಗಿಯಾಗಿ ಭಯೋತ್ಪಾದನೆಯನ್ನು ಯಶಸ್ವಿಯಾಗಿ ಎದುರಿಸಲು ಸಾಧ್ಯವಿಲ್ಲ! ಹೆಚ್ಚುತ್ತಿರುವ ಸಂಕೀರ್ಣ ಮತ್ತು  ಗಡಿಗಳಿಗೆ ಸೀಮಿತವಾಗದ ಬೆದರಿಕೆಯ ವಿರುದ್ಧ ಅಂತರರಾಷ್ಟ್ರೀಯ ಸಮುದಾಯವು ಜೊತೆಯಾಗಿ ಹೋರಾಟವನ್ನು ಮುಂದುವರೆಸಬೇಕು.

ಕಳೆದ ಕೆಲವು ದಶಕಗಳಲ್ಲಿ ಭಾರತವು ಭಯೋತ್ಪಾದನೆ ಸೇರಿದಂತೆ ಹಲವು ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಿದೆ. ಭಯೋತ್ಪಾದನೆಯ ವಿರುದ್ಧ ಭಾರತದ ಶೂನ್ಯ ಸಹಿಷ್ಣುತೆಯ ನೀತಿ, ಭಯೋತ್ಪಾದನಾ ನಿಗ್ರಹ ಕಾನೂನುಗಳ ಬಲವಾದ ಚೌಕಟ್ಟು ಮತ್ತು ಸಂಬಂಧಪಟ್ಟ ಸಂಸ್ಥೆಗಳ ಸಬಲೀಕರಣದೊಂದಿಗೆ, ಭಾರತವು ಭಯೋತ್ಪಾದನೆಯ ಘಟನೆಗಳಲ್ಲಿ ಗಮನಾರ್ಹವಾದ ಕಡಿತವನ್ನು ಕಂಡಿದೆ ಮತ್ತು ಭಯೋತ್ಪಾದನೆಯ ಪ್ರಕರಣಗಳಲ್ಲಿ ಕಠಿಣ ಶಿಕ್ಷೆಯನ್ನು ಖಾತರಿಪಡಿಸುವಲ್ಲಿ ಯಶಸ್ವಿಯಾಗಿದೆ.

ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ತನಿಖೆಯನ್ನು ಸಜ್ಜುಗೊಳಿಸುವ ಉದ್ದೇಶದಿಂದ ವಿಧಿ ವಿಜ್ಞಾನವನ್ನು ಉತ್ತೇಜಿಸಲಾಗುತ್ತಿದೆ. ಈ ದಿಸೆಯಲ್ಲಿ ಪ್ರಧಾನಮಂತ್ರಿ ಮೋದಿಯವರ ದೂರದೃಷ್ಟಿಯಿಂದ ವಿಶ್ವದ ಮೊದಲ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ.

ಭಯೋತ್ಪಾದನೆ, ಮಾದಕ ದ್ರವ್ಯ ಮತ್ತು ಆರ್ಥಿಕ ಅಪರಾಧಗಳಂತಹ ಅಪರಾಧಗಳ ಕುರಿತು ರಾಷ್ಟ್ರೀಯ ಮತ್ತು ಜಾಗತಿಕ ದತ್ತಾಂಶಗಳನ್ನು ಅಭಿವೃದ್ಧಿಪಡಿಸಲು ಸಹ ಭಾರತ ಸರ್ಕಾರ ನಿರ್ಧರಿಸಿದೆ.

ಸೈಬರ್ ಅಪರಾಧವನ್ನು ಸಮಗ್ರ ರೀತಿಯಲ್ಲಿ ಎದುರಿಸಲು, ಭಾರತ ಸರ್ಕಾರವು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವನ್ನು ಸ್ಥಾಪಿಸಿದೆ. "ಭಯೋತ್ಪಾದನೆ ನಿಗ್ರಹ (ಸಿಟಿ) ಮತ್ತು ಭಯೋತ್ಪಾದನೆಗೆ ಹಣಕಾಸು ನೆರವಿನ ನಿಗ್ರಹ (ಸಿಎಫ್‍ ಟಿ)" ಗಾಗಿ ಭಾರತವು ಅಂತರರಾಷ್ಟ್ರೀಯ ಸಹಕಾರದ ಕೇಂದ್ರಬಿಂದುವಾಗಿದೆ ಎನ್ನುವ ಪ್ರಧಾನಮಂತ್ರಿ ಮೋದಿಯವರ ಸಂಕಲ್ಪವನ್ನು ನಾನು ಪುನರುಚ್ಚರಿಸಲು ಬಯಸುತ್ತೇನೆ.

ಎಲ್ಲಾ ರೀತಿಯ ಭಯೋತ್ಪಾದನೆಯ ವಿರುದ್ಧ ಪರಿಣಾಮಕಾರಿ, ದೀರ್ಘಕಾಲೀನ, ಸಂಘಟಿತ ಹೋರಾಟವಿಲ್ಲದೆ ನಾವು ಭಯ-ಮುಕ್ತ ಸಮಾಜ, ಭಯ-ಮುಕ್ತ ಪ್ರಪಂಚದ ಬಗ್ಗೆ ಯೋಚಿಸಲು ಸಾಧ್ಯವಿಲ್ಲ. ನಮ್ಮ ರಾಷ್ಟ್ರಗಳ ನಾಗರಿಕರು ತಮ್ಮ ರಕ್ಷಣೆಯ ದೊಡ್ಡ ಜವಾಬ್ದಾರಿಯನ್ನು ನಾಯಕರಿಗೆ ವಹಿಸಿದ್ದಾರೆ ಮತ್ತು ಈ ಜವಾಬ್ದಾರಿಯನ್ನು ನಿರ್ವಹಿಸುವುದು ನಮ್ಮ ಕರ್ತವ್ಯ.

ಕಳೆದ ಎರಡು ದಶಕಗಳಲ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಈ ಬೆದರಿಕೆಯನ್ನು ಎದುರಿಸಲು ಚೌಕಟ್ಟನ್ನು ಅಭಿವೃದ್ಧಿಪಡಿಸಿದೆ, "ಭಯೋತ್ಪಾದನೆ-ನಿಗ್ರಹ ನಿರ್ಬಂಧಗಳ ಆಡಳಿತ" ವನ್ನು ರಚಿಸುವ ಮುಖ್ಯ ಉದ್ದೇಶವಾಗಿದೆ. ವಿಶ್ವಸಂಸ್ಥೆಯು ಸ್ಥಾಪಿಸಿದ ಈ ವ್ಯವಸ್ಥೆಯು ಭಯೋತ್ಪಾದನೆಯನ್ನು ಸರ್ಕಾರಿ ಧನಸಹಾಯದ ಉದ್ಯಮವನ್ನಾಗಿ ಮಾಡುವ ದೇಶಗಳ ಕ್ರಮಗಳನ್ನು ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿ ನಿಗ್ರಹಿಸಿದೆ. ಆದರೆ ಅದನ್ನು ಮತ್ತಷ್ಟು ಬಲಪಡಿಸಬೇಕು, ಹೆಚ್ಚು ಕಠಿಣ ಮತ್ತು ಪಾರದರ್ಶಕಗೊಳಿಸಬೇಕು.  

ನಮ್ಮ ಮೊದಲ ಬದ್ಧತೆ ಸಹಕಾರವು ಪಾರದರ್ಶಕವಾಗಿರಬೇಕು. ಎಲ್ಲಾ ದೇಶಗಳು, ಎಲ್ಲಾ ಸಂಸ್ಥೆಗಳು, ಗುಪ್ತಚರವನ್ನು ಉತ್ತಮ ಮತ್ತು ಹೆಚ್ಚು ಪರಿಣಾಮಕಾರಿ ರೀತಿಯಲ್ಲಿ ಹಂಚಿಕೊಳ್ಳುವಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ಹೊಂದುವುದಾಗಿ ಪ್ರತಿಜ್ಞೆ ಮಾಡಬೇಕು.

ಭಯೋತ್ಪಾದನೆ ಮತ್ತು ಭಯೋತ್ಪಾದಕ ಗುಂಪುಗಳ ವಿರುದ್ಧ ನಾವು ಈ ಯುದ್ಧವನ್ನು ಪ್ರಪಂಚದ ಪ್ರತಿಯೊಂದು ಜಾಗದಲ್ಲಿ ಮತ್ತು ಪ್ರತಿ ವರ್ಚುವಲ್ ಜಾಗದಲ್ಲಿ ಹೋರಾಡಬೇಕಾಗಿದೆ.

ಇತರ ಉದ್ದೇಶಗಳ ನೆಪದಲ್ಲಿ ಕೆಲವು ಸಂಘಟನೆಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆ ಮತ್ತು ಮೂಲಭೂತವನ್ನು ಉತ್ತೇಜಿಸುವ ಅನೇಕ ನಿದರ್ಶನಗಳಿವೆ. ಈ ಸಂಘಟನೆಗಳು ಭಯೋತ್ಪಾದನೆಗೆ ಹಣಕಾಸು ನೆರವು ನೀಡುವ ಮಾಧ್ಯಮವಾಗುತ್ತಿರುವುದು ಕಂಡುಬಂದಿದೆ. ಇತ್ತೀಚಿಗೆ ಭಾರತ ಸರ್ಕಾರವು ಯುವಕರನ್ನು ಮೂಲಭೂತವಾದಿಗಳನ್ನಾಗಿಸಲು ಮತ್ತು ಅವರನ್ನು ಭಯೋತ್ಪಾದನೆಯತ್ತ ತಳ್ಳಲು ಸಂಚು ರೂಪಿಸಿದ ಸಂಘಟನೆಯನ್ನು ನಿಷೇಧಿಸಿದೆ. ಪ್ರತಿಯೊಂದು ದೇಶವು ಅಂತಹ ಸಂಘಟನೆಗಳನ್ನು ಗುರುತಿಸಬೇಕು ಮತ್ತು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಾನು ನಂಬುತ್ತೇನೆ.

ಕೆಲವು ದೇಶಗಳು, ಅವರ ಸರ್ಕಾರಗಳು ಮತ್ತು ಅವರ ಸಂಸ್ಥೆಗಳು 'ಭಯೋತ್ಪಾದನೆ'ಯನ್ನು ತಮ್ಮ ದೇಶದ ನೀತಿಯನ್ನಾಗಿ ಮಾಡಿಕೊಂಡಿವೆ. ಈ ಭಯೋತ್ಪಾದಕರ ಸ್ವರ್ಗಗಳಲ್ಲಿ, ಕಟ್ಟುನಿಟ್ಟಾದ ಆರ್ಥಿಕ ದಮನದೊಂದಿಗೆ ಅವರ ಅನಿಯಂತ್ರಿತ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು ಅವಶ್ಯಕ. ಪ್ರಪಂಚದ ಎಲ್ಲಾ ದೇಶಗಳು ತಮ್ಮ ಭೌಗೋಳಿಕ-ರಾಜಕೀಯ ಹಿತಾಸಕ್ತಿಗಳನ್ನು ಮೀರಿ ಈ ಬಗ್ಗೆ ಮನಸ್ಸು ಮಾಡಬೇಕಾಗಿದೆ.

ಕೆಲವು ದೇಶಗಳು ಪದೇ ಪದೇ ಭಯೋತ್ಪಾದಕರು ಮತ್ತು ಭಯೋತ್ಪಾದನೆಗೆ ಆಶ್ರಯ ನೀಡುವವರನ್ನು ಬೆಂಬಲಿಸುವುದನ್ನು ನಾವು ಗಮನಿಸುತ್ತೇವೆ. ಭಯೋತ್ಪಾದನೆಗೆ ಅಂತರರಾಷ್ಟ್ರೀಯ ಗಡಿಗಳಿಲ್ಲ ಎಂದು ನಾನು ನಂಬುತ್ತೇನೆ, ಆದ್ದರಿಂದ ಎಲ್ಲಾ ದೇಶಗಳು ರಾಜಕೀಯವನ್ನು ಮೀರಿ ಯೋಚಿಸಬೇಕು ಮತ್ತು ಪರಸ್ಪರ ಸಹಕರಿಸಬೇಕು.

ಅದೇ ಸಮಯದಲ್ಲಿ, ಎಲ್ಲಾ ದೇಶಗಳು 'ಭಯೋತ್ಪಾದನೆ' ಮತ್ತು 'ಭಯೋತ್ಪಾದನೆಗೆ ಹಣಕಾಸು' ಎಂಬ ಸಾಮಾನ್ಯ ವ್ಯಾಖ್ಯಾನವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಇದು ನಮ್ಮ ನಾಗರಿಕರ ರಕ್ಷಣೆ ಮತ್ತು ಅವರ ಮಾನವ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ಸಮಸ್ಯೆಯಾಗಿದೆ, ಇದು ರಾಜಕೀಯ ಸಮಸ್ಯೆಯಾಗಬಾರದು!

ಭಯೋತ್ಪಾದಕರು ಮಾಹಿತಿ ತಂತ್ರಜ್ಞಾನ ಮತ್ತು ಸೈಬರ್‌ಸ್ಪೇಸ್ ಅನ್ನು ಚೆನ್ನಾಗಿ ಅರಿತಿದ್ದಾರೆ. ಅವರು ಸಾರ್ವಜನಿಕರ ಸೂಕ್ಷ್ಮತೆಯನ್ನು ಸಹ ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅವರನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಸೈಬರ್‌ಸ್ಪೇಸ್ ಇಂದು ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಪ್ರಮುಖ ರಣಭೂಮಿಯಾಗಿದೆ.

ಆಯುಧ ತಂತ್ರಜ್ಞಾನದಲ್ಲೂ ಹಲವು ಬದಲಾವಣೆಗಳಾಗಿವೆ. ಈ 21 ನೇ ಶತಮಾನದ ಮಾರಕ ತಂತ್ರಜ್ಞಾನಗಳು ಮತ್ತು ಡ್ರೋನ್ ತಂತ್ರಜ್ಞಾನಗಳು ಈಗ ಭಯೋತ್ಪಾದಕರಿಗೂ ಸಹ ಲಭಿಸುತ್ತಿದೆ.

ನಾರ್ಕೋಟಿಕ್ಸ್, ಕ್ರಿಪ್ಟೋ-ಕರೆನ್ಸಿ ಮತ್ತು ಹವಾಲಾದಂತಹ ಸಂಘಟಿತ ಅಪರಾಧಗಳೊಂದಿಗೆ ಭಯೋತ್ಪಾದನೆಯ ಬೆಳೆಯುತ್ತಿರುವ ಲಿಂಕ್‌ಗಳು ಭಯೋತ್ಪಾದನೆಗೆ ಹಣಕಾಸು ಒದಗಿಸುವ ಸಾಧ್ಯತೆಯನ್ನು ಹೆಚ್ಚಿಸಿವೆ. ಈ ಸಮ್ಮೇಳನದ ಪ್ರಾಥಮಿಕ ಗುರಿಯು ವಿವಿಧ ವಾಹಿನಿಗಳನ್ನು ಗುರುತಿಸುವುದು ಮತ್ತು ಭಯೋತ್ಪಾದಕ ಹಣಕಾಸಿನ ವಿರುದ್ಧ ಪ್ರಾಯೋಗಿಕ ಮತ್ತು ಕಾರ್ಯಸಾಧ್ಯವಾದ ಮಾರ್ಗಸೂಚಿಯನ್ನು ರೂಪಿಸುವುದು.

ವಿಶ್ವ ಹಣಕಾಸು ಸಂಸ್ಥೆ  ಮತ್ತು ವಿಶ್ವ ಬ್ಯಾಂಕ್‌ನ ಅಂದಾಜಿನ ಪ್ರಕಾರ, ಪ್ರಪಂಚದಾದ್ಯಂತದ ಅಪರಾಧಿಗಳು ಪ್ರತಿ ವರ್ಷ ಸುಮಾರು 2ರಿಂದ 4 ಟ್ರಿಲಿಯನ್ ಡಾಲರ್‌ಗಳ ಅಕ್ರಮ ವರ್ಗಾವಣೆ ಮಾಡುತ್ತಾರೆ. ಮತ್ತು ಅದರ ಪ್ರಮುಖ ಭಾಗವು ಭಯೋತ್ಪಾದನೆಗಾಗಿ ಉಪಯೋಗಿಸಲ್ಪಡುತ್ತದೆ.

ಪ್ರಮಾಣ ಮತ್ತು ಸವಾಲುಗಳನ್ನು ಪರಿಗಣಿಸಿ, ಭಯೋತ್ಪಾದನೆ ನಿಗ್ರಹ ಮತ್ತು ಭಯೋತ್ಪಾದಕ ಹಣಕಾಸು ಕ್ಷೇತ್ರಗಳಲ್ಲಿ ಕೆಲಸ ಮಾಡುವ ಸಂಸ್ಥೆಗಳು ಮತ್ತು ಅಧಿಕಾರಿಗಳು ದೀರ್ಘಾವಧಿಯ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಬೇಕು.

ಈ ದೃಷ್ಟಿಕೋನದಲ್ಲಿ, ಇಂದು ನಾನು ಈ ಸಭೆಯ ಗಮನವನ್ನು ಕೆಲವು ಆದ್ಯತೆಯ ವಿಷಯಗಳ ಕಡೆಗೆ ಸೆಳೆಯಲು ಬಯಸುತ್ತೇನೆ:

1. ಹಣಕಾಸಿನ ಜಾಲಗಳಲ್ಲಿ  ಅಜ್ಞಾತವಾಗಿರುವುದರವಿರುದ್ಧ ಹೋರಾಡುವ ಮೂಲಕ ಕಾನೂನು ಹಣಕಾಸು ಸಾಧನಗಳಿಂದ ಮಾರ್ಗ ತಪ್ಪಿಸುವುದನ್ನು ತಡೆಯುವುದು,

2. ಭಯೋತ್ಪಾದಕ ಚಟುವಟಿಕೆಗಳಿಗೆ ಇತರ ಅಪರಾಧಗಳ ಆದಾಯದ ಬಳಕೆಯನ್ನು ನಿರ್ಬಂಧಿಸುವುದು,

3. ಭಯೋತ್ಪಾದಕ ಚಟುವಟಿಕೆಗಳಿಗಾಗಿ ಹೊಸ ಹಣಕಾಸು ತಂತ್ರಜ್ಞಾನಗಳ ಬಳಕೆಯನ್ನು ತಡೆಗಟ್ಟುವುದು, ಕ್ರಿಪ್ಟೋ-ಕರೆನ್ಸಿಗಳು, ವ್ಯಾಲೆಟ್‌ಗಳಂತಹ ವರ್ಚುವಲ್  ಸ್ವತ್ತುಗಳು,

4. ಕಾನೂನುಬಾಹಿರ ಚಾನೆಲ್‌ಗಳು, ನಗದು ಕೊರಿಯರ್‌ಗಳು, ಭಯೋತ್ಪಾದಕ ಜಾಲಗಳಿಂದ ಹವಾಲಾ ಬಳಕೆಯನ್ನು ನಿವಾರಿಸಿ

5. ಭಯೋತ್ಪಾದಕ ಸಿದ್ಧಾಂತವನ್ನು ಹರಡಲು ಲಾಭರಹಿತ ಸಂಸ್ಥೆ, ಎನ್‍ಪಿ ಒಗಳ ವಲಯದ ಬಳಕೆಯನ್ನು ತಡೆಯುವುದು

6. ಎಲ್ಲಾ ದೇಶಗಳ ಭಯೋತ್ಪಾದನೆ ನಿಗ್ರಹ ಮತ್ತು ಹಣಕಾಸು ಗುಪ್ತಚರ ಸಂಸ್ಥೆಗಳ ನಿರಂತರ ಸಾಮರ್ಥ್ಯ ನಿರ್ಮಾಣ.

ಭಯೋತ್ಪಾದನೆಗೆ ಹಣಕಾಸು ಒದಗಿಸುವ ಎಲ್ಲಾ ಹಂತಗಳಲ್ಲಿ ಪ್ರತಿ ಹಂತದಲ್ಲೂ ಅಂದರೆ ನಿಧಿ ಸಂಗ್ರಹಣೆ, ನಿಧಿ ವರ್ಗಾವಣೆ, ಇತರ ಅಪರಾಧಗಳ ಮೂಲಕ ನಗದಿನ ಸ್ವರೂಪ ಬದಲಾಯಿಸುವುದು ಮತ್ತು ಅಂತಿಮವಾಗಿ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸುವುದನ್ನು ಭೇದಿಸಬೇಕಾಗಿದೆ. ಪ್ರತಿ ಹಂತಕ್ಕೂ ಜಾಗತಿಕ ಮಟ್ಟದಲ್ಲಿ "ನಿರ್ದಿಷ್ಟ ಆದರೆ ಸಾಮೂಹಿಕ ವಿಧಾನ" ಅಗತ್ಯವಿರುತ್ತದೆ.

ಎಲ್ಲಾ ದೇಶಗಳು ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್, ಎಫ್‌ಎಟಿಎಫ್ ನಿಗದಿಪಡಿಸಿದ ಮಾನದಂಡಗಳು ಮತ್ತು ಶಿಫಾರಸುಗಳನ್ನು ಕೇವಲ ಕಾಗದದ ಮೇಲೆ ಮಾತ್ರವಲ್ಲದೆ ಉತ್ಸಾಹದಿಂದ ಜಾರಿಗೆ ತರಬೇಕು.

ಭಯೋತ್ಪಾದನೆಯ ಹಣಕಾಸಿನ ವಿರುದ್ಧ ಹೋರಾಡಲು, ನಮ್ಮ ವಿಧಾನವು ಐದು ಸ್ತಂಭಗಳನ್ನು ಆಧರಿಸಿರಬೇಕು ಎಂದು ನಾನು ನಂಬುತ್ತೇನೆ:

1. ಎಲ್ಲಾ ಗುಪ್ತಚರ ಮತ್ತು ತನಿಖಾ ಸಂಸ್ಥೆಗಳ ನಡುವೆ ಸಹಕಾರ, ಸಮನ್ವಯ ಮತ್ತು ಸಹಯೋಗವನ್ನು ಒಳಗೊಂಡ ಸಮಗ್ರ ಮೇಲ್ವಿಚಾರಣಾ ಚೌಕಟ್ಟನ್ನು ಸ್ಥಾಪಿಸುವುದು ಮೊದಲ ಸ್ತಂಭವಾಗಿದೆ.

2. ಎರಡನೇ ಸ್ತಂಭ, "ಟ್ರೇಸ್, ಟಾರ್ಗೆಟ್ ಮತ್ತು ಟರ್ಮಿನೇಟ್" ತಂತ್ರವನ್ನು ಕಡಿಮೆ ಮಟ್ಟದ ಆರ್ಥಿಕ ಅಪರಾಧಗಳಿಂದ ಹೆಚ್ಚು ಸಂಘಟಿತ ಆರ್ಥಿಕ ಅಪರಾಧಗಳಿಗೆ ಅಳವಡಿಸಿಕೊಳ್ಳುವುದು,

3. ಮೂರನೇ ಸ್ತಂಭ, ಭಯೋತ್ಪಾದಕ ಹಣಕಾಸಿಗೆ ಸಂಬಂಧಿಸಿದ ಕಾನೂನು ರಚನೆಗಳನ್ನು ಬಲಪಡಿಸುವುದು ಮತ್ತು ಸಮನ್ವಯಗೊಳಿಸುವುದು,

4. ನಾಲ್ಕನೇ ಸ್ತಂಭ, ನೆಕ್ಸ್ಟ್ ಜೆನ್   ತಂತ್ರಜ್ಞಾನದ ದುರುಪಯೋಗದ ವಿರುದ್ಧ ದೃಢವಾದ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸುವುದು, ಮತ್ತು

5. ಐದನೇ ಸ್ತಂಭ, ಆಸ್ತಿ ಮುಟ್ಟುಗೋಲಿಗೆ ಕಾನೂನು ಮತ್ತು ನಿಯಂತ್ರಕ ಚೌಕಟ್ಟನ್ನು ಬಲಪಡಿಸುವುದು.

ಭಯೋತ್ಪಾದನೆಯನ್ನು ಬೆಂಬಲಿಸುವ ಅಂತರರಾಷ್ಟ್ರೀಯ ಹಣಕಾಸು ಸಾಗಾಣಿಕೆಯನ್ನು ನಿಲ್ಲಿಸಲು, ನಾವು ನಮ್ಮ ನಡುವೆ 'ಗಡಿಯಿಂದಾಚೆಗಿನ ಸಹಕಾರ' ವಿಧಾನವನ್ನು ಸಹ ಒಪ್ಪಿಕೊಳ್ಳಬೇಕು, ಆಗ ಮಾತ್ರ ಈ ವೇದಿಕೆ ಯಶಸ್ವಿಯಾಗುತ್ತದೆ.

ಕೊನೆಯಲ್ಲಿ, ಭಯೋತ್ಪಾದನೆ ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸುವುದರ ವಿರುದ್ಧ ಭಾರತದ ಪರವಾಗಿ ನನ್ನ ಬದ್ಧತೆಯನ್ನು ಪುನರುಚ್ಚರಿಸಲು ನಾನು ಬಯಸುತ್ತೇನೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿಯವರ ನೇತೃತ್ವದಲ್ಲಿ, ಹಣ ವರ್ಗಾವಣೆ, ಡಿಜಿಟಲ್ ಹಣಕಾಸು ವೇದಿಕೆಗಳ ದುರುಪಯೋಗ, ಹವಾಲಾ ಇತ್ಯಾದಿಗಳಂತಹ ಎಲ್ಲಾ ರೂಪಗಳಲ್ಲಿ ಭಯೋತ್ಪಾದನೆಗೆ ಹಣಕಾಸು ಒದಗಿಸುವುದನ್ನು ಎದುರಿಸಲು ಭಾರತವು ಎಲ್ಲಾ ದೇಶಗಳೊಂದಿಗೆ ಕೆಲಸ ಮಾಡಲು ಬದ್ಧವಾಗಿದೆ.

ಚರ್ಚೆಯ ಸಮಯದಲ್ಲಿ, ಭಯೋತ್ಪಾದನೆಗೆ ಹಣಕಾಸು ಒದಗಿಸುವುದನ್ನು ಎದುರಿಸಲು ಜಾಗತಿಕ ಗಮನವನ್ನು ಮುಂದುವರೆಸಲು ಎನ್‍ ಎಂಎಫ್‍ ಟಿಯ ಈ ವಿಶಿಷ್ಟ ಉಪಕ್ರಮದ ಶಾಶ್ವತತೆಯ ಅಗತ್ಯವನ್ನು ಭಾರತವು ಗ್ರಹಿಸಿದೆ. ಕಾಯಂ ಸಂಸ್ಥೆಯ ಸ್ಥಾಪನೆಗೆ ಕಾಲ ಕೂಡಿ ಬಂದಿದೆ.

ಈ ಚಿಂತನೆಯನ್ನು ಮುಂದಕ್ಕೆ ಕೊಂಡೊಯ್ಯುವ ಸಲುವಾಗಿ, ಅಧ್ಯಕ್ಷರ ಹೇಳಿಕೆಯು ದೇಶದಲ್ಲಿ ಶಾಶ್ವತ ಸಚಿವಾಲಯವನ್ನು ಸ್ಥಾಪಿಸುವ ಕೊಡುಗೆಗಳನ್ನು ಒಳಗೊಂಡಿದೆ. ಶೀಘ್ರದಲ್ಲೇ, ಭಾರತವು ಅವರ ಮೌಲ್ಯಯುತವಾದ  ಅಭಿಪ್ರಾಯಗಳಿಗಾಗಿ ಎಲ್ಲಾ ಭಾಗವಹಿಸುವ ವಲಯಗಳಿಗೆ ಚರ್ಚೆಯ ಕಾಗದವನ್ನು ಪ್ರಸಾರ ಮಾಡುತ್ತದೆ.

ಭಾಗವಹಿಸುವ ಎಲ್ಲಾ ವಲಯಗಳಿಗೆ ಶೀಘ್ರದಲ್ಲಿಯೇ ಅಧ್ಯಕ್ಷರ ಹೇಳಿಕೆಯನ್ನು ನೀಡಲಾಗುವುದು. ಆತಿಥೇಯ ರಾಷ್ಟ್ರದ ಪರವಾಗಿ, ಹೊಸದಿಲ್ಲಿಯಲ್ಲಿ ನಡೆದ ಈ 'ನೋ ಮನಿ ಫಾರ್ ಟೆರರ್' ಸಮಾವೇಶದಲ್ಲಿ ಭಾಗವಹಿಸಿದ್ದಕ್ಕಾಗಿ ನಾನು ಎಲ್ಲಾ ದೇಶಗಳು ಮತ್ತು ಸಂಸ್ಥೆಗಳ ನಿಯೋಗಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ.   ನಿಮ್ಮೆಲ್ಲರಿಗೂ ಸಂತೋಷ ಮತ್ತು ಸುರಕ್ಷಿತವಾಗಿ ಮನೆಗೆ ಮರಳಲು ಶುಭ ಹಾರೈಕೆಗಳೊಂದಿಗೆ ನನ್ನ ಭಾಷಣವನ್ನು ಕೊನೆಗೊಳಿಸುತ್ತೇನೆ.

ಧನ್ಯವಾದಗಳು!

*****


(Release ID: 1877394) Visitor Counter : 313


Read this release in: English , Urdu , Hindi , Manipuri