ಗೃಹ ವ್ಯವಹಾರಗಳ ಸಚಿವಾಲಯ
ನವದೆಹಲಿಯಲ್ಲಿಂದು “ಭಯೋತ್ಪಾದನಾ ಹಣಕಾಸು ಮತ್ತು ಭಯೋತ್ಪಾದನೆಯಲ್ಲಿ ಜಾಗತಿಕ ಪ್ರವೃತ್ತಿಗಳು” ವಿಷಯದ ಮೇಲೆ ನಡೆದ 3 ನೇ “ನೋ ಮನಿ ಫಾರ್ ಟೆರರ್” ಕುರಿತ ಸಚಿವರ ಸಮ್ಮೇಳನದ ಮೊದಲ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಭಾಷಣದ ಪೂರ್ಣ ಪಠ್ಯ
Posted On:
18 NOV 2022 12:13PM by PIB Bengaluru
ಈ ಮಂತ್ರಿಗಳ ಸಮ್ಮೇಳನಕ್ಕೆ ನಿಮ್ಮೆಲ್ಲರನ್ನೂ ನಾನು ಸ್ವಾಗತಿಸುತ್ತೇನೆ. ಈ ವೇದಿಕೆ ಮೂಲಕ ನನ್ನ ಅನುಭವ ಮತ್ತು ಆಲೋಚನೆಗಳನ್ನು ಹಂಚಿಕೊಳ್ಳಲು ಹಾಗೂ ಸಂವಹನ ಮಾಡಲು ನನಗೆ ಸಂತಸವಾಗುತ್ತಿದೆ. ಅಲ್ಲದೇ ಮಾನವೀಯತೆಗೆ ಅತಿದೊಡ್ಡ ಬೆದರಿಕೆಯಾದ ಭಯೋತ್ಪಾದನೆ ಕುರಿತು ನಿಮ್ಮ ಅಭಿಪ್ರಾಯಗಳನ್ನು ಆಲಿಸಲು ನಾನು ಉತ್ಸುಕನಾಗಿದ್ದೇನೆ.
ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಲು ಕಾರ್ಯಸಾಧ್ಯವಾದ ಮತ್ತು ವಾಸ್ತವಿಕ ಮಾರ್ಗನಕ್ಷೆ ರೂಪಿಸಲು ಈ ಎರಡು ದಿನಗಳ ಚರ್ಚೆಯಲ್ಲಿ ಸಾಧ್ಯವಾಗಲಿದೆ ಎಂಬ ವಿಶ್ವಾಸದಲ್ಲಿದ್ದೇನೆ.
ಜಾಗತಿಕ ಶಾಂತಿ ಮತ್ತು ಭದ್ರತೆಗೆ ಭಯೋತ್ಪಾದನೆ ಅತ್ಯಂತ ಗಂಭೀರ ಬೆದರಿಕೆ ಎಂಬ ಬಗ್ಗೆ ಯಾವುದೇ ಸಂದೇಹವಿಲ್ಲ. ಆದರೆ ಭಯೋತ್ಪಾದನೆಗೆ ಹಣಕಾಸು ಒದಗಿಸುವುದು ಭಯೋತ್ಪಾದನೆಗಿಂತಲೂ ಅಪಾಯಕಾರಿ ಎಂದು ನಾನು ನಂಬುತ್ತೇನೆ, ಏಕೆಂದರೆ ಭಯೋತ್ಪಾದನೆಯ ವಿಧಾನಗಳು ಮತ್ತು ಮಾರ್ಗಗಳು ಇಂತಹ ಆರ್ಥಿಕ ನೆರವಿನಿಂದ ಪೋಷಿಸಲ್ಪಡುತ್ತವೆ. ಭಯೋತ್ಪಾದನೆಗೆ ಹಣಕಾಸು ಒದಗಿಸುವುದರಿಂದ ಹೆಚ್ಚಿನ ರೀತಿಯಲ್ಲಿ ಜಾಗತಿಕ ಆರ್ಥಿಕತೆ ದುರ್ಬಲಗೊಳ್ಳಲಿದೆ.
ಭಯೋತ್ಪಾದನೆಯ ಎಲ್ಲ ವಿಧಾನಗಳು ಮತ್ತು ರೂಪಗಳನ್ನು ಭಾರತ ಖಂಡಿಸುತ್ತದೆ. ಮುಗ್ದರ ಜೀವ ತೆಗೆಯುವ ಕೃತ್ಯವನ್ನು ಯಾವುದೇ ಕಾರಣದಿಂದ ಸಮರ್ಥಿಸಲು ಸಾಧ್ಯವಿಲ್ಲ ಎಂದು ನಾವು ನಂಬಿದ್ದೇವೆ. ಜಗತ್ತಿನಾದ್ಯಂತ ಭಯೋತ್ಪಾದನೆ ದಾಳಿಗೆ ಬಲಿಯಾದವರ ಬಗ್ಗೆ ನಾನು ನನ್ನ ಸಹಾನುಭೂತಿ ವ್ಯಕ್ತಪಡಿಸುತ್ತೇನೆ. ಈ ದುಷ್ಕೃತ್ಯಗಳ ಬಗ್ಗೆ ಎಂದಿಗೂ ರಾಜಿಯಿಲ್ಲ.
ಭಾರತ ಹಲವು ದಶಕಗಳಿಂದ ಭಯೋತ್ಪಾದನೆಗೆ ಬಲಿಪಶುವಾಗಿದ್ದು, ಗಡಿಯಾಚೆಯಿಂದ ಇದನ್ನು ಪ್ರಾಯೋಜಿಸಲಾಗಿದೆ. ಸಂಘಟಿತ ಮಾದರಿಯಲ್ಲಿ ನಡೆದ ಭಯೋತ್ಪಾದಕ ಹಿಂಸಾಚಾರದಿಂದ ಭಾರತೀಯ ಭದ್ರತಾ ಪಡೆಗಳು ಮತ್ತು ನಾಗರಿಕರು ತೊಂದರೆ ಎದುರಿಸಬೇಕಾಯಿತು. ಎಲ್ಲ ಮಾದರಿಯ ಭಯೋತ್ಪಾದನೆಯನ್ನು ಅಂತರರಾಷ್ಟ್ರೀಯ ಸಮುದಾಯ ಖಂಡಿಸಬೇಕು ಎಂಬ ಸಾಮೂಹಿಕ ವಿಧಾನವನ್ನು ಭಾರತ ಹೊಂದಿದೆ. ಆದರೆ ತಾಂತ್ರಿಕ ಕ್ರಾಂತಿಯಿಂದಾಗಿ ಭಯೋತ್ಪಾದನೆಯ ರೂಪಗಳು ಮತ್ತು ವಿಧಾನಗಳು ನಿರಂತರವಾಗಿ ಬದಲಾಗುತ್ತಿವೆ. ಇಂದು ಭಯೋತ್ಪಾದಕರು ಮತ್ತು ಭಯೋತ್ಪಾದಕ ಗುಂಪುಗಳು ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ಮಾಹಿತಿ ತಂತ್ರಜ್ಞಾನದ ಸೂಕ್ಷ್ಮಗಳನ್ನು ಹಾಗೂ ಸೈಬರ್ ಮತ್ತು ಹಣಕಾಸು ವಲಯದ ಬೆಳವಣಿಗೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಿವೆ ಹಾಗೂ ಅವುಗಳನ್ನು ಬಳಸಿಕೊಳ್ಳುತ್ತಿವೆ.
“ಡೈನಾಮೆಟ್ ನಿಂದ ಮೆಟಾರ್ಸ್ ಗೆ” ಹಾಗೂ ಎಕೆ-47 ನಿಂದ ವರ್ಚುವಲ್ ಸ್ವತ್ತುಗಳಿಗೆ” ಭಯೋತ್ಪಾದನೆಯು ರೂಪಾಂತರಗೊಂಡಿದ್ದು, ಇದು ಖಂಡಿತವಾಗಿಯೂ ವಿಶ್ವದ ದೇಶಗಳಿಗೆ ಕಳವಳಕಾರಿಯಾಗಿದೆ ಮತ್ತು ಇದರ ವಿರುದ್ಧ ಸಾಮಾನ್ಯ ಕಾರ್ಯತಂತ್ರ ರೂಪಿಸಲು ನಾವೆಲ್ಲರೂ ಒಟ್ಟಿಗೆ ಕಾರ್ಯನಿರ್ವಹಿಸಬೇಕಾಗಿದೆ.
ಭಯೋತ್ಪಾದನೆಯ ಬೆದರಿಕೆಯನ್ನು ನಾವು ಗುರುತಿಸಿದ್ದೇವೆ ಮತ್ತು ಯಾವುದೇ ಧರ್ಮ, ರಾಷ್ಟ್ರೀಯತೆ ಅಥವಾ ಗುಂಪುಗಳೊಂದಿಗೆ ಇದು ಸಂಪರ್ಕ ಹೊಂದಬಾರದು. ಭಯೋತ್ಪಾದನೆಯನ್ನು ಎದುರಿಸಲು ನಾವು ಭದ್ರತಾ ವಲಯವನ್ನು ಬಲಪಡಿಸುವಲ್ಲಿ ಮತ್ತು ಕಾನೂನು ಹಾಗೂ ಹಣಕಾಸು ವ್ಯವಸ್ಥೆಗಳನ್ನು ಬಲಪಡಿಸುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದೇವೆ. ಇದರ ಹೊರತಾಗಿಯೂ ಭಯೋತ್ಪಾದಕರು ಹಿಂಸಾಚಾರ ನಡೆಸಲು, ಯುವ ಜನಾಂಗವನ್ನು ಸೆಳೆಯಲು ಮತ್ತು ಆರ್ಥಿಕ ಸಂಪನ್ಮೂಲವನ್ನು ಕ್ರೋಡೀಕರಿಸಲು ನಿರಂತರವಾಗಿ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಭಯೋತ್ಪಾದಕರು ತೀವ್ರಗಾಮಿತ್ವವನ್ನು ಹರಡಲು ಮತ್ತು ತಮ್ಮ ಗುರುತುಗಳನ್ನು ಮರೆಮಾಚಲು ಡಾರ್ಕ್ ನೆಟ್ ಅನ್ನು ಬಳಸುತ್ತಿದ್ದಾರೆ. ಇದರ ಜೊತೆಗೆ ತಮ್ಮ ಬಳಕೆಗಾಗಿ ಕ್ರಿಪ್ಟೋಕರೆನ್ಸಿಯಂತಹ ವರ್ಚುವಲ್ ಆಸ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಡಾರ್ಕ್ ನೆಟ್ ಚಟುವಟಿಕೆಗಳ ವಿಧಾನಗಳನ್ನು ನಾವು ಅರ್ಥಮಾಡಿಕೊಳ್ಳಬೇಕು ಮತ್ತು ಪರಿಹಾರ ಹುಡುಕಬೇಕು.
ದುರದೃಷ್ಟವೆಂದರೆ ಭಯೋತ್ಪಾದನೆ ವಿರುದ್ಧ ಹೋರಾಡುವ ನಮ್ಮ ಸಾಮೂಹಿಕ ಸಂಕಲ್ಪವನ್ನು ದುರ್ಬಲಗೊಳಿಸುವ ಅಥವಾ ಅಡ್ಡಿಪಡಿಸಲು ಪ್ರಯತ್ನಿಸುವ ದೇಶಗಳಿವೆ. ಕೆಲವು ದೇಶಗಳು ಭಯೋತ್ಪಾದಕರನ್ನು ರಕ್ಷಿಸುತ್ತವೆ ಮತ್ತು ಆಶ್ರಯ ನೀಡುತ್ತವೆ, ಭಯೋತ್ಪಾದಕರನ್ನು ರಕ್ಷಿಸುವುದು ಭಯೋತ್ಪಾದನೆಯನ್ನು ಉತ್ತೇಜಿಸುವುದಕ್ಕೆ ಸಮನಾಗಿದೆ. ನಮ್ಮ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಯಶಸ್ವಿಯಾಗದಂತೆ ನೋಡಿಕೊಳ್ಳುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ.
2021 ರ ಆಗಸ್ಟ್ ನಂತರ ದಕ್ಷಿಣ ಏಷ್ಯಾ ವಲಯದಲ್ಲಿ ಪರಿಸ್ಥಿತಿ ಬದಲಾಗಿದೆ. ಆಡಳಿತದ ಬದಲಾವಣೆ ಮತ್ತು ಆಲ್ ಕೈದಾ ಹಾಗೂ ಐಸಿಸ್ ನ ಹೆಚ್ಚುತ್ತಿರುವ ಪ್ರಭಾವವು ಪ್ರಾದೇಶಿಕ ಭದ್ರತೆಗೆ ಮಹತ್ವದ ಸವಾಲಾಗಿ ಪರಿಣಮಿಸಿದೆ. ಈ ಹೊಸ ಸಮೀಕರಣಗಳು ಭಯೋತ್ಪಾದನೆಗೆ ಹಣಕಾಸು ನೆರವು ನೀಡುವ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿವೆ. ಮೂರು ದಶಕಗಳ ಹಿಂದೆ ಅಂತಹ ಒಂದು ಆಡಳಿತದ ಬದಲಾವಣೆಯ ಗಂಭೀರ ಪರಿಣಾಮಗಳನ್ನು ಜಗತ್ತು ಎದುರಿಸಬೇಕಾಯಿತು, ಅದರ ಪರಿಣಾಮವನ್ನು ನಾವು 9/11 ರ ಭಯಾನಕ ದಾಳಿಯಲ್ಲಿ ನೋಡಿದ್ದೇವೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ದಕ್ಷಿಣ ಏಷ್ಯಾ ವಲಯದಲ್ಲಿನ ಬದಲಾವಣೆಗಳು ನಮಗೆಲ್ಲರಿಗೂ ಕಳವಳಕಾರಿ ವಿಷಯವಾಗಿದೆ. ದಕ್ಷಿಣ ಏಷ್ಯಾದಲ್ಲಿ ಆಲ್ ಕೈದಾ ಜೊತೆ ಲಷ್ಕರ್ ಎ ತೋಯ್ಬಾ ಮತ್ತು ಜೈಶ್ ಇ ಮೊಹಮದ್ ನಂತಹ ಸಂಘಟನೆಗಳು ಭಯೋತ್ಪಾದಕತೆಯನ್ನು ಹರಡಿದೆ.
ಭಯೋತ್ಪಾದಕರ ಸುರಕ್ಷಿತ ಸ್ವರ್ಗಗಳು ಅಥವಾ ಅವರ ಸಂಪನ್ಮೂಲಗಳನ್ನು ನಾವು ಎಂದಿಗೂ ನಿರ್ಲಕ್ಷಿಸಬಾರದು. ಇವುಗಳನ್ನು ಬೆಂಬಲಿಸುವ ಮತ್ತು ಪ್ರಾಯೋಜಿಸುವ ಅಂತಹ ಅಂಶಗಳ ಬಗ್ಗೆ ನಾವು ದ್ವಿಮುಖ ಧೋರಣೆಯನ್ನು ಬಹರಂಗಪಡಿಸಬೇಕು. ಆದ್ದರಿಂದ ಇದು ಮಹತ್ವದ ಸಮ್ಮೇಳನವಾಗಿದ್ದು, ಭಾಗವಹಿಸಿರುವ ದೇಶಗಳು ಮತ್ತು ಸಂಘಟನೆಗಳು ಈ ಪ್ರದೇಶದ ಸವಾಲುಗಳ ಬಗ್ಗೆ ಆಯ್ದ ಅಥವಾ ಸಂತೃಪ್ತ ದೃಷ್ಟಿಕೋನವನ್ನು ತೆಗೆದುಕೊಳ್ಳಬಾರದು.
ಭಯೋತ್ಪಾದನೆಗೆ ಹಣಕಾಸು ನೆರವು ನೀಡುವ ಸಮಸ್ಯೆ ವ್ಯಾಪಕವಾಗಿದೆ. ಕಳೆದ ಕೆಲವು ವರ್ಷಗಳಿಂದ ಭಯೋತ್ಪಾದಕರಿಗೆ ಹಣ ಒದಗಿಸುವುದನ್ನು ಹತ್ತಿಕ್ಕುವಲ್ಲಿ ಭಾರತ ಯಶಸ್ವಿಯಾಗಿದೆ. ಭಯೋತ್ಪಾದಕರಿಗೆ ಹಣ ಹರಿಯುವುದನ್ನು ನಿಗ್ರಹಿಸಲು ಭಾರತ ಆರು ಆಧಾರ ಸ್ತಂಭಗಳನ್ನು ಆಧರಿಸಿದ ನಿಲುವು ಹೊಂದಿದೆ.
ಮೊದಲನೆಯದು – ಕಾನೂನಾತ್ಮಕ ಮತ್ತು ತಂತ್ರಜ್ಞಾನ ಚೌಕಟ್ಟು ಬಲಪಡಿಸುವುದು
ಎರಡನೆಯದು – ಸಮಗ್ರ ಕಣ್ಗಾವಲು ವ್ಯವಸ್ಥೆಯ ಚೌಕಟ್ಟು ರೂಪಿಸುವುದು
ಮೂರನೆಯದು - ಗುಪ್ತದಳ ಮಾಹಿತಿ ವಿನಿಮಯ ಕಾರ್ಯವಿಧಾನ, ತನಿಖೆ ಮತ್ತು ಪೊಲೀಸ್ ಕಾರ್ಯಾಚರಣೆಗಳನ್ನು ಬಲಪಡಿಸುವುದು
ನಾಲ್ಕನೆಯದು – ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶ
ಐದನೆಯದಾಗಿ – ಕಾನೂನು ಘಟಕಗಳು ಮತ್ತು ಹೊಸ ತಂತ್ರಜ್ಞಾನಗಳ ದುರುಪಯೋಗ ತಡೆಗಟ್ಟುವುದು
ಮತ್ತು ಆರನೆಯದಾಗಿ – ಅಂತರರಾಷ್ಟ್ರೀಯ ಸಮನ್ವಯತೆ ಮತ್ತು ಸಹಕಾರ ಸ್ಥಾಪಿಸುವುದು
ಈ ನಿಟ್ಟಿನಲ್ಲಿ ಭಾರತ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ತಿದ್ದುಪಡಿ, ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು ಬಲಪಡಿಸುವ ಮತ್ತು ಹಣಕಾಸು ಗುಪ್ತದಳಕ್ಕೆ ಹೊಸ ನಿರ್ದೇಶನ ನೀಡುವ ಮೂಲಕ ಭಯೋತ್ಪಾದನೆ, ಅದರ ಹಣಕಾಸು, ವಿರುದ್ಧದ ಹೋರಾಟವನ್ನು ಬಲಪಡಿಸಿದೆ. ನಿರಂತರ ಪ್ರಯತ್ನದ ಫಲಿತಾಂಶದಿಂದ ಭಾರತದಲ್ಲಿ ಭಯೋತ್ಪಾದನೆ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ತಗ್ಗಿದೆ. ಈ ಪ್ರಯತ್ನದಿಂದ ಭಯೋತ್ಪಾದನೆಯಿಂದ ಉಂಟಾಗುವ ಆರ್ಥಿಕ ನಷ್ಟವನ್ನು ನಿರ್ಣಾಯಕವಾಗಿ ಕಡಿಮೆ ಮಾಡಲಾಗಿದೆ.
ಭಯೋತ್ಪಾದನೆಯನ್ನು ಎದುರಿಸಲು ಅತ್ಯಂತ ಪರಿಣಾಮಕಾರಿ ಕಾರ್ಯತಂತ್ರವೆಂದರೆ ಅಂತರರಾಷ್ಟ್ರೀಯ ಸಮನ್ವಯ ಮತ್ತು ರಾಷ್ಟ್ರಗಳ ನಡುವೆ ನೈಜ ಸಮಯದ ಮತ್ತು ಪಾರದರ್ಶಕ ಸಹಕಾರ ವ್ಯವಸ್ಥೆಯನ್ನು ಭಾರತ ನಂಬಿದೆ. ದೇಶಗಳ ನಡುವೆ ಹಸ್ತಾಂತರ, ಶಿಕ್ಷೆಗೊಳಪಡಿಸುವ, ಗುಪ್ತದಳ ಮಾಹಿತಿ ವಿನಿಮಯ, ಸಾಮರ್ಥ್ಯ ವೃದ್ಧಿ ಹಾಗೂ “ಭಯೋತ್ಪಾದನೆ ಹಣಕಾಸು ನಿಗ್ರಹ[ಸಿ.ಎಫ್.ಟಿ] ದಂತಹ ಪ್ರಮುಖ ವಿಷಯಗಳಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಟ ಮಾಡಬೇಕು. ಭಯೋತ್ಪಾದಕರು ಮತ್ತು ಭಯೋತ್ಪಾದಕ ಗುಂಪುಗಳು ಗಡಿಯಾಚೆಗಿನ ತನ್ನ ಸಂಪನ್ಮೂಲಗಳನ್ನು ಸುಲಭವಾಗಿ ಸಂಯೋಜಿಸುವುದನ್ನು ತಡೆಯಲು ಪರಸ್ಪರ ಸಹಕಾರ ಮತ್ತಷ್ಟು ಮುಖ್ಯವಾಗುತ್ತದೆ. ಮಾದಕ ವಸ್ತುಗಳ ಅಕ್ರಮ ವ್ಯಾಪಾರ ಬೆಳವಣಿಗೆಯಾಗುತ್ತಿರುವ ಪ್ರವೃತ್ತಿಯಾಗಿದ್ದು, ಮಾದಕ ವಸ್ತುಗಳ ಭಯೋತ್ಪಾದನೆಯ ಸವಾಲು ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಲು ಹೊಸ ಆಯಾಮವನ್ನು ನೀಡಿದೆ. ಈ ದೃಷ್ಟಿಯಲ್ಲಿ ಎಲ್ಲಾ ದೇಶಗಳ ನಡುವೆ ನಿಕಟವಾಗಿ ಸಮನ್ವಯತೆ ಅಗತ್ಯವಾಗಿದೆ. ಭಯೋತ್ಪಾದಕರಿಗೆ ಭಯೋತ್ಪಾದನೆ ಹಣಕಾಸು ನಿಗ್ರಹ[ಸಿ.ಎಫ್.ಟಿ] ವಲಯದಲ್ಲಿ ಹಣ ಹರಿಯುವುದನ್ನು ತಡೆಯಲು ವಿಶ್ವಸಂಸ್ಥೆ ಮತ್ತು ಅದರ ವೇದಿಕೆಗಳಾದ ಹಣಕಾಸು ಕ್ರಿಯಾ ಕಾರ್ಯಪಡೆ, ಎಪ್.ಎ.ಟಿ.ಎಫ್ ಗಳಂತಹ ಬಹುಪಕ್ಷೀಯ ಸಂಸ್ಥೆಗಳು ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಹಣಕಾಸು ವಲಯ ಮತ್ತು ಭಯೋತ್ಪಾದಕರಿಗೆ ಆರ್ಥಿಕ ಸಂಪನ್ಮೂಲದ ನೆರವು ನೀಡುವುದನ್ನು ತಡೆಯಲು ಮತ್ತು ನಿಗ್ರಹಿಸಲು ಜಾಗತಿಕ ಮಾನದಂಡ ರೂಪಿಸಲು ಮತ್ತು ಅನಷ್ಠಾನಗೊಳಿಸುವಲ್ಲಿ ಎಪ್.ಎ.ಟಿ.ಎಫ್ ಪ್ರಮುಖ ಪಾತ್ರ ವಹಿಸುತ್ತಿದೆ.
ಈ ಹಿಂದೆ ವರ್ಚುವಲ್ ಆಸ್ತಿಯ ಮಾದರಿಗಳು ನಮಗೆ ಹೊಸ ಸವಾಲುಗಳಾಗಿದ್ದವು. ಭಯೋತ್ಪಾದಕರು ಇದೀಗ ಹಣಕಾಸು ವಹಿವಾಟಿಗೆ ವರ್ಚುವಲ್ ಆಸ್ತಿಯ ಹೊಸ ಮಾದರಿಗಳನ್ನು ಅನುಸರಿಸುತ್ತಿದ್ದಾರೆ. ವರ್ಚುವಲ್ ಆಸ್ತಿ ಮಾರ್ಗಗಳು, ಹಣಕಾಸು ಮೂಲ ಸೌಕರ್ಯಗಳು ಮತ್ತು ಡಾರ್ಕ್ ನೆಟ್ ಬಳಕೆಯನ್ನು ಹತ್ತಿಕ್ಕಲು ನಾವು “ದೃಢವಾದ ದಕ್ಷ ಕಾರ್ಯಾಚರಣೆ ವ್ಯವಸ್ಥೆಯನ್ನು” ಅಭಿವೃದ್ಧಿಪಡಿಸುವ ಕಡೆಗೆ ಸುಸಜ್ಜಿತವಾಗಿ ಕೆಲಸ ಮಾಡಬೇಕಾಗಿದೆ.
ವಿಶ್ವಸಂಸ್ಥೆ, ಐಎಂಎಫ್, ಇಂಟರ್ ಪೋಲ್ ಮತ್ತು ಇತರೆ ಕಾನೂನು ಜಾರಿ ಪಾಲುದಾರ ಸಂಸ್ಥೆಗಳು, ಹಣಕಾಸು ತನಿಖಾಧಿಕಾರಿಗಳು ಮತ್ತು ವಿವಿಧ ದೇಶಗಳ ನಿಯಂತ್ರಕರು ಈ ನಿಟ್ಟಿನಲ್ಲಿ ಮತ್ತಷ್ಟು ಸಹಕಾರಾತ್ಮಕವಾಗಿರಬೇಕು. ನಾವು ಈ ಸವಾಲುಗಳನ್ನು ಆಳವಾಗಿ ಅರ್ಥಮಾಡಿಕೊಳ್ಳಬೇಕು ಮತ್ತು ಇತ್ತೀಚೆಗೆ ನವದೆಹಲಿಯಲ್ಲಿ ಮುಕ್ತಾಯವಾದ ಇಂಟರ್ ಪೋಲ್ ಸಾಮಾನ್ಯ ಅಧಿವೇಶನದಲ್ಲಿ ಚರ್ಚಿಸಿದಂತೆ ಭಯೋತ್ಪಾದನೆಗೆ ಹಣಕಾಸು ಒದಗಿಸುವ ಹೊಸ ತಂತ್ರಗಳನ್ನು ಹತ್ತಿಕ್ಕಲು ಜಾಗತಿಕ ಪ್ರಯತ್ನಗಳನ್ನು ಮಾಡಬೇಕು.
ಗುಪ್ತಚರ ಮಾಹಿತಿ ವಿನಿಮಯ, ಗಡಿ ನಿಯಂತ್ರಣದಲ್ಲಿ ಪರಿಣಾಮಕಾರಿ ಸಾಮರ್ಥ್ಯ ನಿರ್ಮಾಣ, ಆಧುನಿಕ ತಂತ್ರಜ್ಞಾನ ದುರ್ಬಳಕೆಯಾಗದಂತೆ ನೋಡಿಕೊಳ್ಳುವ, ಕಣ್ಗಾವಲು ಮತ್ತು ಅಕ್ರಮ ಹಣದ ಹರಿವು ತಡೆಯುವುದು ಹಾಗೂ ತನಿಖೆ ಮತ್ತು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಸಹಕಾರದಂತಹ ಎಲ್ಲ ಪ್ರಯತ್ನಗಳ ಮೂಲಕ ಭಾರತ ಭಯೋತ್ಪಾದನೆಯನ್ನು ನಿಗ್ರಹಿಸಲು ಈಗಲೂ ಬದ್ಧವಾಗಿದೆ.
“ನೋ ಮನಿ ಫಾರ್ ಟೆರರ್’ ಜಾಗತಿಕ ಗುರಿ ಸಾಧನೆಗೆ ಅಂತರರಾಷ್ಟ್ರೀಯ ಸಮುದಾಯ “ಮಾದರಿ – ಮಾಧ್ಯಮ – ವಿಧಾನ” ವನ್ನು ಅರ್ಥಮಾಡಿಕೊಂಡು ಭಯೋತ್ಪಾದಕರಿಗೆ ಹಣ ಹರಿಯುವುದನ್ನು ತಡೆಯುವ ಹಾಗೂ ‘ಒಂದು ಮನಸ್ಸು ಒಂದು ವಿಧಾನ’ದ ತತ್ವವನ್ನು ಅಳವಡಿಸಿಕೊಂಡು ಸಮಸ್ಯೆಯನ್ನು ನಿಗ್ರಹಿಸಬೇಕು.
ನಾವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರ ಭಾಷಣದೊಂದಿಗೆ ಈ ಸಮ್ಮೇಳನವನ್ನು ಇಂದು ಆರಂಭಿಸಿದ್ದೇವೆ. ಎರಡು ದಿನಗಳ ಸಮ್ಮೇಳನದಲ್ಲಿ ಭಯೋತ್ಪಾದನೆಗೆ ಹಣಕಾಸು ಕುರಿತ ವಿವಿಧ ಆಯಾಮಗಳಲ್ಲಿ ಅರ್ಥಪೂರ್ಣ ಚರ್ಚೆ ನಡೆಯಲಿದೆ ಮತ್ತು ಪ್ರಸ್ತುತ ಹಾಗೂ ಭವಿಷ್ಯದ ಸವಾಲುಗಳಿಗೆ ಅರ್ಥಪೂರ್ಣ ಪರಿಹಾರ ರೂಪಿಸಲಾಗುವುದು. ಭಾರತದ ಗೃಹ ಸಚಿವರಾಗಿ “ನೋ ಮನಿ ಫಾರ್ ಟೆರರ್” ಎಂಬ ಧ್ಯೇಯಕ್ಕಾಗಿ ನಮ್ಮ ಬದ್ಧತೆಯು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ನಿಮ್ಮ ಉತ್ಸಾಹದಷ್ಟೇ ಬಲವಾಗಿದೆ ಎಂದು ನಿಮಗೆ ಭರವಸೆ ನೀಡುತ್ತೇನೆ!
ನನ್ನ ಸಹವರ್ತಿ ಭಾಷಣಕಾರರಿಂದ ಅಭಿಪ್ರಾಯಗಳನ್ನು ಆಲಿಸಲು ಎದುರು ನೋಡುತ್ತಿದ್ದೇನೆ. ನಾಳೆ ಅಧಿವೇಶನದ ಸಮಾರೋಪದಲ್ಲಿ ಕೆಲವು ಸಂಬಂಧಪಟ್ಟ ವಿಷಯಗಳ ಬಗ್ಗೆ ನನ್ನ ಅಭಿಪ್ರಾಯಗಳನ್ನು ಮಂಡಿಸಲು ನಾನು ಬಯಸುತ್ತೇನೆ. ಈಗ ನಾನು ನನ್ನ ಭಾಷಣ ಮುಕ್ತಾಯ ಮಾಡುತ್ತಿದ್ದೇನೆ. ನಿಮಗೆಲ್ಲರಿಗೂ ಶುಭ ಹಾರೈಸುತ್ತೇನೆ!
ಧನ್ಯವಾದಗಳು.
***
(Release ID: 1877099)
Visitor Counter : 840