ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

​​​​​​​ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಗುಜರಾತ್ ಶಿಕ್ಷಣ ಸಂಸ್ಥೆಯು ಇಂದು ನವದೆಹಲಿಯ ಸರ್ದಾರ್ ಪಟೇಲ್ ವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡರು


ಸರ್ದಾರ್ ಪಟೇಲ್ ಒಬ್ಬ ಕರ್ಮಯೋಗಿಯಾಗಿದ್ದರು, ಅವರು ತಮ್ಮ ದೃಷ್ಟಿಕೋನವನ್ನು ಸಾಕಾರಗೊಳಿಸಲು ಸಮರ್ಪಣಾಭಾವವನ್ನು ಹೊಂದಿದ್ದರು, ಅವರು ಭಾರತದ ಸ್ವಾತಂತ್ರ್ಯಕ್ಕೆ, ಅಖಂಡ ಭಾರತದ ರಚನೆಗೆ ಮತ್ತು ನವಭಾರತಕ್ಕೆ  ಅಡಿಪಾಯವನ್ನು ಹಾಕಲು ನಿರಂತರವಾಗಿ ಶ್ರಮಿಸಿದರು.

ಸರ್ದಾರ್ ಪಟೇಲರನ್ನು ಭಾರತ ರತ್ನ ನೀಡಿ ಗೌರವಿಸಲು, ಸರ್ದಾರ್ ಪಟೇಲ್ ಅವರ ಸ್ಮಾರಕವನ್ನು ನಿರ್ಮಿಸಲು ಮತ್ತು ಅವರ ಆಲೋಚನೆಗಳ ಮೂಲಕ ಮಕ್ಕಳಿಗೆ ಸ್ಫೂರ್ತಿ ನೀಡಲು ಹಲವು ವರ್ಷಗಳನ್ನು ತೆಗೆದುಕೊಳ್ಳಲಾಯಿತು, ಸರ್ದಾರ್ ಪಟೇಲ್ ಅವರ ಪರಂಪರೆಯನ್ನು ಕುಂದಿಸಲು ದೀರ್ಘಕಾಲದವರೆಗೆ ಪ್ರಯತ್ನಿಸಲಾಯಿತು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಹಳ್ಳಿಗಳ ಕೋಟ್ಯಂತರ ರೈತರ ಕಬ್ಬಿಣದ ಕೃಷಿ ಉಪಕರಣಗಳನ್ನು ಕರಗಿಸಿ ಏಕತಾ ಪ್ರತಿಮೆಯನ್ನು ನಿರ್ಮಿಸಲಾಯಿತು, ಈ ಪ್ರತಿಮೆಯಲ್ಲಿ ದೇಶದ ಭರವಸೆ, ನಿರೀಕ್ಷೆ ಮತ್ತು ಕನಸುಗಳು ಸಾಕಾರಗೊಳ್ಳುವುದನ್ನು ಪ್ರಧಾನಿಯವರು ಖಚಿತಪಡಿಸಿದರು.

ಸರ್ದಾರ್ ಪಟೇಲ್ ಅವರು ದೇಶದಲ್ಲಿ ಸಹಕಾರ ಚಳುವಳಿಗೆ ಅಡಿಪಾಯವನ್ನು ಹಾಕಿದರು, ಸರ್ದಾರ್ ಪಟೇಲ್ ಅಮುಲ್ ಸಂಸ್ಥೆಯ ಬೀಜಗಳನ್ನು ಬಿತ್ತಿದರು ಮತ್ತು ಅವರ ಸ್ಫೂರ್ತಿ ಮತ್ತು ಮಾರ್ಗದರ್ಶನದಲ್ಲಿ, ತ್ರಿಭುವನದಾಸ್ ಪಟೇಲ್ ಅವರು ಅಮುಲ್ ಅನ್ನು ಸ್ಥಾಪಿಸಿದರು ಎಂಬುದು ಕೆಲವೇ ಜನರಿಗೆ ತಿಳಿದಿದೆ.

1920 ಮತ್ತು 1930 ರ ನಡುವೆ, ದೇಶದಲ್ಲಿ ರೈತರ ಶೋಷಣೆಯ ವಿರುದ್ಧ ಧ್ವನಿ ಎತ್ತಲಾಯಿತು. ರೈತರನ್ನು ಸಜ್ಜುಗೊಳಿಸಿದ ಪಟೇಲರ ಕೌಶಲ್ಯವನ್ನು ನೋಡಿದ ಗಾಂಧೀಜಿಯವರು ವಲ್ಲಭಭಾಯಿ ಅವರಿಗೆ ಸರ್ದಾರ್ ಎಂಬ ಹೆಸರನ್ನು ನೀಡಿದರು.

ಸ್ವಾತಂತ್ರ್ಯದ ಸಂದರ್ಭದಲ್ಲಿ ಬ್ರಿಟನ್ ಮಾಜಿ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಅವರು ಬ್ರಿಟಿಷರು ಹೋದ ತಕ್ಷಣ ಭಾರತವು ಛಿದ್ರವಾಗುತ್ತದೆ, ಏಕೆಂದರೆ ಭಾರತದ ನಾಯಕರು ಸಾಮರ್ಥ್ಯವಿಲ್ಲದವರು ಮತ್ತು ಅವರು ಅಧಿಕಾರಕ್ಕಾಗಿ ಹೊಡೆದಾಡುತ್ತಾರೆ ಎಂದು ಹೇಳಿದ್ದರು, ಆದರೆ ಸರ್ದಾರ್ ಪಟೇಲ್ ಇಡೀ ದೇಶವನ್ನು ಒಗ್ಗೂಡಿಸಿದರು ಮತ್ತು ಇಂದು ಭಾರತ ಅದೇ ಬ್ರಿಟನ್ಅನ್ನು ಹಿಂದಿಕ್ಕಿ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ

ಸರ್ದಾರ್ ಪಟೇಲ್ ಅವರು ವಿಶ್ವದ ಅತ್ಯಂತ ಪ್ರಬುದ್ಧ ಪ್ರಜಾಪ್ರಭುತ್ವಕ್ಕೆ ಅಡಿಪಾಯವನ್ನು ಹಾಕಿದರು, ಸರ್ದಾರ್ ಪಟೇಲ್ ಇಲ್ಲದಿದ್ದರೆ, ಭಾರತದ ಭೂಪಟ ಇಂದಿನಂತೆ ಇರುತ್ತಿರಲಿಲ್ಲ, ಸ್ವಾತಂತ್ರ್ಯದ ನಂತರ, ಸರ್ದಾರ್ ಪಟೇಲ್ 500 ಕ್ಕೂ ಹೆಚ್ಚು ರಾಜಪ್ರಭುತ್ವದ ಸಂಸ್ಥಾನಗಳನ್ನು ಒಂದುಗೂಡಿಸಿದರು.

ಸರ್ದಾರ್ ಪಟೇಲ್ ಅವರ ಬಲವಾದ ಇಚ್ಛಾಶಕ್ತಿ ಮತ್ತು ನಾಯಕತ್ವದಿಂದಾಗಿ ಇಂದು ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಜುನಾಗಢ್, ಜೋಧ್ಪುರ, ಹೈದರಾಬಾದ್ ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿವೆ.

ಸರ್ದಾರ್ ಪಟೇಲ್ ಅವರ ಅಹಿಂಸೆಯ ವಿಚಾರಗಳು ತುಂಬಾ ಪ್ರಾಯೋಗಿಕವಾಗಿದ್ದವು, ಅವರು ಎಂದಿಗೂ ಖ್ಯಾತಿಯನ್ನು ಬಯಸಲಿಲ್ಲ, ಬದಲಿಗೆ ಪ್ರತಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವ ಮೂಲಕ ಫಲಿತಾಂಶಗಳನ್ನು ಪಡೆಯುತ್ತಿದ್ದರು.

ಭಾಷೆ ಕೇವಲ ಅಭಿವ್ಯಕ್ತಿಯ ಮಾಧ್ಯಮ, ಭಾಷೆ ನಿಮ್ಮ ಸಾಮರ್ಥ್ಯದ ಸಂಕೇತವಲ್ಲ, ನಿಮ್ಮಲ್ಲಿ ಸಾಮರ್ಥ್ಯವಿದ್ದರೆ ಜಗತ್ತು ನಿಮ್ಮ ಮಾತನ್ನು ಕೇಳಲೇಬೇಕು.

ಭಾರತದ ಯಾವುದೇ ಭಾಷೆ ಮತ್ತು ಉಪಭಾಷೆ ಕಣ್ಮರೆಯಾಗಲು ನಾವು ಬಿಡುವುದಿಲ್ಲ, ಯುವಜನರು ಇತರ ಭಾಷೆಗಳನ್ನು ಕಲಿಯಬೇಕು ಆದರೆ ತಮ್ಮ ಮಾತೃಭಾಷೆಯನ್ನು ಎಂದಿಗೂ ಮರೆಯಬಾರದು ಎಂಬುದು ನನ್ನ ಒತ್ತಾಯ. ಏಕೆಂದರೆ ಅದು ವ್ಯಕ್ತಿಯ ಸಾಮರ್ಥ್ಯವನ್ನು ಹೆಚ್ಚಿಸಲು, ನಿರ್ಧಾರಗಳನ್ನು ಸುಧಾರಿಸಲು ಮತ್ತು ವಿಶ್ಲೇಷಣೆಯ ಪ್ರಕ್ರಿಯೆಯನ್ನು ಏರಿಸಲು ಉತ್ತಮ ಮಾಧ್ಯಮವಾಗಿದೆ.

ಮೋದಿ ಸರ್ಕಾರದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಮುಖ ಆಯಾಮವೆಂದರೆ ಪ್ರಾಥಮಿಕ ಶಿಕ್ಷಣವು ಅವರ ಭಾಷೆಯಲ್ಲಿರಬೇಕು, ತಾಂತ್ರಿಕ ಶಿಕ್ಷಣ, ಸಂಶೋಧನೆ ಮತ್ತು ವೈದ್ಯಕೀಯ ಶಿಕ್ಷಣವು ಪ್ರಾದೇಶಿಕ ಭಾಷೆಯಲ್ಲೂ ಲಭ್ಯವಿರಬೇಕು.

ಮಹಾತ್ಮ ಗಾಂಧೀಜಿ ಮತ್ತು ಸರ್ದಾರ್ ಪಟೇಲ್ ಅವರ ದೂರದೃಷ್ಟಿಯ ಆಧಾರದ ಮೇಲೆ ನಾವು ವಿಶ್ವವನ್ನು ಮುನ್ನಡೆಸುವ ಆತ್ಮವಿಶ್ವಾಸದಿಂದ ತುಂಬಿದ ಭಾರತವನ್ನು ನಿರ್ಮಿಸಬೇಕು ಮತ್ತು ಭಾಷೆಯ ಮೇಲಿನ ಕೀಳರಿಮೆಯನ್ನು ತೊಡೆದುಹಾಕಿದಾಗ ಮಾತ್ರ ಅಂತಹ ಭಾರತವನ್ನು ನಿರ್ಮಿಸಲು ಸಾಧ್ಯ.

Posted On: 31 OCT 2022 7:08PM by PIB Bengaluru

ನಮ್ಮ ಸ್ವಾತಂತ್ರ್ಯದ ಶತಮಾನೋತ್ಸವ ವರ್ಷದಲ್ಲಿ ಭಾರತವನ್ನು ಅಗ್ರ ರಾಷ್ಟ್ರವನ್ನಾಗಿ ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ಅಭಿಯಾನವನ್ನು ಬಲಪಡಿಸಲು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಬಗ್ಗೆ ಓದುವಂತೆ ಮತ್ತು ಅವರು ತೋರಿಸಿದ ಮಾರ್ಗವನ್ನು ಅನುಸರಿಸುವಂತೆ ಗೃಹ ಸಚಿವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಗುಜರಾತ್ ಶಿಕ್ಷಣ ಸಂಸ್ಥೆಯು ಇಂದು ನವದೆಹಲಿಯ ಸರ್ದಾರ್ ಪಟೇಲ್ ವಿದ್ಯಾಲಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಅಮಿತ್ ಶಾ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ತಮ್ಮ ಚಿಂತನೆಗಳನ್ನು ಸಾಕಾರಗೊಳಿಸಲು ಬದ್ಧತೆಯಿಂದ ಕೆಲಸ ಮಾಡಿದ ‘ಕರ್ಮಯೋಗಿ’ ಎಂದು ಹೇಳಿದರು. ಸರ್ದಾರ್ ಪಟೇಲ್ ಅವರು ತಮ್ಮ ಇಡೀ ಜೀವನವನ್ನು ಭಾರತದ ಸ್ವಾತಂತ್ರ್ಯಕ್ಕಾಗಿ, ಅಖಂಡ ಭಾರತದ ನಿರ್ಮಾಣಕ್ಕಾಗಿ ಮತ್ತು ನವಭಾರತಕ್ಕೆ ಅಡಿಪಾಯವನ್ನು ಹಾಕಲು ಮುಡಿಪಾಗಿಟ್ಟರು. ಸರ್ದಾರ್ ಪಟೇಲರಿಗೆ ಭಾರತ ರತ್ನ ನೀಡಿ ಗೌರವಿಸಲು, ಅವರ ಸ್ಮಾರಕವನ್ನು ನಿರ್ಮಿಸಲು ಮತ್ತು ಅವರ ಚಿಂತನೆಗಳನ್ನು ಸಂಗ್ರಹಿಸುವ ಮೂಲಕ ಮಕ್ಕಳಿಗೆ ಸ್ಫೂರ್ತಿ ನೀಡಲು ಹಲವು ವರ್ಷಗಳನ್ನು ತೆಗೆದುಕೊಳ್ಳಲಾಯಿತು, ಅವರ ಪರಂಪರೆಯನ್ನು ಕುಗ್ಗಿಸಲು ದೀರ್ಘಕಾಲದವರೆಗೆ ಪ್ರಯತ್ನಿಸಲಾಯಿತು ಎಂದು ಶ್ರೀ ಶಾ ಹೇಳಿದರು. ಸರ್ದಾರ್ ಪಟೇಲ್ ಅವರು ತಮ್ಮ ಕೆಲಸಗಳ ಮೂಲಕ ಅಮರರಾಗಿದ್ದಾರೆ ಮತ್ತು ಅಚಲರಾಗಿದ್ದಾರೆ. ಸರ್ದಾರ್ ಸಾಹೇಬರು ದಾರ್ಶನಿಕರಾಗಿದ್ದರು, ನೈಜ ಮತ್ತು ಅಚಲ ವ್ಯಕ್ತಿಯಾಗಿದ್ದರು ಎಂದು ಶ್ರೀ ಶಾ ಹೇಳಿದರು.
ನಾವು ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ ಮತ್ತು ಸರ್ದಾರ್ ಪಟೇಲ್ ಅವರ ಚಿಂತನೆಗಳು 19 ನೇ ಶತಮಾನದಲ್ಲಿದ್ದಂತೆಯೇ ಇಂದಿಗೂ ಪ್ರಸ್ತುತವಾಗಿವೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ವಿಶ್ವದ ಅತಿ ಎತ್ತರದ ಪ್ರತಿಮೆಯಾದ ಸರ್ದಾರ್ ಪಟೇಲ್ ಅವರ ಏಕತಾ ಪ್ರತಿಮೆಗೆ ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ಸಲ್ಲಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶದ 3 ಲಕ್ಷಕ್ಕೂ ಹೆಚ್ಚು ಹಳ್ಳಿಗಳ ಕೋಟ್ಯಂತರ ರೈತರ ಕೃಷಿ ಉಪಕರಣಗಳ ಕಬ್ಬಿಣವನ್ನು ಕರಗಿಸಿ ಏಕತಾ ಪ್ರತಿಮೆಯನ್ನು ನಿರ್ಮಿಸಲಾಯಿತು, ಇಡೀ ದೇಶದ ಭರವಸೆ, ನಿರೀಕ್ಷೆ ಮತ್ತು ಕನಸುಗಳು ಈ ಪ್ರತಿಮೆಯಲ್ಲಿ ಸಾಕಾರಗೊಳ್ಳುವುದನ್ನು ಪ್ರಧಾನಿ ಖಚಿತಪಡಿಸಿದರು ಎಂದು ಅವರು ಹೇಳಿದರು.

ಸರ್ದಾರ್ ಪಟೇಲ್ ಅವರು ವಾಸ್ತವ ಸಮಸ್ಯೆಗಳನ್ನು ಪರಿಹರಿಸುವ ಮೂಲ ಸಿದ್ಧಾಂತವನ್ನು ಅನುಸರಿಸುತ್ತಿದ್ದರು ಎಂದು ಶ್ರೀ ಅಮಿತ್ ಶಾ ಹೇಳಿದರು. ಸರ್ದಾರ್ ಪಟೇಲ್ ಅವರು ಸಹಕಾರ ಚಳವಳಿಯನ್ನು ದೇಶದಲ್ಲಿ ಹರಡುವ ಕೆಲಸ ಮಾಡಿದರು, ಸರ್ದಾರ್ ಪಟೇಲ್ ಅವರು ಅಮುಲ್ ಸಂಸ್ಥೆಗೆ ಬೀಜವನ್ನು ಬಿತ್ತಿದರು ಮತ್ತು ತ್ರಿಭುವನದಾಸ್ ಪಟೇಲ್ ಅವರು ಸರ್ದಾರ್ ಪಟೇಲ್ ಅವರ ಆಲೋಚನೆಗಳು, ಮಾರ್ಗದರ್ಶನ ಮತ್ತು ಸ್ಫೂರ್ತಿಯೊಂದಿಗೆ ಅಮುಲ್ ಅನ್ನು ಸ್ಥಾಪಿಸಿದರು ಎಂಬುದು ಕೆಲವೇ ಜನರಿಗೆ ತಿಳಿದಿದೆ. 1920ರಿಂದ 1930ರ ಅವಧಿಯಲ್ಲಿ ದೇಶದಲ್ಲಿ ರೈತರ ಶೋಷಣೆ ವಿರುದ್ಧ ಧ್ವನಿ ಎತ್ತಿದರು, ಅವರು ರೈತರನ್ನು ಒಗ್ಗೂಡಿಸಿದ ನೈಪುಣ್ಯವನ್ನು ಕಂಡು ಗಾಂಧೀಜಿಯವರು ವಲ್ಲಭಭಾಯಿ ಅವರಿಗೆ ಸರ್ದಾರ್ ಎಂದು ಹೆಸರು ಕೊಟ್ಟರು ಎಂದು ಶ್ರೀ ಶಾ ಹೇಳಿದರು. ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್, ಜೋಧ್ಪುರ, ಜುನಾಗಢ ಮತ್ತು ಹೈದರಾಬಾದ್ ಇಂದು ಭಾರತದ ಭಾಗವಾಗಲು ಸರ್ದಾರ್ ಪಟೇಲ್ ಅವರು ಕಾರಣ ಎಂದು ಶ್ರೀ ಶಾ ಹೇಳಿದರು. ಸರ್ದಾರ್ ಪಟೇಲ್ ಅವರಿಂದಾಗಿ ಭಾರತಮಾತೆಯ ಮುಕುಟವಾದ ಕಾಶ್ಮೀರವೂ ಇಂದು ಭಾರತದ ಜೊತೆಗಿದೆ ಎಂದರು. ಪಾಕಿಸ್ತಾನದ ಸೈನಿಕರನ್ನು ಸೋಲಿಸಿದ ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿ ಉಳಿಯುವಂತೆ ಮಾಡಿದ ಸೈನ್ಯವನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕಳುಹಿಸಲು ನಿರ್ಧರಿಸಿದ್ದು ಸರ್ದಾರ್ ಪಟೇಲ್ ಅವರು ಎಂದು ಶ್ರೀ ಶಾ ಹೇಳಿದರು.

ಸರ್ದಾರ್ ಪಟೇಲ್ ಇಲ್ಲದಿದ್ದರೆ ಭಾರತದ ಭೂಪಟ ಇಂದಿನಂತೆ ಇರುತ್ತಿರಲಿಲ್ಲ ಎಂದು ಗೃಹ ಸಚಿವರು ಹೇಳಿದರು. ಸ್ವಾತಂತ್ರ್ಯದ ನಂತರ, ಸರ್ದಾರ್ ಪಟೇಲ್ ಅವರು 500 ಕ್ಕೂ ಹೆಚ್ಚು ರಾಜಪ್ರಭುತ್ವದ ಸಂಸ್ಥಾನಗಳು ಮತ್ತು ಭಾರತದಾದ್ಯಂತದ ರಾಜರು, ರಾಜಕುಮಾರರನ್ನು ಒಟ್ಟುಗೂಡಿಸುವ ಕೆಲಸ ಮಾಡಿದರು. ಸರ್ದಾರ್ ಪಟೇಲ್ ಅವರು ಅನಾರೋಗ್ಯದ ನಡುವೆಯೂ 500 ಕ್ಕೂ ಹೆಚ್ಚು ರಾಜಸಂಸ್ಥಾನಗಳನ್ನು ಭಾರತ ಒಕ್ಕೂಟಕ್ಕೆ ಸೇರಿಸಲು ದೇಶಾದ್ಯಂತ ಪ್ರವಾಸ ಮಾಡಿದರು ಎಂದು ಶ್ರೀ ಶಾ ಹೇಳಿದರು. ಸ್ವಾತಂತ್ರ್ಯದ ನಂತರ ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಲಾಯಿತು ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಅವಿರತ ಪ್ರಯತ್ನದಿಂದ ಭಾರತವು ಒಂದುಗೂಡಿತು ಎಂದು ಅವರು ಹೇಳಿದರು. ಸ್ವಾತಂತ್ರ್ಯದ ಸಂದರ್ಭದಲ್ಲಿ ಬ್ರಿಟನ್ನ ಮಾಜಿ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಅವರು ಬ್ರಿಟಿಷರು ಹೋದ ತಕ್ಷಣ ಭಾರತ ಛಿದ್ರವಾಗುತ್ತದೆ, ಏಕೆಂದರೆ ಭಾರತದ ನಾಯಕರು ಕಡಿಮೆ ಸಾಮರ್ಥ್ಯ ಹೊಂದಿದ್ದಾರೆ ಮತ್ತು ಅವರು ಅಧಿಕಾರಕ್ಕಾಗಿ ಹೊಡೆದಾಡುತ್ತಾರೆ ಎಂದು ಹೇಳಿದ್ದರು, ಆದರೆ ಸರ್ದಾರ್ ಪಟೇಲ್ ಇಡೀ ದೇಶವನ್ನು ಒಗ್ಗೂಡಿಸಿದರು ಮತ್ತು ಇಂದು ಭಾರತ ಅದೇ ಬ್ರಿಟನ್ ಅನ್ನು ಹಿಂದಿಕ್ಕಿ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಅವರು ಹೇಳಿದರು.


75 ವರ್ಷಗಳಲ್ಲಿ ಭಾರತದಲ್ಲಿ ಪ್ರಜಾಪ್ರಭುತ್ವದ ತಳಹದಿ ಭದ್ರವಾಗಿದೆ ಮತ್ತು ಇದರ ಪರಿಣಾಮವಾಗಿ ಸ್ವಾತಂತ್ರ್ಯದ ನಂತರ ಜನರು ಶಾಂತಿಯುತವಾಗಿ ಮತದ ಮೂಲಕ ನೀಡಿದ ಆದೇಶಗಳನ್ನು ಎಲ್ಲರೂ ಒಪ್ಪಿಕೊಂಡು ಅನೇಕ ಬಾರಿ ಯಾವುದೇ ರಕ್ತಪಾತವಿಲ್ಲದೆ ದೇಶದಲ್ಲಿ ನಾಯಕತ್ವ ಬದಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ರಾಜಸಂಸ್ಥಾನಗಳನ್ನು ಒಗ್ಗೂಡಿಸಲು ಅವಿರತವಾಗಿ ಶ್ರಮಿಸಿದರು, ಜೊತೆಗೆ ಅಖಿಲ ಭಾರತ ಸೇವೆಗಳು ಮತ್ತು ಗುಪ್ತಚರ ಬ್ಯೂರೋಗೆ ಅಡಿಪಾಯವನ್ನು ಹಾಕಿದರು, ಕೇಂದ್ರ ಪೊಲೀಸ್ ಮತ್ತು ಭಾರತದ ನೀತಿಗೆ ತಕ್ಕಂತೆ ಆಡಳಿತ ಸೇವೆಗಳನ್ನು ರೂಪಿಸಿದರು ಎಂದು ಅವರು ಹೇಳಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರಯತ್ನದ ಫಲವಾಗಿ ಭಾರತದಲ್ಲಿ ಕೇಂದ್ರ-ರಾಜ್ಯ ರಚನೆಯನ್ನು ಯಾವುದೇ ರೀತಿಯ ಘರ್ಷಣೆಯಿಲ್ಲದ ರೀತಿಯಲ್ಲಿ ರೂಪಿಸಲಾಗಿದೆ ಮತ್ತು ಇದರ ಪರಿಣಾಮವಾಗಿ ಇಂದು ಕೇಂದ್ರ ಮತ್ತು ರಾಜ್ಯಗಳ ನಡುವೆ ಯಾವುದೇ ಪ್ರತಿರೋಧಗಳಿಲ್ಲ ಎಂದು ಅವರು ಹೇಳಿದರು.

ಸರ್ದಾರ್ ಪಟೇಲ್ ಅವರ ಅಹಿಂಸೆಯ ವಿಚಾರಗಳು ಸಹ ಅತ್ಯಂತ ನೈಜವಾಗಿವೆ ಮತ್ತು ಅವರು ಖ್ಯಾತಿಯನ್ನು ಬಯಸದೆ ಪ್ರತಿಯೊಂದು ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವ ಮೂಲಕ ಫಲಿತಾಂಶವನ್ನು ತರಲು ಶ್ರಮಿಸಿದರು ಎಂದು ಶ್ರೀ ಅಮಿತ್ ಶಾ ಹೇಳಿದರು. ಒಂದು ಕಡೆ ರಾಷ್ಟ್ರವು ಮಹಾತ್ಮ ಗಾಂಧಿಯವರ ಆದರ್ಶ ಮತ್ತು ಆಧ್ಯಾತ್ಮಿಕ ನಾಯಕತ್ವವನ್ನು ಪಡೆದರೆ, ಮತ್ತೊಂದೆಡೆ ಸರ್ದಾರ್ ಪಟೇಲ್ ಅವರಂತಹ ಪ್ರಾಯೋಗಿಕ, ದೂರದರ್ಶಿ ಮತ್ತು ನೈಜ ನಾಯಕನ ಬೆಂಬಲವನ್ನು ಪಡೆಯಿತು. ಈ ಇಬ್ಬರ ಸಂಮ್ಮಿಲನವು ಭಾರತಕ್ಕೆ ಸಹಾಯ ಮಾಡಿದೆ. ಭಾರತದ ಸಂವಿಧಾನ ರಚನೆಯ ಸಂದರ್ಭದಲ್ಲಿ ಸರ್ದಾರ್ ಪಟೇಲ್ ಅವರು ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಗೃಹ ಸಚಿವರು ಹೇಳಿದರು. ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಂವಿಧಾನ ರಚನೆ ಮತ್ತು ರಚನೆಯ ಕಾರ್ಯವನ್ನು ನೀಡಬೇಕೆಂದು ಪ್ರತಿಪಾದಿಸಿದರು. ಸರ್ದಾರ್ ಪಟೇಲ್ ಅವರು ತಮ್ಮ ವಿಚಾರಗಳನ್ನು ಸಂವಿಧಾನ ಸಭೆಯ ಮುಂದೆ ಹಲವಾರು ಬಾರಿ ಮಂಡಿಸಿದರು, ಇದರಿಂದ ಸಂವಿಧಾನವು ಸಮತೋಲಿತವಾಗಿದೆ ಎಂದು ಗೃಹ ಸಚಿವರು ಹೇಳಿದರು. ಇದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ಸಂವಿಧಾನವನ್ನು ಅರ್ಥಮಾಡಿಕೊಳ್ಳಲು, ಸರ್ದಾರ್ ಪಟೇಲ್, ಕೆ.ಎಂ. ಮುನ್ಷಿ ಮತ್ತು ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಚರ್ಚೆಗಳನ್ನು ಓದುವಂತೆ ಅವರು ಮಕ್ಕಳಿಗೆ ಕರೆ ನೀಡಿದರು.

 ಸ್ವಾತಂತ್ರ್ಯದ ನಂತರದ 75 ವರ್ಷಗಳು ತುಂಬಾ ಕಷ್ಟಕರವಾಗಿದ್ದವು ಎಂದು ಗೃಹ ಸಚಿವರು ಹೇಳಿದರು. ದೇಶವು ಕೆಲವೊಮ್ಮೆ ಯುದ್ಧವನ್ನು ಮತ್ತು ಕೆಲವೊಮ್ಮೆ ಭಯೋತ್ಪಾದನೆಯನ್ನು ಎದುರಿಸಬೇಕಾಗಿತ್ತು. ದೇಶವು ಜಾಗತಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಸಹ ಎದುರಿಸಬೇಕಾಯಿತು, ಆದರೆ ಈ ಎಲ್ಲಾ ತೊಂದರೆಗಳ ನಡುವೆಯೂ, ಎಲ್ಲರನ್ನೂ ಒಳಗೊಂಡ ಮತ್ತು ಸರ್ವತೋಮುಖ ಅಭಿವೃದ್ಧಿಯ ಮೂಲಕ ಭಾರತದಲ್ಲಿ ಪ್ರಜಾಪ್ರಭುತ್ವದ ಅಡಿಪಾಯವನ್ನು ಭದ್ರಪಡಿಸಲಾಗಿದೆ. ಸಂವಿಧಾನದ ಆಶಯದಂತೆ ದೇಶವನ್ನು ಮುನ್ನಡೆಸಿದರು ಮತ್ತು ದೇಶದ ಭದ್ರತೆಯನ್ನು ಖಾತ್ರಿಪಡಿಸಿದರು, ಇದರಿಂದಾಗಿ ವಿಶ್ವದ ಯಾರೂ ಭಾರತದ ಸೇನೆ ಮತ್ತು ಗಡಿಯನ್ನು ಎದುರಿಸುವ ಧೈರ್ಯ ಮಾಡಲಾರರು ಎಂದು ಅವರು ಹೇಳಿದರು. ಭಾರತವು ತನ್ನ ಆರ್ಥಿಕತೆಯನ್ನು ಬಲವಾದ ಉತ್ತೇಜನದೊಂದಿಗೆ ಮುನ್ನಡೆಸಿದೆ ಎಂದು ಅವರು ಹೇಳಿದರು ಮತ್ತು ಕೆಲವೇ ವರ್ಷಗಳಲ್ಲಿ, ಮೂಲಭೂತ ಸೌಕರ್ಯಗಳ ವಿಷಯದಲ್ಲಿಯೂ ಭಾರತವು ವಿಶ್ವದ ಪ್ರಮುಖ ದೇಶಗಳಿಗೆ ಹತ್ತಿರವಾಗಲಿದೆ ಎಂದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಜಾದಿ ಕಾ ಅಮೃತ ಮಹೋತ್ಸವವನ್ನು ಮೂರು ಉದ್ದೇಶಗಳೊಂದಿಗೆ ಆಚರಿಸಲು ನಿರ್ಧರಿಸಿದ್ದಾರೆ ಎಂದು ಶ್ರೀ ಶಾ ಹೇಳಿದರು. ಒಂದು, ದೇಶದ ಮುಂಬರುವ ಯುವ ಪೀಳಿಗೆ ಸ್ವಾತಂತ್ರ್ಯ ಚಳವಳಿ ಮತ್ತು ಹೋರಾಟವನ್ನು ಅರ್ಥಮಾಡಿಕೊಳ್ಳಬೇಕು, ಎರಡನೆಯದಾಗಿ, 75 ವರ್ಷಗಳಲ್ಲಿ ನಾವು ಏನು ಸಾಧಿಸಿದ್ದೇವೆ ಮತ್ತು ಮೂರನೆಯದಾಗಿ, ಸ್ವಾತಂತ್ರ್ಯದ ಶತಮಾನೋತ್ಸವದ ವರ್ಷಕ್ಕೆ ನಾವೆಲ್ಲರೂ ಗುರಿಯನ್ನು ಹೊಂದಬೇಕು. ಯುವಕರು ಒಂದು ಸಣ್ಣ ಸಂಕಲ್ಪವನ್ನು ಮಾಡಿ ಅದನ್ನು ಈಡೇರಿಸಲು ಬದ್ಧರಾಗಬೇಕೆಂದು ಅವರು ಒತ್ತಾಯಿಸಿದರು. ಭಾರತದ ಭವಿಷ್ಯ ಉಜ್ವಲವಾಗಿದ್ದರೆ ಮಾತ್ರ ನಮ್ಮ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಶ್ರೀ ಶಾ ಹೇಳಿದರು.

ಸರ್ದಾರ್ ಪಟೇಲ್ ವಿದ್ಯಾಲಯದಲ್ಲಿ ಸಂಪೂರ್ಣ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡುತ್ತಿರುವುದಕ್ಕೆ ಶ್ರೀ ಅಮಿತ್ ಶಾ ಅವರು ಗುಜರಾತ್ ಶಿಕ್ಷಣ ಸಂಸ್ಥೆಗೆ ಧನ್ಯವಾದ ತಿಳಿಸಿದರು. ಹಿಂದಿಯೊಂದಿಗೆ ತಮಿಳು, ಉರ್ದು ಮತ್ತು ಬಂಗಾಳಿ ಕಲಿಯುವ ಅವಕಾಶವೂ ವಿದ್ಯಾರ್ಥಿಗಳಿಗೆ ಸಿಗುತ್ತದೆ. ಭಾರತದ ಯಾವುದೇ ಭಾಷೆ ಮತ್ತು ಉಪಭಾಷೆ ಕಣ್ಮರೆಯಾಗಲು ನಾವು ಬಿಡುವುದಿಲ್ಲ ಎಂದು ಹೇಳಿದರು. ಯಾವುದೇ ಭಾಷೆಯನ್ನಾದರೂ ಕಲಿಯಿರಿ ಆದರೆ ಮಾತೃಭಾಷೆಯನ್ನು ಎಂದಿಗೂ ತೊರೆಯಬೇಡಿ ಎಂದು ಶ್ರೀ ಶಾ ಯುವಕರಿಗೆ ಕರೆ ನೀಡಿದರು. ಏಕೆಂದರೆ ವ್ಯಕ್ತಿಯ ಸಾಮರ್ಥ್ಯವನ್ನು ಹೆಚ್ಚಿಸಲು, ನಿರ್ಧಾರಕ್ಕೆ ಬರಲು ಮತ್ತು ವಿಶ್ಲೇಷಣೆಯನ್ನು ಪ್ರಕ್ರಿಯೆಯನ್ನು ಸುಧಾರಿಸಲು ಉತ್ತಮ ಮಾಧ್ಯಮವೆಂದರೆ ಮಾತೃಭಾಷೆ. ಆಂಗ್ಲ ಭಾಷೆಯ ಜ್ಞಾನವು ದೇಶದಲ್ಲಿ ಬೌದ್ಧಿಕ ಸಾಮರ್ಥ್ಯದೊಂದಿಗೆ ಸಂಬಂಧ ಹೊಂದಿದೆ ಆದರೆ ಭಾಷೆ ಕೇವಲ ಅಭಿವ್ಯಕ್ತಿ ಮಾಧ್ಯಮವಾಗಿದೆ, ಭಾಷೆ ಸಾಮರ್ಥ್ಯದ ಸಂಕೇತವಲ್ಲ, ನಿಮ್ಮಲ್ಲಿ ಸಾಮರ್ಥ್ಯವಿದ್ದರೆ ಜಗತ್ತು ನಿಮ್ಮ ಮಾತನ್ನು ಕೇಳಲೇಬೇಕಾಗುತ್ತದೆ ಎಂದು ಹೇಳಿದರು. ಮಕ್ಕಳೊಂದಿಗೆ ತಮ್ಮ ಮಾತೃಭಾಷೆಯಲ್ಲಿ ಮಾತನಾಡುವಂತೆ ಶ್ರೀ ಶಾ ಪೋಷಕರನ್ನು ಒತ್ತಾಯಿಸಿದರು. ಭಾಷೆಯಿಂದಾಗಿ ಉಂಟಾಗಿರುವ ಕೀಳರಿಮೆಯ ವಾತಾವರಣವನ್ನು ಹೋಗಲಾಡಿಸುವ ಜವಾಬ್ದಾರಿ ಯುವಜನರ ಮೇಲಿದೆ ಎಂದರು. ಉತ್ತಮವಾಗಿ ಇಂಗ್ಲಿಷ್ ಮಾತನಾಡುವ ಕೆಲವೇ ಜನರಿಗೆ ದೇಶದ ಅಭಿವೃದ್ಧಿಯ ಶ್ರೇಯ ನೀಡಿದರೆ, ತಮ್ಮ ಭಾಷೆಯಲ್ಲಿ ಯೋಚಿಸುವ, ಮಾತನಾಡುವ, ಬರೆಯುವ, ಸಂಶೋಧನೆ ಮಾಡುವ ಮತ್ತು ಅಭಿವೃದ್ಧಿ ಹೊಂದುವ ಬಹುತೇಕ ಮಕ್ಕಳನ್ನು ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಕಡೆಗಣಿಸಿದಂತಾಗುತ್ತದೆ ಎಂದು ಅವರು ಹೇಳಿದರು. ಭಾಷೆಯ ಮೂಲಕ ನಮ್ಮ ಸಂಸ್ಕೃತಿ, ಸಾಹಿತ್ಯವನ್ನು ತಿಳಿದುಕೊಂಡರೆ ಆಲೋಚನಾ ಕ್ರಮವನ್ನು ಶಕ್ತಿಯುತ ಹಾಗೂ ತೀವ್ರವಾಗಿಸುತ್ತದೆ ಎಂದರು. ಮಕ್ಕಳ ಪ್ರಾಥಮಿಕ ಶಿಕ್ಷಣ ಅವರ ಮಾತೃ ಭಾಷೆಯಲ್ಲಿಯೇ ಇರಬೇಕು, ತಾಂತ್ರಿಕ ಶಿಕ್ಷಣ, ಸಂಶೋಧನೆ ಮತ್ತು ವೈದ್ಯಕೀಯ ಶಿಕ್ಷಣ ಪ್ರಾದೇಶಿಕ ಭಾಷೆಯಲ್ಲೂ ಸಿಗಬೇಕು ಎಂಬುದು ಮೋದಿ ಸರ್ಕಾರದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಮುಖ ಆಯಾಮವಾಗಿದೆ ಎಂದು ಅವರು ಹೇಳಿದರು.

ಮಹಾತ್ಮ ಗಾಂಧೀಜಿ ಮತ್ತು ಸರ್ದಾರ್ ಪಟೇಲ್ ಅವರ ದೂರದೃಷ್ಟಿಯ ಆಧಾರದ ಮೇಲೆ ವಿಶ್ವ ಸ್ಪರ್ಧೆಯಲ್ಲಿ ನಮ್ಮನ್ನು ಮುಂಚೂಣಿಗೆ ತರುವ ಆತ್ಮವಿಶ್ವಾಸ ತುಂಬಿದ ಭಾರತವನ್ನು ನಾವು ನಿರ್ಮಿಸಬೇಕಾಗಿದೆ, ಭಾಷೆಯ ಕೀಳರಿಮೆ ತೊರೆದಾಗ ಮಾತ್ರ ಅಂತಹ ಭಾರತವನ್ನು ನಿರ್ಮಿಸಲು ಸಾಧ್ಯ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಸರ್ದಾರ್ ಪಟೇಲ್ ಅವರನ್ನು ಮರೆಯಲು ಕೆಲವರು ಪ್ರಯತ್ನಿಸಿದರೂ, ಸರ್ದಾರ್ ಅವರು ಇಂದಿಗೂ ದೇಶದ ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನಲ್ಲಿದ್ದಾರೆ. ಏಕೆಂದರೆ ಅವರು ಭಾರತದ ಮಣ್ಣಿನ ಮಗ ಮತ್ತು ಭಾರತೀಯ ಸಂಸ್ಕೃತಿಯ ಪ್ರತೀಕ ಮತ್ತು ಕೀರ್ತಿಯನ್ನು ಎಂದಿಗೂ ಬಯಸದ ನೈಜ ನಾಯಕರಾಗಿದ್ದರು. ಭಾರತದ ಉಕ್ಕಿನ ಮನುಷ್ಯ 'ಸರ್ದಾರ್ ಪಟೇಲ್' ಅವರು ಸ್ವಾತಂತ್ರ್ಯದ ಸಮಯದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಹೆಚ್ಚು ಮತಗಳನ್ನು ಪಡೆದ ನಂತರವೂ ದೇಶದ ಪ್ರಧಾನಿ ಹುದ್ದೆಯನ್ನು ಬಿಟ್ಟುಕೊಟ್ಟರು, ಇದರಿಂದಾಗಿ ರಚನೆಯಾಗಬೇಕಿದ್ದ ಹೊಸ ಸರ್ಕಾರವು ವಿವಾದಗಳಿಂದ ಮುಕ್ತವಾಯಿತು ಮತ್ತು ನಮ್ಮ ಶತ್ರುಗಳು ಬಲಿಷ್ಠರಾಗಲು ಅವಕಾಶವಾಗಲಿಲ್ಲ. ಸ್ವಾತಂತ್ರ್ಯದ ಶತಮಾನೋತ್ಸವದಲ್ಲಿ ಭಾರತವನ್ನು ವಿಶ್ವದ ಅಗ್ರಗಣ್ಯ ರಾಷ್ಟ್ರವನ್ನಾಗಿ ಮಾಡುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಭಿಯಾನಕ್ಕೆ ಶಕ್ತಿ ತುಂಬಲು ಎಲ್ಲಾ ವಿದ್ಯಾರ್ಥಿಗಳು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಬಗ್ಗೆ ಓದಿ ಅವರು ತೋರಿಸಿದ ಮಾರ್ಗವನ್ನು ಅನುಸರಿಸುವಂತೆ ಗೃಹ ಸಚಿವರು ಕರೆ ನೀಡಿದರು.

*****


(Release ID: 1872520) Visitor Counter : 413