ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗುಜರಾತ್ ನ ರಾಜ್ ಕೋಟ್ ನಲ್ಲಿ ಬಹು ಅಭಿವೃದ್ಧಿ ಉಪಕ್ರಮಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಮಾಡಿದ ಭಾಷಣದ ಕನ್ನಡ ಭಾಷಾಂತರ

ಪ್ರಕಟಣಾ ದಿನಾಂಕ: 19 OCT 2022 11:15PM by PIB Bengaluru

ರಾಜಕೋಟೆಯ ನೀವೆಲ್ಲರೂ ಹೇಗಿದ್ದೀರಿ?

ನೀವು ಸಂತೋಷವಾಗಿದ್ದೀರಾ?

ಇತ್ತೀಚೆಗೆ, ನೀವು ನವರಾತ್ರಿಯ ಅದ್ಭುತ ಹಬ್ಬವನ್ನು ಆಯೋಜಿಸಿದ್ದೀರಿ. ಎರಡು ವರ್ಷಗಳ ನಂತರ ಆಚರಿಸಲು ನಿಮಗೆ ಈ ಅವಕಾಶ ಸಿಕ್ಕಿತು. ದೀಪಾವಳಿಯ ಸಿದ್ಧತೆ ಹೇಗಿದೆ? ನಾನು ಈಗಾಗಲೇ ನಿಮ್ಮ ದೀಪಾವಳಿ ಸಿದ್ಧತೆಗಳನ್ನು ನೋಡುತ್ತಿದ್ದೇನೆ. ಇಂದು, ರಾಜಕೋಟ್ ಸರ್ವಾಲಂಕೃತಗೊಂಡಿದೆ. ನವರಾತ್ರಿ ಮತ್ತು ವಿಜಯದಶಮಿ ಹಬ್ಬಗಳು ಈಗಷ್ಟೇ ಮುಗಿದಿದ್ದು, ನೀವು 'ಗರ್ಬಾ' ಆಡಿ ದಣಿದಿರಬಹುದು ಎಂದು ಯಾರಾದರೂ ಊಹಿಸಬಹುದೇ?, ನೀವು ಧಂತೇರಸ್ ಗಾಗಿ ಕಾಯುತ್ತಿದ್ದೀರಿ ಮತ್ತು ದೀಪಾವಳಿಗೆ ತಯಾರಿ ನಡೆಸುತ್ತಿದ್ದೀರಿ. ಹೊಸ ವರ್ಷವು ಹತ್ತಿರದಲ್ಲಿದೆ ಮತ್ತು ಸಣ್ಣ ವ್ಯಾಪಾರಿಗಳು ಮಾಡಬೇಕಾದದ್ದು ಬಹಳಷ್ಟಿದೆ, ಆದಾಗ್ಯೂ  ರಾಜ್ ಕೋಟ್ ಇಂತಹ ಭವ್ಯ ಕಾರ್ಯಕ್ರಮವನ್ನು ಆಯೋಜಿಸಿದೆ.  ನನ್ನನ್ನು ತುಂಬಾ ಪ್ರೀತಿ ಮತ್ತು ಆಶೀರ್ವಾದದಿಂದ ಸ್ವಾಗತಿಸಿದ್ದಕ್ಕಾಗಿ ಮತ್ತು ಗೌರವಿಸಿದ್ದಕ್ಕಾಗಿ ನಾನು ರಾಜ್ ಕೋಟ್ ಗೆ ನಮನ ಸಲ್ಲಿಸುತ್ತೇನೆ.

ನಮಗೆ ದೀಪಾವಳಿ ಎಂದರೆ ವರ್ಷವಿಡೀ ಮಾಡಿದ ಎಲ್ಲವನ್ನೂ ಲೆಕ್ಕಹಾಕುವುದು ಮತ್ತು ಹೊಸ ವರ್ಷವೆಂದರೆ ಹೊಸ ಸಂಕಲ್ಪದ ಆರಂಭ ಮತ್ತು ದೃಢಸಂಕಲ್ಪದಿಂದ ಮುಂದುವರಿಯುವ ಪ್ರವೃತ್ತಿ. ರಾಜ್ ಕೋಟ್ ಸೇರಿದಂತೆ ಇಡೀ ಸೌರಾಷ್ಟ್ರದಲ್ಲಿ ಇಂದು ಪೂರ್ಣಗೊಂಡಿರುವ ಹಲವಾರು ಯೋಜನೆಗಳ ರೂಪದಲ್ಲಿ ನಾನು ನಿಮಗೆ ದೀಪಾವಳಿ ಉಡುಗೊರೆಗಳನ್ನು ನೀಡುತ್ತಿದ್ದೇನೆ. ಇಂದು ಶಂಕುಸ್ಥಾಪನೆ ನೆರವೇರಿಸಿದ ಯೋಜನೆಗಳು ಒಂದು ರೀತಿಯಲ್ಲಿ ಹೊಸ ಸಂಕಲ್ಪಗಳಿಗೆ ಅಡಿಪಾಯವಾಗಿವೆ. ಸಂಪರ್ಕ, ಕೈಗಾರಿಕೆ, ನೀರು, ಜನರ ಸೌಲಭ್ಯಗಳು ಇತ್ಯಾದಿಗಳಿಗೆ ಸಂಬಂಧಿಸಿದ ಇಂತಹ ಅನೇಕ ಯೋಜನೆಗಳು ರಾಜಕೋಟ್ ಅನ್ನು ಅತ್ಯಂತ ಸದೃಢಗೊಳಿಸುತ್ತದೆ. ನಾಗರಿಕರ ಜೀವನವು ಸುಗಮವಾಗುತ್ತದೆ.

ವಿಶ್ವದ ಅತ್ಯುತ್ತಮ ತಂತ್ರಜ್ಞಾನವನ್ನು ಬಳಸಿಕೊಂಡು ದೇಶದ ಆರು ಸ್ಥಳಗಳಲ್ಲಿ ಮನೆಗಳನ್ನು ನಿರ್ಮಿಸಲು ಹೊಸ ಅಭಿಯಾನವನ್ನು ಪ್ರಾರಂಭಿಸಲಾಯಿತು. ಅವುಗಳಲ್ಲಿ ರಾಜ್ ಕೋಟ್ ಕೂಡ ಒಂದು. ಮತ್ತು ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಇಲ್ಲಿ 1144 ಮನೆಗಳನ್ನು ನಿರ್ಮಿಸಲಾಗಿದೆ. ಕೊರೊನಾ ಬಿಕ್ಕಟ್ಟಿನ ನಡುವೆಯೂ ಈ ಮನೆಗಳನ್ನು ನಿರ್ಮಿಸಿದ ವೇಗ ಮತ್ತು ತಂತ್ರಜ್ಞಾನವು ಉತ್ತಮ ಆಡಳಿತ, ಬದ್ಧತೆ ಮತ್ತು ಜನರ ಅಗತ್ಯಗಳ ಬಗ್ಗೆ ಕಾಳಜಿ ಇದ್ದರೆ ಉತ್ತಮ ಕೆಲಸ ಸಾಧ್ಯ ಎಂಬುದನ್ನು ತೋರಿಸುತ್ತದೆ. ಭಾರತ ಸರ್ಕಾರದ ಸಚಿವರಾದ ಹರ್ದೀಪ್ ಸಿಂಗ್ ಪುರಿ ಮತ್ತು ಗುಜರಾತ್ ಸರ್ಕಾರದ ಮುಖ್ಯಮಂತ್ರಿ ಭೂಪೇಂದ್ರಭಾಯಿ ಮತ್ತು ಅವರ ತಂಡ ಹಾಗೂ ರಾಜ್ ಕೋಟ್ ಗೆ ಈ ಮನೆಗಳಿಗಾಗಿ ಅಭಿನಂದನೆಗಳು.

ಇಂದು, ಹೊಸ ತಂತ್ರಜ್ಞಾನದಿಂದ ಮಾಡಿದ ಈ ಸುಂದರ ಮನೆಗಳ ಮಾಲೀಕರಾದ ತಾಯಂದಿರು ಮತ್ತು ಸಹೋದರಿಯರನ್ನು ನಾನು ವಿಶೇಷವಾಗಿ ಅಭಿನಂದಿಸುತ್ತೇನೆ. ದೀಪಾವಳಿಯ ಸಮಯದಲ್ಲಿ ನಿರ್ಮಿಸಲಾದ ನಿಮ್ಮ ಈ ಮನೆಗಳಲ್ಲಿ ಲಕ್ಷ್ಮಿ ದೇವಿಯು ನೆಲೆಸಲಿ ಎಂದು ಪ್ರಾರ್ಥಿಸೋಣ. ಕೀಲಿಕೈಗಳನ್ನು ಹಸ್ತಾಂತರಿಸುವಾಗ ನಾನು ಮನೆಯ ಬಗ್ಗೆ ಎಲ್ಲರನ್ನೂ ಕೇಳುತ್ತಿದ್ದೆ. ಅವರ ಮುಖದಲ್ಲಿನ ಸಂತೃಪ್ತಿಯು ಮನೆಗಳಿಗೆ ಸಂಬಂಧಿಸಿದ ಎಲ್ಲವನ್ನೂ ಸಂಕ್ಷಿಪ್ತಗೊಳಿಸಿ ಹೇಳುತ್ತಿತ್ತು. ಇಲ್ಲದಿದ್ದರೆ, ಸರ್ಕಾರಿ ಮನೆಗಳ  ಉಲ್ಲೇಖಿಸದಿರುವುದು ಉತ್ತಮ. ಆದರೆ ಈಗ ಜನರಿಗೆ ಉತ್ತರದಾಯಿಯಾಗಿರುವ ಸರ್ಕಾರವಿದೆ.

ಕಳೆದ 21 ವರ್ಷಗಳಲ್ಲಿ, ನಾವು ಒಟ್ಟಿಗೆ ಕನಸು ಕಂಡಿದ್ದೇವೆ, ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಮತ್ತು ಅನೇಕ ಸಾಧನೆಗಳ ಔನ್ನತ್ಯ ಸಾಧಿಸಿದ್ದೇವೆ. ಮತ್ತು ನನಗೆ, ರಾಜ್ ಕೋಟ್ ನನ್ನ ಮೊದಲ ಶಾಲೆಯಾಗಿತ್ತು. ಮಹಾತ್ಮಾ ಗಾಂಧಿಯವರು ಪೋರ್ ಬಂದರಿನಲ್ಲಿ ಜನಿಸಿ ರಾಜ್ ಕೋಟ್ ನಲ್ಲಿ ಶಾಲಾ ಶಿಕ್ಷಣವನ್ನು ಪಡೆಯುವ ಅದೃಷ್ಟ ಹೊಂದಿದ್ದರು. ಅಂತೆಯೇ, ನಾನು ಉತ್ತರ ಗುಜರಾತಿನಲ್ಲಿ ಜನಿಸಿ,  ಅಧಿಕಾರ ಮತ್ತು ರಾಜಕೀಯದಲ್ಲಿ ನನ್ನ ಮೊದಲ ಅವಧಿಯನ್ನು ರಾಜ್ ಕೋಟ್ ನಿಂದ ಪ್ರಾರಂಭಿಸುವ ಅದೃಷ್ಟವಂತನಾಗಿದ್ದೆ. ರಾಜ್ ಕೋಟ್ ನ ನೆಲದ ಶಕ್ತಿಯನ್ನು ನೋಡಿ.  ಇದು ಗಾಂಧೀಜಿಯವರನ್ನು ಆಶೀರ್ವದಿಸಿತು ಮತ್ತು ಇಂದು ಗಾಂಧೀಜಿ ನಮಗೆ ಸ್ಫೂರ್ತಿಯಾಗಿದ್ದಾರೆ. ಅಂತೆಯೇ, ನೀವು ನನ್ನನ್ನು ಆಶೀರ್ವದಿಸಿ ಎರಡು ದಶಕಗಳು ಆಗಿದ್ದು, ನನ್ನ ಜವಾಬ್ದಾರಿಯು ನಿರಂತರವಾಗಿ ಹೆಚ್ಚುತ್ತಿದೆ. ಇದು ರಾಜ್ ಕೋಟ್ ನ ಆಶೀರ್ವಾದದ ಶಕ್ತಿಯಾಗಿದೆ.

ನಮ್ಮ ವಜುಭಾಯಿ (ವಾಲಾ) ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟರು ಮತ್ತು ನನ್ನನ್ನು ರಾಜ್ ಕೋಟ್ ಗೆ ಕಳುಹಿಸಲಾಯಿತು ಮತ್ತು ನೀವು ನನ್ನನ್ನು ಒಪ್ಪಿಕೊಂಡಿದ್ದೀರಿ. ಈ ಪಯಣವು ನಿಮ್ಮ ಆಶೀರ್ವಾದದಿಂದ ಪ್ರಾರಂಭವಾಯಿತು ಮತ್ತು ಇಂದು ಈ ಪಯಣವು ಗುಜರಾತ್ ಮತ್ತು ದೇಶದ ಅಭಿವೃದ್ಧಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಅವಕಾಶವಾಗಿದೆ. ರಾಜ್ ಕೋಟ್ ನ ಈ ಋಣವನ್ನು ನಾನು ಎಂದಿಗೂ ತೀರಿಸಲಾರೆ. ನಾನು ನಿಮಗೆ ಚಿರಋಣಿಯಾಗಿದ್ದೇನೆ. ಸಹೋದರರೇ ಈಗ ನಾನು ನಿಮ್ಮ ಮಧ್ಯದಲ್ಲಿರುವುದರಿಂದ, ನಾನು ತಲೆಬಾಗಿ ನಮಸ್ಕರಿಸುತ್ತೇನೆ ಮತ್ತು ಈ ಅಭಿವೃದ್ಧಿ ಯೋಜನೆಗಳನ್ನು ನಿಮಗೆ ಸಂಪೂರ್ಣ ಸಮರ್ಪಣಾ ಭಾವದಿಂದ ಅರ್ಪಿಸುತ್ತೇನೆ.

ಸಹೋದರರೇ ವಿದ್ಯಾರ್ಥಿಯಾಗಿದ್ದಾಗ ನಾನು ನಿಮ್ಮಿಂದ ಸಾಕಷ್ಟು ಕಲಿತಿದ್ದೇನೆ. ನಾನು ಬಹಳಷ್ಟು ಅರ್ಥಮಾಡಿಕೊಂಡಿದ್ದೇನೆ ಮತ್ತು ರಾಜ್ ಕೋಟ್ ನನಗೆ ಕಲಿಸಿದ್ದು, ಇಂದು ದೇಶಕ್ಕೆ ಉಪಯುಕ್ತವಾಗುತ್ತಿದೆ. ಇಂದು, ಗುಜರಾತ್ ನ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಚರ್ಚಿಸಲಾಗುತ್ತದೆ. ದೇಶದ ಎಲ್ಲಾ ಭಾಗಗಳಿಂದ ಕ್ರೀಡಾಪಟುಗಳು ದೇಶದ ಅತಿದೊಡ್ಡ ಕ್ರೀಡಾ ಕೂಟಕ್ಕಾಗಿ ಗುಜರಾತ್ ಗೆ ಬಂದಾಗ ನವರಾತ್ರಿ ಉತ್ಸವವನ್ನು ಆಚರಿಸಲಾಗುತ್ತಿತ್ತು. ಹೆಚ್ಚಿನ ಆಟಗಾರರು ನನ್ನೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು ಮತ್ತು ಇನ್ನೂ ಅನೇಕರು ಗುಜರಾತ್ ನಲ್ಲಿ ತಮ್ಮ ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರು, ಬಾಲಕಿಯರು ಮತ್ತು ಸಹೋದರಿಯರು ಚಿನ್ನದ ಆಭರಣಗಳನ್ನು ಧರಿಸಿ ರಾತ್ರಿ ಎಲ್ಲಿಗೇ ಹೋದರೂ ಸಹ ಯಾವುದೇ ಭಯ ಅಥವಾ ಆತಂಕವಿಲ್ಲ ಎಂದು ಹೇಳಿದರು. ರಾಜ್ ಕೋಟ್ ಮತ್ತು ಗುಜರಾತಿನಲ್ಲಿ ಈ ಎಲ್ಲ ಸಂಗತಿಗಳನ್ನು ಕಂಡು ದೇಶದೆಲ್ಲೆಡೆಯಿಂದ ಬಂದ ಜನರು ಆಶ್ಚರ್ಯಚಕಿತರಾದರು.

ಇದು ಕಾನೂನಿನ ಆಡಳಿತಕ್ಕೆ ಆದ್ಯತೆ ನೀಡುವ ಫಲಿತಾಂಶವಾಗಿದೆ. ಇಲ್ಲವಾದರೆ, ರಾಜ್ ಕೋಟ್ ಮತ್ತು ಇಡೀ ಸೌರಾಷ್ಟ್ರದಲ್ಲಿ ಪರಿಸ್ಥಿತಿ ಹೇಗಿತ್ತು? ಜನಸಂಘದ ದಿನಗಳಲ್ಲಿ, ನಮ್ಮ ಚಿಮನ್ ಭಾಯ್ ಶುಕ್ಲಾ ಮತ್ತು ಸೂರ್ಯಕಾಂತ್ ಭಾಯಿ ಆಚಾರ್ಯರು ಸಮಾಜಘಾತುಕ ಶಕ್ತಿಗಳ ವಿರುದ್ಧ ಒಂದು ಸಮಿತಿಯನ್ನು ರಚಿಸಿದ್ದರು ಮತ್ತು ಒಂದು ಅಭಿಯಾನವನ್ನು ಪ್ರಾರಂಭಿಸಿದ್ದರು. ಆಗ ನಾನು ರಾಜಕೀಯದಲ್ಲಿ ಇರಲಿಲ್ಲ. ಜನಸಂಘವು ಈ ಸಮಾಜಘಾತುಕ ಶಕ್ತಿಗಳ ವಿರುದ್ಧ ರಾಜ್ ಕೋಟ್ ಮತ್ತು ಇಡೀ ಸೌರಾಷ್ಟ್ರದಲ್ಲಿ ಹೋರಾಡಿತ್ತು.

ಇಂದು, ಬಿಜೆಪಿ ಸರ್ಕಾರ ರಚನೆಯಾದ ನಂತರ ಸರಿಯಾದ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಶಾಂತಿ ಇದೆ. ಇಂದು ಸಮಾಜದ ಪ್ರತಿಯೊಂದು ವರ್ಗವು ಅಪರಾಧಿಗಳು, ಮಾಫಿಯಾ, ಭಯೋತ್ಪಾದಕರು ಅಥವಾ ಅತಿಕ್ರಮಣಕಾರರ ಗುಂಪು, ಸಮಾಜಘಾತುಕ ಶಕ್ತಿಗಳಿಂದ ಮುಕ್ತಿ ಪಡೆದಿವೆ. ಶಾಂತಿ, ಸಾಮರಸ್ಯ ಮತ್ತು ಏಕತೆ ಪ್ರತಿಯೊಬ್ಬ ಪೋಷಕರ ಮನಸ್ಸಿನಲ್ಲಿ ಮಕ್ಕಳ ಉಜ್ವಲ ಭವಿಷ್ಯದ ಖಾತ್ರಿ ನೀಡಿದೆ. ಮತ್ತು ಇದರ ಹಿಂದೆ ಬಹಳ ಕಠಿಣ ಪರಿಶ್ರಮವಿದೆ. ಸಹೋದರರೇ, ಇಂದು ನಾನು ತುಂಬಾ ಹೆಮ್ಮೆ ಮತ್ತು ಸಂತೋಷ ಪಡುತ್ತೇನೆ.

ನಾವು ಈ ರೀತಿಯ ಪ್ರಗತಿಯನ್ನು ನಿರಂತರವಾಗಿ ಮಾಡುತ್ತಿದ್ದೇವೆ. ಕಳೆದ ಕೆಲವು ದಶಕಗಳಲ್ಲಿ ನಾವು ನಿರಂತರ ಪ್ರಯತ್ನಗಳನ್ನು ಮಾಡಿದ್ದೇವೆ, ಇದರಿಂದ ನಮ್ಮ ಗುಜರಾತ್ ಹೆಚ್ಚು ಸಮರ್ಥವಾಗುತ್ತದೆ. ಅದಕ್ಕೆ ಅಗತ್ಯವಾದ ಪರಿಸರ ಮತ್ತು ವಾತಾವರಣವನ್ನು ನಾವು ಯಾವಾಗಲೂ ಪ್ರೋತ್ಸಾಹಿಸುತ್ತಿದ್ದೆವು. ಇಂದು ಸರ್ಕಾರದ ಪ್ರಯತ್ನದ ಫಲವಾಗಿ ಗುಜರಾತ್ ವೇಗವಾಗಿ ಪ್ರಗತಿ ಸಾಧಿಸುತ್ತಿದೆ.

ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಅಭಿವೃದ್ಧಿ ಹೊಂದಿದ ಗುಜರಾತ್ ಮತ್ತು ಸಮೃದ್ಧ ಭಾರತಕ್ಕಾಗಿ ಸಮೃದ್ಧ ಗುಜರಾತ್ ಎಂಬ ಮಂತ್ರವನ್ನು ನಾವು ಮುಂದುವರಿಸಿದೆವು. ನಾವು ಚೈತನ್ಯದಾಯಕ (ವೈಬ್ರೆಂಟ್) ಗುಜರಾತ್ ಅಭಿಯಾನವನ್ನು ಪ್ರಾರಂಭಿಸಿದ್ದೇವೆ ಮತ್ತು ಹೂಡಿಕೆಗಾಗಿ ವಿಶ್ವದಾದ್ಯಂತದ ಜನರನ್ನು ಆಹ್ವಾನಿಸಿದ್ದೇವೆ. ನಾವು ಕೃಷಿ ಮಹೋತ್ಸವವನ್ನು ಸಹ ಆಯೋಜಿಸಿದ್ದೇವೆ. ಈ ಕೃಷಿ ಮಹೋತ್ಸವವು ಬೇಸಿಗೆಯಲ್ಲಿ ಒಂದು ತಿಂಗಳ ಕಾಲ ನಡೆಯುತ್ತದೆ. ಈ ಹಿಂದೆ ಕ್ಷಾಮ ಇದ್ದುದರಿಂದ ಕೃಷಿ ಮಾಡಲು ಸಾಧ್ಯವಾಗದ ರಾಜ್ಯವು ಇಂದು ಸಾಕಷ್ಟು ಆಹಾರ ಧಾನ್ಯಗಳನ್ನು ಉತ್ಪಾದಿಸುತ್ತಿದೆ. ಈ ರಾಜ್ಯವು ಶೇಕಡಾ 9-10 ರಷ್ಟು ಕೃಷಿ ವೃದ್ಧಿಯನ್ನು ಸಾಧಿಸುವ ಮೂಲಕ ಭಾರತದ ಜನರ ಗಮನವನ್ನು ಸೆಳೆದಿದೆ. ಬಡವರನ್ನು ಸಶಕ್ತಗೊಳಿಸಲು ಗುಜರಾತ್ ನಲ್ಲಿ ಗರೀಬ್ ಕಲ್ಯಾಣ್ ಮೇಳಗಳನ್ನು ನಡೆಸಲಾಗುತ್ತದೆ. ಬಡವರು ಮತ್ತು ಮಧ್ಯಮ ವರ್ಗದ ಜನರು ಸಶಕ್ತರಾದಾಗ, ಇಡೀ ಸಮಾಜವು ಆವೇಗವನ್ನು ಪಡೆಯುತ್ತದೆ ಎಂದು ನಾವು ನೋಡಿದ್ದೇವೆ. ಮತ್ತು ಅದರ ಮೇಲೆ, ನಿಮ್ಮ ತಲೆಯ ಮೇಲೆ ಛಾವಣಿ ಇದ್ದರೆ, ನೀವು ನಿಮ್ಮ ಸ್ವಂತ ಮನೆಯನ್ನು ಪಡೆದಾಗ, ಅದು ಗೌರವಾನ್ವಿತ ಜೀವನದ ಪ್ರಾರಂಭಕ್ಕೆ ಕಾರಣವಾಗುತ್ತದೆ. ಪ್ರತಿಯೊಬ್ಬರೂ ತಮ್ಮದೇ ಆದ ಮನೆಯನ್ನು ಹೊಂದುವ ಬಯಕೆಯನ್ನು ಹೊಂದಿರುತ್ತಾರೆ.

ನಿಮ್ಮ ಸರ್ಕಾರವು ಮಧ್ಯಮ ವರ್ಗ ಮತ್ತು ಬಡವರಿಗಾಗಿ ತಮ್ಮದೇ ಆದ ಮನೆಯನ್ನು ನಿರ್ಮಿಸಲು ಹಲವಾರು ಯೋಜನೆಗಳನ್ನು ಪ್ರಾರಂಭಿಸಿದೆ. ಮನೆಯಲ್ಲಿ ವಾಸಿಸುವುದನ್ನು ಆನಂದಿಸುವಂತೆ ಮನೆ ಇರಬೇಕು. ಆಧುನಿಕ ಜೀವನದ ಅಗತ್ಯಗಳನ್ನು ಪೂರೈಸಲು ಅದು ಶೌಚಾಲಯಗಳು, ವಿದ್ಯುತ್, ನೀರು, ಅನಿಲ, ಇಂಟರ್ನೆಟ್ ಸಂಪರ್ಕ, ಆಪ್ಟಿಕಲ್ ಫೈಬರ್ ನೆಟ್ವರ್ಕ್ ಇತ್ಯಾದಿಗಳನ್ನು ಹೊಂದಿರಬೇಕು.

ಒಬ್ಬ ಸಾಮಾನ್ಯ ಮನುಷ್ಯನು ತನ್ನ ಕಠಿಣ ಪರಿಶ್ರಮದಿಂದ ಬಡತನದಿಂದ ಹೊರಬರುತ್ತಾನೆ, ಕುಟುಂಬದಲ್ಲಿ ಯಾರಾದರೂ ಅನಾರೋಗ್ಯಕ್ಕೆ ಒಳಗಾದರೆ ಮತ್ತೆ ಬಡತನದ ಚಕ್ರದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಅಂತಹ ಸಂದರ್ಭದಲ್ಲಿ, ಬಡ ಕುಟುಂಬವು ಭಿಕ್ಷೆ ಬೇಡುವಂತಾಗುತ್ತದೆ. ಆದರೆ ನಮ್ಮ ಸಮಾಜದಲ್ಲಿ ಆರೋಗ್ಯ ಭದ್ರತೆ ಇದ್ದರೆ, ಆ ಬಡವರು ಚಿಂತೆಗಳಿಂದ ಮುಕ್ತರಾಗುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು, ನಾವು ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅಥವಾ ಪಿಎಂ-ಜೆಎವೈ ಅನ್ನು ಜಾರಿಗೆ ತಂದಿದ್ದೇವೆ.  ಈಗ ಪಿಎಂ-ಜೆಎವೈ ಯೋಜನೆಯಡಿ, ಐದು ಲಕ್ಷ ರೂಪಾಯಿಗಳವರೆಗೆ ಉಚಿತ ಚಿಕಿತ್ಸೆಯನ್ನು ಸಹ ನೀಡಲಾಗುತ್ತಿದೆ. ಮತ್ತು ಈ ಯೋಜನೆಯು ಕೋಟ್ಯಂತರ ಜನರಿಗೆ, ಸಹೋದರರಿಗೆ ಪ್ರಯೋಜನವನ್ನು ನೀಡುತ್ತಿದೆ.

ಸಹೋದರ ಸಹೋದರಿಯರೇ,
'ಗರೀಬಿ ಹಟಾವೋ' ಮತ್ತು 'ರೋಟಿ-ಕಪ್ಡಾ' ಎಂಬ ಘೋಷಣೆಗಳು ಬಹಳ ಜನಪ್ರಿಯವಾಗಿದ್ದವು. ಈ ಘೋಷಣೆಗಳು ಎಷ್ಟು ಬೇಜವಾಬ್ದಾರಿಯಿಂದ ಕೂಡಿತ್ತೆಂದರೆ, ನಾವು ಅರ್ಧ ಚಪಾತಿ ತಿನ್ನುತ್ತಿದ್ದೆವು, ಆದರೆ ಅನೇಕ ವಿಷಯಗಳನ್ನು ಖಚಿತಪಡಿಸಿಕೊಳ್ಳುತ್ತಿದ್ದೆವು. ಇದು ಹಲವಾರು ದಶಕಗಳವರೆಗೆ ಮುಂದುವರಿಯಿತು. ಆದರೆ ಇವು ಕೇವಲ ಘೋಷಣೆಗಳು ಮತ್ತು ನಾನು ನಿಮ್ಮ ಜೀವನವನ್ನು ಬದಲಾಯಿಸಬೇಕಾಗಿದೆ ಎಂದು ನಾನು ಹೇಳಿದೆ. ನಮಗೆ ಅರ್ಧ ಚಪಾತಿ ಅಗತ್ಯವಿಲ್ಲ ಆದರೆ ಸರಿಯಾದ ಆಹಾರ ಬೇಕು. ಹಸಿದ ವ್ಯಕ್ತಿಯು ನಿಮ್ಮ ಮನೆಗೆ ಬಂದರೆ ನೀವು ಅವನಿಗೆ ಆಹಾರವನ್ನು ನೀಡಲು ಸಾಧ್ಯವಾಗುವಂತೆ ನಿಮ್ಮ ಜೀವನವು ಇರಬೇಕು. ಈ ಜನರು ರಾಜಕೀಯಕ್ಕೆ ಸೇರುವ ಮೂಲಕ ತಮಗಾಗಿ ಅರಮನೆಗಳನ್ನು ನಿರ್ಮಿಸಿಕೊಂಡರು, ಆದರೆ ಬಡವರ ಮನೆಗಳ ಬಗ್ಗೆ ಎಂದಿಗೂ ಕಾಳಜಿ ವಹಿಸಲಿಲ್ಲ. ಬಡವರಿಗೆ ಪಕ್ಕಾ ಮನೆಗಳನ್ನು ಒದಗಿಸಲು ನಾನು ದೇಶವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿದೆ.

ಇದರ ಹಿಂದೆ ಒಂದು ಶಕ್ತಿ ಇದೆ. ಇಂದು, ರಾಜ್ ಕೋಟ್ ಮತ್ತು ಇಡೀ ಗುಜರಾತ್ ಕೈಗಾರಿಕೆಗಳ ಸ್ಥಾಪನೆಯಲ್ಲಿ ಹೆಸರು ಗಳಿಸಿದೆ. ಹಲವಾರು ವರ್ಷಗಳ ಹಿಂದೆ ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಭಾಷಣ ಮಾಡಿದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಹಲವಾರು ವರ್ಷಗಳ ಹಿಂದೆ, ಮೊರ್ಬಿ, ರಾಜ್ ಕೋಟ್ ಮತ್ತು ಜಾಮ್ ನಗರದ ಇಡೀ ಪ್ರದೇಶವು ಶೀಘ್ರದಲ್ಲೇ ಮಿನಿ-ಜಪಾನ್ ಆಗಲಿದೆ ಎಂದು ನಾನು ಊ ಹೆ ಮಾಡಿದ್ದೆ. ಆ ಸಮಯದಲ್ಲಿ, ಜನರು ನನ್ನನ್ನು ಗೇಲಿ ಮಾಡಿದರು. ನನ್ನ ಸಹೋದರರೇ, ನನ್ನ ಭವಿಷ್ಯವಾಣಿ ನಿಜವಾಯಿತೋ ಇಲ್ಲವೋ ಎಂದು ನೀವು ನನಗೆ ಹೇಳುತ್ತೀರಿ. ಇಂದು ರಾಜ್ ಕೋಟ್ ಎಂಜಿನಿಯರಿಂಗ್ ಉದ್ಯಮದ ಕೇಂದ್ರವಾಗಿ ಮಾರ್ಪಟ್ಟಿದೆ. ಮೊರ್ಬಿ, ರಾಜ್ ಕೋಟ್ ಮತ್ತು ಜಾಮ್ ನಗರಗಳ ಈ ಇಡೀ ಪ್ರದೇಶವು ಗುಜರಾತನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಶಕ್ತಿಯನ್ನು ಹೊಂದಿದೆ ಎಂದು ಆ ಸಮಯದಲ್ಲೇ ನಾನು ಕಂಡುಕೊಂಡಿದ್ದೆ.

ಸಹೋದರ ಸಹೋದರಿಯರೇ,
ಜನರಿಗೆ ಮನೆಗಳನ್ನು ನೀಡುವ ಭರವಸೆ ವಿಚಾರದಲ್ಲಿ, ನಾವು ಕಳೆದ ಎಂಟು ವರ್ಷಗಳಲ್ಲಿ ಹಳ್ಳಿಗಳು ಮತ್ತು ನಗರಗಳ ಜನರಿಗೆ ಮೂರು ಕೋಟಿಗೂ ಹೆಚ್ಚು ಪಕ್ಕಾ ಮನೆಗಳನ್ನು ನೀಡಿದ್ದೇವೆ. ಗುಜರಾತ್ ಗೆ 10 ಲಕ್ಷ ಪಕ್ಕಾ ಮನೆಗಳನ್ನು ನೀಡುವ ಭರವಸೆಯಲ್ಲಿ, ಏಳು ಲಕ್ಷ ಮನೆಗಳನ್ನು ಈಗಾಗಲೇ ಜನರಿಗೆ ಹಸ್ತಾಂತರಿಸಲಾಗಿದೆ. ಗುಜರಾತನ್ನು ಮುಂದಕ್ಕೆ ಕೊಂಡೊಯ್ಯಲು ಈ ಕೆಲಸ ಮಾಡಿದ್ದಕ್ಕಾಗಿ ನಾನು ಭೂಪೇಂದ್ರಭಾಯಿ ಮತ್ತು ಅವರ ತಂಡವನ್ನು ಅಭಿನಂದಿಸುತ್ತೇನೆ. ಬಡವರ ಬಗ್ಗೆ ಮಾತ್ರವಲ್ಲ, ಮಧ್ಯಮ ವರ್ಗದ ಜನರ ಬಗ್ಗೆಯೂ ಅವರಿಗಿರುವ ಕಾಳಜಿಯನ್ನು ನಾನು ಮೆಚ್ಚುತ್ತೇನೆ. ರೇರಾವನ್ನು ಜಾರಿಗೆ ತರುವ ಮೂಲಕ ನಾವು ಮಧ್ಯಮ ವರ್ಗದ ಜನರ ಕನಸುಗಳನ್ನು ಭದ್ರಪಡಿಸಿದ್ದೇವೆ.

ಗುಜರಾತ್ ನಲ್ಲಿ ಮಧ್ಯಮ ವರ್ಗದ ಜನರು ತಮ್ಮ ಸ್ವಂತ ಮನೆಗಳನ್ನು ನಿರ್ಮಿಸಲು ನಾವು 11,000 ಕೋಟಿ ರೂಪಾಯಿಗಳನ್ನು ನೀಡಿದ್ದೇವೆ. ಗುಜರಾತ್ ನಲ್ಲಿ ಎಷ್ಟು ಕೆಲಸಗಳು ನಡೆಯುತ್ತಿವೆಯೆಂದರೆ ಈಗ ಹೊರಗಿನಿಂದ ಕಾರ್ಮಿಕರನ್ನು ಕರೆತರಬೇಕಾಗಿದೆ. ನಾವು ಈ ಕಾರ್ಮಿಕರಿಗೆ ಮನೆಗಳನ್ನು ಸಹ ಯೋಜಿಸುತ್ತಿದ್ದೇವೆ, ಇದರಿಂದ ಅವರು ತಮ್ಮ ಜೀವನದಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ.

ಹಿಂದಿನ ಸರ್ಕಾರಗಳ ಅವಧಿಯಲ್ಲಿ ಮನೆಗಳನ್ನು ನಿರ್ಮಿಸಿದ ರೀತಿಯಲ್ಲಿ ನಾವು ನಿರ್ಮಿಸುವುದಿಲ್ಲ. ನಾವು ಯಾವುದೇ ಉಪಕಾರ ಮಾಡುವುದಿಲ್ಲ. ನೀವು ಸ್ವಾವಲಂಬಿ ಮತ್ತು ಸಂಪದ್ಭರಿತರಾಗಲು ನಾವು ಈ ಎಲ್ಲಾ ಕೆಲಸಗಳನ್ನು ಮಾಡುತ್ತೇವೆ. ನಾವು ಏನೇ ಮಾಡಿದರೂ ಬಹು ಆಯಾಮದ ವಿಧಾನವಿರುತ್ತದೆ. ರಾಜ್ ಕೋಟ್ ನ ಈ ಲೈಟ್ ಹೌಸ್ ಯೋಜನೆಯು ನಮ್ಮ ಸಮಾಜವನ್ನು ಸದೃಢಗೊಳಿಸುವ ಮತ್ತು ಸ್ವತಂತ್ರ ಭಾರತದ ಕನಸುಗಳನ್ನು ಈಡೇರಿಸುವ ನಮ್ಮ ನಿರಂತರ ಪ್ರಯತ್ನಗಳ ಒಂದು ಭಾಗವಾಗಿದೆ.

ರಾಜ್ ಕೋಟ್ ನ ಈ ಲೈಟ್ ಹೌಸ್ ಯೋಜನೆಯು ದೇಶಕ್ಕೆ ಒಂದು ರೀತಿಯಲ್ಲಿ ಮಾದರಿಯಾಗಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜನರು ಸೇರಿದಂತೆ ಪ್ರತಿಯೊಬ್ಬರೂ ರಾಜ್ ಕೋಟ್ ನ ಲೈಟ್ ಹೌಸ್ ಯೋಜನೆಯಿಂದ ಪ್ರಯೋಜನ ಪಡೆಯಲಿದ್ದಾರೆ. ಇದು ಲಕ್ಷಾಂತರ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಹೊಸ ಮನೆಗಳಿಗೆ ದಾರಿ ಮಾಡಿಕೊಡುತ್ತದೆ. ಮೂಲಸೌಕರ್ಯ ಯೋಜನೆಗಳನ್ನು ತ್ವರಿತಗೊಳಿಸುವ ಮೂಲಕ ಮತ್ತು ಇಡೀ ಸೌರಾಷ್ಟ್ರವನ್ನು ಸಂಪರ್ಕಿಸುವ ಮೂಲಕ ಆಧುನಿಕ ರೀತಿಯಲ್ಲಿ ರಾಜ್ ಕೋಟ್ ನ ತ್ವರಿತ ಪ್ರಗತಿಗಾಗಿ ನಾವು ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಸಹೋದರ ಸಹೋದರಿಯರೇ, ಕ್ರಾಂತಿಕಾರಿ ಬದಲಾವಣೆಗಳನ್ನು ತರಲು ನಾವು ಶ್ರಮಿಸುತ್ತಿದ್ದೇವೆ.

ಆಧುನಿಕ ತಂತ್ರಜ್ಞಾನದ ಬಳಕೆಯ ಮೂಲಕ ದೇಶದಲ್ಲಿ ಸ್ವಾವಲಂಬನೆ ಇರಬೇಕು. ಜನರು ತಮ್ಮ ಜೀವನದಲ್ಲಿ ಇದನ್ನು ಅನುಕರಿಸಲು ನಾವು ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ನಾವು ಯುವಕರಿಗೆ ತರಬೇತಿ ನೀಡುತ್ತಿದ್ದೇವೆ ಮತ್ತು ಹೊಸ ನವೋದ್ಯಮಗಳೊಂದಿಗೆ ಬರಲು ಅವರನ್ನು ಪ್ರೋತ್ಸಾಹಿಸುತ್ತಿದ್ದೇವೆ.

ಸ್ನೇಹಿತರೇ,
ಅಭಿವೃದ್ಧಿ ಎಂದರೆ ನಗರಗಳಲ್ಲಿ ರಸ್ತೆಗಳು, ಮಾರುಕಟ್ಟೆಗಳು, ಮಾಲ್ ಗಳು ಮತ್ತು ಪ್ಲಾಜಾಗಳನ್ನು ನಿರ್ಮಿಸುವುದು ಎಂದರ್ಥವಲ್ಲ. ನಗರ ಜೀವನವು ಒಂದು ದೊಡ್ಡ ಜವಾಬ್ದಾರಿಯನ್ನು ಹೊಂದಿದೆ, ಮತ್ತು ಇದು ಈ ಜವಾಬ್ದಾರಿಯನ್ನು ಪೂರೈಸಲು ಒಂದು ಅವಕಾಶವಾಗಿದೆ ಮತ್ತು ಅಭಿವೃದ್ಧಿಗೆ ಒಂದು ಹೊಸ ಆಯಾಮವಾಗಿದೆ.  ಬೀದಿ ಬದಿ ವ್ಯಾಪಾರಿಗಳು ಮತ್ತು ತರಕಾರಿ ಮಾರಾಟಗಾರರ ಬಗ್ಗೆಯೂ ನಾವು ಕಾಳಜಿ ವಹಿಸಿದ್ದೇವೆ. ಅವರು ಯಾವುದೇ ಗ್ಯಾರಂಟಿ ಇಲ್ಲದೆ ಬ್ಯಾಂಕುಗಳಿಂದ ಸಾಲ ಪಡೆಯಬಹುದು ಎಂದು ನಾವು ಖಚಿತಪಡಿಸಿದ್ದೇವೆ. ಸ್ವನಿಧಿ ಯೋಜನೆಯಡಿ ಅವರು ಸುಲಭವಾಗಿ ಸಾಲ ಪಡೆಯಬಹುದು ಎಂಬುದನ್ನು ನಾವು ಖಚಿತಪಡಿಸಿದ್ದೇವೆ.

ಸಹೋದರ ಸಹೋದರಿಯರೇ,
ಇಂದು ನೀವು ಡಿಜಿಟಲ್ ಇಂಡಿಯಾ ಪ್ರಮುಖ ಶಕ್ತಿಯಾಗಿ ಹೊರಹೊಮ್ಮುತ್ತಿರುವುದನ್ನು ನೋಡಬಹುದು. ನಾವು ವಿಶ್ವದ ಅಗ್ಗದ ಇಂಟರ್ನೆಟ್ ಅನ್ನು ಪರಿಚಯಿಸಿದ್ದೇವೆ ಮತ್ತು ಇಂದು ಬೀದಿ ಬದಿ ವ್ಯಾಪಾರಿ ಕೂಡ ಡಿಜಿಟಲ್ ವಹಿವಾಟುಗಳನ್ನು ಮಾಡುತ್ತಾರೆ. ಗುಜರಾತ್ ನಲ್ಲಿ ಇಂತಹ ಅನೇಕ ಸಂಗತಿಗಳನ್ನು ನಾವು ನೋಡಬಹುದು ಮತ್ತು ಗುಜರಾತ್ ಅದರ ಪ್ರಯೋಜನಗಳನ್ನು ಪಡೆಯುತ್ತಿದೆ, ಸಹೋದರರೇ. ಇಷ್ಟೇ ಅಲ್ಲ, ಅದರ ಪರಿಣಾಮವೂ ಹೆಚ್ಚುತ್ತಿದೆ.

ರಾಜ್ ಕೋಟ್ ಅಭಿವೃದ್ಧಿಗೆ ಸಣ್ಣ ಕೈಗಾರಿಕೆಗಳು ಅಥವಾ ಎಂಎಸ್.ಎಂಇಗಳು ಉತ್ತಮ ಕೆಲಸ ಮಾಡಿವೆ. ಇಲ್ಲಿ ತಯಾರಿಸಿದ ಪಂಪ್ ಗಳು ಮತ್ತು ಯಂತ್ರೋಪಕರಣಗಳು ಲಭ್ಯವಿಲ್ಲದ ಯಾವುದೇ ಸ್ಥಳವು ದೇಶದಲ್ಲಿ ಇಲ್ಲ. ಫಾಲ್ಕನ್ ಪಂಪ್, ಫಿಲ್ ಮಾರ್ಷಲ್ಸ್, ಏಂಜಲ್ ಪಂಪ್, ರೋಟೆಕ್ ಎಂಜಿನಿಯರಿಂಗ್, ಜಲಗಂಗಾ ಪಂಪ್, ಸಿಲ್ವರ್ ಪಂಪ್, ರೋಟೆಕ್ ಪಂಪ್, ಸಿದ್ಧಿ ಎಂಜಿನಿಯರ್ಸ್, ಗುಜರಾತ್ ಫೋರ್ಜಿಂಗ್, ಟಾಪ್ ಲ್ಯಾಂಡ್ ಮುಂತಾದ ಹಲವಾರು ಬ್ರಾಂಡ್ ಗಳು ಭಾರತದ ಮೂಲೆಮೂಲೆಗಳನ್ನು ತಲುಪಿವೆ. ಇವುಗಳನ್ನು ರಫ್ತು ಸಹ ಮಾಡಲಾಗುತ್ತಿದೆ. ರಾಜ್ ಕೋಟ್ ಈ ಶಕ್ತಿಯನ್ನು ಸೃಷ್ಟಿಸಿದೆ.

ಇಂದು, ಭಾರತದಲ್ಲಿ ಬೆಳೆಯುತ್ತಿರುವ ಆಟೋಮೊಬೈಲ್ ಉದ್ಯಮಕ್ಕೆ ಬಿಡಿಭಾಗಗಳನ್ನು ರಾಜ್ ಕೋಟ್ ನಲ್ಲಿ ತಯಾರಿಸಲಾಗುತ್ತದೆ. ಗುಜರಾತಿನಲ್ಲಿ ತಯಾರಾದ ಕಾರನ್ನು ಜಪಾನ್ ಆಮದು ಮಾಡಿಕೊಳ್ಳುತ್ತದೆ ಮತ್ತು ಅದರ ಬಿಡಿಭಾಗಗಳನ್ನು ರಾಜ್ ಕೋಟ್ ನಲ್ಲಿ ತಯಾರಿಸಲಾಗುತ್ತದೆ ಎಂಬುದಕ್ಕಿಂತ ಹೆಚ್ಚು ಹೆಮ್ಮೆಯ ವಿಷಯ ಬೇರೆ ಏನಿದೆ. ಗುಜರಾತ್ ಬೈಸಿಕಲ್ ಗಳನ್ನು ಸಹ ತಯಾರಿಸದ ಕಾಲವೊಂದಿತ್ತು. ಮತ್ತು ನನ್ನ ಮಾತುಗಳನ್ನು ಬರೆದಿಟ್ಟುಕೊಳ್ಳಿ, ಗುಜರಾತ್ ನಲ್ಲಿ ವಿಮಾನವನ್ನು ತಯಾರಿಸುವ ದಿನ ದೂರವಿಲ್ಲ ಮತ್ತು ವಿಮಾನದ ಬಿಡಿಭಾಗಗಳನ್ನು ರಾಜ್ ಕೋಟ್ ನಲ್ಲಿ ತಯಾರಿಸಲಾಗುವುದು.

ಸಹೋದರ ಸಹೋದರಿಯರೇ, ಕಳೆದ ಎರಡು ದಶಕಗಳಲ್ಲಿ ರಾಜ್ ಕೋಟ್ ಅದ್ಭುತಗಳನ್ನು ಮಾಡಿದೆ. ಕಳೆದ ಎರಡು ದಶಕಗಳಲ್ಲಿ ಹೊಸ ಇತಿಹಾಸವನ್ನು ಬರೆಯಲಾಗಿದೆ. ವಿಶ್ವವಿದ್ಯಾಲಯವೊಂದರ ಅಧ್ಯಯನದ ಪ್ರಕಾರ ರಾಜ್ ಕೋಟ್ ಐದು ಲಕ್ಷ ಕೋಟಿ ರೂಪಾಯಿ ಮೌಲ್ಯದ ಎಂಜಿನಿಯರಿಂಗ್ ಉತ್ಪನ್ನಗಳನ್ನು ರಫ್ತು ಮಾಡಿದೆ. ಇದು ರಾಜ್ ಕೋಟ್ ನ ಶಕ್ತಿಯಾಗಿದ್ದು, ಇದು ಯುವಕರ ಭವಿಷ್ಯವನ್ನು ಉಜ್ವಲಗೊಳಿಸುತ್ತಿದೆ. ಇದರ ಪರಿಣಾಮವಾಗಿ, ಜನರು ಅನೇಕ ಉದ್ಯೋಗಗಳನ್ನು ಸಹ ಪಡೆಯುತ್ತಿದ್ದಾರೆ.

ನಮ್ಮ ಮೊರ್ಬಿ ಕೂಡ ಅದ್ಭುತಗಳನ್ನು ಮಾಡುತ್ತಿದೆ. ಮೊರ್ಬಿಯ ಸೆರಾಮಿಕ್ ಹೆಂಚುಗಳು ಇಂದು ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಪ್ರಪಂಚದ ಸುಮಾರು ಶೇ.13ರಷ್ಟು ಪಿಂಗಾಣಿ ಕೆಲಸ ಮೊರ್ಬಿ ಒಂದರಲ್ಲೇ ನಡೆಯುತ್ತಿದೆ. ಆದ್ದರಿಂದ, ಮೊರ್ಬಿಯನ್ನು ರಫ್ತು ಉತ್ಕೃಷ್ಟತೆಯ ಪಟ್ಟಣವೆಂದು ಗುರುತಿಸಲಾಗುತ್ತಿದೆ, ಸಹೋದರರೇ. ಗೋಡೆಗಳು, ನೆಲ, ಸ್ನಾನಗೃಹಗಳು, ಶೌಚಾಲಯಗಳು ಇತ್ಯಾದಿಗಳು ಮೊರ್ಬಿ ಇಲ್ಲದೆ ಅಪೂರ್ಣವಾಗುತ್ತವೆ. ಮೊರ್ಬಿ ಇಲ್ಲದೆ ಇದನ್ನು ಮಾಡಲು ಸಾಧ್ಯವಿಲ್ಲ. ಮೊರ್ಬಿ ಪ್ರವಾಹಕ್ಕೆ ಒಳಗಾದಾಗ ಮತ್ತು ಮೀನುಗಳು ತೀವ್ರ ಬಾಧಿತವಾದಾಗ, ಮೊರ್ಬಿ ಮತ್ತೆ ಪುಟಿದೇಳುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಸಹೋದರರೇ.ಇಂದು, ಮೋರ್ಬಿ ಇತರರನ್ನು ಬೆಳೆಸುತ್ತಿದೆ.

ಆ ಸಮಯದಲ್ಲಿ ಮೊರ್ಬಿ ಟೇಕ್-ಆಫ್ ಹಂತದಲ್ಲಿತ್ತು ಎಂದು ನನಗೆ ನೆನಪಿದೆ. ಅನಿಲವು ಅಲ್ಲಿಗೆ ತಲುಪಿದರೆ ಮೊರ್ಬಿ ಅದ್ಭುತಗಳನ್ನು ಮಾಡಬಹುದೆಂದು ನಾನು ಅರಿತುಕೊಂಡೆ. ನಾವು ಕೈಗಾರಿಕಾ ಅನಿಲದ ಕೊಳವೆ ಮಾರ್ಗವನ್ನು ಹಾಕಿದ್ದೇವೆ ಮತ್ತು ಮೊರ್ಬಿಗೆ ಹೊಸ ಶಕ್ತಿಯನ್ನು ನೀಡಿದ್ದೇವೆ. ಇಂದು ಮೊರ್ಬಿಯಲ್ಲಿರುವ ಸೆರಾಮಿಕ್ ಪಾರ್ಕ್ ಗಾಗಿ 15,000 ಕೋಟಿ ರೂ.ಗಳ ಹೂಡಿಕೆ ದೊಡ್ಡ ಸುದ್ದಿಯಾಗಿದೆ. ಕಳೆದ 20-22 ವರ್ಷಗಳಲ್ಲಿ ಗುಜರಾತ್ ನಲ್ಲಿ ವಿವಿಧ ಕೈಗಾರಿಕೆಗಳ ಬೆಳವಣಿಗೆಯು ಹಲವಾರು ಪ್ರಯೋಜನಗಳಿಗೆ ಕಾರಣವಾಗಿದೆ. ಭೂಪೇಂದ್ರಭಾಯಿ ಅವರ ಸರ್ಕಾರ ಘೋಷಿಸಿದ ಹೊಸ ಕೈಗಾರಿಕಾ ನೀತಿಯು ಮುಂಬರುವ ದಿನಗಳಲ್ಲಿ ಹೊಸ ಪೀಳಿಗೆಗೆ ಪ್ರಯೋಜನಕಾರಿಯಾಗಲಿದೆ.

ಸಹೋದರ ಸಹೋದರಿಯರೇ,
ಸಾಂಪ್ರದಾಯಿಕ ಕೈಗಾರಿಕೆಗಳ ಜೊತೆಗೆ, ರಾಜ್ ಕೋಟ್, ಸೌರಾಷ್ಟ್ರ ಮತ್ತು ಗುಜರಾತ್ ನಲ್ಲಿ ಅನೇಕ ಸಾಧ್ಯತೆಗಳು ಹೊರಹೊಮ್ಮುತ್ತಿವೆ, ಸಹೋದರರೇ. ನಾನು ನಿಮಗೆ ಅನೇಕ ಯೋಜನೆಗಳನ್ನು ನೀಡಲು ಇಲ್ಲಿಗೆ ಬಂದಾಗ ನನಗೆ ತುಂಬಾ ಹೆಮ್ಮೆ ಮತ್ತು ತೃಪ್ತಿಯಾಗುತ್ತದೆ. ನೀವು ನನಗೆ ನೀಡಿದ ಆತ್ಮೀಯ ಸ್ವಾಗತಕ್ಕಾಗಿ ನಾನು ಮತ್ತೊಮ್ಮೆ ರಾಜ್ ಕೋಟ್ ಗೆ ಆಭಾರಿಯಾಗಿದ್ದೇನೆ. ನಾನು ರಾಜ್ ಕೋಟ್ ಗೆ ಎಂದೆಂದಿಗೂ ಋಣಿಯಾಗಿರುತ್ತೇನೆ ಮತ್ತು ರಾಜಕೋಟೆಗೆ ಸೇವೆ ಸಲ್ಲಿಸುವ ಯಾವುದೇ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ. ಈ ನಂಬಿಕೆಯೊಂದಿಗೆ, ಮತ್ತೊಮ್ಮೆ ನಿಮ್ಮೆಲ್ಲರಿಗೂ ಅನೇಕ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು.

ಧನ್ಯವಾದಗಳು!

ಘೋಷಣೆ: ಮೂಲ ಭಾಷಣವನ್ನು ಪ್ರಧಾನಮಂತ್ರಿಯವರು ಗುಜರಾತಿ ಭಾಷೆಯಲ್ಲಿ ಮಾಡಿದ್ದು, ಅದನ್ನು ಇಲ್ಲಿ ಭಾಷಾಂತರಿಸಲಾಗಿದೆ.

******


(ಪ್ರಕಟಣೆ ಐ.ಡಿ.: 1870666) ವಿಸಿಟರ್ ಕೌಂಟರ್ : 142