ಆಯುಷ್
azadi ka amrit mahotsav

ದೇಶಾದ್ಯಂತ ಅದ್ಧೂರಿಯಾಗಿ 7 ನೇ ಆಯುರ್ವೇದ ದಿನ ಆಚರಣೆ. 



ಆಯುಷ್ ವಲಯದಲ್ಲಿ ಸಹಯೋಗಕ್ಕಾಗಿ ಆಯುಷ್ ಸಚಿವಾಲಯ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ನಡುವೆ ತಿಳುವಳಿಕಾ ಒಡಂಬಡಿಕೆಗೆ ಅಂಕಿತ

ಆಯುಷ್ ಸಚಿವಾಲಯದ  'ಐ ಸಪೋರ್ಟ್ ಆಯುರ್ವೇದ' ಅಭಿಯಾನಕ್ಕೆ 1.7 ಕೋಟಿಗೂ ಹೆಚ್ಚು ಜನರಿಂದ ಬೆಂಬಲ

Posted On: 23 OCT 2022 2:56PM by PIB Bengaluru

7 ನೇ ಆಯುರ್ವೇದ ದಿನವನ್ನು ಇಂದು ಭಾರತದಲ್ಲಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಮತ್ತು ಭವ್ಯವಾದ ರೀತಿಯಲ್ಲಿ ಆಚರಿಸಲಾಯಿತು. ಈ ವರ್ಷದ 7 ನೇ ಆಯುರ್ವೇದ ದಿನವನ್ನು "ಹರ್ ದಿನ್ ಹರ್ ಘರ್ ಆಯುರ್ವೇದ" ಎಂಬ ಶೀರ್ಷಿಕೆಯೊಂದಿಗೆ  ಆಚರಿಸಲಾಯಿತು, ಇದರಿಂದ ಆಯುರ್ವೇದದ ಪ್ರಯೋಜನಗಳನ್ನು ದೊಡ್ಡ ಮತ್ತು ತಳಮಟ್ಟದ ಸಮುದಾಯಕ್ಕೆ ಪ್ರಚುರಪಡಿಸಲಾಯಿತು. ಆರು ವಾರಗಳ ಕಾಲ ನಡೆದ ಈ ಆಚರಣೆಯಲ್ಲಿ ದೇಶಾದ್ಯಂತದಿಂದ ಭಾರಿ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು, ಆಯುಷ್ ಸಚಿವಾಲಯವು 5000 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಭಾರತ ಸರ್ಕಾರದ 26 ಕ್ಕೂ ಹೆಚ್ಚು ಸಚಿವಾಲಯಗಳು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗು ಭಾರತೀಯ ರಾಯಭಾರ ಕಚೇರಿಗಳ ಬೆಂಬಲದೊಂದಿಗೆ ಆಯೋಜಿಸಿತ್ತು.

ಸಮಾರಂಭದಲ್ಲಿ ಗಣ್ಯರಾದ ಬುಡಕಟ್ಟು ವ್ಯವಹಾರಗಳ ಸಚಿವರಾದ ಶ್ರೀ ಅರ್ಜುನ್ ಮುಂಡಾ, ಆಯುಷ್ ಸಚಿವರಾದ ಶ್ರೀ ಸರ್ಬಾನಂದ ಸೋನೊವಾಲ್, ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ಸಹಾಯಕ ಸಚಿವರಾದ ಶ್ರೀಮತಿ ಮೀನಾಕ್ಷಿ ಲೇಖಿ, ಆಯುಷ್ ಸಹಾಯಕ ಸಚಿವ  ಶ್ರೀ ಡಾ. ಮುಂಜಪರ ಮಹೇಂದ್ರಭಾಯಿ ಕಲುಭಾಯಿ, ಎಂ.ಓ.ಎ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೆಚಾ, ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಶ್ರೀ ಅನಿಲ್ ಕುಮಾರ್ ಝಾ, ಎಂಒಎಯ ವಿಶೇಷ ಕಾರ್ಯದರ್ಶಿ ಶ್ರೀ ಪ್ರಮೋದ್ ಕುಮಾರ್ ಪಾಠಕ್ ಮತ್ತು ಎಐಐಎ ನಿರ್ದೇಶಕ ಪ್ರೊ.  ತನುಜಾ ಮನೋಜ್ ನೆಸಾರಿ ಸೇರಿದಂತೆ ವಿದೇಶಿ ರಾಯಭಾರ ಕಚೇರಿಗಳ ಪ್ರತಿನಿಧಿಗಳು ಮತ್ತು ಡಬ್ಲ್ಯುಎಚ್ಒ-ಸೆರೋ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಶ್ರೀ ಸರ್ಬಾನಂದ ಸೋನೊವಾಲ್, ಆಯುರ್ವೇದವು ರೋಗವನ್ನು ತಡೆಗಟ್ಟುವ ಒಂದು ವಿಜ್ಞಾನವಾಗಿದೆ. ಇದು ಪ್ರಾಚೀನ ಜ್ಞಾನವಾಗಿದೆ ಮತ್ತು ನಮ್ಮ ಸಂಶೋಧನಾ ಮಂಡಳಿಗಳು ಆಯುಷ್ ವಲಯದಲ್ಲಿ ಕೆಲವು ಪ್ರಭಾವಶಾಲಿ ಸಂಶೋಧನಾ ಕೆಲಸಗಳನ್ನು ಮಾಡುತ್ತಿವೆ.   “ಹರ್ ದಿನ್ ಹರ್ ಘರ್ ಆಯುರ್ವೇದ”ದ ಉದ್ದೇಶವು ಆಯುರ್ವೇದ ಮತ್ತು ಅದರ ಸಾಮರ್ಥ್ಯವನ್ನು ಜನಸಾಮಾನ್ಯರಿಗೆ ತಲುಪಿಸುವುದಾಗಿದೆ ಎಂದು ಹೇಳಿದರು. ಆಯುರ್ವೇದವು ಈಗ ಜಾಗತಿಕವಾಗಿ ಹೆಸರುವಾಸಿಯಾಗಿದೆ ಮತ್ತು ಇದಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಿರಂತರ ಮತ್ತು ಅವಿರತ ಪ್ರಯತ್ನಗಳು ಕಾರಣವಾಗಿವೆ ಎಂದವರು ಹೇಳಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಅರ್ಜುನ್ ಮುಂಡಾ ಅವರು, "ಆಯುರ್ವೇದವು ಭಾರತದ ಪ್ರಾಚೀನ ಸಂಪ್ರದಾಯ ಮತ್ತು ಸಂಪತ್ತು. ಆಯುರ್ವೇದವನ್ನು ಕಾಡುಗಳಲ್ಲಿ ವಾಸಿಸುವ ಜನರ ಸಹಯೋಗದೊಂದಿಗೆ ಪೋಷಿಸಬಹುದು. ಆಯುರ್ವೇದವು ರೋಗವನ್ನು ತಡೆಗಟ್ಟುವ ಬಗ್ಗೆ ಮಾತನಾಡುವ ಏಕೈಕ ವೈದ್ಯಕೀಯ ವಿಜ್ಞಾನವಾಗಿದೆಯೇ ಹೊರತು ಅನಾರೋಗ್ಯದ ನಂತರದ ಚಿಕಿತ್ಸೆಯ ಬಗ್ಗೆ ಅಲ್ಲ" ಎಂದು ಹೇಳಿದರು.
ಡಾ. ಮುಂಜಪರ ಮಹೇಂದ್ರಭಾಯಿ ಕಲುಭಾಯಿ ಅವರು ಆಯುಷ್ ಸಚಿವಾಲಯವು ದೇಶದಲ್ಲಿ ಆಯುಷ್ ಆರೋಗ್ಯ ವ್ಯವಸ್ಥೆಗೆ ವೇಗವನ್ನು, ಉತ್ಸಾಹವನ್ನು ತುಂಬಿದೆ. ಮತ್ತು ಆಯುರ್ವೇದಕ್ಕೆ ಈಗ 30 ದೇಶಗಳಲ್ಲಿ ಮಾನ್ಯತೆ ಇದೆ ಎಂದು ಹೇಳಿದರು.  ಆಯುಷ್ ನ ಪ್ರಸ್ತುತ ವಹಿವಾಟು 18.1 ಬಿಲಿಯನ್ ಡಾಲರ್ ಎಂದು ಅವರು ಮಾಹಿತಿ ನೀಡಿದರು.

ಶ್ರೀಮತಿ ಮೀನಾಕ್ಷಿ ಲೇಖಿಯವರು ಮಾತನಾಡಿ "ಇದು ನಮ್ಮ ಪೂರ್ವಜರ ವಿಜ್ಞಾನವನ್ನು ಶ್ಲಾಘಿಸುವ ಸಮಯ. 5000 ವರ್ಷಗಳಿಗಿಂತ ಹಳೆಯದಾದ ವಿಜ್ಞಾನವನ್ನು ನಮ್ಮ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮೇಲ್ವಿಚಾರಣೆಯಲ್ಲಿ ಆಯುರ್ವೇದ ದಿನದಂದು ಆಚರಿಸಲಾಗುತ್ತದೆ. ಅವರು ಸದಾ ಆಯುರ್ವೇದ ವಿಜ್ಞಾನಕ್ಕೆ ಉತ್ತೇಜನ ನೀಡುತ್ತಿದ್ದಾರೆ. ಮತ್ತು ಕಳೆದ ಕೆಲವು ವರ್ಷಗಳಲ್ಲಿ ಅದು ಅದರ ಉತ್ತುಂಗ ಶಿಖರವನ್ನು ತಲುಪಿದೆ." ಎಂದು ಹೇಳಿದರು. 

ಪ್ರೊ.ತನುಜಾ ನೇಸರಿ ಮಾತನಾಡಿ, 'ನಾನು ಆಯುರ್ವೇದವನ್ನು ಬೆಂಬಲಿಸುತ್ತೇನೆ' ಅಭಿಯಾನಕ್ಕೆ ಎಲ್ಲರಿಂದಲೂ ಅಪಾರ ಬೆಂಬಲ ದೊರೆತಿದೆ, ಕಳೆದ 6 ವಾರಗಳ ಕಾಲ ನಡೆದ ಕಾರ್ಯಕ್ರಮದಲ್ಲಿ 1.7 ಕೋಟಿಗೂ ಹೆಚ್ಚು ಜನರು ಭಾಗವಹಿಸಿದ್ದರು ಮತ್ತು ಆಯುರ್ವೇದ ದಿನವನ್ನು ಆಧರಿಸಿ ವಿವಿಧ ಸಂಸ್ಥೆಗಳು ಆಯೋಜಿಸಿದ ವಿವಿಧ ಚಟುವಟಿಕೆಗಳಲ್ಲಿ 56 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿ ತಮ್ಮ ಕೊಡುಗೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ಸಾಕ್ಷ್ಯಾಧಾರಿತ ಯೋಜನೆ ಮತ್ತು ಸಾಮರ್ಥ್ಯ ವರ್ಧನೆಯ ಮೂಲಕ ಬುಡಕಟ್ಟು ಸಂಸ್ಕೃತಿ ಪರಂಪರೆಯನ್ನು ಸಂರಕ್ಷಿಸುವಾಗ ಬುಡಕಟ್ಟು ಅಭಿವೃದ್ಧಿಗಾಗಿ ಎರಡೂ ಸಚಿವಾಲಯಗಳ ನಡುವೆ ಸಹಯೋಗ, ಸಮನ್ವಯ ಮತ್ತು ಸಂಯೋಜನೆಯ ಕ್ಷೇತ್ರಗಳನ್ನು ಅನ್ವೇಷಿಸಲು ಆಯುಷ್ ಸಚಿವಾಲಯ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ನಡುವೆ ತಿಳುವಳಿಕಾ ಒಡಂಬಡಿಕೆಗೆ ಅಂಕಿತ ಹಾಕಲಾಯಿತು.

ಈ ಸಂದರ್ಭದಲ್ಲಿ 'ಭಾರತದ ಆಯುರ್ವೇದಿಕ್ ಫಾರ್ಮಾಕೋಪಿಯಾ' ಕುರಿತ 'ದಿ ಆಯುರ್ವೇದಿಕ್ ಫಾರ್ಮುಲರಿ ಆಫ್ ಇಂಡಿಯಾ' ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಔಷಧೀಯ ಸಸ್ಯಗಳಿಂದಾಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು, ಆಯುಷ್ ಸಚಿವಾಲಯವು ಅಶ್ವಗಂಧ - ಆರೋಗ್ಯ ಪ್ರವರ್ತಕ ಎಂಬ ಪ್ರಭೇದ-ನಿರ್ದಿಷ್ಟ ರಾಷ್ಟ್ರೀಯ ಅಭಿಯಾನವನ್ನು ಆರಂಭ ಮಾಡಿತ್ತು. ಐದು ಕಿರು ವೀಡಿಯೊ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ವಿಜೇತರನ್ನು ಕೇಂದ್ರ ಆಯುಷ್ ಸಚಿವರು ಮತ್ತು ಇತರ ಗಣ್ಯರು ಸನ್ಮಾನಿಸಿದರು.

******



(Release ID: 1870650) Visitor Counter : 153