ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ದೇಶೀಯ ಮಾರುಕಟ್ಟೆಯಲ್ಲಿ ಖಾದ್ಯತೈಲ ಬೆಲೆ ನಿಯಂತ್ರಣ ಸಲುವಾಗಿ ಆಯ್ದ ಖಾದ್ಯತೈಲ ಮೇಲಿನ ಆಮದು ಕಸ್ಟಮ್ ಸುಂಕ ವಿನಾಯ್ತಿ ಸೌಲಭ್ಯ 2023ರ ಮಾರ್ಚ್ ವರೆಗೆ ವಿಸ್ತರಣೆ
Posted On:
02 OCT 2022 9:57AM by PIB Bengaluru
ಕೇಂದ್ರ ಪರೋಕ್ಷ ತೆರಿಗೆಗಳು ಹಾಗೂ ಸುಂಕ ಮಂಡಳಿಯು (ಸಿಬಿಐಸಿ) ಸದ್ಯ ಜಾರಿಯಲ್ಲಿರುವ ಆಯ್ದ ಖಾದ್ಯ ತೈಲದ ಮೇಲಿನ ಆಮದು ಸುಂಕ ವಿನಾಯ್ತಿ ಸೌಲಭ್ಯವನ್ನು ಮುಂಬರುವ 2023ರ ಮಾರ್ಚ್ 31ರವರೆಗೆ ವಿಸ್ತರಿಸಿ ಆ.31ರಂದು ಅಧಿಸೂಚನೆ (ನೋಟಿಫಿಕೇಷನ್ ಸಂಖ್ಯೆ. 46/2022- ಕಸ್ಟಮ್ಸ್) ಹೊರಡಿಸಿದೆ. ದೇಶೀಯ ಮಾರುಕಟ್ಟೆಗೆ ಪೂರೈಕೆ ಹೆಚ್ಚಳ ಹಾಗೂ ಬೆಲೆ ನಿಯಂತ್ರಣ ಸಲುವಾಗಿ ಮಂಡಳಿಯು ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಅದರಂತೆ ಆಯ್ದ ಖಾದ್ಯ ತೈಲ ಆಮದು ಮೇಲಿನ ಕಸ್ಟಮ್ ಸುಂಕ ವಿನಾಯ್ತಿ ಸೌಲಭ್ಯ ಇನ್ನೂ ಆರು ತಿಂಗಳ ಅವಧಿಗೆ ವಿಸ್ತರಣೆಯಾಗಿರುವ ಹಿನ್ನೆಲೆಯಲ್ಲಿ ಈ ಸೌಲಭ್ಯವು 2023ರ ಮಾರ್ಚ್ 31ರವರೆಗೆ ಅನ್ವಯವಾಗಲಿದೆ. ಜಾಗತಿಕ ಮಟ್ಟದಲ್ಲಿ ಖಾದ್ಯ ತೈಲ ಬೆಲೆ ಇಳಿಮುಖ ಹಾದಿಯಲ್ಲಿದೆ. ಜಾಗತಿಕ ಮಟ್ಟದಲ್ಲಿ ಬೆಲೆ ಇಳಿಕೆ ಜೊತೆಗೆ ಕಡಿಮೆ ಪ್ರಮಾಣದ ಆಮದು ಸುಂಕ ಸೌಲಭ್ಯದಿಂದಾಗಿ ದೇಶದಲ್ಲಿ ಖಾದ್ಯ ತೈಲದ ಚಿಲ್ಲರೆ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡಿದೆ.
ಕಚ್ಚಾ ಪಾಮ್ ಆಯಿಲ್ (ತಾಳೆ ಎಣ್ಣೆ), ಆರ್‌ಬಿಡಿ ಪಾಮೋಲಿನ್, ಆರ್‌ಬಿಡಿ ಪಾಮ್ ಆಯಿಲ್, ಕಚ್ಚಾ ಸೋಯಾಬೀನ್ ಆಯಿಲ್, ರೀಫೈನ್ಡ್ ಸೋಯಾಬೀನ್ ಆಯಿಲ್, ಕಚ್ಚಾ ಸೂರ್ಯಕಾಂತಿ ಎಣ್ಣೆ, ರೀಫೈನ್ಡ್ ಸೂರ್ಯಕಾಂತಿ ಎಣ್ಣೆಯ ಆಮದಿಗೆ ವಿಧಿಸಲಾಗುವ ಸುಂಕ ಪ್ರಮಾಣ ಯಥಾಪ್ರಕಾರ ಮುಂದುವರಿಯಲಿದ್ದು, 2023ರ ಮಾರ್ಚ್ 31ರವರೆಗೆ ಈ ತೈಲಗಳ ಕಸ್ಟಮ್ ಸುಂಕದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಸದ್ಯಕ್ಕೆ ಕಚ್ಚಾ ಪಾಮ್ ಆಯಿಲ್, ಸೋಯಾಬೀನ್ ಆಯಿಲ್ ಹಾಗೂ ಸನ್‌ಫ್ಲವರ್ ಆಯಿಲ್ ಮೇಲಿನ ಆಮದು ಸುಂಕ ಶೂನ್ಯ. ಹಾಗಿದ್ದರೂ ಶೇ. 5ರಷ್ಟು ಕೃಷಿ ಸೆಸ್, ಶೇ. 10ರಷ್ಟು ಸಮಾಜ ಕಲ್ಯಾಣ ಸೆಸ್ ಅನ್ನು ಪರಿಗಣನೆಗೆ ತೆಗೆದುಕೊಂಡರೆ ಈ ಆಯ್ದ ಮೂರು ಕಚ್ಚಾ ತೈಲದ ಮೇಲೆ ಶೇ. 5.5ರಷ್ಟು ಸುಂಕ ತಗುಲಲಿದೆ.
ಪಾಮೋಲಿನ್ ಹಾಗೂ ರೀಫೈನ್ಡ್ ಪಾಮ್ ಆಯಿಲ್‌ನ ಆಯ್ದ ರೀಫೈನ್ಡ್ ಆಯಿಲ್ ಮೇಲೆ ಕನಿಷ್ಠ (ಬೇಸಿಕ್) ಕಸ್ಟಮ್ ಸುಂಕವು ಶೇ. 12.5ರಷ್ಟಿದ್ದು, ಶೇ. 10ರಷ್ಟು ಸಮಾಜ ಕಲ್ಯಾಣ ಸುಂಕವಿರುತ್ತದೆ. ಹಾಗಾಗಿ ಒಟ್ಟು ಸುಂಕ ಪ್ರಮಾಣ ಶೇ. 13.75ರಷ್ಟಾಗಲಿದೆ. ಇನ್ನು ರೀಫೈನ್ಡ್ ಸೋಯಾಬೀನ್ ಹಾಗೂ ಸನ್‌ಫ್ಲವರ್ ಆಯಿಲ್ ಮೇಲೆ ಕನಿಷ್ಠ ಕಸ್ಟಮ್ ಸುಂಕವು ಶೇ. 17.5ರಷ್ಟಿದ್ದು, ಶೇ. 10ರಷ್ಟು ಸಮಾಜ ಕಲ್ಯಾಣ ಸೆಸ್ ಸೇರಿ ಒಟ್ಟು ಶೇ. 19.25ರಷ್ಟರಾಗಲಿದೆ.
*******
(Release ID: 1864581)
Visitor Counter : 208