ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ರಾಷ್ಟ್ರೀಯ ಮಟ್ಟದ ಪ್ರತಿಭಾ(ಅರ್ಹತಾ) ವಿದ್ಯಾರ್ಥಿವೇತನ(ಮೆರಿಟ್ ಸ್ಕಾಲರ್‌ಶಿಪ್) ಯೋಜನೆಯ ‘ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್’ ಕುರಿತು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಡೆದ ರಾಷ್ಟ್ರೀಯ ಕಾರ್ಯಾಗಾರ
Posted On:
21 SEP 2022 5:08PM by PIB Bengaluru
ರಾಷ್ಟ್ರೀಯ ಮಟ್ಟದ ಪ್ರತಿಭಾ(ಅರ್ಹತಾ) ವಿದ್ಯಾರ್ಥಿವೇತನ ಯೋಜನೆ (ಎನ್ಎಂಎಂಎಸ್ಎಸ್)ಯ ರಾಜ್ಯಗಳ ನೋಡಲ್ ಅಧಿಕಾರಿಗಳ ಜತೆ 2022 ಸೆಪ್ಟೆಂಬರ್ 20ರಂದು ರಾಷ್ಟ್ರೀಯ ಕಾರ್ಯಾಗಾರ ನಡೆಯಿತು. ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಶ್ರೀಮತಿ ಎಲ್.ಎಸ್. ಚಾಂಗ್ಸನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಾಗಾರದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜ್ಯ ಶಿಕ್ಷಣ ಅಧಿಕಾರಿಗಳು ಭಾಗವಹಿಸಿದ್ದರು. ಪ್ರಸಕ್ತ ವರ್ಷ 2022-23ಕ್ಕೆ ಹೊಸ ಅರ್ಜಿಗಳ ನೋಂದಣಿ ಮತ್ತು ನವೀಕರಣಗಳನ್ನು ತ್ವರಿತಗೊಳಿಸಲು ಈ ಕಾರ್ಯಾಗಾರ ಆಯೋಜಿಸಲಾಗಿತ್ತು.
ಕಾರ್ಯಾಗಾರದಲ್ಲಿ ಎಂಎಸ್ ಚಾಂಗ್ಸನ್ ಅವರು, ಆರ್ಥಿಕವಾಗಿ ದುರ್ಬಲ ವರ್ಗಗಳ ಮಕ್ಕಳಿಗೆ ಸಕಾಲದಲ್ಲಿ ವಿದ್ಯಾರ್ಥಿವೇತನ ಪಾವತಿಯ ಮಹತ್ವ ಮತ್ತು ರಾಜ್ಯ ಮಟ್ಟದ ಅಧಿಕಾರಿಗಳು ಅರ್ಜಿಗಳನ್ನು ತ್ವರಿತವಾಗಿ ಪರಿಶೀಲಿಸುವ ಅವಶ್ಯಕತೆ ಕುರಿತು ಮಾತನಾಡಿದರು.
ರಾಷ್ಟ್ರೀಯ ಪ್ರತಿಭಾ ವಿದ್ಯಾರ್ಥಿವೇತನ ಪೋರ್ಟಲ್(ಎನ್ಎಸ್ ಪಿ)ನ ನೋಡಲ್ ಅಧಿಕಾರಿ, ಪೋರ್ಟಲ್‌ನಲ್ಲಿ ನೋಂದಣಿ ಮತ್ತು ಪರಿಶೀಲನೆ ಪ್ರಕ್ರಿಯೆ ಕುರಿತು ಪ್ರಸ್ತುತಿ ನೀಡಿದರು. ಇದಾದ ನಂತರ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ಶಿಕ್ಷಣ ಸಚಿವಾಲಯ, ಡಿಬಿಟಿ ಮತ್ತು ಎನ್ಎಸ್ ಪಿ ಅಧಿಕಾರಿಗಳ ನಡುವೆ “ನೋಂದಣಿ, ಪರಿಶೀಲನೆ ಮತ್ತು ಪಾವತಿಯಲ್ಲಿ ಒಳಗೊಂಡಿರುವ ಅನುಷ್ಠಾನ ವಿಧಾನಗಳು, ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಎನ್ಎಂಎಂಎಸ್ಎಸ್ ವಿದ್ಯಾರ್ಥಿವೇತನ ಪ್ರಕ್ರಿಯೆ” ಕುರಿತು ವಿವರವಾದ ಸಂವಾದ ನಡೆಯಿತು.
'ರಾಷ್ಟ್ರೀಯ ಮಟ್ಟದ ಮೆರಿಟ್ ಸ್ಕಾಲರ್‌ಶಿಪ್ ಯೋಜನೆ' ಅಡಿ, ಆರ್ಥಿಕವಾಗಿ ದುರ್ಬಲ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳು 8ನೇ ತರಗತಿ ಹಂತದಲ್ಲಿ ಕೌಟುಂಬಿಕ ಸಮಸ್ಯೆಗಳಿಂದ ಶಾಲೆ ತೊರೆಯುವುದನ್ನು ತಡೆಯಲು ಮತ್ತು ಪ್ರೌಢಶಾಲೆ ಹಂತದಲ್ಲಿ ಅವರು ಶಿಕ್ಷಣ ಮುಂದುವರಿಸುವುದನ್ನು ಪ್ರೋತ್ಸಾಹಿಸಲು ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಪ್ರತಿ ವರ್ಷ 9ನೇ ತರಗತಿಯಿಂದ ಆಯ್ದ ವಿದ್ಯಾರ್ಥಿಗಳಿಗೆ 1 ಲಕ್ಷ ಹೊಸ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ರಾಜ್ಯ ಸರ್ಕಾರಿ, ಸರ್ಕಾರಿ-ಅನುದಾನಿತ ಮತ್ತು ಸ್ಥಳೀಯ ಸಂಸ್ಥೆಗಳ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು 10ನೇ ತರಗತಿಯಿಂದ 12ನೇ ತರಗತಿವರೆಗೆ ಶಿಕ್ಷಣ ಮುಂದುವರಿಸಲು, ನವೀಕರಿಸಲು ಈ ಸ್ಕಾಲರ್ ಶಿಪ್ ನೀಡಲಾಗುತ್ತದೆ. ವಿದ್ಯಾರ್ಥಿವೇತನ ಮೊತ್ತ ವರ್ಷಕ್ಕೆ 12,000 ರೂ. ನಿಗದಿಪಡಿಸಲಾಗಿದೆ.
ರಾಷ್ಟ್ರೀಯ ಮಟ್ಟದ ಮೆರಿಟ್ ಸ್ಕಾಲರ್‌ಶಿಪ್ ಯೋಜನೆ (ಎನ್ಎಂಎಂಎಸ್ಎಸ್)ಯನ್ನು ನ್ಯಾಷನಲ್ ಮೆರಿಟ್ ಸ್ಕಾಲರ್‌ಶಿಪ್ ಪೋರ್ಟಲ್(ಎನ್‌ಎಸ್‌ಪಿ)ನಲ್ಲಿ ಅಳವಡಿಸಲಾಗಿದೆ. ಆರ್ಥಿಕವಾಗಿ ದುರ್ಬಲ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲಾಗುವ ಸ್ಕಾಲರ್‌ಶಿಪ್ ಯೋಜನೆಗಳಿಗೆ ಈ ಪೋರ್ಟಲ್ ಸೂಕ್ತ ವೇದಿಕೆಯಾಗಿದೆ. ಎನ್ಎಂಎಂಎಸ್ಎಸ್ ವಿದ್ಯಾರ್ಥಿವೇತನವನ್ನು ಡಿಬಿಟಿ ವಿಧಾನ ಅನುಸರಿಸಿ ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ (ಪಿಎಫ್ಎಂಎಸ್) ಮೂಲಕ ವಿದ್ಯುನ್ಮಾನ ವರ್ಗಾವಣೆಯ ಮೂಲಕ ಆಯ್ದ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವಿತರಿಸಲಾಗುತ್ತದೆ. ಇದು 100% ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಯಾಗಿದೆ.
ಎಲ್ಲಾ ಮೂಲಗಳನ್ನು ಪರಿಗಣಿಸಿದ ಪೋಷಕರ ಆದಾಯ 3,50,000 ರೂ.ಗಿಂತ ಒಳಗಿದ್ದರೆ, ಅಂತಹ ಪೋಷಕರ ಪ್ರತಿಭಾವಂತ ಮಕ್ಕಳು ವಾರ್ಷಿಕ ವಿದ್ಯಾರ್ಥಿವೇತನ ಪಡೆಯಲು ಅರ್ಹರಾಗಿರುತ್ತಾರೆ. ಸ್ಕಾಲರ್‌ಶಿಪ್ ನೀಡಲು ಆಯೋಜಿಸುವ ಆಯ್ಕೆ ಪರೀಕ್ಷೆಗೆ ಅರ್ಹತೆ ಪಡೆಯಲು ವಿದ್ಯಾರ್ಥಿಗಳು 7ನೇ ತರಗತಿಯ ಪರೀಕ್ಷೆಯಲ್ಲಿ ಕನಿಷ್ಠ 55% ಅಂಕಗಳನ್ನು ಗಳಿಸಿರಬೇಕು ಅಥವಾ ತತ್ಸಮಾನ ದರ್ಜೆ ಹೊಂದಿರಬೇಕು(ಎಸ್ ಸಿ, ಎಸ್ಟಿ ವಿದ್ಯಾರ್ಥಿಗಳಿಗೆ 5% ಸಡಿಲಿಕೆ ಇದೆ).
*****
(Release ID: 1861345)
Visitor Counter : 170