ಪ್ರಧಾನ ಮಂತ್ರಿಯವರ ಕಛೇರಿ

ಕೇರಳದ ಕೊಚ್ಚಿಯಲ್ಲಿ ಐಎನ್ ಎಸ್ ವಿಕ್ರಾಂತ್ ಕಾರ್ಯಾರಂಭದ ವೇಳೆ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಅನುವಾದ 

Posted On: 02 SEP 2022 1:37PM by PIB Bengaluru


ಕೇರಳದ ರಾಜ್ಯಪಾಲ ಶ್ರೀ ಆರಿಫ್ ಮೊಹಮ್ಮದ್ ಖಾನ್ ಜಿ, ಕೇರಳದ ಮುಖ್ಯಮಂತ್ರಿ ಶ್ರೀ ಪಿಣರಾಯಿ ವಿಜಯನ್ ಜಿ, ರಾಷ್ಟ್ರದ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಜಿ, ನನ್ನ ಇತರೆ ಸಂಪುಟದ ಸಹೋದ್ಯೋಗಿಗಳೇ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್. ಹರಿ ಕುಮಾರ್, ಕೊಚ್ಚಿನ್ ಶಿಪ್‌ ಯಾರ್ಡ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಇತರ ಗಣ್ಯ ಅತಿಥಿಗಳೇ ಮತ್ತು ಈ ಐತಿಹಾಸಿಕ ಘಟನೆಯಲ್ಲಿ ಉಪಸ್ಥಿತರಿರುವ ನನ್ನ ಆತ್ಮೀಯ ದೇಶವಾಸಿಗಳೇ..! 

ಇಂದು ಪ್ರತಿಯೊಬ್ಬ ಭಾರತೀಯನೂ ಕೇರಳದ ಕರಾವಳಿಯಲ್ಲಿ ಹೊಸ ಭವಿಷ್ಯದ ಉದಯಕ್ಕೆ ಸಾಕ್ಷಿಯಾಗುತ್ತಿದ್ದಾರೆ. ಐಎನ್ ಎಸ್ ವಿಕ್ರಾಂತ್‌ನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವು ಜಾಗತಿಕ ಮಟ್ಟದಲ್ಲಿ ಭಾರತದ ಉದಯೋನ್ಮುಖ ಉತ್ಸಾಹದ ಪ್ರತಿಬಿಂಬವಾಗಿದೆ. ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಕನಸು ಕಂಡಿದ್ದ ದಕ್ಷ ಮತ್ತು ಶಕ್ತಿಶಾಲಿ ಭಾರತದ ದೃಢವಾದ ಚಿತ್ರಣವನ್ನು ನಾವಿಂದು ನೋಡುತ್ತಿದ್ದೇವೆ. 

ವಿಕ್ರಾಂತ್  ದೊಡ್ಡದು, ಅಗಾಧ ಮತ್ತು ಉದಾತ್ತ. ವಿಕ್ರಾಂತ್ ಅನನ್ಯ; ವಿಕ್ರಾಂತ್ ಕೂಡ ತುಂಬಾ ವಿಶೇಷ. ವಿಕ್ರಾಂತ್ ಕೇವಲ ಯುದ್ಧನೌಕೆಯಲ್ಲ. ಇದು 21ನೇ ಶತಮಾನದ ಭಾರತದ ಕಠಿಣ ಪರಿಶ್ರಮ, ಪ್ರತಿಭೆ, ಪ್ರಭಾವ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ. ಗುರಿಯು ಅಸಾಧಾರಣವಾಗಿದ್ದರೆ, ತಲುಪುವುದು ಕಠಿಣವಾಗುತ್ತದೆ ಮತ್ತು ಸವಾಲುಗಳಿಗೆ ಕೊನೆಯಿರುವುದಿಲ್ಲ- ಆಗ ಭಾರತದ ಉತ್ತರವು ವಿಕ್ರಾಂತ್ ಆಗಿದೆ. ವಿಕ್ರಾಂತ್ 'ಆಜಾದಿ ಕಾ ಅಮೃತ ಮಹೋತ್ಸವ'ದ ವಿಶೇಷ ಅಮೃತವಾಗಿದೆ. ವಿಕ್ರಾಂತ್ ಸ್ವಾವಲಂಬಿ ಭಾರತದ ವಿಶಿಷ್ಟ ಪ್ರತಿಬಿಂಬವಾಗಿದೆ. ಇದು ಪ್ರತಿಯೊಬ್ಬ ಭಾರತೀಯನ ಹೆಮ್ಮೆ ಮತ್ತು ಪ್ರತಿಷ್ಠೆಯ ಪವಿತ್ರ ಸಂದರ್ಭವಾಗಿದೆ. ಪ್ರತಿಯೊಬ್ಬ ಭಾರತೀಯನ ಆತ್ಮಗೌರವವನ್ನು ಹೆಚ್ಚಿಸುವ ಅವಕಾಶವಿದು. ಅದಕ್ಕಾಗಿ ನಾನು ಪ್ರತಿಯೊಬ್ಬ ದೇಶವಾಸಿಗಳನ್ನು ಅಭಿನಂದಿಸುತ್ತೇನೆ.

ಮಿತ್ರರೇ,

ಗುರಿಗಳು ಎಷ್ಟೇ ಕಠಿಣವಾಗಿರಲಿ ಅಥವಾ ಸವಾಲುಗಳು ಎಷ್ಟೇ ಪ್ರಬಲವಾಗಿರಲಿ, ಭಾರತ ದೃಢ ಸಂಕಲ್ಪವನ್ನು ಕೈಗೊಂಡಾಗ ಯಾವುದೇ ಗುರಿ ಅಸಾಧ್ಯವಲ್ಲ. ಇಂದು ದೇಶೀಯ ತಂತ್ರಜ್ಞಾನದೊಂದಿಗೆ ಈ ರೀತಿಯ ಬೃಹತ್ ವಿಮಾನವಾಹಕ ನೌಕೆಗಳನ್ನು ತಯಾರಿಸುವ ವಿಶ್ವದ ಆ ದೇಶಗಳ ಗುಂಪಿಗೆ ಭಾರತವು ಸೇರ್ಪಡೆಯಾಗಿದೆ. ಇಂದು ಐಎನ್ ಎಸ್ ವಿಕ್ರಾಂತ್ ದೇಶ ಮತ್ತು ಅದರ ಜನರಲ್ಲಿ ಹೊಸ ಆತ್ಮವಿಶ್ವಾಸವನ್ನು ತುಂಬಿದೆ. ಇಂದು ವಿಕ್ರಾಂತನನ್ನು ನೋಡಿ ಈ ಸಾಗರದ ಅಲೆಗಳು ಹೇಳುತ್ತಿವೆ-

अमर्त्य वीर पुत्र हो, दृढ़ प्रतिज्ञ सोच लो,
प्रशस्त पुण्य पंथ है, बढ़े चलो, बढ़े चलो।

ಅಮರ್ತ್ಯ ಧೈರ್ಯಶಾಲಿ ಮಗ, ದೃಢವಾಗಿ ಯೋಚಿಸಿ,
ಅಗಾಧವಾದ ಪುಣ್ಯ ಸಂಸ್ಕಾರವಿದೆ, ಬೆಳೆಯೋಣ, ಬೆಳೆಯೋಣ. 

ಮಿತ್ರರೇ,
ಈ ಐತಿಹಾಸಿಕ ಸಂದರ್ಭದಲ್ಲಿ, ಈ ಕನಸನ್ನು ನನಸಾಗಿಸಿದ ಭಾರತೀಯ ನೌಕಾಪಡೆಯ ಎಲ್ಲಾ ಎಂಜಿನಿಯರ್‌ಗಳು, ವಿಜ್ಞಾನಿಗಳು ಮತ್ತು ಕೊಚ್ಚಿನ್ ಶಿಪ್‌ಯಾರ್ಡ್‌ನ ನನ್ನ ಕಾರ್ಮಿಕ ಸಹೋದರ ಸಹೋದರಿಯರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಓಣಂ ಹಬ್ಬದ ಸಡಗರ ಸಂಭ್ರಮದಲ್ಲಿರುವಾಗಲೇ ಕೇರಳದ ಪುಣ್ಯಭೂಮಿಯಲ್ಲಿ ದೇಶ ಈ ಸಾಧನೆ ಮಾಡಿದೆ. ಈ ಸಂದರ್ಭದಲ್ಲಿ ನಾನು ಎಲ್ಲಾ ದೇಶವಾಸಿಗಳಿಗೆ ಓಣಂ ಶುಭಾಶಯಗಳನ್ನು ಕೋರುತ್ತೇನೆ. 
 

ಮಿತ್ರರೇ,
ಐಎನ್ ಎಸ್ ವಿಕ್ರಾಂತ್‌ನ ಪ್ರತಿಯೊಂದು ಭಾಗವು ತನ್ನದೇ ಆದ ಶಕ್ತಿ, ವಿಶೇಷತೆ ಮತ್ತು ತನ್ನದೇ ಆದ ಅಭಿವೃದ್ಧಿ ಪಯಣವನ್ನು ಹೊಂದಿದೆ. ಇದು ದೇಶೀಯ ಸಾಮರ್ಥ್ಯ, ಸ್ಥಳೀಯ ಸಂಪನ್ಮೂಲಗಳು ಮತ್ತು ಸ್ಥಳೀಯ ಕೌಶಲ್ಯಗಳ ಸಂಕೇತವಾಗಿದೆ. ಅದರ ವಾಯುನೆಲೆಯಲ್ಲಿ ಬಳಸಿರುವ ಉಕ್ಕು ಸಹ ಸ್ಥಳೀಯವಾಗಿದೆ. ಈ ಉಕ್ಕನ್ನು ಡಿಆರ್ ಡಿಓ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ ಮತ್ತು ಭಾರತೀಯ ಕಂಪನಿಗಳು ಉತ್ಪಾದನೆ ಮಾಡಿವೆ. 

ಇದು ಯುದ್ಧನೌಕೆಗಿಂತ ಹೆಚ್ಚು - ತೇಲುವ ವಾಯುನೆಲೆ ಮತ್ತು ತೇಲುವ ನಗರ. ಇದು ಉತ್ಪಾದಿಸಲಿರುವ ವಿದ್ಯುತ್ 5000 ಮನೆಗಳನ್ನು ಬೆಳಗಿಸುತ್ತದೆ. ಇದರ ಫ್ಲೈಟ್ ಡೆಕ್ (ಸರಕು ತುಂಬುವ ಜಾಗ) ಕೂಡ ಎರಡು ಫುಟ್ಬಾಲ್ ಮೈದಾನಗಳಿಗೆ ಸಮಾನವಾಗಿದೆ. ವಿಕ್ರಾಂತ್‌ನಲ್ಲಿ ಬಳಸಲಾದ ಎಲ್ಲಾ ಕೇಬಲ್‌ಗಳು ಮತ್ತು ತಂತಿಗಳನ್ನು ಒಟ್ಟಿಗೆ ಸೇರಿಸಿದರೆ ಕೊಚ್ಚಿಯಿಂದ ಕಾಶಿಗೆ ತಲುಪಬಹುದು. ಈ ಸಂಕೀರ್ಣತೆಯು ನಮ್ಮ ಎಂಜಿನಿಯರ್‌ಗಳ ಉತ್ಕೃಷ್ಟತೆ ಸಾಬೀತುಪಡಿಸುತ್ತದೆ. ಮೆಗಾ-ಎಂಜಿನಿಯರಿಂಗ್‌ ನಿಂದ ನ್ಯಾನೊ ಸರ್ಕ್ಯೂಟ್‌ಗಳವರೆಗೆ ಭಾರತಕ್ಕೆ ಈ ಹಿಂದೆ ಊಹಿಸಲೂ ಸಾಧ್ಯವಾಗದ ಸಂಗತಿಗಳು ವಾಸ್ತವವಾಗಿ ಪರಿವರ್ತನೆಗೊಳ್ಳುತ್ತಿವೆ. 

ಮಿತ್ರರೇ,
ಈ ಬಾರಿಯ ಸ್ವಾತಂತ್ರ್ಯ ದಿನದಂದು ನಾನು ಕೆಂಪು ಕೋಟೆಯ ಆವರಣದಿಂದ ‘ಪಂಚ ಪ್ರಾಣ’ಕ್ಕೆ ಕರೆ ನೀಡಿದ್ದೇನೆ ಮತ್ತು ನಮ್ಮ ಹರಿ ಜಿ ಕೂಡ ಸ್ವಲ್ಪ ಸಮಯದ ಹಿಂದೆ ಅದನ್ನೇ ಉಲ್ಲೇಖಿಸಿದ್ದಾರೆ. ಈ ಐದು ಸಂಕಲ್ಪಗಳಲ್ಲಿ ಮೊದಲನೆಯದು ಅಭಿವೃದ್ಧಿ ಹೊಂದಿದ ಭಾರತದ ಪ್ರಮುಖ ಸಂಕಲ್ಪ! ಎರಡನೆಯ ಪ್ರತಿಜ್ಞೆ ವಸಾಹತುಶಾಹಿ ಮನೋಭಾವವನ್ನು ಸಂಪೂರ್ಣವಾಗಿ ತೊಡೆದುಹಾಕುವುದು, ಮೂರನೆಯ ಸಂಕಲ್ಪವು ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡುವುದು. ನಾಲ್ಕನೇ ಮತ್ತು ಐದನೆಯ ಸಂಕಲ್ಪಗಳು - ದೇಶದ ಏಕತೆ ಮತ್ತು ಐಕ್ಯತೆ ಹಾಗೂ ನಾಗರಿಕ ಕರ್ತವ್ಯ..!

ಐಎನ್‌ಎಸ್ ವಿಕ್ರಾಂತ್ ನಿರ್ಮಾಣ ಮತ್ತು ಪಯಣದಲ್ಲಿ ಈ ಎಲ್ಲಾ ಪಂಚ ಪ್ರಾಣಗಳ ಹುರುಪನ್ನು ನಾವು ಕಾಣಬಹುದಾಗಿದೆ. ಐಎನ್‌ಎಸ್ ವಿಕ್ರಾಂತ್ ಈ ಉತ್ಸಾಹದ ಜೀವಂತ ಉದಾಹರಣೆಯಾಗಿದೆ. ಈವರೆಗೆ ಅಂತಹ ವಿಮಾನವಾಹಕ ನೌಕೆಗಳು ಅಭಿವೃದ್ಧಿ ಹೊಂದಿದ ದೇಶಗಳಿಂದ ಮಾತ್ರ ನಿರ್ಮಿಸಲ್ಪಟ್ಟವು. ಇಂದು ಭಾರತವು ಈ ಗುಂಪಿಗೆ ಸೇರುವ ಮೂಲಕ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ಮತ್ತೊಂದು ಹೆಜ್ಜೆ ಇಟ್ಟಿದೆ. 

ಮಿತ್ರರೇ,
ಜಲಸಾರಿಗೆ ಕ್ಷೇತ್ರದಲ್ಲಿ ಭಾರತಕ್ಕೆ ಭವ್ಯ ಇತಿಹಾಸವಿದೆ. ನಮ್ಮದು ಶ್ರೀಮಂತ ಪರಂಪರೆ. ದೋಣಿಗಳು ಮತ್ತು ಹಡಗುಗಳಿಗೆ ಸಂಬಂಧಿಸಿದ ಪದ್ಯಗಳಲ್ಲಿ ನಮಗೆ ಹೇಳಲಾಗಿದೆ-

दीर्घिका तरणि: लोला, गत्वरा गामिनी तरिः।
जंघाला प्लाविनी चैव, धारिणी वेगिनी तथा॥

ಲೋಂಘಿಕಾ ತರಣಿ: ಲೋಲಾ, ಗತ್ವಾರ ಗಾಮಿನಿ ತಾರಿಃ.
ಜಂಗಲ ಪ್ಲಾವಿನೀ ಚೈವ, ಧಾರಿಣೀ ವೇಗಿಣಿ ತಥಾ

ಗಲ್ಲಿಕಾ, ತರಣಿ, ಲೋಲಾ, ಗತ್ವಾರ, ಗಾಮಿನಿ, ಜಂಗಲ, ಪ್ಲಾವಿನಿ, ಧಾರಿಣಿ, ವೇಗಿಣಿ ಮುಂತಾದ ವಿವಿಧ ಗಾತ್ರದ ಹಡಗುಗಳು ಮತ್ತು ದೋಣಿಗಳನ್ನು ನಾವು ಹೊಂದಿದ್ದೇವೆ ಎಂದು ನಮ್ಮ ಗ್ರಂಥಗಳಲ್ಲಿ ವಿವರಿಸಲಾಗಿದೆ. ದೋಣಿಗಳು, ಹಡಗುಗಳು ಮತ್ತು ಮಂತ್ರಗಳಿಗೆ ಸಂಬಂಧಿಸಿದ ಅನೇಕ ಮಂತ್ರಗಳಿವೆ. ನಮ್ಮ ವೇದಗಳಲ್ಲಿಯೂ ಸಮುದ್ರಗಳಿವೆ. ವೇದಕಾಲದಿಂದ ಗುಪ್ತರ ಕಾಲ ಮತ್ತು ಮೌರ್ಯರ ಕಾಲದವರೆಗೆ ಭಾರತದ ಕಡಲ ಶಕ್ತಿಯು ಪ್ರಪಂಚದಾದ್ಯಂತ ಪ್ರಸಿದ್ಧವಾಗಿತ್ತು. ಛತ್ರಪತಿ ವೀರ ಶಿವಾಜಿ ಮಹಾರಾಜರು ಈ ಸಮುದ್ರ ಶಕ್ತಿಯಿಂದ ಶತ್ರುಗಳನ್ನು ಹೆದರಿಸುವಂತಹ ನೌಕಾಪಡೆಯನ್ನು ಕಟ್ಟಿದ್ದರು.

 ಬ್ರಿಟಿಷರು ಭಾರತಕ್ಕೆ ಬಂದಾಗ, ಅವರು ಭಾರತೀಯ ಹಡಗುಗಳ ಶಕ್ತಿ ಮತ್ತು ಪರಿಣಾಮವಾಗಿ ವ್ಯಾಪಾರದ ಬಗ್ಗೆ ಭಯಪಟ್ಟಿದ್ದರು. ಆದ್ದರಿಂದ ಅವರು ಭಾರತದ ಸಾಗರ ಶಕ್ತಿಯನ್ನು ಹತ್ತಿಕ್ಕಲು ನಿರ್ಧರಿಸಿದರು. ಅಂದು ಬ್ರಿಟಿಷ್ ಸಂಸತ್ತಿನಲ್ಲಿ ಕಾನೂನು ಜಾರಿಗೊಳಿಸಿ ಭಾರತೀಯ ಹಡಗುಗಳು ಮತ್ತು ವ್ಯಾಪಾರಿಗಳ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಲಾಗಿತ್ತು ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. 
ಭಾರತವು ಪ್ರತಿಭೆ ಮತ್ತು ಅನುಭವವನ್ನು ಹೊಂದಿತ್ತು. ಆದರೆ ನಮ್ಮ ಜನರು ಈ ಕುಟಿಲತೆ ಎದುರಿಸಲು ಮಾನಸಿಕವಾಗಿ ಸಿದ್ಧರಿರಲಿಲ್ಲ. ವಸಾಹತುಶಾಹಿ ಆಳ್ವಿಕೆಯ ಅವಧಿಯಲ್ಲಿ ನಾವು ದುರ್ಬಲರಾಗಿದ್ದೇವೆ ಮತ್ತು ಕ್ರಮೇಣ ನಮ್ಮ ಶಕ್ತಿಯನ್ನು ಮರೆತುಬಿಡುತ್ತೇವೆ. ಈಗ 'ಆಜಾದಿ ಕಾ ಅಮೃತ ಮಹೋತ್ಸವ'ದ ಸಮಯದಲ್ಲಿ, ಭಾರತವು ಆ ಉತ್ಸಾಹವನ್ನು ಪುನರುಜ್ಜೀವನಗೊಳಿಸುವ ಮೂಲಕ ಕಳೆದುಕೊಂಡ ಶಕ್ತಿಯನ್ನು ಮರಳಿ ಪಡೆಯುತ್ತಿದೆ. 

ಮಿತ್ರರೇ,
ಇಂದು 2022ರ ಸೆಪ್ಟೆಂಬರ್ 2 ಐತಿಹಾಸಿಕ ದಿನವಾಗಿದ್ದು, ನಾವು ಇತಿಹಾಸದಲ್ಲಿ ಮತ್ತೊಂದು ಅಧ್ಯಾಯ ಬದಲಾವಣೆ ಮಾಡಿದ್ದೇವೆ. ಇಂದು ಭಾರತ ವಸಾಹತುಶಾಹಿ ಆಳ್ವಿಕೆಯ ಮತ್ತೊಂದು ಹೊರೆಯನ್ನು ಕಳಚಿದೆ. ಭಾರತೀಯ ನೌಕಾಪಡೆಯು ಇಂದಿನಿಂದ ತನ್ನ ಹೊಸ ಧ್ವಜವನ್ನು ಪಡೆದುಕೊಂಡಿದೆ. ಇಲ್ಲಿಯವರೆಗೆ ವಸಾಹತುಶಾಹಿ ಕಾಲದ ಪ್ರತಿಬಿಂಬ, ಭಾರತೀಯ ನೌಕಾಪಡೆಯ ಧ್ವಜದಲ್ಲಿ ಉಳಿದಿತ್ತು. ಆದರೆ ಇಂದಿನಿಂದ ಛತ್ರಪತಿ ಶಿವಾಜಿ ಮಹಾರಾಜರಿಂದ ಪ್ರೇರಣೆಪಡೆದು ನೌಕಾಪಡೆಯ ನೂತನ ಧ್ವಜ ಸಾಗರ ಹಾಗೂ ಆಕಾಶದಲ್ಲಿ ಹಾರಾಡಲಿದೆ.

ಒಮ್ಮೆ ರಾಮಧಾರಿ ಸಿಂಗ್ ದಿನಕರ್ ತಮ್ಮ ಕವಿತೆಯಲ್ಲಿ ಬರೆದಿದ್ದರು-

नवीन सूर्य की नई प्रभा, नमो, नमो, नमो!
नमो स्वतंत्र भारत की ध्वजा, नमो, नमो, नमो!

ಹೊಸ ಸೂರ್ಯನ ಹೊಸ ಬೆಳಕು, ನಮೋ, ನಮೋ, ನಮೋ!
ನಮೋ, ಸ್ವತಂತ್ರ ಭಾರತದ ಧ್ವಜ, ನಮೋ, ನಮೋ, ನಮೋ!
ಇಂದು, ಈ ಧ್ವಜ ಪೂಜೆಯೊಂದಿಗೆ, ನಾನು ಈ ಹೊಸ ಧ್ವಜವನ್ನು ನೌಕಾಪಡೆಯ ಪಿತಾಮಹ ಛತ್ರಪತಿ ವೀರ ಶಿವಾಜಿ ಮಹಾರಾಜರಿಗೆ ಅರ್ಪಿಸುತ್ತೇನೆ. ಭಾರತೀಯತೆಯ ಚೈತನ್ಯದಿಂದ ತುಂಬಿರುವ ಈ ಹೊಸ ಧ್ವಜವು ಭಾರತೀಯ ನೌಕಾಪಡೆಯಲ್ಲಿ ಹೊಸ ಆತ್ಮವಿಶ್ವಾಸ ಮತ್ತು ಸ್ವಾಭಿಮಾನ ತುಂಬಲಿದೆ ಎಂಬ ಖಾತ್ರಿ ನನಗಿದೆ.  

ಮಿತ್ರರೇ,
ನಮ್ಮ ಪಡೆಗಳು ರೂಪಾಂತರಗೊಳ್ಳುತ್ತಿರುವ ವಿಧಾನದ ಕುರಿತು ಇನ್ನೊಂದು ಪ್ರಮುಖ ಅಂಶವನ್ನು ನಾನು ನೆಮ್ಮೆಲ್ಲಾ ದೇಶವಾಸಿಗಳ ಮುಂದಿಡಡಲು ಬಯಸುತ್ತಿದ್ದೇನೆ. ವಿಕ್ರಾಂತ್ ಅನ್ನು ನಮ್ಮ ಸಾಗರ ವಲಯವನ್ನು ರಕ್ಷಣೆಗೆ ನಿಯೋಜಿಸಿದಾಗ, ನೌಕಾಪಡೆಯ ಹಲವು ಮಹಿಳಾ ಸೈನಿಕರು ಸಹ ಅಲ್ಲಿ ನೆಲೆಸುತ್ತಾರೆ. ಸಾಗರದ ಅಗಾಧ ಶಕ್ತಿಯ ಜೊತೆಗೆ ಈ ಬೃಹತ್ ಮಹಿಳಾ ಶಕ್ತಿಯೂ ನವ ಭಾರತದ ಶ್ರೇಷ್ಠ ಹೆಗ್ಗುರುತಾಗುತ್ತದೆ. 

ನೌಕಾಪಡೆಯಲ್ಲಿ ಸದ್ಯ ಸುಮಾರು 600 ಮಹಿಳಾ ಅಧಿಕಾರಿಗಳಿದ್ದಾರೆಂದು ನಾನು ತಿಳಿದಿದ್ದೇನೆ. ಆದರೆ, ಈಗ ಭಾರತೀಯ ನೌಕಾಪಡೆಯು ತನ್ನ ಎಲ್ಲಾ ವಿಭಾಗಗಳನ್ನು ಮಹಿಳೆಯರಿಗಾಗಿ ತೆರೆಯಲು ನಿರ್ಧರಿಸಿದೆ, ಮೊದಲಿದ್ದ ನಿರ್ಬಂಧಗಳನ್ನು ಈಗ ತೆಗೆದುಹಾಕಲಾಗುತ್ತಿದೆ. ಶಕ್ತಿಯುತ ಅಲೆಗಳಿಗೆ ಯಾವುದೇ ಗಡಿಗಳಿರುವುದಿಲ್ಲ, ಅಂತೆಯೇ ಭಾರತೀಯ ಹೆಣ್ಣುಮಕ್ಕಳಿಗೆ ಯಾವುದೇ ಗಡಿ ಅಥವಾ ನಿರ್ಬಂಧಗಳಿರುವುದಿಲ್ಲ.

ಒಂದು ಅಥವಾ ಎರಡು ವರ್ಷಗಳ ಹಿಂದೆ, ಮಹಿಳಾ ಅಧಿಕಾರಿಗಳು ಐಎನ್ ಎಸ್ ವಿ ತಾರಿಣಿ ಹಡಗಿನೊಂದಿಗೆ ಇಡೀ ಭೂಮಿಯನ್ನು ಸುತ್ತಿದ್ದರು. ಮುಂಬರುವ ದಿನಗಳಲ್ಲಿ, ಅದೇ ರೀತಿಯ ಸಾಧನೆಗೆ ಮುಂದೆ ಬರುವ ಅಸಂಖ್ಯಾತ ಹೆಣ್ಣುಮಕ್ಕಳು ತಮ್ಮ ಶಕ್ತಿ ಜಗತ್ತಿಗೆ ತೋರ್ಪಡಿಸುತ್ತಾರೆ. ನೌಕಾಪಡೆಯಂತೆಯೇ, ಎಲ್ಲಾ ಮೂರು ಸಶಸ್ತ್ರ ಪಡೆಗಳಲ್ಲಿ ಮಹಿಳೆಯರನ್ನು ಸಮರದ ಹುದ್ದೆಗಳಿಗೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ,ಅವರಿಗೆ ಹೊಸ ಜವಾಬ್ದಾರಿಗಳು ತೆರೆದುಕೊಳ್ಳುತ್ತಿವೆ. 

ಮಿತ್ರರೇ,
ಸ್ವಾವಲಂಬನೆ ಮತ್ತು ಸ್ವಾತಂತ್ರ್ಯ ಒಂದಕ್ಕೊಂದು ಪೂರಕ ಎಂದು ಹೇಳಲಾಗುತ್ತದೆ. ಒಂದು ದೇಶ ಇನ್ನೊಂದು ದೇಶದ ಮೇಲೆ ಅವಲಂಬಿತವಾದಷ್ಟೂ ಸಂಕಷ್ಟಕ್ಕೆ ಸಿಲುಕುತ್ತದೆ. ಒಂದು ದೇಶ ಎಷ್ಟು ಸ್ವಾವಲಂಬಿಯಾಗಿರುತ್ತದೆಯೋ, ಅದು ಅಷ್ಟೇ ಅಧಿಕ ಶಕ್ತಿಶಾಲಿಯಾಗಿರುತ್ತದೆ. ಕರೋನಾ ಬಿಕ್ಕಟ್ಟಿನ ಸಮಯದಲ್ಲಿ, ನಾವೆಲ್ಲರೂ ಸ್ವಾವಲಂಬಿಯಾಗುವ ಈ ಶಕ್ತಿಯನ್ನು ನೋಡಿದ್ದೇವೆ, ಅರ್ಥಮಾಡಿಕೊಂಡಿದ್ದೇವೆ ಮತ್ತು ಅನುಭವಿಸಿದ್ದೇವೆ. ಆದ್ದರಿಂದ ಇಂದು ಭಾರತವು ಸ್ವಾವಲಂಬಿಯಾಗಲು ಸಂಪೂರ್ಣ ಶಕ್ತಿಯಿಂದ ಕೆಲಸ ಮಾಡುತ್ತಿದೆ. 

ಇಂದು ಒಂದೆಡೆ ಐಎನ್‌ಎಸ್ ವಿಕ್ರಾಂತ್ ಅಗಾಧ ಸಮುದ್ರದಲ್ಲಿ ಭಾರತದ ಪರಾಕ್ರಮ ತೋರಿಸಲು  ಸಿದ್ಧವಾಗಿದ್ದರೆ, ಇನ್ನೊಂದೆಡೆ ನಮ್ಮ ತೇಜಸ್ ಅನಂತ ಆಕಾಶದಲ್ಲಿ ಘರ್ಜಿಸುತ್ತಿದೆ. ಈ ಬಾರಿ ಆಗಸ್ಟ್ 15 ರಂದು ಕೆಂಪು ಕೋಟೆಯ ಮೇಲಿಂದ ನಮ್ಮ ದೇಶೀಯವಾಗಿ ಅಭಿವೃದ್ಧಿಪಡಿಸಿದ ಬಂದೂಕುಗಳ ಸದ್ದು ಇಡೀ ದೇಶಕ್ಕೆ ಕೇಳಿಸಿತು. ಸ್ವಾತಂತ್ರ್ಯದ 75 ವರ್ಷಗಳ ನಂತರ ಸೇನೆಯನ್ನು ಸುಧಾರಿಸುವ ಮೂಲಕ ಭಾರತವು ತನ್ನ ಪಡೆಗಳನ್ನು ನಿರಂತರವಾಗಿ ಆಧುನೀಕರಿಸುತ್ತಿದೆ, ಅವುಗಳನ್ನು ಸ್ವಾವಲಂಬಿಯನ್ನಾಗಿ ಮಾಡುತ್ತಿದೆ. 

ನಮ್ಮ ಪಡೆಗಳು ಅಂತಹ ಸಾಧನಗಳ ದೀರ್ಘ ಪಟ್ಟಿಯನ್ನು ಸಹ ಮಾಡಿದ್ದು, ಈಗ ಅದನ್ನು ಸ್ವದೇಶಿ ಕಂಪನಿಗಳಿಂದ ಮಾತ್ರ ಖರೀದಿಸಲಾಗುತ್ತದೆ. ರಕ್ಷಣಾ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ದೇಶದ ವಿಶ್ವವಿದ್ಯಾಲಯಗಳು ಮತ್ತು ಕಂಪನಿಗಳಿಗೆ ಬಜೆಟ್‌ನ ಶೇ.25 ರಷ್ಟು ಹಣ ಲಭ್ಯವಾಗುವಂತೆ ಮಾಡಲು ನಿರ್ಧರಿಸಲಾಗಿದೆ. ತಮಿಳುನಾಡು ಮತ್ತು ಉತ್ತರ ಪ್ರದೇಶದಲ್ಲಿ ಎರಡು ಪ್ರಮುಖ ರಕ್ಷಣಾ ಕಾರಿಡಾರ್‌ಗಳನ್ನುಅಭಿವೃದ್ಧಿಪಡಿಸಲಾಗುತ್ತಿದೆ. ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಗಾಗಿ ತೆಗೆದುಕೊಳ್ಳುತ್ತಿರುವ ಈ ಉಪಕ್ರಮಗಳಿಂದ ದೇಶದಲ್ಲಿ ಹಲವು ಬಗೆಯ ಹೊಸ ಉದ್ಯೋಗಾವಕಾಶ ಸೃಷ್ಟಿಯಾಗುತ್ತಿವೆ. 

ಮಿತ್ರರೇ,
ಒಮ್ಮೆ ನಾನು ಕೆಂಪು ಕೋಟೆಯಿಂದ ನಾಗರಿಕ ಕರ್ತವ್ಯದ ಬಗ್ಗೆಯೂ ಮಾತನಾಡಿದ್ದೇನೆ. ಈ ಬಾರಿಯೂ ಅದನ್ನೇ ಪುನರಾವರ್ತಿಸಿದ್ದೇನೆ. ನೀರಿನ ಸಣ್ಣ ಹನಿಗಳು ಬೃಹತ್ ಸಾಗರವನ್ನು ರೂಪಿಸುತ್ತವೆ. ಅಂತೆಯೇ, ಭಾರತದ ಪ್ರತಿಯೊಬ್ಬ ಪ್ರಜೆಯೂ 'ಲೋಕಲ್ ಫಾರ್ ವೋಕಲ್' ಎಂಬ ಮಂತ್ರವನ್ನು ಪಾಲಿಸಲು ಪ್ರಾರಂಭಿಸಿದರೆ, ದೇಶವು ಸ್ವಾವಲಂಬಿಯಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಎಲ್ಲ ದೇಶವಾಸಿಗಳು ಸ್ಥಳೀಯರ ಪರವಾಗಿ ಧ್ವನಿ ಎತ್ತಿದಾಗ, ಅದರ ಪ್ರತಿಧ್ವನಿ ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಕೇಳಿಬರುತ್ತದೆ ಮತ್ತು ಅದರ ಪರಿಣಾಮವಾಗಿ ಜಾಗತಿಕ ತಯಾರಕರು ಉತ್ಪಾದನೆಗಾಗಿ ಭಾರತಕ್ಕೆ ಬರುವ ಅನಿವಾರ್ಯತೆ ಎದುರಾಗಲಿದೆ. ಆ ಶಕ್ತಿ ಪ್ರತಿಯೊಬ್ಬ ನಾಗರಿಕನ ಅನುಭವದಲ್ಲಿ ಅಡಗಿದೆ. 

ಮಿತ್ರರೇ,
ಇಂದು ಜಾಗತಿಕ ಸನ್ನಿವೇಶವು ಕ್ಷಿಪ್ರವಾಗಿ ಬದಲಾಗುತ್ತಿರುವ ರೀತಿಯಲ್ಲಿಯೇ ಅದು ಜಗತ್ತನ್ನು ಧೃವೀಕರಣಗೊಳಿಸುತ್ತಿದೆ. ಆದ್ದರಿಂದ, ಮುಂಬರುವ ದಿನಗಳಲ್ಲಿ ಭವಿಷ್ಯದ ಚಟುವಟಿಕೆಗಳ ಕೇಂದ್ರವಾಗಿರುವ ಸ್ಥಳದ ದರ್ಶನವನ್ನು ಹೊಂದುವುದು ಬಹಳ ಮುಖ್ಯ. ಉದಾಹರಣೆಗೆ, ಹಿಂದೆ, ಇಂಡೋ-ಪೆಸಿಫಿಕ್ ಪ್ರದೇಶ ಮತ್ತು ಹಿಂದೂ ಮಹಾಸಾಗರದಲ್ಲಿನ ಭದ್ರತಾ ಕಾಳಜಿಗಳನ್ನು ದೀರ್ಘಕಾಲ ನಿರ್ಲಕ್ಷಿಸಲಾಗಿದೆ. ಆದರೆ, ಇಂದು ಈ ಪ್ರದೇಶಗಳು ದೇಶದ ಪ್ರಮುಖ ರಕ್ಷಣಾ ಆದ್ಯತೆಯಾಗಿದೆ. ಅದಕ್ಕಾಗಿಯೇ ನಾವು ನೌಕಾಪಡೆಯ ಬಜೆಟ್ ಅನ್ನು ಹೆಚ್ಚಿಸುವುದರಿಂದ ಅದರ ಸಾಮರ್ಥ್ಯವನ್ನು ಹೆಚ್ಚಿಸುವವರೆಗೆ ಪ್ರತಿಯೊಂದು ನಿಟ್ಟಿನಲ್ಲೂ ಕೆಲಸ ಮಾಡುತ್ತಿದ್ದೇವೆ. 

ಕಡಲಾಚೆಯ ಗಸ್ತು ನೌಕೆಗಳು, ಜಲಾಂತರ್ಗಾಮಿ ನೌಕೆಗಳು ಅಥವಾ ವಿಮಾನವಾಹಕ ನೌಕೆಗಳು ಇರಲಿ, ಇಂದು ಭಾರತೀಯ ನೌಕಾಪಡೆಯ ಶಕ್ತಿಯು ಅಭೂತಪೂರ್ವ ವೇಗದಲ್ಲಿ ಬೆಳೆಯುತ್ತಿದೆ.ಇದು ಮುಂದಿನ ದಿನಗಳಲ್ಲಿ ನಮ್ಮ ನೌಕಾಪಡೆಯನ್ನು ಬಲವರ್ಧನೆಗೊಳಿಸುತ್ತದೆ. ಅಧಿಕ ಸುರಕ್ಷಿತವಾದ 'ಸಿ-ಲೆನ್ಸ್', ಉತ್ತಮ ನಿಗಾ ಮತ್ತು ಉತ್ತಮ ರಕ್ಷಣೆಯೊಂದಿಗೆ, ನಮ್ಮ ರಫ್ತು, ಕಡಲ ವ್ಯಾಪಾರ ಮತ್ತು ಸಮುದ್ರ ಉತ್ಪಾದನೆಯೂ ಹೆಚ್ಚಾಗುತ್ತದೆ. ಇದು ಭಾರತಕ್ಕೆ ಮಾತ್ರವಲ್ಲದೆ ವಿಶ್ವದ ಇತರ ದೇಶಗಳಿಗೆ ಮತ್ತು ವಿಶೇಷವಾಗಿ ನಮ್ಮ ನೆರೆಯ ಮಿತ್ರರಾಷ್ಟ್ರಗಳಿಗೆ ವ್ಯಾಪಾರ ಮತ್ತು ಸಮೃದ್ಧಿಯ ಹೊಸ ಮಾರ್ಗಗಳನ್ನು ತೆರೆಯುತ್ತದೆ. 

ಮಿತ್ರರೇ,
ನಮ್ಮ ಧರ್ಮಗ್ರಂಥಗಳಲ್ಲಿ ಕೆಲವು ಪ್ರಮುಖ ವಿಷಯಗಳನ್ನು ಹೇಳಲಾಗಿದೆ ಮತ್ತು ನಮ್ಮ ಜನರು ಆ ಮೌಲ್ಯಗಳಿಂದ ಬದುಕಿದ್ದಾರೆ. ನಮ್ಮ ಧರ್ಮಗ್ರಂಥಗಳಲ್ಲಿ ಹೀಗೆ ಹೇಳಲಾಗಿದೆ-

विद्या विवादाय धनं मदाय, शक्तिः परेषां परिपीडनाय।
खलस्य साधोः विपरीतम् एतद्, ज्ञानाय दानाय च रक्षणाय॥

ವಿದ್ಯಾ ವಿವಾದಾಯ ಧನಂ ಮದಯ್, ಶಕ್ತಿ: ಪರಿಶನ್ ಪರಿಪೀಡನಾಯ್.
ಖಲಸ್ಯ ಸಾಧೋ: ವಿಪರ್ತಂ ಏತದ್, ಜ್ಞಾನಾಯ ದಾನಾಯ ಚ ರಕ್ಷಣೆ

ಅಂದರೆ, ದುಷ್ಟರ ಬುದ್ಧಿವಂತಿಕೆಯು ವಿವಾದಗಳನ್ನು ಸೃಷ್ಟಿಸುತ್ತದೆ, ತನ್ನ ಸಂಪತ್ತಿನ ಬಗ್ಗೆ ಹೆಮ್ಮೆಪಡುವುದು ಮತ್ತು ತನ್ನ ಶಕ್ತಿಯಿಂದ ಇತರರನ್ನು ದಬ್ಬಾಳಿಕೆ ಮಾಡುವುದು. ಆದರೆ, ಸಜ್ಜನರಿಗೆ ಇದು ಜ್ಞಾನ, ದಾನ ಮತ್ತು ದುರ್ಬಲರ ರಕ್ಷಣೆಯ ಸಾಧನವಾಗಿದೆ. ಇದು ಭಾರತದ ಸಂಸ್ಕೃತಿ, ಆದ್ದರಿಂದಲೇ ಜಗತ್ತಿಗೆ ಇನ್ನೂ ಬಲಿಷ್ಠ ಭಾರತದ ಅಗತ್ಯವಿದೆ. 

ನಾನು ಒಮ್ಮೆ ಓದಿದ್ದಂತೆ, ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರನ್ನು ಯಾರೋ ಒಬ್ಬರು “ನೀವು ತುಂಬಾ ಶಾಂತ ವ್ಯಕ್ತಿತ್ವವನ್ನು ಹೊಂದಿದ್ದೀರಿ. ನೀವು ತುಂಬಾ ಶಾಂತ ವ್ಯಕ್ತಿಯಂತೆ ಕಾಣುತ್ತೀರಿ. ಹಾಗಾದರೆ ನಿಮಗೆ ಶಸ್ತ್ರಾಸ್ತ್ರಗಳು ಏಕೆ ಬೇಕು?" ಎಂದು ಕೇಳಿದ್ದರಂತೆ, ಅದಕ್ಕೆ ಕಲಾಂ ಸಾಹೇಬರು “ಶಕ್ತಿ ಮತ್ತು ಶಾಂತಿ ಪರಸ್ಪರ ಅಂತರ ಅವಲಂಬಿತವಾಗಿವೆ ಮತ್ತು ಅದಕ್ಕಾಗಿಯೇ; ಇಂದು ಭಾರತ ಶಕ್ತಿ ಮತ್ತು ಬದಲಾವಣೆ ಎರಡನ್ನೂ ಮುನ್ನಡೆಸುತ್ತಿದೆ’’ ಎಂದು ಹೇಳಿದ್ದರಂತೆ.  

ಬಲಿಷ್ಠ ಭಾರತವು ಶಾಂತಿಯುತ ಮತ್ತು ಸುರಕ್ಷಿತ ಜಗತ್ತಿಗೆ ದಾರಿ ಮಾಡಿಕೊಡಲಿದೆ ಎಂಬ ಖಾತ್ರಿ ನನಗಿದೆ. ಅದೇ ಉತ್ಸಾಹದಲ್ಲಿ, ನಮ್ಮ ವೀರ ಸೈನಿಕರು ಮತ್ತು ಶೌರ್ಯಶಾಲಿ ಯೋಧರನ್ನು ಗೌರವಿಸುವಾಗ ಮತ್ತು ಈ ಮಹತ್ವದ ಸಂದರ್ಭವನ್ನು ಅವರ ಶೌರ್ಯಕ್ಕೆ ಅರ್ಪಿಸುವಾಗ, ನಾನು ನಿಮಗೆಲ್ಲರಿಗೂ ನನ್ನ ಹೃದಯಾಳದಿಂದ ಧನ್ಯವಾದಗಳನ್ನು ಸಲ್ಲಿಸುತ್ತೇನೆ. 

ಜೈ ಹಿಂದ್ !
 
ಹಕ್ಕು ನಿರಾಕರಣೆ: ಇದು ಪ್ರಧಾನಮಂತ್ರಿ ಅವರ ಭಾಷಣದ ಯಥಾವತ್ ಅನುವಾದವಲ್ಲ, ಅವರು ಮೂಲತಃ ಹಿಂದಿ ಭಾಷೆಯಲ್ಲಿ ಮಾತನಾಡಿದರು.  

*****



(Release ID: 1858186) Visitor Counter : 101