ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಇಂಡೋನೇಷ್ಯಾದ ಬಾಲಿಯಲ್ಲಿ ದಕ್ಷಿಣ ಆಫ್ರಿಕಾ ಗಣರಾಜ್ಯದ ಉನ್ನತ ಶಿಕ್ಷಣ, ವಿಜ್ಞಾನ ಮತ್ತು ನಾವಿನ್ಯತೆ ಸಚಿವರಾದ ಗೌರವಾನ್ವಿತ ಡಾ. ಬೊಂಗಿಂಕೋಸಿ ಇಮ್ಯಾನ್ಯುಯೆಲ್ "ಬ್ಲೇಡ್" ಎನ್ಜಿಮಾಂಡೆ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.
Posted On:
31 AUG 2022 5:54PM by PIB Bengaluru
ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಇಂದು ಇಂಡೋನೇಷ್ಯಾದ ಬಾಲಿಯಲ್ಲಿ ದಕ್ಷಿಣ ಆಫ್ರಿಕಾ ಗಣರಾಜ್ಯದ ಉನ್ನತ ಶಿಕ್ಷಣ, ವಿಜ್ಞಾನ ಮತ್ತು ನಾವಿನ್ಯತೆಯ ಸಚಿವ ಡಾ. ಬೊಂಗಿಂಗೋಸಿ ಇಮ್ಯಾನ್ಯುಯಲ್ "ಬ್ಲೇಡ್" ಎನ್ಜಿಮಾಂಡೆ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.
ಶೈಕ್ಷಣಿಕ ಮತ್ತು ಕೌಶಲ್ಯ ಅಭಿವೃದ್ಧಿ ಸಹಭಾಗಿತ್ವ ಹಾಗು ದ್ವಿಪಕ್ಷೀಯ ಶಿಕ್ಷಣ ಸಹಕಾರವನ್ನು ಬಲಪಡಿಸುವ ಬಗ್ಗೆ ಸಚಿವರು ಫಲಪ್ರದ ಚರ್ಚೆ ನಡೆಸಿದರು.
ಎಚ್ಇಐಗಳು ಮತ್ತು ಕೌಶಲ್ಯ ಸಂಸ್ಥೆಗಳ ನಡುವೆ ಒಪ್ಪಂದಗಳಿಗೆ, ಕೌಶಲ್ಯ ಅರ್ಹತೆಗಳಿಗೆ ಪರಸ್ಪರ ಮಾನ್ಯತೆ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ಸಾಮರ್ಥ್ಯ ವರ್ಧನೆಗಾಗಿ ಸಾಂಸ್ಥಿಕ ಕಾರ್ಯವಿಧಾನಗಳನ್ನು ಅಭಿವೃದ್ಧಿಪಡಿಸಲು ಸಚಿವರು ಒಪ್ಪಿಕೊಂಡರು.
ಈಗಾಗಲೇ ಅಸ್ತಿತ್ವದಲ್ಲಿರುವ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ಮತ್ತು ಶಿಕ್ಷಣದಲ್ಲಿ ದ್ವಿಪಕ್ಷೀಯ ಸಹಕಾರದ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಉಭಯ ದೇಶಗಳ ನಡುವೆ ಶಿಕ್ಷಣಕ್ಕೆ ಸಂಬಂಧಿಸಿದ ಜಂಟಿ ಕಾರ್ಯ ಗುಂಪನ್ನು ಸ್ಥಾಪಿಸಲು ಅವರು ನಿರ್ಧರಿಸಿದರು.
ಎನ್.ಇ.ಪಿ. ಅಳವಡಿಕೆಯಿಂದಾಗಿ ಭಾರತೀಯ ಶಿಕ್ಷಣದ ಅಂತಾರಾಷ್ಟ್ರೀಕರಣಕ್ಕೆ ಹಾದಿ ತೆರೆಯಲ್ಪಟ್ಟಿದೆ ಎಂದು ಶ್ರೀ ಪ್ರಧಾನ್ ಹೇಳಿದರು.
ಭಾರತ ಮತ್ತು ದಕ್ಷಿಣ ಆಫ್ರಿಕಾ ಸಂಬಂಧಗಳು ನಿಕಟ ಮತ್ತು ಸ್ನೇಹಪರವಾಗಿವೆ ಮತ್ತು ಪರಸ್ಪರ ಹಂಚಿಕೊಂಡ ಮೌಲ್ಯಗಳು ಮತ್ತು ಹಿತಾಸಕ್ತಿಗಳಲ್ಲಿ ಬೇರೂರಿವೆ ಎಂದು ಶ್ರೀ ಪ್ರಧಾನ್ ಹೇಳಿದರು.
ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ನಮ್ಮ ಕಾರ್ಯಚಟುವಟಿಕೆಗಳನ್ನು ಗಾಢಗೊಳಿಸಲು ಉತ್ಸುಕರಾಗಿದ್ದಕ್ಕಾಗಿ ಮತ್ತು ಜಿ 20 ಎ.ಡಿ.ಡಬ್ಲ್ಯೂಜಿ ಕಾರ್ಯಸೂಚಿಯನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯುವುದಕ್ಕಾಗಿ ಭಾರತದ ಅಧ್ಯಕ್ಷತೆಗೆ ನೀಡಿದ ಬೆಂಬಲಕ್ಕಾಗಿ ಶ್ರೀ ಪ್ರಧಾನ್ ಅವರು ಗೌರವಾನ್ವಿತ ಡಾ. ಎನ್ಜಿಮಾಂಡೆ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಇಂಡೋನೇಷ್ಯಾದ ಬಾಲಿಯಲ್ಲಿರುವ ಗುಸ್ತಿ ಬಗಸ್ ಸುಗ್ರೀವಾ ವಿಶ್ವವಿದ್ಯಾನಿಲಯಕ್ಕೂ ಶ್ರೀ ಪ್ರಧಾನ್ ಭೇಟಿ ನೀಡಿದರು. ಈ ವಿಶ್ವವಿದ್ಯಾನಿಲಯವು ಇಂಡೋನೇಷ್ಯಾದ ಬಹುತ್ವದ ತತ್ವಗಳ ಪ್ರತಿಬಿಂಬವಾಗಿದೆ ಮತ್ತು ಇಂಡೋನೇಷ್ಯಾ ಮತ್ತು ಭಾರತದ ನಡುವಿನ ಸಾಮಾನ್ಯ ಬೇರುಗಳು, ಅಸ್ಮಿತೆ ಮತ್ತು ಆಳವಾದ ಸಾಂಸ್ಕೃತಿಕ ಸಂಪರ್ಕದ ಆಚರಣೆಯಾಗಿದೆ ಎಂದೂ ಸಚಿವರಾದ ಪ್ರಧಾನ್ ಹೇಳಿದರು.
ಭಾರತದ ಎಚ್.ಇ.ಐ.ಗಳೊಂದಿಗೆ ಸಾಂಸ್ಥಿಕ ಸಂಪರ್ಕ ಮತ್ತು ಸಂಸ್ಕೃತ ಭಾಷೆ, ತತ್ವಶಾಸ್ತ್ರ, ಆಯುರ್ವೇದ ಹಾಗು ಯೋಗ ಕ್ಷೇತ್ರಗಳಲ್ಲಿ ಶೈಕ್ಷಣಿಕ ಸಹಯೋಗದ ಅವಕಾಶಗಳನ್ನು ಅವರು ವಿವೇಚಿಸಿದರು.
ಸುಗ್ರೀವ ವಿಶ್ವವಿದ್ಯಾಲಯ ಮತ್ತು ಭಾರತೀಯ ಎಚ್.ಇ.ಐ.ಗಳ ನಡುವೆ ಬಲವಾದ ಶೈಕ್ಷಣಿಕ ಸಹಯೋಗಗಳು ಮತ್ತು ವಿದ್ಯಾರ್ಥಿಗಳ ವಿನಿಮಯವು ಹಿಂದೂ ಧರ್ಮದ ತಿಳಿವಳಿಕೆ ಮತ್ತು ಪರಸ್ಪರ ಹಂಚಿಕೊಂಡ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಸಂಬಂಧಗಳನ್ನು ವಿಸ್ತರಿಸಲು ದಾರಿ ಮಾಡಿಕೊಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಬಾಲಿಯಲ್ಲಿರುವ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಮತ್ತು ಉದ್ಯಮ ಸಂಸ್ಥೆಗೆ (ಇನ್ಸ್ಟಿಟ್ಯೂಟ್ ಪರಿವಿಸಾತಾ ಡಾನ್ ಬಿಸ್ನಿಸ್ ಇಂಟರ್ನ್ಯಾಷನಲ್) ಗೆ ಭೇಟಿ ನೀಡಿದರು.
ಅವರು ತರಬೇತಿ ಸೌಲಭ್ಯಗಳು, ಕೌಶಲ್ಯ ಕಾರ್ಯಕ್ರಮಗಳು, ಕ್ರೆಡಿಟ್ ಚೌಕಟ್ಟುಗಳು, ವಿದ್ಯಾರ್ಥಿಗಳ ವಲಸೆ/ಚಲನವಲನ ಮಾರ್ಗಗಳು ಮತ್ತು ಭವಿಷ್ಯದ ಯೋಜನೆಗಳ ಕುರಿತು ಅವಲೋಕನ ನಡೆಸಿದರು. .
ಕೌಶಲ್ಯ ಕ್ಷೇತ್ರದಲ್ಲಿನ ಸಹಯೋಗಗಳು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತವೆ, ಪ್ರಯಾಣ, ಪ್ರವಾಸೋದ್ಯಮ, ಆತಿಥ್ಯ ಮತ್ತು ವ್ಯವಹಾರದ ಉದಯೋನ್ಮುಖ ಕ್ಷೇತ್ರಗಳಲ್ಲಿ ಸಾಮರ್ಥ್ಯಗಳನ್ನು ನಿರ್ಮಿಸಲು ಸಹಾಯ ಮಾಡುತ್ತವೆ ಹಾಗು ಜನತೆ ಮತ್ತು ಜನತೆಯ ನಡುವಿನ ಸಂಪರ್ಕವನ್ನು ಹೆಚ್ಚಿಸುತ್ತವೆ ಎಂದು ಅವರು ಹೇಳಿದರು.
********
(Release ID: 1855881)
Visitor Counter : 182