ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
azadi ka amrit mahotsav g20-india-2023

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಕಾರ್ಮಿಕ ಸಚಿವರು ಮತ್ತು ಕಾರ್ಮಿಕ ಕಾರ್ಯದರ್ಶಿಗಳ ಎರಡು ದಿನಗಳ ರಾಷ್ಟ್ರೀಯ ಕಾರ್ಮಿಕ ಸಮ್ಮೇಳನಕ್ಕೆ ತಿರುಪತಿಯಲ್ಲಿ ತೆರೆ


ಅಮೃತ್ ಕಾಲ್ ನ ಕಾಲಘಟ್ಟದಲ್ಲಿ ದೂರದೃಷ್ಟಿಯ ಚಿಂತನೆಯನ್ನು ಮುಂದಕ್ಕೆ ಕೊಂಡೊಯ್ಯಲು ಸಮ್ಮೇಳನದಲ್ಲಿ ಚರ್ಚಿಸಲಾದ ವಿಷಯಗಳ ಬಗ್ಗೆ ಮಾರ್ಗಸೂಚಿಗಳನ್ನು ಸಚಿವಾಲಯ ಹೊರತರಲಿದೆ.

Posted On: 26 AUG 2022 8:26PM by PIB Bengaluru

ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು 2022 ರ ಆಗಸ್ಟ್ 25-26 ರಂದು ಆಂಧ್ರಪ್ರದೇಶದ ತಿರುಪತಿಯಲ್ಲಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಕಾರ್ಮಿಕ ಸಚಿವರು ಮತ್ತು ಕಾರ್ಮಿಕ ಕಾರ್ಯದರ್ಶಿಗಳ ಎರಡು ದಿನಗಳ ರಾಷ್ಟ್ರೀಯ ಕಾರ್ಮಿಕ ಸಮ್ಮೇಳನವನ್ನು ಆಯೋಜಿಸಿತ್ತು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 25.8.2022 ರಂದು ವರ್ಚುವಲ್ ಮೂಲಕ ಉದ್ಘಾಟನಾ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದರು. ಕೇಂದ್ರ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಮತ್ತು ಶ್ರೀ ರಾಮೇಶ್ವರ್ ತೇಲಿ, ಚಂಡೀಗಢ ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿ, ರಾಜ್ಯಗಳ ಕಾರ್ಮಿಕ ಸಚಿವರು, ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಕಾರ್ಮಿಕ ಕಾರ್ಯದರ್ಶಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ತಮ್ಮ ಭಾಷಣದಲ್ಲಿ ಪ್ರಧಾನ ಮಂತ್ರಿಯವರು, ಅಮೃತ್ ಕಾಲ್ ನ ಈ ಕಾಲಘಟ್ಟದಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನು ನಿರ್ಮಿಸುವ ಭಾರತದ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಸಾಕಾರಗೊಳಿಸುವಲ್ಲಿ ಭಾರತದ ಕಾರ್ಮಿಕ ಶಕ್ತಿಯ ಪಾತ್ರ ಮಹತ್ತರವಾದುದಾಗಿದೆ ಎಂದು ಇತರ ವಿಷಯಗಳೊಂದಿಗೆ ಉಲ್ಲೇಖಿಸಿದರು.  

 

ಕೇಂದ್ರ ಕಾರ್ಮಿಕ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರು ಸಮ್ಮೇಳನದ ರೂಪು ರೇಷೆಗಳನ್ನು ವಿವರಿಸಿದರು ಮತ್ತು ರಾಜ್ಯ ಸರ್ಕಾರಗಳು ತಮ್ಮ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ನೀಡುವಂತೆ ವಿನಂತಿಸಿದರು.     

ಕಾರ್ಮಿಕರಿಗೆ ಸಾಮಾಜಿಕ ರಕ್ಷಣೆಯನ್ನು ಸಾರ್ವತ್ರೀಕರಿಸಲು ಮತ್ತು ಎಲ್ಲರಿಗೂ ಉದ್ಯೋಗಾವಕಾಶಗಳನ್ನು ಸುಧಾರಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ನಡೆಸುತ್ತಿರುವ ಸಾಮಾಜಿಕ ಭದ್ರತಾ ಯೋಜನೆಗಳನ್ನು ವಿತರಿಸಲು ಇ-ಶ್ರಮ್ ಪೋರ್ಟಲ್ ಅನ್ನು ಸಂಯೋಜಿಸಿ ಸಮಗ್ರಗೊಳಿಸುವುದರ ಕುರಿತಂತೆ ಮೊದಲ ವಿಷಯಾಧಾರಿತ ಅಧಿವೇಶನದಲ್ಲಿ ಚರ್ಚಿಸಲಾಯಿತು. 400 ಕ್ಕೂ ಹೆಚ್ಚು ವಿವಿಧ ವೃತ್ತಿಗಳಿಗೆ 28 ಕೋಟಿಗೂ ಹೆಚ್ಚು ಅಸಂಘಟಿತ ವಲಯದ ಕಾರ್ಮಿಕರು ಈಗಾಗಲೇ ಇ-ಶಾಮ್ ಪೋರ್ಟಲ್ ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಎಸ್ಒಪಿಯನ್ನು ಸಿದ್ಧಪಡಿಸಲಾಗುತ್ತಿದ್ದು, ಇದಕ್ಕಾಗಿ ರಾಜ್ಯಗಳ ಸದಸ್ಯರೊಂದಿಗೆ ಸಚಿವಾಲಯದ ಅಡಿಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ಅಂತಿಮಗೊಳಿಸಿದ ಎಸ್ಒಪಿಯ ಆಧಾರದ ಮೇಲೆ, ಇ-ಶ್ರಮ್ ದತ್ತಾಂಶಗಳನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗುವುದು ಮತ್ತು ರಾಜ್ಯಗಳು ಪರಿಶೀಲನೆ ಬಳಿಕ ದತ್ತಾಂಶವನ್ನು ಮರಳಿಸಲಿವೆ. ಇದು ನೀತಿ ನಿರ್ಧಾರಗಳನ್ನು ಕೈಗೊಳ್ಳಲು ಮತ್ತು ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯಗಳಿಗೆ ಸಹಾಯ ಮಾಡುತ್ತದೆ. ರಾಜ್ಯಗಳು ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದವು ಮತ್ತು ಸಲಹೆಗಳನ್ನು ನೀಡಿದವು.  

 

ರಾಜ್ಯ ಸರ್ಕಾರಗಳು ನಡೆಸುವ ಇಎಸ್ಐ ಆಸ್ಪತ್ರೆಗಳ ಮೂಲಕ ಒದಗಿಸಲಾಗುವ ವೈದ್ಯಕೀಯ ಆರೈಕೆ ಮತ್ತು ಸೇವೆಗಳನ್ನು ಸುಧಾರಿಸಲು ಮತ್ತು ಪಿಎಂಜೆಎವೈಯೊಂದಿಗೆ ಅವುಗಳ ಏಕೀಕರಣಕ್ಕಾಗಿ “ಸ್ವಾಸ್ಥ್ಯ ಸೆ ಸಮೃದ್ಧಿ”ಯನ್ನು ಎರಡನೇ ವಿಷಯಾಧಾರಿತ ಶೀರ್ಷಿಕೆಯಲ್ಲಿ ಚರ್ಚಿಸಲಾಯಿತು. 2022 ರ ಡಿಸೆಂಬರ್ ವೇಳೆಗೆ ಎಲ್ಲಾ ಜಿಲ್ಲೆಗಳಿಗೆ ವೈದ್ಯಕೀಯ ಸೌಲಭ್ಯಗಳನ್ನು ವಿಸ್ತರಿಸಲು ಇಎಸ್ಐಸಿ ಬದ್ಧವಾಗಿದೆ, 76 ಹೊಸ ಆಸ್ಪತ್ರೆಗಳ ನಿರ್ಮಾಣವನ್ನು ಕೈಗೆತ್ತಿಕೊಳ್ಳಲಾಗಿದೆ, ಸರ್ಕಾರಿ ಸ್ವಾಮ್ಯದ ಇಎಸ್ಐ ಆಸ್ಪತ್ರೆಗಳಿಗೆ ತಜ್ಞರನ್ನು ನೇಮಿಸಿಕೊಳ್ಳಲು ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರು ಉಲ್ಲೇಖಿಸಿದರು. ಕಾರ್ಮಿಕರಿಗೆ ಆರೋಗ್ಯ ಸೇವೆಗಳನ್ನು ಒದಗಿಸಲು ರಾಜ್ಯಗಳು ಮತ್ತು ಕೇಂದ್ರ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡುವ ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಇಎಸ್ಐಸಿ ಒಂದು ಉತ್ತಮ ಉದಾಹರಣೆಯಾಗಿದೆ ಎಂದು ರಾಜ್ಯಗಳು ಇತರ ವಿಷಯಗಳೊಂದಿಗೆ ವಿವರ ನೀಡಿದವು. ಆಸ್ಪತ್ರೆಗಳನ್ನು ಸ್ಥಾಪಿಸಲು ಮಾನದಂಡಗಳ ಪರಿಷ್ಕರಣೆಯನ್ನು ರಾಜ್ಯಗಳು ಸ್ವಾಗತಿಸಿದವು. ಹೊಸ ಆಸ್ಪತ್ರೆಗಳ ಸ್ಥಾಪನೆಗೆ ಸುಲಭದಲ್ಲಿ ನಿರ್ಧಾರ ತೆಗೆದುಕೊಳ್ಳಲು, ಮಾನದಂಡಗಳ ಪರಿಷ್ಕರಣೆಗೆ ಮಾಹಿತಿಗಳು, ಆಶೋತ್ತರಗಳ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಸ್ಥಾಪಿಸುವ ವಿಧಾನಗಳಿಗಾಗಿ, ಸೊಸೈಟಿಗಳ ರಚನೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ರಾಜ್ಯಗಳನ್ನು ವಿನಂತಿಸಲಾಯಿತು.      

ಮೂರನೆಯ ವಿಷಯಾಧಾರಿತ ಅಧಿವೇಶನವು ನಾಲ್ಕು ಕಾರ್ಮಿಕ ಸಂಹಿತೆಗಳಡಿಯಲ್ಲಿ ನಿಯಮಗಳನ್ನು ರೂಪಿಸಲು, ಪರವಾನಗಿ, ನೋಂದಣಿ, ರಿಟರ್ನ್ಸ್, ತಪಾಸಣೆ ಇತ್ಯಾದಿಗಳಿಗಾಗಿ ಪೋರ್ಟಲ್ ಗಳ ಅಭಿವೃದ್ಧಿಯೊಂದಿಗೆ ಅನುಷ್ಠಾನಕ್ಕಾಗಿ ಕಾರ್ಯವಿಧಾನಗಳನ್ನು ರೂಪಿಸುವುದನ್ನು ಚರ್ಚಿಸಿದರೆ, "ವಿಷನ್ ಶ್ರಮೇವ್ ಜಯತೆ @ 2047" ಎಂಬ ಧ್ಯೇಯವಾಕ್ಯದಡಿಯಲ್ಲಿ ಕೊನೆಯ ವಿಷಯಾಧಾರಿತ ಅಧಿವೇಶನ ನಡೆಯಿತು. ಇದರಲ್ಲಿ ಕೆಲಸದ ನ್ಯಾಯಯುತ ಮತ್ತು ಸಮಾನ ಭವಿಷ್ಯ, ಕೈಗಾಡಿ ಮತ್ತು ಪ್ಲಾಟ್ಫಾರ್ಮ್ ಕಾರ್ಮಿಕರಿಗೆ ಸಾಮಾಜಿಕ ರಕ್ಷಣೆ, ಕೆಲಸದಲ್ಲಿ ಲಿಂಗ ಸಮಾನತೆ ಮತ್ತು ಮಹಿಳೆಯರಿಗೆ ಉತ್ತಮ ಅವಕಾಶಗಳ ಬಗ್ಗೆ ಗಮನ ಹರಿಸಲಾಯಿತು. ವ್ಯಾಪಾರಕ್ಕೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡುವುದು ಮತ್ತು ಕಾರ್ಮಿಕರಿಗೆ ಜೀವನವನ್ನು ಸುಲಭಗೊಳಿಸುವುದು, ಸಂಹಿತೆಗಳ ಅಡಿಯಲ್ಲಿಯ ಅಪರಾಧವನ್ನು ಕ್ರಿಮಿನಲ್ ಅಪರಾಧಮುಕ್ತಗೊಳಿಸುವುದು, ನೋಂದಣಿಗಾಗಿ ಸಂಯೋಜಿತ ಪೋರ್ಟಲ್ ಅಭಿವೃದ್ಧಿಪಡಿಸುವುದು, ಒಂದು ಬಾರಿ ಪರವಾನಗಿ, ಅನುಸರಣೆ ಮತ್ತು ರಿಟರ್ನ್ಸ್; ಕೈಗಾಡಿ ಮತ್ತು ಪ್ಲಾಟ್ ಫಾರ್ಮ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಖಾತ್ರಿಪಡಿಸುವಲ್ಲಿನ ಸವಾಲುಗಳು ಮತ್ತು ಇವುಗಳನ್ನು ಪರಿಹರಿಸುವ ಮಾರ್ಗಗಳು; ಮಹಿಳಾ ಕಾರ್ಮಿಕ ಶಕ್ತಿಯ ಪಾಲ್ಗೊಳ್ಳುವಿಕೆಯನ್ನು ಸುಧಾರಿಸುವುದು; ಕೌಶಲ್ಯ, ಕೆಲಸದ ಭವಿಷ್ಯದೊಂದಿಗೆ ಹೊಂದಿಕೊಂಡಂತೆ ಜೀವನ ಪರ್ಯಂತ ಕಲಿಕೆ; ಕೌಶಲ್ಯದ ಕಂದಕದ ನಕ್ಷೀಕರಣ ಮತ್ತು ಯೋಜಿತ ವಲಸೆ ಅನುಕೂಲತೆ; ಸಾಮಾಜಿಕ ಭದ್ರತಾ ಯೋಜನೆಗಳಿಗೆ ಸುಸ್ಥಿರ ಹಣಕಾಸು ವಿಷಯಗಳು ಚರ್ಚೆಯಾದವು. ನಿಯಮಗಳನ್ನು ರೂಪಿಸುವುದಕ್ಕೆ ಮತ್ತು ಅವುಗಳ ಸ್ಥಿತಿ ಗತಿಯ ಬಗ್ಗೆ ರಾಜ್ಯಗಳು ಸಲಹೆಗಳನ್ನು ನೀಡಿದವು.

 

ಆಂಧ್ರಪ್ರದೇಶದ ಮುಖ್ಯಮಂತ್ರಿ ಶ್ರೀ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಸಮ್ಮೇಳನದ ಸಮಾರೋಪ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದರು. ರಾಜ್ಯಗಳು ನೀಡಿದ, ವ್ಯಕ್ತಪಡಿಸಿದ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಕೇಂದ್ರ ಕಾರ್ಮಿಕ ಸಚಿವ ಶ್ರೀ ಭೂಪೇಂದರ್ ಯಾದವ್ ಅವರು ಶ್ಲಾಘಿಸಿದರು. ಅಮೃತ್ ಕಾಲ್ ನಲ್ಲಿ ಈ ದೂರದೃಷ್ಟಿಯ ಚಿಂತನೆಯನ್ನು ಮುಂದಕ್ಕೆ ಕೊಂಡೊಯ್ಯಲು ಸಮ್ಮೇಳನದಲ್ಲಿ ಚರ್ಚಿಸಲಾದ ವಿಷಯಗಳ ಬಗ್ಗೆ ಸಚಿವಾಲಯವು ಮಾರ್ಗಸೂಚಿಗಳನ್ನು ಹೊರತರಲಿದೆ.



(Release ID: 1854773) Visitor Counter : 163


Read this release in: English , Urdu , Hindi