ಭೂವಿಜ್ಞಾನ ಸಚಿವಾಲಯ
ಎಲ್ಇಡಿ ದೀಪಗಳಿಗೆ ವಿದ್ಯುತ್ ಒದಗಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಎಲೆಕ್ಟ್ರೋಡ್ (ವಿದ್ಯುದ್ವಾರ)ಗಳ ನಡುವೆ ಸಮುದ್ರದ ನೀರನ್ನು ಎಲೆಕ್ಟ್ರೋಲೈಟ್ ಅನ್ನಾಗಿ ಬಳಸುವ ಭಾರತದ ಮೊದಲ ಲವಣಯುಕ್ತ ನೀರಿನ ಲಾಂದ್ರವನ್ನು ಬಿಡುಗಡೆ ಮಾಡಿದ ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್
ಭಾರತದ ಸಮುದ್ರದಾಳದಲ್ಲಿ ನಡೆಯುತ್ತಿರುವ ಅನ್ವೇಷಣೆಗಳ ಯೋಜನೆ ಪರಾಮರ್ಶಿಸಲು ಚೆನ್ನೈನ ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆ (ಎನ್ಐಒಟಿ) ಬಳಕೆ ಮಾಡುತ್ತಿರುವ ಮತ್ತು ಕಾರ್ಯಾಚರಣೆ ನಡೆಸುತ್ತಿರುವ ಕರಾವಳಿ ಸಂಶೋಧನಾ ಹಡಗು ‘ಸಾಗರ್ ಅನ್ವೇಷಿಕಾ’ಗೆ ಭೇಟಿ ನೀಡಿದ ಸಚಿವರು
ಬಡವರು ಮತ್ತು ಅಗತ್ಯವಿರುವವರು ವಿಶೇಷವಾಗಿ ಭಾರತದ ಕರಾವಳಿಯ 7500 ಕಿಲೋಮೀಟರ್ ಉದ್ದಕ್ಕೂ ನೆಲೆಸಿರುವ ಮೀನುಗಾರಿಕಾ ಸಮುದಾಯಕ್ಕೆ ಲವಣಯುಕ್ತ ನೀರಿನ ಲಾಂದ್ರಗಳು ಜೀವನ ಸುಲಭಗೊಳಿಸುತ್ತವೆ: ಡಾ.ಜಿತೇಂದ್ರ ಸಿಂಗ್
ಲವಣಯುಕ್ತ ನೀರಿನ ಶಕ್ತಿಯ ರೋಷ್ನಿ ಎಲ್ ಇಡಿ ದೀಪಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉಜಾಲಾ ಯೋಜನೆಗೆ ಉತ್ತೇಜಕ ಮತ್ತು ಪೂರಕ
ಹಡಗಿನ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಡಾ.ಜಿತೇಂದ್ರ ಸಿಂಗ್: “ಹರ್ ಘರ್ ತಿರಂಗಾ’ ಅಭಿಯಾನವನ್ನು ‘ಹರ್ ಜಹಲ್ ತಿರಂಗಾ’ವಾಗಿ ವಿಸ್ತರಣೆ
Posted On:
13 AUG 2022 12:51PM by PIB Bengaluru
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವರು (ಸ್ವತಂತ್ರ ಹೊಣೆಗಾರಿಕೆ); ಭೂ ವಿಜ್ಞಾನ (ಸ್ವತಂತ್ರ ಹೊಣೆಗಾರಿಕೆ); ಪ್ರಧಾನಮಂತ್ರಿಗಳ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಪಿಂಚಣಿ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಎಲ್ಇಡಿ ದೀಪಗಳಿಗೆ ವಿದ್ಯುತ್ ಒದಗಿಸಲು ವಿಶೇಷವಾಗಿ ವಿನ್ಯಾಸಗೊಳಿಸಿದ ಎಲೆಕ್ಟ್ರೋಡ್ (ವಿದ್ಯುದ್ವಾರ)ಗಳ ನಡುವೆ ಸಮುದ್ರದ ನೀರನ್ನು ಎಲೆಕ್ಟ್ರೋಲೈಟ್ ಆಗಿ ಬಳಸುವ ಭಾರತದ ಮೊದಲ ಲವಣಯುಕ್ತ ನೀರಿನ ಲಾಂದ್ರವನ್ನು ಬಿಡುಗಡೆ ಮಾಡಿದರು.
ಸಾಗರ ಸಂಶೋಧನೆಗಾಗಿ ಚೆನ್ನೈನ ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆ (ಎನ್ಐಒಟಿ) ಬಳಕೆ ಮಾಡುತ್ತಿರುವ ಮತ್ತು ಕಾರ್ಯಾಚರಣೆ ನಡೆಸುತ್ತಿರುವ ಕರಾವಳಿ ಸಂಶೋಧನಾ ನೌಕೆ ಸಾಗರ್ ಅನ್ವೇಷಿಕಾಗೆ ಭೇಟಿ ನೀಡಿದ್ದ ವೇಳೆ ಡಾ. ಜಿತೇಂದ್ರ ಸಿಂಗ್ ಅವರು ‘ರೋಷ್ನಿ’ ಹೆಸರಿನ ಮೊದಲ ವಿನೂತನ ಬಗೆಯ ಲಾಂದ್ರವನ್ನು ಅನಾವರಣಗೊಳಿಸಿದರು. ಲವಣಯುಕ್ತ ನೀರಿನ ಈ ಲಾಂದ್ರ ಬಡವರು ಮತ್ತು ನಿರ್ಗತಿಕರು ವಿಶೇಷವಾಗಿ ಭಾರತದ 7500 ಕಿಲೋಮೀಟರ್ ಉದ್ದದ ಕರಾವಳಿಯುದ್ದಕ್ಕೂ ವಾಸಿಸುತ್ತಿರುವ ಮೀನುಗಾರ ಸಮುದಾಯಕ್ಕೆ ‘ಜೀವನವನ್ನು ಸುಲಭಗೊಳಿಸುತ್ತದೆ’ ಎಂದು ಸಚಿವರು ಹೇಳಿದರು.
ಈ ಲವಣಯುಕ್ತ ನೀರಿನ ಲಾಂದ್ರ ದೇಶಾದ್ಯಂತ ಎಲ್‌ಇಡಿ ಬಲ್ಬ್‌ಗಳ ವಿತರಣೆಗಾಗಿ 2015ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ಉಜಾಲಾ ಯೋಜನೆಯನ್ನು ಉತ್ತೇಜಿಸುತ್ತದೆ ಮತ್ತು ಅದಕ್ಕೆ ಪೂರಕವಾಗಿದೆ ಎಂದು ಡಾ.ಜಿತೇಂದ್ರ ಸಿಂಗ್ ಹೇಳಿದರು. ಇಂಧನ ಸಚಿವಾಲಯದ ಸೌರ ಅಧ್ಯಯನ ಲಾಂದ್ರಗಳಂತಹ ಯೋಜನೆಗಳೊಂದಿಗೆ ರೋಷಿನಿ ಲಾಂದ್ರಗಳು ಇಂಧನ ಭದ್ರತೆ, ಇಂಧನ ಲಭ್ಯತೆ ಮತ್ತು ರಾಷ್ಟ್ರೀಯ ಆರ್ಥಿಕತೆಯ ಭಾಗವಾಗಿ ಇಂಗಾಲ ಹೊರಸೂಸುವಿಕೆ ತಗ್ಗಿಸುವ ಗುರಿಯನ್ನು ಹೊಂದಿರುವ ಸಕ್ರಿಯವಾದ ನವೀಕರಿಸಬಹುದಾದ ಇಂಧನ ಕಾರ್ಯಕ್ರಮಗಳನ್ನು ಮುನ್ನಡೆಸಿಕೊಂಡು ಹೋಗಲಿವೆ ಎಂದು ಅವರು ಹೇಳಿದರು.
ಈ ತಂತ್ರಜ್ಞಾನವನ್ನು ಸಮುದ್ರದ ನೀರು ಲಭ್ಯವಿಲ್ಲದ ಒಳನಾಡು ಪ್ರದೇಶಗಳಲ್ಲಿಯೂ ಬಳಸಬಹುದು, ಏಕೆಂದರೆ ಯಾವುದೇ ಲವಣಯುಕ್ತ ನೀರು ಅಥವಾ ಸಾಮಾನ್ಯ ಉಪ್ಪಿನೊಂದಿಗೆ ಸಾಮಾನ್ಯ ನೀರು ಲಾಂದ್ರಕ್ಕೆ ವಿದ್ಯುತ್ ಶಕ್ತಿ ನೀಡಲು ಬಳಸಬಹುದು, ಇದು ವೆಚ್ಚದಾಯಕವಲ್ಲ, ಆದರೆ ಕಾರ್ಯನಿರ್ವಹಿಸಲು ತುಂಬಾ ಸುಲಭ ಎಂದು ಡಾ ಜಿತೇಂದ್ರ ಸಿಂಗ್ ಅವರು ಹೇಳಿದರು. ರೋಷಿನಿ ದೀಪವನ್ನು ಆವಿಷ್ಕರಿಸಿದ ಎನ್ ಐಒಟಿ ತಂಡವನ್ನು ಸಚಿವರು ಶ್ಲಾಘಿಸಿದರು ಮತ್ತು ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಮತ್ತು ವಿಪತ್ತುಗಳ ಸಂದರ್ಭಗಳಲ್ಲಿ ಹೆಚ್ಚಿನ ಸಹಾಯವಾಗಬಲ್ಲ ಈ ವಿವಿಧೋದ್ದೇಶ ದೀಪಗಳನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಲು ತಂತ್ರಜ್ಞಾನವನ್ನು ಉದ್ಯಮಕ್ಕೆ ವರ್ಗಾಯಿಸಬೇಕು ಎಂದು ಸಲಹೆ ನೀಡಿದರು.
ನಂತರ ಡಾ.ಜಿತೇಂದ್ರ ಸಿಂಗ್ ಅವರು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಡಾ.ಎಂ.ರವಿಚಂದ್ರನ್ ಅವರೊಂದಿಗೆ ಪ್ರಯೋಗಾಲಯಗಳಿಗೆ ಭೇಟಿ ನೀಡಿದರು ಮತ್ತು ಹಡಗಿನ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದರು. ‘ಹರ್ ಘರ್ ತಿರಂಗಾ’ ಅಭಿಯಾನವನ್ನು ವಿಸ್ತರಿಸಿ, ‘ಹರ್ ಜಹಾಜ್ ತಿರಂಗಾ’ ವರೆಗೆ ಸಚಿವರು ಹಡಗಿನ ಮೇಲೆ ಭಾರತದ ರಾಷ್ಟ್ರ ಧ್ವಜವನ್ನು ಹಾರಿಸಿದರು. ಅಲ್ಲದೆ, ಅವರು ಹಡಗಿನಲ್ಲಿ ಎನ್ಐಒಟಿಯ ಹಿರಿಯ ವಿಜ್ಞಾನಿಗಳನ್ನು ಭೇಟಿ ಮಾಡಿದರು ಮತ್ತು ಭಾರತದ ಆಳವಾದ ಸಾಗರ ಮಿಷನ್ ಯೋಜನೆಯ ಅನುಷ್ಠಾನದ ಪ್ರಗತಿ ಪರಾಮರ್ಶಿಸಿದರು.
ಡಾ.ಜಿತೇಂದ್ರ ಸಿಂಗ್ ಅವರು ಎನ್ಐಒಟಿ ಅಭಿವೃದ್ಧಿಪಡಿಸಿದ ಕಡಿಮೆ ತಾಪಮಾನದ ಥರ್ಮಲ್ ಡಿಸಲೈನೇಷನ್ (ಎಲ್ ಟಿಟಿಡಿ) ತಂತ್ರಜ್ಞಾನದ ಪ್ರಗತಿಯನ್ನು ಪರಾಮರ್ಶಿದರು, ಸಮುದ್ರದ ನೀರನ್ನು ಕುಡಿಯಲು ಯೋಗ್ಯವಾದ ನೀರನ್ನಾಗಿ ಪರಿವರ್ತಿಸುವ ಆ ತಂತ್ರಜ್ಞಾನವನ್ನು ಈಗಾಗಲೇ ಲಕ್ಷದ್ವೀಪ ಪ್ರದೇಶಗಳಲ್ಲಿ ಯಶಸ್ವಿಯಾಗಿ ಪ್ರದರ್ಶಿಸಲಾಗಿದೆ. ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದ ಕವರಟ್ಟಿ, ಅಗತಿ ಮತ್ತು ಮಿನಿಕೋಯ್ ದ್ವೀಪಗಳಲ್ಲಿ ಎಲ್‌ಟಿಟಿಡಿ ತಂತ್ರಜ್ಞಾನದ ಆಧಾರದ ಮೇಲೆ ಮೂರು ಅಪಲವಣೀಕರಣ (ಸಮುದ್ರದ ನೀರಿನಿಂದ ಲವಣ ಹೊರತೆಗೆಯುವುದು) ಘಟಕಗಳನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಪ್ರದರ್ಶಿಸಲಾಗಿದೆ ಎಂದು ಅವರು ಹೇಳಿದರು. ಈ ಪ್ರತಿಯೊಂದು ಎಲ್ ಟಿಟಿಡಿ ಘಟಕಗಳು ದಿನಕ್ಕೆ 1 ಲಕ್ಷ ಲೀಟರ್ ಕುಡಿಯುವ ನೀರು ಒದಗಿಸುವ ಸಾಮರ್ಥ್ಯವನ್ನು ಹೊಂದಿವೆ.
ಈ ಘಟಕಗಳ ಯಶಸ್ಸಿನ ಆಧಾರದ ಮೇಲೆ ಕೇಂದ್ರಾಡಳಿತ ಪ್ರದೇಶ (ಯುಟಿ) ಲಕ್ಷದ್ವೀಪದ ಮೂಲಕ ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್ಎ) ದಿನಕ್ಕೆ 1.5 ಲಕ್ಷ ಲೀಟರ್ ಸಾಮರ್ಥ್ಯವಿರುವ ಆರು ಹೊಸ ಎಲ್ ಟಿಟಿಡಿ ಘಟಕಗಳನ್ನು ಅಮಿನಿ, ಆಂಡ್ರೋತ್, ಚೆಟ್ಲೆಟ್, ಕದ್ಮತ್, ಕಲ್ಪೇನಿ ಮತ್ತು ಕಿಲ್ತಾನ್ ನಲ್ಲಿ ಸ್ಥಾಪಿಸುವ ಕೆಲಸವನ್ನು ವಹಿಸಿಕೊಟ್ಟಿದೆ ಎಂದು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಡಾ.ಎಂ.ರವಿಚಂದ್ರನ್ ಅವರು ಸಚಿವ ಡಾ.ಜಿತೇಂದ್ರ ಸಿಂಗ್ ಅವರಿಗೆ ತಿಳಿಸಿದರು. ಎಲ್ ಟಿಟಿಡಿ ತಂತ್ರಜ್ಞಾನವು ಲಕ್ಷದ್ವೀಪ ದ್ವೀಪಗಳಿಗೆ ಸೂಕ್ತವಾಗಿದೆ ಎಂದು ಕಂಡುಬಂದಿದೆ, ಅಲ್ಲಿ ಸಮುದ್ರ ಮೇಲ್ಮೈ ನೀರು ಮತ್ತು ಆಳ ಸಮುದ್ರದ ನೀರಿನ ನಡುವೆ ಸುಮಾರು 15⁰ಸೆಲ್ಷಿಯಸ್ ತಾಪಮಾನ ವ್ಯತ್ಯಾಸವು ಅಗತ್ಯವಿದ್ದು, ಅದು ಲಕ್ಷದ್ವೀಪ ಕರಾವಳಿಯ ಸುತ್ತಮುತ್ತ ಮಾತ್ರ ಕಂಡುಬರುತ್ತದೆ.
ಅಪಲವಣೀಕರಣ ಘಟಕದ ವೆಚ್ಚವು ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿದ್ದು, ಅದರಲ್ಲಿ ಬಳಸಿದ ತಂತ್ರಜ್ಞಾನ ಮತ್ತು ಘಟಕದ ಸ್ಥಳವೂ ಸೇರಿರುತ್ತದೆ.ಲಕ್ಷದ್ವೀಪ ದ್ವೀಪಗಳಲ್ಲಿನ 6 ಎಲ್ ಟಿಟಿಡಿ ಘಟಕಗಳಿಗೆ ಒಟ್ಟು ವೆಚ್ಚ187.75 ಕೋಟಿ ರೂ.ವೆಚ್ಚವಾಗಲಿದೆ.
*****
(Release ID: 1851598)
Visitor Counter : 250