ಪ್ರಧಾನ ಮಂತ್ರಿಯವರ ಕಛೇರಿ
ವಿದ್ಯುತ್ ಕ್ಷೇತ್ರದ ಪರಿಷ್ಕೃತ ವಿತರಣಾ ವಲಯದ ಯೋಜನೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ
Posted On:
30 JUL 2022 3:43PM by PIB Bengaluru
ನನ್ನ ಸಂಪುಟ ಸಹೋದ್ಯೋಗಿಗಳೇ, ವಿವಿಧ ರಾಜ್ಯಗಳ ಗೌರವಾನ್ವಿತ ಮುಖ್ಯಮಂತ್ರಿಗಳೇ, ವಿದ್ಯುತ್ ಮತ್ತು ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ಇತರ ಎಲ್ಲಾ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ!
ಇಂದಿನ ಕಾರ್ಯಕ್ರಮವು 21 ನೇ ಶತಮಾನದ ನವ ಭಾರತದ ಹೊಸ ಗುರಿಗಳು ಮತ್ತು ಹೊಸ ಯಶಸ್ಸಿನ ಸಂಕೇತವಾಗಿದೆ. ಈ 'ಆಜಾದಿ ಕಾ ಅಮೃತ್ ಕಾಲ್' ನಲ್ಲಿ, ಭಾರತವು ಮುಂದಿನ 25 ವರ್ಷಗಳವರೆಗೆ ತನ್ನ ದೃಷ್ಟಿಯನ್ನು ನೆಟ್ಟು, ಆ ಚಿಂತನೆಯ ನೆಲೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ. ಮುಂದಿನ 25 ವರ್ಷಗಳಲ್ಲಿ ಭಾರತದ ಪ್ರಗತಿಯನ್ನು ತ್ವರಿತಗೊಳಿಸುವಲ್ಲಿ ಇಂಧನ ವಲಯ ಮತ್ತು ವಿದ್ಯುತ್ ವಲಯದ ಪಾತ್ರ ಬಹಳ ದೊಡ್ಡದಿದೆ. ವ್ಯಾಪಾರೋದ್ಯಮಕ್ಕೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡುವಲ್ಲಿ ಇಂಧನ ಕ್ಷೇತ್ರದ ಶಕ್ತಿ ಬಹಳ ಮುಖ್ಯ ಮತ್ತು ಜೀವನವನ್ನು ಸುಲಭಗೊಳಿಸುವಲ್ಲಿಯೂ ಅದು ಅಷ್ಟೇ ಪ್ರಾಮುಖ್ಯತೆಯನ್ನು ಹೊಂದಿದೆ. ನಾನು ಈಗಷ್ಟೇ ಮಾತನಾಡಿರುವ ಫಲಾನುಭವಿಗಳ ಜೀವನದಲ್ಲಿ ವಿದ್ಯುತ್ ಯಾವ ರೀತಿಯ ಬದಲಾವಣೆಯನ್ನು ತಂದಿದೆ ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ.
ಸ್ನೇಹಿತರೇ,
ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಯೋಜನೆಗಳು ಇಂದು ಉದ್ಘಾಟನೆಗೊಂಡಿವೆ ಅಥವಾ ಶಂಕುಸ್ಥಾಪನೆ ನೆರವೇರಿಸಲ್ಪಟ್ಟಿವೆ, ಇದು ಭಾರತದ ಇಂಧನ ಭದ್ರತೆ ಮತ್ತು ಹಸಿರು ಭವಿಷ್ಯದ ಕಡೆಗೆ ಒಂದು ಪ್ರಮುಖ ಹೆಜ್ಜೆಯಾಗಿದೆ. ಈ ಯೋಜನೆಗಳು ನವೀಕರಿಸಬಹುದಾದ ಇಂಧನಕ್ಕಾಗಿರುವ ನಮ್ಮ ಗುರಿಗಳನ್ನು ಬಲಪಡಿಸುತ್ತವೆ, ಹಸಿರು ತಂತ್ರಜ್ಞಾನಕ್ಕೆ ನಮ್ಮ ಬದ್ಧತೆ ಮತ್ತು ಹಸಿರು ಚಲನಶೀಲತೆಯ ನಮ್ಮ ಆಕಾಂಕ್ಷೆಗಳಿಗೆ ಶಕ್ತಿ ತುಂಬಲಿವೆ. ಈ ಯೋಜನೆಗಳು ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಸಿರು ಉದ್ಯೋಗಗಳನ್ನು ಸೃಷ್ಟಿಸುತ್ತವೆ. ಈ ಯೋಜನೆಗಳು ತೆಲಂಗಾಣ, ಕೇರಳ, ರಾಜಸ್ಥಾನ, ಗುಜರಾತ್ ಮತ್ತು ಲಡಾಖ್ ಗಳಿಗೆ ಸಂಬಂಧಿಸಿದ್ದರೂ, ಅದರ ಪ್ರಯೋಜನಗಳು ದೇಶಾದ್ಯಂತ ತಲುಪಲಿವೆ.
ಸ್ನೇಹಿತರೇ,
ಹೈಡ್ರೋಜನ್ (ಜಲಜನಕ) ಅನಿಲವನ್ನು ಬಳಸಿಕೊಂಡು ದೇಶದ ವಾಹನಗಳನ್ನು ಓಡಿಸುವ ಮತ್ತು ಅಡುಗೆ ಮನೆಗಳನ್ನು ನಿಭಾಯಿಸುವ ಬಗ್ಗೆ ಕಳೆದ ಕೆಲವು ವರ್ಷಗಳಲ್ಲಿ ತೀವ್ರವಾದ ಚರ್ಚೆ ನಡೆಯುತ್ತಿದೆ. ಇಂದು ಭಾರತವು ಈ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಟ್ಟಿದೆ. ಲಡಾಖ್ ಮತ್ತು ಗುಜರಾತ್ ಗಳಲ್ಲಿ ಹಸಿರು ಜಲಜನಕದ ಎರಡು ಪ್ರಮುಖ ಯೋಜನೆಗಳ ಕೆಲಸ ಇಂದಿನಿಂದ ಪ್ರಾರಂಭವಾಗುತ್ತಿದೆ. ಲಡಾಖ್ ನಲ್ಲಿ ಸ್ಥಾಪಿಸಲಾಗುತ್ತಿರುವ ಘಟಕವು ದೇಶದ ವಾಹನಗಳಿಗೆ ಹಸಿರು ಜಲಜನಕವನ್ನು ಉತ್ಪಾದಿಸುತ್ತದೆ. ಹಸಿರು ಜಲಜನಕ ಆಧಾರಿತ ಸಾರಿಗೆಯಲ್ಲಿ ವಾಣಿಜ್ಯ ಬಳಕೆಗೆ ಅನುವು ಮಾಡಿಕೊಡುವ ದೇಶದ ಮೊದಲ ಯೋಜನೆ ಇದಾಗಿದೆ. ಅಂದರೆ, ಇಂಧನ ಕೋಶ ಎಲೆಕ್ಟ್ರಿಕ್ ವಾಹನಗಳು ಶೀಘ್ರದಲ್ಲೇ ಚಲಿಸಲು ಪ್ರಾರಂಭಿಸುವ ದೇಶದ ಮೊದಲ ಸ್ಥಳ ಲಡಾಖ್ ಆಗಲಿದೆ. ಇದು ಲಡಾಖ್ ಅನ್ನು ಕಾರ್ಬನ್ ನ್ಯೂಟ್ರಲ್ (ಕಾರ್ಬನ್ ತಟಸ್ಥ) ವಲಯವನ್ನಾಗಿ ಮಾಡಲು ಸಹಾಯ ಮಾಡುತ್ತದೆ.
ಸ್ನೇಹಿತರೇ,
ದೇಶದಲ್ಲೇ ಮೊದಲ ಬಾರಿಗೆ ಹಸಿರು ಜಲಜನಕವನ್ನು ಕೊಳವೆ ಮೂಲಕ ನೈಸರ್ಗಿಕ ಅನಿಲದೊಂದಿಗೆ ಬೆರೆಸುವ ಯೋಜನೆ ಕೂಡ ಗುಜರಾತ್ ನಲ್ಲಿ ಆರಂಭವಾಗಿದೆ. ಇಲ್ಲಿಯವರೆಗೆ ನಾವು ಪೆಟ್ರೋಲ್ ಮತ್ತು ವಿಮಾನ ಇಂಧನದಲ್ಲಿ ಎಥೆನಾಲ್ ಬೆರೆಸುತ್ತಿದ್ದೇವೆ, ಆದರೆ ಈಗ ನಾವು ಹಸಿರು ಹೈಡ್ರೋಜನ್ ಅನ್ನು ಕೊಳವೆಯ ನೈಸರ್ಗಿಕ ಅನಿಲದೊಂದಿಗೆ ಬೆರೆಸುವತ್ತ ಸಾಗುತ್ತಿದ್ದೇವೆ. ಇದು ನೈಸರ್ಗಿಕ ಅನಿಲದ ಮೇಲಿನ ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ದೇಶದಿಂದ ಹೊರಹೋಗುವ ಹಣವನ್ನು ದೇಶದಲ್ಲಿಯೇ ಬಳಸಲು ಇದರಿಂದ ಸಾಧ್ಯವಾಗುತ್ತದೆ.
ಸ್ನೇಹಿತರೇ,
8 ವರ್ಷಗಳ ಹಿಂದೆ ದೇಶದ ವಿದ್ಯುತ್ ವಲಯದ ಸ್ಥಿತಿಯು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಎಲ್ಲಾ ಹಿರಿಯರಿಗೆ ಚೆನ್ನಾಗಿ ತಿಳಿದಿದೆ. ನಮ್ಮ ದೇಶದಲ್ಲಿ, ಗ್ರಿಡ್ ನಲ್ಲಿ ಸಮಸ್ಯೆ ಇತ್ತು. ಗ್ರಿಡ್ ಗಳು ವಿಫಲವಾಗುತ್ತಿದ್ದವು, ವಿದ್ಯುತ್ ಉತ್ಪಾದನೆ ಕಡಿಮೆಯಾಗುತ್ತಿತ್ತು, ವಿದ್ಯುತ್ ಕಡಿತವು ಹೆಚ್ಚಾಗುತ್ತಿತ್ತು ಮತ್ತು ವಿತರಣೆಯ ಪರಿಸ್ಥಿತಿ ಗೊಂದಲಮಯವಾಗಿ ಪ್ರಕ್ಷುಬ್ಧವಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ, 8 ವರ್ಷಗಳ ಹಿಂದೆ, ನಾವು ದೇಶದ ವಿದ್ಯುತ್ ಕ್ಷೇತ್ರದ ಪ್ರತಿಯೊಂದು ಅಂಗವನ್ನು ಪರಿವರ್ತಿಸಲು ಉಪಕ್ರಮವನ್ನು ಆರಂಭ ಮಾಡಿದೆವು. .
ವಿದ್ಯುತ್ ವ್ಯವಸ್ಥೆಯನ್ನು ಸುಧಾರಿಸಲು ನಾಲ್ಕು ವಿಭಿನ್ನ ಅಂಶಗಳನ್ನು ಜೊತೆಯಾಗಿ ಪರಿಗಣಿಸಿ ಕೆಲಸ ಮಾಡಲಾಯಿತು - ಉತ್ಪಾದನೆ, ಪ್ರಸರಣ, ವಿತರಣೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಸಂಪರ್ಕ. ಇವೆಲ್ಲವೂ ಪರಸ್ಪರ ಹೇಗೆ ಸಂಬಂಧ ಹೊಂದಿವೆ ಎಂದು ನಿಮಗೆ ತಿಳಿದಿದೆ. ಉತ್ಪಾದನೆ ಇಲ್ಲದಿದ್ದರೆ, ಪ್ರಸರಣ-ವಿತರಣಾ ವ್ಯವಸ್ಥೆಯು ಬಲವಾಗಿರುವುದಿಲ್ಲ. ಅಂತಹ ಸಂದರ್ಭದಲ್ಲಿ, ಸಂಪರ್ಕವನ್ನು ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ, ದೇಶಾದ್ಯಂತ ವಿದ್ಯುತ್ ನ ಪರಿಣಾಮಕಾರಿ ವಿತರಣೆಗಾಗಿ, ಮತ್ತು ಗರಿಷ್ಟ ವಿದ್ಯುತ್ ಉತ್ಪಾದನೆಗಾಗಿ ಹಾಗು ಪ್ರಸರಣಕ್ಕೆ ಸಂಬಂಧಿಸಿದ ಹಳೆಯ ಜಾಲದ ಆಧುನೀಕರಣಕ್ಕಾಗಿ ಮತ್ತು ದೇಶದ ಕೋಟ್ಯಂತರ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸುವುದಕ್ಕಾಗಿ ನಾವು ನಮ್ಮ ಎಲ್ಲಾ ಪ್ರಯತ್ನಗಳನ್ನು ಹಾಕಿದೆವು.
ಈ ಪ್ರಯತ್ನಗಳ ಫಲವಾಗಿ ಇಂದು ದೇಶದ ಪ್ರತಿಯೊಂದು ಮನೆಗೂ ವಿದ್ಯುತ್ ತಲುಪುತ್ತಿರುವುದು ಮಾತ್ರವಲ್ಲ, ಈಗ ಹೆಚ್ಚು ಗಂಟೆಗಳ ಕಾಲ ವಿದ್ಯುತ್ ಲಭಿಸುತ್ತಿದೆ. ಕಳೆದ 8 ವರ್ಷಗಳಲ್ಲಿ ದೇಶದಲ್ಲಿ ಸುಮಾರು 1 ಲಕ್ಷ 70 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಸೇರಿಸಲಾಗಿದೆ. ಇಂದು ಒಂದು ದೇಶ ಒಂದು ಪವರ್ ಗ್ರಿಡ್ (ವಿದ್ಯುತ್ ಜಾಲ) ಎಂಬ ಕಲ್ಪನೆ ದೇಶದ ಶಕ್ತಿಯಾಗಿದೆ. ಇಡೀ ದೇಶವನ್ನು ಸಂಪರ್ಕಿಸಲು ಸುಮಾರು 1 ಲಕ್ಷ 70 ಸಾವಿರ ಸರ್ಕ್ಯೂಟ್ ಕಿಲೋಮೀಟರ್ ಪ್ರಸರಣ ಮಾರ್ಗಗಳನ್ನು ಹಾಕಲಾಗಿದೆ. ಸೌಭಾಗ್ಯ ಯೋಜನೆಯಡಿ ಸುಮಾರು 3 ಕೋಟಿ ವಿದ್ಯುತ್ ಸಂಪರ್ಕಗಳನ್ನು ನೀಡುವ ಮೂಲಕ ನಾವು ಸಂತೃಪ್ತತೆಯ ಗುರಿಯನ್ನು ತಲುಪುತ್ತಿದ್ದೇವೆ.
ಸ್ನೇಹಿತರೇ,
ನಮ್ಮ ವಿದ್ಯುತ್ ಕ್ಷೇತ್ರವು ದಕ್ಷ ಮತ್ತು ಪರಿಣಾಮಕಾರಿಯಾಗಿರುವುದನ್ನು ಖಾತ್ರಿಪಡಿಸಲು ಮತ್ತು ವಿದ್ಯುತ್ ಸಾಮಾನ್ಯ ಜನರಿಗೆ ಲಭ್ಯವಾಗುವುದನ್ನು ಖಚಿತಪಡಿಸಿಕೊಳ್ಳಲು, ಕೆಲ ವರ್ಷಗಳಿಂದ ಅಗತ್ಯ ಸುಧಾರಣೆಗಳನ್ನು ನಿರಂತರವಾಗಿ ಜಾರಿ ಮಾಡಲಾಗುತ್ತಿದೆ. ಇಂದು ಪ್ರಾರಂಭಿಸಲಾದ ಹೊಸ ವಿದ್ಯುತ್ ಸುಧಾರಣಾ ಯೋಜನೆ ಈ ನಿಟ್ಟಿನಲ್ಲಿ ತೆಗೆದುಕೊಂಡ ಮತ್ತೊಂದು ಹೆಜ್ಜೆಯಾಗಿದೆ. ಇದರ ಅಡಿಯಲ್ಲಿ, ವಿದ್ಯುತ್ ನಷ್ಟವನ್ನು ಕಡಿಮೆ ಮಾಡಲು ಸ್ಮಾರ್ಟ್ ಮೀಟರಿಂಗ್ ನಂತಹ ವ್ಯವಸ್ಥೆಗಳನ್ನು ಕೂಡಾ ಕೈಗೊಳ್ಳಲಾಗುತ್ತದೆ. ಇದು ದಕ್ಷತೆಯನ್ನು ಹೆಚ್ಚಿಸುತ್ತದೆ. ವಿದ್ಯುತ್ ಬಳಕೆಗೆ ಸಂಬಂಧಿಸಿದ ದೂರುಗಳು ಕೊನೆಗೊಳ್ಳುತ್ತವೆ. ದೇಶಾದ್ಯಂತದ ಡಿಸ್ಕಾಂಗಳಿಗೆ ಅಗತ್ಯವಾದ ಆರ್ಥಿಕ ನೆರವನ್ನು ಸಹ ಒದಗಿಸಲಾಗುವುದು, ಇದರಿಂದ ಅವುಗಳು ಆಧುನಿಕ ಮೂಲಸೌಕರ್ಯಗಳನ್ನು ನಿರ್ಮಿಸಬಹುದು ಮತ್ತು ಆರ್ಥಿಕವಾಗಿ ಸಶಕ್ತಗೊಳ್ಳಲು ಅಗತ್ಯ ಸುಧಾರಣೆಗಳನ್ನು ತರಬಹುದು. ಇದರಿಂದ, ಡಿಸ್ಕಾಂಗಳ ಶಕ್ತಿ ಹೆಚ್ಚಾಗುತ್ತದೆ ಮತ್ತು ಸಾರ್ವಜನಿಕರಿಗೆ ಸಾಕಷ್ಟು ವಿದ್ಯುತ್ ಪಡೆಯಲು ಸಾಧ್ಯವಾಗುತ್ತದೆ. ಇದರ ಪರಿಣಾಮವಾಗಿ ನಮ್ಮ ವಿದ್ಯುತ್ ವಲಯವು ಮತ್ತಷ್ಟು ಬಲಗೊಳ್ಳುತ್ತದೆ.
ಸ್ನೇಹಿತರೇ,
ತನ್ನ ಇಂಧನ ಭದ್ರತೆಯನ್ನು ಬಲಪಡಿಸಿಕೊಳ್ಳಲು, ಭಾರತವು ಇಂದು ನವೀಕರಿಸಬಹುದಾದ ಇಂಧನಕ್ಕೆ ಒತ್ತು ನೀಡುತ್ತಿರುವ ರೀತಿ ಅಭೂತಪೂರ್ವವಾಗಿದೆ. ಸ್ವಾತಂತ್ರ್ಯದ 75 ವರ್ಷಗಳು ಪೂರ್ಣಗೊಳ್ಳುವ ವೇಳೆಗೆ 175 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನದ ಸಾಮರ್ಥ್ಯವನ್ನು ಸೃಷ್ಟಿಸಲು ನಾವು ನಿರ್ಧರಿಸಿದ್ದೆವು. ಇಂದು ನಾವು ಈ ಗುರಿಯ ಸಮೀಪಕ್ಕೆ ಬಂದಿದ್ದೇವೆ. ಇಲ್ಲಿಯವರೆಗೆ, ಪಳೆಯುಳಿಕೆಯೇತರ ಮೂಲಗಳಿಂದ ಸುಮಾರು 170 ಗಿಗಾವ್ಯಾಟ್ ಸಾಮರ್ಥ್ಯವನ್ನು ಸ್ಥಾಪಿಸಲಾಗಿದೆ. ಇಂದು, ಸ್ಥಾಪಿತ ಸೌರ ಸಾಮರ್ಥ್ಯದ ವಿಷಯದಲ್ಲಿ ಭಾರತವು ವಿಶ್ವದ ಅಗ್ರ 4 ಅಥವಾ 5 ದೇಶಗಳಲ್ಲಿ ಒಂದಾಗಿದೆ. ಇಂದು ಭಾರತವು ವಿಶ್ವದ ಹಲವಾರು ಅತಿದೊಡ್ಡ ಸೌರ ವಿದ್ಯುತ್ ಸ್ಥಾವರಗಳನ್ನು ಹೊಂದಿದೆ. ಇದೇ ರೀತಿಯಲ್ಲಿ, ದೇಶವು ಇಂದು ಇನ್ನೂ ಎರಡು ಪ್ರಮುಖ ಸೌರ ಸ್ಥಾವರಗಳನ್ನು ಹೊಂದುತ್ತಿದೆ. ತೆಲಂಗಾಣ ಮತ್ತು ಕೇರಳದಲ್ಲಿ ನಿರ್ಮಿಸಲಾದ ಈ ಸ್ಥಾವರಗಳು ಅನುಕ್ರಮವಾಗಿ ದೇಶದ ಮೊದಲ ಮತ್ತು ಎರಡನೇ ಅತಿದೊಡ್ಡ ತೇಲುವ ಸೌರ ಸ್ಥಾವರಗಳಾಗಿವೆ. ಅವು ಹಸಿರು ಶಕ್ತಿಯನ್ನು/ ವಿದ್ಯುತ್ತನ್ನು ಉತ್ಪಾದಿಸುತ್ತವೆ. ಇದೇ ಸಮಯದಲ್ಲಿ, ಸೂರ್ಯನ ಶಾಖದಿಂದಾಗಿ ಆವಿಯಾಗುತ್ತಿದ್ದ ನೀರು ಕೂಡಾ ಆವಿಯಾಗುವುದನ್ನು ಇದು ತಡೆಯುತ್ತದೆ. ರಾಜಸ್ಥಾನದಲ್ಲಿ 1000 ಮೆಗಾವ್ಯಾಟ್ ಏಕ ಸ್ಥಳ (ಸಿಂಗಲ್ ಲೊಕೇಶನ್) ಸೌರ ವಿದ್ಯುತ್ ಸ್ಥಾವರದ ನಿರ್ಮಾಣದ ಕೆಲಸವೂ ಇಂದಿನಿಂದ ಪ್ರಾರಂಭವಾಗಿದೆ. ಈ ಯೋಜನೆಗಳು ಇಂಧನದ ವಿಷಯದಲ್ಲಿ ಭಾರತದ ಸ್ವಾವಲಂಬನೆಯ ಸಂಕೇತವಾಗುತ್ತವೆ ಎಂಬ ಬಗ್ಗೆ ನನಗೆ ಖಾತ್ರಿಯಿದೆ.
ಸ್ನೇಹಿತರೇ,
ತನ್ನ ಇಂಧನ ಅಗತ್ಯಗಳನ್ನು ಪೂರೈಸುವ ಸಲುವಾಗಿ, ಭಾರತವು ದೊಡ್ಡ ಸೌರ ಸ್ಥಾವರಗಳನ್ನು ಸ್ಥಾಪಿಸುವುದರ ಜೊತೆಗೆ ಹೆಚ್ಚು ಹೆಚ್ಚು ಮನೆಗಳಲ್ಲಿ ಸೌರ ಫಲಕಗಳನ್ನು ಸ್ಥಾಪಿಸಲು ಒತ್ತು ನೀಡುತ್ತಿದೆ. ಇಂದು ರಾಷ್ಟ್ರೀಯ ಪೋರ್ಟಲ್ ಸಹ ಪ್ರಾರಂಭಿಸಲಾಗಿದೆ, ಇದರಿಂದ ಜನರು ಮೇಲ್ಚಾವಣಿ (ರೂಫ್-ಟಾಪ್) ಸೌರ ಯೋಜನೆಗಳನ್ನು ಸುಲಭವಾಗಿ ಸ್ಥಾಪಿಸಬಹುದು. ಇದು ಮನೆಗಳಲ್ಲಿ ವಿದ್ಯುತ್ ಉತ್ಪಾದಿಸಲು ಸಹಾಯ ಮಾಡುವುದಲ್ಲದೆ, ವಿದ್ಯುತ್ ಉತ್ಪಾದನೆಯೊಂದಿಗೆ ಸಂಪಾದನೆ ಮಾಡಲೂ ನೆರವಾಗುತ್ತದೆ. ವಿದ್ಯುಚ್ಛಕ್ತಿಯ ಉತ್ಪಾದನೆಯನ್ನು ಹೆಚ್ಚಿಸುವುದರ ಜೊತೆಗೆ, ಸರ್ಕಾರವು ವಿದ್ಯುಚ್ಛಕ್ತಿಯನ್ನು ಉಳಿಸಲೂ ಒತ್ತು ನೀಡುತ್ತಿದೆ. ವಿದ್ಯುಚ್ಛಕ್ತಿಯನ್ನು ಉಳಿಸುವುದು ಎಂದರೆ ಭವಿಷ್ಯವನ್ನು ರಕ್ಷಿಸುವುದು ಎಂಬುದನ್ನು ಸದಾ ನೆನಪಿಡಿ. ಪಿಎಂ ಕುಸುಮ್ ಯೋಜನೆ ಇದಕ್ಕೆ ಬಲು ದೊಡ್ಡ ಉದಾಹರಣೆಯಾಗಿದೆ. ನಾವು ರೈತರಿಗೆ 'ಸೋಲಾರ್ ಪಂಪ್ ಸೌಲಭ್ಯ'ವನ್ನು ಒದಗಿಸುತ್ತಿದ್ದೇವೆ, ಹೊಲಗಳ ಗಡಿಗಳಲ್ಲಿ ಸೌರ ಫಲಕಗಳನ್ನು ಅಳವಡಿಸಲು ಅವರಿಗೆ ಸಹಾಯ ಮಾಡುತ್ತಿದ್ದೇವೆ. ಮತ್ತು ಇದರಿಂದಾಗಿ, ಆಹಾರ ಪೂರೈಕೆದಾರರು ಕೂಡಾ ಶಕ್ತಿ/ಇಂಧನ ಪೂರೈಕೆದಾರರಾಗುತ್ತಿದ್ದಾರೆ. ರೈತರ ಖರ್ಚು ಕಡಿಮೆಯಾಗಿದೆ ಮತ್ತು ರೈತರಿಗೆ ಸಂಪಾದನೆಯ ಇನ್ನೊಂದು ಸಾಧನ ದೊರಕಿದೆ. ಉಜಾಲಾ ಯೋಜನೆಯು ದೇಶದ ಸಾಮಾನ್ಯ ಜನರ ವಿದ್ಯುತ್ ಬಿಲ್ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಮನೆಗಳಲ್ಲಿ ಎಲ್ಇಡಿ ಬಲ್ಬ್ ಗಳಿಂದಾಗಿ, ಪ್ರತಿ ವರ್ಷ ಬಡವರು ಮತ್ತು ಮಧ್ಯಮ ವರ್ಗದವರ ವಿದ್ಯುತ್ ಬಿಲ್ ಗಳಲ್ಲಿ 50 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಉಳಿತಾಯವಾಗುತ್ತಿದೆ. 50 ಸಾವಿರ ಕೋಟಿ ರೂಪಾಯಿಗಳ ಉಳಿತಾಯ ಎಂದರೆ ಕುಟುಂಬಗಳಿಗೆ ಅದೊಂದು ದೊಡ್ಡ ಪ್ರಯೋಜನ.
ಸ್ನೇಹಿತರೇ,
ವಿವಿಧ ರಾಜ್ಯಗಳ ಮಾನ್ಯ ಮುಖ್ಯಮಂತ್ರಿಗಳು ಮತ್ತು ಇತರ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ನಾನು ಬಹಳ ಗಂಭೀರವಾದ ವಿಷಯವನ್ನು ಮತ್ತು ನನ್ನ ಪ್ರಮುಖ ಕಾಳಜಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಮತ್ತು ಈ ಕಳವಳ ಎಷ್ಟು ಗಂಭೀರವಾಗಿದೆಯೆಂದರೆ, ಆಗಸ್ಟ್ 15 ರಂದು ಭಾರತದ ಪ್ರಧಾನಿಯೊಬ್ಬರು ಕೆಂಪು ಕೋಟೆಯಿಂದ ಮಾಡಿದ ಭಾಷಣದಲ್ಲಿ ಈ ಕಳವಳವನ್ನು ವ್ಯಕ್ತಪಡಿಸಬೇಕಾಯಿತು. ಕಾಲಾನುಕ್ರಮದಲ್ಲಿ ರಾಜಕೀಯವನ್ನು ಅವನತಿಯು ಆವರಿಸಿಕೊಳ್ಳುತ್ತಿದೆ. ರಾಜಕೀಯದಲ್ಲಿರುವವರಿಗೆ ಸಾರ್ವಜನಿಕರಿಗೆ ಸತ್ಯವನ್ನು ಹೇಳುವ ಧೈರ್ಯವಿರಬೇಕು, ಆದರೆ ಕೆಲವು ರಾಜ್ಯಗಳಲ್ಲಿ ಅದನ್ನು ತಿಳಿಸದೇ ತಪ್ಪಿಸಿಕೊಳ್ಳುತ್ತಿರುವಂತಹ ಪ್ರಯತ್ನವನ್ನು ನಾವು ಕಾಣುತ್ತಿದ್ದೇವೆ. ಈ ತಂತ್ರವು ಅಲ್ಪಾವಧಿಗೆ ಉತ್ತಮ ರಾಜಕೀಯದಂತೆ ಕಾಣಿಸಬಹುದು. ಆದರೆ ವಾಸ್ತವದಲ್ಲಿ, ಇಂದಿನ ಸತ್ಯವನ್ನು ಮುಂದೂಡುವುದರಿಂದ ಮತ್ತು ಇಂದಿನ ಸವಾಲುಗಳು ನಾಳೆಯ ದಿನಗಳಲ್ಲಿ ಅಡ್ಡಿಯನ್ನು ತಂದೊಡ್ಡುತ್ತವೆ. ಮತ್ತು ನಮ್ಮ ಮಕ್ಕಳ ಹಾಗು ಭವಿಷ್ಯದ ಪೀಳಿಗೆಯ ಭವಿಷ್ಯವನ್ನು ಅವು ನಾಶಪಡಿಸಬಹುದು. ಇಂದಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬದಲು ಬೇರೆಯವರು ಆಲೋಚಿಸಿ ಪರಿಹಾರ ಕಂಡುಕೊಳ್ಳುತ್ತಾರೆ ಎಂದು ಕಲ್ಪಿಸಿಕೊಂಡು ಅವರು ಸಮಸ್ಯೆಗಳಿಂದ ತಪ್ಪಿಸಿಕೊಳ್ಳುತ್ತಾರೆ, ದೂರವಾಗುತ್ತಾರೆ. ತಮ್ಮ ನಂತರದ ವ್ಯಕ್ತಿ ಅದನ್ನು ಮಾಡುತ್ತಾರೆ ಎಂದು ಅವರು ಭಾವಿಸುತ್ತಾರೆ. ಹೇಗಾದರೂ ಐದು ವರ್ಷ ಅಥವಾ ಹತ್ತು ವರ್ಷಗಳ ನಂತರ ತಾವು ಈ ಸ್ಥಾನ ಬಿಟ್ಟು ತೆರಳುತ್ತೇವಲ್ಲ ಎಂದು ಅವರು ಆಲೋಚಿಸುತ್ತಿರುತ್ತಾರೆ. ಈ ಮನಸ್ಥಿತಿ ದೇಶಕ್ಕೆ ಒಳ್ಳೆಯದಲ್ಲ. ಈ ಮನಸ್ಥಿತಿಯಿಂದಲೇ ಇಂದು ದೇಶದ ಹಲವು ರಾಜ್ಯಗಳಲ್ಲಿ ವಿದ್ಯುತ್ ಕ್ಷೇತ್ರ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ಮತ್ತು ಒಂದು ರಾಜ್ಯದ ವಿದ್ಯುತ್ ವಲಯವು ದುರ್ಬಲವಾದಾಗ, ಅದು ಇಡೀ ದೇಶದ ವಿದ್ಯುತ್ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಆ ರಾಜ್ಯದ ಭವಿಷ್ಯವನ್ನು ಕತ್ತಲೆಯತ್ತ ತಳ್ಳುತ್ತದೆ.
ನಮ್ಮ ವಿತರಣಾ ವಲಯದ ನಷ್ಟವು ಎರಡಂಕಿಯಲ್ಲಿದೆ ಎಂಬ ಅಂಶವೂ ನಿಮಗೆ ತಿಳಿದಿದೆ. ಆದರೆ ಪ್ರಪಂಚದ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ, ಇದು ಒಂದೇ ಅಂಕೆಯಲ್ಲಿದೆ ಅಥವಾ ಬಹಳ ಸಣ್ಣ ಪ್ರಮಾಣದಲ್ಲಿದ್ದು ನಗಣ್ಯವಾಗಿದೆ. ಇದರರ್ಥ ನಮ್ಮಲ್ಲಿ ಸಾಕಷ್ಟು ವಿದ್ಯುತ್ ವ್ಯರ್ಥವಾಗುತ್ತಿದೆ ಮತ್ತು ಆದ್ದರಿಂದ ನಾವು ವಿದ್ಯುತ್ ಬೇಡಿಕೆಯನ್ನು ಪೂರೈಸಲು ಅಗತ್ಯಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದಿಸಬೇಕಾಗಿದೆ.
ಈಗ ಪ್ರಶ್ನೆ ಏನೆಂದರೆ- ವಿತರಣೆ ಮತ್ತು ಪ್ರಸರಣದಲ್ಲಿ ನಷ್ಟವನ್ನು ಕಡಿಮೆ ಮಾಡಲು ರಾಜ್ಯಗಳಲ್ಲಿ ಏಕೆ ಅಗತ್ಯ ಹೂಡಿಕೆ ಮಾಡಲಾಗಿಲ್ಲ? ಉತ್ತರವೆಂದರೆ-ಹೆಚ್ಚಿನ ವಿದ್ಯುತ್ ಕಂಪನಿಗಳು ಹಣಕಾಸಿನ ಕೊರತೆಯನ್ನು ಎದುರಿಸುತ್ತಿವೆ. ಸರ್ಕಾರಿ ಕಂಪನಿಗಳಲ್ಲೂ ಇದೇ ಪರಿಸ್ಥಿತಿ. ಈ ಪರಿಸ್ಥಿತಿಯಲ್ಲಿ, ವರ್ಷಗಳ ಹಳೆಯ ಪ್ರಸರಣ ಮಾರ್ಗಗಳನ್ನು ಬಳಸಲಾಗುತ್ತಿದೆ. ಹಾಗಾಗಿ, ನಷ್ಟವು ಹೆಚ್ಚಾಗುತ್ತದೆ ಮತ್ತು ಸಾರ್ವಜನಿಕರಿಗೆ ವಿದ್ಯುತ್ ದುಬಾರಿಯಾಗುತ್ತದೆ. ವಿದ್ಯುತ್ ಕಂಪನಿಗಳು ಸಾಕಷ್ಟು ವಿದ್ಯುತ್ ಉತ್ಪಾದಿಸುತ್ತಿವೆ ಆದರೆ ಇನ್ನೂ ಅಗತ್ಯವಾದಂತಹ ಹಣಕಾಸನ್ನು ಹೊಂದಿಲ್ಲ ಎಂದು ಅಂಕಿಅಂಶಗಳು ಬಹಿರಂಗಪಡಿಸುತ್ತವೆ. ಮತ್ತು ಈ ಕಂಪನಿಗಳಲ್ಲಿ ಹೆಚ್ಚಿನವು ಸರ್ಕಾರಗಳಿಗೆ ಸೇರಿವೆ. ಈ ಕಹಿ ಸತ್ಯ ನಿಮಗೆಲ್ಲ ಚಿರಪರಿಚಿತ. ಅಪರೂಪದ ಸಂದರ್ಭಗಳಲ್ಲಿ, ವಿತರಣಾ ಕಂಪನಿಗಳು ತಮ್ಮ ಹಣವನ್ನು ಸಮಯಕ್ಕೆ ಪಡೆಯುತ್ತವೆ. ರಾಜ್ಯ ಸರ್ಕಾರಗಳ ಕಡೆಯಿಂದ ಭಾರಿ ಬಾಕಿ ಮತ್ತು ಹಿಂಬಾಕಿಗಳು ಇವೆ. ಬೇರೆ ಬೇರೆ ರಾಜ್ಯಗಳಲ್ಲಿ ಇನ್ನೂ 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಬಿಲ್ಲು ಪಾವತಿಗೆ ಬಾಕಿ ಇದೆ ಎಂದು ತಿಳಿದರೆ ದೇಶವೇ ಆಶ್ಚರ್ಯ ಪಡುತ್ತದೆ. ಅವರು ಈ ಹಣವನ್ನು ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ನೀಡಬೇಕು. ಅವರಿಂದ ವಿದ್ಯುತ್ ತೆಗೆದುಕೊಳ್ಳಬೇಕು, ಆದರೆ ಅವರು ಹಣವನ್ನು ನೀಡುತ್ತಿಲ್ಲ. ಸರ್ಕಾರಿ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳು ಹಲವು ವಿದ್ಯುತ್ ವಿತರಣಾ ಕಂಪನಿಗಳಿಗೆ 60 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತ ಬಾಕಿ ಉಳಿಸಿವೆ ಮತ್ತು ಸವಾಲು ಅಲ್ಲಿಗೆ ಮುಗಿಯುವುದಿಲ್ಲ. ಈ ಕಂಪನಿಗಳಿಗೆ ಭರವಸೆ ನೀಡಿದ ಸಬ್ಸಿಡಿ ಹಣವನ್ನು ಸಂಪೂರ್ಣವಾಗಿ ಮತ್ತು ಸಮಯಕ್ಕೆ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಬಾಕಿ ಮೊತ್ತ 75 ಸಾವಿರ ಕೋಟಿ ರೂ.ಗೂ ಅಧಿಕ. ಅಂದರೆ ಸುಮಾರು 2.5 ಲಕ್ಷ ಕೋಟಿ ರೂಪಾಯಿ ವಿದ್ಯುತ್ ಉತ್ಪಾದನೆ ಮತ್ತು ಅದನ್ನು ಮನೆ ಬಾಗಿಲಿಗೆ ತಲುಪಿಸುವ ಜವಾಬ್ದಾರಿಯನ್ನು ಹೊಂದಿರುವವರಿಗೆ ಅವರಿಂದ ಇನ್ನೂ ಪಾವತಿ ಆಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಮೂಲಸೌಕರ್ಯ ಮತ್ತು ಭವಿಷ್ಯದ ಅಗತ್ಯಗಳಿಗಾಗಿ ಹೂಡಿಕೆ ಮಾಡಲಾಗುತ್ತದೆಯೇ? ನಾವು ದೇಶವನ್ನು ಮತ್ತು ದೇಶದ ಭವಿಷ್ಯದ ಪೀಳಿಗೆಯನ್ನು ಕತ್ತಲೆಗೆ ದೂಡುತ್ತಿದ್ದೇವೆಯೇ?.
ಸ್ನೇಹಿತರೇ,
ಈ ಹಣ ಕೆಲವು ಸರ್ಕಾರಿ ಕಂಪನಿಗಳು ಮತ್ತು ಕೆಲವು ಖಾಸಗಿ ಕಂಪನಿಗಳಿಗೆ ಸೇರಿದುದಾಗಿದೆ. ಅವರು ಅದನ್ನು ಪಡೆಯದಿದ್ದರೆ, ಕಂಪನಿಗಳು ಅಭಿವೃದ್ಧಿಯಾಗುವುದಿಲ್ಲ ಅಥವಾ ಹೊಸ ವಿದ್ಯುತ್ ಉತ್ಪಾದನೆ ಸಾಧ್ಯವಾಗುವುದಿಲ್ಲ ಮತ್ತು ಅವರ ಅಗತ್ಯಗಳ ಪೂರೈಕೆಯಾಗುವುದಿಲ್ಲ. ಅದಕ್ಕಾಗಿಯೇ ನಾವು ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬೇಕು. ನಾವು ವಿದ್ಯುತ್ ಸ್ಥಾವರವನ್ನು ಸ್ಥಾಪಿಸಿದರೆ, ಐದು-ಆರು ವರ್ಷಗಳ ನಂತರ ವಿದ್ಯುತ್ ಉತ್ಪಾದಿಸಲು ಪ್ರಾರಂಭಿಸುತ್ತದೆ. ಸ್ಥಾವರವನ್ನು ಸ್ಥಾಪಿಸಲು 5-6 ವರ್ಷಗಳು ಬೇಕಾಗುತ್ತದೆ. ಆದ್ದರಿಂದಲೇ ದೇಶದ ಉಜ್ವಲ ಭವಿಷ್ಯಕ್ಕಾಗಿ ಎಲ್ಲಾ ದೇಶವಾಸಿಗಳಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ನಾನು ಕೈ ಜೋಡಿಸಿ ವಿನಂತಿಸುತ್ತೇನೆ. ನಮ್ಮ ದೇಶ ಕತ್ತಲಲ್ಲಿ ಮುಳುಗಬಾರದು. ಮತ್ತು ಅದಕ್ಕಾಗಿಯೇ ಇದು ರಾಜಕೀಯದ ಪ್ರಶ್ನೆಯಲ್ಲ ಆದರೆ ರಾಷ್ಟ್ರೀಯ ನೀತಿ ಮತ್ತು ರಾಷ್ಟ್ರ ನಿರ್ಮಾಣದ ಪ್ರಶ್ನೆ ಎಂದು ಹೇಳುತ್ತೇನೆ. ಇದು ವಿದ್ಯುಚ್ಛಕ್ತಿಗೆ ಸಂಬಂಧಿಸಿದ ಸಂಪೂರ್ಣ ವ್ಯವಸ್ಥೆಯ ಸುರಕ್ಷತೆಯ ಪ್ರಶ್ನೆಯಾಗಿದೆ. ಪಾವತಿ ಬಾಕಿ ಇರುವ ರಾಜ್ಯಗಳು, ಆದಷ್ಟು ಬೇಗ ಈ ಬಾಕಿಗಳನ್ನು ಪಾವತಿಸುವಂತೆ ನಾನು ಅವರನ್ನು ವಿನಂತಿಸುತ್ತೇನೆ. ಅಲ್ಲದೆ, ದೇಶವಾಸಿಗಳು ತಮ್ಮ ವಿದ್ಯುತ್ ಬಿಲ್‌ಗಳನ್ನು ಪ್ರಾಮಾಣಿಕವಾಗಿ ಪಾವತಿಸುತ್ತಿದ್ದರೂ, ಕೆಲವು ರಾಜ್ಯಗಳು ಮತ್ತೆ ಮತ್ತೆ ಏಕೆ ಬಾಕಿ ಉಳಿಸಿಕೊಂಡಿವೆ? ಈ ಸವಾಲಿಗೆ ದೇಶದ ಎಲ್ಲ ರಾಜ್ಯಗಳು ಸೂಕ್ತ ಪರಿಹಾರ ಕಂಡುಕೊಳ್ಳುವುದು ಇಂದಿನ ಅಗತ್ಯವಾಗಿದೆ.
ಸ್ನೇಹಿತರೇ,
ದೇಶದ ಕ್ಷಿಪ್ರ ಅಭಿವೃದ್ಧಿಗಾಗಿ, ವಿದ್ಯುತ್ ಮತ್ತು ಇಂಧನ ಕ್ಷೇತ್ರದ ಮೂಲಸೌಕರ್ಯವು ಯಾವಾಗಲೂ ಪ್ರಬಲ ಮತ್ತು ಆಧುನಿಕವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. ಕಳೆದ ಎಂಟು ವರ್ಷಗಳಲ್ಲಿ ಪ್ರತಿಯೊಬ್ಬರ ಪ್ರಯತ್ನದಿಂದ ಈ ವಲಯವನ್ನು ಸುಧಾರಿಸದಿದ್ದರೆ, ಇಂದು ವಿವಿಧ ತೊಂದರೆಗಳು ಉದ್ಭವಿಸುತ್ತಿದ್ದವು ಎಂಬುದನ್ನು ನಾವು ಊಹಿಸಿಕೊಳ್ಳಬಹುದು. ಹಿಂದೆ ಆಗಾಗ್ಗೆ ಬ್ಲಾಕ್ ಔಟ್ ಗಳು ಸಂಭವಿಸುತ್ತಿದ್ದವು; ಅದು ನಗರವಾಗಿರಲಿ ಅಥವಾ ಹಳ್ಳಿಯಾಗಿರಲಿ, ಕೆಲವು ಗಂಟೆಗಳ ಕಾಲ ಮಾತ್ರ ವಿದ್ಯುತ್ ಲಭ್ಯವಿರುತ್ತಿತ್ತು; ರೈತರು ತಮ್ಮ ಹೊಲಗಳಿಗೆ ನೀರಾವರಿಗಾಗಿ ಹಾತೊರೆಯುತ್ತಿದ್ದರು ಮತ್ತು ಕಾರ್ಖಾನೆಗಳು ಸ್ಥಗಿತಗೊಳ್ಳುತ್ತಿದ್ದವು. ಇಂದು ದೇಶದ ನಾಗರಿಕರು ಸೌಲಭ್ಯಗಳನ್ನು ಬಯಸುತ್ತಾರೆ. ಆಹಾರ, ಬಟ್ಟೆ ಮತ್ತು ವಸತಿಯಂತೆಯೇ ಮೊಬೈಲ್ ಫೋನ್ ಗಳನ್ನು ಚಾರ್ಜ್ ಮಾಡುವುದು ಒಬ್ಬ ವ್ಯಕ್ತಿಗೆ ಅಗತ್ಯವಾಗಿದೆ. ವಿದ್ಯುತ್ತಿನ ಪರಿಸ್ಥಿತಿ ಹಿಂದಿನಂತೆಯೇ ಇದ್ದಿದ್ದರೆ, ಏನೂ ಬದಲಾಗುತ್ತಿರಲಿಲ್ಲ. ಆದ್ದರಿಂದ, ವಿದ್ಯುತ್ ವಲಯವನ್ನು ಬಲಪಡಿಸುವುದು ಪ್ರತಿಯೊಬ್ಬರ ಸಂಕಲ್ಪ ಮತ್ತು ಜವಾಬ್ದಾರಿಯಾಗಿರಬೇಕು. ಮತ್ತು ಪ್ರತಿಯೊಬ್ಬರೂ ಈ ಕರ್ತವ್ಯವನ್ನು ಪೂರೈಸಬೇಕು. ನಾವು ನಮ್ಮ ಕರ್ತವ್ಯಗಳನ್ನು ಪೂರೈಸಿದರೆ ಮಾತ್ರ 'ಅಮೃತಕಾಲ'ದ ನಮ್ಮ ಸಂಕಲ್ಪಗಳು ಈಡೇರುತ್ತವೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು.
ಒಬ್ಬ ಹಳ್ಳಿಗನಿಗೆ ತುಪ್ಪ, ಎಣ್ಣೆ, ಹಿಟ್ಟು, ಧಾನ್ಯಗಳು, ಸಾಂಬಾರ ಪದಾರ್ಥಗಳು, ತರಕಾರಿಗಳು ಇತ್ಯಾದಿಗಳು ಇದ್ದರೂ , ಅಲ್ಲಿ ಅನಿಲ ಅಥವಾ ಅಡುಗೆ ಮಾಡಲು ಯಾವುದೇ ವ್ಯವಸ್ಥೆ ಇಲ್ಲದಿದ್ದರೆ, ಆಗ ಇಡೀ ಮನೆ ಹಸಿದಿರುತ್ತದೆ. ಅಲ್ಲವೇ? ಕಾರು ಇಂಧನವಿಲ್ಲದೆ ಚಲಿಸುತ್ತದೆಯೇ? ಅಡುಗೆ ಮಾಡಲು ವ್ಯವಸ್ಥೆ ಇಲ್ಲದಿದ್ದರೆ ಜನರು ಹಸಿವಿನಿಂದ ಉಳಿಯುವಂತೆ, ದೇಶದಲ್ಲಿ ವಿದ್ಯುತ್ ಇಲ್ಲದಿದ್ದರೆ ಎಲ್ಲವೂ ಸ್ಥಗಿತಗೊಳ್ಳುತ್ತದೆ.
ಅದಕ್ಕಾಗಿಯೇ ಇಂದು ನಾನು ಅತ್ಯಂತ ಗಂಭೀರವಾಗಿ ದೇಶವಾಸಿಗಳನ್ನು ಮತ್ತು ಎಲ್ಲಾ ರಾಜ್ಯ ಸರ್ಕಾರಗಳನ್ನು ರಾಜಕೀಯದ ಪಥದಿಂದ ದೂರ ಸರಿದು ರಾಷ್ಟ್ರೀಯ ನೀತಿಗಳ ಹಾದಿಯಲ್ಲಿ ನಡೆಯಲು ಪ್ರಾರಂಭಿಸಬೇಕೆಂದು ವಿನಂತಿಸುತ್ತೇನೆ. ಈ ಕಾರ್ಯವನ್ನು ಪೂರೈಸಲು ವರ್ಷಗಳು ಬೇಕಾಗಿರುವುದರಿಂದ ದೇಶವು ಭವಿಷ್ಯದಲ್ಲಿ ಎಂದಿಗೂ ಕತ್ತಲೆಯಲ್ಲಿ ಮುಳುಗಬೇಕಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಒಗ್ಗೂಡಿ ಇಂದಿನಿಂದ ಕೆಲಸ ಮಾಡುತ್ತೇವೆ.
ಸ್ನೇಹಿತರೇ,
ಇಂತಹ ಭವ್ಯ ಕಾರ್ಯಕ್ರಮಕ್ಕಾಗಿ ಮತ್ತು ದೇಶದ ಮೂಲೆ ಮೂಲೆಗಳಲ್ಲಿ ವಿದ್ಯುತ್ತಿನ ಬಗ್ಗೆ ಇಂತಹ ದೊಡ್ಡ ಜಾಗೃತಿಯನ್ನು ಮೂಡಿಸುತ್ತಿರುವುದಕ್ಕಾಗಿ ನಾನು ಇಂಧನ ಪ್ರಪಂಚದ ಎಲ್ಲಾ ಜನರನ್ನು ಅಭಿನಂದಿಸುತ್ತೇನೆ. ಈ ಹೊಸ ಯೋಜನೆಗಳಿಗಾಗಿ ನಾನು ಮತ್ತೊಮ್ಮೆ ಎಲ್ಲಾ ಜನರನ್ನು ಅಭಿನಂದಿಸುತ್ತೇನೆ. ವಿದ್ಯುತ್ ಕ್ಷೇತ್ರದ ಎಲ್ಲಾ ಭಾಗೀದಾರರಿಗೆ ನಾನು ಶುಭ ಹಾರೈಸುತ್ತೇನೆ. ಉಜ್ವಲ ಭವಿಷ್ಯಕ್ಕಾಗಿ ನಾನು ನಿಮಗೆ ಶುಭವನ್ನು ಹಾರೈಸುತ್ತೇನೆ.
ಧನ್ಯವಾದಗಳು !
ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಣ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.
(Release ID: 1847289)
Visitor Counter : 230
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam