ಭಾರೀ ಕೈಗಾರಿಕೆಗಳ ಸಚಿವಾಲಯ

ಸುಧಾರಿತ ರಾಸಾಯನಿಕ ಕೋಶ (ಎಸಿಸಿ) ಬ್ಯಾಟರಿ ಸಂಗ್ರಹಣೆಗಾಗಿ ಪಿ ಎಲ್‌ ಐ ಯೋಜನೆಯಡಿಯಲ್ಲಿ ಮೂರು ಸಂಸ್ಥೆಗಳಿಂದ ಕಾರ್ಯಕ್ರಮ ಒಪ್ಪಂದಕ್ಕೆ ಸಹಿ 


ಪಿ ಎಲ್‌ ಐ ಕಾರ್ಯಕ್ರಮದ ಅಡಿಯಲ್ಲಿ ಎಂ ಹೆಚ್‌ ಐ ನಿಯೋಜಿಸಿದ ಸಾಮರ್ಥ್ಯಗಳಿಗೆ ಹೆಚ್ಚುವರಿಯಾಗಿ, ಖಾಸಗಿ ಸಂಸ್ಥೆಗಳು ಬ್ಯಾಟರಿ ಉತ್ಪಾದನಾ ಸಾಮರ್ಥ್ಯವನ್ನು 95 GWh ಗೆ ಹೆಚ್ಚಿಸುವ ನಿರೀಕ್ಷೆಯಿದೆ.

ಇದು ಭಾರತದ ಉತ್ಪಾದನಾ ಉದ್ಯಮದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿಯಾಗುತ್ತದೆ. ಏಕೆಂದರೆ ನಾವು ಬ್ಯಾಟರಿ ತಯಾರಿಕೆಯಲ್ಲಿ ದೂರದೃಷ್ಟಿಯನ್ನು ಹೊಂದಿದ್ದೇವೆ ಮತ್ತು ಈ ಉದಯೋನ್ಮುಖ ವಲಯದಲ್ಲಿ ಇತರ ರಾಷ್ಟ್ರಗಳೊಂದಿಗೆ ಜಾಗತಿಕವಾಗಿ ಸ್ಪರ್ಧಿಸುತ್ತೇವೆ: ಶ್ರೀ ಪಾಂಡೆ

Posted On: 29 JUL 2022 12:04PM by PIB Bengaluru

ಸುಧಾರಿತ ರಾಸಾಯನಿಕ ಕೋಶ (ಎಸಿಸಿ) ಬ್ಯಾಟರಿ ಸಂಗ್ರಹಣೆಗಾಗಿ ಉತ್ಪಾದನೆ ಆಧಾರಿತ ಪ್ರೋತ್ಸಾಹಕ (ಪಿ ಎಲ್‌ ಐ) ಯೋಜನೆಯಡಿ ಆಯ್ದ ಮೂರು ಬಿಡ್‌ದಾರರು 28ನೇ ಜುಲೈ 2022 ರಂದು ಕಾರ್ಯಕ್ರಮ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಎಸಿಸಿ ಬ್ಯಾಟರಿ ಸಂಗ್ರಹಣೆಗಾಗಿ ಪಿಎಲ್‌ಐ ಯೋಜನೆಯ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಭಾರೀ ಕೈಗಾರಿಕೆಗಳ ಸಚಿವ ಡಾ. ಮಹೇಂದ್ರನಾಥ್ ಪಾಂಡೆ ಅವರು, “ಭಾರತದ ಉತ್ಪಾದನಾ ಉದ್ಯಮದಲ್ಲಿ ಇದು ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತದೆ. ಏಕೆಂದರೆ ನಾವು ಬ್ಯಾಟರಿ ಉತ್ಪಾದನೆಯಲ್ಲಿ ದೂರದೃಷ್ಟಿಯನ್ನು ಹೊಂದಿದ್ದೇವೆ ಮತ್ತು ಈ ಉದಯೋನ್ಮುಖ ಕ್ಷೇತ್ರದಲ್ಲಿ ಇತರ ರಾಷ್ಟ್ರಗಳೊಂದಿಗೆ ಜಾಗತಿಕವಾಗಿ ಸ್ಪರ್ಧಿಸುತ್ತೇವೆ. ಇದು ಇವಿ ಪರಿಸರ ವ್ಯವಸ್ಥೆ ಮತ್ತು ಇಂಧನ ಸಂಗ್ರಹ ಮಾರುಕಟ್ಟೆಗೆ ಅನುಕೂಲಕರವಾಗಿರುತ್ತದೆ. ಏಕೆಂದರೆ ಇದು ಇವಿಗಳು ಹಾಗೂ ನವೀಕರಿಸಬಹುದಾದ ಇಂಧನ ಬೇಡಿಕೆಯನ್ನು ಬೆಂಬಲಿಸುತ್ತದೆ ಮತ್ತು ಈ ವಲಯದಲ್ಲಿ ಹೂಡಿಕೆಯನ್ನು ಆಕರ್ಷಿಸುತ್ತದೆ. ಇಂದು ಬೃಹತ್ ಕಂಪನಿಗಳು ಭಾರತದಲ್ಲಿ ಬ್ಯಾಟರಿ ತಯಾರಿಕೆಯಲ್ಲಿ ಹೂಡಿಕೆ ಮಾಡುತ್ತಿವೆ. ನಾವು ಅವುಗಳನ್ನು ಬೆಂಬಲಿಸಬೇಕು ಮತ್ತು ಭಾರತವನ್ನು ನಿಜವಾದ ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಮಾಡಬೇಕು. ಸಿಒಪಿ26 ರಲ್ಲಿ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಪಂಚಾಮೃತ ಘೋಷಣೆಗೆ ಭಾರತದ ಬದ್ಧತೆಯನ್ನು ಸಾಧಿಸಲು ಇದು ನಮಗೆ ಸಹಾಯ ಮಾಡುತ್ತದೆ.” ಎಂದು ಹೇಳಿದರು.
ಒಪ್ಪಂದಕ್ಕೆ ಸಹಿ ಮಾಡಿರುವ ಸಂಸ್ಥೆಗಳೆಂದರೆ ರಿಲಯನ್ಸ್ ನ್ಯೂ ಎನರ್ಜಿ ಲಿಮಿಟೆಡ್, ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ ಮತ್ತು ರಾಜೇಶ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್. ಈ ಕಂಪನಿಗಳು ಭಾರತದ 18,100 ಕೋಟಿ ರೂ. ಪಿ ಎಲ್‌ ಐ ಕಾರ್ಯಕ್ರಮದ ಅಡಿಯಲ್ಲಿ ಪ್ರೋತ್ಸಾಹವನ್ನು ಪಡೆಯುತ್ತವೆ. ಪಿ ಎಲ್‌ ಐ ಕಾರ್ಯಕ್ರಮದ ಅಡಿಯಲ್ಲಿ ಭಾರೀ ಕೈಗಾರಿಕೆಗಳ ಸಚಿವಾಲಯವು ನಿಗದಿಪಡಿಸಿದ ಸಾಮರ್ಥ್ಯಗಳ ಜೊತೆಗೆ, ಖಾಸಗಿ ಕಂಪನಿಗಳು 95 GWh ಗೆ ಬ್ಯಾಟರಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ನಿರೀಕ್ಷೆಯಿದೆ.
ಪಿ ಎಲ್‌ ಐ ಯೋಜನೆಯಡಿಯಲ್ಲಿ ಎಸಿಸಿ ಬ್ಯಾಟರಿ ಸಂಗ್ರಹಣೆಗಾಗಿ 128 GWh ಉತ್ಪಾದನಾ ಸಾಮರ್ಥ್ಯ ಹೊಂದಿರುವ ಕಂಪನಿಗಳಿಂದ ಒಟ್ಟು 10 ಬಿಡ್‌ಗಳನ್ನು ಸ್ವೀಕರಿಸಲಾಗಿತ್ತು. ಎಸಿಸಿ ಪಿ ಎಲ್‌ ಐ ಕಾರ್ಯಕ್ರಮದ ಅಡಿಯಲ್ಲಿ, ಉತ್ಪಾದನಾ ಸೌಲಭ್ಯವನ್ನು ಎರಡು ವರ್ಷಗಳ ಅವಧಿಯಲ್ಲಿ ಸ್ಥಾಪಿಸಬೇಕು. ಆ ನಂತರ ಭಾರತದಲ್ಲಿ ತಯಾರಿಸಿದ ಬ್ಯಾಟರಿಗಳ ಮಾರಾಟದ ಮೇಲೆ ಐದು ವರ್ಷಗಳ ಅವಧಿಯಲ್ಲಿ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ.
ಕಾರ್ಯಕ್ರಮ ಒಪ್ಪಂದಕ್ಕೆ ಸಹಿ ಹಾಕಿದ ಬಿಡ್ಡುದಾರರನ್ನು ಭಾರೀ ಕೈಗಾರಿಕೆಗಳ ಸಹಾಯಕ ಸಚಿವ ಶ್ರೀ ಕೃಷ್ಣಪಾಲ್ ಅಭಿನಂದಿಸಿದರು. "ಕಳೆದ ಕೆಲವು ವರ್ಷಗಳಿಂದ ಸರ್ಕಾರವು ಸ್ಥಿರವಾದ ನೀತಿ ಮತ್ತು ನಿಯಂತ್ರಕ ವ್ಯವಸ್ಥೆಯನ್ನು ಒದಗಿಸಿದೆ. ಫೇಮ್ II, ಆಟೋ ಮತ್ತು ಆಟೋ ಬಿಡಿಭಾಗಗಳಿಗೆ ಪಿ ಎಲ್‌ ಐ ಯೋಜನೆ ಮತ್ತು ಬ್ಯಾಟರಿ ಉತ್ಪಾದನೆಯವರೆಗೆ ದೇಶದಲ್ಲಿ ಇವಿ ಪರಿಸರ ವ್ಯವಸ್ಥೆಯ ಅಭಿವೃದ್ಧಿಗೆ ಚೌಕಟ್ಟುಗಳನ್ನು ಸಕ್ರಿಯಗೊಳಿಸಲಾಗಿದೆ." ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ, ಭಾರೀ ಕೈಗಾರಿಕೆಗಳ ಸಚಿವಾಲಯದ ಕಾರ್ಯದರ್ಶಿ ಶ್ರೀ ಅರುಣ್ ಗೋಯೆಲ್ ಮಾತನಾಡಿ, “ಬ್ಯಾಟರಿ ಉತ್ಪಾದನೆಯನ್ನು ಉತ್ತೇಜಿಸಲು ಎಂ ಹೆಚ್‌ ಐ 13 ತಿಂಗಳ ದಾಖಲೆಯ ಸಮಯದಲ್ಲಿ ಪಿ ಎಲ್‌ ಐ ಎಸಿಸಿ ಕಾರ್ಯಕ್ರಮಕ್ಕೆ ಸಹಿ ಹಾಕುವಿಕೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ (ಗೆಜೆಟ್ ಅಧಿಸೂಚನೆ- ಜೂನ್, 2021 ಮತ್ತು ಕಾರ್ಯಕ್ರಮ ಒಪ್ಪಂದಕ್ಕೆ ಸಹಿ- ಜುಲೈ, 2022). ಸಾಂಕ್ರಾಮಿಕ ರೋಗದ ನಡುವೆಯೂ ದೇಶದಲ್ಲಿ. ಈಗ ಖಾಸಗಿ ಸಂಸ್ಥೆಗಳು ಮುನ್ನಡೆ ಸಾಧಿಸಲು ಮತ್ತು ಜಾಗತಿಕ ಚಾಂಪಿಯನ್ ಆಗಲು ಮತ್ತು ಇಂಧನ ಸಂಗ್ರಹ ಕ್ಷೇತ್ರದಲ್ಲಿ ದೇಶವನ್ನು ಜಾಗತಿಕ ಕೇಂದ್ರವನ್ನಾಗಿ ಮಾಡುವ ಸಮಯ ಇದಾಗಿದೆ. ಅವರ ಮುಂದಿನ ಪ್ರಯಾಣಕ್ಕೆ ನನ್ನ ಶುಭ ಹಾರೈಕೆಗಳು”ಎಂದರು.
18,100 ಕೋಟಿ ರೂ. ಬಜೆಟ್ ವೆಚ್ಚದೊಂದಿಗೆ ಭಾರತದ ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಎಸಿಸಿಯ 50 ಗಿಗಾ ವ್ಯಾಟ್ ಅವರ್ (GWh) ಉತ್ಪಾದನಾ ಸಾಮರ್ಥ್ಯವನ್ನು ಸಾಧಿಸಲು ಸುಧಾರಿತ ರಾಸಾಯನಿಕ ಕೋಶ (ಎಸಿಸಿ) ಬ್ಯಾಟರಿ ಸಂಗ್ರಹಣೆಯ ಮೇಲೆ ಉತ್ಪಾದನೆ ಆಧಾರರಿತ ಪ್ರೋತ್ಸಾಹಕ ರಾಷ್ಟ್ರೀಯ ಕಾರ್ಯಕ್ರಮವನ್ನು ಸರ್ಕಾರ ಅನುಮೋದಿಸಿದೆ. ಈ ಉಪಕ್ರಮದ ಅಡಿಯಲ್ಲಿ ಹೆಚ್ಚಿನ ದೇಶೀಯ ಮೌಲ್ಯ ಸೇರ್ಪಡೆಯನ್ನು ಸಾಧಿಸಲು ಸರ್ಕಾರವು ಒತ್ತು ನೀಡುತ್ತದೆ, ಅದೇ ಸಮಯದಲ್ಲಿ ಭಾರತದಲ್ಲಿ ಬ್ಯಾಟರಿ ತಯಾರಿಕೆಯ ವೆಚ್ಚವು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿರುವುದನ್ನು ಖಚಿತಪಡಿಸಿಕೊಳ್ಳಲಾಗುವುದು.
ಈ ಕಾರ್ಯಕ್ರಮವನ್ನು ತಂತ್ರಜ್ಞಾನದ ಅಪರಿಮಿತ ಸಾಧ್ಯತೆಗಳಲ್ಲಿ ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ ಬ್ಯಾಟರಿಗಳ ಅಪೇಕ್ಷಿತ ಉತ್ಪಾದನೆಯ ಮೇಲೆ ಇದು ಗಮನ ಕೇಂದ್ರೀಕರಿಸುತ್ತದೆ. ಆ ಮೂಲಕ ಫಲಾನುಭವಿ ಸಂಸ್ಥೆಯು ಸೆಲ್ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಲು ಸೂಕ್ತವಾದ ಸುಧಾರಿತ ತಂತ್ರಜ್ಞಾನ ಮತ್ತು ಅನುಗುಣವಾದ ಸ್ಥಾವರ ಮತ್ತು ಯಂತ್ರೋಪಕರಣಗಳು, ಕಚ್ಚಾ ಸಾಮಗ್ರಿಗಳು ಮತ್ತು ಬೇಕಾದ ಇತರ ಸರಕುಗಳನ್ನು ಆಯ್ಕೆ ಮಾಡಲು ಮುಕ್ತವಾಗಿರುತ್ತದೆ.
ಈ ಕಾರ್ಯಕ್ರಮವು ದೇಶದಲ್ಲಿ ಸಂಪೂರ್ಣ ದೇಶೀಯ ಪೂರೈಕೆ ಸರಪಳಿ ಮತ್ತು ವಿದೇಶಿ ನೇರ ಹೂಡಿಕೆಯ ಅಭಿವೃದ್ಧಿಯ ಜೊತೆಗೆ, ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವ ಹೂಡಿಕೆಯನ್ನು ಹೆಚ್ಚಿಸುತ್ತದೆ ಮತ್ತು ಎಲೆಕ್ಟ್ರಿಕ್ ವಾಹನಗಳು ಮತ್ತು ಸ್ಥಿರ ಸಂಗ್ರಹಣೆ ಎರಡಕ್ಕೂ ಬ್ಯಾಟರಿ ಸಂಗ್ರಹಣೆ ಬೇಡಿಕೆಯನು ಸೃಷ್ಟಿಸಲು ಅನುಕೂಲವಾಗುತ್ತದೆ. ಎಸಿಸಿ ಪಿಎಲ್‌ಐ ಯೋಜನೆಯಿಂದಾಗಿ ಕಚ್ಚಾ ತೈಲದ ಆಮದು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುವುದರಿಂದ ಮತ್ತು ರಾಷ್ಟ್ರೀಯ ಗ್ರಿಡ್ ಮಟ್ಟದಲ್ಲಿ ನವೀಕರಿಸಬಹುದಾದ ಇಂಧನದ ಪಾಲನ್ನು ಹೆಚ್ಚಿಸುವುದರಿಂದ ರಾಷ್ಟ್ರಕ್ಕೆ ಉಳಿತಾಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಈ ಅಡ್ವಾನ್ಸ್ಡ್ ಕೆಮಿಸ್ಟ್ರಿ ಸೆಲ್ (ಎಸಿಸಿ) (18,100 ಕೋಟಿ ರೂ.) ಪಿಎಲ್‌ಐ ಯೋಜನೆ ಜೊತೆಗೆ ವಾಹನ ವಲಯಕ್ಕೆ (25,938 ಕೋಟಿ ರೂ.) ಈಗಾಗಲೇ ಪ್ರಾರಂಭಿಸಲಾದ ಪಿಎಲ್‌ಐ ಯೋಜನೆ ಮತ್ತು ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯ ವೇಗದ ಅಳವಡಿಕೆ (ಫೇಮ್) (10,000 ಕೋಟಿ ರೂ.) ಯೋಜನೆಗಳು ಭಾರತವು ಸಾಂಪ್ರದಾಯಿಕ ಪಳೆಯುಳಿಕೆ ಇಂಧನ ಆಧಾರಿತ ಆಟೋಮೊಬೈಲ್ ಸಾರಿಗೆ ವ್ಯವಸ್ಥೆಯಿಂದ ಪರಿಸರ ಸ್ವಚ್ಛ, ಸಮರ್ಥನೀಯ, ಸುಧಾರಿತ ಮತ್ತು ಹೆಚ್ಚು ಪರಿಣಾಮಕಾರಿ ಎಲೆಕ್ಟ್ರಿಕ್ ವೆಹಿಕಲ್ಸ್ (ಇವಿ) ಆಧಾರಿತ ವ್ಯವಸ್ಥೆಗೆ ಜಿಗಿಯಲು ನೆರವಾಗುತ್ತವೆ.
ಪ್ರಧಾನ ಮಂತ್ರಿಯವರ ಸ್ವಾವಲಂಬಿ ಭಾರತ - ಆತ್ಮನಿರ್ಭರ ಭಾರತ ಎಂಬ ಸ್ಪಷ್ಟ ಕರೆಗೆ  ಬಲವಾದ ಅನುರಣನೆಯಾಗಿ ವಿಶ್ವ ದರ್ಜೆಯ ಉತ್ಪಾದನಾ ತಾಣವಾಗುವ ಭಾರತದ ಪ್ರಗತಿಯಲ್ಲಿ ಉದ್ಯಮವು ನಂಬಿಕೆಯಿಟ್ಟಿದೆ.

 

*******



(Release ID: 1846259) Visitor Counter : 311


Read this release in: English , Urdu , Hindi , Telugu